ಮೆಣಸಿನಕಾಯಿ, ಭತ್ತ, ಜೋಳ ಬೆಳೆಯುತ್ತಿದ್ದ ಬಳ್ಳಾರಿಯಲ್ಲಿ ಈಗ್ಗೆ 50 ವರ್ಷಗಳ ಹಿಂದೆ, ಅಂಜೂರ ಬೆಳೆಯಲು ಹೊರಟಾಗ ಜನರೆಲ್ಲ ಅನುಮಾನ, ವ್ಯಂಗ್ಯದ ಕಣ್ಣುಗಳಿಂದ ನೋಡಿದ್ದರು. ‘ಇದೆಂಥಾ ಬೆಳೆಯೋ, ಈ ಬಿಸಿಲಿಗೆ ಬಾಳುತ್ತದೋ, ಮಾರುಕಟ್ಟೆ ಹೇಗೋ’ ಎಂಬ ಪ್ರಶ್ನೆಗಳು ಹಲವರ ಮನದಲ್ಲಿ ತೋಯ್ದಾಡಿದ್ದವು. ಆದರೆ, ಇಲ್ಲಿನ ಕರಿಮಣ್ಣಿಗೆ ಒಗ್ಗಿಕೊಂಡ ಅಂಜೂರ ಸೊಂಪಾಗಿ ಬೆಳೆಯಿತು. ಭರಪೂರ ಫಸಲನ್ನೂ ಕೊಟ್ಟಿತು.

ಒಂದು ಕಾಲಕ್ಕೆ ಜನರು ಶಂಕೆಯಿಂದ ನೋಡಿದ್ದ ಬೆಳೆಯೊಂದು ನೋಡ ನೋಡುತ್ತಲೇ ಬಳ್ಳಾರಿಯ ಹೊಲಗಳನ್ನು ಆವರಿಸತೊಡಗಿತು. ಚೆನ್ನೈ, ಹೈದರಾಬಾದ್, ಬೆಂಗಳೂರು, ಕೋಲ್ಕತ್ತವರೆಗೆ ಮಾರಾಟ ಆಗತೊಡಗಿತು. 2000 ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿಕೊಂಡ ಅಂಜೂರ ಈಗ ಬಳ್ಳಾರಿ ಜಿಲ್ಲೆಯಲ್ಲಿ ಲಾಭದಾಯಕ ಬೆಳೆ. ಹಲವು ಕುಟುಂಬಗಳಿಗೆ ಆಸರೆ. ಇಷ್ಟೇ ಅಲ್ಲ, ಅಂಜೂರ ಈಗ ಉದ್ಯಮದ ಸಾಧ್ಯತೆಗಳನ್ನು ಜನರ ಮುಂದೆ ಹರಿಡಿದೆ.

ಅತ್ಯಂತ ಮೃದುವಾದ ಸ್ವಾದಿಷ್ಟವಾದ ಅಂಜೂರ ಪೌಷ್ಟಿಕಾಂಶಗಳ ಆಗರ. ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ನಾಗರಿಕತೆಗಳೊಂದಿಗೆ ಬೆಸೆದುಕೊಂಡಿರುವ, ಅವರ ಆಹಾರ ಪದ್ಧತಿಯಲ್ಲಿ ಪ್ರಾಧಾನ್ಯತೆ ಪಡೆದಿರುವ ಅಂಜೂರ ಜಗತ್ತಿನ ಅತ್ಯಂತ ಪುರಾತನ ಹಣ್ಣಿನ ಬೆಳೆಗಳಲ್ಲಿ ಒಂದು.

ಮಧ್ಯಪ್ರಾಚ್ಯದಲ್ಲಿ ‘ಬಡವರ ಹಣ್ಣು’ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದ ಅಂಜೂರ, ನಾಗರಿಕತೆಗಳು ಬೆಳೆದಂತೆ, ಜಾಗತಿಕ ವ್ಯಾಪಾರ ಸಂಪರ್ಕಗಳು ವಿಸ್ತಾರಗೊಂಡಂತೆ ಯಾವುದೋ ಕಾಲಘಟ್ಟದಲ್ಲಿ ಭಾರತಕ್ಕೂ ಕಾಲಿಟ್ಟಿತು. ಅಂಜೂರಕ್ಕೆ ಕಡಿಮೆ ತೇವಾಂಶವಿರುವ ಫಲವತ್ತಾಗಿರುವ ಕಡಿಮೆ ಮಳೆಯಾಗುವ ಒಣಭೂಮಿ ಹೇಳಿಮಾಡಿಸಿದ್ದು. ಹೀಗಾಗಿ ಭಾರತದ ಕೆಲವೇ ಕೆಲವು ಪ್ರದೇಶಗಳಿಗೆ ಅಂಜೂರ ಒಗ್ಗಿಕೊಂಡಿದೆ.

ಅಂಜೂರವನ್ನು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅಂಜೂರದ ತೋಟಗಳಿವೆ, ಆದರೆ ಬಳ್ಳಾರಿಯೇ ಅಂಜೂರದ ತವರೂರು.

ಅತ್ತ ಗಿಡವೂ ಅಲ್ಲದ, ಇತ್ತ ಮರವಾಗಿಯೂ ಬೆಳೆಯದ ಪೊದೆಯಂಥ ರಚನೆಯುಳ್ಳ ಅಂಜೂರದ ಬೆಳೆಯನ್ನು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಲಕ್ಷ್ಮೀಪುರ, ಕಲ್ಲುಕಂಬ, ಸೋಮಲಾಪುರ, ಮುಷ್ಟಕಟ್ಟೆ, ಬಾದನಹಟ್ಟಿ, ಸಿರುಗುಪ್ಪ ತಾಲ್ಲೂಕಿನ ಕೊಂಚಿಗೇರಿ, ಸಿರಿಗೇರಿ, ದಾಸಾಪುರಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.

‘ಕಟಾವು ಮಾಡಿದ ಒಂದು ಒಂದೂವರೆ ದಿನದಲ್ಲೇ ಅಂಜೂರ ಕೊಳೆತುಬಿಡುತ್ತದೆ. ಹೀಗಾಗಿ ಅಂದೇ ಕಟಾವು ಮಾಡಿ, ಅಂದೇ ಮಾರಾಟ ಮಾಡಬೇಕು’ ಎನ್ನುತ್ತಾರೆ ಕಲ್ಲುಕಂಬ ಗ್ರಾಮದ ಯುವ ರೈತ ವಿಠಲ್.

‘ಅಂಜೂರದ ಸಸಿಯನ್ನು ಒಮ್ಮೆ ನಾಟಿ ಮಾಡಿದರೆ ಅದರಿಂದ ನಿರಂತರವಾಗಿ ಫಸಲು ಪಡೆಯಬಹುದು. ಕೋವಿಡ್ಗೂ ಮೊದಲು ಬಳ್ಳಾರಿ ಜಿಲ್ಲೆಯಲ್ಲಿ 2000 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಅಂಜೂರವನ್ನು ಬೆಳೆಯಲಾಗುತ್ತಿತ್ತು. ಕೆ.ಜಿಗೆ ₹100ರಿಂದ ₹150ರವರೆಗೂ ಮಾರಾಟ ಮಾಡಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಮಾರುಕಟ್ಟೆ ಸಿಗದೇ ಅಂಜೂರದ ಹಣ್ಣು ಗಿಡದಲ್ಲೇ ಮಾಗಿ, ಉದುರಿ ಕೊಳೆಯುತ್ತಿತ್ತು. ನಾವು ಇನ್ನಿಲ್ಲದ ಸಂಕಷ್ಟಕ್ಕೆ ಗುರಿಯಾದೆವು. ಅಕ್ಕಪಕ್ಕದ ಹೊಲದವರು ಗಿಡಗಳನ್ನು ಕಿತ್ತೆಸೆದರು. ನಾವು ಹಾಗೇ ಉಳಿಸಿಕೊಂಡೆವು. ಸದ್ಯ ಮಾರುಕಟ್ಟೆ ಚೆನ್ನಾಗಿದೆ. ಅಂಜೂರ ಕೈ ಹಿಡಿದಿದೆ’ ಎಂದರು ಕುರುಗೋಡಿನ ರೈತ ರಮೇಶ್.

ಕೋವಿಡ್ ನಂತರದ ಕಾಲಘಟ್ಟದಲ್ಲಿ ಅಂಜೂರದ ಬೆಳೆ ಬಳ್ಳಾರಿ ಜಿಲ್ಲೆಯಲ್ಲಿ 500 ಹೆಕ್ಟೇರ್ಗಳಿಗಿಂತಲೂ ಕಡಿಮೆ ಪ್ರದೇಶಕ್ಕೆ ಕುಸಿದಿತ್ತು. ಈಗ ಅದನ್ನು ಬೆಳೆಯುವವರ ಪ್ರಮಾಣ ಮತ್ತೆ ಏರುಮುಖವಾಗುತ್ತಾ ಸಾಗಿದೆ. ಸದ್ಯ 500ರಿಂದ 750 ಹೆಕ್ಟೇರ್ ಪ್ರದೇಶವನ್ನು ಅಂಜೂರ ಆವರಿಸಿಕೊಂಡಿದೆ. ರಾಜ್ಯದ ರಾಯಚೂರು, ಚಿತ್ರದುರ್ಗ, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸೀಮಿತ ಪ್ರದೇಶದಲ್ಲಿ ಅಂಜೂರವನ್ನು ಬೆಳೆಯಲಾಗುತ್ತಿದೆ. ಶ್ರೀರಂಗಪಟ್ಟಣದಲ್ಲಿ ಈಗ ತೋಟಗಾರಿಕೆ ಇಲಾಖೆ ಮಾತ್ರ 80 ಹೆಕ್ಟೇರ್ ಪ್ರದೇಶದಲ್ಲಿ ಅಂಜೂರವನ್ನು ಉಳಿಸಿಕೊಂಡಿದೆ.

ಗಣಿನಾಡಿನಲ್ಲಿ ಬೆಳೆಯಲಾಗುತ್ತಿರುವ ಅಂಜೂರವನ್ನು ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಕಳುಹಿಸುವ ಬಯಕೆ ಇಲ್ಲಿನ ರೈತರಿಗೆ ಇದೆಯಾದರೂ, ಹಣ್ಣು ಬೇಗ ಕೆಡುವುದರಿಂದ ಅದು ಸಾಧ್ಯವಾಗುತ್ತಿಲ್ಲ.

‘2018ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ಒಂದು ಜಿಲ್ಲೆ ಒಂದು ಉತ್ಪನ್ನ’ದ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯಿಂದ ಅಂಜೂರವನ್ನು ಆಯ್ಕೆ ಮಾಡಲಾಗಿತ್ತು. ₹29 ಲಕ್ಷ ಮೊತ್ತದ ಘಟಕ ವೆಚ್ಚದಲ್ಲಿ ಅಂಜೂರದ ಬೆಳೆ, ಅದರ ಉಪ ಉತ್ಪನ್ನ ತಯಾರಿಸಲು ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಇದಕ್ಕೆ ಶೇಕಡ 50ರಷ್ಟು ಸಬ್ಸಿಡಿಯನ್ನೂ ನೀಡಲಾಗಿತ್ತು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ. ಆದರೆ, ಆಗಷ್ಟೇ ಬಿದ್ದದ್ದ ಕೋವಿಡ್ ಹೊಡೆತದಿಂದಾಗಿ ಸಾಲ ಸೌಲಭ್ಯ ಪಡೆಯಲು ಅಷ್ಟಾಗಿ ಯಾರೂ ಗಮನ ಕೊಡಲಿಲ್ಲ. ಹೀಗಾಗಿ ಕೆಲವರಷ್ಟೇ ಈ ಯೋಜನೆ ಲಾಭ ಪಡೆದರು.

ಉದ್ಯಮದ ಅವಕಾಶ

ಅಂಜೂರ ಕಟಾವು ಮಾಡಿದ ಒಂದರಿಂದ ಎರಡು ದಿನಗಳಲ್ಲೇ ಕೊಳೆಯುತ್ತದೆ. ಇದು ಅಂಜೂರಕ್ಕಿರುವ ಮಾರುಕಟ್ಟೆಯ ಮಿತಿ. ಕೋವಿಡ್ ಕಾಲದಲ್ಲಿ ಸಾವಿರಾರು ರೈತರು ಸಂಕಷ್ಟಕ್ಕೆ ಗುರಿಯಾಗಿದ್ದನ್ನು ಗಮನಿಸಿದ ಕರ್ನಾಟಕ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಅಂಜೂರದ ಉಪ ಉತ್ಪನ್ನಗಳನ್ನು ತಯಾರಿಸುವ ಬಗೆಯನ್ನು ರೈತರಿಗೆ ಹೇಳಿಕೊಟ್ಟರು. ಅಂಜೂರದ ರೋಲ್, ಬರ್ಫಿಗಳನ್ನು ಮಾಡಲು ತಿಳಿಸಿಕೊಟ್ಟರು.

ಅಂಜೂರದ ಮಿತಿ ವಿಸ್ತಾರವಾಗುತ್ತಾ ಹೋಯಿತು. ರೈತರು ಅಂಜೂರವನ್ನು ಮಾರಾಟ ಮಾಡುವುದರ ಜತೆಗೆ, ಅದರ ಉಪ ಉತ್ಪನ್ನಗಳನ್ನೂ ತಯಾರಿಸಿ ಮಾರಾಟ ಮಾಡಲೂ ಆರಂಭಿಸಿದರು. ಅಂಜೂರ ಒಂದೆರಡು ದಿನದಲ್ಲಿ ಹಾಳಾದರೆ, ಅದರ ಉಪ ಉತ್ಪನ್ನಗಳು ಮೂರು ತಿಂಗಳ ವರೆಗೆ ತಿನ್ನಲು ಯೋಗ್ಯ. ಹೀಗಾಗಿ ಅವುಗಳನ್ನು ದೆಹಲಿ ವರೆಗೆ ಮಾರಾಟ ಮಾಡಲಾಗುತ್ತಿದೆ. 100 ರಿಂದ 250 ಗ್ರಾಂ ತೂಕದ ರೋಲ್ಗಳನ್ನು ಪ್ಲಾಸ್ಟಿಕ್ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡಿ ₹300ರ ವರೆಗೆ ಮಾರಾಟ ಮಾಡಲಾಗುತ್ತಿದೆ.

ಸದ್ಯ ಈ ಉಪ ಉತ್ಪನ್ನಗಳನ್ನು ಮಾಡಿ ಹಲವು ಕುಟುಂಬಗಳು ಜೀವನ ನಡೆಸುತ್ತಿವೆ. ಉಪ ಉತ್ಪನ್ನ ತಯಾರಿಕಾ ಕೇಂದ್ರಗಳಲ್ಲಿ ಹಲವರು ಉದ್ಯೋಗಗಳನ್ನು ಕಂಡು ಕೊಂಡಿದ್ದಾರೆ. ಈಗ ಅಂಜೂರ ತೋಟಗಾರಿಕೆ ಬೆಳೆ ಎಂಬ ಮಿತಿಯನ್ನೂ ಮೀರಿ, ಉದ್ಯಮದ ಸಾಧ್ಯತೆಯನ್ನು ರೈತರ ಮುಂದಿಟ್ಟಿದೆ.

ಮಲಬದ್ಧತೆಗೆ ರಾಮಬಾಣ

‘ಫಿಕಸ್ ಕ್ಯಾರಿಕಾ’ ಎಂಬ ವೈಜ್ಞಾನಿಕ ಹೆಸರಿನ ಅಂಜೂರ, ಹಿಪ್ಪುನೇರಳೆ ಜಾತಿಗೆ ಸೇರಿದೆ. ಕ್ಯಾಲ್ಸಿಯಂ, ಪೊಟ್ಯಾಸಿಯಂ, ರಂಜಕ ಮತ್ತು ಕಬ್ಬಿಣಾಂಶವನ್ನು ಹೆಚ್ಚಾಗಿ ಹೊಂದಿದೆ. ಹೀಗಾಗಿ ಇದು ಅತ್ಯಂತ ಪೌಷ್ಟಿಕ ಆಹಾರ. ಜತೆಗೆ ಇದರಲ್ಲಿ ನಾರಿನಾಂಶವೂ ಇರುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳಿಗೆ ರಾಮಬಾಣ ಎನ್ನುತ್ತಾರೆ ವೈದ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.