–ಬಿ.ಎಸ್.ಹರೀಶ್

ಮುಂದೆ ಗುರಿಯಿದ್ದು ಹಿಂದೆ ಗುರುವಿದ್ದರೆ ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು...’ ನಿಮ್ಮ ಕೃಷಿ ಸಾಧನೆಗೆ ಕಾರಣವೇನೆಂದು ಕೇಳಿದ ನನ್ನ ಪ್ರಶ್ನೆಗೆ ಹೆಸರಘಟ್ಟದ ಪಾಕೇಗೌಡನಪಾಳ್ಯದ ಪ್ರಕಾಶ್ ಉತ್ತರಿಸಿದ ರೀತಿ ಇದು. 2001ರಲ್ಲಿ ಕೇವಲ 180 ರೂಪಾಯಿಯ ಬಂಡವಾಳದಿಂದ ಆರಂಭವಾದ ಇವರ ನರ್ಸರಿಯ ಈಗಿನ ಪ್ರತಿ ವರ್ಷದ ವ್ಯವಹಾರ ಸರಿಸುಮಾರು 3 ಕೋಟಿ ರೂಪಾಯಿ.

ಅಪ್ಪಟ ಕೃಷಿಕನೊಬ್ಬ ಸ್ವಯಂ ಪರಿಶ್ರಮದಿಂದ, ಬದ್ಧತೆಯಿಂದ, ಶಿಸ್ತಿನಿಂದ, ಕೃಷಿಕರ ಸೇವೆಯಲ್ಲಿಯೇ ತೃಪ್ತಿ ಕಂಡುಕೊಂಡ ಪರಿ ಯಾರಾದರೂ ಮೆಚ್ಚಲೇಬೇಕಾದದ್ದು. ಹೌದು, ಹದಿನೇಳು ವರ್ಷದ ಹಿಂದೆ ಅವರಲ್ಲಿ ಅಂತಹ ಹೆಗ್ಗುರಿಯೊಂದು ಚಿಗುರೊಡೆದಿತ್ತು. ಸಮೀಪದಲ್ಲೇ ಇರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಗುರುಸ್ಥಾನದಲ್ಲಿದ್ದು ಇವರ ನೆರವಿಗೆ ನಿಂತರು. ಫಲಿತಾಂಶ ಅಗಾಧ, ಅದ್ಭುತ, ಅನುಕರಣೀಯ.

ಕೃಷಿ ಉದ್ಯಮವೊಂದು ಬೆಳೆದು ನಿಂತು ಸಹಸ್ರಾರು ಕೃಷಿಕರಿಗೆ ಅತ್ಯುತ್ತಮ ಗುಣಮಟ್ಟದ ತರಕಾರಿ, ಹೂ, ಹಣ್ಣಿನ ಸಸಿಗಳು ಲಭ್ಯವಾಗುವಂತಾಗಿದೆ. ಕೇವಲ ಸಸಿ ಪೂರೈಸಿ ಕೃಷಿಕರ ಮನ ಗೆಲ್ಲುವುದು ಕಷ್ಟದ ಕೆಲಸ. ಅದರ ಜೊತೆಜೊತೆಗೇ ರೈತರಿಗೆ ಅಗತ್ಯವಿರುವ ಜ್ಞಾನ, ತಂತ್ರಜ್ಞಾನ, ಮಾಹಿತಿ ನೀಡುವ ಕೈಂಕರ್ಯಕ್ಕೆ ಪ್ರಕಾಶ್ ಅವರು ತೊಡಗಿಸಿಕೊಂಡದ್ದೇ ಅವರನ್ನು ಅಂತಹ ಸಾಧನೆಯೆಡೆಗೆ ಕರೆದೊಯ್ಯಲು ಕಾರಣ.

ಇತರ ಕೃಷಿಕರಂತೆಯೇ ಇವರೂ ಸಸಿ ಮಡಿ ಮಾಡಿ ಗಿಡ ಕಿತ್ತು ನಾಟಿ ಮಾಡುತ್ತಿದ್ದರು. ಮಳೆ ಹೆಚ್ಚಾದಾಗಲೆಲ್ಲ ನೆಟ್ಟ ಬಹುತೇಕ ಪೈರು ನೆಲಕಚ್ಚುತ್ತಿದ್ದವು. ಅಲ್ಲದೆ ಹೆಚ್ಚೆಚ್ಚು ಬಿತ್ತನೆ ವ್ಯರ್ಥವಾಗುತ್ತಿತ್ತು. ಇದಕ್ಕೆ ಪರಿಹಾರವೆಂಬಂತೆ ತಮಗೆ ಮಾತ್ರ ಅಗತ್ಯವಿರುವಷ್ಟು ತರಕಾರಿ ಸಸಿಗಳನ್ನು ಟ್ರೇಗಳಲ್ಲಿ ಕೋಕೊಪಿಟ್ ಬಳಸಿ ಮಾಡಿಕೊಳ್ಳಲು ಶುರುಮಾಡಿದರು. ಇದರಿಂದ ನೆಟ್ಟ ಸಸಿಗಳು ಉತ್ತಮವಾಗಿ ಕ್ಷೇತ್ರಕ್ಕೆ ಹೊಂದಿಕೊಂಡು ಉತ್ಕೃಷ್ಟ ಫಸಲು ಬರಲಾರಂಭಿಸಿತು. ಇದನ್ನು ನೋಡಿದ ಇತರ ಕೃಷಿಕರು ಟ್ರೇ ಸಸಿಗಳಿಗೆ ಬೇಡಿಕೆ ಇಡತೊಡಗಿದ್ದೇ ಇವರ ‘ಏಕಲವ್ಯ ನರ್ಸರಿ’ ಸ್ಥಾಪನೆಗೆ ಪ್ರೇರಣೆ. ಕೇವಲ 30 ಅಡಿ ಉದ್ದ, ಒಂಬತ್ತು ಅಡಿ ಅಗಲದ ಪ್ರದೇಶದಲ್ಲಿ ಆಗ ಶುರುಮಾಡಿದ ಇವರ ನರ್ಸರಿ ಈಗ ಬೃಹದಾಕಾರವಾಗಿ ಬೆಳೆದಿದೆ.

ಸದ್ಯ ಇವರ ಬಳಿ 20 ಗುಂಟೆಯಲ್ಲಿ ಆಲಂಕಾರಿಕ ಹಾಗೂ ಹೂಗಿಡಗಳಿಗಾಗಿ ನೆರಳುಪರದೆಯ ನರ್ಸರಿ, ಅಧಿಕ ಬೇಡಿಕೆಯಿರುವ ಕ್ಯಾಪ್ಸಿಕಂಗಾಗಿಯೇ ಪ್ರತ್ಯೇಕ 17 ಗುಂಟೆಯ ಪಾಲಿಹೌಸ್ ನರ್ಸರಿ ಹಾಗೂ ಎರಡು ವರ್ಷಗಳ ಹಿಂದೆ ತರಕಾರಿಗಳಿಗಾಗಿಯೇ ನಿರ್ಮಿಸಿರುವ 2 ಎಕರೆಯ ಸುಸಜ್ಜಿತ ಪಾಲಿಹೌಸ್ ನರ್ಸರಿಗಳಿವೆ. ಕೇವಲ ಸಾವಿರ ಸಸಿ ಉತ್ಪಾದನೆಯಿಂದ ಶುರುವಾದ ಕಸುಬು ಇಂದು ತಿಂಗಳಿಗೆ ಸರಾಸರಿ 50 ಲಕ್ಷ ಸಸಿಗಳನ್ನು ಉತ್ಪಾದಿಸಿ ಮಾರಾಟ ಮಾಡುವಷ್ಟು ದೊಡ್ಡದಾಗಿ ಬೆಳೆದಿರುವುದು ಇವರ ಶ್ರಮ ಮತ್ತು ಆಸಕ್ತಿಯ ಫಲಶ್ರುತಿ. ನಿತ್ಯ ಆರೇಳು ಕೆ.ಜಿ ಕೋಕೊಪಿಟ್ ಬಳಸುತ್ತಿದ್ದ ಇವರ ಈಗಿನ ಪ್ರತಿ ದಿನದ ಕೋಕೊಪಿಟ್ ಅವಶ್ಯಕತೆ ಬರೋಬ್ಬರಿ ಒಂದೂವರೆ ಟನ್.

ಉದ್ಯೋಗ ಸೃಷ್ಟಿ

ನರ್ಸರಿಯಲ್ಲೀಗ 28 ಜನ ಕಾರ್ಮಿಕರು ದುಡಿಯುತ್ತಿದ್ದಾರೆ. ಒಮ್ಮೆ ಕೆಲಸಕ್ಕೆ ಸೇರಿದವರು ಕೆಲಸ ಬಿಟ್ಟು ಬೇರೆಡೆಗೆ ಹೋಗಿರುವುದು ತೀರಾ ವಿರಳ. ಅಷ್ಟು ಜನರಿಗೆ ಕೆಲಸ ಕೊಟ್ಟು ಅವರವರ ಕುಟುಂಬ ನಿರ್ವಹಣೆಗೂ ನೆರವಾಗುತ್ತಿರುವ ತೃಪ್ತಿ ಪ್ರಕಾಶ್ ಅವರಿಗಿದೆ. 28 ಕಾರ್ಮಿಕರಲ್ಲಿ 12 ಜನ ಪುರುಷ ಹಾಗೂ ಉಳಿದ 16 ಜನ ಸ್ತ್ರೀ ಕಾರ್ಮಿಕರು. ಬಿಎಸ್ಸಿ ಓದುತ್ತಿರುವ ಇವರ ಮಗ ಭರತನೂ ನರ್ಸರಿಯ ಕೆಲ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿರುವುದು ಇವರಿಗೆ ಖುಷಿ. ಪಿಯುಸಿ ಓದುತ್ತಿರುವ ಮಗಳನ್ನು ಬಿಎಸ್ಸಿ ಕೃಷಿ/ತೋಟಗಾರಿಕೆ ಮಾಡಿಸುವ ಮನದಿಂಗಿತ ಪ್ರಕಾಶ್ ಅವರದ್ದು. ಹೆಸರಘಟ್ಟಕ್ಕೆ ನನ್ನನ್ನು ಬಿಡಲು ಬಂದ ಭರತ, ‘ಸಾರ್, ಅಂತಿಮ ಬಿಎಸ್ಸಿ ಮುಗಿಯೋಕೆ ಬಂದಿದೆ, ಆಮೇಲೆ ನಾನೂ ಸಂಪೂರ್ಣವಾಗಿ ನರ್ಸರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವೆ’ ಎಂದ. ಮಗ ಸಂಪೂರ್ಣವಾಗಿ ನರ್ಸರಿಯಲ್ಲಿ ತೊಡಗಿಸಿಕೊಂಡ ಮೇಲೆ ಸಸಿ ಉತ್ಪಾದನೆಯ ಪೂರ್ಣ ಜವಾಬ್ದಾರಿಯನ್ನು ಅವನಿಗೇ ಬಿಟ್ಟು ಮಾರಾಟದ ಉಸ್ತುವಾರಿಯನ್ನಷ್ಟೆ ನೋಡುವ ಇರಾದೆ ಇವರದ್ದು.

ಸ್ವಂತಕ್ಕಾಗಿ ಮಾತ್ರ ಸಸಿ ಮಾಡಿಕೊಳ್ಳಲು ಶುರುಮಾಡಿದವರು ತದನಂತರ ಊರಿನ, ನೆರೆಹೊರೆಯ ಕೃಷಿಕರಿಗೆ ಸಸಿ ಪೂರೈಸತೊಡಗಿದರು. ಆಮೇಲೆ ಅಕ್ಕ-ಪಕ್ಕದ ಜಿಲ್ಲೆಗಳ ಕೃಷಿಕರೂ ಇವರ ಬಳಿ ಸಸಿ ತೆಗೆದುಕೊಳ್ಳಲು ಶುರು ಮಾಡಿದರು. ಹೀಗೆ ಇವರ ವ್ಯಾಪ್ತಿ ಹೆಚ್ಚುತ್ತಲೇ ಹೋಗಿ ಈಗ ನಾನಾ ರಾಜ್ಯಗಳನ್ನು ತಲುಪಿದೆ. ನೆರೆಯ ತಮಿಳುನಾಡು, ಆಂಧ್ರ, ತೆಲಂಗಾಣ ಮಾತ್ರವಲ್ಲದೆ ದೂರದ ಹರಿಯಾಣ, ಚಂಡೀಗಡ ಭಾಗಗಳ ಕೃಷಿಕರು ಸಸಿ ಹುಡುಕಿಕೊಂಡು ಪಾಕೇಗೌಡನ ಪಾಳ್ಯಕ್ಕೆ ಬರುತ್ತಿದ್ದಾರೆ. ನರ್ಸರಿ ಬೆಳೆದಷ್ಟೇ ಎತ್ತರಕ್ಕೆ ಪ್ರಕಾಶ್ ಕೂಡ ಬೆಳೆದಿದ್ದಾರೆ. ಇವರು ನರ್ಸರಿಯನ್ನು ಬೆಳೆಸಿದರೆ; ಅದು ಇವರನ್ನು ಬೆಳೆಸಿದೆ. ಬರುವ ರೈತಾಪಿಗಳಿಗೆ ತಪ್ಪದೇ ಮಣ್ಣು ಪರೀಕ್ಷೆ ಮಾಡಿಸಲೇಬೇಕೆಂದು ಒತ್ತಾಯಿಸುವುದರ ಜೊತೆಗೆ ಹಂಗಾಮಿಗೆ ತಕ್ಕುದಾದ ಅವರವರ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ತಳಿಗಳ ಸಸಿಗಳನ್ನು ಮಾತ್ರವೇ ಕೊಟ್ಟು ನೀರು, ಪೋಷಕಾಂಶ, ಕೀಟ-ರೋಗಗಳ ಸಮಗ್ರ ನಿರ್ವಹಣೆಯ ಪಾಠವನ್ನೂ ಮಾಡಿಬಿಡುತ್ತಾರೆ ಪ್ರಕಾಶ್. ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಗ್ರಾಹಕ ಕೃಷಿಕರನ್ನು ವಿಜ್ಞಾನಿ-ತಜ್ಞರೊಂದಿಗೆ ಬೆಸೆದುಬಿಡುತ್ತಾರೆ. ಹಾಗಾಗಿ ಇವರ ಗ್ರಾಹಕ ವರ್ಗ ಹಿಗ್ಗುತ್ತಲೇ ಸಾಗಿದೆ. ‘ಸಸಿ ತೆಗೆದುಕೊಳ್ಳುವ ಕೃಷಿಕರ ಯಶಸ್ಸಿನಲ್ಲಿ ಮಾತ್ರ ನನ್ನ ಯಶಸ್ಸು’ ಎಂಬುದರ ಅರಿವು ಇವರಿಗೆ ಇರುವುದರಿಂದ ಸಸಿ ಮಾರುವುದಷ್ಟೇ ಅಲ್ಲದೆ, ಅವುಗಳನ್ನು ಕೊಂಡವರ ಯಶಸ್ಸಿಗೆ ನಿರಂತರ ಶ್ರಮಿಸುತ್ತಾರೆ.

ನರ್ಸರಿ ಶುರುಮಾಡಿದ ಮೊದಮೊದಲು ಕೋಕೊಪಿಟ್ ಜೊತೆಗೆ ಮಣ್ಣು, ಎರೆಗೊಬ್ಬರ ಬಳಸುತ್ತಿದ್ದರು. ಮಣ್ಣಿನಲ್ಲಿ ಅನೇಕ ರೋಗಾಣುಗಳೂ ಪ್ರಸಾರವಾಗುವುದು ಗೊತ್ತಾದ ನಂತರ ಮಣ್ಣು ಬಿಟ್ಟು ನಿರ್ಜೀವೀಕರಿಸಿದ ಕೋಕೊಪಿಟ್ ಬಳಸಲು ಶುರುಮಾಡಿದರು. ತೀರಾ ಇತ್ತೀಚೆಗೆ ಹತ್ತಿರದ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ ಬಳಸಿ ಸ್ವತಃ ಉತ್ತಮ ಗುಣಮಟ್ಟದ ಕೋಕೊಪಿಟ್ ಅನ್ನು ತಾವೇ ತಯಾರಿಸಿಕೊಂಡು ಬಳಸುತ್ತಿದ್ದಾರೆ. ಹೊರಗಿನಿಂದ ತರುವುದಾದರೆ ಕಿ.ಗ್ರಾಂ ಕೋಕೊಪಿಟ್ಗೆ 4 ರೂಪಾಯಿ, ತಾವೇ ತಯಾರಿಸಿದಾಗ 1.30 ರೂಪಾಯಿ.

ಸಸಿಯ ಗುಣಮಟ್ಟದಲ್ಲಿ ರಾಜಿಯಾಗದೆ ಉತ್ಪಾದನಾ ವೆಚ್ಚ ಸದಾ ಕಡಿಮೆಗೊಳಿಸುವತ್ತ ಇವರ ಚಿತ್ತ; ಹಾಗಾದಾಗ ಮಾತ್ರ ಸ್ಪರ್ಧಾತ್ಮಕ ಬೆಲೆಯಲ್ಲಿ ಗುಣಮಟ್ಟದ ಸಸಿ ಪೂರೈಕೆ ಸಾಧ್ಯವೆಂಬುದು ಇವರದ್ದೇ ಅನುಭವ. ಮೊದಮೊದಲು 98 ಗುಳಿಗಳುಳ್ಳ ಟ್ರೇಗಳಲ್ಲಿ ಸಸಿ ಬೆಳೆಸುತ್ತಿದ್ದರು; ಈಗ 70 ಅಥವಾ 36 ಗುಳಿಗಳ ಟ್ರೇ ಬಳಸುತ್ತಿದ್ದಾರೆ. ಉದ್ದೇಶ, ಉತ್ಕೃಷ್ಟ ಗುಣಮಟ್ಟದ ಆರೋಗ್ಯಯುತ ಸಸಿ ಉತ್ಪಾದನೆ.

ಗುಳಿ ಸಂಖ್ಯೆ ಕಡಿಮೆಯಾದಂತೆ ಉತ್ಪಾದನಾ ವೆಚ್ಚ ಹೆಚ್ಚುತ್ತದೆ; ಸಸಿಯ ಗುಣಮಟ್ಟ ಕೂಡ. ಅಂತಹ ಸಸಿಗಳ ಬೇರಿನ ಸಂಖ್ಯೆ ಹಾಗೂ ಬೆಳವಣಿಗೆ ಉತ್ತಮವಾಗಿದ್ದು, ನಾಟಿ ನಂತರ ಅವು ಕ್ಷೇತ್ರಗಳಲ್ಲಿ ಚೆನ್ನಾಗಿ ಹೊಂದಿಕೊಂಡು ಬೆಳೆದು ಉತ್ತಮ ಫಸಲು ನೀಡಬಲ್ಲವು. ಸಾಮಾನ್ಯವಾಗಿ ತರಕಾರಿ ನರ್ಸರಿಗಳಲ್ಲಿ ಟ್ರೇಗಳನ್ನು ನೆಲದ ಮೇಲೆ ಮಾಡಿರುವ ಮಡಿಗಳಲ್ಲಿಟ್ಟಿರುತ್ತಾರೆ. ಆದರೆ ಇವರ ಏಕಲವ್ಯ ನರ್ಸರಿಯಲ್ಲಿ ಟ್ರೇಗಳನ್ನು ಮೂರಡಿ ಎತ್ತರದ ಎಂಎಸ್ ಮೆಷ್ ವೇದಿಕೆ ಮೇಲೆ ಇಟ್ಟಿರುವುದು ವಿಶೇಷ. ‘ಸಾರ್ ಹೀಗೆ ಇಡೋದ್ರಿಂದ ನೀರು ಹೆಚ್ಚಾದರೂ ಚೆನ್ನಾಗಿ ಬಸಿದು ಹೋಗುತ್ತೆ, ಎರಡೂ ಕಡೆ ಗಾಳಿ-ಬೆಳಕಾಡುವುದರಿಂದ ಸಸಿ ಚೆನ್ನಾಗಿ ಬೆಳೆಯುತ್ತೆ, ಕಾರ್ಮಿಕರು ಸೊಂಟ ಬಗ್ಗಿಸಿ ದುಡಿಯುವ ಶ್ರಮವಿಲ್ಲ’ ಎನ್ನುತ್ತಾರೆ ಪ್ರಕಾಶ್.

ಉತ್ತಮ ನಿರ್ವಹಣೆಯ ಹೊರತಾಗಿಯೂ ಥ್ರಿಪ್ಸ್, ಮೈಟ್ಸ್, ರಂಗೋಲಿಹುಳು, ಬುಡಕೊಳೆಯಂತಹ ತೊಂದರೆ ಬರುವುದುಂಟು. ನರ್ಸರಿಯೊಳಗಿನ ಮಾನವ ಹಸ್ತಕ್ಷೇಪ ಕಡಿಮೆ ಮಾಡಲು ಬೆಲ್ಟ್ ಕನ್ವೇಯರ್, ಮೌಲ್ಯವರ್ಧಿತ ಕೋಕೊಪಿಟ್ ಬಳಕೆ, ನಿಯಮಿತವಾಗಿ ಎಷ್ಟು ಬೇಕೋ ಅಷ್ಟು ಮಾತ್ರ ನೀರು ಕೊಡುವುದು, ರಸ ಹೀರುವ ಕೀಟಗಳ ನಿರ್ವಹಣೆಗೆಂದೇ ನರ್ಸರಿಯೊಳಗೆ ಹಳದಿ-ನೀಲಿಯ ಅಂಟು ಬಲೆಗಳನ್ನು ಅಳವಡಿಸಿ ಉಪಾಯ ಕಂಡುಕೊಂಡಿದ್ದಾರೆ. ಅಗತ್ಯ ಬಿದ್ದಾಗ ಮಾತ್ರ ಶಿಫಾರಸು ಮಾಡಿರುವ ಕೀಟ-ರೋಗ ನಾಶಕಗಳ ಬಳಕೆ ಮಾಡಿ ಸರಿಯಾಗಿ ಹದಮಾಡಿದ ಸಸಿಗಳನ್ನಷೇ ಗ್ರಾಹಕ ಕೃಷಿರಿಗೆ ನೀಡುತ್ತಾರೆ.

ಸಾಂಪ್ರದಾಯಿಕ ನಿರ್ವಹಣೆಯಲ್ಲಿ ತರಕಾರಿ ಬೆಳೆಗಳಿಗೆ ಬರುವ ಜಂತು ಹುಳು (ನೆಮಟೋಡ್), ಬಾಡುರೋಗಗಳ ಹತೋಟಿ ಅಸಾಧ್ಯ. ಕಳೆದ ವರ್ಷ ಪ್ರಕಾಶ್ ವಿಯೆಟ್ನಾಂ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ಕಸಿ ತರಕಾರಿ ಸಸಿಗಳ ಉತ್ಪಾದನೆ ಕಂಡು ನಮ್ಮಲ್ಲೂ ಏಕೆ ಕಸಿ ತರಕಾರಿ ಸಸಿ ಮಾಡಬಾರದೆಂದು ಸ್ವತಃ ಪ್ರಶ್ನೆ ಹಾಕಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಈ ವಿಧಾನದಲ್ಲಿ ಸಸಿ ತಯಾರಿಸಿ ಕೃಷಿಕರಿಗೆ ನೆರವಾಗುವ ಮತ್ತೊಂದು ಗುರಿ ಸದ್ಯಕ್ಕೆ ಇವರದ್ದಾಗಿದೆ.

ಕೃಷಿಕರಾದವರು ನೋಡಲೇಬೇಕಾದಂತಹ ನರ್ಸರಿ ಇವರದ್ದು. ಇವರು 24x7 ಲಭ್ಯ. ಇವರ ಸಾಮಾನ್ಯ ಜ್ಞಾನಕ್ಕೆ ಹತ್ತಿರದ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನ ಸೇರಿ ಉತ್ಕೃಷ್ಟ ಸಸಿಗಳು ತಯಾರಾಗಿ ದೇಶದ ನಾನಾ ಭಾಗಗಳಿಗೆ ಪೂರೈಕೆಯಾಗುತ್ತಿವೆ. ಸಂಪರ್ಕ 9448306101.

ಯಾವ್ಯಾವ ಸಸಿ ಸಿಗುತ್ತದೆ?

ಕ್ಯಾಪ್ಸಿಕಂ, ಟೊಮ್ಯಾಟೊ, ಬದನೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ನವಿಲುಕೋಸು, ಸೌತೆ ಸೇರಿದಂತೆ ಬಹುತೇಕ ತರಕಾರಿ ಸಸಿಗಳು, ಕಲ್ಲಂಗಡಿ, ಕರಬೂಜ ಹಣ್ಣಿನ ಸಸಿಗಳು ಇವರ ನರ್ಸರಿಯಲ್ಲಿ ಉತ್ಪಾದನೆಯಾಗುತ್ತವೆ. ಆರೇಳು ವರ್ಷಗಳಿಂದ ಉತ್ತಮ ಗುಣಮಟ್ಟದ ಪಪ್ಪಾಯ ಸಸಿ ಕೂಡ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ವರ್ಷಕ್ಕೆ 12 ಲಕ್ಷ ಪಪ್ಪಾಯ ಸಸಿಗಳನ್ನು ಉತ್ಪಾದಿಸುತ್ತಾರೆ; ಅಂದರೆ 1,200 ಎಕರೆಗೆ ಸಾಕಾಗುವಷ್ಟು ಪಪ್ಪಾಯ ಸಸಿಗಳು. ಈ ಭಾಗದಲ್ಲಿ ಬೆಂಗಳೂರು ಬ್ಲೂ ತಳಿಯ ದ್ರಾಕ್ಷಿ ಸಸಿಗಳಿಗೂ ನಿರಂತರ ಬೇಡಿಕೆ ಇರುವುದರಿಂದ ವರ್ಷಕ್ಕೆ ಐವತ್ತು ಸಾವಿರ ದ್ರಾಕ್ಷಿ ಸಸಿಗಳನ್ನೂ ಮಾಡಿ ಪೂರೈಸುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಎಷ್ಟೇ ಸಸಿಗಳಿಗೆ ಬೇಡಿಕೆಯಿದ್ದರೂ ಮಾಡಿ ಕೊಡುವಷ್ಟು ಸಾಮರ್ಥ್ಯ ಇವರಿಗಿದೆ. ಆಯಾ ಹಂಗಾಮಿಗೆ ಸೂಕ್ತವಿರುವ ತರಕಾರಿ ತಳಿಗಳ ಸಸಿಗಳನ್ನೇ ಪೂರೈಸುವುದು ಇವರ ವಿಶೇಷತೆಗಳಲ್ಲೊಂದು. ಕೆಲ ಕೃಷಿಕರು ತಮಗೆ ಬೇಕಾದ ತಳಿಯ ಸಸಿಗಳನ್ನೇ ಪಡೆದುಕೊಳ್ಳುವುದೂ ಇದೆಯೆನ್ನಿ.

ಟ್ರೇ ಸಾಗಿಸಲು ಕನ್ವೇಯರ್

ಸಾಮಾನ್ಯವಾಗಿ ನರ್ಸರಿಯಲ್ಲಿ ಕನ್ವೇಯರ್ ಅಳವಡಿಸಿರುವುದು ಅತಿ ಅಪರೂಪ. ಇವರಿಗೆ ಹೆಚ್ಚು ಗ್ರಾಹಕರು ಇರುವುದರಿಂದ ದಿನಪ್ರತಿ ಸಸಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚೇ ಇರುತ್ತದೆ. ಬರುವವರನ್ನೆಲ್ಲ ನರ್ಸರಿಯೊಳಗೆ ಬಿಟ್ಟರೆ ಕೀಟ-ರೋಗ ಹೊರಗಿನಿಂದ ಸುಲಭವಾಗಿ ಒಳಬರುವ ಸಂಭವ ಹೆಚ್ಚು. ಕಾರ್ಮಿಕರೇ ಟ್ರೇಗಳನ್ನು ಹೊರಸಾಗಿಸುವುದು ಹೆಚ್ಚು ಸಮಯ ಹಾಗೂ ಶ್ರಮ ಬೇಡುವ ಕೆಲಸ. ಪರಿಹಾರಕ್ಕಾಗಿ ತಿಂಗಳುಗಟ್ಟಲೆ ತಲೆಕೆಡಿಸಿಕೊಂಡಾಗ ಹೊಳೆದದ್ದೇ ಬೆಲ್ಟ್ ಕನ್ವೇಯರ್ ವ್ಯವಸ್ಥೆ. ಇದಕ್ಕೆಂದೇ ಇವರು ವ್ಯಯಿಸಿರುವ ಬಂಡವಾಳ ಹೆಚ್ಚೂ ಕಡಿಮೆ ಐದು ಲಕ್ಷ ರೂಪಾಯಿ.

ಕನ್ವೇಯರ್ ಬೆಲ್ಟ್ ಮೇಲೆ ನರ್ಸರಿಯ ಕೊನೆಯಲ್ಲಿ ಟ್ರೇಗಳನ್ನು ಒಂದಾದಾಗಿ ಇಟ್ಟರಾಯಿತು; ಕ್ಷಣಾರ್ಧದಲ್ಲಿ ಅವು ನರ್ಸರಿ ಹೊರಗೆ ಸಸಿ ತುಂಬಿಕೊಳ್ಳಲು ಸಿದ್ಧವಾಗಿ ನಿಂತಿರುವ ವಾಹನದವರೆಗೂ ಶ್ರಮವಿಲ್ಲದೇ ಬಂದುಬಿಡುತ್ತವೆ. ಈ ವ್ಯವಸ್ಥೆ ಅಳವಡಿಸಿದ ಮೇಲೆ ನರ್ಸರಿಯಲ್ಲಿ ಸಸಿಗಳಿಗೆ ಬರುತ್ತಿದ್ದ ಕೀಟ-ರೋಗ ಕಡಿಮೆಯಾಗಿರುವುದು ಸ್ಪಷ್ಟವಾಗಿದೆ.

ಸಸಿಗಳ ಬೇಡಿಕೆ ಹೆಚ್ಚಾಗತೊಡಗಿದಾಗ ಅನಿವಾರ್ಯವಾಗಿ ನರ್ಸರಿ ಪ್ರದೇಶ ವಿಸ್ತರಿಸಲೇಬೇಕಾಯಿತು. ಎರಡು ವರ್ಷಗಳ ಹಿಂದೆ ಮೊದಲಿನ ತಮ್ಮ ನರ್ಸರಿಯಿಂದ 14 ಕಿಲೋಮೀಟರ್ ದೂರವಿರುವ ಶಾಸ್ತ್ರಿಪಾಳ್ಯದಲ್ಲಿ ಎರಡು ಎಕರೆ ಪಾಲಿಹೌಸ್ ನಿರ್ಮಿಸಿದರು. ಅದೇ ಪಾಲಿಹೌಸಿನ ಮೇಲೆ ಬೀಳುವ ಒಂದು ಹನಿ ಮಳೆನೀರನ್ನೂ ವ್ಯರ್ಥಮಾಡದೆ ಹೊಂಡಕ್ಕಿಳಿಸಿ ಅದನ್ನೇ ಸಸ್ಯೋತ್ಪಾದನೆಗೆ ಬಳಸುವುದು ಅಲ್ಲಿನ ವಿಶೇಷ. ಈ ವರ್ಷದ ಬೆಂಗಳೂರಿನ ಒಂದೆರಡು ಮಳೆಗೇ ಪಾಲಿಹೌಸಿನಿಂದ ಹೊಂಡಕ್ಕೆ ಹರಿದು ಸಂಗ್ರಹವಾಗಿರುವ ನೀರು 80 ಲಕ್ಷ ಲೀಟರ್ಗೂ ಹೆಚ್ಚು. ಸಸಿ ಉತ್ಪಾದನೆಗೆ ಮಳೆನೀರೇ ಶ್ರೇಷ್ಠವೆಂಬ ಸತ್ಯ ಇವರಿಗೆ ಅದ್ಯಾವಾಗಲೋ ಗೊತ್ತಾಗಿಬಿಟ್ಟಿದೆ. ಇಷ್ಟೇ ನೀರಿನಲ್ಲಿ ಕನಿಷ್ಠ ನಾಲ್ಕು ವರ್ಷ ನರ್ಸರಿ ನಿರ್ವಹಣೆ ಸಾಧ್ಯವೆನ್ನುತ್ತಾರೆ ಈ ಕೃಷಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.