ಸಿಂಗಲ್ ಪೇರೆಂಟ್ ಅಥವಾ ಸಿಂಗಲ್ ಮದರ್ ಅಂದ ಕೂಡಲೇ ನೆನಪಾಗೋದು ಅವರ ಒಂಟಿತನ, ಹತಾಶೆ, ಆತಂಕ, ಎದೆಗುದಿ, ಮೈತುಂಬ ಜವಾಬ್ದಾರಿಗಳು, ಆರ್ಥಿಕ ಸಂಕಷ್ಟಗಳು, ಸಮಾಜದ ಹಾಗೂ ಕುಟುಂಬದ ಧೋರಣೆಗಳು, ಮಾನಸಿಕ ಒತ್ತಡಗಳು, ಹೆಜ್ಜೆಹೆಜ್ಜೆಗೆ ಎದುರಾಗುವ ಸವಾಲುಗಳು, ಅನುದಿನವೂ ಕಾಡುವ ಒಂಟಿತನ, ಇದೆಲ್ಲದರ ನಡುವೆ ಅಡಿಗೊಬ್ಬರಂತೆ ಎದುರು ಬರುವ ವ್ಯಾಘ್ರಗಳು... ಇದಿಷ್ಟೇ ಅಲ್ಲವೆ?

ಆರ್ಥಿಕ ಸಂಕಷ್ಟ ಹಾಗೂ ಜವಾಬ್ದಾರಿಗಳ ಹೊರೆಗಳಿಗಿಂತ ಹೆಚ್ಚಾಗಿ ಕಾಡುವುದು ಭಾವನಾತ್ಮಕ ಸಂಗತಿಗಳು. ಎಲ್ಲವನ್ನೂ ಮಕ್ಕಳೆದುರು ಹೇಳಿಕೊಳ್ಳಲಾಗದು. ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳು, ಕುಟುಂಬದವರು ಜೊತೆ ನಿಂತರೂ ಅವರೆದುರಿಗೆಲ್ಲಾ ಭಾವನೆಗಳು ಬಿಚ್ಚಿಕೊಳ್ಳಲಾರವು. ಅಳು ಬಂದರೂ ಮಕ್ಕಳೆದುರು ಕಣ್ಣೀರೂ ಹಾಕುವಂತಿಲ್ಲ; ಚಿಕ್ಕ ಜೀವಗಳು ಅಧೈರ್ಯಗೊಂಡಾವು ಎನ್ನುವ ತಳಮಳ... ಇಂಥದ್ದೊಂದು ಪರಿಸ್ಥಿತಿಯನ್ನು ಗೆಲ್ಲಲು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮಾತ್ರ ಸಾಧ್ಯ.

ಸಿಂಗಲ್ ಪೇರೆಂಟ್ ಅಥವಾ ಏಕಾಂಗಿ ಅಮ್ಮ ಎನ್ನುವ ಕಳವಳದ ನಡುವೆಯೂ ಬದುಕನ್ನು ಹಸನಾಗಿಸಿಕೊಂಡವರೂ ಇದ್ದಾರೆ. ಎಲ್ಲಾ ಜವಾಬ್ದಾರಿಗಳಿಗೆ ಏಕಾಂಗಿಯಾಗಿ ಹೆಗಲು ಕೊಡುವುದರಲ್ಲೂ ಒಂದು ಸಂತೃಪ್ತಿ ಇದೆ ಎನ್ನುವವರೂ ಇದ್ದಾರೆ. ಹೌದು, ಎಲ್ಲಕ್ಕೂ ಜೊತೆ ನಿಲ್ಲುವ ಸಂಗಾತಿಯನ್ನು ಕಳೆದುಕೊಂಡು ಬದುಕು ಅತಂತ್ರವಾದಾಗ ಅಥವಾ ಜೊತೆಗಿದ್ದೂ ಜೊತೆ ನಿಲ್ಲದ ನಿರರ್ಥಕ ಸಂಬಂಧವನ್ನು ಕಳಚಿಕೊಂಡು ಹೊರನಡೆದಾಗ ಬದುಕಲ್ಲಿ ಕಾರ್ಮೋಡ ಕವಿದಂಥ ಅನುಭವವಾಗುವುದು ಸಹಜ. ಆದರೆ, ಅಂತಹ ದುರ್ಗಮ ಹಾದಿಯಲ್ಲಿಯೂ ಬದುಕು ಹೊರೆಯಾಗದಂತೆ, ನಾಳೆಗಳು ಭಾರವಾಗದಂತೆ, ಸೋತರೂ ನೆಲಕಚ್ಚದಂತೆ ಮಾಡುವುದೇ ತಾಯ್ತನ. ತಂದೆಯೂ ತಾನೇ ತಾಯಿಯೂ ತಾನೇ ಆಗಿ ಮಕ್ಕಳ ಪಾಲನೆಯ ಸುಖವನ್ನು ಸಲುಹಲು ಗಟ್ಟಿ ಎದೆ ಬೇಕು. ಅಂತಹ ಸವಾಲನ್ನು ಬದುಕಿನ ಸಂಭ್ರಮವಾಗಿ ಪರಿವರ್ತಿಸಿಕೊಂಡವರು, ಎದುರಾಗುವ ಸವಾಲುಗಳಿಗೆ ಬೆನ್ನುಕೊಡದೇ ಎದೆಗೊಟ್ಟು ನಡೆಯುತ್ತ, ತನ್ನನ್ನೇ ನಂಬಿ ಭೂಮಿಗೆ ಬಂದ ಕಂದನಿಗೆ ಅಪ್ಪನಿಲ್ಲದ ಕೊರತೆ ಕಾಡದಂತೆ ಸಲುಹುತ ಬದುಕನ್ನು ಸುಂದರಗೊಳಿಸಿಕೊಂಡ, ಸಹ್ಯಗೊಳಿಸಿಕೊಂಡ ಅಮ್ಮಂದಿರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಈ ಸಲದ ಅಮ್ಮಂದಿರ ದಿನಕ್ಕೆ ಸಿಂಗಲ್ ಅಮ್ಮನ ಸಂಭ್ರಮದ ನುಡಿಗಳೇ ಅರ್ಪಣೆ.

ನಗುವುದನ್ನು ಕಲಿತಾಗಲೇ ಬದುಕು ಚಿಗುರುವುದು

ಸಿಂಗಲ್ ಮಾಮ್ –ಏಕಾಂಗಿ ಅಮ್ಮ ಅನ್ನುವಂತಹ ಪದವೇ ಮನಸಿಗೆ ಏನೊ ಒಂಥರ ಕಸಿವಿಸಿ, ಆದರೆ ಅದನ್ನೇ ಧೈರ್ಯವನ್ನಾಗಿ ಮಾಡಿಕೊಳ್ಳುವುದು ಅನಿವಾರ್ಯತೆ. ಸಿಂಗಲ್ ಮದರ್ ಅಂದಾಗ, ಅವರ ಅನುಪಸ್ಥಿತಿ ನೆನಪಿಗೆ ಬಂದು ವೇದನೆ ಎನಿಸುತ್ತದೆ. ಹಾಗೆಯೇ, ಸಿಂಗಲ್ ಮದರ್ ನಾನೊಬ್ಬಳೇ ಅಲ್ಲ ಎನ್ನುವ ವಾಸ್ತವ ಕಣ್ಣೆದುರಿಗೆ ಬರುತ್ತದೆ.

‘ನಾಳೆ ಬೆಳಿಗ್ಗೆ ಅನ್ನುವಷ್ಟರಲ್ಲಿ ಅಲ್ಲಿರ್ತೀನಿ’ ಅಂದು ಹೋಗಿದ್ದವರು ಇನ್ನೆಂದೂ ಮತ್ತೆ ಮರಳಿ ಬಾರದ ಲೋಕಕ್ಕೆ ಹೋದರು ಎನ್ನುವುದನ್ನು ಅರ್ಥಮಾಡಿಕೊಳ್ಳಲು, ಒಪ್ಪಿಕೊಳ್ಳಲು ನನ್ನ ಮನಸು ಸಿದ್ಧವಿರಲಿಲ್ಲ. ಆದರೆ, ನಾನು ವಾಸ್ತವಕ್ಕೆ ಮರಳಲೇಬೇಕಾದ ಅಗತ್ಯವಿತ್ತು. ಏಕೆಂದರೆ ಮಡಿಲಲ್ಲಿ ಮೂರೂವರೆ ವರ್ಷದ ನನ್ನ ಪುಟ್ಟ ಜೀವವಿತ್ತು. ಅಪ್ಪ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲಾರದ ಮಗು, ಅವನ ಮುಖದ ಮೇಲೆ ಅಮ್ಮ ಇದ್ದಾಳಲ್ಲ ಎನ್ನುವ ಒಂದು ಆತ್ಮವಿಶ್ವಾಸ, ನಗು ಇತ್ತಲ್ಲ, ಅದೇ ನನ್ನಲ್ಲಿ ಬದುಕುವ ಚೈತನ್ಯವನ್ನು, ಬದುಕಬೇಕು ಎನ್ನುವ ಹಟವನ್ನು ತುಂಬಿದ್ದು. ಏಕಾಂಗಿ ಅಮ್ಮನ ಮೇಲೆ ಎರಡು ಪಟ್ಟು ಜವಾಬ್ದಾರಿಗಳಿರುತ್ತವೆ ನಿಜ. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅಮ್ಮನಿದ್ದಾಳೆ ಎನ್ನುವ ಮಕ್ಕಳ ಆತ್ಮವಿಶ್ವಾಸ ಕುಂದದಂತೆ ಬದುಕುವ ದೊಡ್ಡ ಕೆಲಸ ಅವಳ ಮೇಲಿರುತ್ತದೆ. ಕಂದನ ಏಕೈಕ ಆಸರೆಯಾದ ನಾವೇ ಸೋತು ಹೋದರೆ ಮಕ್ಕಳು ಗೆಲ್ಲಲು ಸಾಧ್ಯವೆ? ಅವರು ಗೆಲ್ಲಬೇಕು ಎಂದರೆ ಮೊದಲು ನಾವು ಸೋಲುವುದನ್ನು ತಪ್ಪಿಸಬೇಕು. ಇದನ್ನು ನೆನಪಿಸಿಕೊಂಡು ನಾನು ನಗುವುದನ್ನು ಕಲಿತೆ, ಗೆಲುವಾಗಿರುವುದನ್ನು ಕಲಿತೆ, ಚೈತನ್ಯವನ್ನು ಮೈದುಂಬಿಕೊಂಡೆ. ಅವರಿಲ್ಲದ ನೋವು ನನ್ನನ್ನೂ, ನನ್ನ ಮಗನನ್ನು ಮೂಲೆಗುಂಪು ಮಾಡದಂತೆ ತಡೆಯುವುದು ನನ್ನ ಜವಾಬ್ದಾರಿಯಾಗಿತ್ತು. ಅವರಿಲ್ಲ ಎನ್ನುವುದನ್ನೇ ಮರೆತೆ, ಅವರು ನನ್ನೊಳಗೇ ಇರುವುದನ್ನೇ ಮುನ್ನೆಲೆ ತಂದುಕೊಂಡು ಜೀವನ ಆರಂಭಿಸಿದಾಗ ಬದುಕು ಎಷ್ಟೊ ಸಹ್ಯವೆನಿಸಲು ಆರಂಭವಾಯ್ತು...

ಏಕಾಂಗಿಯಾಗಿ ಬದುಕು ಜೀಕುವ ಅನಿವಾರ್ಯತೆಗೆ ಬಿದ್ದ ಎಲ್ಲಾ ಅಮ್ಮಂದಿರಿಗೆ ನಾನು ಹೇಳುವುದಿಷ್ಟೆ, ನಾವು ನಗದ ಹೊರತು, ನಮ್ಮ ಮನೆಯಲ್ಲಿ ನಗು ತುಂಬದು, ನಮ್ಮನ್ನೇ ನಂಬಿ ಭೂಮಿಗೆ ಬಂದ ಕಂದನ ಬಾಳಲ್ಲಿಯೂ ನಗು ಚಿಮ್ಮದು. ಹೀಗಾಗಿ, ಮೊದಲು ನಗುವುದನ್ನು ಕಲಿಯಿರಿ, ಬದುಕು ಗೆಲುವಾಗುವುದು.

–ಮಂಗಳಾ ಜಮಖಂಡಿ

ಕೊರಗುವುದು ಬಿಟ್ಟು ಮುನ್ನಡೆಯಿರಿ

‘ಆ ಎಳೆ ಮಗಿನ್ ಮುಖ ನೋಡಾದ್ರೂ ಅವ್ನ ಜೊತೆ ಅನುಸರಿಸಿಕೊಂಡು ಹೋಗ್ಬಾರ್ದ?’ ಊದಿದ ಕಣ್ಣುಗಳನ್ನ ಹೊತ್ತು ವರ್ಷದ ಕೂಸಿನ ಜೊತೆ ಊರಿಗೆ ಮರಳಿದಾಗ ಮೇಲೆ ಹೇಳಿದಂತೆ ಕೇಳಿದ್ದವರೆಷ್ಟೋ...

ಹೌದಲ್ಲಾ, ಎಷ್ಟೋ ಹೆಣ್ಣು ಮಕ್ಕಳು ಈಗ್ಲೂ ಟಾಕ್ಸಿಕ್ ಮ್ಯಾರೇಜ್ ನಲ್ಲಿ ಬದುಕು ಸವೆಸ್ತಾ ಇರೋದು, ಮಗು ಇದೆ ಅನ್ನೋ ಒಂದೇ ಕಾರಣಕ್ಕೆ. ಜನಪ್ರಿಯ ಮಾಧ್ಯಮಗಳೂ ಸಹ ಸಿಂಗಲ್ ಪೇರೆಂಟಿಂಗ್ ಅನ್ನ ಫೈಲ್ಡ್ ಅಂತ ತೋರಿಸಿಕೊಂಡು ಬಂದದ್ದೇ.

ಹಾಗಂತ ಸಿಂಗಲ್ ಪೇರೆಂಟಿಂಗ್ ಹೂವಿನ ಮೇಲೆ ನಡೆದಷ್ಟು ಸುಲಭವಲ್ಲ. ಅದೇ ರೀತಿ ಎಲ್ಲರೂ ತಿಳಿದಂತೆ ಕತ್ತಿಯ ಮೇಲೆ ನಡೆಯುವಷ್ಟು ಕಷ್ಟವೂ ಅಲ್ಲ. ನನ್ನ ಮಗ ಮಾತಾಡಲು ಕಲಿತಾಗ, ಶಾಲೆಗೆ ಸೇರಿದಾಗ ನನಗೆ ಕಾಡುತ್ತಿದ್ದ ಭಯ ಅಂದರೆ ಅವ್ನು ಎಲ್ಲಿ ತನ್ನ ತಂದೆಯ ಬಗ್ಗೆ ಪ್ರಶ್ನೆ ಕೇಳ್ತಾನೆ ಅಂತ.

ಆದ್ರೆ ನನಗೇ ಆಶ್ಚರ್ಯ ಆಗುವಂತೆ ಅವನ ಹೆಸರಿಗೆ ನನ್ನ ಹೆಸರಿನ ಇನಿಶಿಯಲ್ ಸೇರಿಸಿ ನಾನು ಕಾವ್ಯಳ ಮಗ ಅಂತ ಹೆಮ್ಮೆಯಿಂದ ಹೇಳಿದಾಗ ಆದಷ್ಟು ಖುಶಿ ಯಾವುದಕ್ಕೂ ಹೋಲಿಸಲು ಆಗಲ್ಲ. ನಮ್ಮ ಮನೆಯಲ್ಲಿ ನಮ್ಮದೇ ರೂಲ್. ಬೆಳಿಗ್ಗೆ ಎದ್ದು ಅವನು ಬೆಡ್ಶೀಟ್ ಮಡಿಚಿ, ಫ್ರೆಶ್ ಅಪ್ ಆಗಿ ಅವನಷ್ಟೇ ಉದ್ದದ ಬ್ಯಾಗ್ ಹಿಡಿದು ಹಾಲು ತಂದುಕೊಟ್ಟು ಅವನ ಗಿಡಗಳ ಪೋಷಣೆ ಮಾಡಿ ಅಡುಗೆ ಮನೆಯಲ್ಲಿ ನಂಗೆ ಏನಾದ್ರೂ ಹೆಲ್ಪ್ ಬೇಕಾ ಅಂತಾ ಕೇಳುವಾಗ ಎಷ್ಟು ಚಂದವಾಗಿ ಜವಾಬ್ದಾರಿ ನಿಭಾಯಿಸ್ತಾನೆ ಅಂತ ಖುಷಿ ಆಗದೆ ಇರಲ್ಲ. ಅವನಿಗೀಗ ಆರು ವರ್ಷ, ಅವನಲ್ಲಿ ಮೂಡಿರಬಹುದಾದ ಪ್ರಶ್ನೆಗಳನ್ನು ಊಹಿಸಿ ಮನಃಶಾಸ್ತ್ರಜ್ಞರ ಸಹಾಯದಿಂದ ಅವನಿಗೆ ನಮ್ಮ ಅರೇಂಜ್ಮೆಂಟ್ನ ಬಗ್ಗೆ ವಿವರಿಸಿದಾಗ ಅವನ ಮುಖದಲ್ಲಿ ಅಮ್ಮನ ಬಗ್ಗೆ ಹೆಮ್ಮೆ ಅಷ್ಟೇ ಕಂಡಿದ್ದು.

ಇಬ್ಬರೂ ಕಿತ್ತಾಡಿ ತಿಂಡಿಯ ಮೆನು ತಯಾರಿಸುವುದು, ತಿಂಗಳಿಗೊಮ್ಮೆ ಮೌಲ್ಯಮಾಪನ ಮಾಡಿಕೊಳ್ಳುವುದು, ಟೆರೇಸ್ ಮೇಲೆ ನಿಂತು ನಕ್ಷತ್ರಗಳನ್ನು ನೋಡುವುದು, ರಾಜನನ್ನ ಹೊಡೆದರೂ ಮುಂದುವರಿಯುವ ಚದುರಂಗದಾಟ, ಪೇಂಟಿಂಗ್ ನೆಪದಲ್ಲಿ ನಡೆಯುವ ಬಣ್ಣದಾಟ ನಮ್ಮ ಅಸಂಖ್ಯ ತರಲೆಗಳು. ತೀರ್ಪುಗಳನ್ನು ಮೀರಿ ಬದುಕುವ ಒಂಟಿ ಅಮ್ಮಂದಿರ ಪಾಲಿಗೆ ಮಕ್ಕಳ ಆ ನಗು ಮುಂದಿನ ದಿನಗಳ ಬಗ್ಗೆ ವಿಶ್ವಾಸ ಮೂಡಿಸುತ್ತೆ.

ಅವನಿಗೆ ತಾನೊಬ್ಬನೇ ಅಲ್ಲ ಅಂತ ಮನದಟ್ಟು ಮಾಡಿಸಲು ಆಗಾಗ ನನ್ನ ಇತರೆ ಸ್ನೇಹಿತರ ಮಕ್ಕಳೊಂದಿಗೆ ಪ್ಲೇ ಡೇಟ್ಗೆ ಕರೆದುಕೊಂಡು ಹೋಗುವುದು ಅವನಲ್ಲಿ ಈ ಸಮಾಜದ ಸಿದ್ಧಮಾದರಿಗಳಿಂದ ಮೂಡಬಹುದಾದ ಕಾಂಪ್ಲೆಕ್ಸನ್ನ ತಡೆಯುವಲ್ಲಿ ಸಹಾಯ ಮಾಡಿತ್ತು.

ಹಾಗಂತ ಈ ಸಿಂಗಲ್ ಪೇರೆಂಟಿಂಗ್ ಅನ್ನೋದು ಎಲ್ಲರಿಗೂ ಸುಲಭದ ಹಾದಿಯಲ್ಲ. ಅದರಲ್ಲೂ ಆರ್ಥಿಕವಾಗಿ ಎಷ್ಟೋ ತಾಯಂದಿರಿಗೆ ಇದು ಭಾರ. ನಿಜ, ಆಕೆಗೆ ಎರಡುಪಟ್ಟು ಜವಾಬ್ದಾರಿ ಇರುತ್ತೆ. ಆದ್ರೆ ಆ ಎಲ್ಲಾ ನೋವಿನ ಮಧ್ಯೆ ಮಗುವಿನ ಸಾಂಗತ್ಯ, ತನ್ನನ್ನೇ ನಂಬಿರುವ ಆ ಮುಗ್ಧ ಜೀವದ ನಗು, ತನ್ನ ಮೇಲೆ ಆ ಜೀವ ಇಟ್ಟಿರುವ ವಿಶ್ವಾಸ, ನಂಬಿಕೆ ಮತ್ತೆ ಮರುದಿನ ಪುಟಿದೇಳುವಂತೆ ಮಾಡುತ್ತೆ. ನಿಜ ಹೇಳಬೇಕೆಂದರೆ ಅಂತಹ ತಾಯಂದಿರಿಗೆ ಆಪ್ತ ಸಮಾಲೋಚನೆ ನಡೆಸಿ, ಅವರ ಬದುಕನ್ನ ಕಟ್ಟಿಕೊಳ್ಳಲು ನನ್ನ ಕೈಲಾದಷ್ಟು ಜೊತೆ ನಿಲ್ಲಲು ನನ್ನ ಮಗನೇ ನನಗೆ ಸ್ಫೂರ್ತಿ.

ಕಡೆಯದಾಗಿ ನಾನು ಹೇಳುವುದು ಇಷ್ಟೇ, ನನ್ನ ಬದುಕು ಹೀಗಾಯ್ತಲ್ಲ ಅಂತ ಕೊರಗುವುದು ಯಾವತ್ತೂ ಒಳ್ಳೆಯದಲ್ಲ. ನಮ್ಮನ್ನೇ ನಂಬಿ ಬಂದ ಆ ಮುಗ್ಧ ಜೀವಗಳ ಸುಂದರ ಭವಿಷ್ಯ ರೂಪಿಸುವ ಹೆಮ್ಮೆ ನಮಗಿರಲಿ.

ಸಿಂಗಲ್ ಪೇರೆಂಟಿಂಗ್ ನ ಅಡ್ವಾಂಟೇಜ್ ಎಂದರೆ, ನಮ್ಮ ಮಗುವನ್ನ ನಮಗೆ ಹೇಗೆ ಬೇಕೋ ಹಾಗೆ ಬೆಳೆಸಬಹುದು. ನಮ್ಮ ಮಕ್ಕಳನ್ನ ವಿಶ್ವಮಾನವರಾಗಿ ಬೆಳೆಸುವ ಅತ್ಯುತ್ತಮ ಅವಕಾಶ ಇದು. ನಿಜ ಸಿಂಗಲ್ ಪೇರೆಂಟ್ ಅನ್ನೋ ಪದ ತುಂಬಾ depressing ಆಗಿ ಕೇಳುತ್ತೆ. ಇಷ್ಟೆಲ್ಲಾ ಕಟ್ಟುಪಾಡುಗಳಿರುವ ಸಮಾಜದಲ್ಲಿ, ತಿಂದು ಮುಕ್ಕುವಂತೆ ನೋಡುವ ವ್ಯಾಘ್ರರ ನಡುವೆ ಒಂಟಿಯಾಗಿ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಲು ಗಟ್ಟಿತನ ಬೇಕು.ಹಾಗಾಗಿ ನಮ್ಮನ್ನ ನಾವು Empowered Guardians ಅಂತ ಕರೆದುಕೊಳ್ಳೋಣವೇ???

–ಕಾವ್ಯಶ್ರೀ

ಸುಗಮ ದಾರಿಗೆ ಕೆಲವು ಸಲಹೆಗಳು

ನಿಮ್ಮ ಹಿಂದಿನ ಸೇವಿಂಗ್ಸ್, ನಿಮಗೆ ಬಂದ ಆಪತ್ಧನ, ಪ್ರತಿತಿಂಗಳು ಬರುವ ಆದಾಯ ಹಾಗೂ ಇನ್ನಿತರ ಮೂಲಗಳ ಹಣಕಾಸು ಹರಿವು ಹಾಗೂ ಖರ್ಚಿನ ಲೆಕ್ಕಾಚಾರವನ್ನು ಒಳಗೊಂಡ ಮಾಸಿಕ ಬಜೆಟ್ ಸಿದ್ಧಪಡಿಸಿಕೊಳ್ಳಿ ಮತ್ತು ಅದನ್ನು ಪ್ರತಿತಿಂಗಳೂ ಅಗತ್ಯಕ್ಕನುಗುಣವಾಗಿ ಅಪ್ಡೇಟ್ ಮಾಡುತ್ತಿರಿ.

ಮಕ್ಕಳ ಶೈಕ್ಷಣಿಕ ಖರ್ಚುಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿಕೊಳ್ಳಿ.
ಅನೇಕರು ಮಕ್ಕಳು ಬಯಸಿದ್ದನ್ನೆಲ್ಲಾ ಅವರ ಕೈಗಿಡುವ ಮೂಲಕ ಅಪ್ಪ ಜೊತೆಗಿಲ್ಲ ಎನ್ನುವ ಕೊರತೆಯನ್ನು ನೀಗಿಸಲು ನೋಡುತ್ತಾರೆ. ಇದು ತಪ್ಪು. ಮಕ್ಕಳಿಗೆ ಬಯಸಿದ್ದೆಲ್ಲಾ, ಬಯಸಿದೊಡನೆಯೇ ಸಿಗುವಂತೆ ಮಾಡುವುದು ಅಪಾಯಕಾರಿ. ಯಾವುದು ಅಗತ್ಯವಿದೆ, ಯಾವುದು ಅಗತ್ಯವಿಲ್ಲ ಎನ್ನುವುದನ್ನು ಮಕ್ಕಳಿಗೆ ಮನದಟ್ಟು ಮಾಡಿ. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅವರಿಗೆ ಅರ್ಥ ಮಾಡಿಸಿ, ಕೊಳ್ಳುಬಾಕತನವನ್ನು ತಪ್ಪಿಸಿ.

ತಂತ್ರಜ್ಞಾನವನ್ನು ಉಪಯೋಗಿಸಿ.

ಕರೆಂಟ್ ಬಿಲ್, ನೀರಿನ ಬಿಲ್ ಪಾವತಿ, ದಿನಸಿ, ದೈನಂದಿನ ಅಗತ್ಯ ವಸ್ತುಗಳ ಖರೀದಿ ಮತ್ತಿತರ ಅಗತ್ಯಗಳಿಗೆ ತಂತ್ರಜ್ಞಾನದ ಸಹಾಯ ಪಡೆಯಿರಿ. ಈಗ ಎಲ್ಲವನ್ನೂ ಮೊಬೈಲ್ನಲ್ಲಿ ಆಟೊಪೇಗೆ ಹೊಂದಿಸಿ ಇಡಬಹುದು. ಪ್ರತಿ ತಿಂಗಳು ಅಲ್ಲಿಂದಲೇ ತಾನಾಗಿಯೇ ಬಿಲ್ ಪಾವತಿ ಆಗುತ್ತದೆ. ಪ್ರತಿದಿನದ ಅಗತ್ಯ ವಸ್ತುಗಳನ್ನು ಕುಳಿತಲ್ಲಿಂದಲೇ ತರಿಸಿಕೊಳ್ಳಬಹುದು.
ಕಾರ್ಪೂಲ್ನಂತಹ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಿ. ಇತರ ಸಿಂಗಲ್ ಅಮ್ಮಂದಿರೊಂದಿಗೆ ಜವಾಬ್ದಾರಿಯನ್ನು ಹಂಚಿಕೊಳ್ಳಿ. ಒಂದೇ ಶಾಲೆ ಒಂದೇ ಕ್ಲಾಸು ಅಥವಾ ಒಂದೇ ಮಾರ್ಗದಲ್ಲಿ ಓಡಾಡುವ ಮಕ್ಕಳನ್ನು ಪಿಕ್ಅಪ್–ಡ್ರಾಪ್ ಮಾಡುವುದನ್ನು ಪರಸ್ಪರ ಹಂಚಿಕೊಳ್ಳಬಹುದು.

ಮಕ್ಕಳಿಗೂ ಜವಾಬ್ದಾರಿಯನ್ನು ಕಲಿಸಿ.

ಅವರವರ ಚಿಕ್ಕಪುಟ್ಟ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತೆ ಪ್ರೇರೇಪಿಸಿ. ಇದರಿಂದ ಅವರು ಜವಾಬ್ದಾರಿಯುತ ಮಕ್ಕಳಾಗಿ ಬೆಳೆಯುವ ಜೊತೆಗೆ ನಿಮ್ಮ ಹೊರೆಯೂ ಕಡಿಮೆಯಾಗುವುದು. ಮೀ–ಟೈಮ್ ಮರೆಯದಿರಿ. ಅಮ್ಮನೂ–ಅಪ್ಪನೂ ಆಗಿ ಮಕ್ಕಳನ್ನು ಪೊರೆಯುವುದರಲ್ಲಿಯೇ ನಿಮ್ಮತನವನ್ನು ಕಳೆದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಆಸೆ–ಆಕಾಂಕ್ಷೆ, ಹವ್ಯಾಸಗಳನ್ನೆಲ್ಲ ಬದಿಗೊತ್ತುವುದರಿಂದ ಖಿನ್ನತೆ ಆವರಿಸಿಕೊಳ್ಳಬಹುದು. ಸ್ವತಃ ನೀವು ಸಂತೋಷ ಹಾಗೂ ಚೈತನ್ಯದಿಂದಿರದ ಹೊರತು ನಿಮ್ಮ ಮಕ್ಕಳಿಗೆ ಅಂಥದ್ದೊಂದು ವಾತಾವರಣ ನೀಡಲು ಸಾಧ್ಯವಾಗದು. ನಿಮ್ಮ ಇಷ್ಟದ ಹವ್ಯಾಸಗಳಿಗೆ ಒಂದಷ್ಟು ಸಮಯವನ್ನು ಮೀಸಲಿಡಿ. ನಿಮ್ಮ ಅಂದ–ಚಂದ, ಆರೋಗ್ಯ–ಕ್ಷೇಮವೂ ಮುಖ್ಯ. ನೀವು ಖುಷಿಯಾಗಿದ್ದರೆ ಮಾತ್ರ ನಿಮ್ಮ ಪುಟ್ಟ ಬದುಕು ಹಾಗೂ ನಿಮ್ಮನ್ನೇ ನಂಬಿದ ಆ ಪುಟ್ಟ ಜೀವ (ಜೀವಗಳು) ಖುಷಿಯಿಂದಿರಲು ಸಾಧ್ಯ.

ಬದುಕಿನ ಸತ್ವ ದಾಟಿಸುವ ಹೊಣೆ

ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಶಾಲೆ ಮುಗಿಸಿಕೊಂಡು ಸಂಜೆ ವಾಪಸ್ ಮನೆಗೆ ಹೋದರೆ ಅವ್ವ ಅಲ್ಲಿರಲಿಲ್ಲ. ಎಂದಿನಂತೆ ಅವ್ವ ಹೋರಾಟದಲ್ಲಿ ಭಾಗಿಯಾಗಿದ್ದು ಗೊತ್ತಿತ್ತು. ಕತ್ತಲಾಗುತ್ತಿದ್ದಂತೆ ಬಂದ ಅಪ್ಪ ನನ್ನನ್ನು ಊರಿನ ಹೊರಗಡೆ ಇರುವ ಸ್ಥಳವೊಂದಕ್ಕೆ ಕರೆದುಕೊಂಡು ಹೋದರು. ಅದು ಕಲಬುರ್ಗಿಯ ಕಾರಾಗೃಹ. ಅವ್ವನನ್ನು ಭೇಟಿಯಾಗುವ ಸಮಯದಲ್ಲಿ ಅವ್ವ ಮತ್ತು ನನ್ನ ನಡುವೆ ಸರಳುಗಳಿದ್ದವು. ನನಗೆ ಆಶ್ಚರ್ಯ, ಕುತೂಹಲ ಎಲ್ಲವೂ ಒಟ್ಟಿಗೆ ಆಯಿತು. ರೈತರು ಬೆಳೆದ ತೊಗರಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂದು ಹೋರಾಟ ಮಾಡಿದ್ದಕ್ಕೆ ಅವ್ವನನ್ನು ಜೈಲಿಗೆ ಹಾಕಲಾಯಿತು ಎಂದು ಅಪ್ಪ ಹೇಳಿದ್ದ ನೆನಪು. ಅವ್ವ ನಗುತ್ತಲೇ ಜಿಂದಾಬಾದ್ ಹೇಳಿದ್ದಳು. ನ್ಯಾಯದೆಡೆಗೆ ಅವಳಗಿದ್ದ ಕಾಳಜಿ, ಉತ್ಸಾಹ ಕಂಡು ನಾನು ಅವ್ವನೊಂದಿಗೆ ಜೋರು ಧ್ವನಿಯಲ್ಲಿ ಜಿಂದಾಬಾದ್ ಕೂಗಿದ್ದೆ. ಇದು ನನ್ನವ್ವ. ಅವಳನ್ನು ಯಾವಾಗಲೂ ನಾನು ಜನರ ಮಧ್ಯೆ ನೋಡಿದ್ದು. ಮಹಿಳಾಪರ ಹೋರಾಟ, ಕೃಷಿ, ಕೂಲಿಕಾರ್ಮಿಕರಿಗೆ ಸಂಬಂಧಪಟ್ಟ ಸಭೆಯಲ್ಲಿ ಅವ್ವನ ಹಾಜರಾತಿ ಸಾಮಾನ್ಯ. 15 ವರ್ಷದಿಂದ ಉದ್ಯೋಗ ಖಾತ್ರಿಯಡಿ ಜನರಿಗೆ ಸಮರ್ಪಕವಾಗಿ ಕೆಲಸ ಸಿಗಲಿ ಎಂದು ಹೋರಾಟ ನಡೆಸಿದವಳು.

ಘನತೆಯಿಂದ ಸ್ವಾಲವಂಬಿಗಳಾಗಿ ಬದುಕುವುದು ದಿಟದ ಬದುಕು ಎಂಬುದನ್ನು ಅವ್ವನಿಂದ ಕಲಿತಿದ್ದೇನೆ. ವೃತ್ತಿ ಯಾವುದೇ ಇರಲಿ, ಸದಾ ಜನಪರವಾಗಿರಬೇಕು. ಜನರಿಗಾಗಿ ಬದುಕುವುದೇ ನಿಜವಾದ ಸಿದ್ಧಾಂತ ಎಂದು ಹೇಳಿಕೊಟ್ಟ ಅವ್ವನ ಬದುಕಿನ ಸತ್ವವನ್ನು ನನ್ನ ಮಕ್ಕಳಿಗೂ ಬಳುವಳಿಯಾಗಿ ದಾಟಿಸಲು ಬಯಸುತ್ತೇನೆ. ಇದೇ ನಾನು ಅವಳಿಗೆ ಕೊಡಬಹುದಾದ ಅತ್ಯುನ್ನತ ಉಡುಗೊರೆ. ತಾಯಿ ಋಣ, ಅನ್ನದಾತರ ಋಣ ತೀರಿಸಲಾಗದು. ಅವಳಿಗೆ ಹಾಡುಗಳೆಂದರೆ ಬಲುಇಷ್ಟ. ಹಾಡುವ ಮೂಲಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

-ಲವಿತ್ರಾ ವಸ್ತ್ರದ್, ಚಳವಳಿಗಾರ್ತಿ

ಅಮ್ಮನ ಅಭಿರುಚಿಗೆ ಮರುಚಾಲನೆ ಸಿಗಲಿ

ಅಮ್ಮನಿಗೆ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಅಪಾರವಾದ ನಂಬಿಕೆ ಇತ್ತು. ಮಗಳು ಚೆನ್ನಾಗಿ ಓದಿ, ಆರ್ಥಿಕವಾಗಿ ಸ್ವತಂತ್ರಳಾಗಿರಬೇಕು ಅನ್ನುವುದು ಅವರ ಜೀವನದ ಬಹುದೊಡ್ಡ ಕನಸು. ಅದನ್ನು ಈಡೇರಿಸಿರುವುದಕ್ಕೆ ಸದ್ಯಕ್ಕೆ ಖುಷಿ ಇದೆ. ಭೌತಿಕ ಉಡುಗೊರೆ ಅಂತ ಬಂದರೆ ಅಮ್ಮನಿಗೆ ಗೃಹೋಪಯೋಗಿ ವಸ್ತುಗಳು, ಮನೆಗೆಲಸಕ್ಕೆ ನೆರವಾಗುವ ಉಪಕರಣಗಳೆಂದರೆ ಎಲ್ಲಿಲ್ಲದ ಆಸಕ್ತಿ. ಅವರ ಅವಶ್ಯಕತೆಗೆ ಅನುಸಾರ ಇಷ್ಟಪಟ್ಟಿದ್ದನ್ನೆಲ್ಲ ಕೊಡಿಸುವ ಆಸೆಯಂತೂ ಇದೆ.

ಅಮ್ಮನಿಗೆ ಕೃತಜ್ಞತೆ ಸಲ್ಲಿಸೋದು ಅಂದರೆ ನಮ್ಮ ಬದುಕಿಗೆ ನಾವೇ ಕೃತಜ್ಞತೆ ಹೇಳುವುದೇ ಆಗಿದೆ. ಯಾಕೆಂದರೆ ಈ ಜೀವ ಮತ್ತು ಜೀವನ ಅವಳ ಕರುಣೆಯ ಒಟ್ಟಂದದ ಫಲ. ನನ್ನ ಬದುಕಿಗೆ ಕಲಾಚೌಕಟ್ಟನ್ನು ಹಾಕಿಕೊಟ್ಟವಳು ಅವಳೇ. ಕಲಾತ್ಮಕ ಆಲೋಚನೆಗಳಿಗೆ ಅಮ್ಮನೇ ಪ್ರೇರಣೆ. ಕಲೆ ಹಾಗೂ ರುಚಿಕಟ್ಟಾದ ಅಡುಗೆ ತಯಾರಿ, ಫ್ಯಾಷನ್ ಪ್ರಜ್ಞೆ ಎಲ್ಲವೂ ಅವಳಿಂದಲೇ ಕಲಿತಿದ್ದು. ಸಂಸಾರದ ಜಂಜಾಟದಲ್ಲಿ ಕಳೆದುಹೋಗಿರುವ ಅಮ್ಮನ ಹವ್ಯಾಸ ಹಾಗೂ ಅಭಿರುಚಿಗಳಿಗೆ ಮತ್ತೆ ಚಾಲನೆ ಸಿಗುವಂತಾದರೆ ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ಅವಳಿಗಾಗಿ ಕಲಾ ಕಾರ್ಯಾಗಾರ, ಪ್ರದರ್ಶನದಂಥ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಆಸೆಯಿದೆ.

-ಅನುಷಾ ಬಡಿಗೇರ್, ಚಿತ್ರಕಲಾವಿದೆ

ಪ್ರಶಸ್ತಿಗಳೆಲ್ಲ ಅಮ್ಮನಿಗೆ ಅರ್ಪಣೆ

ಅಮ್ಮನಿಗೆ ಭೌತಿಕ ಉಡುಗೊರೆಗಳೆಲ್ಲ ಇಷ್ಟವಾಗದು. ಪ್ರತಿ ತಾಯಿಗೂ ತನ್ನ ಮಗು, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಯಶಸ್ವಿಯಾದರೆ, ಅದರಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾದರೆ ಅದೇ ತಾಯಿಗೆ ಸಿಗಬಹುದಾದ ದೊಡ್ಡ ಸಮಾಧಾನ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಗೀತಗಾರ್ತಿಯಾಗಿ ಹೆಸರು ಗಳಿಸಬೇಕು ಎಂಬುದು ಅಮ್ಮನ ಆಸೆ. ಫಿಲಂಫೇರ್, ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ಪ್ರಶಸ್ತಿ ಪಡೆದು, ಅದನ್ನು ಅಮ್ಮನಿಗೆ ಅರ್ಪಣೆ ಮಾಡಲು ಸಾಧ್ಯವಾದರೆ ಅದು ನಾನು ಅವಳಿಗೆ ಕೊಡಬಹುದಾದ ಬಹುದೊಡ್ಡ ಉಡುಗೊರೆ.

ಅಪ್ಪ –ಅಮ್ಮನಿಗೆ ಒಂದು ದಿನದಲ್ಲಿ ಧನ್ಯವಾದ ಹೇಳಿ ಮುಗಿಸಲು ಆಗದು. ಅವರು ತೋರಿಸುವ ಪ್ರೀತಿ, ಕಾಳಜಿಯ ಮುಂದೆ ಎಲ್ಲವೂ ನಗಣ್ಯ.

ಅಮ್ಮ ಕೆಲಸದ ಹುಚ್ಚು ಹಚ್ಚಿಕೊಟ್ಟಿದ್ದಾಳೆ. ಅವಳಿಗೆ ಕೆಲಸದ ಮುಖೇನ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ನನ್ನಮ್ಮ ಅವಳಮ್ಮನಿಗಾಗಿ ಬರೆದ ‘ಅಮ್ಮಾ ಹಚ್ಚಿದೊಂದು ಹಣತೆ’ ಹಾಡನ್ನು ಹಾಡಿ ಧನ್ಯವಾದ ಹೇಳುತ್ತೇನೆ ಅಥವಾ ಅಮ್ಮನಿಗೋಸ್ಕರವೇ ಒಂದು ಹಾಡು ಬರೆದು, ನಾನೇ ಸಂಗೀತ ಸಂಯೋಜಿಸಿ, ಅದನ್ನು ಪ್ರಸ್ತುತ ಪಡಿಸುವ ಮೂಲಕ ಧನ್ಯವಾದ ಹೇಳಲು ಬಯಸುತ್ತೇನೆ.

-ಸ್ಪರ್ಶಾ ಆರ್.ಕೆ. ಗಾಯಕಿ

ಕನಸು ಈಡೇರಿಸುವ ಆಸೆ

ನನಗೆ ಯಕ್ಷಗಾನದಲ್ಲಿಯೂ ತಾಯಿಯೇ ಮೊದಲ ಗುರು. ಅಮ್ಮ ಅಂಗನವಾಡಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರಿಂದ ಅಕ್ಷರ ಗುರುವೂ ಹೌದು. ಅಮ್ಮ ಸ್ವತಃ ಸಂಗೀತ, ಯಕ್ಷಗಾನವನ್ನು ಅಭ್ಯಾಸ ಮಾಡಿದ್ದರಿಂದ ಅದರ ಮೇಲೆ ನನಗೂ ಹಾಗೂ ತಂಗಿಗೆ ಒಲವು ಬಂತು. ತರಗತಿಯಲ್ಲಿ ಗೊತ್ತಾಗದೇ ಇದ್ದ ಯಕ್ಷಗಾನದ ಪಟ್ಟುಗಳನ್ನು ಅವರಿಂದ ಕಲಿತಿದ್ದೇನೆ. ಎಲ್ಲಿಯೇ ಬಯಲಾಟ ನಡೆದರೂ ಅಮ್ಮನ ಜತೆ ನಾವೂ ಹೋಗುತ್ತೇವೆ. ಅವಳಿಗೆ ನಾನು ಉತ್ತಮ ಯಕ್ಷಗಾನ ಕಲಾವಿದೆ ಆಗಬೇಕು ಎನ್ನುವ ಆಸೆ. ವೇಷದ ಜತೆಗೆ ಚೆಂಡೆ ಮದ್ದಳೆಯಲ್ಲಿಯೂ ಮುಂದುವರಿಯಬೇಕು ಎನ್ನುವುದು ಅವರ ಮಹಾದಾಸೆ. ನನ್ನ ತಂಗಿ ಚೆಂಡೆ ಅಭ್ಯಾಸ ಮಾಡುತ್ತಿದ್ದಾಳೆ. ನಾನು ಮದ್ದಳೆಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಇಬ್ಬರು ಹಿಮ್ಮೇಳದಲ್ಲಿ ಸಾಧನೆ ಮಾಡಬೇಕು, ಒಳ್ಳೆಯ ಸ್ಥಾನ ತಲುಪಬೇಕು ಎನ್ನುವುದು ಅವರ ಕನಸು. ಅದನ್ನು ಈಡೇರಿಸಿದರೆ ಅದೇ ನಾನು ಅವಳಿಗೆ ಕೊಡಬಹುದಾದ ಉಡುಗೊರೆ.

- ಶ್ರಾವ್ಯ ತಲಕಳ, ಯಕ್ಷಗಾನ ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.