ಅದೊಂದು ವರ್ಷ ತೋಟದ ಮನೆಯಲ್ಲಿದ್ದ ನನಗೆ ಸರಿರಾತ್ರಿಯಲ್ಲಿ ಎಚ್ಚರವಾಯಿತು. ಮೈಮೇಲೆ ಏನೋ ಓಡಾಡಿದ ಅನುಭವ. ಟಾರ್ಚ್ ಹತ್ತಿಸಿ ನೋಡುತ್ತೇನೆ, ಮನೆಯ ಗೋಡೆಯ ಮೇಲೆಲ್ಲ ಇರುವೆಗಳೇ! ಮೊಟ್ಟೆ ಹೊತ್ತು ರಾಶಿ ರಾಶಿ ಇರುವೆಗಳು ಹೊರಗಿನಿಂದ ಮನೆಯೊಳಗೆ ಬರುತ್ತಿದ್ದವು. ಇರುವೆಗಳಿಲ್ಲದ ಕಡೆ ಚಾಪೆ ಹಾಸಿ ಮಲಗುವುದಕ್ಕೂ ಸ್ವಲ್ಪ ಹೊತ್ತಿಗೆ ಸಾವಿರಾರು ಇರುವೆಗಳು ಚಾಪೆಯ ಅಡಿ ಬಂದು, ನನ್ನ ಮೈಮೇಲೆ ಓಡಾಡಿ ಕಚಗುಳಿ ಇಡುವುದಕ್ಕೂ ಸರಿಹೋಯಿತು. ಅಲ್ಲಿಂದ ಎದ್ದು, ಇನ್ನೊಂದೆಡೆ ಮಲಗಿದಾಗಲೂ ಅದೇ ಕಥೆ. ಕೊನೆಗೆ ಬೇಸತ್ತು ಮನೆ ಮುಂದಿನ ಹಾಸುಗಲ್ಲಿನ ಮೇಲೆ ಮಲಗಿ ರಾತ್ರಿ ಕಳೆದೆ.

ಮರುದಿನ ರಾತ್ರಿ ಭರ್ಜರಿ ಮಳೆ ಬಂತು. ಅದು ಆ ವರ್ಷದ ಮೊದಲ ಮುಂಗಾರು ಮಳೆ. ‘ನಿನ್ನೆ ಇರುವೆ ಮೊಟ್ಟೆ ಹೊತ್ತವು ನೋಡಿ. ಅದಕ್ಕೇ ಮಳೆ ಯೋಗ ಬಂತು’ ತೋಟದ ಕಾವಲುಗಾರ ನಂಜಪ್ಪ ಇರುವೆ ಗೂಡಿನತ್ತ ಕೈ ಮುಗಿದರು. ಮಳೆ ಬರುವ ಮುನ್ನ ಬೆಚ್ಚನೆ ಜಾಗ ಹುಡುಕಿಕೊಂಡು ಬಂದ ಇರುವೆಗಳ ಅಲೌಕಿಕ ಶಕ್ತಿ ಕಂಡು ನನಗೆ ಸೋಜಿಗವಾಯಿತು.

ಮುಂಗಾರು ಮಳೆಯ ಮಾಂತ್ರಿಕತೆಯೇ ಅಂಥದ್ದು. ಇಳೆಗೆ ಕಳೆ ತರುವ, ಜಡಬಿದ್ದ ಕೃಷಿ ಕೆಲಸಕ್ಕೆ ಚೈತನ್ಯ ತುಂಬುವ ಜೀವದಾಯಿನಿ. ಪ್ರಪಂಚದ ಅರ್ಧಭಾಗ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಸಂಕ್ರಾಂತಿ ಮುಗಿಯುತ್ತಿದ್ದಂತೆ ಹಳ್ಳಿಗರು ಮುಂಗಾರಿನ ಲೆಕ್ಕಾಚಾರ ಹಾಕಲು ಶುರುಮಾಡುತ್ತಾರೆ. ಭರತ ಹುಣ್ಣಿಮೆಯ ದಿನ ಮಕೋಟ್ ಚುಕ್ಕೆ ನೋಡುವ ಮೂಲಕ ಬರುವ ವರ್ಷದ ಮಳೆ ಬೆಳೆಯ ಅಂದಾಜು ಮಾಡುತ್ತಾರೆ. ಚುಕ್ಕೆ ಯಾವ ದಿಕ್ಕಿಗೆ ಮೂಡುತ್ತದೋ ಆ ದಿಕ್ಕಿನ ಭಾಗದಲ್ಲಿ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ. ‘ನನ್ನ ಅನುಭವದಲ್ಲಿ ಮಕೋಟ್ ಚುಕ್ಕೆ ಅಂದಾಜು ಸುಳ್ಳು ಆಗಿಲ್ಲ ನೋಡಿ’ ಕನಕಪುರದ ಕಾಡುಹಳ್ಳಿಯ ಹಲಗಪ್ಪ ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಯುಗಾದಿಯ ದಿನ ಚಂದ್ರನ ಕೋಡು ಹೆಚ್ಚು ಬಾಗಿದ ದಿಕ್ಕಿಗೆ ಮಳೆ ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆಯೂ ಇದೆ. ಉಗನಿ ಹಂಬು ಹೆಚ್ಚು ಹಬ್ಬಿದ, ಹುಣಸೆ ಚೆನ್ನಾಗಿ ಹೂಬಿಟ್ಟ, ಮುಳ್ಳು ಗೆಣಸಿನ ಬಳ್ಳಿ ಬಾಡದೆ ಹುಲುಸಾಗಿ ಬೆಳೆದ ವರ್ಷ ಸಮೃದ್ಧ ಮಳೆ ಬರುತ್ತದೆ ಎಂದು ಹಳ್ಳಿಗರು ನಂಬುತ್ತಾರೆ.

ಮುಂಗಾರಿಗೆ ಮುನ್ನುಡಿ ಬರೆಯುವುದು ಗೆಡ್ಡೆ ಗೆಣಸುಗಳು. ನೋಡಲು ಒಣಗಿದ ಕಟ್ಟಿಗೆ ಥರ ಕಾಣುವ ಮುಳ್ಳು ಗೆಣಸು, ಹೆಡಿಗೆ ಗೆಣಸು, ಮರ ಆಲೂಗೆಡ್ಡೆ, ಉತ್ತರಿ ಗೆಡ್ಡೆಗಳಿಗೆ ಮೊದಲ ಮಳೆಯಿಂದ ಜೀವ ಬರುತ್ತದೆ. ರಾತ್ರೋ ರಾತ್ರಿ ಮೊಳಕೈ ಉದ್ದದ ಬಳ್ಳಿಗಳು ಇಣುಕಿ ಹಾಕಿ ಅಚ್ಚರಿ ಮೂಡಿಸುತ್ತವೆ. ಬಿಸಿಲಿಗೂ ಜಪ್ಪೆನ್ನದೆ ಮರ, ಗಿಡಗಳ ಕಾಂಡ ತಬ್ಬಿ ಬೆಳೆಯುತ್ತವೆ. ಮುಂಗಾರು ಮಳೆ ಬರುವ ಹೊತ್ತಿಗೆ ಇವು ಬೇರು ಬಿಟ್ಟು ಬಳ್ಳಿ ಹರಿಸಿ, ಹಸಿರಿನ ಚಪ್ಪರ ಹಾಕಲು ಕಾಯುತ್ತಿರುತ್ತವೆ. ಅಣ್ಣೇಸೊಪ್ಪು, ಅಣಬೆ, ಬಿದಿರು ಕಳಲೆ, ಸೀಗೇಸೊಪ್ಪು ಸಿಗುವುದು ಕೂಡ ಮುಂಗಾರಿನಲ್ಲೇ. ನವಿಲು ರೆಕ್ಕೆ ಬಿಚ್ಚಿ ನರ್ತನ ಮಾಡುವುದೂ ಮುಂಗಾರಿನಲ್ಲೇ. ಗಿಡ ಮರ ನೆಡುವ, ಒಡ್ಡು ಹಾಕುವ ಕೆಲಸಕ್ಕೆ ಮುಂಗಾರಿನದೇ ಮುಹೂರ್ತ.

‘ಧಗೆಯೋ ಧಗೆ. ಹೊರಗೆ ನಿಲ್ಲಲಾಗದ ಬಿಸಿಲು. ದೇವ ಮೂಲೆಯಲ್ಲಿ ಮಿಂಚ್ತದೆ. ಇವತ್ತು ಮಳೆ ಬಂದೇ ಬರ್ತದೆ’ ಎಂದು ಹಳ್ಳಿಗರು ಆಸೆಗಣ್ಣಿನಿಂದ ಆಕಾಶದತ್ತ ಮುಖಮಾಡುತ್ತಾರೆ. ಮಳೆ ಆಚರಣೆಗಳನ್ನು ನೆರವೇರಿಸಿ ‘ಬಾರಪ್ಪೋ ಮಳೆರಾಯ’ ಎಂದು ಅಂಗಲಾಚುತ್ತಾರೆ. ಮಳೆ ಆಚರಣೆಗಳ ಜೊತೆ ತಲೆಬುಡ ಇಲ್ಲದ ನಂಬಿಕೆಗಳೂ ತಳುಕು ಹಾಕಿಕೊಂಡಿವೆ. ತೊನ್ನು ಇರೋರ ಹೆಣ ಸುಡದೆ ಮಣ್ಣು ಮಾಡಿದ್ದರೆ ಮಳೆ ಬರದು, ಅದನ್ನು ಕಿತ್ತು ಸುಟ್ಟು ಹಾಕಿದರೆ ಮಳೆ ಬರುತ್ತದೆ ಎಂಬ ನಂಬಿಕೆ. ಇದರಿಂದ ಹಳ್ಳಿಗಳಲ್ಲಿ ಪರಸ್ಪರ ಜಗಳ, ವೈಮನಸ್ಯ.

ಕೊಳ್ಳೇಗಾಲದ ಒಡೆಯರಪಾಳ್ಯದ ಟಿಬೆಟನ್ ಕಾಲೊನಿಯಲ್ಲಿದ್ದೆ. ಆ ವರ್ಷ ಮುಂಗಾರು ಮಳೆ ಬರುವುದು ನಿಧಾನವಾಯಿತು. ನೆಲ ಸಿದ್ಧ ಮಾಡಿಟ್ಟುಕೊಂಡು ತಿಂಗಳಾದರೂ ಮಳೆರಾಯ ಮೊಗ ತೋರಲಿಲ್ಲ. ‘ಮುಂಡಗೋಡದಲ್ಲಿ ರೈನ್ ಲಾಮ ಇದಾರೆ. ಅವರು ಕುಮಟಾ ಸಮುದ್ರದಿಂದ ಮೋಡ ಕರ್ಕೊಂಡು ಬರ್ತಾರೆ. ಅವರ ಬಳಿ ಹೋಗಿ ಬರ್ತೀನಿ’ ಕಾಲೊನಿಯ ಮುಖ್ಯಸ್ಥ ದೋರ್ಜಿ ನನಗೆ ಹೇಳಿದರು. ಆ ಕ್ಷಣ ಕಾಳಿದಾಸನ ಮೇಘದೂತ ನೆನಪಾದ.

ತನ್ನ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ರಾಜ ಕುಬೇರನಿಂದ ಮಧ್ಯ ಭಾರತಕ್ಕೆ ಗಡಿಪಾರಾಗುವ ಯಕ್ಷನಿಗೆ ಮಡದಿಯ ನೆನಪು ಬರುತ್ತದೆ. ಅವನು ತನ್ನ ಪ್ರೇಮ ಸಂದೇಶವನ್ನು ತನಗಾಗಿ ಕಾಯುತ್ತಿರುವ ಮಡದಿಗೆ ತಲುಪಿಸಲು ಮೋಡವನ್ನು ಕೋರುತ್ತಾನೆ. ಮೋಡವು ಯಕ್ಷನ ಪ್ರೇಮ ಸಂದೇಶವನ್ನು ಹಿಮಾಲಯದ ಕೈಲಾಸ ಪರ್ವತದಲ್ಲಿರುವ ಅವನ ಮಡದಿಗೆ ತಲುಪಿಸುವ ಚಿತ್ರಣ ಮೇಘದೂತ ಕಾವ್ಯದಲ್ಲಿದೆ. ಕಾಳಿದಾಸನ ಮೇಘದೂತ ಕಾವ್ಯ ಮುಂಗಾರಿನ ಮೋಡಗಳನ್ನು ವರ್ಣಿಸುತ್ತದೆ. ಮುಂಗಾರು ಮಾರುತಗಳ ಜಾಡು ಹಿಡಿದುಹೋದ ವಿಜ್ಞಾನಿಗಳು, ಕಾಳಿದಾಸನ ಮೇಘದೂತ ಕಾವ್ಯದ ವರ್ಣನೆಗೂ ವಾಸ್ತವಕ್ಕೂ ಸಾಮ್ಯತೆ ಇದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಮುಂಗಾರು ಮಳೆಯ ಕಾಲಕ್ಕೆ ದಟ್ಟೈಸುವ ಮೋಡಗಳು ಯಾವತ್ತೂ ಕವಿಗಳ ಸ್ಫೂರ್ತಿ. ‘ಮೂಡಣ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ’ ಎಂದು ದ.ರಾ. ಬೇಂದ್ರೆ ಕವನ ಕಟ್ಟಿದಾರೆ.

ಮಳೆಯ ಜಾಡು

ಮುಂಗಾರು ಎಂಬುದು ಋತುಮಾನಕ್ಕೆ ತಕ್ಕಂತೆ ಬದಲಾಗುವ ಗಾಳಿಯ ದಿಕ್ಕು. ಮುಂಗಾರು ಮಳೆಯ ಪ್ರಮಾಣವನ್ನು ನಿರ್ಧರಿಸುವುದು ಮೋಡಗಳಲ್ಲ ಗಾಳಿ. ಗಾಳಿಯ ಚಲನೆ ವರ್ಷದಲ್ಲಿ ಎರಡು ಬಾರಿ ಬದಲಾಗುತ್ತದೆ. ಮೇ ಮಧ್ಯ ಭಾಗದಿಂದ ಸೆಪ್ಟೆಂಬರ್ವರೆಗೆ ಹಿಂದೂ ಮಹಾಸಾಗರದಿಂದ ಬರುವ ನೈರುತ್ಯ ಮುಂಗಾರಿನ ಮಾರುತಗಳು ಭರ್ಜರಿ ಮಳೆಯನ್ನು ತರುತ್ತವೆ. ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಚಳಿಗಾಲದ ಈಶಾನ್ಯ ಮುಂಗಾರು, ಭಾರತ ಮತ್ತು ಚೀನಾಕ್ಕೆ ತಂಪಾದ ಒಣ ಹವೆ ಮತ್ತು ಇಂಡೋನೇಷ್ಯ, ಆಸ್ಟ್ರೇಲಿಯಾಕ್ಕೆ ಮಳೆಯನ್ನು ತರುತ್ತವೆ.

ನೈರುತ್ಯ ಮುಂಗಾರು ಸಮುದ್ರದ ಕಡೆಯಿಂದ ಭೂಭಾಗದ ಕಡೆಗೆ, ಈಶಾನ್ಯ ಮುಂಗಾರು ಭೂಭಾಗದಿಂದ ಸಮುದ್ರದ ಕಡೆಗೆ ಚಲಿಸುತ್ತವೆ. ದೇಶದಲ್ಲಿ ಒಟ್ಟು ಸುರಿಯುವ ಮಳೆಯ ಪೈಕಿ ಶೇಕಡ 70ರಷ್ಟು ಮುಂಗಾರಿನದ್ದು. ದೇಶವನ್ನು ಸುತ್ತುವರಿದಿರುವ ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರ ಮುಂಗಾರು ಮಳೆಯ ಪ್ರಮಾಣವನ್ನು ನಿರ್ಧರಿಸುತ್ತವೆ.

ಮುಂಗಾರು ಮಾರುತ ಕೇರಳಕ್ಕೆ ಅಪ್ಪಳಿಸುವ ಕಾಲಕ್ಕೆ ಟಿಬೆಟನ್ ಪ್ರಸ್ಥಭೂಮಿಯಲ್ಲಿ ವಾಯುಭಾರ ಕುಸಿತ ಇರುತ್ತದೆ. ಹಾಗಾಗಿ ಮಳೆ ಮೋಡ ಭಾರತದ ಹೃದಯ ಭಾಗದತ್ತ ಚಲಿಸಲು ಶುರುಮಾಡುತ್ತದೆ.

ಚಲಿಸುತ್ತಿರುವ ಮುಂಗಾರು ಮಾರುತಗಳಿಗೆ ಪಶ್ಚಿಮಘಟ್ಟಗಳು ಎದುರಾಗುತ್ತವೆ. ಇಲ್ಲಿ ಮುಂಗಾರು ಮಾರುತಗಳು ಎರಡು ಕವಲಾಗಿ ಒಡೆಯುತ್ತವೆ. ಒಂದು ಕವಲು ಅರಬ್ಬಿ ಸಮುದ್ರದ ಮೇಲೆ ಚಲಿಸುತ್ತಾ ಉತ್ತರಕ್ಕೆ, ಪಶ್ಚಿಮ ಘಟ್ಟಗಳ ಅಂಚಿನ ಕರಾವಳಿಯನ್ನು ಸವರುತ್ತ ಮುಂಬೈ ಕಡೆ ಹೋಗುತ್ತದೆ. ಇನ್ನೊಂದು ಕವಲು ಬಂಗಾಳ ಕೊಲ್ಲಿಯ ಮೇಲೆ ಅಸ್ಸಾಂವರೆಗೆ ಚಲಿಸಿ, ಈಶಾನ್ಯ ಹಿಮಾಲಯದ ಶ್ರೇಣಿಯನ್ನು ತಟ್ಟುತ್ತದೆ. ಈ ದಿಕ್ಕಿನಲ್ಲಿ ಸಾಗುವ ಮಾರುತಗಳ ಜೊತೆ ಬಂಗಾಳ ಕೊಲ್ಲಿಯ ತೇವಾಂಶವೂ ಜೊತೆಗೂಡುವುದರಿಂದ ಮಳೆಯ ತೀವ್ರತೆ ಅಧಿಕ. ಪಶ್ಚಿಮ ಬಂಗಾಳ, ಅಸ್ಸಾಂ, ಬಾಂಗ್ಲಾದೇಶ ಪ್ರವಾಹದಿಂದ ತತ್ತರಿಸುತ್ತವೆ.

ಈ ಚಲನೆಗೆ 40-50 ದಿನ ಬೇಕು. ಈ ಮಾರುತಗಳು ಹಿಮಾಲಯ ಪರ್ವತ ಶ್ರೇಣಿಗೆ ಡಿಕ್ಕಿ ಹೊಡೆದು ಬಳಿಕ ಪೂರ್ವದತ್ತ ಚಲಿಸಿ ಗಂಗಾ ನದಿಯ ತಪ್ಪಲು ಪ್ರದೇಶದಲ್ಲಿ ಸಾಗುತ್ತವೆ. ತಪ್ಪಲು ಪ್ರದೇಶದಲ್ಲಿ ಈ ಮಾರುತಗಳು ವೇಗ ಪಡೆದುಕೊಳ್ಳುತ್ತವೆ. ಜುಲೈ ಹದಿನೈದರ ಹಾಗೆ ಮಳೆ ಮಾರುತಗಳು ದೆಹಲಿ ಸುತ್ತಲಿನ ಪ್ರದೇಶವನ್ನು ಪ್ರವೇಶಿಸುತ್ತವೆ. ಇದೇ ಅವಧಿಯಲ್ಲಿ ಪಂಜಾಬ್, ಹರಿಯಾಣ ಭಾಗದಲ್ಲಿ ಪ್ರವಾಹ ಸ್ಥಿತಿ ಏರ್ಪಡುತ್ತದೆ. ಇಲ್ಲಿಂದ ಮುಂದೆ ಸಾಗುವ ಮಳೆ ಮಾರುತಗಳು ರಾಜಸ್ಥಾನದಿಂದ ಹಿಮಾಚಲ ಪ್ರದೇಶದವರೆಗೆ ಹಬ್ಬಿರುವ ಅರಾವಳಿ ಪರ್ವತವನ್ನು ಅಪ್ಪಳಿಸುತ್ತವೆ. ಈ ಪರ್ವತ ಶ್ರೇಣಿಯನ್ನು ದಾಟಲಾರದ ಮಳೆ ಮಾರುತಗಳು ಮತ್ತೆ ಹಿಂತಿರುಗಲು ಶುರುಮಾಡುತ್ತವೆ. ಗಂಗಾ ನದಿಯ ತಪ್ಪಲು ಪ್ರದೇಶಗುಂಟ ಸಾಗಿ ಹಿಮಾಲಯ ತಲುಪಿ ಮತ್ತೆ ದಕ್ಷಿಣದತ್ತ ಮುಖ ಮಾಡುತ್ತವೆ. ಇದೇ ಈಶಾನ್ಯ ಮುಂಗಾರು.

ತಮಿಳುನಾಡು, ಪುದುಚೇರಿ ಹಿಂಗಾರು ಮಳೆಯನ್ನೇ ನಂಬಿದ ರಾಜ್ಯಗಳು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದಂತೆಯೇ ಈ ಮಾರುತಗಳಿಗೆ ಮತ್ತೆ ವೇಗ ಬರುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಈಶಾನ್ಯ ಮುಂಗಾರಿನ ಆರ್ಭಟ ಹೆಚ್ಚು. ಮುಂಗಾರು ಚಂಡಮಾರುತಗಳ ಥರ ಅವಾಂತರಿಯಲ್ಲ. ಇದೇನಿದ್ದರೂ ಗುಡುಗು, ಮಿಂಚುಗಳ ಅದ್ಧೂರಿಯಿಂದ ಬರುವ ರಾಜ ಮೆರವಣಿಗೆ.

ಕೆಲವು ಪ್ರದೇಶಗಳಿಗೆ ಮುಖ ತೋರಿಸದೆ ಮುನಿಸಿಕೊಂಡು ಹೋಗಿ ಬಿಡುವ ಮುಂಗಾರು, ಕೆಲವೊಮ್ಮೆ ವಾರಗಟ್ಟಲೆ ಸುರಿದು ಇಳೆಗೆ ಹಸಿರು ಸೀರೆ ಉಡಿಸಿ ಹೋಗುತ್ತದೆ. ಕೆಲವು ವಾರ ಶುಭ್ರ ಆಕಾಶ. ಆಗಾಗ ಜಡಿ ಮಳೆ, ಸಾಕೆನಿಸುವಷ್ಟು ಸುರಿದು ವಿದಾಯ ಹೇಳುತ್ತದೆ. ಆಗ್ನೇಯ ಏಷ್ಯಾದ ಕೃಷಿ ಭವಿಷ್ಯ ಮತ್ತು ಅರ್ಧ ಭೂಮಂಡಲದ ಬದುಕಿನ ಹಣೆಬರಹವನ್ನು ಮುಂಗಾರು ನಿರ್ಧರಿಸುತ್ತದೆ. ಭಾರತದ ಆರ್ಥಿಕತೆ, ನೆರೆ ಪರಿಹಾರ, ಸರ್ಕಾರಿ ನೆರವು, ಮಾರುಕಟ್ಟೆಯ ಬೆಲೆ ಮುಂಗಾರಿನ ಮೇಲೆ ಅವಲಂಬಿತವಾಗಿವೆ. ನಿಜ ಅರ್ಥದಲ್ಲಿ ಮುಂಗಾರೇ ಈ ದೇಶದ ಹಣಕಾಸು ಮಂತ್ರಿ. ಮುಂಗಾರು ವಿಳಂಬ ದೇಶದ ಆರ್ಥಿಕತೆಯ ಮೇಲೆ ಗಾಢ ಪರಿಣಾಮ ಬೀರುತ್ತದೆ.

ಕೋಣೆಯೊಂದರಲ್ಲಿ ಸಿಗರೇಟ್ ದಂ ಎಳೆದು ಹೊಗೆ ಬಿಡುವುದನ್ನು ನೋಡಿ. ಎರಡನೇ ಬಾರಿ ಬಿಟ್ಟ ಹೊಗೆ ಸುರುಳಿ ಮೊದಲಿನಂತಿರದು. ಪ್ರತೀ ಬಾರಿಯೂ ಹೊಗೆ ಸುರುಳಿ ನಮ್ಮ ನಿರೀಕ್ಷೆಗೆ ಸಿಗದೆ ಬೇರೆ ಬೇರೆ ಆಕಾರ ಪಡೆಯುತ್ತದೆ. ವಾತಾವರಣದಲ್ಲಿ ಗಾಳಿಯ ಚಲನೆ ಕೂಡ ಇದೇ ರೀತಿ. ಯಾವಾಗ ಯಾವ ದಿಕ್ಕಿನತ್ತ ಗಾಳಿ, ಮುಂಗಾರು ಮಾರುತಗಳನ್ನು ಕರೆದೊಯ್ಯುತ್ತದೆ ಎಂದು ಯಾರೂ ಅಂದಾಜು ಮಾಡಲಾಗದು.

ಮುಂಗಾರಿನ ಸಂಭ್ರಮ

ಮುಂಗಾರು ಬಂತೆಂದರೆ ಮೀನುಪ್ರಿಯರಿಗೆ ಇನ್ನಿಲ್ಲದ ಉತ್ಸಾಹ. ಮೀನಿನ ಬಲೆ, ಕೊಡುಮೆ ಹಿಡಿದು ಮೀನುಬೇಟೆಗೆ ಹೊರಡುತ್ತಾರೆ. ಈ ಸೀಸನಲ್ ಮೀನುಗಾರರ ಕಥೆಗಳ ಕೇಳುವುದೇ ಒಂದು ಸೊಗಸು. ನಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದ ಕೆಲಸಗಾರರು ಜವರಪ್ಪ ಎಂಬುವನತ್ತ ಕೈ ತೋರಿ ‘ಹಾವು ಹಿಡಿದು ತಂದ ಶೂರ ಇವ’ ಎಂದು ನಗಾಡುತ್ತಿದ್ದರು. ಜವರಪ್ಪ ಮೀನು ಹಿಡಿಯಲು ಹೋದನಂತೆ. ‘ಹಾವುಮೀನು ಅನ್ಕೊಂಡು ನೀರಳೆ ಹಾವು ಹಿಡ್ಕೊ ಬಂದವನೆ’ ಅಂತ ಊರಲ್ಲಿ ಗುಲ್ಲಾಯಿತು. ‘ಏನ್ ಜವರಪ್ಪ? ನಿಜಾನಾ’ ಎಂದೆ. ‘ಅಯ್ಯೋ ಬಿಡಿ ಸಾ! ಅವೆಲ್ಲ ನೋಡವೆ ಹಾವುಮೀನು. ಬಲೇ ಟೇಸ್ಟ್ ಇರುತ್ತೆ’ ಎಂದು ಜವರಪ್ಪ ನಗಾಡಿದ.

ಒಮ್ಮೆ ಆನೇಕಲ್ ಗಡಿಗೆ ಹೊಂದಿಕೊಂಡ ಡೆಂಕಣಿಕೋಟದ ಅಂಚೆಟ್ಟಿ ಕಾಡಿಗೆ ಹೊರಟಿದ್ದೆವು. ರಸ್ತೆಯಲ್ಲಿ ಸೊಳ್ಳೆ ಪರದೆ ಮಾರಾಟಗಾರನೊಬ್ಬ ಸಿಕ್ಕ. ‘ಬಿಜಿನೆಸ್ಸೇ ಇಲ್ದಂಗ ಸರ್. ಸೊಳ್ಳೇನೇ ಎದ್ದಿಲ್ಲ. ಕೊಡಗಿನಲ್ಲಿ ಮಳೆ ಕಡಿಮೆ ಅಲ್ವಾ ಸರ್ ಅದಕ್ಕೆ’ ಎಂದ.

ಅರೇ! ಕೊಡಗಲ್ಲಿ ಮಳೆ ಕಡಿಮೆ ಆಗೋಕೂ, ಸೊಳ್ಳೆ ಜಾಸ್ತಿ ಆಗೋಕೂ ಎಲ್ಲಿ ಸಂಬಂಧ ಎಂದು ತಲೆ ಕೆರೆದುಕೊಂಡೆವು. ‘ಕೊಡಗನಾಗೆ ಜೋರು ಮಳೆ ಆದ್ರೆ ಮೇಟೂರು ಡ್ಯಾಂ ತುಂಬುತ್ತೆ. ಜನ ಜಾಸ್ತಿ ಭತ್ತ ಬೆಳೀತಾರೆ. ಕಟ್ ಮಾಡಿದ ಕೂಳೆನಾಗೆ ಸೊಳ್ಳೆ ಮೊಟ್ಟೆ ಇಟ್ಟು ಮರೀಮಾಡ್ತವೆ. ಜಾಸ್ತಿ ಸೊಳ್ಳೆ ಏಳ್ತಾವೆ. ಅವಾಗ ನಮ್ಮ ಸೊಳ್ಳೆ ಪರದೆಗೂ ಡಿಮಾಂಡ್’ ಎಂದು ಕಣ್ಣುಹೊಡೆದು ನಕ್ಕ. ಆತನ ಸೊಳ್ಳೆ ಪರದೆ ಮಾರಾಟದ ಬ್ಯುಸಿನೆಸ್ ಪ್ಲಾನ್ ಕೇಳಿ ನಾವು ದಂಗಾಗಿ ನಿಂತೆವು.

‘ಮಳೆ ಬರಬೇಕು ಸಾರ್ ಮಳೆ’ ಎಂದು ಟಿವಿಎಸ್ ಮೊಪೆಡ್ ಚಾಲೂ ಮಾಡಿದ.

ಬದಲಾದ ಮುಂಗಾರು

ಹವಾಮಾನ ಬದಲಾವಣೆ ಎನ್ನುವುದು ಕೆಲವು ವರ್ಷಗಳ ಹಿಂದೆ ಬರೀ ಕಾಲ್ಪನಿಕ ವಿದ್ಯಮಾನ ಎಂಬಂತೆ ಆಗಿತ್ತು. ಆದರೆ ಇತ್ತೀಚಿನ ಮಳೆ ವೈಪರೀತ್ಯಗಳನ್ನು ಗಮನಿಸಿದರೆ ಅದು ಬರೀ ಕಲ್ಪನೆಯಾಗಿ ಉಳಿದಿಲ್ಲ. ಮುಂಗಾರು ಪ್ರವೇಶಿಸುವುದು ವಿಳಂಬವಾಗುತ್ತಿದೆ. ಜೂನ್ ಮೊದಲವಾರ ಬಂದರೂ ಮತ್ತೆ ಮುಂದೆ ಕೈ ಕೊಡುತ್ತದೆ.

ಮಳೆ ಅವಧಿ ಸ್ಥಿತ್ಯಂತರವಾಗಿರುವುದರಿಂದ ಅನಿಶ್ಚಿತತೆಯಲ್ಲಿ ಕೃಷಿಮಾಡುವ ಸಂಕಷ್ಟ ರೈತಾಪಿಗಳಿಗೆ ಬಂದಿದೆ. ಮುಂಗಾರು ತಡವಾಗುತ್ತಿದೆ; ಹಿಂಗಾರು ಅವಧಿಗೆ ಮುನ್ನವೇ ಬರುತ್ತಿದೆ. ಇವೆರಡು ಹಂಗಾಮುಗಳಿಗೆ ಸಂಯೋಜಿಸಿ ಬೆಳೆಯುತ್ತಿದ್ದ ಬೆಳೆಗಳು ವಿಫಲವಾಗುತ್ತಿರುವುದಕ್ಕೆ ಇದೇ ಕಾರಣ. ಬದಲಾದ ಮಳೆಗಾಲಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವಲ್ಲಿ ಸರ್ಕಾರಗಳು ಸೋತಿವೆ.

ಮುಂಗಾರು ಮಳೆ ಸಂಭ್ರಮದ ಜೊತೆ ದುಗುಡ ಕೂಡ ತರುತ್ತದೆ. ‘ಲಾಕ್ಡೌನ್ ಜತೆ ಮಳೇನೂ ಶುರುವಾಯ್ತಲ್ಲ ಸಾರ್. ಮಾವು, ಕಲ್ಲಂಗಡಿ ಯಾರೂ ಕೊಳ್ಳಲ್ಲ. ಬರೀ ಲುಕ್ಸಾನು’ ಬೀದಿ ಬದಿ ವ್ಯಾಪಾರಿ ಖಲಂದರ್ ಸೋತ ದನಿಯಲ್ಲಿ ಹೇಳುತ್ತಾರೆ. ಮೊನ್ನೆ, ನಮ್ಮ ತೋಟದ ಅಂಚಿನ ನೀಲಗಿರಿ ತೋಪಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಿಡ ನೆಡ್ತಿದ್ರು. ‘ಏನ್ರಿ ಇಷ್ಟು ಬಿಸಿಲು ಇದೆ. ಗಿಡ ನೆಡ್ತೀರಲ್ಲ’ ಎಂದೆ. ‘ಜೂನ್ ಮೊದಲನೆ ವಾರ ಅಲ್ವಾ ಸಾರ್. ಮಳೆ ಬಂದೇ ಬರ್ತದೆ’ ಎಂದರು. ಅವರು ಹೇಳಿದಂತೆ ಅವತ್ತೇ ಮಳೆ ಬಂತು.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಹಾಡು ನೆನಪಾಯ್ತು.

ನಿಮ್ಮ ಆಸನದ ಬೆಲ್ಟ್ ಕಟ್ಟಿಕೊಳ್ಳಿ

ಕಳೆದ ಮುನ್ನೂರು ವರ್ಷಗಳಿಂದ ಮುಂಗಾರು ಮಳೆಯ ಮೇಲೆ ಅನೇಕ ಅಧ್ಯಯನಗಳಾಗಿವೆ. ಬ್ರಿಟಿಷರು ಸಹ ಮುಂಗಾರನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದರು. ಬ್ರಿಟಿಷ್ ಸಾಮ್ರಾಜ್ಯದ ಆರ್ಥಿಕತೆಗೆ ಇಲ್ಲಿನ ಕೃಷಿ ಗಣನೀಯ ಕೊಡುಗೆ ನೀಡುತ್ತಿದ್ದುದರಿಂದ ಅವರಿಗೆ ಮುಂಗಾರು ಮುಖ್ಯವಾಗಿತ್ತು. ಇವತ್ತಿನವರೆಗೂ ಮುಂಗಾರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ.

* ಮುಂಗಾರು ಬರುವ ಮುನ್ನಾ ದಿನಗಳಲ್ಲಿ ಜೀವ ಜಗತ್ತಿನಲ್ಲಿ ಇನ್ನಿಲ್ಲದ ಗಡಿಬಿಡಿ. ನೆಲದ ಜೊತೆ ಅವಿನಾಭಾವ ಸಂಬಂಧ ಹೊಂದಿದ ಪ್ರಾಣಿ, ಕ್ರಿಮಿ ಕೀಟ ಹಾಗೂ ಸಸ್ಯಗಳು ಹೆಚ್ಚು ಸೂಕ್ಷ್ಮ ಮತ್ತು ಸಂವೇದನೆಯನ್ನು ಉಳ್ಳವಾಗಿರುತ್ತವೆ. ಪ್ರಕೃತಿಯಲ್ಲಾಗುವ ಬದಲಾವಣೆಯನ್ನು ಬಹುಬೇಗ ಗುರುತಿಸುತ್ತವೆ ಮತ್ತು ಅದನ್ನು ತಮ್ಮ ಚಟುವಟಿಕೆಗಳಲ್ಲಿ ವ್ಯಕ್ತಪಡಿಸುತ್ತವೆ. ಈ ವರ್ತನೆಗಳನ್ನು ಅನುಭವದಿಂದ ಬಲ್ಲ ರೈತ ಸಮುದಾಯ ಅವುಗಳನ್ನಾಧರಿಸಿ ಮಳೆ-ಬೆಳೆಯ ಮುನ್ಸೂಚನೆಯನ್ನು ವಿಶ್ಲೇಷಿಸುತ್ತದೆ.

* ಮಳೆಗಾಲದಲ್ಲಿ ಮಳೆ ಮೋಡದ ನಡುವೆ ಹಾರುವ ವಿಮಾನ ಅಲುಗಾಡುವುದು ಸಾಮಾನ್ಯ. ಇದಕ್ಕೆಂಬಂತೆ ಕಾದಿದ್ದ ಗಗನಸಖಿಯಿಂದ ‘ಬ್ಯಾಡ್ ವೆದರ್ ಇದೆ. ನಿಮ್ಮ ಆಸನದ ಬೆಲ್ಟ್ಗಳನ್ನು ಕಟ್ಟಿಕೊಳ್ಳಿ. ಶೌಚಾಲಯಕ್ಕೆ ಹೋಗಬೇಡಿ’ ಎಂಬ ಉದ್ಘೋಷ ಕೇಳಿಸುತ್ತದೆ. ಪ್ರಕೃತಿಯಲ್ಲಿ ಬ್ಯಾಡ್ ವೆದರ್, ಗುಡ್ ವೆದರ್ ಎಂಬುದು ಇಲ್ಲ. ನಮ್ಮ ದೃಷ್ಟಿಕೋನವೇ ಬ್ಯಾಡ್. ಮುಂಗಾರನ್ನು ಪಿರಿಪಿರಿ ಎಂಬಂತೆ ನೋಡುವ ನಮ್ಮ ಮನಃಸ್ಥಿತಿಯ ಪ್ರತಿಫಲನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.