ಪ್ರಸಿದ್ಧ ಕಂಪನಿಯೊಂದರ ಸಿಇಒ ಲೈವ್ ವಿಡಿಯೊದ ಮೂಲಕ ತಮ್ಮ ಸಂಸ್ಥೆಯ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಮತ್ತು ಗ್ರಾಹಕರು ಬೇರೆ ಕಂಪನಿಗಳ ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಕಂಪನಿಗೆ ಕೋಟ್ಯಂತರ ಡಾಲರ್ ನಷ್ಟವಾಗಿದೆ ಮತ್ತು ನೈತಿಕ ಹೊಣೆ ಹೊತ್ತು ತಾನು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಘೋಷಿಸಿದರು. ಒಂದು ಕಡೆ ಈ ವಿಡಿಯೊ ವೈರಲ್ ಆಗುತ್ತಿದ್ದರೆ ಮತ್ತೊಂದು ಕಡೆ ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಷೇರು ಮೌಲ್ಯ ದೊಡ್ಡ ಕುಸಿತ ಕಂಡಿತು. ಕಂಪನಿಯ ಸಿಇಒ ಅವರ ಡೀಪ್‌ಫೇಕ್ ವಿಡಿಯೊ ಸೃಷ್ಟಿಸಿ ವೈರಲ್ ಮಾಡಿದ ಅಪರಾಧಿಗಳು ಕಂಪನಿಗೆ ಮತ್ತು ಷೇರುದಾರರಿಗೆ ದೊಡ್ಡ ಪ್ರಮಾಣದ ನಷ್ಟವನ್ನುಂಟು ಮಾಡಿದ್ದರು. ಈ ರೀತಿ ವಿಡಿಯೊ ಮತ್ತು ಆಡಿಯೊ ಲೈವ್‌ಗಳಲ್ಲಿ ಕೂಡ ಡೀಪ್‌ಫೇಕ್ ಬಳಸಿ ರಾಜಕಾರಣಿಗಳು ಹಿರಿಯ ಅಧಿಕಾರಿಗಳು ಗಣ್ಯರು ಮತ್ತು ಉದ್ಯಮಿಗಳಿಗೆ ಮುಜುಗರ ಮತ್ತು ಸಂಕಷ್ಟ ತಂದಿಡುತ್ತಿರುವ ಅಪರಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮುಂಬರುವ ಅಮೆರಿಕ ಅಧ್ಯಕ್ಷರ ಚುನಾವಣೆ ಸಮಯದಲ್ಲಿ ಅಭ್ಯರ್ಥಿ ಅಥವಾ ಪಕ್ಷದ ಪರ ಮತ್ತು ವಿರುದ್ಧವಾಗಿ ಜನಾಭಿಪ್ರಾಯ ಸೃಷ್ಟಿಸಲು ದೊಡ್ಡ ಪ್ರಮಾಣದಲ್ಲಿ ಡೀಪ್‌ಫೇಕ್ ಬಳಸುವ ಸಾಧ್ಯತೆ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.