ಉಡುಪಿ ಜಿಲ್ಲೆಯ ಬೈಂದೂರಿನ ಬಸ್ ನಿಲ್ದಾಣದಲ್ಲಿ ಜೀಪು ನಿಲ್ಲಿಸಿಕೊಂಡು ಮೂರು ನಾಲ್ಕು ಜನ ಕಾಯುತ್ತಿದ್ದರು. ಅವರಿಗೆ ನಮ್ಮ ಕಾನಿನ ಗಾಳಿ (Acronychia Pedunculata)ಜಾತಿಯ 150 ಸಸಿಗಳನ್ನು ಕೊಡಬೇಕಿತ್ತು. ಬಸ್ಸು ನಿಲ್ಲುತ್ತಲೇ ಸರಸರ ಓಡಿ ಬಂದವರು ಸಸಿ ಎಲ್ಲಿದೆಯೆಂದರು? ಪುಟ್ಟ ಕೈ ಚೀಲದಲ್ಲಿದ್ದ ಸಸಿಗಳ ಕಟ್ಟನ್ನು ಹೂಗುಚ್ಛ ನೀಡಿದಷ್ಟು ಹಗುರವಾಗಿ ಹಸ್ತಾಂತರಿಸಿದೆ. ನೂರಾರು ಸಸಿಗಳನ್ನು ಸಾಗಿಸಲು ಜೀಪು ಬೇಕು, ಪಾಲಿಥೀನ್ ಚೀಲದಲ್ಲಿ ಬೆಳೆಸಿದ ಸಸಿ ಮಣ್ಣು ಸಹಿತ ಕಿಲೊಗ್ರಾಂ ಭಾರವಿರುತ್ತದೆ, ನಿಲ್ದಾಣದಲ್ಲಿ ಬಸ್ ನಿಂತ ಹತ್ತು ನಿಮಿಷಗಳಲ್ಲಿ ಸರಸರ ಸಸಿ ಇಳಿಸಿ ಜೀಪಿಗೇರಿಸಲು ಸಮರೋಪಾದಿಯಲ್ಲಿ ಅವರು ಸನ್ನದ್ಧರಾಗಿದ್ದರು. ಎರಡು ಮೂರು ಕಿಲೊಗ್ರಾಂ ತೂಕವಿಲ್ಲದ ಬೇರು ಸಹಿತ ಕಿತ್ತು ತಂದ ಸಸಿ ಕಟ್ಟು ಕಂಡು ಅವರಿಗೆ ವಿಚಿತ್ರವೆನಿಸಿತು. ಬುಡ ಕಿತ್ತ ಸಸಿ ಬದುಕುತ್ತದೆಯೇ? ಇವನ್ನು ಹೊಯ್ದು ಮಾಲೀಕರಿಗೆ ಮುಖ ತೋರಿಸುವುದು ಹೇಗೆಂಬ ಚಿಂತೆಯೂ ಕಾಡಿರಬಹುದು. ಬಸ್ಸು ಹೊರಡುವ ತನಕವೂ ವಿಚಿತ್ರ ರೀತಿಯಲ್ಲಿ ಅಲ್ಲಿಯೇ ನಿಂತು ನಗುತ್ತ ಅವರೆಲ್ಲ ನೋಡುತ್ತಿದ್ದುದು ಎಂಟು ವರ್ಷಗಳ ನಂತರವೂ ನೆನಪಿದೆ.

ಮಳೆಗಾಲದಲ್ಲಿ ಚೂಪಾದ ಕೋಲನ್ನು ಭೂಮಿಗೆ ಊರಿ ಕುಳಿ ಮಾಡಿ ಅದರೊಳಗೆ ಸಸ್ಯದ ಬೇರಿಳಿಸಿ ಸಸಿ ಸುತ್ತ ಮೆಟ್ಟುತ್ತ ಮಣ್ಣು ಬಿಗಿಗೊಳಿಸಿ ಸಸಿ ನೆಡಲು ಹೇಳಿದೆ. ಗುಂಡಿ ತೆಗೆಯದೇ ಸುಲಭಕ್ಕೆ ನಾಟಿ ಕ್ರಮ ತಿಳಿಸಿದೆ. ಸಸಿಗಳನ್ನು ಒಂದು ವರ್ಷ ಪಾಲಿಥೀನ್ ಚೀಲದಲ್ಲಿ ನರ್ಸರಿಯಲ್ಲಿ ನೀರುಣಿಸಿ ಚೆನ್ನಾಗಿ ಬೆಳೆಸಿ ನೆಡುವುದಾಗಿ ಅವರೆಷ್ಟೇ ಹೇಳಿದರೂ ತಕ್ಷಣ ನಾಟಿ ಮಾಡಲು ಸೂಚಿಸಿದೆ. ಮಳೆ ಸುರಿಯುತ್ತಿದ್ದರಿಂದ ಸಸಿ ಚಿಗುರಿ ಬದುಕಿ ಬೆಳೆಯುತ್ತದೆಂದು ಭರವಸೆ ನೀಡಿದೆ. ಒಮ್ಮೆ ಇವು ಸತ್ತರೆ ಬೇರೆ ಸಸಿ ಕೊಡುವುದಾಗಿ ವಾಗ್ದಾನ ಮಾಡಿದೆ. ಅಂದು ನೆಟ್ಟ ಸಸಿಗಳು ಈಗ ಎತ್ತರಕ್ಕೆ ಬೆಳೆದು ಆಗಸ್ಟ್ ಹೊತ್ತಿಗೆ ಗೊಂಚಲು ಹೂವರಳಿಸಿ ಚಿಟ್ಟೆಗಳನ್ನು ಸೆಳೆಯುತ್ತಿವೆ. ಸುಲಭ ಸಾಗಾಟ, ಕೆಲವೇ ಸಮಯದಲ್ಲಿ ನಾಟಿ ಕ್ರಮದಲ್ಲಿ ತಕ್ಷಣ ನಂಬಿಕೆ ಮೂಡಲಿಕ್ಕಿಲ್ಲ. ಆದರೆ ವಾರ್ಷಿಕ 100-120 ಮಳೆ ದಿನಗಳ ಮಲೆನಾಡು ಕರಾವಳಿಯ ಜನಕ್ಕೆ ಈ ತಂತ್ರ ಹೊಸದೇನಲ್ಲ.

ಚಿಗುರು ಗೂಟದಲ್ಲಿ ಹಸಿರು ಸಾಕಾರ: 70ರ ದಶಕದ ನಂತರದಲ್ಲಿ ಸಸಿಯನ್ನು ಪಾಲಿಥೀನ್ ಚೀಲದಲ್ಲಿ ಬೆಳೆಸುವ ನರ್ಸರಿ ತಂತ್ರಗಳು ಶುರುವಾಗಿವೆ. ಅದಕ್ಕೂ ಮುಂಚೆ ಅರಣ್ಯ ಇಲಾಖೆ ಮಳೆಗಾಲಕ್ಕೆ ಮುನ್ನ ತೇಗದ ಮರದ ಬೇರಿನ ಚಿಕ್ಕ ಚಿಕ್ಕ ತುಂಡುಗಳನ್ನು ಕತ್ತರಿಸಿ ಮಣ್ಣಿನ ಮಡಿಯಲ್ಲಿ ಸೇರಿಸಿ ವರ್ಷದ ನಂತರ ಚಿಗುರಿ ಬೆಳೆದದ್ದನ್ನು ಕಿತ್ತು ನಾಟಿ ಮಾಡುತ್ತಿತ್ತು. ನಂತರದಲ್ಲಿ ನೀರಾವರಿ ಮೂಲಕ ನರ್ಸರಿಯಲ್ಲಿ ಸಸಿ ಬೆಳೆಸುವ ತಂತ್ರ ಬಂದಿತು. ‘ವೆಟ್ ನರ್ಸರಿ’ ಎಂದು ಅರಣ್ಯ ಇಲಾಖೆ ಫಲಕ ಬದಲಿಸಿತು. ಈಗ ನರ್ಸರಿಯೆಂದರೆ ಮೊದಲಿಗೆ ಪಾಲಿಥೀನ್ ಚೀಲಕ್ಕೆ ಫಲವತ್ತಾದ ಮರಳು ಮಿಶ್ರಿತ ಮಣ್ಣು ತುಂಬುವುದರಿಂದ ಕೆಲಸ ಶುರುವಾಗುತ್ತದೆ. ವಿವಿಧ ಜಾತಿಯ ಸಸಿಗಳನ್ನು ವ್ಯಾಪಕವಾಗಿ ಬೆಳೆಸಿ ಸುರಕ್ಷಿತವಾಗಿ ದೂರ ಸಾಗಿಸಲು ಸಾಧ್ಯವಾಗಿದ್ದನ್ನು ಅಲ್ಲಗಳೆಯುವಂತಿಲ್ಲ. ಗುಂಡಿ ತೆಗೆದು ಸಾಲಿನಲ್ಲಿ ಸಸಿ ಬೆಳೆಸುವ ತಂತ್ರದಲ್ಲಿ ಮಣ್ಣಿನ ಶಕ್ತಿಗಿಂತ ಸಾಲು ಶಿಸ್ತಿಗೆ ಶರಣಾದೆವು. ಆದರೆ ಸುಲಭದಲ್ಲಿ ಮರ ಬೆಳೆಸುವ ಹಳೆಯ ತಂತ್ರ ಮರೆಯಲಾಗದು. ಹೆಚ್ಚು ಹೆಚ್ಚು ಜನ ಸಮಯ ಸಿಕ್ಕಾಗೆಲ್ಲ ಫಲವತ್ತಾದ ನೆಲೆಯಲ್ಲಿ ಪುಟ್ಟ ಸಸಿಯ ಬೇರೂರುವ ಕಾರ್ಯದಲ್ಲಿ ತೊಡಗಿದರೆ ಹಸಿರೀಕರಣಕ್ಕೆ ಅನುಕೂಲ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಹಳಕಾರು ಹಳ್ಳಿಯಿದೆ. ಇಲ್ಲಿ ಅರಣ್ಯ ಪಂಚಾಯತ್ ಎಂಬ ಬ್ರಿಟಿಷ್ ಕಾಲದ ವಿಕೇಂದ್ರೀಕೃತ ಅರಣ್ಯ ಸಂರಕ್ಷಣೆಯ ಹಳೆಯ ವ್ಯವಸ್ಥೆಯಿದೆ. ಹಳ್ಳಿಗರು ಅರಣ್ಯ ಸಂರಕ್ಷಣೆ ಜವಾಬ್ದಾರಿ ಹೊತ್ತು ನೂರು ವರ್ಷಗಳಾಗಿವೆ. ಇದರ ಇತಿಹಾಸ ಅಧ್ಯಯನ ಮಾಡುವಾಗ ಸಸಿ ಬೆಳೆಸುವ ಸರಳ ತಂತ್ರದ ಉಲ್ಲೇಖ ದೊರಕಿದೆ. 1928ರ ಠರಾವು ದಾಖಲೆಯಲ್ಲಿ ಹಳ್ಳಿಯ ಪ್ರತೀ ಮನೆಯವರೂ ಮಾವಿನ ಒರಟೆ, ಹಲಸು, ಗೇರು ಬೀಜಗಳನ್ನು ಹಿಡಿದು ಮಳೆಗಾಲದ ಜೂನ್ ಜುಲೈ ತಿಂಗಳಿನಲ್ಲಿ ಕಾಡಿಗೆ ಬರಬೇಕು. ಸುಟ್ಟ ಮರಗಳ ಬುಡ, ಮುಳ್ಳಿನ ಕಂಟಿ, ಕುಮಸಲು ಬಳ್ಳಿಯ ಹಿಂಡು, ಮಣ್ಣಿನ ಏರಿಗಳ ಮೇಲೆ ಬೀಜ ನಾಟಿ ಮಾಡುವಂತೆ ವನ ಮಹೋತ್ಸವದ ಪ್ರಕಟಣೆಯಿದೆ. ಕೆಲಸಕ್ಕೆ ಬರದಿದ್ದವರಿಗೆ ದಂಡ ಹಾಕುವ ಕ್ರಮ ಕೂಡಾ ಇತ್ತು!

ಮರ ಬೆಳೆಸಲು ಗುಂಡಿ ತೋಡಿ ಸಸಿ ನೆಡುವುದೊಂದೇ ಏಕೈಕ ದಾರಿಯಲ್ಲ. ಮರದ ಟೊಂಗೆ, ಟಿಸಿಲು ಕತ್ತರಿಸಿ ನೆಟ್ಟರೂ ಚಿಗುರಿ ಬೆಳೆಯುತ್ತವೆ. ಕೃಷಿ ಭೂಮಿಗೆ ಬೇಲಿ, ಅಡಿಕೆ ತೋಟಕ್ಕೆ ನೆರಳು, ನದಿ ಕೊರೆತ ತಡೆಯುವುದಕ್ಕೆ ಸಸಿ ಬೆಳೆಸುವ ಸರಳ ಮಾರ್ಗ ಚಿಗುರು ಗೂಟ ನಾಟಿ ಮಾಡುವುದು. ಮಹಿಳೆಯರಂತೂ ಹಿತ್ತಲಿನ ಮಲ್ಲಿಗೆ, ಕನಕಾಂಬರ, ದಾಸವಾಳ, ನಂದಿಬಟ್ಟಲು, ಗಜಲಿಂಬೆ, ಅಮಟೆ, ನುಗ್ಗೆ ಮುಂತಾದವುಗಳನ್ನೆಲ್ಲ ಟಿಸಿಲು, ಟೊಂಗೆಗಳನ್ನು ತಂದು ಬೆಳೆಸುವುದು. ಹಾಲವಾಣ, ಲಕ್ಕಿ, ಗ್ಲಿರಿಸಿಡಿಯಾ, ಬೇಲಿ ಸಂಪಿಗೆ(ಬಕುಲ), ಆಡುಮುಟ್ಟದ ಗಿಡ, ದುರಂತ, ನಡತೆ, ಬಿದಿರು, ಮುಂಡಿಗೆ, ನರಿಕಬ್ಬು,ಆಲ, ಅರಳಿ, ಬಸರಿ–ಹೀಗೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಗೂಟದಿಂದ ಬೆಳೆಸಬಹುದಾದ ನೂರಾರು ಜಾತಿಗಳಿವೆ.

ಸಸ್ಯ ಜಾತಿಯ ಗುಣ ಆಧರಿಸಿ ಎಷ್ಟು ದಪ್ಪದ ಗೂಟ ನೆಡಬೇಕೆಂಬ ನಿರ್ಧಾರ ಮುಖ್ಯ ಉದಾಹರಣೆಗೆ ಆಲ, ಅಶ್ವತ್ಥ, ಬಿಳಿ ಬಸರಿ ಮುಂತಾದ ಫೈಕಸ್ ಜಾತಿಯನ್ನು ಈ ಕ್ರಮದಲ್ಲಿ ಬೆಳೆಸುವಾಗ ತೊಗಟೆಗೆ ಗಾಯವಾಗದಂತೆ ಕಡಿದು ತರಬೇಕು. ನಮ್ಮ ರಟ್ಟೆ ಗಾತ್ರದ ಮೂರು ನಾಲ್ಕು ಅಡಿ ಉದ್ದದ ಗೂಟವನ್ನು ಮಣ್ಣಿಗೆ ಮಳೆಗಾಲಕ್ಕಿಂತ 15-20 ದಿನ ಮುಂಚೆ ನೆಡಬೇಕು. ಬಿಸಿಲಿಗೆ ಗೂಟ ಬಾಡಬೇಕು, ಆದರೆ ಒಣಗಬಾರದೆಂಬುದು ಸೂಕ್ಷ್ಮ ತಂತ್ರ. ಹಾರೆಯಿಂದ ಎರಡಡಿ ಆಳ ರಂಧ್ರ ಮಾಡಿ ಅದರಲ್ಲಿ ಗೂಟ ನಿಲ್ಲಿಸಬೇಕು. ಅದು ಅಲುಗಾಡದಷ್ಟು ಭೂಮಿಯಲ್ಲಿ ಭದ್ರವಾದರೆ ಸಾಕು ಮಳೆಗೆ ಬೇರು ಕೊಟ್ಟು ಚಿಗುರುತ್ತದೆ. ಮಳೆ ಮುಗಿಯುತ್ತಲೇ ತರಗೆಲೆಗಳ ರಾಶಿ ಬುಡಕ್ಕೆ ಹಾಕಿದರೆ ಮಣ್ಣಿನ ತೇವ ಉಳಿದು ಗಿಡ ಬೆಳೆಯಲು ಅನುಕೂಲವಾಗುತ್ತದೆ. ರಾಜ್ಯದ ಬಹುತೇಕ ಹೆದ್ದಾರಿಯ ಆಲ, ಅರಳಿಯ ಸಾಲುಮರಗಳೆಲ್ಲ ಗೂಟ ನೆಟ್ಟು ಬೆಳೆದವು.

ಬರದ ಸೀಮೆಯ ಚಿತ್ರದುರ್ಗ ರಾಂಪುರ ಬಳ್ಳಾರಿಯ ಹೆದ್ದಾರಿ, ಜಮಖಂಡಿಯ ಮದರಕಂಡಿ ಸೇರಿದಂತೆ ಎಲ್ಲೆಡೆ ನೆರಳು ಕೊಟ್ಟ ಆಲದಮರಗಳು ಗೂಟದಿಂದ ಮರವಾಗಿದ್ದು. ರಸ್ತೆ ವಿಸ್ತರಣೆ ಕಾರಣಕ್ಕೆ ಹಲವನ್ನು ಈಗ ಕಳಕೊಂಡಿದ್ದೇವೆ. ಮಂಡ್ಯ, ಮದ್ದೂರು, ಕಿಕ್ಕೇರಿ ಪ್ರದೇಶಗಳ ಕೃಷಿ ಭೂಮಿಯಲ್ಲಿ ಬೆಳೆದ ಬಿಳಿ ಬಸುರಿಮರಗಳು ಗೂಟ ಮೂಲ. ಕೆ.ಆರ್.ಪೇಟೆಯ ನೀರವಂಜಿ (ಪೌಸೆ) ಮರಗಳು ಹೀಗೆಯೇ ಗೆದ್ದಿದ್ದು. ಯಾವ ಜಾತಿಯ ಸಸಿ ಎಲ್ಲಿ ನೆಡಬೇಕು? ಹೇಗೆ ನೆಡಬೇಕು? ಯಾವಾಗ ನೆಡಬೇಕು? ಅನುಭವದಲ್ಲಿ ಅರಿಯುತ್ತ ಹೋದರೆ ಗಿಡ ಗೆಲುವು ಸಾಧ್ಯವಿದೆ. ಸಾಲುಮರದ ತಿಮ್ಮಕ್ಕ ದಂಪತಿಯಾಗಲಿ, ತಿಪಟೂರಿನ ಗ್ಯಾರಘಟ್ಟದ ಬೀರಜ್ಜ, ಪಾಂಡವಪುರ ತಾಲ್ಲೂಕಿನ ಸುಂಕಾತೊಣ್ಣೂರಿನ ಗೌಡೇಗೌಡ ಅವರು ಆಲದಮರಗಳನ್ನು ಬೆಳೆಸಿದ್ದು ಗೂಟ ಊರುವ ಸರಳ ತಂತ್ರದಲ್ಲಿಯೇ ಅಲ್ಲವೇ? ರಾಜ್ಯದ ಗಡಿನಾಡು ಕೇರಳದ ಮಿಯಪದವು ಕೃಷಿಕ ಚಂದ್ರಶೇಖರ ಚೌಟ ತಮಗೆ 60 ವರ್ಷ ತುಂಬಿದಾಗ ಊರ ರಸ್ತೆ ಅಂಚಿನಲ್ಲಿ 60 ಆಲದ ಗೂಟ ನೆಟ್ಟಿದ್ದರು, ಅವು ಮರವಾಗುತ್ತಿವೆ. ಸಸಿ ನೆಡುವುದು ಅರಣ್ಯ ಇಲಾಖೆ ಕೆಲಸ ಮಾತ್ರವಲ್ಲ, ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಸಾಧ್ಯವಾದ ರೀತಿಯಲ್ಲಿ ಭಾಗವಹಿಸುವುದು ಮುಖ್ಯ. ಸಸಿ ನೆಡುತ್ತ, ಗೂಟ ಊರುತ್ತ ನಾವೂ ಹೋಗಬಹುದು. ಮಣ್ಣಿನ ಅಗಳಗಳ ಮೇಲೆ ನಾವು ತಿಂದ ಹಣ್ಣಿನ ಬೀಜಗಳನ್ನು ಊರಬಹುದು. ಕಣ್ಣುಮುಚ್ಚಿ ಹಸಿರು ಹರಿಯುತ್ತ ಇಷ್ಟು ಕಾಲ ಭೂಮಿಗೆ ಭಾರವಾಗಿ ಬದುಕಿದ ತಪ್ಪಿಗೆ ಕಾಡಿನ ಭೂಮಿಯಲ್ಲಿ ಆಲ, ಅರಳಿ, ಬಿಳಿ ಬಸರಿಯ ನಿಸರ್ಗದ ಬುನಾದಿ ವೃಕ್ಷದ ಗೂಟ ನೆಡುತ್ತ ಪಕ್ಷಿ ಸಂಕುಲಕ್ಕೆ ನೂರ್ಕಾಲ ನೆರವಾಗಿ ಹಸಿರೀಕರಣಕ್ಕೆ ಊರುಗೋಲಾಗಬಹುದು.

ಸಸಿ ನಾಟಿಯ ಸುಲಭ ಕಲಿಕೆ

2001ರಿಂದ ಸಸಿ ನೆಡುವ ಕಾರ್ಯದ ನನ್ನ ಪುಟ್ಟ ಅನುಭವ ಹೇಳಬೇಕು. ಮೊದಲಿಗೆ ಎರಡು ಅಡಿ ಗುಂಡಿ ತೆಗೆದು ನಾಟಿ ಮಾಡುವ ಕ್ರಮ ಅನುಸರಿಸಿ ದಿನಕ್ಕೊಂದು ಸಸಿಯಂತೆ ವರ್ಷಕ್ಕೆ 365 ಸಸಿಗಳನ್ನು ನೆಡುತ್ತಿದ್ದೆ. ಈಗ ಕುಳಿ ತೆಗೆದು ನಾಟಿ ಮಾಡುವುದು ಬಿಟ್ಟು ನಾಲ್ಕೈದು ವರ್ಷಗಳಾಗಿವೆ. ಮಳೆಗಾಲ ಶುರುವಿನಲ್ಲಿ ಬೇರು ಕಿತ್ತ ಸಣ್ಣ ಸಣ್ಣ ಸಸಿ ಊರುವ ಸುಲಭ ಕ್ರಮ ಅನುಸರಿಸಿದ್ದೇನೆ. ಮನೆಯ ಸುತ್ತಮುತ್ತ ಮಾವಿನ ಗೊರಟೆ ರಾಶಿ ಇದ್ದೇ ಇರುತ್ತದೆ. ಮಳೆಯಲ್ಲಿ ಯಾವುದೋ ಕಾಡು ಹಣ್ಣಿನ ಮರಗಳ ಕೆಳಗಡೆ ಹುಟ್ಟಿದ ಸಹಸ್ರಾರು ಸಸಿಗಳು ಸಿಗುತ್ತವೆ. ಅದರಲ್ಲಿ ಕೆಲವನ್ನು ಬೇರಿಗೆ (ಬೇರು ಟೋಪಿಗೆ) ಗಾಯವಾಗದಂತೆ ಕಿತ್ತು ಮಳೆ ಶುರುವಾದ ತಿಂಗಳೊಳಗೆ ಭೂಮಿ ಬಿಸಿಯಿದ್ದಾಗ ಚೂಪಾದ ಕೋಲಿನ ನೆರವಿನಿಂದ ನೆಡುವ ಕ್ರಮ, ಸಸಿ ಬುಡಕ್ಕೆ ತುಸು ತರಗೆಲೆ ಹಾಕಿದರೆ ಸಸಿಗೆ ಸಂಭ್ರಮ. ಒಂದೆರಡು ತಾಸಿನಲ್ಲಿ ಈ ಕಾರ್ಯ ಮಾಡಬಹುದು.

ಇದು ಸಸಿ ಬೆಳೆಸುವ ಕ್ರಮವೇ ಹೊರತೂ ಶಿಸ್ತಿನ ಸಾಲಿನ ನಾಟಿಯಲ್ಲ! ಫಲವತ್ತಾದ ಮಣ್ಣಿರುವ ಜಾಗ, ಸತ್ತ ಮರದ ಬುಡ, ಮುಳ್ಳುಕಂಟಿ, ಮಣ್ಣಿನ ಅಗಳ, ತರಗೆಲೆ ಬಿದ್ದ ಜಾಗ, ಫಲವತ್ತಾದ ಮಣ್ಣು ಶೇಖರಣೆಯಾಗುವ ತಗ್ಗಿನ ನೆಲೆಯಲ್ಲಿ ಹೀಗೆ ನೆಡಲು ಸ್ಥಳ ಆಯ್ಕೆ ಮಾಡಿಕೊಳ್ಳಬಹುದು. ಬಿಸಿಲು ಬರಕ್ಕೆ ಸಸಿಗಳು ಹೆದರಿಲ್ಲ, ಕಳೆದ ವರ್ಷ ನೆಟ್ಟ ನೂರಾರು ಮಾವಿನಸಸಿಗಳಲ್ಲಿ ಒಂದೆರಡು ಮಾತ್ರ ಸತ್ತಿರಬಹುದು! ಎರಡು ಮೂರು ಅಡಿಯೆತ್ತರ ಬೆಳೆದ ಗಿಡದ ಬುಡದಲ್ಲಿ ಒಣಗಿದ ಮಾವಿನ ಗೊರಟೆ ಕೂಡಾ ಈಗ ಕಾಣುತ್ತದೆ. ಅಂದರೆ ಯಾವ ಆಳದ ಗುಂಡಿ ತೆಗೆಯದೇ, ಗುದ್ದಲಿ, ಹಾರೆ ಬಳಸದೇ ಪುಟ್ಟ ಚೂಪಾದ ಕೋಲಿನ ಸಹಾಯದಲ್ಲಿ ಎಳೆ ಸಸಿಗಳ ಬೇರನ್ನು ಸೂಕ್ತ ಜಾಗದಲ್ಲಿ ಮಣ್ಣಿಗೆ ಊರಿದಕ್ಕೆ ಸಾಕ್ಷಿಯಿದು.

ಸಸಿಯ ಬೇರು ಆಳಕ್ಕೆ ಹೋದರೆ ನೀರಿಲ್ಲದೇ ಬದುಕುತ್ತವೆ. ನಮ್ಮ ನೈಸರ್ಗಿಕ ಕಾಡು ಬೆಳೆದಿದ್ದು ಹೇಗೆ? ಗಮನಿಸುತ್ತ ಹೋಗಬೇಕು, ಗಿಡದ ಬುಡದಲ್ಲಿ ತೇವಾಂಶ ಉಳಿಸಲು ತರಗೆಲೆ ಕಸಕಡ್ಡಿ ಮುಚ್ಚಿಗೆ ಮಾಡಿದರೆ ಅನುಕೂಲ. ನಮ್ಮ ಕಾಡುಗಳಲ್ಲಿ ಬಹು ಬೇಗ ಬೆಳೆಯುವ ಹಲವು ಮೃದು ಜಾತಿಯ ಸಸ್ಯಗಳಿವೆ. ಅವನ್ನು ನೆಟ್ಟು ಭೂಮಿಗೆ ಫಲವತ್ತತೆ ಹೆಚ್ಚಿಸುವ ಕಾರ್ಯ ಮಾಡಬಹುದು. ಮಣ್ಣು ಬದಲಾದರೆ ಮರ ದಟ್ಟನೆಯೂ ಹೆಚ್ಚುತ್ತದೆ. ನಮ್ಮ ಸುತ್ತಮುತ್ತ ನೋಡುತ್ತಾ ಹೋದರೆ ಕಾಡಿನಲ್ಲಿ ಕಲಿಯಲು ಬಹಳವಿದೆಯೆಂಬುದು 24 ವರ್ಷಗಳಲ್ಲಿ ಅನುಭವಕ್ಕೆ ಬಂದಿದೆ.

ಸಸಿ ನಾಟಿಯ ಸುಲಭ ಕಲಿಕೆ 2001ರಿಂದ ಸಸಿ ನೆಡುವ ಕಾರ್ಯದ ನನ್ನ ಪುಟ್ಟ ಅನುಭವ ಹೇಳಬೇಕು. ಮೊದಲಿಗೆ ಎರಡು ಅಡಿ ಗುಂಡಿ ತೆಗೆದು ನಾಟಿ ಮಾಡುವ ಕ್ರಮ ಅನುಸರಿಸಿ ದಿನಕ್ಕೊಂದು ಸಸಿಯಂತೆ ವರ್ಷಕ್ಕೆ 365 ಸಸಿಗಳನ್ನು ನೆಡುತ್ತಿದ್ದೆ. ಈಗ ಕುಳಿ ತೆಗೆದು ನಾಟಿ ಮಾಡುವುದು ಬಿಟ್ಟು ನಾಲ್ಕೈದು ವರ್ಷಗಳಾಗಿವೆ. ಮಳೆಗಾಲ ಶುರುವಿನಲ್ಲಿ ಬೇರು ಕಿತ್ತ ಸಣ್ಣ ಸಣ್ಣ ಸಸಿ ಊರುವ ಸುಲಭ ಕ್ರಮ ಅನುಸರಿಸಿದ್ದೇನೆ. ಮನೆಯ ಸುತ್ತಮುತ್ತ ಮಾವಿನ ಗೊರಟೆ ರಾಶಿ ಇದ್ದೇ ಇರುತ್ತದೆ. ಮಳೆಯಲ್ಲಿ ಯಾವುದೋ ಕಾಡು ಹಣ್ಣಿನ ಮರಗಳ ಕೆಳಗಡೆ ಹುಟ್ಟಿದ ಸಹಸ್ರಾರು ಸಸಿಗಳು ಸಿಗುತ್ತವೆ. ಅದರಲ್ಲಿ ಕೆಲವನ್ನು ಬೇರಿಗೆ (ಬೇರು ಟೋಪಿಗೆ) ಗಾಯವಾಗದಂತೆ ಕಿತ್ತು ಮಳೆ ಶುರುವಾದ ತಿಂಗಳೊಳಗೆ ಭೂಮಿ ಬಿಸಿಯಿದ್ದಾಗ ಚೂಪಾದ ಕೋಲಿನ ನೆರವಿನಿಂದ ನೆಡುವ ಕ್ರಮ ಸಸಿ ಬುಡಕ್ಕೆ ತುಸು ತರಗೆಲೆ ಹಾಕಿದರೆ ಸಸಿಗೆ ಸಂಭ್ರಮ. ಒಂದೆರಡು ತಾಸಿನಲ್ಲಿ ಈ ಕಾರ್ಯ ಮಾಡಬಹುದು. ಇದು ಸಸಿ ಬೆಳೆಸುವ ಕ್ರಮವೇ ಹೊರತೂ ಶಿಸ್ತಿನ ಸಾಲಿನ ನಾಟಿಯಲ್ಲ! ಫಲವತ್ತಾದ ಮಣ್ಣಿರುವ ಜಾಗ ಸತ್ತ ಮರದ ಬುಡ ಮುಳ್ಳುಕಂಟಿ ಮಣ್ಣಿನ ಅಗಳ ತರಗೆಲೆ ಬಿದ್ದ ಜಾಗ ಫಲವತ್ತಾದ ಮಣ್ಣು ಶೇಖರಣೆಯಾಗುವ ತಗ್ಗಿನ ನೆಲೆಯಲ್ಲಿ ಹೀಗೆ ನೆಡಲು ಸ್ಥಳ ಆಯ್ಕೆ ಮಾಡಿಕೊಳ್ಳಬಹುದು. ಬಿಸಿಲು ಬರಕ್ಕೆ ಸಸಿಗಳು ಹೆದರಿಲ್ಲ ಕಳೆದ ವರ್ಷ ನೆಟ್ಟ ನೂರಾರು ಮಾವಿನಸಸಿಗಳಲ್ಲಿ ಒಂದೆರಡು ಮಾತ್ರ ಸತ್ತಿರಬಹುದು! ಎರಡು ಮೂರು ಅಡಿಯೆತ್ತರ ಬೆಳೆದ ಗಿಡದ ಬುಡದಲ್ಲಿ ಒಣಗಿದ ಮಾವಿನ ಗೊರಟೆ ಕೂಡಾ ಈಗ ಕಾಣುತ್ತದೆ. ಅಂದರೆ ಯಾವ ಆಳದ ಗುಂಡಿ ತೆಗೆಯದೇ ಗುದ್ದಲಿ ಹಾರೆ ಬಳಸದೇ ಪುಟ್ಟ ಚೂಪಾದ ಕೋಲಿನ ಸಹಾಯದಲ್ಲಿ ಎಳೆ ಸಸಿಗಳ ಬೇರನ್ನು ಸೂಕ್ತ ಜಾಗದಲ್ಲಿ ಮಣ್ಣಿಗೆ ಊರಿದಕ್ಕೆ ಸಾಕ್ಷಿಯಿದು. ಸಸಿಯ ಬೇರು ಆಳಕ್ಕೆ ಹೋದರೆ ನೀರಿಲ್ಲದೇ ಬದುಕುತ್ತವೆ. ನಮ್ಮ ನೈಸರ್ಗಿಕ ಕಾಡು ಬೆಳೆದಿದ್ದು ಹೇಗೆ? ಗಮನಿಸುತ್ತ ಹೋಗಬೇಕು ಗಿಡದ ಬುಡದಲ್ಲಿ ತೇವಾಂಶ ಉಳಿಸಲು ತರಗೆಲೆ ಕಸಕಡ್ಡಿ ಮುಚ್ಚಿಗೆ ಮಾಡಿದರೆ ಅನುಕೂಲ. ನಮ್ಮ ಕಾಡುಗಳಲ್ಲಿ ಬಹು ಬೇಗ ಬೆಳೆಯುವ ಹಲವು ಮೃದು ಜಾತಿಯ ಸಸ್ಯಗಳಿವೆ. ಅವನ್ನು ನೆಟ್ಟು ಭೂಮಿಗೆ ಫಲವತ್ತತೆ ಹೆಚ್ಚಿಸುವ ಕಾರ್ಯ ಮಾಡಬಹುದು. ಮಣ್ಣು ಬದಲಾದರೆ ಮರ ದಟ್ಟನೆಯೂ ಹೆಚ್ಚುತ್ತದೆ. ನಮ್ಮ ಸುತ್ತಮುತ್ತ ನೋಡುತ್ತಾ ಹೋದರೆ ಕಾಡಿನಲ್ಲಿ ಕಲಿಯಲು ಬಹಳವಿದೆಯೆಂಬುದು 24 ವರ್ಷಗಳಲ್ಲಿ ಅನುಭವಕ್ಕೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.