ಭಾವೈಕ್ಯದ ಬೀಡು, ಗುರು–ಶಿಷ್ಯ ಸಂಬಂಧಕ್ಕೆ ಹೊಸಭಾಷ್ಯ ಬರೆದ ನಾಡು, ಕೃಷ್ಣಮೃಗಗಳ ಕಾಡು ಹಾವೇರಿಯಲ್ಲಿ ಇದೇ 6ರಿಂದ ನುಡಿಹಬ್ಬ. ಸಾಮರಸ್ಯವನ್ನೇ ಬಿತ್ತಿ ಬೆಳೆಯುವ, ಏಲಕ್ಕಿ ಹಾರ, ಸವಣೂರು ಖಾರವನ್ನು ಪ್ರೀತಿಯಿಂದ ಎತ್ತಿ ಕೊಡುವ ಈ ನಾಡಿನ ಅನನ್ಯತೆಯ ಕಡೆಗೊಂದು ನುಡಿಹಬ್ಬದ ನೆಪದಲ್ಲಿ ಹೊರಳುನೋಟ...

ಬದುಕೇ ಹಾಡಾದ ಹಾವೇರಿ ಜಿಲ್ಲೆಯದು ಅಪ್ಪಟ ರೈತಾಪಿ ನೆಲ. ನೇಗಿಲ ದುಡಿಮೆಯೇ ಬದುಕು; ಅದೇ ಕಾವ್ಯ. ‘ನಂಬಿಗೀಲೆ ದುಡಿತಾನ ಬಸವಣ್ಣ; ನಂಬಿಗ್ಯಾಗೈತಿ ಅವನ ಕಸುವಣ್ಣ’ ಎಂದು ಬೇಂದ್ರೆಯವರು ಹಾಡಿದಂತೆ, ಬಸವಣ್ಣನನ್ನೇ ನಂಬಿ ದುಡಿಯುವ ಇಲ್ಲಿನ ಶ್ರಮಿಕರೆಲ್ಲ ನಡೆದಾಡುವುದು ಸಾಧುಸಂತರ-ಶರಣರ ಪಾದದೂಳಿಯಲ್ಲಿ; ಉಸಿರಾಡುವುದು ಸಂತತನದ ಗಾಳಿಯನ್ನೇ. ನಿಷ್ಠುರ; ಆದರೆ, ಬಡಿವಾರವಿಲ್ಲದ ಬದುಕು! ಶರೀಫನೇ ಶಿವಯೋಗಿಯಾದ ಭೂಮಿ!

ದುಡಿಮೆ-ಭಾವೈಕ್ಯವನ್ನು ಸಾರುವ ಶಿಶುವಿನಹಾಳದ ‘ಶರೀಫಗಿರಿ’ ಆಗಿರುವುದೇ ಶರೀಫರು- ಗುರುಗೋವಿಂದ ಭಟ್ಟರ ಗದ್ದುಗೆ ಹಾಗೂ ಬಸವಣ್ಣನಿಂದ. ಈ ಬಸವಣ್ಣನೇ ಶಿಶುನಾಳಧೀಶ. ಅವನ ಭಾಷೆ ಎಂದರೆ ಧರ್ಮ-ಮತಗಳನ್ನು ಮೀರಿದ ಕಾಯಕ.

ಎಲ್ಲವೂ ಇದ್ದು ಇಲ್ಲದಂತಿರುವ ನಿರ್ಲಿಪ್ತತೆ, ಕೊಡುಗೈಗೆ ಬಡತನ ಬಾಧಿಸದಂತಹ ಭಾವಸಿರಿತನ ಈ ನೆಲದ ಹೆಚ್ಚುಗಾರಿಕೆ. ರಾಜ್ಯದ ಉತ್ತರ-ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಗಿಲಾಗಿ, ಎರಡೂ ದಿಕ್ಕಿನ ಗಾಳಿ-ಗಂಧವನ್ನು ಉಂಡ ಭೂಮಿ ಹಾವೇರಿ. ಅಂತಲೇ ಅದನ್ನು ತಡೆದುಕೊಳ್ಳಲು ಬೇಕಾದ ಕಸುವು-ಸೈರಣೆಯನ್ನೂ ಬಲ್ಲದು! ಅಂದಮೇಲೆ ಇಲ್ಲಿನ ಕಳ್ಳು-ಬಳ್ಳಿಗೆ ಅದನ್ನು ಕಲಿಸಬೇಕೇ?

ನೆಲದ ಗರಿಮೆ ಮುಕ್ಕಾಗಿಸುವ ದೂಳಿನ ಕಣವೊಂದು ಯಾವ ಮಾಯದಿಂದ ಹಾರಿಬಂದರೂ ಅದರ ಕೂನು ಹಿಡಿದು, ಕೂಡಲೇ ತೊಳೆದು ಬಿಡುವ ತಿಳಿವು ಇಲ್ಲಿಯದು. ಮುಕ್ಕು ಮಾಡಲು ಎಳೆಸಿದವರಿಗೆ ಮಣ್ಣು ಮುಕ್ಕಿಸುವ ಜಾಣ್ಮೆಯೂ ಗೊತ್ತು.

ಬಯಲುಸೀಮೆಯ ಈ ನೆಲದ ಜಾತ್ರೆ-ಉರುಸುಗಳಲ್ಲಿ, ಹಬ್ಬ-ಹರಿದಿನಗಳಲ್ಲಿ ಆ ತಿಳಿವಿನ ಬೆಳಕು ವೇದ್ಯವಾಗುತ್ತದೆ. ಮೊಹರಂ ಕುಣಿತದಲ್ಲಿ, ಡೋಲಿಗಳ ಪೂಜೆಯಲ್ಲಿ, ಚೊಂಗ್ಯಾದ ಸವಿಯಲ್ಲಿ, ಆಲೇದೇವರ ಮೆರವಣಿಗೆಯಲ್ಲಿ, ಕೃಷಿಕರ ಹಟ್ಟಿಹಬ್ಬದಲ್ಲಿ, ವ್ಯಾಪಾರಸ್ಥರ ದೀಪಾವಳಿಯಲ್ಲಿ, ಲಕ್ಷ್ಮೀಪೂಜೆಗೆ ಕಳೆತರುವ ಕಂಠಮಾಲಿಯಲ್ಲಿ, ‘ಮಾನಾಮಿ’ಯಲ್ಲಿ, ದ್ಯಾಮವ್ವ-ದುರ್ಗವ್ವರ ಬನ್ನಿಯಲ್ಲಿ (ಬನ್ನಿ ಮುಡಿಯುವುದು) ಶ್ರಾವಣ-ರಮ್ಜಾನ್ ಮಾಸ ಆಚರಣೆಯಲ್ಲಿ ಸಹಬಾಳ್ವೆಯ ಸಂಕೇತಗಳಿವೆ.

ಜೋಕಾಲಿ ಜೀಕುಗಳಲ್ಲಿ, ಎತ್ತುಗಳು ಕರಿ ಹರಿಯುವ ಕಾರಹುಣ್ಣಿಮೆಯಲ್ಲಿ, ಚರಗ ಚೆಲ್ಲುವ ಸೀಗೆಹುಣ್ಣಿಮೆಯಲ್ಲಿ, ಗಣಪ್ಪನ ಹಬ್ಬದಲ್ಲಿ, ಗೌರಿ ಹುಣ್ಣಿಮೆಯ ಚೆಂಡು ಹೂವಿನ ದಂಡೆಯ ಸಡಗರದಲ್ಲಿ, ಸಂಕ್ರಮಣದ ಸಕ್ಕರೆಗೊಂಬೆಗಳ ಸಿಹಿಯಲ್ಲಿ, ಯುಗಾದಿಯ ಬೇವು-ಬೆಲ್ಲದಲ್ಲಿ, ಊರಲ್ಲಿ ಅಲ್ಲಲ್ಲಿ ಕೆಲ ಮನೆಗಳ ಮೇಲೆ ಕಾಣುವ ಗುಡಿ ಪಾಡವಾ ಸಂಭ್ರಮದಲ್ಲಿ, ದರ್ಗಾದಲ್ಲಿ ಸಕ್ಕರೆ ಓದುಕೆ ಮಾಡುವಲ್ಲಿ, ಹಾವನೂರಿನ ದ್ಯಾಮವ್ವನಿಗೆ ಹರಕೆ ಸಲ್ಲಿಸುವಲ್ಲಿ, ಹೊಲ ಹರಗುವಲ್ಲಿ, ಬಿತ್ತಿ-ಬೆಳೆಯುವಲ್ಲಿ, ಒಕ್ಕಲು ಮಾಡುವಲ್ಲಿ, ರಾಶಿ ಪೂಜೆಯಲ್ಲಿ, ಬಣವೆ ಒಟ್ಟುವಲ್ಲಿ ಎಲ್ಲೆಲ್ಲಿಯೂ ಆ ತಿಳಿವಿನ ಗಾಳಿಯದೇ ಘಮ.

ಯಾರ ನಂಬಿಕೆಗಳು ಯಾರನ್ನೂ ಗಾಸಿ ಮಾಡಿಲ್ಲ. ಯಾರ ಅನ್ನಕ್ಕೂ ಕಲ್ಲು ಹಾಕಿಲ್ಲ. ಗುರು-ಶಿಷ್ಯ ಸಂಬಂಧಕ್ಕೆ, ಬದುಕಿನ ರೀತಿ-ನೀತಿಗೆ ಹೊಸ ವ್ಯಾಖ್ಯಾನ ಕೊಟ್ಟ ಶಿಶುನಾಳ ಶರೀಫರು, ‘ಕುಲ ಕುಲಕುಲವೆಂದು ಬಡಿದಾಡದಿರಿ’ ಎಂದು ಹಾಡಿ, ಅಂತೆಯೇ ಬದುಕಿ ತೋರಿದ ಕನಕದಾಸರು, ‘ಊರಿಗೆ ದಾರಿಯನಾರು ತೋರಿದರೇನು? ಯಾತರದು ಹೂವದು ನಾತರದು ಸಾಲದೇ?’ ಎಂದು ಗುಣವೊಂದೇ ಮೇಲಾಗಿ ಉಳಿದುದೆಲ್ಲದಕ್ಕೆ ಸೋಲಾಗಬೇಕು ಎಂದು ಸಾರಿದ ಸರ್ವಜ್ಞ, ನಿಜಶರಣ ಅಂಬಿಗರ ಚೌಡಯ್ಯನಂಥವರು ಜನಿಸಿದ ಈ ನೆಲದಲ್ಲಿ ಸುಳಿಯುವ ಗಾಳಿಗೂ ಧನ್ಯತೆಯ ಭಾವ.

ಗುರು ಗೋವಿಂದರು, ಶಿಶುನಾಳಕ್ಕೇ ಬಂದು ಶಿಷ್ಯನನ್ನು ಕರೆದೊಯ್ದರೆ; ಮುಧೋಳದ ರನ್ನನಿಗೆ ಬಂಕಾಪುರದ ಗುರು ಅಜಿತಸೇನಾಚಾರ್ಯರಲ್ಲಿ ಶಿಷ್ಯವೃತ್ತಿ! ಈ ಗುರು-ಶಿಷ್ಯ ಪರಂಪರೆಯ ಮುಂದುವರಿಕೆಯ ಫಲವೇ ಇಲ್ಲಿನ ವಿನಯವಂತಿಕೆಗೆ ಕನ್ನಡಿ.

ಅಂಧ-ಅನಾಥ ಮಕ್ಕಳಿಗೆ ಅನ್ನವಿಕ್ಕಿ- ಅಕ್ಷರ ಕಲಿಸಿ, ಪೋಷಿಸಿ, ಸಂಗೀತ ಸರಸ್ವತಿಯ ಸಾಕ್ಷಾತ್ಕಾರ ಮಾಡಿಸಿದ ಹಾನಗಲ್ಲಿನ ಕುಮಾರಸ್ವಾಮೀಜಿ ತನ್ನ ಕೂಸೆಂಬ ಹೆಮ್ಮೆ ಹಾವೇರಿಯದು. ಅವರ ಉಡಿಗೆ ಬಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿ, ಪಂಚಾಕ್ಷರಿ ಶಿವಯೋಗಿಗಳ ಶಿಷ್ಯರಾದ ಪುಟ್ಟರಾಜ ಗವಾಯಿಗಳೂ ಈ ಜಿಲ್ಲೆಯವರೆ. ಜಾತಿ-ಧರ್ಮಗಳ ಹಂಗು ಹರಿದುಕೊಂಡು ಮನುಕುಲದ ಉದ್ಧಾರಕ್ಕೆ ದುಡಿದವರು. ಸಾಹಿತ್ಯ-ಸಂಗೀತ-ಸಾಂಸ್ಕೃತಿಕ ಕ್ಷೇತ್ರದ ಕೈಂಕರ್ಯಕ್ಕಾಗಿ ಜೋಳಿಗೆ ಹಿಡಿದವರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡರಲ್ಲೂ ಸಾಧನೆಗೈದ, ಜೀವನ ಮೌಲ್ಯಗಳನ್ನು ಬೆಳೆಸುವ ಕಾಯಕ ಮಾಡಿದ ಪುಣ್ಯಾಶ್ರಮದ ಪುಣ್ಯಪುರುಷರು.

ಬಿತ್ತಿದ್ದೇ ಬೆಳೆಯುವುದು ಎಂಬುದನ್ನು ಬಲ್ಲ ಈ ನೆಲಕ್ಕೆ, ಸಾಮರಸ್ಯವನ್ನೇ ಬಿತ್ತಿ, ಅದನ್ನೇ ಒಕ್ಕಿ, ನಾಡಿನ ತುಂಬ ಸೂರೆ ಮಾಡುವುದೇ ಕಾಯಕ. ಈ ಕಾಯಕದಲ್ಲಿ ತುಸು ಅಡಚಣೆಗಳಾಗಿರಬಹುದು. ಆದರೆ, ನಿಂತಿಲ್ಲ. ಅಂಥ ಕೈಂಕರ್ಯದಲ್ಲಿ ನಿರತ ಹುಕ್ಕೇರಿಮಠ ಜಿಲ್ಲೆಯ ಮತ್ತೊಂದು ಗರಿ. ಅಗಡಿಯ ಶೇಷಾಚಲ ಸದ್ಗುರುಗಳು, ಸವಣೂರಿನ ಸತ್ಯಬೋಧರ ಅಧ್ಯಾತ್ಮದ ನೆರಳಿನ ತಂಪಿನಲ್ಲಿ ಈ ನೆಲ ವಿನೀತಗೊಂಡಿದೆ. ‘ಹೊನ್ನ ಬಿತ್ತೇವು ಹೊಲಕೆಲ್ಲ’ ಎಂಬ ಜನಪದರ ಶ್ರಮ- ಅಭಿಮಾನ ಪೊರೆದಿದೆ.

ಹಾವೇರಿಯ ಯಾಲಕ್ಕಿ ಹಾರ- ಸವಣೂರು ವೀಳ್ಯದೆಲೆಯ ಕಂಪು, ಬ್ಯಾಡಗಿ ಮೆಣಸಿನಕಾಯಿ ಕೆಂಪು, ಸವಣೂರು ಖಾರಾದ ಸವಿಯು ಬದುಕಿಗೆ ಇಂಬು ನೀಡಿದೆ.

ಮೈಲಾರ ಮಹಾದೇವ, ಸಂಗೂರ ಕರಿಯಪ್ಪ, ಹೊಸಮನಿ ಸಿದ್ದಪ್ಪ, ಗುದ್ಲೆಪ್ಪ ಹಳ್ಳಿಕೇರಿಯವರಂಥ ಸ್ವಾತಂತ್ರ್ಯ ಹೋರಾಟಗಾರರ ಸ್ಫೂರ್ತಿ ಇಲ್ಲಿದೆ. ಕಾದಂಬರಿ ಪಿತಾಮಹ ಗಳಗನಾಥರು, ಸಾಹಿತಿಗಳಾದ ವಿ.ಕೃ. ಗೋಕಾಕ, ಮಹಾದೇವ ಬಣಕಾರ, ಸು.ರಂ. ಎಕ್ಕುಂಡಿ, ಜಿ.ಎಸ್. ಆಮೂರ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ಸತೀಶ ಕುಲಕರ್ಣಿ, ಗಂಗಾಧರ ನಂದಿ ಅಂಥವರ ಸಾಹಿತ್ಯ ಕೃಷಿಯು ಬುದ್ಧಿ-ಭಾವವನ್ನು ಹಸನುಗೊಳಿಸಿದೆ.

ದೊಡ್ಡಾಟದ ಪರಂಪರೆಯೊಂದಿಗೆ ನೆಲದ ಚೆಲುವನ್ನೆಲ್ಲ ಕಾಪಿಡಲು ಶ್ರಮಿಸಿದ ಟಿ.ಬಿ.ಸೊಲಬಕ್ಕನವರ ಹೆಜ್ಜೆಗುರುತು ಬಿಟ್ಟುಹೋಗಿದ್ದಾರೆ. ಮಾತುಮಾತಿಗೂ ಹುಟ್ಟೂರನ್ನು ನೆನೆದು ‘ಹಾಲುಂಡ ತವರಿಗೆ ಏನೆಂದು ಹಾಡಲಿ… ಹೊಳೆದಂಡೀಲಿರುವ ಕರಕಿಯ ಕುಡಿಹಂಗ ಹಬ್ಬಲಿ ಅವರ ರಸಬಳ್ಳಿ’ ಎಂದು ಹಾರೈಸುವ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, ಶಿಗ್ಗಾವಿಯ ಸುಧಾಮೂರ್ತಿ ನಾಡಿಗೇ ಚೈತನ್ಯದ ತಾಯಿ ಆಗಿದ್ದಾರೆ.

ಜಿಲ್ಲೆಗೆ ಚಾಲುಕ್ಯ-ಕದಂಬ, ಹೊಯ್ಸಳರ ಶಿಲ್ಪಕಲೆ-ಸಾಂಸ್ಕೃತಿಕ ಸಂಸ್ಕಾರವಿದೆ. ಶರಣನೇ ಆದ ಅನ್ನದಾತನ ಕಾರುಣ್ಯವಿದೆ; ಅಭಿಮಾನಕ್ಕೆ ಧಕ್ಕೆಯಾದಾಗ ಸಿಡಿದೇಳುವ ಬಂಡಾಯವೂ ಇದೆ. ದಾಸೋಹಕ್ಕಾಗಿ ಕೊಡುಗೈ ದಾನಿಗಳಾಗಿ ರೈತರು-ವ್ಯಾಪಾರಸ್ಥರಿದ್ದಾರೆ. ಗುಡಿಗೋಪುರಗಳಿವೆ, ಮಠ-ಮಾನ್ಯಗಳಿವೆ. ಮಸೀದಿ-ದರ್ಗಾಗಳು; ಬಸದಿಗಳೂ!

ವರದೆ-ತುಂಗಭದ್ರೆಯರಿಗೂ ಮಿಗಿಲಾಗಿ ಪೋಷಿಸುವ ಕೆರೆ-ಕಟ್ಟೆ- ತಾಲಾಬುಗಳು ಜೀವದಾಯಿನಿ ಎನಿಸಿವೆ. ಮದಗ ಮಾಸೂರಿನ ಕೆಂಚಮ್ಮನ ಕೆರೆಯ ಕಥೆಯೊಂದೇ ಸಾಕು; ಇಲ್ಲಿನ ಕೆರೆಗಳ ಹಿರಿಮೆ ಸಾರಲು. ಸವಣೂರಿನ ಮೋತಿ ತಾಲಾಬ್, ಶಿಗ್ಗಾವಿಯ ನಾಗನೂರು ಕೆರೆ, ಹಾವೇರಿಯ ಹೆಗ್ಗೇರಿ ಕೆರೆ, ರಾಣೆಬೆನ್ನೂರಿನ ಅಸುಂಡಿ ಕೆರೆ, ಹಾನಗಲ್ಲಿನ ಆನೆಹೊಂಡ…. ಹೀಗೆ ಕೆರೆಗಳ ಕಥೆ, ಅವುಗಳಿಗಾಗಿ ಕಥೆಯಾದವರ ಕಥೆಗಳು ಜನಪದ ಹಾಡಾಗಿವೆ. ಹೀಗಾಗಿ, ಕೆರೆ ಕಾಯ್ದ ಭೀಮವ್ವ- ಅಗಸರ ಗಂಗವ್ವರು ಇಲ್ಲಿ ಭೀಮೆ-ಗಂಗೆಯಾಗಿ ವಂದನೀಯರು.

ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚು, ಹೊಸರಿತ್ತಿಯ ಗಾಂಧಿ ಗುರುಕುಲದ ಶಿಸ್ತು, ಇಲ್ಲಿ ಆಳ್ವಿಕೆ ನಡೆಸಿದ ಸಾಮಂತ ರಾಜರು-ನವಾಬರ ಧರ್ಮಸಹಿಷ್ಣುತೆ, ಸೂಫಿಸಂತರು-ಶರಣರ ಸಂಯಮವು ನಾಡು- ನುಡಿಗೆ ಕಸುವು ನೀಡಿವೆ.

ಮತ-ಗಡಿ- ಭಾಷೆಯನ್ನು ಮೀರಿ ಬದುಕನ್ನು ಪ್ರೀತಿಸಿದ ಮನಸ್ಸುಗಳು ಇಲ್ಲಿಯವು. ಉರ್ದು, ಪಾರ್ಸಿ, ಮರಾಠಿ ಸೊಗಡನ್ನೂ ಒಳಗೊಂಡ ಇಲ್ಲಿನ ಕನ್ನಡ ಬದುಕಿಗೆ ಅದರಿಂದ ಫಾಯದೆ ಆಗಿದ್ದೇ ಹೆಚ್ಚು. ಸಾಮರಸ್ಯದ ಕನ್ನಡವು ಸಮರಸದ ಸಹಬಾಳ್ವೆಯನ್ನು ಕರುಳಿಗೂ ಕಲಿಸಿದೆ.

ನಾಡಿನಲ್ಲಿ ನುಡಿ ಸಂಸ್ಕಾರವೇ ಮರೆತುಹೋಗುತ್ತಿರುವ ಈ ಹೊತ್ತಿನಲ್ಲಿ, ಸಂತತನದಲ್ಲೇ ನಾಡು-ನುಡಿ ಕಟ್ಟಿದ ಸರ್ವಜ್ಞ ಕವಿಯ ‘.....ಮಾತೇ ಮಾಣಿಕವು’ ತ್ರಿಪದಿ ಮತ್ತೆ ಮತ್ತೆ ಕೇಳಬೇಕಿದೆ. ಒಡೆಯುವ- ಕೆಡಹುವ ಮಾತು ಇಲ್ಲವಾಗಿ, ಕಟ್ಟುವ-ಕೂಡಿಸುವ ಮಾತು ಅನುರಣಿಸಬೇಕಿದೆ.

‘ಬೋಧ ಒಂದೇ ಬ್ರಹ್ಮನಾದ ಒಂದೇ/ ಸಾಧನ ಮಾಡುವ ಹಾದಿ ಒಂದೇ/ ಆದಿ ಪದ ಒಂದೇ/ ಶಿಶುನಾಳಧೀಶನ ಭಾಷೆ ಒಂದೇ/ ಭವನಾಶ ಒಂದೇ/

ಎಂಬುದು ಕನ್ನಡ ಸಾಹಿತ್ಯ ಸಮ್ಮೇಳನದ ಶರೀಫರ ವೇದಿಕೆಯಿಂದ ಮಾರ್ದನಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.