ಆರೋಗ್ಯಕ್ಕಾಗಿ, ಮುಖ್ಯವಾಗಿ ತೂಕ ಇಳಿಸಿಕೊಳ್ಳಲು ಸಹಾಯಕವಾಗಿರುವ ಹಲವು ಮಾರ್ಗಗಳಲ್ಲಿ ವಾಕಿಂಗ್ ಬಹಳ ಜನಪ್ರಿಯ. ಆದರೆ, ವಾಕಿಂಗ್ ಕೇವಲ ದೇಹವನ್ನು ದಂಡಿಸಿ ಮನಸ್ಸಿಗೆ ಮುದ ನೀಡೋ ಪ್ರಕ್ರಿಯೆ ಮಾತ್ರ ಅಲ್ಲ; ಅದಕ್ಕೆ ಹೊರತಾಗಿ ಒಂದು ವಿಶಿಷ್ಟ ಅನುಭವ ಕೂಡ ಅಂದ್ರೆ ನಂಬ್ತೀರಾ? ನೀವೂ ವಾಕಿಂಗ್ ಮಾಡೋರಾಗಿದ್ರೆ, ನಾನು ಹೇಳೋದು ನಿಮಗೆ ತುಂಬಾನೇ ಚೆನ್ನಾಗಿ ಅರ್ಥ ಆಗತ್ತೆ ಬಿಡಿ. ಯಾಕಂದ್ರೆ, ವಾಕಿಂಗ್ ಮಾಡುವಾಗ ಸುತ್ತಲಿನ ಗಿಡ, ಮರ, ರಸ್ತೆಯಷ್ಟೇ ಅಲ್ಲದೇ ಜನಜೀವನದ ಕಡೆಗೂ ಗಮನ ಕೊಡುವ ಎಲ್ರಿಗೂ, ಹೆಚ್ಚೂ ಕಡಿಮೆ, ಒಂದೇ ಬಗೆಯ ಅನುಭವ ಆಗಿರುತ್ತೆ; ಆದ್ರೆ ಆ ಅನುಭವವನ್ನು ಮನಗಾಣೋಕೆ ಕಣ್ಣು, ಕಿವಿ ಹಾಗೂ ಮನಸ್ಸು ತೆರೆದಿರಬೇಕಷ್ಟೇ!

ಅದರಲ್ಲೂ, ವಾಯುವಿಹಾರಕ್ಕೆ ಹೊರಟ ಹೆಣ್ಣುಮಕ್ಕಳ ಪಾಡು ಮತ್ತೂ ವಿಚಿತ್ರ ಹಾಗೂ ವಿಶಿಷ್ಟ; ಏಕೆಂದರೆ, ಗಂಡಸರು ವಾಕಿಂಗ್ ಹೋಗಬೇಕಂತ ತಾವೇ ಸ್ವತಃ ಆಸಕ್ತಿಯಿಂದ ಅಥವಾ ಬೆನ್ನುಬಿದ್ದ ಮಧುಮೇಹ, ಬಿ.ಪಿ.ಗಳ ಕೃಪೆಯಿಂದ ನಿರ್ಧರಿಸಿಬಿಟ್ಟರೆಂದರೆ, ಮುಗೀತು. ಅದಕ್ಕೆ ತಕ್ಕ ಹಾಗೆ ಅವರಿಗಿಂತ ಬೇಗ ಏಳೋಕೆ ಅಲಾರಂ ಇಟ್ಟುಕೊಂಡು, ಅವರನ್ನು ಎಬ್ಬಿಸಿ, ಅವರು ಹೊರಡುವ ಮುನ್ನ ಗ್ರೀನ್ ಟೀ, ಅವರು ವಾಕಿಂಗ್ ಮುಗಿಸಿ ಬಂದ ತಕ್ಷಣ ತಿಂಡಿ ಕಾಫಿ ಕೊಡೋಕೆ ಹೆಂಡತಿಯರೋ ಅಮ್ಮಂದಿರೋ ತುದಿಗಾಲಲ್ಲಿ ನಿಂತಿರಬೇಕು. ಅವರು ವಾಕಿಂಗ್‌ಗೆ ತಕ್ಕ ಟೀಶರ್ಟ್, ಟ್ರ್ಯಾಕ್ ಪ್ಯಾಂಟ್, ಶೂ – ಇತ್ಯಾದಿ ಕೊಂಡುತಯಾರಾಗಿ ಹೊರಟುಬಿಡ್ತಾರೆ; ಅವರ ಈ ಹೊಸ ದಿನಚರಿಗೆ ತಕ್ಕಂತೆ ಮನೆಯಲ್ಲಿ ಮಿಕ್ಕೆಲ್ಲವೂ ತಾನೇತಾನಾಗಿ ಹೊಂದಿಕೊಳ್ಳಬೇಕು ಅಂತ ಬ್ರಹ್ಮನೇ ಕಟ್ಟಪ್ಪಣೆ ಕೊಟ್ಟಂತೆ, ಎಲ್ಲವೂ ಸಲೀಸಾಗಿ ತಯಾರಾಗಿ ಬಿಡುತ್ತೆ; ಆದ್ರೆ, ಹೆಣ್ಣುಮಕ್ಳು ವಾಕಿಂಗ್ ಹೋಗಬೇಕಂದ್ರೆ ಅದೊಂದು ದೊಡ್ಡ ಯುದ್ಧವೇ ಸರಿ. ಇದೇನು, ವಾಕಿಂಗ್ ಹೋಗೋದು ಅಂದ್ರೆ ಯುದ್ಧ ಅದೂ ಇದು ಅಂತಿದೀನಿ ಅದ್ಕೊಂಡ್ರಾ?

ನಿಜ, ಹೆಣ್ಣ್ಮಕ್ಕಳು ವಾಕಿಂಗ್ ಹೋಗೋದು ಅಂದ್ರೆ ಸುಲಭದ ಮಾತಲ್ಲ; ಮೊದಲನೇದಾಗಿ, ತಾವು ವಾಕಿಂಗ್ ಹೊರಡೋಕೆ ಮುಂಚೆ ಮನೆಯಲ್ಲಿ ಹಾಲು ಕಾಯಿಸೋದು, ಅಂಗಳದ ಕಸ ಗುಡಿಸೋದು, ತಿಂಡಿಯ ತಯಾರಿ, ಇತ್ಯಾದಿ ಕೆಲಸಗಳೆಲ್ಲಾ ಮುಗಿಸಿ, ಅತ್ತೆ ಮಾವನ ಕಾಫಿಗೆ ಚ್ಯುತಿ ಬರದಂತೆ, ಗಂಡನ ಹಾಗೂ ಮಕ್ಕಳ ಬೇಕು–ಬೇಡಗಳಿಗೆ ಯಾವುದೇ ಕೊರತೆಯಾಗದಂತೆ ವಾಕಿಂಗ್ ಹೋಗಲು ಒಂದು ಸುಸಮಯ ನಿಗದಿಪಡಿಸಿಕೊಳ್ಳಬೇಕು; ಆ ಸಮಯವು ಮನೆಯ ಮುಂದೆ ರಂಗೋಲಿ ಹಾಕಿದ ನಂತರ ಮತ್ತು ಸ್ನಾನ, ಪೂಜೆಗೆ ಮುಂಚೆ ಎಂದು ಹೊಂದಿಸಿಕೊಳ್ಳಬೇಕು; ಯಾಕಂದ್ರೆ ಸ್ನಾನ ಮಾಡಿದ ನಂತರ ವಾಕ್ ಮಾಡಿ ಬೆವರು ಸುರಿಸೋದೇ ಆದ್ರೆ, ಸ್ನಾನ ಯಾಕೆ ಹೇಳಿ? ವಾಕಿಂಗ್ ಮುಗಿಸಿ ಬರೋದು ತಡವಾದ್ರೆ, ಮಗುವಿನ ಸ್ಕೂಲ್ ಬಸ್ ಎಲ್ಲಿ ಮಿಸ್ ಆಗುತ್ತೋ; ಗಂಡನ ಮೂಡ್ ಹೇಗಿರುತ್ತೋ ಎಂದು ದಡಬಡಿಸಿ ಧಾವಿಸಿ ಬರೋಷ್ಟರಲ್ಲಿ, ವಾಯುವಿಹಾರವು ಹೃದಯಕ್ಕೆ ಮುಂಬಾಗಿಲಿಂದ ನೀಡಿದ್ದ ಆರೋಗ್ಯಭಾಗ್ಯ, ಜಸ್ಟ್ ಮಿಸ್ ಆಗಿ ಹಿತ್ತಲಿನಿಂದ ಹೊರಹೋಗಿರುತ್ತೆ. ಹಾಗಾಗಿ, ಬೆಳಿಗ್ಗೆ ಬೇಡ, ಸಂಜೆನೇ ವಾಸಿ ಅಂತ ಸಂಜೆಯ ವಾಯುವಿಹಾರಕ್ಕೆ ಸಮಯ ನಿಗದಿಪಡಿಸೋಕೆ ಕೂತರೆ, ಮಕ್ಕಳ ಸ್ಕೂಲ್ ಮುಗಿಯುವ ಸಮಯ, ಹೋಮ್‌ವರ್ಕ್ ಸಮಯ, ಸಂಗೀತ–ಕರಾಟೆ–ನೃತ್ಯದ ಕ್ಲಾಸುಗಳ ಸಮಯ ಇವೆಲ್ಲ ಹೊಂದಿಸಿಕೊಳ್ಳೋಷ್ಟ್ರಲ್ಲಿ, ರಾತ್ರಿಗೆ ಅಡುಗೆ ಮಾಡೋ ಸಮಯ ಬಂದೇಬಿಡುತ್ತೆ.

ಇಷ್ಟರ ಮಧ್ಯೆಯೂ, ಒಂದು ಅರ್ಧ ಗಂಟೆಯನ್ನು ತಮಗೆ ಮಾತ್ರ ಅಂತ ತೆಗೆದಿರಿಸಿಕೊಂಡು, ವಾಕಿಂಗ್ ಹೊರಟರೆ, ಮುಸ್ಸಂಜೆ ಹೊತ್ತು ಒಬ್ಬೊಬ್ರೇ ಭಾಳಾ ದೂರ ಹೋಗೋಕೆ ಒಂಥರಾ ಭಯ. ಊರಿನ ತುಂಬಾ ಪರಿಚಯದವರೇ ಇದ್ದರೂ, ಖಾಲಿ ರೋಡಿನಲ್ಲಿ ಹೆಣ್ಣುಮಗ್ಳು ಒಬ್ಳೇ ಯಾಕೆ ಹೋಗ್ತೀಯಾ ಅಂತಾರೆ ಮನೆಯವರು; ಸರಿ, ಜೊತೆಗೆ ಅಕ್ಕಪಕ್ಕದ ಮನೆ ಹೆಂಗಳೆಯರನ್ನು ಸೇರಿಸಿಕೊಂಡು, ಅವರ ಸಮಯಗಳನ್ನೂ ಹೊಂದಿಸಿಕೊಂಡು ಹೊರಡೋದು ಮತ್ತೊಂದು ದೊಡ್ಡ ಸರ್ಕಸ್.

ಗೃಹಿಣಿಯರ ಕಥೆ ಇದಾದರೆ, ಕಾಲೇಜ್ ಯುವತಿಯರು, ವಯೋವೃದ್ಧ ಮಹಿಳೆಯರದ್ದು ಮತ್ತೊಂದು ಕಥೆ. ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು, ಕುದುರೆಬಾಲದಂತಹ ಜುಟ್ಟನ್ನು ಅತ್ತಿಂದಿತ್ತ ಆಡಿಸುತ್ತಾ, ಫೋನ್ ಮಾಡಿ ಬಾಯ್‌ಫ್ರೆಂಡ್ ಜೊತೆ ಏಕಾಂತದಲ್ಲಿ ಮಾತಾಡೋಕೆ ಸಿಗೋದು, ಇದೊಂದೇ ಸಮಯ ಅಂತ ಹೆಚ್ಚು ಸಮಯ ವಾಕಿಂಗ್‌ನಲ್ಲಿ ಕಳೆಯೋ ಯುವತಿಯರಿಗೆ, ಮನೆಯಿಂದ ಹೊರಡೋಕೆ ಮುಂಚೆ ಹತ್ತು ಇನ್‌ಸ್ಟ್ರಕ್ಷನ್ ಸಿಕ್ಕಿರುತ್ತೆ; ಎಲ್ಲಿ ಹೋಗ್ಬೇಕು, ಎಲ್ಲಿ ಹೋಗ್ಬಾರ್ದು, ಬೇಗ ಹಿಂದುರಗಬೇಕು ಇತ್ಯಾದಿ. ವಯೋವೃದ್ಧೆಯರದ್ದು, ಪಾಪ, ತಮ್ಮ ಹೊರಲಾರದ ದೇಹವನ್ನು ಹೊತ್ತು, ಮೊಣಕಾಲು ನೋವನ್ನೋ, ಬೆನ್ನು ನೋವನ್ನೋ ಶಪಿಸುತ್ತಾ ನಡಿಯುವ ಹರಸಾಹಸ; ತೂಕ ಕಡಿಮೆಯಾಗದ ಹೊರತು ಮೊಣಕಾಲು ನೋವು ಕಡಿಮೆಯಾಗದು, ಮೊಣಕಾಲು ನೋವು ಕಡಿಮೆಯಾಗದ ಹೊರತು ನಡೆದು ನಡೆದೂ ತೂಕ ಕಡಿಮೆ ಮಾಡಲಾಗದು, ಇಂತಹ ವಿಷವರ್ತುಲದೊಳಗೆ ಸಿಲುಕಿ ಒದ್ದಾಟವೋ ಒದ್ದಾಟ. ಮಗ-ಸೊಸೆ-ಮೊಮಕ್ಕಳ ಕಿರಿಕಿರಿಯಿಂದ ಸ್ವಲ್ಪ ಸಮಯವಾದರೂ ಹಾಯಾಗಿ ದೂರವಿರೋಣ ಅಂತ ವಾಯುವಿಹಾರಕ್ಕೆ ಬರೋರು ಉಂಟು; ಮತ್ತೂ ಕೆಲವರು, ತಮ್ಮದೇ ಒಂದು ಗುಂಪು ಕಟ್ಟಿಕೊಂಡು ನಡೆಯುತ್ತಾ ನಡೆಯುತ್ತಾ, ವಿದೇಶದಲ್ಲಿರುವ ಮಕ್ಕಳ ಬಗ್ಗೆಯೋ, ಕಳೆದ ವಾರ ತಿರುಪತಿಗೆ ಪ್ರವಾಸ ಹೋದ ಬಗ್ಗೆಯೂ, ಮನೆಗೆ ಬರಲಿರೋ ನೆಂಟರ ಬಗ್ಗೆಯೂ ಒಬ್ಬರಿಗೊಬ್ಬರು ಹೇಳಿಕೊಳ್ತಾ, ಒಬ್ಬರ ಅಂತರಂಗದೊಳಗೆ ಮತ್ತೊಬ್ಬರು ಹಣಿಕಿಹಾಕುತ್ತಾ, ಸಾಗುತ್ತಾರೆ.

ಮನೆಯ ಒಳಗೂ, ಹೊರಗೂ ದುಡಿಯುವ ಹೆಣ್ಣುಮಕ್ಕಳಂತೂ ವಾಕಿಂಗ್‌ಗೆ ಬರೋದೆ ಅಪರೂಪ; ಪಾಪ, ಪುರಸೊತ್ತು ಸಿಕ್ಕರೆ ತಾನೇ? ಆಫೀಸ್, ಮನೆ, ಸಂಸಾರ ಎಲ್ಲವನ್ನೂ ತೂಗಿಸಿಕೊಂಡು ಬಾಳ್ವೆ ನಡೆಸೋಷ್ಟ್ರಲ್ಲಿ, ವಾಯುವಿಹಾರಕ್ಕೆ ಸಮಯ ಸಿಕ್ಕರೆ ಅದೊಂದು ದೊಡ್ಡ ಲಕ್ಷುರಿನೇ ಸರಿ! ಆದ್ರೆ, ಆಫೀಸ್‌ಗಳಲ್ಲಿ ಕೂತೇ ಕೆಲಸ ಮಾಡುವಾಗ, ಮನಸ್ಸು ಮೆದುಳು ದಣಿದಿದ್ದರೂ, ದೇಹ ಮಾತ್ರ ಮಾತು ಕೇಳೋಲ್ಲ; ಜೊತೆಗೆ ಆಫೀಸ್‌ನ ಕ್ಯಾಂಟೀನ್ ಊಟ ಅಂತೂ, ದೇವರಿಗೆ ಪ್ರೀತಿ. ಅಡುಗೆಸೋಡಾ, ಪಾಮ್ಆಯಿಲ್ ಹೆಚ್ಚು ಬಳಸಿ ತಯಾರಿಸೋ ಕ್ಯಾಂಟೀನ್ ಆಹಾರವನ್ನು, ಸಮಯಕ್ಕೆ ಸರಿಯಾಗಿ ಕೂಡ ತಿನ್ನದೇ, ಕೆಲಸದ ನಡುವೆ ಸಮಯ ಸಿಕ್ಕಾಗ ಹೊಟ್ಟೆಗೆ ಸೇರಿಸುತ್ತಾ, ದೇಹವನ್ನು ದೇಗುಲದ ಬದಲು ಅನಾರೋಗ್ಯದ ಗೂಡಾಗಿಸೋದು ಈಗಂತೂ ಸಾಮಾನ್ಯವಾಗಿಬಿಟ್ಟಿದೆ; ಇದರ ಫಲವಾಗಿ ಥೈರಾಯ್ಡ್ ಸಮಸ್ಯೆ, ಪಿ.ಸಿ.ಓ.ಡಿ.ಯಂತಹ ಜೀವನಶೈಲಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ, ಸಂಬಳದ ಜೊತೆಗೆ ತೂಕವೂ ಏರುತ್ತಿದೆ ಎಂಬ ಅರಿವಿದ್ದರೂ, ಬಹುಪಾಲು ಹೆಣ್ಣುಮಕ್ಕಳು ಅಸಹಾಯಕತೆಯಿಂದ ಕೈಚೆಲ್ಲುತ್ತಾರೆ. ಕೆಲವರಷ್ಟೇ, ಕನಿಷ್ಠಪಕ್ಷ ಅರ್ಧ ಗಂಟೆ ಬಿಡುವು ಮಾಡಿಕೊಂಡು ವಾಯುವಿಹಾರಕ್ಕೆ ಹೊರಡುತ್ತಾರೆ.

ನೀರಿನ ಹರಿವಿನ ವಿರುದ್ಧ ಈಜುತ್ತಿರುವರೆನೋ ಎಂಬಂತೆ, ಇಷ್ಟೆಲ್ಲಾ ಹೊಂದಿಸಿಕೊಂಡು, ವಾಯುವಿಹಾರಕ್ಕೆ ಹೊರಟರೆ, ಎದುರಿನಿಂದ ವಾಕ್ ಮಾಡಿಕೊಂಡು ಬರುತ್ತಿರುವ ಗಂಡಸು, ಅದ್ಯಾವುದೇ ವಯಸ್ಸಿನವನಾಗಿರಲಿ, ಇವಳನ್ನೊಮ್ಮೆ ಅಪಾದಮಸ್ತಕ ನೋಡಿಯೇ ತೀರುತ್ತಾನೆ; ಅದ್ಯಾಕೆ, ಹೆಣ್ಣು ತನ್ನ ಸುತ್ತಲಿನ ಗಂಡಸರನ್ನ ಅವರ ವಯಸ್ಸಿನ ಆಧಾರದ ಮೇಲೆ ಮಗನಂತೆಯೋ ತಮ್ಮನಂತೆಯೋ ಅಣ್ಣನಂತೆಯೋ ಗೆಳೆಯನಂತೆಯೋ ಅಪ್ಪನಂತೆಯೋ ಅಥವಾ ಅಜ್ಜನಂತೆಯೋ ನೋಡುತ್ತಾರೆ, ಆದರೆ, ಯಾಕೆ ಗಂಡಸು ಮಾತ್ರ ಹೆಣ್ಣನ್ನು ಹೆಣ್ಣು ಅನ್ನೋ ಹಾಗೆ ಮಾತ್ರ ನೋಡ್ತಾನೆ ಅಂತ ಅರ್ಥವೇ ಆಗೋದಿಲ್ಲ; ಎಲ್ಲ ಗಂಡಸರೂ ಹಾಗೆ ಅಲ್ಲದಿರಬಹುದು; ಆದರೆ, ಬಹುಪಾಲು ಹಾಗೇ ಎಂಬುದನ್ನು ಖಂಡಿತ ತಮ್ಮ ಅನುಭವಗಳಿಂದಲೇ, ಎಲ್ಲ ಹೆಣ್ಣುಮಕ್ಕಳೂ ಖಂಡಿತ ಒಪ್ಪುತ್ತಾರೆ. ಜೇಬಿನಲ್ಲಿ ಇಟ್ಟುಕೊಂಡ ಫೋನಿನ ಲೌಡ್‌ಸ್ಪೀಕರ್‌ನಲ್ಲಿ, ಜೋರಾಗಿ ಹಾಡು ಹಾಕಿಕೊಂಡು ಹೊರಟ ಅಂಕಲ್ ಆದ್ರೂ ಸರಿ, ಬಕ್ಕತಲೆಗೆ ಡೈ ಮಾಡಿದ ಕೂದಲ ಚಾಪೆ ಹಾಸುವ ತಾತನಾದ್ರೂ ಸರಿ, ಚಿಗುರು ಮೀಸೆಯ ಹುಡುಗನಾದ್ರೂ ಸರಿ, ಗುಡಾಣದಂತಿರುವ ಹೊಟ್ಟೆಯನ್ನು ಕರಗಿಸಲು ವಾಕ್ ಹೊರಟ ನಡುವಯಸ್ಕನಾದರೂ ಸರಿ, ಎದುರಿಗೆ ನಡೆದು ಬರುತ್ತಿರುವ ಹೆಣ್ಣುಮಕ್ಕಳನ್ನ ಒಂದು ನಿಮಿಷ ಪೂರಾ ನೋಡದೇ ಹೋದರೆ, ಅದೇನು ಗಂಡಸು ಜಾತಿಗೇ ಅವಮಾನವೇನೋ, ಎಂಬಂತೆ ನೋಡುತ್ತಾರೆ; ಅವರ‍್ಯಾರು ಇವಳಿಗೆ ಏನೋ ಭಯಂಕರ ಕೆಡುಕು ಮಾಡುವವರು ಅಲ್ಲ, ಆದರೆ, ಹಾಗೆ ನೋಡಿದಾಗ ಆಕೆಗೆ ಎಷ್ಟು ಹಿಂಸೆಯಾಗಬಹುದು ಎಂಬ ಕನಿಷ್ಠ ಸೂಕ್ಷ್ಮತೆ ಕೂಡ ಇಲ್ಲದ ಮಂದಮತಿಗಳೋ, ಶುದ್ಧ ಚಪಲಿಗರೋ ಅಥವಾ ಗಂಡಸರು ನಾವು ಹೇಗೆ ಬೇಕೋ ಹಾಗಿರ್ತೀವಿ, ಹೆಣ್ಣುಮಕ್ಕಳು ಯಾಕೆ ಟೈಟ್ ಟೀ ಶರ್ಟ್ ಹಾಕ್ಕೊಂಡು ವಾಕ್ ಮಾಡಬೇಕು ಅನ್ನೋ ದಾರ್ಷ್ಟ್ಯದವರೋ ಇರುತ್ತಾರೆ. ಇಂತಹ ಕಿರಿಕಿರಿಗೆ ತಲೆಕೆಡಿಸಿಕೊಂಡವರು, ಇಲ್ಲಾ ನಾಲ್ಕು ಗೋಡೆಯ ಒಳಗೆ ಬಂಧಿಯಾಗಿರುವ ಜಿಮ್‌ನ ಮೊರೆಹೋಗುತ್ತಾರೆ ಅಥವಾ ‘ಅಯ್ಯೋ, ವಾಕಿಂಗ್ ಗೀಕಿಂಗ್ ಎಲ್ಲ ಬೇಡಪ್ಪಾ, ಹಿಂಸೆ’ ಅಂತ ಎರಡೇ ದಿನಕ್ಕೆ ನಿರ್ಧರಿಸಿ ಕೈಬಿಡುತ್ತಾರೆ. ಸಮಯದ ಹೊಂದಾಣಿಕೆ, ಮನೆಜನರ ಕುಹಕದ ನಡುವೆಯೂ ದಾರಿಯಲ್ಲಿ ಎದುರಾಗುವ ಇವೆಲ್ಲವನ್ನೂ ಉದಾಸೀನ ಮಾಡುತ್ತಾ, ತಾವಾಯ್ತು ತಮ್ಮ ನಡಿಗೆಯಾಯ್ತು ಎಂದು ವಾಕಿಂಗನ್ನು ತಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಿಸಿಕೊಂಡ ಸಾವಿರಾರು ಮಹಿಳೆಯರೂ ಕೂಡ, ನಮ್ಮ ಸುತ್ತ ಇದ್ದಾರೆ.

ಮಾತು ಬಯಸದ ಹೆಣ್ಣುಮಕ್ಕಳು, ಒಬ್ಬೊಬ್ಬರೇ ನಡೆದು ಹೋಗುವಾಗ ದೇವರ ಅಷ್ಟೊತ್ತರಗಳನ್ನು ಮಣ ಮಣ ಹೇಳಿಕೊಳ್ಳುತ್ತಲೋ, ತಮಗಿಷ್ಟವಾದ ಹಾಡುಗಳನ್ನು ಇಯರ್‌ಫೋನ್ ಸಿಕ್ಕಿಸಿಕೊಂಡು ಕೇಳುತ್ತಲೋ ನಡಿಗೆಯ ಖುಷಿ ಅನುಭವಿಸಿದರೆ, ವಾಚಾಳಿ ಮಾತುಪ್ರಿಯ ಮಾನಿನಿಯರು, ಜಗತ್ತಿನ ಪರಿವೆಯೇ ಇಲ್ಲದಂತೆ ಜೋರು ದನಿಯಲ್ಲಿ ಮಾತಾಡುತ್ತಾ, ಮಂದಗತಿಯಲ್ಲಿ ನಡೆಯುತ್ತಾ ಸಾಗಿದಾಗ, ವ್ಯಾಯಾಮವು ಅವರ ದೇಹಕ್ಕೋ ಅಥವಾ ನಾಲಿಗೆಗೆ ಮಾತ್ರವೋ ಎಂಬ ಜಿಜ್ಞಾಸೆ ಕಾಡುತ್ತದೆ. ಕೆಲವರಂತೂ, ಅಡುಗೆ ರೆಸಿಪಿಯಿಂದ ಹಿಡಿದು ಮಗನಿಗೆ ಹೆಣ್ಣು ಹುಡುಕುತ್ತಿರುವ ವಿಚಾರದವರೆಗೆ ಏನು ಬೇಕಾದರೂ ಹರಟುತ್ತಾ, ಊರಿನ ರೇಡಿಯೊ ಆಗಿರುತ್ತಾರೆ. ಎದುರಿಗೆ ಹೊಸದಾಗಿ ವಾಕಿಂಗ್ ಆರಂಭಿಸಿದವರು ಯಾರಾದರೂ ಕಂಡರೆ, ‘ಒಹ್ ಇವಳ್ಯಾರೋ ಇವತ್ತಿಂದ ವಾಕಿಂಗ್ ಬರ್ತಾ ಇದಾಳೇ, ಮುಂಚೆ ನೋಡಿಲ್ಲ’ ಅಂತಾನೋ, ‘ಈ ಅಣ್ಣ ಅದೇ ಪಕ್ಕದ ಲೇಔಟ್‌ನಲ್ಲಿ ಹೊಸ ಮನೆ ಕಟ್ಟಿಸ್ಕೊಂಡು ಬಂದಿದಾರಲ್ಲ, ಅವ್ರೆ’ ಅಂತಾನೋ ಅವರಿಗೂ ಕೇಳಿಸೋ ಹಾಗೆ ಮಾತಾಡ್ತಾ, ಏದುಸಿರು ಬಿಡ್ತಾ ಹೆಜ್ಜೆಯಿಡುತ್ತಿರುತ್ತಾರೆ. ಮತ್ತೂ ಕೆಲವರು ವಾಕಿಂಗ್‌ಗೆ ತಕ್ಕ ಉಡುಗೆ ತೊಡಲು ಮನೆಯಲ್ಲಿ ಒಪ್ಪಿಗೆ ಇಲ್ಲ ಎಂಬ ಕಾರಣಕ್ಕೋ ಅಥವಾ ಚೂಡಿದಾರ್, ಟೀ ಶರ್ಟ್ ಇವೆಲ್ಲಾ ತಮಗೆ ಒಗ್ಗೊಲ್ಲ ಎಂಬ ಸ್ವವಿಶ್ಲೇಷಣೆಯ ಕಾರಣಕ್ಕೋ, ಉಟ್ಟ ಸೀರೆಯ ಸೆರಗನ್ನು ಹೊದ್ದು ಅದರ ತುದಿಯನ್ನು ಒಂದು ಕೈಯಲ್ಲಿ ಹಿಡಿದು, ಮತ್ತೊಂದು ಕೈಯನ್ನು ಮಾತ್ರ ಬೀಸುತ್ತಾ, ಮದುವೆಯಂತಹ ಕಾರ್ಯಕ್ರಮಗಳಿಗೆ ಹೋದಾಗ ಧರಿಸೋ ಚಪ್ಪಲಿಯಲ್ಲೇ ವಾಕಿಂಗ್ ಹೊರಡ್ತಾರೆ. ಮತ್ತೂ ಕೆಲವು ಹೆಣ್ಣುಮಕ್ಳು, ತಮ್ಮ ಸೆರಗನ್ನೇ ಮಡಚಿ ಬುಟ್ಟಿಯಾಗಿಸಿ, ಅದರ ತುಂಬಾ ದಾರಿಯುದಕ್ಕೂ ಅವರಿವರ ಮನೆಯ ಗಿಡಗಳಿಂದ ಕದ್ದ ಹೂಗಳನ್ನು ಜತನವಾಗಿ ಇರಿಸಿಕೊಳ್ತಾ, ತಮ್ಮ ಮನೆಯ ದೇವರು ಇವತ್ತು ಎಷ್ಟು ಪ್ರಸನ್ನನಾಗಬಹುದು ಎಂಬ ಖುಷಿಯಲ್ಲಿ ವಾಕ್ ಮಾಡ್ತಾರೆ. ಕೆಲವು ನಾಯಿದ್ವೇಷಿ ಆಂಟಿಯರು, ಕೈಯಲ್ಲಿ ಕೋಲು ಹಿಡಿದೇ ರಸ್ತೆಗಿಳಿಯುತ್ತಾರೆ. ಜಾಗಿಂಗ್ ಟ್ರ್ಯಾಕ್ ಇರುವ ಅಪಾರ್ಟ್‌ಮೆಂಟ್ ಅಥವಾ ಹತ್ತಿರದಲ್ಲೇ ಪಾರ್ಕ್ ಇದ್ದರೆ ಸರಿ; ಇಲ್ಲವಾದರೆ ವಾಹನಗಳು ಹೊಗೆಯುಗುಳುವ ರಸ್ತೆಯಲ್ಲಿ ವಾಕ್ ಮಾಡಬೇಕಾದರೆ, ದುಪಟ್ಟಾ ಅಥವಾ ಸೆರಗಿನಿಂದ ಮುಖ ಮೂತಿ ಮುಚ್ಚಿಕೊಂಡು, ಇದ್ದೂ ಇಲ್ಲದ ಫುಟ್‌ಪಾತ್‌ನಲ್ಲಿ ವಾಕ್ ಮಾಡೋ ಹೆಂಗಳೆಯರನ್ನು ಕಂಡರೆ ಅಳಬೇಕೋ ನಗಬೇಕೋ ತಿಳಿಯೋಲ್ಲ. ಇಷ್ಟರ ಮಧ್ಯೆಯೂ, ತಮಗಾಗಿ, ತಮ್ಮ ಆರೋಗ್ಯಕ್ಕಾಗಿ ಅಥವಾ ಮನಸ್ಸಂತೋಷಕ್ಕಾಗಿ ಅರ್ಧ ತಾಸು ಹೊರಬರುವ ವಾಯುವಿಹಾರಿ ಹೆಣ್ಣುಮಕ್ಕಳಿಗೆ ಇರುವ ಜೀವನೋತ್ಸಾಹ, ಶ್ಲಾಘನೀಯವೇ ಸರಿ.

ಈಚೀಚೆಗೆ ಕುಟುಂಬದ ಜನ, ಮಹಿಳೆಯನ್ನೂ ಮನುಷ್ಯಳೆಂದು ಕಾಣುತ್ತಾ, ಅವಳ ಬೇಕು ಬೇಡಗಳಿಗೂ ಸ್ಪಂದಿಸುತ್ತಾ ಇರುವುದು, ಆಕೆಯ ಬದುಕನ್ನು ಸ್ವಲ್ಪ ಹಗುರಾಗಿಸಿರುವುದು ಕಂಡುಬರುತ್ತಿದ್ದು, ಇದು ಸಮಾಜವು ಸರಿಯಾದ ದಿಕ್ಕಿನೆಡೆ ಸಾಗುತ್ತಿದೆ ಎಂಬುದರ ಸಂಕೇತವೇ; ಇದನ್ನು ನಾವು ಯಾವುದೇ ಸಮೀಕ್ಷೆಯಿಂದ ತಿಳಿಯಬೇಕಾಗಿಲ್ಲ. ಶಾಪಿಂಗ್ ಎಂದೋ, ಗೆಳತಿಯರ ಜೊತೆ ನಾಟಕ, ಸಿನಿಮಾ ವೀಕ್ಷಣೆಗೆಂದೋ, ಅಥವಾ ಕೇವಲ ವಾಯುವಿಹಾರಕ್ಕೆಂದೋ ಮುಕ್ತವಾಗಿ ಗೆಳತಿಯರೊಡನೆ ಖುಷಿ ಹಾಗೂ ಆತ್ಮವಿಶ್ವಾಸದಿಂದ ಹೊರಬರುತ್ತಿರುವ, ಎಲ್ಲ ವಯೋಮಾನದ ಹೆಂಗಳೆಯರು ಇದಕ್ಕೆ ಸಾಕ್ಷಿ. ಇವರ ಹಾಗೂ ಇವರನ್ನು ಇವರಂತೆ ಇರಲು ಬಿಡುವವರ ಸಂತತಿ ಸಾವಿರವಾಗಲಿ ಎಂಬುದೇ ಹಾರೈಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.