ಕನ್ನಡದ ಹೆಸರಾಂತ ವಿಮರ್ಶಕ ಜಿ.ಎಸ್.ಆಮೂರ ಅವರ ಜನ್ಮ ಶತಮಾನೋತ್ಸವ ಅಕ್ಟೋಬರ್ 20 ರ ಭಾನುವಾರ ಧಾರವಾಡದಲ್ಲಿ ನಡೆಯಲಿದೆ. ಆಮೂರರೊಂದಿಗೆ ಬಹುಕಾಲ ಒಡನಾಟ ಹೊಂದಿದ್ದ ಶ್ರೀಧರ ಬಳಗಾರ ಅವರು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡಿದ್ದಾರೆ.

ಪದವಿ ಶಿಕ್ಷಣಕ್ಕಾಗಿ ನಾನು ಧಾರವಾಡಕ್ಕೆ ಹೋದ ಕೆಲವೇ ದಿನಗಳಲ್ಲಿ ಅಲ್ಲಿಯ ಪರಿಸರದ ಪರಿಚಯವಾಗುತ್ತ ಹುಟ್ಟಿದೂರಿನ ಪ್ರೀತಿಯ ವಿಸ್ತರಣೆಯಾಯಿತು. ಈ ಪ್ರೀತಿಯ ಪ್ರವೇಶಕ್ಕೆ ಕಾರಣರಾದವರಲ್ಲಿ ಕೀರ್ತಿನಾಥ ಕುರ್ತಕೋಟಿ ಮತ್ತು ಜಿ. ಎಸ್. ಆಮೂರವರು ಪ್ರಮುಖರು.

ಕಾಲೇಜಿನಲ್ಲಿ ಪಾಠ ಮಾಡುತ್ತ ವರ್ಷದಲ್ಲಿ ಒಂದೆರೆಡು ಸಲ ಪರೀಕ್ಷೆಯ ಕೆಲಸಕ್ಕೆ ಧಾರವಾಡಕ್ಕೆ ಹೋಗುತ್ತಿದ್ದ ದಿನಗಳಲ್ಲಿ ನಿತ್ಯ ಸಂಜೆ ಬಿಡುವಿನ ಸಮಯ ಮನೋಹರ ಗ್ರಂಥ ಮಾಲೆಯ ಅಟ್ಟಕ್ಕೆ ಮತ್ತು ಆಮೂರವರ ಮನೆಗೆ ಹೋಗುವುದು ವ್ರತವಾಯಿತು. ಅಟ್ಟದ ಮುಸ್ಸಂಜೆಯಲ್ಲಿ ಕುರ್ತಕೋಟಿಯವರೊಂದಿಗೆ ಮಾತು ಮಥಿಸಿ ದೂರದ ದಿಗಂತವಾಗಿದ್ದ ಧಾರವಾಡದ ಪೇಶ್ವೆಯವರು ಕಟ್ಟಿದ ರವಿವಾರ ಪೇಟೆ, ಬಿಜಾಪುರ ಸುಲ್ತಾನರು ಕಟ್ಟಿದ ಕೋಟೆ, ಡೆಪ್ಯೂಟಿ ಚನ್ನಬಸಪ್ಪನವರು ತೆರೆದ ಶಿಕ್ಷಕರ ಟ್ರೇನಿಂಗ್ ಕಾಲೇಜು, ಹಿಂದೂಸ್ತಾನೀ ಸಂಗೀತ ಬೀಜ ಬಿತ್ತಿದ ಭಾಸ್ಕರಬುವಾ, ಮಲ್ಲಿಕಾರ್ಜುನ ಮನಸೂರು ಮತ್ತು ಬೇಂದ್ರೆಯವರ ನಡುವೆ ನಿರ್ಜನ ಬೀದಿಗಳಲ್ಲಿ, ಬೆಳದಿಂಗಳ ರಾತ್ರಿಯಲ್ಲಿ ನಡೆಯುತ್ತಿದ್ದ ಸಂವಾದ, ಮಂಗಳವಾರದ ಸಂತೆಯಲ್ಲಿ ತಿರುಗಾಡಿ ಶಬ್ದಕೋಶವನ್ನು ಸಂಕಲಿಸಿದ ಕಿಟ್ಟೆಲ್, ಗಂಗಾಧರ ತುರಮರಿಯವರು ಮಾಡಿದ ಬಾಣನ ಕಾದಂಬರಿಯ ಭಾಷಾಂತರ, ಬೇಂದ್ರೆಯವರ ಸಾಧನಕೇರಿ, ಅತ್ತಿಕೊಳ್ಳ, ಸೋಮೇಶ್ವರ–ಹೀಗೆ ಹಲವು ಸಂಗತಿಗಳು ಸನಿಹ ಬಂದವು. ಕರ್ನಾಟಕ ಕಾಲೇಜು, ರೊದ್ದ ರಸ್ತೆ, ‘ಗೆಳೆಯರ ಗುಂಪು’, ವಿದ್ಯಾವರ್ಧಕ ಸಂಘದ ಚರಿತ್ರೆ ಮತ್ತು ‘ಜಯಂತಿ ಪತ್ರಿಕೆ’ಯ ಬೆಟಗೇರಿ ಕೃಷ್ಣಶರ್ಮ, ಆರ್ಮಾಂಡೊ ಮೆನೆಝಿಸ್, ರೊದ್ದ ಶ್ರೀನಿವಾಸರಾಯರು, ಸರ್ ಸಿದ್ಧಪ್ಪ ಕಂಬಳಿ, ಶ್ರೀರಂಗರ ಕುರಿತು ಆಮೂರವರು ನೆನಪಿನ ದೀಪ ಹಚ್ಚಿ ನೇಯ್ದ ನಿರೂಪಣೆ ಧಾರವಾಡದ ಕುರಿತಾದ ನನ್ನ ಲೋಕದೃಷ್ಟಿ ಪೂರ್ಣಗೊಳ್ಳಲು ಕಾರಣವಾಯಿತು. ಸ್ಥಳೀಯರು ಮತ್ತು ಹೊರಗಿಂದ ಬಂದ ಮಹನೀಯರು ಸೇರಿ ಸಾಂಸ್ಕೃತಿಕ ಚಿತ್ರಕೂಟವಾಗಿ ಧಾರವಾಡವನ್ನು ಕಟ್ಟಿದ ಕಥೆಯನ್ನು ಆಮೂರರೇ ವಿವರಿಸಿದರು.

ಅವರ ಮನೆಯಲ್ಲಿ ನಮ್ಮ ಸಾಹಿತ್ಯ ಸಲ್ಲಾಪ ಆರಂಭವಾಗುತ್ತಿತ್ತು. ಬಹುಕಾಲ ಹೊರಗಿದ್ದು ಮರಳಿದ ಅವರಿಗೆ ಧಾರವಾಡವನ್ನು ನೆನಪಿಸಿಕೊಳ್ಳುವುದರಲ್ಲಿ ಏನೋ ಸಂತೋಷವಿತ್ತೆಂದು ಕಾಣುತ್ತದೆ. ನನಗೆ ಅದರಿಂದ ಅತ್ಯಮೂಲ್ಯ ಮಾಹಿತಿಗಳು ದೊರಕುತ್ತಿದ್ದವು. ಬಳ್ಳಾರಿಯಿಂದ ಬಂದಿದ್ದ ರೊದ್ದ ಶ್ರೀನಿವಾಸರಾಯರ ದೂರದರ್ಶಿತ್ವದಿಂದ ಸ್ಥಾಪನೆಯಾದ ಕರ್ನಾಟಕ ಕಾಲೇಜಿನ ಕುರಿತು ಸವಿಸ್ತಾರವಾಗಿ ಹೇಳುವುದರಲ್ಲೇ ಅವರೊಳಗೆ ಅಭಿಮಾನ ಉಕ್ಕುತ್ತಿತ್ತು. ಪ್ರತಿಷ್ಠಿತ ವಿದ್ಯಾವರ್ಧಕ ಸಂಘವನ್ನು ಕಟ್ಟುವುದರಲ್ಲಿದ್ದ ಅವರ ಪಾತ್ರವನ್ನು ಹೆಮ್ಮೆಯಿಂದ ವಿವರಿಸಿದರು. ಹಿಂದುಳಿದ ವರ್ಗಗಳ ರಾಜಕೀಯ ಸಂಘಟನೆಗೆ ಶ್ರಮಿಸಿದ ಸರ್ ಸಿದ್ಧಪ್ಪ ಕಂಬಳಿಯವರ ಕೊಡುಗೆಯನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ. ಬಡತನದಲ್ಲೇ ಬದುಕಿ, ಅತ್ಯಂತ ಜನಪ್ರಿಯವಾಗಿದ್ದ ‘ಜಯಂತಿ’ ಮಾಸಪತ್ರಿಕೆಯನ್ನು ಇಪ್ಪತ್ಮೂರು ವರ್ಷಗಳ ಕಾಲ ನಿರಂತರವಾಗಿ ನಡೆಸಿ ಹೊಸ ಲೇಖಕರನ್ನು ಬೆಳಕಿಗೆ ತಂದು ಪತ್ರಿಕೋದ್ಯಮಕ್ಕೆ ಮಾದರಿಯಾಗಿದ್ದ ಬೆಟಗೇರಿ ಕೃಷ್ಣಶರ್ಮರಿಂದ ಧಾರವಾಡ ಪಡೆದ ಪತ್ರಿಕಾ ಪರಂಪರೆಯನ್ನು ಮುಕ್ತ ಮನಸಿನಿಂದ ಕೊಂಡಾಡಿದರು. ಎಲ್ಲ ತಲೆಮಾರುಗಳ ಲೇಖಕರ ಕೃತಿಗಳಿಗೆ ನಿರಂತರ ಬೆಳಕು ನೀಡಿದ ಜಿ.ಬಿ. ಜೋಶಿಯವರು ಹುಟ್ಟು ಹಾಕಿದ ಮತ್ತು ‘ಬರೆಯದೇ ಹೋದ ಕವಿತೆಗಳನ್ನೂ ನೆನಪಿಟ್ಟಿಕೊಳ್ಳುವ ಪ್ರತಿಭೆ ಇದ್ದ’ ಕುರ್ತಕೋಟಿಯವರ ಶ್ರಮದಿಂದ ಆಯಾಸವಿಲ್ಲದೆ ನಡೆಯುತ್ತಿರುವ ಮನೋಹರ ಗ್ರಂಥ ಮಾಲೆಯ ಐತಿಹಾಸಿಕ ಸಾಧನೆಯ ಹಿನ್ನೆಲೆಯ ಸೂಕ್ಷ್ಮಗಳನ್ನು ಅವರಿಂದ ಅರಿಯುವಂತಾಯಿತು. ಕನ್ನಡವನ್ನು ಕಟ್ಟಿದ ಹುಯಲುಗೋಳ ನಾರಾಯಣರಾಯರು, ಆಲೂರು ವೆಂಕಟರಾಯರು ಅವರ ಮಾತಿನಲ್ಲಿ ಹಾಸುಹೊಕ್ಕಾಗಿ ಧಾರವಾಡದ ಪ್ರಾತಃಕಾಲದ ಬೆಳಕಾಗಿ ಕಂಡರು.

ಕುಮಟೆಯ ಕಾಲೇಜಿನಲ್ಲಿ ನಡೆದ ಪ್ರಸಂಗವೊಂದನ್ನು ಅವರು ಸ್ವಲ್ಪ ಮುಜುಗರದಿಂದ ಹೇಳಿದ್ದರು. 1952ರಲ್ಲಿ ಎರಡು ವರ್ಷಗಳ ಕಾಲ ಅವರು ಇಂಗ್ಲಿಷ್ ವಿಭಾಗದಲ್ಲಿ ಗೋಪಾಲಕೃಷ್ಣ ಅಡಿಗರ ಸಹೋದ್ಯೋಗಿಗಳಾಗಿದ್ದರು; ಬಿ. ಎಚ್. ಶ್ರೀಧರ ಮತ್ತು ಡಾ. ಕೆ. ಕೃಷ್ಣಮೂರ್ತಿಯವರು ಜೊತೆಗಿದ್ದರು. ಒಮ್ಮೆ ಟಿ. ಎಸ್. ಎಲಿಯಟ್ನ ಸಾಹಿತ್ಯದ ಕುರಿತು ಏರ್ಪಟ್ಟ ವಿಚಾರ ಸಂಕಿರಣವೊಂದರಲ್ಲಿ ಅಡಿಗರು ಕಾವ್ಯದ ಬಗ್ಗೆ, ಶ್ರೀಧರರು ವಿಮರ್ಶೆಯ ಬಗ್ಗೆ ಮತ್ತು ಆಮೂರರು ನಾಟಕಗಳ ಬಗ್ಗೆ ಮಾತಾಡಿದ್ದರು. ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ವರದಿಯ ಬಗ್ಗೆ ಅಡಿಗರು ಖಾರವಾಗಿ ಪ್ರತಿಕ್ರಿಯಿಸುತ್ತ, “ಆಮೂರರೇ ವರದಿ ನೋಡಿದಿರಾ? ನಾನು ವಿಸ್ತಾರವಾಗಿಯೂ ನೀವು ಆಳವಾಗಿಯೂ ಮಾತಾಡಿದವಂತೆ!” ಎಂದರಂತೆ. ಆ ವರದಿಯನ್ನು ಕಳುಹಿಸಿದವರು ಕೆ. ಕೃಷ್ಣಮೂರ್ತಿಯವರಾಗಿದ್ದರು. ಅಡಿಗರ ಸಂಬಂಧ ಕೃಷ್ಣಮೂರ್ತಿಯವರೊಂದಿಗೆ ಸರಿಯಿರದಿದ್ದರಿಂದ ಈ ವರದಿಗೆ ವಿಶೇಷ ಅರ್ಥವನ್ನು ಅಡಿಗರು ಹಚ್ಚಿದ್ದರು. ಸಂಬಂಧ ಹದಗೆಡಲು ಅಡಿಗರ ಆಪ್ತಸಂಬಂಧಿಯಾಗಿದ್ದ ಶ್ರೀಧರರನ್ನು ಕೃಷ್ಣಮೂರ್ತಿಯವರು ನಡೆಸಿಕೊಂಡ ರೀತಿ ಮುಖ್ಯ ಕಾರಣವಾಗಿರಬೇಕೆಂದು ಊಹಿಸಿದ್ದರು.

ಕುಮಟೆಯ ನೆನಪು ಅವರಿಗೆ ಪ್ರಿಯರಾಗಿದ್ದ ವಿ. ಸೀತಾರಾಮಯ್ಯರವರನ್ನು ಹಿಂಬಾಲಿಸುತ್ತಿತ್ತು. ವಿ. ಸೀ. ಆಗ ಹೊನ್ನಾವರ ಕಾಲೇಜಿನ ಪ್ರಿನ್ಸಿಪಾಲಾಗಿದ್ದರು; ಪರೀಕ್ಷೆಯ ನಿರ್ವಹಣೆಗೆ ವಿಶ್ವವಿದ್ಯಾಲಯದವರು ಆಮೂರರನ್ನು ಹೊನ್ನಾವರದ ಕಾಲೇಜಿಗೆ ಕಳುಹಿಸಿದ್ದರು; ವಾಲ್ಮೀಕಿ ರಾಮಾಯಣದ ಮೇಲೊಂದು ಸಭೆ ಏರ್ಪಡಿಸಿ ಅದರಲ್ಲಿ ಆಮೂರರು ಸೀತೆಯ ಪರವಾಗಿಯೂ ವಿ. ಸೀಯವರು ರಾಮನ ಪರವಾಗಿಯೂ ವಾದಿಸಿದರಂತೆ. ರಾಮಾಯಣದ ‘ಅರಣ್ಯಕಾಂಡ’ದಲ್ಲಿ ನಡೆದ ಪ್ರಸಂಗವನ್ನು ಆಧರಿಸಿ ಮುನಿಸಂಘದವರನ್ನು ದಂಡಕಾರಣ್ಯದ ರಾಕ್ಷಸರಿಂದ ರಕ್ಷಿಸಲು ವಾಗ್ದಾನ ಮಾಡಿದ ರಾಮನನ್ನು ಸೀತೆ ಕ್ಷತ್ರಿಯ ಧರ್ಮವನ್ನು ಆಚರಿಸಬೇಕಾದದ್ದು ಅಯೋಧ್ಯಯಲ್ಲಿ ತಪೋವನದಲ್ಲಲ್ಲ ಎಂದು ವಾದಿಸಿದನ್ನು ಆಮೂರರು ಎತ್ತಿ ಹಿಡಿದರೆ, ವಿ. ಸೀಯವರು ಆರ್ತರನ್ನು ರಕ್ಷಿಸುವುದು ಕ್ಷತ್ರಿಯನಾದ ರಾಮನ ಧರ್ಮ ಎಂದು ಪ್ರತಿವಾದಿಸಿದ್ದರಂತೆ. ಕೊನೆಯಲ್ಲಿ ಸೀತೆ, “ನಿನಗೆ ಧರ್ಮದ ಉಪದೇಶ ಮಾಡಲು ನಾನು ಯಾರು?” ಎಂದು ಖೇದಪಟ್ಟರೆ ರಾಮ, “ನೀನು ನನ್ನ ಮೇಲಿನ ಪ್ರೀತಿಯಿಂದ ಈ ಮಾತುಗಳನ್ನು ಹೇಳುತ್ತಿದ್ದೀಯೆ” ಎಂದು ವಾದ ನಿಲ್ಲಿಸುತ್ತಾನಂತೆ. ಸಂಸಾರದಲ್ಲಿ ಅಭಿಪ್ರಾಯ ಭೇದಗಳಿದ್ದರೂ ವೈಯಕ್ತಿಕ ರಾಗದ್ವೇಷಗಳಿರಲಿಲ್ಲ ಎಂದು ಆಮೂರರು ಅಂದು ನೀಡಿದ ಒತ್ತು ನನಗೆ ಅರ್ಥಪೂರ್ಣವೆನಿಸಿದೆ. ಯಕ್ಷಗಾನಪ್ರಿಯರಾದ ಉತ್ತರಕನ್ನಡದ ಜನರಿಗೆ ಅಂದಿನ ವಾದ ಇಷ್ಟವಾಗಿತ್ತೆಂದು ಹೇಳಿದ್ದರು.

ಧಾರವಾಡ ಅವರನ್ನು ಬೀಳ್ಕೊಟ್ಟ ಸಂದರ್ಭ ಮಹಾನಿರ್ಗಮನದ ಪರ್ವದಂತೆ ಕಂಡಿತ್ತು ನನಗೆ. ಧಾರವಾಡವನ್ನು ಬಿಟ್ಟು ಹೋಗಲು ನಿಮಗೆ ಬೇಸರ ಎನಿಸುವುದಿಲ್ಲವೆ ಎಂದು ಕೇಳಿದ್ದೆ. ಸ್ಥಾನಪಲ್ಲಟವನ್ನು ಕಾಲ ನಿಯಮವೆಂದು ಸ್ವೀಕರಿಸಿದ ತನಗೆ ಹತ್ತಿಳಿಯುವ ಹೊಸ ನಿಲ್ದಾಣಗಳ ಪಯಣದ ಬಗ್ಗೆ ಹಳವಂಡವೇನೂ ಇಲ್ಲವೆಂದು ಹೇಳಿದರು. ಕೊನೆಯ ಸಲ ಧಾರವಾಡದ ಮನೆಯಲ್ಲಿ ಅವರನ್ನು ಮಾತಾಡಿಸಿದಾಗ ಅವರ ಹೆಂಡತಿಯವರ ದೇಹಾಂತ್ಯವಾಗಿತ್ತು. ಮನೆಯ ನೀರವತೆಯಲ್ಲಿನ್ನೂ ಸೂತಕದ ಶೋಕವಿತ್ತು. ಪುಸ್ತಕಕ್ಕೆ ಅಂಟಿಕೊಂಡಿದ್ದ ಅವರು ಒಂಟಿ ಅನಿಸಲಿಲ್ಲ; ವಿಲಕ್ಷಣ ಮೌನದ ನಂತರ ಅವರು ತಮ್ಮ ಸಹಧರ್ಮಿಣಿಯ ಬಗ್ಗೆ ಮಾತಾಡುತ್ತ ಓದು, ಬರೆಹ, ಪಾಠ ಪ್ರವಚನ, ಸಾಹಿತ್ಯ ಕಾರ್ಯಕ್ರಮಗಳ ನಡುವೆ ಹೆಂಡತಿಗೆ ಸಲ್ಲಬೇಕಿದ್ದ ಖಾಸಗಿ ಸಾಂಗತ್ಯವನ್ನು ಗಂಡನಾಗಿ ತನ್ನಿಂದ ನೀಡಲಾಗಲಿಲ್ಲ ಎಂದು ಖೇದಪಟ್ಟರು.

ಹೆಂಡತಿಯ ನಿರ್ಗಮನದ ನಂತರ ಅವರು ಪ್ರಾಪಂಚಿಕ ಆಸಕ್ತಿಯನ್ನು ಕಳೆದುಕೊಂಡು ಅಲೌಕಿಕದತ್ತ ವಾಲಿದ್ದರು. ಒಳ್ಳೆಯ ಮನುಷ್ಯ ಸಂಬಂಧದಿಂದ ಸಾಹಿತ್ಯಕ್ಕೆ ಶ್ರೇಷ್ಠತೆ ಪ್ರಾಪ್ತವಾಗುತ್ತದೆಂದು ನಂಬಿ ನಡೆದ ಆಮೂರರು ಭೌತಿಕವಾಗಿರದ ಧಾರವಾಡ ನನಗೆ ತಾಯಿಯಿರದ ತವರಿನಂತೆ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.