ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಮೊದಲು ಮುದ್ರಣವಾದದ್ದು 1968ರಲ್ಲಿ. ಈ ಕಾದಂಬರಿಗೆ ಈಗ 51ರ ಹರೆಯ! ಯಾವುದೇ ಭಾಷೆಯಲ್ಲಿ ಕಾದಂಬರಿಯೊಂದು 50 ವರ್ಷ ದಾಟಿದ ಬಳಿಕವೂ ಓದುಗರ ಕುತೂಹಲ ಕೆರಳಿಸುವುದು ಗಮನಾರ್ಹ ಸಂಗತಿ. ಕನ್ನಡದ ಪ್ರಮುಖ ಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಕಾರಂತರ ಈ ಕೃತಿಯನ್ನು ಅದೇ ಹೆಸರಲ್ಲಿ ಸಿನಿಮಾ ಮಾಡಿದ್ದು ಅದೀಗ ಚಿತ್ರಮಂದಿರಕ್ಕೂ ಲಗ್ಗೆಯಿಟ್ಟಿದೆ. ಹಾಗಾಗಿ ಮೂಕಜ್ಜಿ ಮತ್ತೆ ಸುದ್ದಿಯಲ್ಲಿದ್ದಾರೆ.

ಕಾರಂತರ ಕಾದಂಬರಿಗೆ 50 ತುಂಬಿದ ಕುರಿತು ಕನ್ನಡದ ಸಾರಸ್ವತ ಲೋಕ ಅಂತಹ ಸಂಭ್ರಮದ ಕಾರ್ಯಕ್ರಮಗಳನ್ನೇನೂ ಆಯೋಜಿಸಿದ್ದು ಕಂಡುಬರಲಿಲ್ಲ. ಬಂಗಾಳಿ, ಮಲಯಾಳ ಭಾಷೆಗಳಲ್ಲಿ ಇಂತಹ ಅಕ್ಷರಲೋಕದ ಸಂಭ್ರಮಗಳು ಕಾಣಿಸುವುದು ಹೆಚ್ಚು. ಕನ್ನಡಿಗರಿಗೆ ಇತ್ತೀಚೆಗೆ, ಸಾಹಿತ್ಯಕ್ಕೆ ಸಂಬಂಧಿಸಿದ ಭರ್ಜರಿ ಜಾತ್ರೆಗಳನ್ನು ಆಯೋಜಿಸುವಲ್ಲಿ ಇರುವ ಉತ್ಸಾಹ ಕೃತಿಯೊಂದರ ಬಗ್ಗೆ ಅಥವಾ ಕೃತಿಕಾರನ ಬಗ್ಗೆ ಚರ್ಚಿಸುವುದರಲ್ಲಿ ಇಲ್ಲವಾದಂತಿದೆ. ಇದು ಪುಸ್ತಕಲೋಕಕ್ಕೆ ಅಂತಲ್ಲ, ಸಾಂಸ್ಕೃತಿಕ ಲೋಕದಲ್ಲೂ ವಿಸ್ಮೃತಿಯ ಛಾಯೆಯೊಂದು ಕವಿದಿರುವುದು ಸ್ವಯಂವೇದ್ಯ. ಇಲ್ಲವಾದಲ್ಲಿ, ಕನ್ನಡ ಸಿನಿಮಾಕ್ಕೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಗಿರೀಶ್ ಕಾಸರವಳ್ಳಿಯವರಿಗೆ 70 ವರ್ಷ ತುಂಬಿದ್ದು, ನಮ್ಮ ಫಿಲಂ ಚೇಂಬರ್ಗಾಗಲೀ, ನಿರ್ದೇಶಕರ ಸಂಘಕ್ಕಾಗಲೀ ಮರೆತೇ ಹೋಗುವುದು ಹೇಗೆ ಸಾಧ್ಯ?

ಕಾರಂತರ ‘ಮೂಕಜ್ಜಿಯ ಕನಸುಗಳು’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದದ್ದು 1977ರಲ್ಲಿ. 1968ರಲ್ಲಿ ಮೊದಲ ಮುದ್ರಣದ ಬಳಿಕ ಈ ಕೃತಿ ಓದುಗರಿಂದ ಅಂತಹ ಪ್ರೋತ್ಸಾಹ ಕಂಡ ಹಾಗಿಲ್ಲ. 1991ರಲ್ಲಿ ಪ್ರಕಟವಾದ ಮರುಮುದ್ರಣಕ್ಕೆ ಶಿವರಾಮ ಕಾರಂತರು ಬರೆದ ಮುನ್ನುಡಿಯಲ್ಲಿ, ‘ತನ್ನ ಬರಹವನ್ನು ಸಾಹಿತಿ ನಂಬಿ ಬದುಕುವ ಕಾಲ ಬಂದಿದೆ ಎಂದು ಎಣಿಸಿದ ನನಗೆ, ಬಂದಿಲ್ಲ ಅನಿಸುತ್ತಿದೆ. ಪ್ರಾಯಶಃ ವಯಸ್ಸಾದ ಬರಹಗಾರರು ಕನ್ನಡ, ಕನ್ನಡ ಎಂದು ಬದುಕುವ ಕಾಲ ಒಬ್ಬಿಬ್ಬರ ಪಾಲಿಗೆ ಬಂದಿರಬಹುದು. ಬಹುಮಂದಿ ಸ್ವತಂತ್ರ ಲೇಖಕರ ಪಾಲಿಗೆ ಅದು ಬಂದಿಲ್ಲ. ನಮ್ಮ ನಾಡಿನಲ್ಲಿ ಹೊಸ ಜನರು ಜನಿಸುತ್ತಲೇ ಇದ್ದಾರೆ. ಜನಿಸಲೇಬೇಕು. ಆದರೆ, ಅವರ ಅನ್ನ ಕನ್ನಡ ಬರಹಗಳಿಂದ ಸಿಗಬೇಕಾಗಿಲ್ಲವೋ ಏನೋ’ ಎಂದು ಬರೆದಿದ್ದರು.

ಕಾರಂತರು ತೀರಿಕೊಂಡದ್ದು 1997ರ ಡಿಸೆಂಬರ್ 9ರಂದು. ಈ ಮಧ್ಯೆ ‘ಮೂಕಜ್ಜಿಯ ಕನಸುಗಳು’ ಎಷ್ಟು ಮುದ್ರಣ ಕಂಡಿತೋ ಗೊತ್ತಿಲ್ಲ. ಆದರೆ 2009ರಲ್ಲಿ ಏಪ್ರಿಲ್, ಜುಲೈ, ನವೆಂಬರ್ ತಿಂಗಳಲ್ಲಿ ಸತತ ಮೂರು ಮುದ್ರಣಗಳನ್ನು ಕಂಡಿತು. ಆ ಬಳಿಕ 2010, 12, 15, 16, 17ರಲ್ಲಿ ಈ ಕೃತಿ ಮುರುಮುದ್ರಣ ಕಂಡಿದೆ. 2018ರಲ್ಲಿ ಮತ್ತೆ ಮೂರು ಸಲ ಮುದ್ರಣ ಕಂಡರೆ, 2019ರಲ್ಲಿಯೂ ಮೂರು ಮುದ್ರಣ ಕಂಡಿದೆ. ಈಗ ಕಾರಂತರು ನಿರ್ಗಮಿಸಿ ಬರೋಬ್ಬರಿ 22 ವರ್ಷಗಳ ಬಳಿಕ ಅವರ ಕಾದಂಬರಿ ಸಿನಿಮಾ ರೂಪದಲ್ಲಿ ಜನರ ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿ ಇನ್ನಷ್ಟು ಮುದ್ರಣಗಳನ್ನು ಕಾಣಬಹುದು. ಕನ್ನಡ ಸಾರಸ್ವತಲೋಕದ ಮಟ್ಟಿಗೆ ಇದೊಂದು ದಾಖಲೆಯೇ. ಬಹುಶಃ ಈಗ ತನ್ನ ಕಾದಂಬರಿಗೆ ಮುನ್ನುಡಿ ಬರೆಯಲು ಹೇಳಿದ್ದರೆ, ಕಾರಂತರು ಹಿಂದೆ ಕನ್ನಡ ಓದುಗರ ಬಗ್ಗೆ ಆಡಿದ್ದ ನಿರಾಶೆಯ ನುಡಿಗಳನ್ನು ಹಿಂತೆಗೆದುಕೊಳ್ಳುತ್ತಿದ್ದರೋ ಏನೋ!

‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಓದಿದ ಬಹಳಷ್ಟು ಓದುಗರು ಹೇಳುವ ಒಂದು ಮಾತು– ಒಂದು ಸಲ ಓದಿದರೆ ಈ ಕಾದಂಬರಿ ಅರ್ಥವಾಗುವುದಿಲ್ಲ– ಎನ್ನುವುದು. ಅಜ್ಜಿ, ಮೊಮ್ಮಗ ಸೇರಿ ನಾಲ್ಕೈದು ಸಾವಿರ ವರ್ಷಗಳಿಂದ ಹರಿದು ಬಂದಿರುವ ಸೃಷ್ಟಿಸಮಸ್ಯೆಯೊಂದನ್ನು ಮಥಿಸಲು ಯತ್ನಿಸುವ ಈ ಕಾದಂಬರಿಯನ್ನು, ‘ಮಾಂತ್ರಿಕ ವಾಸ್ತವತೆ’ಯ ಕಲಾತ್ಮಕ ತಂತ್ರದ ಮೂಲಕ ಓದುಗರ ಮುಂದಿಡಲು ಕಾರಂತರು ಪ್ರಯತ್ನಿಸಿರುವುದು ವಿಶೇಷ. ಹಾಗೆಂದೇ ಮೂಕಜ್ಜಿ ಭೂತ, ಭವಿಷ್ಯಗಳನ್ನು ಸ್ಪರ್ಶಮಾತ್ರದಿಂದ ಕಂಡುಕೊಳ್ಳುತ್ತಾಳೆ. ತನ್ನ ಬಾಲ ವೈಧವ್ಯ ಮತ್ತು ಅದರ ಹಿನ್ನೆಲೆಯಲ್ಲಿ ಹೇರಲಾದ ಧಾರ್ಮಿಕ ಕಟ್ಟಳೆಗಳಿಗೆ ಮಾತುಗಳ ಮೂಲಕ ಮುಖಾಮುಖಿಯಾಗುತ್ತಲೇ ಒಂದು ಅಭೂತಪೂರ್ವ ಮೌನವನ್ನೂ ಸುಖಿಸುತ್ತಾಳೆ. ಧರ್ಮ, ದೇವರು, ಮೂರ್ತಿಪೂಜೆ, ಮನುಷ್ಯನ ವಿತಂಡವಾದ, ಪುರಾಣದ ಅವತಾರ, ಸೃಷ್ಟಿಕ್ರಿಯೆ ಎಲ್ಲದರ ಬಗ್ಗೆ ಅವಧೂತಳಂತೆ ಮಾತನಾಡುತ್ತಾ, ಇದರಲ್ಲಿ ಭ್ರಮೆ ಯಾವುದು, ವಾಸ್ತವ ಯಾವುದು ಎನ್ನುವುದು ಓದುಗರಿಗೆ ತಿಳಿಯಲಾಗದಂತೆ ಬದುಕುತ್ತಾಳೆ. ಕಾದಂಬರಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವುದು ಕಾರಂತರ ವೈಚಾರಿಕತೆಯ ಪ್ರಖರ ಬೆಳಕು. ಆ ಬೆಳಕು ಧರ್ಮಭೀರು ಓದುಗರ ಕಣ್ಣುಕುಕ್ಕದಂತೆ ಕಾರಂತರು ಹೆಣೆದಿರುವ ನಿರೂಪಣಾ ತಂತ್ರ ಕುತೂಹಲಕರ. ಮೂಕಜ್ಜಿಯ ವ್ಯಕ್ತಿತ್ವವನ್ನು ನಿಧಾನಕ್ಕೆ ಪರಿಚಯಿಸುತ್ತಾ ಕೊನೆಯ ಪುಟಗಳಿಗೆ ಬರುವಾಗ ಮೂಕಜ್ಜಿ ಇಡೀ ಪುಸ್ತಕವನ್ನು ಅನ್ಯಾದೃಶವೆಂಬಂತೆ ಆವರಿಸಿಬಿಡುತ್ತಾಳೆ. ಪುಟದಿಂದ ಪುಟಕ್ಕೆ ಮೂಕಜ್ಜಿ ದೊಡ್ಡ ಅರಳೀಮರದಂತೆಬೆಳೆಯುತ್ತಾ ಹೋಗಿ ಬೆರಗು ಹುಟ್ಟಿಸುತ್ತಾಳೆ.

ಕಾದಂಬರಿಯ ಓದಿನಿಂದ ಪ್ರಭಾವಿತರಾಗಿ ಸಿನಿಮಾ ನೋಡಲು ಕುಳಿತರೆ ಅಲ್ಲಲ್ಲಿ ನಿರಾಶೆ ಕಾಡುತ್ತದೆ. ಸಾಮಾನ್ಯವಾಗಿ ನಮಗೊಂದು ನಂಬಿಕೆಯಿದೆ– ಅಕ್ಷರ ಮಾಧ್ಯಮಕ್ಕಿಂತ ದೃಶ್ಯಮಾಧ್ಯಮ ಹೆಚ್ಚು ಪ್ರಭಾವಶಾಲಿ ಎನ್ನುವುದು. ಈ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕೆ ಒಗ್ಗಿಸಲು ಎಂಟೆದೆ ಬೇಕು. ಆ ಧೈರ್ಯವನ್ನು ಶೇಷಾದ್ರಿ ಪ್ರಕಟಿಸಿದ್ದಾರೆ. ಬೆಳ್ಳಿತೆರೆಯಲ್ಲಿ ಹೀರೊ ಕೇಂದ್ರಿತ ಎಂತೆಂತಹದೋ ತಂಗಳುಗಳೆಲ್ಲ ಸಿನಿಮಾ ಆಗುತ್ತಿರುವ ಈ ದಿನಗಳಲ್ಲಿ, ಮೇರು ಕಾದಂಬರಿಕಾರನ ಕೃತಿಯೊಂದನ್ನು ಸಿನಿಮಾ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಇನ್ನೂ ಉಳಿದಿದೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅದರ ಬಗ್ಗೆ ಎರಡು ಮಾತೇ ಇಲ್ಲ. ಆದರೆ ತೆರೆಯ ಮೇಲೆ ಬಂದಿರುವ ಕಾರಂತರ ಮೂಕಜ್ಜಿ, ನಿಜಕ್ಕೂ ಮೂಕಿಯಾದಂತೆ ಕಾಣಿಸುತ್ತಾಳೆ. ಮೂಕಜ್ಜಿಯ ಮೌನವನ್ನು ಪ್ರತಿಫಲಿಸಿದಷ್ಟು ಗಾಢವಾಗಿ, ಆಕೆಯ ಮಾತುಗಳನ್ನು ಪ್ರತಿಬಿಂಬಿಸಲು ಬಿ. ಜಯಶ್ರೀ ಅವರಂತಹ ಪಳಗಿದ ನಟಿಗೂ ಸಾಧ್ಯವಾಗಿಲ್ಲ. ಕಥಾನಾಯಕ ಮತ್ತು ನಾಯಕಿಯೇ ಇರದ ಕಾದಂಬರಿ, ಸಿನಿಮಾ ರೂಪದಲ್ಲಿ ನಿರ್ದೇಶಕರ ಸ್ವತಂತ್ರ ಕೃತಿಯೆಂಬಂತೆ ಕಾಣಿಸುತ್ತಿದೆ.

ಹಲವು ವರ್ಷಗಳಿಂದ ಈ ಸಿನಿಮಾಕ್ಕೆ ಸಾಕಷ್ಟು ಹೋಮ್ವರ್ಕ್ ಮಾಡಿರುವ ಶೇಷಾದ್ರಿ ಕೂಡ ಈ ಮಾತನ್ನು ಒಪ್ಪುತ್ತಾರೆ. ‘ಬೆಟ್ಟದಜೀವ ಕೃತಿಯನ್ನು ಸಿನಿಮಾ ಮಾಡಿದಾಗಲೂ ಇಂತಹದ್ದೇ ಸವಾಲು ಎದುರಾಗಿತ್ತು. ಆದರೆ ಮೂಕಜ್ಜಿಯದ್ದು ಅದಕ್ಕಿಂತ ದೊಡ್ಡ ಸವಾಲು. ಅದಕ್ಕೆಂದೇ ಇಲ್ಲಿ ಪಾತ್ರಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಚಿತ್ರಕಥೆಯನ್ನು ನಾಲ್ಕು ವಿಭಿನ್ನ ರೀತಿಯಲ್ಲಿ ಬರೆದು, 15 ಕರಡುಗಳನ್ನು ಸಿದ್ಧಪಡಿಸಿ, ವಿಭಿನ್ನ ಭಾಷೆಗಳ ಗೆಳೆಯರಿಗೆ ಓದಲು ಕೊಟ್ಟು, ಚರ್ಚಿಸಿ ಕೊನೆಗೊಂದು ಚಿತ್ರಕಥೆ ಸಿದ್ಧವಾದದ್ದು. ಸಂಕೀರ್ಣವಾಗಿರುವ ಕಥೆಯನ್ನು ಸರಳವಾಗಿ ಹೇಳುವುದಕ್ಕೆ ಗಮನ ಕೊಟ್ಟಿದ್ದೇನೆ. ಅಷ್ಟರ ಮಟ್ಟಿಗೆ ಕಾರಂತರ ಕೃತಿಗೆ ನ್ಯಾಯ ಸಲ್ಲಿಸಿದ ವಿಶ್ವಾಸ ನನಗಿದೆ’ ಎನ್ನುತ್ತಾರೆ ಶೇಷಾದ್ರಿ.

‘ಗುಡಿಯೂ ಶಾಶ್ವತವಲ್ಲ; ಅಲ್ಲಿನ ದೇವರೂ ಶಾಶ್ವತವಲ್ಲ. ಒಬ್ಬ ಶಾಶ್ವತವಾದ ದೇವರು ಇದ್ದನೆಂದರೂ ಅವನು ಎಂಥವನೆಂದು ನಮ್ಮ ಎಟುಕಿಗೆ ಸಿಕ್ಕಿದ್ದಿಲ್ಲ. ನಾವು ನಮ್ಮ ಬುದ್ಧಿಗೆ ಸಮನಾಗಿ ನೂರು ಸಾವಿರಗಟ್ಟಲೆ ದೇವರನ್ನು ಮಾಡಿಕೊಂಡು ಇದೇ ನಿಜ, ಅದೇ ನಿಜ ಎಂದು ಮರುಳು ಮಾತನಾಡಿದವರು’ ಎನ್ನುವುದು ಕಾದಂಬರಿಯಲ್ಲಿ ಬರುವ ಮೂಕಜ್ಜಿಯ ಮಾತು. ಮೂಕಜ್ಜಿಯ ಅಗಾಧ ವ್ಯಕ್ತಿತ್ವ ಚಿತ್ರನಿರ್ದೇಶಕರ ಎಟುಕಿಗೆ ಪೂರ್ತಿ ಸಿಕ್ಕಿಲ್ಲ. ಅವರ ಎಟುಕಿಗೆ ಸಿಕ್ಕಿದ ಮೂಕಜ್ಜಿಯನ್ನು ನೋಡಿದರೆ, ಕೆಲವು ಕಡೆ ವಿಚಾರವಾದಕ್ಕಿಂತ ಅತೀಂದ್ರಿಯ ಶಕ್ತಿಯೇ ಮೇಲುಗೈ ಸಾಧಿಸಿದಂತೆ ಕಾಣುತ್ತದೆ. ಕಾರಂತರ ಕಾದಂಬರಿಯನ್ನು ಓದಿ ಅರ್ಥೈಸದೆ ಈ ಸಿನಿಮಾ ನೋಡುವ ಪ್ರೇಕ್ಷಕರು, ಸೃಷ್ಟಿರಹಸ್ಯದ ಕುರಿತು ಬೇರೆಯೇ ತೀರ್ಮಾನವೊಂದಕ್ಕೆ ಬರಲೂಬಹುದು. ಹಾಗಿದ್ದೂ, ಕೃತಿಯ ತಾತ್ವಿಕ ಅಗಾಧತೆಯನ್ನು ಮರೆತು ನೋಡಿದರೆ, ಶೇಷಾದ್ರಿ ಆಹ್ಲಾದಕರ ಸಿನಿಮಾ ಅನುಭವವೊಂದನ್ನು ನಮ್ಮ ಮುಂದಿಟ್ಟಿದ್ದಾರೆ. ದೈವದ ಮುಂದೆ ಸಿಟ್ಟಿಗೆದ್ದು ಕೂಗಾಡುವ ಮೂಕಜ್ಜಿ; ಬಾಲ್ಯದ ಗೆಳತಿ ತಿಪ್ಪಜ್ಜಿಯ (ಸಿಕ್ಕ ಸಣ್ಣ ಅವಕಾಶದಲ್ಲೇ ರಾಮೇಶ್ವರಿ ವರ್ಮಾ ಗಾಢ ಪರಿಣಾಮ ಬೀರುತ್ತಾರೆ) ಭೇಟಿ, ತಿಪ್ಪಜ್ಜಿಯ ಸಾವಿನ ಸನ್ನಿವೇಶ, ಮುಗ್ಧ ಮಗುವಿನ ಜೊತೆಗೆ ಮೂಕಜ್ಜಿಯ ಮಾತುಕತೆ– ಇಲ್ಲೆಲ್ಲ ನಿರ್ದೇಶಕರ ದಟ್ಟ ಕಸಬುದಾರಿಕೆ ಎದ್ದು ಕಾಣುತ್ತದೆ. ಜಿ.ಎಸ್. ಭಾಸ್ಕರ್ ಛಾಯಾಗ್ರಹಣ, ಪ್ರವೀಣ್ ಗೋಡ್ಕಿಂಡಿಯವರ ಸಂಗೀತ ಮತ್ತು ಬಿ.ಎಸ್. ಕೆಂಪರಾಜು ಸಂಕಲನ ಈ ಅನುಭವವನ್ನು ಇನ್ನಷ್ಟು ಗಾಢವಾಗಿಸಿದೆ.

ಕಾದಂಬರಿಯೊಂದು ಕೃತಿಕಾರನ ಮತ್ತು ಓದುಗರ ಮನಸ್ಸಿನಲ್ಲಿ ಮೂಡಿಸುವ ಚಿತ್ರ, ಸಿನಿಮಾದಲ್ಲಿ ಯಥಾವತ್ತಾಗಿ ಪಡಿಮೂಡುವುದು ಕಷ್ಟ. ಕೆಲವೊಮ್ಮೆ ಅದು ಕೃತಿಯನ್ನೂ ಮೀರಿ ಮೇಲೆದ್ದುಬಿಡಬಹುದು. ಕೆಲವೊಮ್ಮೆ ತನ್ನದೇ ಆದ ಹೊಸ ಚಿತ್ರಕಶಕ್ತಿಯನ್ನು ಕಟ್ಟಿಕೊಡಬಹುದು. ಸೃಜನಶೀಲತೆಯ ಆಟದಲ್ಲಿ ಇದೆಲ್ಲ ಸಹಜ. ಕಾರಂತರು ಐಹಿಕ ಬದುಕಿನಿಂದ ನಿರ್ಗಮಿಸಿ ಈ ಡಿಸೆಂಬರ್ 9ಕ್ಕೆ ಸರಿಯಾಗಿ 22 ವರ್ಷ. ಕಾರಂತರನ್ನು ಮತ್ತೆ ಕನ್ನಡದ ಮನಸ್ಸುಗಳ ಮಧ್ಯೆ ಸಣ್ಣದೊಂದು ‘ವಾಕಿಂಗ್’ಗೆ ಕರೆತಂದಿರುವ ಶೇಷಾದ್ರಿ ಅಭಿನಂದನೆಗೆ ಅರ್ಹರು. ಮೂಕಜ್ಜಿಯ ಮೂಲಕ ಕಾರಂತರ ಮಾತುಗಳನ್ನು ಕೇಳಿಸಿಕೊಳ್ಳಲು ಹೊಸ ಪೀಳಿಗೆಯ ಪ್ರೇಕ್ಷಕರಿಗೂ ಇದೊಂದು ಸದವಕಾಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.