ಜಗತ್ತಿನ ಜನಸಂಖ್ಯಾ ಗ್ರಾಫ್‌ನಲ್ಲಿ ಭಾರತ ಇನ್ನೇನು ಚೀನಾ ದೇಶವನ್ನು ಹಿಂದಿಕ್ಕಿ ಮೊದಲಿಗನಾಗುವ ದಿನಗಳು ಹತ್ತಿರವಾಗಿವೆ. ಇದೇನು ಸಂಭ್ರಮಿಸುವಂತಹ ಸಾಧನೆ ಏನಲ್ಲ. ಇಷ್ಟೊಂದು ಮಾನವ ಸಂಪನ್ಮೂಲವನ್ನು ಹೊಂದಿರುವ ಯಾವುದೇ ದೇಶ ಮನಸ್ಸು ಮಾಡಿದರೆ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಬಹುದು. ಆದರೆ, ನಮ್ಮ ಯುವಶಕ್ತಿಯ ಮುಂದೆ ನಿರುದ್ಯೋಗ ಸಮಸ್ಯೆ ದೈತ್ಯಾಕಾರವಾಗಿ ಬೆಳೆದು ನಿಂತಿದೆ. ಕಿಕ್ಕಿರಿದು ತುಂಬಿರುವ ನಗರಗಳು ಜನರಿಗೆ ಸೌಲಭ್ಯ ಒದಗಿಸಲಾಗದೆ ಸೋತಿವೆ. ಜನಸಂಖ್ಯೆಯ ಶಕ್ತಿ ಹಾಗೂ ಭಾರ ಎರಡನ್ನೂ ಹೊತ್ತುಕೊಂಡ ಭಾರತ ಅಭಿವೃದ್ಧಿಯತ್ತ ಸಾಗುವ ಹಾದಿ ಎಲ್ಲಿದೆ?

ದೃಶ್ಯ-1 ಸಮಯ: 2050ನೆಯ ಇಸವಿ ಒಂದು ಮುಂಜಾನೆ ಒಂಬತ್ತೂವರೆ ಗಂಟೆ, ಸ್ಥಳ: ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್

ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ವಾಹನಗಳ ಸಾಲು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಂಪನಿಯೊಂದರ ಉದ್ಯೋಗಿಯಾದ ನವೀನ್ ಬೆಳಿಗ್ಗೆ ಆರೂವರೆಗೆಲ್ಲ ಹೆಬ್ಬಾಳದ ಮನೆಯಿಂದ ಎಲೆಕ್ಟ್ರಾನಿಕ್ ಸಿಟಿಯ ತನ್ನ ಕಚೇರಿಯತ್ತ ಹೊರಟ. ಸುಮಾರು ಏಳೂವರೆ ಹೊತ್ತಿಗೆ ಸಿಲ್ಕ್ ಬೋರ್ಡ್ ಜಂಕ್ಷನ್‌ಗಿಂತ ಒಂದು ಕಿಲೊಮೀಟರ್ ಹಿಂದೆ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡ. ಒಂಬತ್ತೂವರೆಯಾದರೂ ಟ್ರಾಫಿಕ್ ಸುಳಿಯಿಂದ ಹೊರಬರಲಾಗದೆ ಒದ್ದಾಡಿದ. ಹೀಗಾಗಿ ಇಂದೂ ಕಚೇರಿಗೆ ಸರಿಯಾದ ಸಮಯಕ್ಕೆ ತಲುಪುವುದು ಅನುಮಾನ. ಕಚೇರಿ ತಲುಪುವಾಗ ಬೆಳಿಗ್ಗೆ ಐದು ನಿಮಿಷ ತಡವಾದರೂ ಸರಿ, ಸಂಜೆ ಅಷ್ಟೇ ಸಮಯ ಹೆಚ್ಚು ಕೆಲಸ ಮಾಡಿ ನಷ್ಟ ತೂಗಿಸಬೇಕು.

ದಿನಕ್ಕೆ ಎಂಟು ಗಂಟೆ ಕೆಲಸದ ವ್ಯವಸ್ಥೆ ಹೊರಟುಹೋಗಿ ಯಾವುದೋ ಕಾಲವಾಗಿದೆ. ಈಗೇನಿದ್ದರೂ ದಿನಕ್ಕೆ ಹನ್ನೆರಡು ಗಂಟೆ ಕೆಲಸ. ವಾರಕ್ಕೆ ಎರಡು ಬಾರಿಯಾದರೂ ಓವರ್ ಟೈಮ್ ಮಾಡಬೇಕು. ನವೀನ್ ಕೆಲಸಕ್ಕೆ ಸೇರಿ ಕೆಲವೇ ದಿನಗಳಾಗಿವೆ. ಪ್ರತಿದಿನ ತಡವಾಗಿ ಹೋಗುವುದನ್ನು ಆತನ ಬಾಸ್ ಕೂಡ ಗಮನಿಸಿ ಆಗಿದೆ. ಉದ್ಯೋಗ ಸಿಗುವುದೇ ಕಷ್ಟ, ಸಿಕ್ಕ ಉದ್ಯೋಗವನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಕಚೇರಿಯ ಬಳಿ ಮನೆ ಸಿಗುವುದು ಕನಸಿನ ಮಾತು. ದೂರದ ಹೆಬ್ಬಾಳದಲ್ಲಿ ಬಾಡಿಗೆ ಮನೆಯಿಂದ ಪ್ರತಿನಿತ್ಯ ಬೈಕ್‌ನಲ್ಲಿ ಓಡಾಟ. ಈ ತಾಪತ್ರಯ ನಿತ್ಯ ಇದ್ದದ್ದೇ.

ದೃಶ್ಯ 2

ಸಮಯ: ಕರಾರುವಾಕ್ಕಾಗಿ ಮೇಲಿನದೇ, ಸ್ಥಳ: ಮುಂಬೈ ನಗರದ ಲೋಕಲ್ ಟ್ರೈನು

25 ಬೋಗಿಗಳ ಲೋಕಲ್ ಟ್ರೈನು, ಪ್ರತಿ ಬೋಗಿಯೂ ಕಿಕ್ಕಿರಿದು ತುಂಬಿದೆ. ರೈಲು ಏರಿ ತನ್ನ ಕೆಲಸಕ್ಕೆ ಹೋಗಲು ಉದಯ್ ಮುಂಜಾನೆಯಿಂದ ಕಾಯುವುದಕ್ಕೆ ಇನ್ನೂ ಕೊನೆಯಾಗಿಲ್ಲ. ಏನೇ ಮಾಡಿದರೂ ಒಂದು ರೈಲನ್ನೂ ಹತ್ತಲು ಸಾಧ್ಯವಾಗಿಲ್ಲ. ಪ್ರತಿ ರೈಲು ಬಂದಾಗಲೂ ಮುಂದಿನದು ಖಾಲಿಯಿರಬಹುದೆಂಬ ಆಶಾಭಾವ. ಏನೇ ಹೋರಾಟ ಮಾಡಿದರೂ ಕೆಲಸಕ್ಕೆ ಸರಿಯಾದ ಸಮಯಕ್ಕೆ ತಲುಪಲಾಗದು ಎಂಬ ದುಗುಡ ಬೇರೆ.

ಇದ್ಯಾವ ಕಥೆ ಎಂದು ಹುಬ್ಬೇರಿಸುತ್ತಿದ್ದೀರಾ? ಜನಸಂಖ್ಯೆ ಹೆಚ್ಚಳವು ಸದ್ಯ ಕಾಣುತ್ತಿರುವ ಪ್ರಗತಿಯನ್ನೇ ಕಂಡರೆ 2050ರ ಹೊತ್ತಿಗೆ ಬೆಂಗಳೂರು, ಮುಂಬೈ ಮಾತ್ರವಲ್ಲ, ಭಾರತದ ಪ್ರತೀ ನಗರದಲ್ಲಿ ಸರ್ವೇಸಾಮಾನ್ಯವಾಗಿ ಕಾಣಬಹುದಾದ ನೋಟ ಇದು. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಜನಸಂಖ್ಯಾ ಬಾಹುಳ್ಯದಲ್ಲಿ ಮುಂದಿನ ವರ್ಷ ಚೀನಾವನ್ನು ಹಿಂದಿಕ್ಕಲಿರುವ ಭಾರತ, 2050ರ ಹೊತ್ತಿಗೆ 164 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರಲಿದೆ. ಪ್ರಸ್ತುತ ಭಾರತದ ಜನಸಂಖ್ಯೆ ಬೆಳೆಯುತ್ತಿರುವ ವೇಗ ನೋಡಿದರೆ ಈ ಸಂಶೋಧನೆಯ ಫಲಿತಾಂಶವನ್ನು ಕಡೆಗಣಿಸಲು ಸಾಧ್ಯವಿಲ್ಲ. ಜನಸಂಖ್ಯೆ ಹೆಚ್ಚಾಗುವುದು ದೊಡ್ಡ ಸಮಸ್ಯೆಯೇನಲ್ಲ ಎಂದು ಓದುಗರು ಭಾವಿಸಬಹುದಾದರೂ ಜನಸಂಖ್ಯಾ ಹೆಚ್ಚಳವನ್ನು ದೇಶ ಹೇಗೆ ಸಂಭಾಳಿಸುತ್ತದೆ ಎಂಬುದು ಚಿಂತೆಗೀಡು ಮಾಡುವ ವಿಚಾರ.

ಜನಸಂಖ್ಯಾ ಹೆಚ್ಚಳದ ಭವಿಷ್ಯ ಏನು?

ವಿಶ್ವ ಜನಸಂಖ್ಯೆಯ ಕುರಿತು ಅಧಿಕೃತ ವರದಿಗಳನ್ನು ಪ್ರಕಟಿಸುವ ಪಾಪ್ಯುಲೇಷನ್ ರೆಫರೆನ್ಸ್ ಬ್ಯೂರೊದ ಪ್ರಕಾರ, 2050ರ ಹೊತ್ತಿಗೆ ಜಗತ್ತಿನ ಜನಸಂಖ್ಯೆ ಒಟ್ಟಾರೆಯಾಗಿ ಶೇಕಡ 28ರಷ್ಟು ಹೆಚ್ಚಾಗುತ್ತದೆ. ಭಾರತ ಮಾತ್ರವಲ್ಲ ನೈಜೀರಿಯಾ, ಕಾಂಗೋ ಗಣರಾಜ್ಯ ಹಾಗೂ ಇಥಿಯೋಪಿಯದಂತಹ ರಾಷ್ಟ್ರಗಳಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದೆ. ಆಸಕ್ತಿಕರ ವಿಚಾರವೇನೆಂದರೆ ಜನಸಂಖ್ಯಾ ಪ್ರಮಾಣ ಏರುತ್ತಿದ್ದರೂ ಭಾರತದಲ್ಲಿ ಮಕ್ಕಳನ್ನು ಪಡೆಯುವ ಫಲವಂತಿಕೆಯ ಪ್ರಮಾಣ (ಟಿಎಫ್‌ಆರ್) ಕುಸಿಯುತ್ತಲೇ ಇದೆ. 1950ರ ಹೊತ್ತಿನಲ್ಲಿ ಜನನ ಪ್ರಮಾಣವು ಪ್ರತೀ ಮಹಿಳೆಗೆ ಆರಾಗಿದ್ದರೆ, ಸದ್ಯ ಅದು ಪ್ರತೀ ಮಹಿಳೆಗೆ 2.2ರಷ್ಟಿದೆ. ಭವಿಷ್ಯದಲ್ಲಿ ಇದು ಇನ್ನೂ ಕಡಿಮೆಯಾಗುತ್ತದೆ. ಆದ್ದರಿಂದ 2100ರ ಹೊತ್ತಿಗೆ ಭಾರತದ ಜನಸಂಖ್ಯಾ ಪ್ರಮಾಣ 2050ರ ಪ್ರಮಾಣದ ಶೇಕಡಾ ಎಪ್ಪತ್ತರಷ್ಟಕ್ಕೆ ಕುಸಿಯಬಹುದೆಂಬುದು ತಜ್ಞರ ಅಭಿಮತ. ಏನೇ ಆದರೂ 2050ರವರೆಗೆ ಭಾರತದ ಜನಸಂಖ್ಯೆ ಬೆಳೆಯುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ.

ನಿರ್ವಹಣೆ ಹೇಗೆ?

ಅಳತೆಗೆ ಸಿಗದೇ ವಿಪರೀತ ವೇಗವಾಗಿ ಬೆಳೆಯುತ್ತಿರುವ ಭಾರತದ ಮಹಾನಗರಗಳು ಜನಸಂಖ್ಯಾ ಹೆಚ್ಚಳವನ್ನು ಹೇಗೆ ನಿರ್ವಹಿಸುತ್ತವೆ ಎಂಬುದೇ ನಮ್ಮೆದುರಿಗಿರುವ ಬಹುದೊಡ್ಡ ಪ್ರಶ್ನೆ. ಪ್ರಸ್ತುತ ಭಾರತದ ಸಣ್ಣ ಸಣ್ಣ ನಗರಗಳಲ್ಲಿ ಜನಸಂಖ್ಯೆ ವಿಸ್ಫೋಟಕಾರಿಯಾಗಿ ಬೆಳೆಯುತ್ತಿದೆ. ಮಹಾನಗರಗಳ ಅವಸ್ಥೆಯನ್ನಂತೂ ಕೇಳುವುದೇ ಬೇಡ. ಮಹಾನಗರಗಳ ಸಂದಿಗೊಂದಿಗಳಲ್ಲಿ ಸ್ಲಂಗಳಂತಹ ಪ್ರದೇಶಗಳು ಬೆಳೆಯುತ್ತಿವೆ. ಅಡ್ಡ ಬೆಳೆಯುವ ಅವಕಾಶವಿಲ್ಲದೆ ಗಗನದೆತ್ತರಕ್ಕೆ ಕಟ್ಟಡಗಳು ಅಪಾರ್ಟ್‌ಮೆಂಟಿನ ಹೆಸರಿನಲ್ಲಿ ಬೆಳೆದು ನಿಂತಿವೆ. ಮೂಲಭೂತ ಸೌಕರ್ಯಗಳು ಮಹಾನಗರದ ಎಲ್ಲ ಮನೆಗಳಿಗೂ ಸಿಗುವುದಿಲ್ಲ. ಕನಿಷ್ಠ ಕುಡಿಯುವ ನೀರನ್ನು ಕೊಡಲು ಸಹ ನಮ್ಮ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಅಂತರ್ಜಲ ಸಾವಿರ ಅಡಿಗಳಿಗಿಂತ ಕೆಳಗೆ ಹೋಗಿದೆ. ಮಳೆಯ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲ.

ಮೂಲಸೌಕರ್ಯ ಎಲ್ಲರಿಗೂ ಸಿಕ್ಕೀತೇ?

ಹದಿನಂಟನೆಯ ಶತಮಾನದಲ್ಲಿಯೇ ಯುರೋಪಿನ ವಿಜ್ಞಾನಿ ಥಾಮಸ್ ಮಾಲ್ತುಸ್ ಎಂಬಾತ ಜನಸಂಖ್ಯೆಯ ಸಿದ್ಧಾಂತವನ್ನು ಪ್ರತಿಪಾದಿಸಿದ್ದ. ಜಗತ್ತಿನ ಜನಸಂಖ್ಯೆಯು ಜ್ಯಾಮಿತೀಯ ವಿಧಾನದಲ್ಲಿ ಪ್ರಗತಿ ಕಂಡರೆ ಆಹಾರೋತ್ಪಾದನೆಯು ಅಂಕಗಣಿತೀಯ ವಿಧಾನದಲ್ಲಿ ಪ್ರಗತಿ ಕಾಣುತ್ತದೆ ಎಂದು ಆತ ಹೇಳಿದ್ದ. ಅಂದರೆ ಜನಸಂಖ್ಯೆ ಬೆಳೆಯುವ ವೇಗಕ್ಕೆ ತಕ್ಕಂತೆ ಆಹಾರೋತ್ಪಾದನೆ ಆಗುವುದಿಲ್ಲ. ಇದರಿಂದ ಆಹಾರದ ಅಭಾವ ಉಂಟಾಗುತ್ತದೆ ಎಂದು ಊಹಿಸಿದ್ದ. ಆದರೆ, ಆಹಾರೋತ್ಪಾದನೆ ಸಮಸ್ಯೆ ಸದ್ಯ ನಮ್ಮ ದೇಶದಲ್ಲಿಲ್ಲವಾದರೂ ಮಿತಿಮೀರಿ ಬೆಳೆದಿರುವ ನಗರಗಳಲ್ಲಿ ಈಗಾಗಲೇ ಇತರೆ ಹಲವಾರು ಸಮಸ್ಯೆಗಳು ಆಕಾಶದೆತ್ತರಕ್ಕೆ ಬೆಳೆದು ನಿಂತಿವೆ. ಜನಸಂಖ್ಯಾ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ.

ಬೆಂಗಳೂರಿಗೆ ಪ್ರತಿದಿನ 112.5 ಕೋಟಿ ಲೀಟರುಗಳಷ್ಟು ನೀರಿನ ಅವಶ್ಯಕತೆಯಿದೆ.

ಆದರೆ, ಸುಮಾರು 90 ಕೋಟಿ ಲೀಟರ್ ನೀರನ್ನು ಮಾತ್ರ ಸರಬರಾಜು ಮಾಡುವ ಸಾಮರ್ಥ್ಯವನ್ನು ಜಲಮಮಂಡಳಿ ಹೊಂದಿದೆ. ಸಮರ್ಪಕ ನೀರು ಸರಬರಾಜಿಗೆ ಏನೆಲ್ಲ ಕಸರತ್ತು ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ. ಇದೊಂದು ಪುಟ್ಟ ಉದಾಹರಣೆಯಷ್ಟೆ.

ನಮ್ಮ ದೇಶದ ರೈಲುಗಳಲ್ಲಿ, ನಗರ ಸಾರಿಗೆಗಳಲ್ಲಿ ಸದಾ ಜನರು ಕಿಕ್ಕಿರಿದು ತುಂಬಿರುವ ನೋಟ ಸಾಮಾನ್ಯ. ಮುಂಬೈಯ ಲೋಕಲ್ ಟ್ರೈನುಗಳ ಜನಜಂಗುಳಿಯನ್ನು ಕಂಡರೆ ಬೆಚ್ಚಿ ಬೀಳಬೇಕಾಗುತ್ತದೆ. ಮೆಟ್ರೊದಲ್ಲಿಯೂ ಅದೇ ಗಲಾಟೆ. ಹೆಚ್ಚು ಜನ ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸಿದರೂ ಸಮೂಹ ಸಾರಿಗೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬೇಕಾಗುತ್ತದೆ. ಆಗಲೂ ಟ್ರಾಫಿಕ್ ಸಮಸ್ಯೆ! ಪ್ರಸ್ತುತ ಬೆಂಗಳೂರೊಂದರಲ್ಲಿಯೇ ಒಂದು ಕೋಟಿಗೂ ಮಿಕ್ಕಿದ ನೋಂದಾಯಿತ ವಾಹನಗಳಿವೆ. ಕೋವಿಡ್ ನಂತರ ಖಾಸಗಿ ವಾಹನಗಳ ನೋಂದಣಿ ಶೇಕಡ 35ರಷ್ಟು ಹೆಚ್ಚಾಗಿದೆ. ಇವನ್ನೆಲ್ಲಾ ತಡೆದುಕೊಳ್ಳುವ ಶಕ್ತಿಯಿರುವ ರಸ್ತೆಗಳು ನಮ್ಮಲ್ಲಿ ಎಷ್ಟಿವೆ? ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ರಸ್ತೆಗಳನ್ನು ವಿಸ್ತರಿಸೋಣವೆಂದರೆ ಅದೂ ಆಗದ ಸ್ಥಿತಿ. ನಗರಗಳು ಬೆಳೆದಂತೆಲ್ಲ ಇಮ್ಮಡಿಯಾಗುವ ತ್ಯಾಜ್ಯ ವಿಲೇವಾರಿಯ ಸಮಸ್ಯೆಯಂತೂ ಸದ್ಯದ ಮಟ್ಟಿಗೆ ಬಿಡಿಸಲಾಗದ ಇಲ್ಲದ ಕಗ್ಗಂಟಾಗಿ ಉಳಿದಿದೆ.

ಸರ್ಕಾರಿ ಕಚೇರಿಗಳಲ್ಲಿ, ನ್ಯಾಯಾಲಯಗಳಲ್ಲಿ ವಿಲೇವಾರಿಯಾಗದೇ ಉಳಿದ ಕಡತಗಳ ಲೆಕ್ಕ ಇಟ್ಟವರು ಯಾರು? ನೇಮಕಾತಿಯಿಲ್ಲದೇ ಕಚೇರಿಗಳಲ್ಲಿ ಅವಶ್ಯಕ ಸಿಬ್ಬಂದಿಯಿಲ್ಲ. ಜನಸಂಖ್ಯೆ ಬೆಳೆದಂತೆಲ್ಲ ಕಡತಗಳ ಸಂಖ್ಯೆಯೂ ಬೆಳೆಯುತ್ತದೆ. ಅವುಗಳನ್ನು ಇಡಲು ಜಾಗ ಎಲ್ಲಿ? ವಿಲೇವಾರಿ ಮಾಡುವವರು ಯಾರು? ನಿರುದ್ಯೋಗ ಸಮಸ್ಯೆಯನ್ನು ನಿಖರವಾಗಿ ಅಳೆಯಲು ನಮ್ಮಲ್ಲಿ ಯಾವುದೇ ಮಾಧ್ಯಮಗಳು ಇಲ್ಲದೇ ಹೋದರೂ, ಸಮಸ್ಯೆಯ ಆಳ–ಅಗಲ ಸಣ್ಣದೇನೂ ಅಲ್ಲ.

ಮೂಲಸೌಕರ್ಯದ ವ್ಯವಸ್ಥೆ ಮಾಡಲು ನಮ್ಮ ಸರ್ಕಾರಗಳು ಶಕ್ತವಾಗಿದ್ದಾವೆಂದೇ ಊಹಿಸಿಕೊಂಡರೂ ಅದನ್ನೆಲ್ಲಾ ಸುವ್ಯಸ್ಥಿತವಾಗಿ ನಿರ್ವಹಿಸಲು ಅವು ಎಷ್ಟರಮಟ್ಟಿಗೆ ತಯಾರಾಗಿವೆ? ದೈನಂದಿನ ಅವ್ಯವಸ್ಥೆಯನ್ನೇ ನಿಭಾಯಿಸಲು ನಮ್ಮ ಸರ್ಕಾರಗಳು ಹೆಣಗುತ್ತಿರುವಾಗ, ದಿನದಿಂದ ದಿನಕ್ಕೆ ಹೆಚ್ಚಾಗುವ ಇಂತಹ ಸಮಸ್ಯೆಗಳನ್ನು ಅವು ಹೇಗೆ ನಿರ್ವಹಿಸುತ್ತವೆ ಎಂಬುದು ಚಿಂತೆಗೀಡುಮಾಡುವ ವಿಚಾರ.

ಜನಸಂಖ್ಯಾ ಹೆಚ್ಚಳ ಕೇವಲ ಶಾಪವೇ?

ಜನಸಂಖ್ಯಾ ಹೆಚ್ಚಳವೆಂಬ ಪದವನ್ನು ಕೇಳಿದ ಕೂಡಲೇ ಅದೊಂದು ಪಿಡುಗೆಂಬ ಭಾವನೆಯೇ ನಮ್ಮ ಮನದಲ್ಲಿ ಮೂಡುತ್ತದೆ. ಆದರೆ, ಆಳವಾಗಿ ಗಮನಿಸಿದರೆ ಜನಸಂಖ್ಯೆ ಹೆಚ್ಚಳವು ಅಂತಹ ಗಂಭೀರ ಸಮಸ್ಯೆಯೇನಲ್ಲ. ಮೇಲೆ ಉದಾಹರಿಸಲಾದ ಎಲ್ಲಾ ಸಮಸ್ಯೆಗಳಿಗೂ ನಿರ್ವಹಣೆಯಲ್ಲಾಗುತ್ತಿರುವ ಅವ್ಯವಸ್ಥೆಯೇ ಕಾರಣ ಹೊರತು, ಜನಸಂಖ್ಯಾ ಹೆಚ್ಚಳದ ನೇರ ದುಷ್ಪರಿಣಾಮ ಎಂದು ಖಂಡುತುಂಡಾಗಿ ಹೇಳಲಾಗದು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸೋಣ. ಅಧ್ಯಯನವೊಂದರ ಪ್ರಕಾರ, ಭಾರತದ ಜನಸಂಖ್ಯೆಯ ಶೇಕಡಾ 27ರಷ್ಟು ಯುವಜನಾಂಗವೇ ಇದೆ. ಅಂದರೆ ಸರಿಸುಮಾರು ಮೂವತ್ತಮೂರು ಕೋಟಿ (ಅಮೆರಿಕದ ಒಟ್ಟು ಜನಸಂಖ್ಯೆಯೇ 32 ಕೋಟಿ) ಯುವಜನಾಂಗ ಎಂದು ಅಂದಾಜಿಸಬಹುದು. ಇಂತಹ ಸಮೃದ್ಧ ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹದು. ಬಹಳ ಮುಖ್ಯವಾಗಿ ಅಪಾರವಾದ ಜನಸಂಖ್ಯೆ ಹೊಂದಿರುವುದರಿಂದ ನಮ್ಮ ದೇಶ ಜಗತ್ತಿನಲ್ಲಿಯೇ ಅತಿ ದೊಡ್ಡ ಮಾರುಕಟ್ಟೆ. ಹೆಚ್ಚು ಜನಸಂಖ್ಯೆಯ ಕಾರಣ ಹೆಚ್ಚೇ ಹೆಚ್ಚು ಮಾನವ ಗಂಟೆಗಳ ಸವಲತ್ತು ಅನಾಯಾಸವಾಗಿ ದೇಶಕ್ಕೆ ಲಭಿಸುತ್ತದೆ. ಅದನ್ನು ದೇಶ ಕಟ್ಟುವಲ್ಲಿ ಬಳಸಿಕೊಳ್ಳುವ ಚಾಕಚಾಕ್ಯತೆ ಸರ್ಕಾರಗಳಿಗೆ ಇರಬೇಕಷ್ಟೆ.

ಕೈಮೀರಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಕಟ್ಟಿಹಾಕುವುದು ಹೇಗೆ? ನಮ್ಮ ದೇಶದ ಜನಸಂಖ್ಯೆ 2050ರ ಹೊತ್ತಿಗೆ 164 ಕೋಟಿಯಷ್ಟಯಾಗುತ್ತದೆ ಎಂಬುದು ನಿಖರವಾದ ಲೆಕ್ಕಾಚಾರವಲ್ಲದೇ ಹೋದರೂ ಅದರ ಆಸುಪಾಸಿನಲ್ಲಿ ಬೆಳೆಯುತ್ತದೆ ಎಂಬುದನ್ನಂತೂ ತಳ್ಳಿ ಹಾಕಲು ಸಾಧ್ಯವಿಲ್ಲ. ಮೇಲೆ ಬೆಂಗಳೂರನ್ನು ಉದಾಹರಣೆಗಾಗಿ ತೆಗೆದುಕೊಂಡಿದ್ದೇನೆ, ನಿಜ. ಆದರೆ, ಇತರ ನಗರಗಳಲ್ಲಿ ಇಂತಹದ್ದೇ ಅಥವಾ ಇದಕ್ಕಿಂತಲೂ ಭೀಕರವಾದ ಸಮಸ್ಯೆಗಳು ಉಂಟಾಗುವುದರಲ್ಲಿ ಸಂದೇಹವಿಲ್ಲ. ಅಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಾವೀನ್ಯದ ‘ಲೇಬರ್ ರೂಮ್’ಗಳು ಈಗಲೇ ಕಾರ್ಯಪ್ರವೃತ್ತವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.