ಅಮೆರಿಕದ ಎಂಐಟಿಯಲ್ಲಿ ಓದಿ ಬಂದ ಮೊದಲ ಭಾರತೀಯ ಮಹಿಳಾ ಎಂಜಿನಿಯರ್ ಆಗಿ, ಬೆಂಗಳೂರಿನಲ್ಲಿ ನೆಲೆಸಿರುವ 87 ವರ್ಷದ ಆಲ್ಮಿತ್ರಾ ಪಟೇಲ್ ಅವರಿಗೆ ಈಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಗರಗಳ ಕಸ ರಕ್ಕಸನನ್ನು ಮಟ್ಟ ಹಾಕಲು ಬೇಕಾದ ಕಾನೂನಿನ ಪರಿಕರಗಳನ್ನು ದೇಶದ ಪ್ರಜೆಗಳಿಗೆ ಒದಗಿಸಿ ‘ವೇಸ್ಟ್ ವಾರಿಯರ್’ ಎಂದೇ ಖ್ಯಾತಿ ಪಡೆದ ಮಹಿಳೆ ಇವರು.

ಪರಿಸರ ಚಳವಳಿಗಳು ಅದೇ ತಾನೆ ಆರಂಭವಾಗುತ್ತಿದ್ದ 1980ರ ದಶಕದಲ್ಲಿ ನಾವು ಕೆಲವರು- ಅಂದರೆ ಎಚ್.ಎಸ್.ದೊರೆಸ್ವಾಮಿ, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಅಪರೂಪಕ್ಕೆ ಪ್ರೊ.ಮಾಧವ ಗಾಡ್ಗೀಳ್, ರಾಮಚಂದ್ರ ಗುಹಾ, ಸುರೇಶ್ ಹೆಬ್ಳೀಕರ್ ಎಲ್ಲ ಬೆಂಗಳೂರಿನ ಗಾಂಧೀ ಭವನದಲ್ಲಿ ತಿಂಗಳಿಗೊಮ್ಮೆ ಸೇರುತ್ತಿದ್ದೆವು. ಭೋಪಾಲ್, ಚರ್ನೊಬಿಲ್ ದುರಂತಗಳ ಚರ್ಚೆ ನಡೆಯುತ್ತಿತ್ತು. ಪರಿಸರ ಚಳವಳಿಗಳ ಮುಂದಿನ ರೂಪರೇಷೆಗಳ ಸಮಾಲೋಚನೆ ನಡೆಯುತ್ತಿದ್ದ ಅಂಥ ಸಭೆಗೆ ಸ್ಕರ್ಟ್ ತೊಟ್ಟ ಮಹಿಳೆಯೊಬ್ಬರು ಆಗೀಗ ಬರುತ್ತಿದ್ದರು. ಏನನ್ನೂ ಮಾತನಾಡದ ಈಕೆ, ಸಭೆ ಮುಗಿಯುವ ವೇಳೆಗೆ ನಮ್ಮ ಸಂಘಟನೆಗೆ ಧಾರಾಳ ಚಂದಾ ನೀಡಿ ಹೋಗುತ್ತಿದ್ದರು. ತಾವೇ ಖರೀದಿಸಿದ ಸೋಲಾರ್ ದೀಪಗಳನ್ನೂ ಕೆಲವರಿಗೆ ಆಗಾಗ ಹಸ್ತಾಂತರಿಸುತ್ತಿದ್ದರು.

ಇವರ ಹೆಸರು ಆಲ್ಮಿತ್ರಾ ಪಟೇಲ್ ಎಂಬುದು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತುವ ಹೊತ್ತಿಗೆ ಚಳವಳಿಗಳ ಕಾವು ಇಳಿದಿತ್ತು. ಜಾಗತೀಕರಣ, ಸೋವಿಯತ್ ವಿಘಟನೆ, ಐಟಿ ಬೂಮ್ ಎಲ್ಲ ಬಂದು ಯುವಕರು ಹೊಸ ಬೆಳಕಿನ, ಹೊಸ ಗಾಳಿಯ ಬೆಂಬತ್ತಿದ್ದರು. ಎಲ್ಲ ಚಳವಳಿಗಳ ಹಾಗೆ ಪರಿಸರ ಚಳವಳಿಯೂ ಕ್ರಮೇಣ ನೆಲ ಕಚ್ಚಿತ್ತು. ಗಾಂಧೀ ಭವನದ ಮಾಸಿಕ ಪರಿಸರ ಮಂಥನ ಸಭೆಯೂ ಮಾಸುತ್ತ ಇತಿಹಾಸಕ್ಕೆ ಸೇರಿಹೋಯಿತು. ಆಲ್ಮಿತ್ರಾ ಪಟೇಲ್ ಮರೆತೂ ಹೋದರು. ಈ ಮೊದಲೇ ಅವರು ಟ್ರೀ ವಾರ್ಡನ್ ಎಂಬ ಗೌರವ ಉಪಾಧಿ ಪಡೆದು, ‘ಸ್ವಾಭಿಮಾನ’ ಸಂಸ್ಥೆಯ ಸ್ಥಾಪನಾ ಸದಸ್ಯೆಯಾಗಿ, ವಿಶ್ವ ವನ್ಯಜೀವಿ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದ ಅವರು ನಗರದ ಹೊರ ವಲಯದಲ್ಲಿ, ಬಾಗಲೂರು ಬಳಿಯ ಫಾರ್ಮ್ಹೌಸ್ನಲ್ಲಿ ಕೋಳಿಫಾರ್ಮ್ ನಡೆಸುತ್ತಿದ್ದರು. ಪತಿ ಹೊಶಾಂಗ್ ಪಟೇಲ್ ಸ್ಥಾಪಿಸಿದ್ದ ಪಿಂಗಾಣಿ ಉದ್ಯಮಕ್ಕೂ ನೆರವಾಗುತ್ತ ಸಮೀಪದ ಹಳ್ಳಿಯ ಮಕ್ಕಳಿಗೆ, ಹೆಣ್ಮಕ್ಕಳಿಗೆ ಕೈಲಾದ ಸಹಾಯ ಮಾಡುತ್ತಿದ್ದರು.

ನಗರದಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚುತ್ತಿದ್ದ ಹಾಗೆ ಕಸದ ಲಾರಿಗಳು ಅವರ ರಸ್ತೆಯ ಮೂಲಕ ಸಾಗಿ ಹಳ್ಳಕೊಳ್ಳ ತಗ್ಗುದಿನ್ನೆ ಕಂಡಲ್ಲೆಲ್ಲ ತಿಪ್ಪೆಯನ್ನು ಸುರಿಯತೊಡಗಿದ್ದವು. ದುರ್ವಾಸನೆ, ಹದ್ದು ನಾಯಿಗಳ ಕಾಟದಿಂದ ರೈತರು ಕಂಗಾಲಾಗಿದ್ದರು. ಹೀಗೆ ಕೊಳೆ ಪೇರಿಸುವುದು ಅಲ್ಲಿನ ಜಲಮೂಲಗಳ ಮೇಲೆ, ಜಲಜೀವಿಗಳ ಮೇಲಿನ ಅತ್ಯಾಚಾರ ಎನಿಸಿದರೂ ಅದನ್ನು ನಿಯಂತ್ರಿಸಲು ಕಾನೂನುಗಳೇ ಇಲ್ಲವಲ್ಲ ಎಂದು ಚಿಂತಿಸುತ್ತಿದ್ದರು.

ದೇಶದ ವಿವಿಧ ನಗರಗಳ ಪರಿಸರ ತಜ್ಞರನ್ನು ಸಂಪರ್ಕಿಸಿ, ಯೋಜನಾ ಆಯೋಗದ ದಾಖಲೆಗಳನ್ನೆಲ್ಲ ಪರಿಶೀಲಿಸಿ, ಕಾನೂನು ಪಂಡಿತರ ಸಲಹೆ ಪಡೆದು, ಆಲ್ಮಿತ್ರಾ ಪಟೇಲ್ 1996ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ದಾವೆ ಹೂಡಿದರು. ಭಾರತದ ಎಲ್ಲ ರಾಜ್ಯಗಳ ವಿರುದ್ಧ ಹೂಡಿದ ಆ ‘ಸಾರ್ವಜನಿಕ ಹಿತಾಸಕ್ತಿ ಖಟ್ಲೆ’ ದೊಡ್ಡ ಸಂಚಲನವನ್ನೇ ಮೂಡಿಸಿತು. ಸರ್ವೋಚ್ಚ ನ್ಯಾಯಾಲಯ ಅಷ್ಟೇ ತೀವ್ರವಾಗಿ ಸ್ಪಂದಿಸಿತು. ಕಾನೂನುಗಳೇ ಇಲ್ಲದ ಕ್ಷೇತ್ರದಲ್ಲಿ ನ್ಯಾಯ ನಿರ್ಣಯ ಮಾಡುವುದು ಹೇಗೆ? ಕಸ ವಿಲೇವಾರಿಗೆ ಮಾನದಂಡ ಹೇಗಿರಬೇಕು? ವಿಲೇವಾರಿಯ ವಿಧಿವಿಧಾನಗಳು ಹೇಗಿರಬೇಕು? ಎಲ್ಲಾದರೂ ಮಾದರಿ ಕಸ ವಿಲೇವಾರಿ ನಡೆಯುತ್ತಿದೆಯೆ ಎಂಬ ಸಮೀಕ್ಷೆಗೆ ಒಂದು ಸಮಿತಿ ನೇಮಕ ಮಾಡಿ, ಅದರಲ್ಲಿ ಆಲ್ಮಿತ್ರಾ ಹೆಸರನ್ನೂ ಸೇರ್ಪಡೆ ಮಾಡಿತು. ಇವರು ದೇಶದ ಅನೇಕ ನಗರಗಳನ್ನು ಸುತ್ತಿ ಕಸದ ತಿಪ್ಪೆಗಳ ಸಮೀಕ್ಷೆ ನಡೆಸಿದ್ದೂ ಅಲ್ಲದೆ, ವಿದೇಶಗಳಲ್ಲೂ ಸುತ್ತಾಡಿ ಕಸ ವಿಲೇವಾರಿಯ ಆದರ್ಶ ವ್ಯವಸ್ಥೆಯ ಅಧ್ಯಯನವನ್ನೂ ಕೈಗೊಂಡರು. ಕಸವನ್ನು ಹೇಗೆ ವಿಂಗಡಿಸಿ ಮರುಬಳಕೆ ಮಾಡಬಹುದು ಎಂಬ ಬಗ್ಗೆ ಎಂಜಿನಿಯರಿಂಗ್ ಸೊಲ್ಯೂಶನ್ ಹುಡುಕುತ್ತ, ಕಾನೂನು ಸಂಹಿತೆಗಳನ್ನು ಚರ್ಚಿಸುತ್ತಾ ನಿಯಮಗಳನ್ನು ರೂಪಿಸುವಲ್ಲಿ 16 ವರ್ಷಗಳು ಶ್ರಮಿಸಿ ಅದಕ್ಕೆ ಸರ್ವೋಚ್ಚ ನ್ಯಾಯಾಲಯದ ಅಂಕಿತಮುದ್ರೆಯನ್ನು ಪಡೆದರು.

ಅಲ್ಲಿಗೇ ಆಲ್ಮಿತ್ರಾ ಪಟೇಲ್ ವಿರಮಿಸಲಿಲ್ಲ. ಖುದ್ದಾಗಿ ಕಸದ ಬೆಟ್ಟಗಳಲ್ಲಿ ಓಡಾಡಿ, ಒದ್ದೆ ಕಸವನ್ನು ಸಾಲಾಗಿ ಪಾತಿಯಂತೆ ವಿಂಗಡಿಸಿ, ಅದು ಒಣಗಿದ ಬಳಿಕ ಸಾವಯವ ವಸ್ತುಗಳನ್ನು ವಿಂಗಡಿಸಿ ಎರೆಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆಯನ್ನೂ ನಡೆಸಿ, ಕೈಪಿಡಿಯನ್ನೂ ಬರೆದರು. ಒಣಕಸವನ್ನು ಉರಿಸಿ ವಿದ್ಯುತ್ ಉತ್ಪಾದಿಸುವ ಕುರಿತೂ ಉದ್ಯಮಿಗಳಿಗೆ ಪ್ರೇರಣೆ ನೀಡಿದರು. ಪಾಕಿಸ್ತಾನದ ಮೊದಲ ಕಸ ವಿಲೇವಾರಿ ಘಟಕದ ಸ್ಥಾಪನೆಗೂ ಇವರ ಸಲಹೆಯೇ ಬೇಕಾಯಿತು! ಈ ಮಧ್ಯೆ ಕನ್ನಡ ಚೆನ್ನಾಗಿ ಕಲಿತರು. ‘ಸತ್ತವರ ನೆರಳು’ ನಾಟಕದ 300ಕ್ಕೂ ಹೆಚ್ಚು ಶೋಗಳಲ್ಲಿ ಅಭಿನಯಿಸಿದರು. ಬಿಡುವಿನ ವೇಳೆಯಲ್ಲಿ ಊರೂರು ಸುತ್ತುತ್ತ ಪ್ರಾಚ್ಯವಸ್ತುಗಳ ಅಧ್ಯಯನ ನಡೆಸಿದರು.

ಭೋಗವಸ್ತುಗಳ ಬಳಕೆ ಹೆಚ್ಚಿದಂತೆಲ್ಲ ಹೊಸ ಹೊಸ ತ್ಯಾಜ್ಯವಸ್ತುಗಳೂ ಹೆಚ್ಚುತ್ತವೆ. ಪ್ಯಾಕಿಂಗ್ ಮಾಡಲು ಬಳಸುವ ಪಾಲಿವಿನೈಲ್ ಪ್ಲಾಸ್ಟಿಕ್, ಥರ್ಮೊಕೊಲ್ ಮತ್ತು ಫ್ಲೆಕ್ಸ್ ಪರದೆಗಳಂಥ ತ್ಯಾಜ್ಯವಸ್ತುಗಳನ್ನು ಯಾರೋ ಬೆಂಕಿ ಇಟ್ಟು ಸುಟ್ಟರೆ ಅದರ ಹೊಗೆಯಿಂದ ಹೊಮ್ಮುವ ವಿಷಕಣಗಳ ಮೇಲೆ ನಿಗಾ ಇಟ್ಟು, ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಮತ್ತೆ ಆಲ್ಮಿತ್ರಾ ಪಟೇಲ್ ಕೋರಿದರು. ಅದಕ್ಕೆಂದೇ ಮತ್ತೆ ಎರಡು ವರ್ಷಗಳ ಅಲೆದಾಟದ ನಂತರ 2016ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಪೀಠ ಆಲ್ಮಿತ್ರಾ ಪಟೇಲರ ವಿನಂತಿಯನ್ನು ಮನ್ನಿಸಿ ಹೊಸದೊಂದು ಆಜ್ಞೆಯನ್ನು ಹೊರಡಿಸಿತು: “ತ್ಯಾಜ್ಯವಸ್ತುಗಳ ಎರ್ರಾಬಿರ್ರಿ ಎಸೆದರೆ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೂ ಪ್ರಕರಣ ದಾಖಲಿಸಬಹುದು” ಎಂದು ಹಸಿರು ನ್ಯಾಯಪೀಠ ಆದೇಶ ನೀಡಿತು.

ನಿಮ್ಮೂರಿನಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದಿದ್ದರೆ ನೀವು ಅಧಿಕಾರಿಯ ಮೇಲೆ ದಾವೆ ಹೂಡಬಹುದು. ಅವರ ಮೇಲೆ ನ್ಯಾಯನಿಂದನೆ ಖಟ್ಲೆ ಹಾಕಬಹುದು. ಅಂತೂ ಹೊಣೆಗೇಡಿ ಅಧಿಕಾರಿಗಳನ್ನು ಸರಿದಾರಿಗೆ ತರಬಲ್ಲ ಮಹಾ ಅಸ್ತ್ರವೊಂದನ್ನು ಜನಸಾಮಾನ್ಯರಿಗೆ ಕೊಡಿಸಿದ ಶ್ರೇಯ ಆಲ್ಮಿತ್ರಾ ಪಟೇಲರಿಗೆ ಸಂದಿದೆ.

ನಾವು ಈ ಅಸ್ತ್ರವನ್ನು ಹೇಗೆ ಬಳಸುತ್ತೇವೆ, ಅಥವಾ ಕಡೆಗಣಿಸಿ ಕೊಳಕು ರಸ್ತೆಯಲ್ಲೇ ಸಾಗುತ್ತೇವೆ ಅನ್ನೋದು ಬೇರೆ ವಿಚಾರ. ನ್ಯಾಯವಾದಿಗಳು ಇತ್ತ ಆಸಕ್ತಿ ವಹಿಸುತ್ತಾರೊ ಅದೂ ಬೇರೆ ವಿಚಾರ. ಆದರೆ ಒಬ್ಬ ಮಹಿಳೆ, ಆಲ್ಮೋಸ್ಟ್ ಏಕಾಂಗಿಯಾಗಿ ಹೋರಾಡಿ, ತನ್ನ ಶ್ರಮ, ಹಣ ಮತ್ತು ಛಲದಿಂದಾಗಿ ಇಡೀ ದೇಶದ ಜನಾರೋಗ್ಯವನ್ನೂ ಮರ್ಯಾದೆಯನ್ನೂ ಕಾಪಾಡಬಲ್ಲಂಥ ಕಾನೂನುಗಳಿಗೆ ಕಾರಣರಾದರಲ್ಲ-ಅದು ತೀರ ಅಪರೂಪ ಘಟನೆ.

ಅವರೇನೂ ನ್ಯಾಯವಾದಿಯಲ್ಲ, ಕಾನೂನು ತಜ್ಞರಲ್ಲ, ಕೆಮಿಕಲ್ ವಿಜ್ಞಾನಿಯಲ್ಲ, ಪರಿಸರ ವಿಜ್ಞಾನದ ಪದವೀಧರೆ ಅಲ್ಲ, ಸಾರ್ವಜನಿಕ ಆರೋಗ್ಯ ಕ್ಷೇಮಚಿಂತನೆ ಮಾಡಬೇಕಾದ ಡಾಕ್ಟರ್ ಕೂಡ ಅಲ್ಲ; ಬೀದಿಗಿಳಿದು ಹೋರಾಡುವ ಧೀರ ಸಾಹಸಿಯೂ ಅಲ್ಲ. ಆದರೂ-ಅವರೆಲ್ಲರ ಪಾತ್ರವನ್ನು ತಾನೇ ನಿರ್ವಹಿಸಿದ ಧೀರೆ ಇವರು. ಆಲ್ಮಿತ್ರಾ ಎಂದರೆ ಪಾರ್ಸಿ ಭಾಷೆಯ ‘ಸರ್ವರಿಗೂ ಪ್ರಿಯ’ ಎಂಬರ್ಥವನ್ನು ಸಾರ್ಥಕ ಗೊಳಿಸಿಕೊಂಡವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.