‘ಅಮ್ಮಾ…’ ಈ ಪದವೇ ಚೇತೋಹಾರಿಯಾದದ್ದು. ಅಮ್ಮಾ! ಎಂದ ಕೂಡಲೆ ಮಧುರ ಭಾವನೆಗಳು ನಮ್ಮೊಳಗೆ ಸಂಭ್ರಮಿಸುತ್ತವೆ. ಹಾಗೆ ಮಕ್ಕಳ ಪಾಲಿಗೆ ಸೌಖ್ಯದ ಸವಿಯನ್ನು ಉಣಬಡಿಸುವ ಮೂರ್ತರೂಪ ಅಮ್ಮಾನೆ. ತನ್ನ ನೋವು ನಿರಾಸೆಗಳನ್ನೆಲ್ಲಾ ಬತ್ತಿಯನ್ನಾಗಿ ಮಾಡಿ, ಆಸೆ-ಕನಸುಗಳನ್ನು ಎಣ್ಣೆಯಾಗಿಸಿ, ಮಕ್ಕಳ ಬದುಕಲ್ಲಿ ಸೌಖ್ಯದ ಹಣತೆ ಹಚ್ಚುತ್ತಾಳೆ. ರೆಕ್ಕೆಬಲಿಯದ ಮರಿಗಳಿಗೆ ಗುಟುಕು ನೀಡುವ ತಾಯಿ ಪಕ್ಷಿ, ಆಗ ತಾನೆ ಹುಟ್ಟಿದ ಕರುವಿನ ಮೈನೆಕ್ಕುವ ಹಸುವಿನಲ್ಲೂ ಅಗಾಧ ಪ್ರೇಮವನ್ನು ಕಾಣಬಹುದು.

‘ಅಮ್ಮಾ’ ಪದವನ್ನು ವ್ಯಾಖ್ಯಾನಿಸುವುದು ಸುಲಭವೂ, ಸಾಧ್ಯವೂ ಅಲ್ಲದ್ದು. ‘ಮನೆಯೆ ಮೊದಲ ಪಾಠಶಾಲೆ ಜನನಿತಾನೆ ಮೊದಲಗುರು’ ಎಂಬಂತೆ ಗುರುವಾಗಿ, ಮಾರ್ಗದರ್ಶಕಳಾಗಿ, ಹಿತೈಷಿಣಿಯಾಗಿ, ವಿಮರ್ಶಕಳಾಗಿ, ಸ್ನೇಹಿತೆಯಾಗುವ ಅಮ್ಮ, ಸಮಯಪ್ರಜ್ಞೆ ಮೂಡಿಸಿ ಸಮಾಜಕ್ಕೆ ಸಾಕ್ಷೀಭೂತರಾಗುವ ಮಕ್ಕಳ ಬೆನ್ನ ಹಿಂದೆ ಸದಾ ಬೆಂಗಾವಲಾಗಿ ನಿಲ್ಲುತ್ತಾಳೆ.

ಜನಪದದಲ್ಲಿ ‘ಕಣ್ಣು ಕಾಣುವ ತನಕ ಬೆನ್ನು ಬಾಗುವ ತನಕ ತಾಯಿಯಿರಲಿ, ತವರಿರಲಿ’ ಎಂದು ಹೇಳಿದ್ದಾರೆ. ಅಮ್ಮನನ್ನು ಕುರಿತ ಎಂಥ ಉದಾತ್ತ ನಿಲುವು? ಅಲ್ಲವೇ?!

‘ಯಾರೂ ಇದ್ದರೂ ತನ್ನ ತಾಯವ್ವನ್ಹೋಲರ, ಸಾವಿರ ಕೊಳ್ಳಿ ಒಲಿಯಾಗ ಇದ್ದರೂ ಜ್ಯೋತಿ ನಿನ್ಯಾರ್ ಹೋಲ’ರ ಎಂದು ಮನತುಂಬಿ ಅಮ್ಮನೆಂಬ ಆ ಮಹಾಶಕ್ತಿಗೆ ವಂದಿಸುವುದಿದೆ.

‘ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ’ ಎಂಬಂತೆ ಬಂಧುಗಳ ಬಂಧು ಎಂದರೆ ತಾಯಿ ಜೀವವೆ.

‘ಮಾ’ ಅಂದರೆ ಅಮ್ಮನನ್ನು ಬಿಟ್ಟು ಅರ್ಥಾತ್ ಇತರರಿಗೆ ಸ್ಥಾನವಿಲ್ಲ. ಎಲ್ಲಾ ವಯೋಮಾನದವರಿಗೂ ಎಲ್ಲಾ ಸಂಬಂಧಗಳಿಗೂ ಕಡೆಯದಾಗಿ ಅಮ್ಮ ಪದವನ್ನು ಸೇರಿಸಿಕೊಳ್ಳುತ್ತೇವೆ. ಚಿಕ್ಕಮ್ಮ, ದೊಡ್ಡಮ್ಮ, ಅತ್ತಿಗೆಮ್ಮ, ಅತ್ಯಮ್ಮ. ತಂಗಯಮ್ಮ ಹೀಗೆ… ಯಾವುದೇ ಸಂಬಂಧ ಹೇಳದೇ ಇದ್ದಾಗಲೂ ಆವಮ್ಮ, ಈವಮ್ಮ ಎಂದಾದರೂ ಹೇಳಿಬಿಡುತ್ತೇವೆ.

ದೇವತೆಗಳನ್ನು ಕರೆಯುವಾಗಲೂ ಏಕವಚನದಲ್ಲಿ ಕರೆಯುವುದಿಲ್ಲ. ಶಾರದಾಮಾತೆ, ಶಾರದಾಂಬ, ಸೀತಾಮಾತೆ, ಸೀತಮ್ಮ, ಭೂಮಿತಾಯಿ, ದುರ್ಗಾಂಬೆ, ದುರ್ಗಾಮಾತೆ, ಹೀಗೆ ಕರೆಯುವುದುಂಟು. ಒಟ್ಟಾರೆ ‘ಅಮ್ಮ’ ಇರಲೇಬೇಕು. ಕಾಲ ಬದಲಾದಂತೆ ನಾವು ಅಪ್ಡೇಟ್ ಆಗುತ್ತಿದ್ದೇವೆ. Miss, madam, aunty ಎಂದು ಕರೆಸಿಕೊಳ್ಳುವುದು ಇಷ್ಟ. ಪದದ ಅರ್ಥ ತಿಳಿಯದೆ. ಎಷ್ಟೋ ಸಾರಿ ಈ ಪದಗಳು ಪ್ರಯೋಗವಾಗುತ್ತ ಇರುತ್ತವೆ. ಇನ್ನು ಕೆಲವರಿಗೆ ‘madam’ ಅಮ್ಮ ಇಬ್ಬರೂ ಬೇಕು ಹಾಗಾಗಿ ‘ಮೇಡಮ್ಮ’ಎಂದು ಬಿಡುತ್ತಾರೆ.

ಅಮ್ಮ ಈ ಪದಕ್ಕೆ ಬದಲಿ ಇಲ್ಲ. ಅಮ್ಮಾ ಎಂದರೆನೆ ಧೈರ್ಯದ ಸಂಕೇತ.

ನಾವೇನೇ ಕೇಳಿದರೂ ಇಲ್ಲ ಎನ್ನದ ಜೀವ! ಉಪಮನ್ಯು ತನ್ನ ತಾಯಿಯ ಬಳಿ ಹೋಗಿ ಕುಡಿಯಲು ಹಾಲು ಬೇಕೆಂದಾಗ ಇಲ್ಲ ಎನ್ನಲಾಗದೇ ಅಕ್ಕಿ ಹುಡಿಯನ್ನು ನೀರಿನಲ್ಲಿ ಬೆರೆಸಿಕೊಡುತ್ತಾಳೆ. ನಂತರದಲ್ಲಿ ಶಿವ ಪ್ರತ್ಯಕ್ಷನಾಗಿ ಹಾಲಿನ ಕಡಲನ್ನೇ ಕರುಣಿಸುತ್ತಾನೆ.

ಬ್ಯಾಸಿಗಿ ದಿವಸಕಿ ಬೇವಿನ ಮರತಂಪು

ಭೀಮಾರತಿ ಎಂಬವ ಹೊಳೆ ತಂಪು

ತಾಯಿ ತಂಪು ತವರಿಗೆ

ಎಂಬಂತೆ ತಾಯಿಯಿದ್ದರೆ ಸರ್ವರಾಜ್ಯವೂ ಇದ್ದಂತೆ, ಅಮ್ಮನ ಬಳಿ ಇರುವಷ್ಟು ಮಮತೆ,ನಡೆಯುವಷ್ಟು ಸುಳ್ಳು, ಸಲಿಗೆ, ಹಠ, ಉದ್ಧಟತನ, ಮೊಂಡುತನ, ದಡ್ಡತನ, ಬಾಲಿಶ ವರ್ತನೆ ಯಾರ ಬಳಿಯೂ ನಡೆಯುವುದಿಲ್ಲ. ಅಮ್ಮನಮನೆ, ತವರುಮನೆ, ತಾಯಿಮನೆ ಇವು ಸದಾ ಅಪ್ಯಾಯಮಾನವೆನಿಸುವ ಸಂಗತಿಗಳು.

ಸಂಸ್ಕೃತಿ-ಸಂಸ್ಕಾರದ ಪಾಠ, ಸ್ವಚ್ಛತೆ, ಸತ್ಯ, ನಿಷ್ಠೆ, ಸ್ವಾಭಿಮಾನ, ಶಿಸ್ತು, ಉದಾರತೆಯ ಪಾಠವನ್ನು ಅಮ್ಮನೇ ಹೇಳಿಕೊಡುವುದು . ಅದಕ್ಕೆ ತಾಯಿಯಂತೆ ಮಗಳು ನೂಲಿನಂತೆ ಸೀರೆ, ಅಮ್ಮನ ಕೈರುಚಿ, ಅಮ್ಮನ ಆರೈಕೆ ಕರುಳಬಳ್ಳಿಯ ಸಂಬಂಧ ಎಂಬ ಪದಪಂಕ್ತಿಗಳು ಚಾಲ್ತಿಯಲ್ಲಿರುವುದು. ಅಷ್ಟಾವಕ್ರಮುನಿಯ ತಾಯಿ ಸುಜಾತೆ ಮಗನನ್ನು ನೋಡಲು ಯಾವಾಗಲೂ ಹಂಬಲಿಸುತ್ತಾಳೆ ಕುರೂಪಿ ಎಂದು ಭಾವಿಸುವುದೇ ಇಲ್ಲ.

ಮಾಡದ ತಪ್ಪಿಗೆ ತನ್ನೈವರೂ ಮಕ್ಕಳನ್ನು ಕರೆದುಕೊಂಡು ವನವಾಸ ಮಾಡುತ್ತಾ ಪ್ರತಿ ಕ್ಷಣದಲ್ಲೂ ತನ್ನನ್ನು ತಾನು ಸವಾಲುಗಳಿಗೆ ಒಡ್ಡಿಕೊಂಡ ಪಾತ್ರ ಎಂದರೆ ಕುಂತಿನೇ. ಕಾಸಿಗೆ ಹೋಗುವುದಕ್ಕಿಂತ ತಾಸ್ಹೋತ್ತಿನ ಹಾದಿ ತವರೂರಿನದ್ದು ಎನ್ನುವ ಹೆಣ್ಣುಮಕ್ಕಳು ದೈವಸನ್ನಿಧಾನಕ್ಕಿಂತ ಮಿಗಿಲಾದ ಸ್ಥಾನವನ್ನು ಕೊಟ್ಟಿದ್ದಾರೆ.

ಬಿ. ಆರ್. ಲಕ್ಷ್ಮಣರಾವ್ ಅವರ ‘ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತ್ತಿರುವೆ ನಾನು’ ಎಂಬ ಅಭೂತಪೂರ್ವ ಸಾಲುಗಳು ಅಮ್ಮನ ವ್ಯಕ್ತಿಚಿತ್ರಣವೇ ನಮ್ಮ ಕಣ್ಮುಂದೆ ಬಂದುಬಿಡುತ್ತದೆ.

‘ಆನಂದಾಮೃತಕರ್ಷಿಣಿ,ಅಮೃತವರ್ಷಿಣಿ’ ಎಂಬಂತೆ ಮಕ್ಕಳ ಬದುಕಲ್ಲಿ ಆನಂದವನ್ನು ಅನಂತವಾಗಿ ತರಬಯಸುವವಳೆಂದರೆ ಅಮ್ಮಾ. ಸುಖಸ್ವರೂಪಿಣಿ, ಮಧುರಭಾಷಿಣಿಯಾಗಿ ನಮ್ಮನ್ನು ತಿದ್ದಿದ, ಈ ಜಗತ್ತಿಗೆ ತಂದ ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಈ ಸಂದರ್ಭದಲ್ಲಿ ನನ್ನ ಪ್ರೀತಿಯ ನಮಸ್ಕಾರಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.