ಕಲೆಯ ಭಾಷೆ ಎಂಬ ಹೆಸರಿನ ಕತೆಯನ್ನು ಎಸ್. ದಿವಾಕರ ಭಾಷಾಂತರಿಸಿದ, ಜಗತ್ತಿನ ಅತಿ ಸಣ್ಣಕತೆಗಳು ಸಂಗ್ರಹದಿಂದ ಆಯ್ದುಕೊಂಡಿದ್ದೇನೆ. ಸ್ಪ್ಯಾನಿಷ್ ಮೂಲದ ಈ ಕತೆಯನ್ನು ಬರೆದವನು ಎದುವರ್ದೊ ಗಾಲಿಯಾನೊ. ಹವಾನಾ ನಗರದಲ್ಲಿ ರದ್ದಿ ಪೇಪರ್ ಮಾರುತ್ತ, ಬೂಟ್ ಪಾಲಿಷ್ ಮಾಡುತ್ತ ಜೀವನ ಸಾಗಿಸುತ್ತಿದ್ದ ಚಿನೊಲೋಪೆ ಬಡತನದಿಂದ ಪಾರಾಗಲು ನ್ಯೂಯಾರ್ಕಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಯಾರೊ ಕೊಟ್ಟ ಕ್ಯಾಮೆರಾ ಹಿಡಿದು ಬೀದಿಗಳನ್ನು ಅಲೆಯುತ್ತಿದ್ದಾಗ ಕ್ಷೌರಿಕನ ಅಂಗಡಿಯಲ್ಲಿ ಅನಾಸ್ತಾಸಿಯಾ ಎಂಬ ದರೋಡೆಕೋರ ಕ್ಷೌರ ಮಾಡಿಸಿಕೊಳ್ಳುತ್ತಿರುವಾಗ ಗುಂಡಿಗೆ ಆಹುತಿಯಾಗುವ ಫೋಟೊ ತೆಗೆದು ಲಕ್ಷಾಧೀಶನಾಗಿಬಿಡುತ್ತಾನೆ. ಅವನು ಸಾವನ್ನು ಚಿತ್ರೀಕರಿಸಿದ್ದ. ಸಾವು ಸತ್ತವನ ಮುಖದಲ್ಲಿರಲಿಲ್ಲ, ಅವನನ್ನು ಕೊಂದವನಲ್ಲೂ ಇರಲಿಲ್ಲ. ಸಾವು ಇದ್ದದ್ದು ಎಲ್ಲವನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ ಕ್ಷೌರಿಕನ ಮುಖದಲ್ಲಿ.

ಎಂದೋ ಓದಿ ಇಷ್ಟಪಟ್ಟ ಈ ಕತೆ ಯಶವಂತ ಚಿತ್ತಾಲರ, ‘ನನ್ನ ಕಥಾನಾಯಕ’, ‘ಫ್ರಾಂಝ್ ಕಾಫ್ಕಾ ಹಾಗೂ ಸೂತಕದ ಮನೆಯಲ್ಲಿ ಗಂಜಿ ಊಟ’ ಎಂಬ ಲೇಖನವನ್ನು ಓದಿದ ನಂತರ ನೆನಪಾಗಿ ಕಾಡತೊಡಗಿತು. ಚಿತ್ತಾಲರ ಕಥನಕಲೆ ಮತ್ತು ಜೀವನ ದರ್ಶನಗಳ ಅವಿಚ್ಛಿನ್ನ ಆಕೃತಿಯನ್ನು ಕತೆ ಸ್ಪಷ್ಟಗೊಳಿಸಿತು. ಈ ಎರಡೂ ಕಥಾರೂಪ ಪಠ್ಯಗಳು ಪರಸ್ಪರ ಬೆಳಕು ಚೆಲ್ಲಿದಾಗ ನಾನು ಕಂಡ ಚಿತ್ರಕೂಟವನ್ನು ತೋರಿಸುವ ಯತ್ನ ಇಲ್ಲಿದೆ.

ಸಾವು ಚಿತ್ತಾಲರನ್ನು ನಿಗೂಢವಾಗಿ ಕಾಡಿದ ಕಥಾವಸ್ತುಗಳಲ್ಲಿ ಒಂದು. ಟಾಟಾ ಮೆಮೊರಿಯಲ್ ಆಸ್ಪತ್ರೆಯಲ್ಲಿ ಮಲಗಿದ ಕ್ಯಾನ್ಸರ್ ರೋಗಿಯೇ ಸದ್ಯದ ಕಥಾನಕದ ನಾಯಕ. ತನ್ನ ಆಯುಷ್ಯ ಇನ್ನು ಎರಡು ತಿಂಗಳಿಗಿಂತ ಹೆಚ್ಚು ಇಲ್ಲ ಎಂದು ಡಾಕ್ಟರಿಂದಲೇ ತಿಳಿದ ಸಂದರ್ಭದಲ್ಲಿ ಕಾದಂಬರಿ ಬರೆಯುವ ಹುಚ್ಚು ಹಂಬಲವನ್ನು ಅವನು ವಿಶ್ಲೇಷಿಸಲು ತೊಡಗಿದ್ದಾನೆ. ಇನ್ನೂ ಬೆಳಕು ಕಂಡಿರದ ತನ್ನ ಬರವಣಿಗೆಯ ಎಲ್ಲ ಹಸ್ತಪ್ರತಿಗಳನ್ನು ತಾನು ಸತ್ತ ಮೇಲೆ ಸುಟ್ಟು ಹಾಕಬೇಕೆಂದು ಗೆಳೆಯ ಬ್ರಾಡನಿಗೆ ಯಾಕೆ ಕಾಫ್ಕಾ ಹೇಳಿದ? ತಾನೇ ಸುಡಬಹುದಿತ್ತಲ್ಲ? ಎಂಬುದೇ ಅವನ ಪ್ರಶ್ನೆ. ತನ್ನ ಕಥಾನಾಯಕನಿಗೂ ಕಾಫ್ಕಾನಿಗೂ ಇರುವ ವ್ಯತ್ಯಾಸವನ್ನು ಚಿತ್ತಾಲರು ಸ್ಪಷ್ಟಪಡಿಸುತ್ತಾರೆ. ತಾನು ಸತ್ತ ನಂತರ ತನ್ನ ಸಾಹಿತ್ಯ ನಾಶವಾಗಬೇಕೆಂದು ಕಾಫ್ಕಾ ಅಪೇಕ್ಷಿಸಿದರೆ ಚಿತ್ತಾಲರ ನಾಯಕ ತಾನು ಸಾಯುವ ಮುನ್ನ ಸಾಹಿತ್ಯ ಕೃತಿಯೊಂದು ಹುಟ್ಟಿ ಬರಲೆಂದು ಬರೆಯುತ್ತಿದ್ದಾನೆ.

ಗೆಳೆಯ ತನ್ನ ಬೇಡಿಕೆಯನ್ನು ಮನ್ನಿಸದೇ ಸುಟ್ಟು ಹಾಕಲು ಹಿಂದೆಗೆಯಬಹುದು ಎಂಬ ಕಾಫ್ಕಾನ ಆಸೆಯಲ್ಲಿ ಸಾಹಿತ್ಯದಲ್ಲಿ ತಾನು ಅಜರಾಮರವಾಗಿ ಇರಬೇಕೆಂಬ ಸುಪ್ತ ಆಸೆ ಇದ್ದಿರಬಹುದು. ಆದರೆ, ಚಿತ್ತಾಲರ ನಾಯಕ ’ಸೃಷ್ಟಿಕಾರ್ಯದ ಹಿಂದೆ ಸಾವನ್ನು ಗೆಲ್ಲುವ ಹಟವಿರುತ್ತದೆ’ ಎಂದು ನಂಬಿದವನಲ್ಲ; ಅಮರನಾಗಿರಬೇಕೆಂಬ ಮಹತ್ವಾಕಾಂಕ್ಷೆಯೂ ಇಲ್ಲ. ಆದ್ದರಿಂದಲೇ ಅವನು ತನ್ನ ಹೆಸರು, ವಯಸ್ಸು, ಎತ್ತರ, ಬಣ್ಣ, ಜಾತಿ, ಧರ್ಮ, ಶಿಕ್ಷಣ, ನೌಕರಿ ತಿಳಿಸದ ಅನಾಮಧೇಯ. ಆ ಮೂಲಕ ಎಲ್ಲರೊಳಗಿನ ಮನುಷ್ಯ ಪಾಡಿನ ಸಾರ್ವತ್ರೀಕರಣದ ಪ್ರತೀಕವಾಗುತ್ತಾನೆ. ಹಾಗಾದರೆ ಈ ಅನಾಮಿಕ ನಾಯಕ ಸಾವಿನ ಹೊಸ್ತಿಲಲ್ಲಿ ಮಲಗಿ ಕಾದಂಬರಿಯನ್ನು ಯಾಕೆ ಬರೆಯುತ್ತಿದ್ದಾನೆ? ಜೀವನದ ಕೊನೆಯ ಗಳಿಗೆಯಲ್ಲಿ ಕಂಡ ಸತ್ಯದ ಮೇಲೆ ಆ ಸತ್ಯವನ್ನು ಕಂಡಾಗಿನ ಮಾನಸಿಕ ಸ್ಥಿತಿಯ ಪ್ರಭಾವ ಬಿದ್ದಿರಬಹುದು ಎಂಬುದನ್ನು ಓದುಗರ ಲಕ್ಷ್ಯಕ್ಕೆ ತಂದುಕೊಡಬೇಕೆನ್ನುವ ತವಕ ಇದ್ದಿರಬಾರದೇಕೆ ಎಂಬ ಅನುಮಾನವಿದ್ದೀತು. ಎಲ್ಲವನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ ಕ್ಷೌರಿಕನ ಮುಖದಲ್ಲಿ ಸಾವನ್ನು ಸೆರೆಹಿಡಿದ ಚಿನೊಲೋಪೆಯ ಹಾಗೂ ಬದುಕಿನ ಸರಹದ್ದಿನೊಳಗೇ ನಿಂತು ಸಾವನ್ನು ಕಲ್ಪಿಸುವ, ಬದುಕು ಜೀವಿಸಲು ಅರ್ಹವೇ ಅಥವಾ ಅನರ್ಹವೇ ಎಂದು ಪ್ರಶ್ನಿಸುವ ಚಿತ್ತಾಲರ ಕಥಾನಾಯಕನ ದಾರಿ ಕೂಡುವುದು ಇಲ್ಲಿಯೇ.

ಜೀವಂತವಾಗಿರುವ ಮನುಷ್ಯನ ಕಣ್ಣಲ್ಲಿ ಸಾವನ್ನು ಕಾಣುವುದು ಹಾಗೂ ಜೀವಂತ ದೇಹದಲ್ಲಿ ಬೇರುಬಿಟ್ಟ ಮನಸು ಸಾವಿನ ಕುರಿತಾಗಿ ಅನುಭವಿಸುವ ಭಯ, ದಿಗಿಲು, ನಿಗೂಢತೆ ಬದುಕಿಗೆ ಸಂಬಂಧಿಸಿದ್ದೇ ವಿನಾ ಕೇವಲ ಶಬ್ದವಾದ ಸಾವು ಅಲ್ಲ. ನಮ್ಮ ತಾತ್ವಿಕ ಚಿಂತನೆ ನಮಗೇ ಗೊತ್ತಾಗದ ರೀತಿಯಲ್ಲಿ ನಡೆಯುವುದು ಈ ಇನ್ನೊಬ್ಬನ ಸಾವು, ಇನ್ನೊಬ್ಬನ ಆತ್ಮಹತ್ಯೆ ಮತ್ತು ಬದುಕುವುದರಲ್ಲಿ ನಾವು ಇಟ್ಟುಕೊಂಡ ನಂಬಿಕೆಗಳಿಗೆ ಒಡ್ಡುವ ಸವಾಲನ್ನು ಕುರಿತು. ಆತ್ಮಹತ್ಯೆ ಮಾಡಿಕೊಂಡವನ ನಿಲುವು, ನಿಲುಗಡೆ ಎಂದೆಂದಿಗೂ ತಿಳಿಯಲಾರವು ಎನ್ನುತ್ತಾರೆ ಚಿತ್ತಾಲರು. ಆತ್ಮಹತ್ಯೆಯನ್ನು ನಿಜವಾದ ತಾತ್ವಿಕ ಪ್ರಶ್ನೆಯೆಂದು ಕರೆದ ಅಲ್ಬರ್ಟ್ ಕಮೂನ ಮಾತು ಕೂಡ ಬಾಳಿನೊಳಗಿನ ಅತ್ಯಂತ ಲವಲವಿಕೆಯ ಭಾಷೆಯ ಸರಹದ್ದಿನಲ್ಲೇ ನಿಂತು ಆಡಿದ ಮಾತು ಎಂದು ಅವರು ಗುರುತಿಸುತ್ತಾರೆ.

ಹಾಗಾಗಿ ಚಿತ್ತಾಲರಿಗೆ ಸಾವು ಎಂದರೆ ಬದುಕನ್ನು ನಿರರ್ಥಕ ಎನ್ನಿಸುವಂತೆ ಮಾಡಿದ ಕಪ್ಪುಗಳಿಗೆಯ ಆಚೆಯ ಪ್ರಪಂಚದ ಬೌದ್ಧಿಕ ಕಾಳಜಿ ಅಥವಾ ಚಿಂತನೆ ಅಲ್ಲ. ಸಾವು ಒಂದು ಅನುಭವವೇ ಅಲ್ಲ. ಸಾವಿಗೆ ಜೀವ ವ್ಯಕ್ತಪಡಿಸುವ ತೀವ್ರ ಪ್ರತಿಕ್ರಿಯೆ ಮಾತ್ರ. ಏಕೆಂದರೆ ಸತ್ತವನು ಅಬ್ಜ ವರ್ಷಗಳ ಪ್ರಯತ್ನದ ಫಲವಾಗಿ ಹುಟ್ಟಿ ಬಂದ ಒಂದು ಅನನ್ಯ ಸಂಘಟನೆಯ ವಿಘಟನೆ. ಗಾಳಿ, ಬೆಳಕು, ರುಚಿ, ವಾಸನೆ, ಬಣ್ಣಗಳನ್ನು ಕಳೆದುಕೊಂಡ ಮನುಷ್ಯ ಸಹವಾಸಕ್ಕೇ ಅಯೋಗ್ಯವಾದ ಅಸಂಗತ ವ್ಯವಸ್ಥೆ ಸತ್ತವನ ಸ್ಥಿತಿ. ನಿಶ್ಚೇಷ್ಟ ಬಿದ್ದ ದೇಹವೊಂದು ಜೀವಂತ ಮನುಷ್ಯರು ಮಾತ್ರ ಹುಟ್ಟಿಸಬಲ್ಲ ಭಾಷೆಯಲ್ಲಿ ಹೇಗೆ ಸಾವಿನ ಸುದ್ದಿಯನ್ನು ವರದಿ ಮಾಡೀತು?
ಸಾವು ಚಿತ್ತಾಲರಿಗೆ ಇದ್ದದ್ದು ಇಲ್ಲವಾಗುವ ಕ್ರಿಯೆಯಾಗಿರದೆ, ಆಕಾರವಿದ್ದ ನಿಗೂಢ ವಸ್ತು ಆಗಿದೆ. ಹುಟ್ಟು- ಸಾವಿನಾಚೆಯ ಕತ್ತಲೆಯ ಶೂನ್ಯಕ್ಕಿಂತ ಬದುಕು- ಸಾವುಗಳ ನಡುವಿನ ಬೂದಿ ಬಣ್ಣದ ಪ್ರದೇಶಕ್ಕೆ ಸೇರಿದ ಮಾನವೀಯ ಅನುಭವಗಳ ಪ್ರಾಣ ಸಂಕಟವಾಗಿದೆ. ಅನುಭವವೇ ಆಗದ ಸಾವಿಗಿಂತ ಆತ್ಮಹತ್ಯೆ ಮಾಡಲು ನಿಶ್ಚಯಿಸಿದವನು ತನ್ನ ಬೆಳಕನ್ನು ತಾನೇ ನಂದಿಸುವ ಮೊದಲು ಹಾಸಿಗೆಯಲ್ಲಿ ತಲೆದಿಂಬಿನ ಅಡಿಗೆ ಬರೆದಿಟ್ಟ ಚೀಟಿ ನಿಗೂಢ ಭಯದ ಸಂಕೇತವಾಗುವುದು, ಸಾವು ಹತ್ತಿರವಾದಾಗಲೂ ಬದುಕಿನ ಬಗೆಗೇ ವಿಚಾರ ಮಾಡುವ ಅದ್ಭುತ ರಮ್ಯತೆ ಮನಸಿಗೆ ಸಾಧ್ಯವಾಗುವುದು ಚಿತ್ತಾಲರಿಗೆ ಮುಖ್ಯವಾಗುತ್ತವೆ. ಕೊನೆಯ ಗಳಿಗೆಯಲ್ಲಿ ತಾನು ಎಂಥ ಅಪರಿಚಿತ ಲೋಕಕ್ಕೆ ಪಯಣಿಸುತ್ತಿದ್ದೇನೆ ಎಂಬ ಭಯಕ್ಕಿಂತ ತಾನು ಹಿಂದೆ ಬಿಟ್ಟು ಹೋಗುವವರನ್ನು ಕುರಿತು ಉಂಟಾಗುವ ವೇದನೆ, ಆತಂಕಗಳೇ ಹೆಚ್ಚು ತೀವ್ರವಾಗಿರುತ್ತಲ್ಲವೆ? ಅಬ್ಜ ವರ್ಷಗಳ ಹಿಂದೆ ಹೊತ್ತಿಕೊಂಡ ಜೀವ ಜ್ಯೋತಿಯ ಒಂದು ಅನನ್ಯ ಕಿಡಿಯನ್ನು ನುಂಗಿಯೂ ಏನೇನೂ ನಡೆದಿಲ್ಲ ಎನ್ನುವ ರೀತಿ, ಒಳಗೆ ನುಗ್ಗಿ ನೋಡಿದವರ ಪ್ರತಿಬಿಂಬವನ್ನು ನಿಶ್ಚಲವಾಗಿ ಪ್ರತಿಫಲಿಸುತ್ತ ನಿಂತ ನೀರಿನ ನಿಶ್ಯಬ್ದ- ಚಿತ್ತಾಲರು ಚಿತ್ರಿಸುವ ವಸ್ತುನಿಷ್ಠ ಅಮಾನುಷ ಸಾವಿನ ಪ್ರತಿಮೆಗಳು ಬದುಕಿನ ಕಮ್ಮಟದಲ್ಲೇ ತಯಾರಾದವು.

ದಾಮಣ್ಣನ ಸಾವಿನ ಸಮಕ್ಷಮ ಪ್ರೀತಿಯ ಜೀವವೊಂದು ಪ್ರೇತಕ್ಕೆ ರೂಪಾಂತರಗೊಂಡು ಮಂತ್ರೋಕ್ತ ವಿಧಿಕಾಂಡಗಳಿಂದ ವೈಯಕ್ತಿಕವಾದದ್ದು ಸಾಮುದಾಯಿಕವಾಗುತ್ತ ನೋವಿನ ತೀವ್ರತೆಯನ್ನು ಕಳೆದುಕೊಳ್ಳುತ್ತಿರುವ ದಾರುಣ ದೃಶ್ಯಕ್ಕೆ ಚಿತ್ತಾಲರು ಸಾಕ್ಷಿಯಾಗುತ್ತಾರೆ. ಸೂತಕದ ಮನೆಯಲ್ಲಿ ಸಾವನ್ನು ಹಿಂದಿಕ್ಕುವ ಹಸಿವು ಪ್ರತ್ಯಕ್ಷವಾಗುತ್ತದೆ. ಹಸಿವೆ ಎನ್ನುವುದು ದೇಹ ತನ್ನ ಸಾತತ್ಯಕ್ಕಾಗಿ ಹುಟ್ಟಿಸಿಕೊಂಡ ಉಪಾಯ ಎನ್ನುವ ಸತ್ಯ ಹಾಗೂ ಬೇರೆಯೇ ಒಂದು ನಿಲುಗಡೆಗೆ ಬಂದಿರಬಹುದಾದ ಮನಸ್ಸಿನ ಪ್ರಭಾವಕ್ಕೆ ಒಳಗಾಗಿ ದೇಹ ತನ್ನನ್ನು ತಾನೇ ವಂಚಿಸಿಕೊಳ್ಳದಿರುವಂತೆ ಮುಂಜಾಗ್ರತೆ ವಹಿಸಿದಂತಿದ್ದ ಪಂಚೇಂದ್ರಿಯಗಳ ಕಾರ್ಯದಕ್ಷತೆ. ಇವು ಮರೆಯಲಾಗದ ಅನುಭವವಾದದ್ದು ಉಪ್ಪಿನಕಾಯಿಯನ್ನು ಕಚ್ಚಿದಾಗ; ಗಂಜಿಯ ತುತ್ತನ್ನು ಬಾಯಲ್ಲಿರಿಸಿದಾಗ... ಎಂಬ ಚಿತ್ತಾಲರ ವಿಶ್ಲೇಷಣೆಯಲ್ಲಿ ಮನಸಿನ ಅತೀಂದ್ರಿಯ ನೆಗೆತಕ್ಕೆ ಕಡಿವಾಣ ಹಾಕಿ ಕತ್ತಲೆ-ಬೆಳಕುಗಳ ನಡುವಿನ ಸಂಧಿ ಪ್ರಕಾಶದಲ್ಲಿ ದೇಹ, ಆತ್ಮಗಳ ಬಗ್ಗೆ ಹುಟ್ಟಿಕೊಳ್ಳುವ ಪುರಾಣದ ನಿರೂಪಣೆ ವಾಸ್ತವದ ನೆಲೆಯಲ್ಲಿ ಜರುಗುತ್ತದೆ.

ಈ ಕಥಾನಕದ ನಾಯಕ ಚಿತ್ತಾಲರ ಕತೆ- ಕಾದಂಬರಿಗಳ ನಿರೂಪಕರ ಪ್ರತಿನಿಧಿ. ಅವರ ಕಥಾವಸ್ತು ಅವರು ನಿರೂಪಿಸುವ ವಿವರಗಳಲ್ಲಿರುವುದಿಲ್ಲ. ವಿವರಗಳು ನಾಯಕನ ಸಂಕೀರ್ಣ ಮನಸಿನ ತುಮಲಗಳನ್ನು ಚಿತ್ರಿಸುತ್ತವೆ. ಅವರ ಕತೆಗಳ ಹುಟ್ಟು ಕಥಾನಾಯಕ ವಸ್ತುಗಳನ್ನು ತೆರೆದಿಟ್ಟು ತೋರಿಸುವ ಕ್ಷಣ ಕ್ಷಣದ ಮನೋವ್ಯಾಪಾರದ ಸ್ಪಂದನದಲ್ಲಿರುತ್ತದೆ. ಆದ್ದರಿಂದಲೇ ಚಿತ್ತಾಲರು ‘ಎಲ್ಲವನ್ನು ತಿಳಿದ ಮೇಲೆ ಬರೆಯುವುದಲ್ಲ, ತಿಳಿಯಲೆಂದೇ ಬರೆಯುವುದು’ ಎಂದು ಮತ್ತೆ ಮತ್ತೆ ಹೇಳುತ್ತಾರೆ. ತಿಳಿಯುವ ಕ್ರಿಯೆಯಲ್ಲಿ ಓದುಗನನ್ನೂ ಸಹಭಾಗಿಯಾಗಿಯನ್ನಾಗಿಸುವುದು ಅವರ ಅನನ್ಯ ಕಥನ ಕ್ರಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.