ಅದೊಂದು ತಪಸ್ಸು...

ಆ ಒಂದು ಪೀಠದ ಮೇಲೆ ಕುಳಿತು ಆ್ಯಕ್ಸಲರೇಟರ್ ತಿರುವುತ್ತಿದ್ದರೆ, ಅಕ್ಕಪಕ್ಕದ ಸಕಲ ಚರಾಚರಗಳೆಲ್ಲವೂ ಹಿಂದೋಡುತ್ತಿರುತ್ತವೆ. ವೇಗ ಹೆಚ್ಚಿದಷ್ಟೂ ನಮ್ಮ ಕಂಕುಳ ಅಡಿಯಲ್ಲಿ ತೂರಿ ಹೋಗುವ ಗಾಳಿಯ ಕಚಗುಳಿ. ನಮ್ಮೆಲ್ಲಾ ಸಿಟ್ಟು–ಸೆಡವು, ರಾಗ–ದ್ವೇಷಗಳೆಲ್ಲವೂ ತಲೆಯಿಂದ ಮಟಾಮಾಯ. ಅವರು ಹೀಗಂದರು, ಇವರು ಹೀಗನ್ನಬಾರದಿತ್ತು, ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂಬೆಲ್ಲಾ ಲೌಕಿಕದ ಹತ್ತಾರು ಚಿತ್ರಗಳು ಛಿದ್ರವಾಗಿ ಕಣ್ಣಂಚಿನಿಂದ ಹಿಂದೆ ಬೀಳುತ್ತವೆ. ವೇಗ ಹೆಚ್ಚಿದಂತೆ ತಾನೂ ಚಂಡಿ ಹಿಡಿಯುವ ವಿಂಡ್ಬ್ಲಾಸ್ಟ್ಗೆ ಎದೆಯೊಡ್ಡಿ ಕುಳಿತರೆ, ನಮ್ಮ ಸುತ್ತಲಿನ ಎಲ್ಲವೂ ಅಸ್ಪಷ್ಟವಾಗುತ್ತಾ ಹೋಗುತ್ತದೆ. ಎಲ್ಲವೂ ಕ್ಷೀಣವಾಗಿ, ಎಲ್ಲವೂ ಒಂದಾಗಿ ಜಗತ್ತಿನಲ್ಲಿ ನಾವೊಬ್ಬರೇ ಎಂಬ ಏಕಾಂತಭಾವ. ಕಾಮನಬಿಲ್ಲಿನ ಎಲ್ಲ ರಂಗುಗಳೂ ಕರಗಿ, ಬಿಳಿಯೊಂದೇ ರೂಪುಗೊಳ್ಳುವಂತಹ ನ್ಯೂಟನ್ನ ಬಣ್ಣಚಕ್ರದ ಅನುಭೂತಿ. ಗಾಳಿಯಲ್ಲಿ ತೇಲಿದಂತಹ ಅನುಭವ. ಅಂತಹದ್ದೊಂದು ಸ್ಥಿತಿಯಲ್ಲಿ ನಮಗೂ ಜಗತ್ತಿಗೂ ಉಳಿಯುವ ಕೊಂಡಿ ಅದೊಂದೇ... ಎಂಜಿನ್ನ ಬಿಸಿ, ಎಂಜಿನ್ ಸದ್ದಿನ ಏಕತಾನ, ಅಡಿಯಿಂದ ಮುಡಿಯವರೆಗಿನ ಸಕಲ ನರತಂತುಗಳನ್ನೂ ಮೀಟುವ ನಡುಕ... ಆ ಸ್ಥಿತಿಗೆ ನಮ್ಮನ್ನು ಕೊಂಡೊಯ್ಯುವ ಮಂತ್ರಗಳಿಗೂ ಒಂದು ಹೆಸರಿದೆ. ಅದೇ ಬೈಕಿಂಗ್.

ದೇಶ ಸುತ್ತಲು ಬೈಕ್ ಹತ್ತಿದ ಪ್ರತಿಯೊಬ್ಬರದೂ ಇದೇ ಅನುಭವ. ದೇಶ ಸುತ್ತುವುದೆಂದರೆ ಇಲ್ಲಿಂದ ಅಲ್ಲಿಗೆ ಹೋಗುವುದಲ್ಲ, ಸ್ಥಾವರವೊಂದನ್ನು ನೋಡುವುದಲ್ಲ. ಅಲ್ಯಾರೋ ಎಳನೀರಿನವನು, ಇಲ್ಲ್ಯಾರೋ ಪಂಕ್ಚರ್ ಹಾಕುವವನು, ಜಗತ್ತೆಲ್ಲವೂ ನಂದೇ ಎಂಬಂತೆ ಎಲ್ಲರನ್ನೂ ಬದಿಗೊತ್ತಿ ಹೋಗುವ ದೊಡ್ಡಕಾರಿನವನು, ಮುಖಕ್ಕೆ ಬಡಿಯುವ ಚಿಟ್ಟೆ, ಉರಿಬಿಸಿಲು, ಮೈಕೊರೆಯುವ ಚಳಿ, ಮರ–ಗಿಡ, ಹಕ್ಕಿ–ಪಕ್ಕಿ, ಹಳ್ಳಿ–ಹಾಡು, ಇವೆಲ್ಲವುಗಳಲ್ಲಿ ಜತೆಯಾಗುವ ಮತ್ತೊಬ್ಬ ಬೈಕರ್... ಇಲ್ಲಿಂದ ಅಲ್ಲೆಲ್ಲಿಗೋ ಹೋಗುವವರೆಗಿನ ಪಯಣವೇ ದೇಶ ಸುತ್ತುವುದು. ಬೈಕಿಂಗ್ನ ಮೂಲಮಂತ್ರವೇ ಇದು; ಒಂದೆಡೆ ಬಾಹ್ಯ ಜಗತ್ತಿನೊಂದಿಗೆ ಅಂತರ ಕಾಯ್ದುಕೊಳ್ಳುತ್ತಾ ಮತ್ತೆ ಮತ್ತೆ ಅದೇ ಜಗತ್ತಿನೊಂದಿಗೆ ಸಂವಾದ ನಡೆಸುವ ಕ್ರಿಯೆ. 20 ವರ್ಷಗಳ ಹಿಂದೆಯೂ ಬೈಕಿಂಗ್ ಹೀಗೆಯೇ ಇತ್ತು, ಈಗಲೂ ಹೀಗೆಯೇ ಇದೆ. ಆದರೆ ಅದರ ಹೆಸರಷ್ಟೇ ಬದಲಾಗಿದೆ. ಕೋರ್ ಬೈಕಿಂಗ್, ಹಾರ್ಡ್ಕೋರ್ ಬೈಕಿಂಗ್.

ಬದಲಾದ ವ್ಯಾಖ್ಯಾನ

ಹೊಸ ತಲೆಮಾರಿನಲ್ಲಿ ಬೈಕಿಂಗ್ ಎಂಬುದಕ್ಕೆ ಹೊಸ ವ್ಯಾಖ್ಯಾನಗಳಿವೆ. ರಸ್ತೆಯಲ್ಲಿ ಇಷ್ಟು ವೇಗ ಸಾಧಿಸಬೇಕು, ಇಷ್ಟೇ ಸಮಯದೊಳಗೆ ಗಮ್ಯ ತಲುಪಬೇಕು. ಅವನಿಗಿಂತ ನನ್ನ ವೇಗ ಹೆಚ್ಚು, ಇವನಿಗಿಂತ ಅವನ ವೇಗ ಹೆಚ್ಚು ಎಂಬ ಪೈಪೋಟಿಯನ್ನೇ ಬೈಕಿಂಗ್ ಎಂದು ಕರೆಯುವಷ್ಟರಮಟ್ಟಿಗೆ ಆ ವ್ಯಾಖ್ಯಾನ ಬದಲಾಗಿಬಿಟ್ಟಿದೆ.

‘ಕಣ್ಣು ಕುಕ್ಕುವಂತಿದ್ದ ಬೆಳಕಿನ ಪ್ರವಾಹದ ನಡುವೆಯೇ ಎದೆ ನಡುಗಿಸುವಂತಹ ಎಂಜಿನ್ ಗುಡುಗು. ರಸ್ತೆಯಲ್ಲಿ ಹಾವು ಹರಿದಂತೆ ಅರ್ಧ ಕಿ.ಮೀ.ಗೂ ಹೆಚ್ಚು ಉದ್ದದ ದೈತ್ಯರ ಸಾಲು. ಮುಂದೆ ‘ಪೈಲಟ್’ ಹಾದಿ ತೋರುತ್ತಿದ್ದರೆ, ‘ಸ್ವೀಪರ್’ಗೆ ಯಾರೂ ಹಿಂದುಳಿಯದಂತೆ ಮುಂದೋಡಿಸುವ ಕೆಲಸ. ಇತರ ವಾಹನಗಳಿಗೆ ತೊಂದರೆಯಾಗದಂತೆ ಸರತಿಯನ್ನು ಸರಿಪಡಿಸುವ ಕಾಯಕ ‘ಶೆಟಲ್’ನದ್ದು. 50–60ರ ಸ್ಥಿರ ವೇಗ. ಹತ್ತು ಹಲವು ವಾಹನಗಳನ್ನು ಹಿಂದಿಕ್ಕಿದರೂ, 24 ಸವಾರರು ಒಮ್ಮೆಯೂ ‘ಹಾರ್ನ್’ ಮುಟ್ಟಿರಲೇ ಇಲ್ಲ. ಹಾವಿನಂತ ಸಾಲು, ಹಾರ್ನ್ ಇಲ್ಲದ ನೂರಾರು ಕಿ.ಮೀ. ಪಯಣ.’

ಹತ್ತು ವರ್ಷಗಳ ಹಿಂದೆ ಬರೆದಿದ್ದ ಬೈಕಿಂಗ್ ಕಥನವೊಂದರ ಸಾಲುಗಳಿವು. ಬೈಕಿಂಗ್ ಕ್ಲಬ್ಗಳು ಆಯೋಜಿಸುವ ಪಯಣಗಳು ಹೀಗೇ ಇರುತ್ತವೆ. ಅವು ಬುಲೆಟ್ಗಳು ಇರಬಹುದು, ಹಾರ್ಲೆ ಡೇವಿಡ್ಸನ್ಗಳಿರಬಹುದು, ಐಷಾರಾಮಿ ಕಾರುಗಳ ಬಜೆಟ್ನ ಸೂಪರ್ಬೈಕ್ಗಳು... ಬೈಕ್ ಯಾವುದಾದರೂ ಕೋರ್ ಬೈಕಿಂಗ್ನ ಅನುಭವಗಳು ಈಗಲೂ ಇದೇ ರೀತಿ ಇರುತ್ತವೆ.

ಬೈಕಿಂಗ್ನಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದ್ದು ಬೈಕ್ಗಳಲ್ಲೇ. ಮೊದಲೆಲ್ಲಾ ಬೈಕರ್ಗಳಿಗೆ ಇದ್ದದ್ದು ಬುಲೆಟ್ಗಳು ಮಾತ್ರ. ಬುಲೆಟ್ಟೀರ್ಗಳು ಮಾತ್ರ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರಸ್ತೆಯನ್ನಾಳುತ್ತಿದ್ದರು. ಇನ್ನು ಸೂಪರ್ ಬೈಕ್ಗಳದ್ದು ಬೇರೆಯದ್ದೇ ಜಗತ್ತು. ದೇಶ ಸುತ್ತಲು ಕೇವಲ ಬೈಕ್ಗಳಿದ್ದರೆ ಸಾಲದಾಗಿತ್ತು, ಆ ಬೈಕ್ಗಳನ್ನು ಸಿದ್ದಪಡಿಸಬೇಕಿತ್ತು. ನಮ್ಮ ಪಯಣಕ್ಕೆ ಬೇಕಾದಂತೆ ಅವುಗಳನ್ನು ಮಾರ್ಪಡಿಸಬೇಕಿತ್ತು. ಸಸ್ಪೆನ್ಷನ್, ಟೈರ್ಗಳು, ಪಂಕ್ಚರ್ ಕಿಟ್ಗಳು, ಪರ್ಫಾಮೆನ್ಸ್ ಹೆಚ್ಚಿಸುವ ತಾಂತ್ರಿಕ ಮಾರ್ಪಾಡುಗಳು, ಪ್ರತಿ ಬೈಕಿಂಗ್ನಲ್ಲಿ ಎದುರಾದ ಕೊರತೆಗಳನ್ನು ನೀಗಿಸಿಕೊಳ್ಳುವ ಯತ್ನಗಳು, ಸಣ್ಣ–ಪುಟ್ಟ ರಿಪೇರಿಗಳನ್ನು ನಾವೇ ಮಾಡಿಕೊಳ್ಳುವ ಸಾಹಸಗಳು... ಇವೆಲ್ಲವೂ ಬೈಕರ್ನ ಜೀವಕ್ಕಂಟಿದ್ದ ‘ಕರ್ಮ’ಗಳು.

ಈಗ ದುಡ್ಡು ಚೆಲ್ಲಿದರೆ ಎಲ್ಲವೂ ಮನೆ ಬಾಗಿಲಿಗೆ ಬಂದು ಬೀಳುತ್ತದೆ. ಬೈಕ್ಗಳಲ್ಲೂ ಹತ್ತಾರು ಆಯ್ಕೆಗಳಿವೆ. ಕೆಟಿಎಂ ಎಡಿವಿ, ಎಕ್ಸ್ಪಲ್ಸ್, ಹಿಮಾಲಯನ್, ವಿಸ್ಟಾರ್ಮ್, ಟ್ರಯಂಪ್ 440, ಅಪಾಚೆ, ಡಾಮಿನಾರ್... ದಿನಗಟ್ಟಲೆ ರೈಡಿಂಗ್ಗೆ ಬೇಕಾದಂತಹ ಎಲ್ಲವನ್ನೂ ಒಳಗೊಂಡ ಬೈಕ್ಗಳು ಸಂಪೂರ್ಣ ಸಿದ್ಧವಾಗಿಯೇ ಸಿಗುತ್ತವೆ. ಹೊಸ ವ್ಯಾಖ್ಯಾನದ ಬೈಕಿಂಗ್ನ ಮೂಲ ಮಂತ್ರಗಳು ವೇಗ ಮತ್ತು ವೇಗ. ಅವುಗಳೊಟ್ಟಿಗೆ ವ್ಲಾಗಿಂಗ್.

ವ್ಲಾಗಿಂಗ್ ತಂದ ಬದಲಾವಣೆ

‘ಇದು ಬೈಕಿಂಗ್ ಸಂಸ್ಕೃತಿಯನ್ನೇ ಹಾಳು ಮಾಡಿದೆ. ಮೊದಲೆಲ್ಲಾ ರಸ್ತೆ, ಪ್ರಕೃತಿ ಎಲ್ಲವನ್ನೂ ಸವಿಯುವುದು ಬೈಕಿಂಗ್ ಆಗಿತ್ತು. ಈಗ ಎಲ್ಲೆಡೆ ನಿಂತು ವಿಡಿಯೊ ಮತ್ತು ಚಿತ್ರ ತೆಗೆದುಕೊಳ್ಳುವುದೇ ಬೈಕಿಂಗ್ ಆಗಿದೆ. ಒಂದು ಕತೆ ಹೇಳುತ್ತೇನೆ. ಈಶಾನ್ಯ ಭಾರತಕ್ಕೆ ಬೈಕಿಂಗ್ ಹೋಗುವವರೆಲ್ಲಾ ಭೂತಾನ್ಗೆ ಭೇಟಿ ನೀಡುವುದು ಆ ಬೈಕಿಂಗ್ನ ಒಂದು ಭಾಗವಾಗಿತ್ತು. ಭೂತಾನ್ ಭಾರತೀಯರಿಗೆ ಮೊದಲು ಉಚಿತ ಪ್ರವೇಶ ನೀಡುತ್ತಿತ್ತು. ಒಂದು ಬೈಕ್ಗೆ 50 ರೂಪಾಯಿ ಎಂಟ್ರಿ ಫೀ ಕೊಡಬೇಕಿತ್ತಷ್ಟೆ. ಕೋವಿಡ್ ನಂತರ ಬೈಕಿಂಗ್ ವ್ಲಾಗಿಂಗ್ ಮಾಡುವವರು, ಕಂಡಕಂಡವರೆಲ್ಲಾ ಬೈಕ್ ಏರಿ ಭೂತಾನ್ಗೆ ಹೋಗುವುದು, ಅಲ್ಲೊಂದು ಶಿಸ್ತು ಕಾಯ್ದುಕೊಳ್ಳದೇ ಇರುವುದು ಹೆಚ್ಚಾಯಿತು. ಭಾರತೀಯ ಬೈಕರ್ಗಳ ಸಂಖ್ಯೆಯನ್ನು ಇಳಿಸಬೇಕೆಂದೇ ಭೂತಾನ್ ಸರ್ಕಾರ ಈಗ ಎಂಟ್ರಿ ಫೀ ಇಟ್ಟಿದೆ. ಒಬ್ಬ ಬೈಕರ್ಗೆ ದಿನವೊಂದಕ್ಕೆ 1,500 ರೂಪಾಯಿ ಮತ್ತು ಬೈಕ್ ಒಂದಕ್ಕೆ 4,500. ಪ್ರವಾಸಿಗಳನ್ನೇ ನೆಚ್ಚಿಕೊಂಡ ಭೂತಾನ್ ಭಾರತೀಯ ಬೈಕರ್ಗಳನ್ನು ತನ್ನ ನೆಲದಿಂದ ಹೊರಗಿಡಲು ತೆಗೆದುಕೊಂಡ ಕ್ರಮ ಇದು’ ಎನ್ನುತ್ತಾರೆ ಚಾರಣ–ಸುತ್ತಾಟ ತಂಡದ ಮುಂದಾಳು ಪುಟ್ಟಹೊನ್ನೇಗೌಡ.

ಭೂತಾನ್ ಹಾಗಿರಲಿ, ಬೆಂಗಳೂರಿನ ಸುತ್ತಮುತ್ತ ಬೈಕಿಂಗ್ಗೆ ಹೊರಟರೂ ಇಂಥದ್ದೇ ಸ್ಥಿತಿ ಇದೆ. ಮೊದಲೆಲ್ಲಾ ನಂದಿಬೆಟ್ಟಕ್ಕೆ ಬೈಕಿಂಗ್ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಸಣ್ಣ ರಸ್ತೆ, ಇಳಿಜಾರು, ತೀವ್ರ ತಿರುವು... ಇವುಗಳಲ್ಲಿ ಬೈಕ್ಗಳನ್ನು ಮಲಗಿಸುತ್ತಾ ಏಳಿಸುತ್ತಾ ತುಟ್ಟತುದಿ ಮುಟ್ಟುವ ಅನುಭವವೇ ಬೇರೆಯಾಗಿತ್ತು. ಈಗ ಬೆಂಗಳೂರಿನ ಟ್ರಾಫಿಕ್ಗೂ ನಂದಿ ಬೆಟ್ಟದಲ್ಲಿನ ಟ್ರಾಫಿಕ್ಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಅಷ್ಟುಮಂದಿ ಬೈಕನ್ನೇರಿ ಸಾಲುಗಟ್ಟಿ ನಿಂತಿರುತ್ತಾರೆ. ಇವುಗಳ ಮಧ್ಯೆ ಫೋಟೋಶೂಟ್. ಬೈಕರ್ಗಳ ನೆಚ್ಚಿನ ತಾಣಗಳಾಗಿದ್ದ ಹೊಗೇನಕಲ್, ಮುತ್ತತ್ತಿ, ಮೈಸೂರು, ಮಡಿಕೇರಿ, ಮುಳ್ಳಯ್ಯನಗಿರಿ, ಬಿಸಿಲೆ ಎಲ್ಲವೂ ಹೀಗೆಯೇ ಆಗಿವೆ.

ಇವೆಲ್ಲವುಗಳ ಮಧ್ಯೆಯೂ ಹೊಸ ತಲೆಮಾರಿನ ಹಾರ್ಡ್ಕೋರ್ ಬೈಕರ್ಗಳು ಮೂಡಿಬರುತ್ತಿದ್ದಾರೆ.

ಎಲ್ಲಿಗೆ ಪಯಣ... ಯಾವುದು ದಾರಿ

ಬೆಂಗಳೂರಿನಿಂದ ಮಂಗಳೂರಿಗೆ ಇಳಿದು, ಅಲ್ಲಿಂದ ಅರಬ್ಬಿಯ ಅಂಚಿನಲ್ಲೇ ಮೈನ್ಲ್ಯಾಂಡ್ ಭಾರತದ ದಕ್ಷಿಣದ ತುದಿ ಕನ್ಯಾಕುಮಾರಿ ಮುಟ್ಟುವುದು ಹಾರ್ಡ್ಕೋರ್ ಬೈಕರ್ಗಳ ಮೆಟ್ರಿಕ್ ಶಾಲೆಯ ಹಂತವಿದ್ದಂತೆ. ಅಲ್ಲಿಂದ ಬಂಗಾಳಕೊಲ್ಲಿಯ ಬಿಸಿಗಾಳಿಗೆ ಮೈಯೊಡ್ಡಿ ಪುದುಚೇರಿಗೆ ಹೋಗಬೇಕು. ಮತ್ತೆ ಬೆಂಗಳೂರು. ಮೂರೂವರೆ ಸಾವಿರ ಅಡಿಯಿಂದ ಸಮುದ್ರಮಟ್ಟಕ್ಕೆ ಇಳಿದು ಎರಡು ಸಾಗರ, ಒಂದು ಮಹಾಸಾಗರದ ನೀರು ಮುಟ್ಟಿ, ಐವತ್ತಾರು ಜಿಲ್ಲೆಗಳನ್ನು ದಾಟಿ ಮತ್ತೆ ಮೂರೂವರೆ ಸಾವಿರ ಅಡಿ ಎತ್ತರಕ್ಕೆ ಏರುವುದಿದೆಯಲ್ಲ; ಬೈಕರ್ನ ತಾಳ್ಮೆ, ಶಕ್ತಿ, ನಿಗ್ರಹ, ಜೇಬು ಎಲ್ಲವನ್ನೂ ನಿಕಷಕ್ಕೆ ಒಡ್ಡುವ ಪಯಣವದು. ಈ ಪಯಣದಲ್ಲಿ ತೇರ್ಗಡೆಯಾದರೆ ಪ್ರತಿಯೊಬ್ಬ ಬೈಕರ್ ಕನಸು ಕಾಣುವುದು ಉತ್ತರದ ತುದಿಯತ್ತ: ಲಡಾಖ್. ಈ ಸ್ಥಿತಿ ಈಗಲೂ ಬದಲಾಗಿಲ್ಲ. ‘ನಾನಂತೂ ಒಬ್ಬಳೇ ಬೈಕ್ ಏರಿ ಈ ಪ್ರಯಾಣವನ್ನು ಮುಗಿಸಿದೆ. ಆನಂತರವೇ ಲಡಾಖ್ಗೆ ಬೈಕಿಂಗ್ ಮಾಡಬಹುದು ಎಂಬ ಕಾನ್ಫಿಡೆನ್ಸ್ ನನಗೆ ಬಂದಿದ್ದು’ ಎನ್ನುತ್ತಾರೆ ಈ ತಲೆಮಾರಿನ ಬೈಕರ್ ನೀಲು. ಈ ದಕ್ಷಿಣ ಪರ್ಯಟನೆ ಮುಗಿಸಿದರೆ ಉತ್ತರದ ಪರ್ಯಟಣೆಗೆ ಬೈಕರ್ರೂ ಸಿದ್ಧ, ಅವನ ಬೈಕೂ ಸಿದ್ಧ ಎಂದರ್ಥ. ಈ ತಲೆಮಾರಿನಲ್ಲಿ ಇದಕ್ಕೊಂದು ಶಾರ್ಟ್ಕಟ್ ಇದೆ. ಇಲ್ಲಿಂದ ದೆಹಲಿ/ಚಂಡೀಗಢಕ್ಕೆ ರೈಲಿನಲ್ಲಿ ಬೈಕ್ ಪಾರ್ಸಲ್ ಮಾಡುವುದು. ಅಲ್ಲಿಂದ ಬೈಕ್ ಏರಿ ಕಾಶ್ಮೀರ, ಲಡಾಖ್, ಕುಲು–ಮನಾಲಿ ಮೂಲಕ ಹಿಮಾಲಯ ಇಳಿಯುವುದು. ಮತ್ತೆ ರ್ಯಾಲಿನಲ್ಲಿ ಬೈಕ್ ಪಾರ್ಸಲ್ ಮಾಡುವುದು.

ಮೊದಲೇ ಹೇಳಿದಂತೆ ಭಾರತದ ಪ್ರತಿಯೊಬ್ಬ ಹಾರ್ಡ್ಕೋರ್ ಬೈಕರ್ ಅಂತಿಮ ಕನಸು ಲಡಾಖ್. ತೀರ್ಥಯಾತ್ರೆ ಹೊರಡುವವರು ಅಮರನಾಥ, ವೈಷ್ಣೋದೇವಿ, ಕೈಲಾಸ ಪರ್ವತಕ್ಕೋ ಹೋಗುವಷ್ಟೇ ಕಠಿಣ ಯಾತ್ರೆ ಬೈಕರ್ ಒಬ್ಬನ ಲಡಾಖ್ ರೈಡಿಂಗ್. ದಕ್ಷಿಣದ ನಮ್ಮವರಿಗಂತೂ ಲಡಾಖ್ ಅತ್ಯಂತ ಕಷ್ಟಸಾಧ್ಯದ ಸೂಜಿಗಲ್ಲು. ದಕ್ಷಿಣದಿಂದ ಎರಡು ಸಾವಿರ ಮೈಲು ದೂರವನ್ನು ಸಪಾಟು ಹೆದ್ದಾರಿಗಳಲ್ಲಿ ಸವೆಸಿ ಹಿಮಾಲಯದ ತಪ್ಪಲು ಸೇರಬೇಕು. ಹಿಂಡಿಹಿಪ್ಪೆಯಾದ ಜೀವಕ್ಕೆ ಚೈತ್ಯನ್ಯ ತುಂಬುವ ಗಿರಿಪರ್ವತಸಾಲುಗಳು ಕೈಬೀಸಿ ಕರೆಯುತ್ತವೆ. ಹತ್ತಾರು ಸ್ವರೂಪದ ನೆಲವನ್ನು ದಾಟಿ, ಆಮ್ಲಜನಕ ಕಡಿಮೆ ಇರುವ ಗಾಳಿಯನ್ನು ಉಸಿರಾಡಿ, ಮೂಳೆಯನ್ನೂ ಕೊರೆಯುವ ಚಳಿ ತಡೆದುಕೊಂಡು, ಮಂಜುಗಟ್ಟಿದ ನದಿ–ಹೊಳೆಗಳಲ್ಲಿ ಜಾರಿ ಬೀಳದೆ ಹಿಮಾಲಯ ಇಳಿಯುವುದಿದೆಯಲ್ಲಾ... ದೇಹವೆಲ್ಲಾ ನುಜ್ಜುಗುಜ್ಜಾಗಿರುತ್ತದೆ. ಅಂತಹದ್ದೊಂದು ಸುಖಯಾತನೆಯಲ್ಲಿ ಮತ್ತೆ ಎರಡು ಸಾವಿರ ಮೈಲು ದಕ್ಷಿಣದ ಪಯಣ. ಅದು ಕಠಿಣ ತಪಸ್ಸು. ದಕ್ಷಿಣದ ಕನ್ಯಾಕುಮಾರಿ, ಉತ್ತರದ ಲಡಾಖ್ ಕೈಬೀಸಿ ಕರೆಯುತ್ತಲೇ ಇರುತ್ತದೆ. ಆ ಆಹ್ವಾನಕ್ಕೆ ಓಗೊಟ್ಟು ತಮ್ಮ ಮತ್ತು ತಮ್ಮ ಬೈಕ್ನ ನರತಂತುಗಳ ಸಮ್ಮಿಲನದಲ್ಲಿ ತಪಸ್ಸು ಕೈಗೊಳ್ಳುವ ಬೈಕರ್ಗಳು ಈಗಲೂ ಇದ್ದಾರೆ.

ಸೋಲೊ ರೈಡರ್ ಎಂಬ ಹಠಯೋಗಿ

ಹಾರ್ಡ್ಕೋರ್ ಬೈಕರ್ಗಳಲ್ಲೇ ಅತ್ಯಂತ ಅಸಾಮಾನ್ಯ ಸ್ಪೀಸಿಸ್ ಒಂದಿದೆ. ಸೋಲೊ ರೈಡರ್ಗಳೆಂಬ ಹಠಯೋಗಿಗಳವರು. ಬೈಕ್ ಏರಿ ಕುಳಿತರೆ ಮುಂದಿನ ಗಮ್ಯ ಎಂಬುದು ಒಂದು ನೆಪವಷ್ಟೆ. ಹಗಲು–ರಾತ್ರಿ ಚಳಿ–ಬಿಸಿಲು ಮಳೆ–ಗಾಳಿ ಕಳ್ಳ–ಕಾಕರ ಭಯ ಕೆಟ್ಟು ನಿಲ್ಲುವ ಬೈಕ್ ಒಡೆದ ಟೈರ್... ಎಲ್ಲದಕ್ಕೂ ಏಕಾಂಗಿಯಾಗಿ ಮೈಯೊಡ್ಡಿ ಸಾವಿರಾರು ಕಿ.ಮೀ. ಕ್ರಮಿಸುವ ಹಠಯೋಗವದು. ಈಚೆಗೆ ರಾಜಸ್ಥಾನದ ಸೋಲೊ ಬೈಕಿಂಗ್ನಲ್ಲಿ ಅಂತಹ ಹಠಯೋಗಿಯೊಬ್ಬರು ಸಿಕ್ಕಿದ್ದರು. ತಮಿಳುನಾಡಿನ ಕಲ್ಲುಕುರ್ಚಿಯಿಂದ ಸಾಮಾನ್ಯ 150 ಸಿಸಿ ಪಲ್ಸರ್ನಲ್ಲಿ ಭಾರತ ಪರ್ಯಟನೆಗೆ ಹೊರಟಿದ್ದರು. ಚಂಬಲ್ ಕಣಿವೆಯ ಗಾಂಧಿ ಸಾಗರದ ಅಗಾಧತೆಯನ್ನು ದಿಟ್ಟಿಸುತ್ತಾ ಕೂತಿದ್ದ ಆ ವಿಳ್ಳಂಗೋವನ್ ಅದಾಗಲೇ 7800 ಕಿ.ಮೀ. ಕ್ರಮಿಸಿದ್ದರು. ಅವರ ಮುಂದೆ ಇನ್ನೂ 15000 ಕಿ.ಮೀ. ದೂರದ ಯೋಜನೆಯಿತ್ತು. ಈ ಪಯಣದ ಮಧ್ಯೆ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡಬೇಕಾದ ಹೊರೆಯೂ ಇತ್ತು. ‘ಎಲ್ಲಾ ಬಂಧಗಳನ್ನು ಬಿಡಿಸಿಕೊಂಡು ಬದುಕು ಬಂದಂತೆ ಸ್ವೀಕರಿಸಲು ಸೋಲೊ ರೈಡ್ ನನಗೊಂದು ಅವಕಾಶ ಮಾಡಿಕೊಡುತ್ತದೆ’ ಎಂದರು. ನನ್ನ ಬೈಕಿಂಗ್ ಆಗುಹೋಗುಗಳಲ್ಲಿ ಅಂತಹ ಹತ್ತಾರು ಹಠಯೋಗಿಗಳು ಎದುರಾಗಿದ್ದಾರೆ. ಟಿವಿಎಸ್–50ಯಲ್ಲಿ ಕರ್ನಾಟಕದ ಹೊಸಪೇಟೆಯಿಂದ ಗುಜರಾತ್ನ ಬಿಳಿ ಮರುಭೂಮಿ ತಲುಪಿದ ಅಮಿತ್ ತಾಪಸೆ ಸ್ಪ್ಲೆಂಡರ್ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನೂ ಮುಟ್ಟಿರುವ ಶ್ರೀಕಾಂತ್ ಹಾವನೂರು ಏಕಾಂಗಿಯಾಗಿ ಸಾವಿರಾರು ಕಿ.ಮೀ. ಸವೆಸಿರುವ ಬೆಂಗಳೂರಿನ ದಶಮಿ ಬೆಂಗಳೂರು–ಲಡಾಖ್–ಬೆಂಗಳೂರಿಗೆ ಸಿದ್ಧತೆ ನಡೆಸಿರುವ ನೀಲು... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.