ಕಾಡು ಕೃಷಿ
ಮೂರೂವರೆ ಎಕರೆಯಲ್ಲಿ ಈ ಎಲ್ಲ ಬೆಳೆಗಳನ್ನು ಬೆಳೆಯುತ್ತಿದ್ದರೆ, ಉಳಿದ ಒಂದೂವರೆ ಎಕರೆಯನ್ನು ಕಾಡು ಕೃಷಿಗೆ ಮೀಸಲಿಟ್ಟಿದ್ದಾರೆ. ತೋಟದೊಳಗೆ ಕಾಲಿಟ್ಟರೆ ನೀವು ಕಾಡಿನಲ್ಲಿ ನಡೆದಂತೆಯೇ ಅನಿಸುತ್ತದೆ. ಶ್ರೀಗಂಧ, ಬೀಟೆ, ಕಾಡುಪೇರಲೆ, ಕಾಡುಮಾವು, ಕಾಡುಹಲಸು, ಹುಣಸೆ, ಬಿದಿರು, ನೇರಳೆ, ಕಾಡುಹತ್ತಿ ಸೇರಿದಂತೆ ಅನೇಕ ಜಾತಿಯ ವೃಕ್ಷಸಂಕುಲ ಒಂದೆಡೆಯಿದ್ದರೆ, ತುಂಬೆರ್ತಿಯಾ, ಗ್ರಾಂಡಿಫೋಲಿಯಾ, ಎಲಿಕೋನಿಯಾ, ಮಲ್ಲಿಗೆ, ಸಂಪಿಗೆ ಸೇರಿದಂತೆ ಹಲವು ಬಳ್ಳಿಜಾತಿಯ ಹೂಗಳ ಸಂಕುಲವೂ ಮತ್ತೊಂದೆಡೆ ಹಬ್ಬಿ ನಿಂತಿವೆ. ಕಾಡಿನಂತಿರುವ ಈ ವಾತಾವರಣದಲ್ಲಿ ಸಹಜವಾಗಿ ಪರಭಕ್ಷಕ ಜೀವಿಗಳು ಬಂದು ನೆಲೆಸಿವೆ. ಕಣಜ, ಹಕ್ಕಿಗಳು, ಹಾವು ಸೇರಿದಂತೆ ಕ್ರಿಮಿಕೀಟಗಳನ್ನು ತಿನ್ನುವ ಅನೇಕ ಜೀವಿಗಳಿಗೆ ಸಹಜ ನೆಲೆಯಾಗಿದೆ. ಜೊತೆಗೆ, ಜೇನು, ದುಂಬಿ, ಜೀರುಂಡೆ ಸೇರಿದಂತೆ ಪರಾಗಸ್ಪರ್ಶ ಪ್ರಕ್ರಿಯೆಗೆ ಇಂಬುನೀಡುವ ಹಲವು ಜೀವವೈವಿಧ್ಯಗಳ ಆವಾಸಸ್ಥಾನವೂ ಇದಾಗಿದೆ. ಇನ್ನು, ಕಾಡಿನಮರಗಳ ಹಣ್ಣುಗಳು ನೆಲಕ್ಕೆ ಬಿದ್ದು ಹಾಗೇ ಗೊಬ್ಬರವಾಗುತ್ತವೆ. ಇದಲ್ಲದೆ, ಹಕ್ಕಿಗಳ ಹಿಕ್ಕೆ ಕೂಡ ನೆಲತಾಗಿ, ತರಗೆಲೆಗಳ ಜೊತೆ ಸೇರಿ ಗೊಬ್ಬರವಾಗಿ ತೋಟಗಾರಿಕೆ ಬೆಳೆಗಳ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ.