ಬದಲಾವಣೆಯ ಹರಿಕಾರರು ಎಂದು ‘ಡೆಕ್ಕನ್ ಹೆರಾಲ್ಡ್’ನಿಂದ ಗುರುತಿಸಲ್ಪಟ್ಟ ಚನ್ನರಾಯಪಟ್ಟಣದ ಸಂತೋಷ್, ತಮ್ಮೂರಿನಲ್ಲಿ ಜಾತಿ ತಾರತಮ್ಯದ ವಿರುದ್ಧ ಸದ್ದಿಲ್ಲದೆ ಕ್ರಾಂತಿ ಮಾಡಿದವರು. ದುರ್ಬಲ ವರ್ಗದವರಲ್ಲಿ ಸ್ವಾವಲಂಬನೆಯ ಕೆಚ್ಚನ್ನೂ ಮೂಡಿಸಿದವರು.

ಜಾತಿ ಜಾತಿ ಅಂತ ಜಗಳ ಮಾಡ್ತೇವ್ರಿ
ಆದ್ರ, ಜಾತಿಯೊಳಗ ನಾವು ನೀತಿಮಾರ್ಗ ಮರ್ತೇ ಬಿಡ್ತೇವ್ರಿ (ಜನಪದ ಹಾಡು)

ನಗರ– ಪಟ್ಟಣಗಳಲ್ಲಿ ‘ಸಸ್ಯಾಹಾರಿಗಳಿಗೆ ಮಾತ್ರ’ ಎಂದು ಬಾಡಿಗೆ ಮನೆಗಳಿಗೆ ತಗಲಿ ಹಾಕಿರುವ ಬೋರ್ಡ್‌ಗಳು ತಿನ್ನುಣ್ಣುವ ಜಾತಿಗಳ ಜನರನ್ನು ಅವರ ಆಹಾರ ಪದ್ಧತಿಯ ಮೂಲಕ ಸಾಮಾಜಿಕ ಅಸ್ಪೃಶ್ಯರನ್ನಾಗಿ ಮಾಡಿದ್ದರೆ, ಗ್ರಾಮೀಣ ಭಾಗದಲ್ಲಿ ಈ ಅಸ್ಪೃಶ್ಯತೆ ಕಣ್ಣಿಗೆ ರಾಚುವಷ್ಟು ಢಾಳಾಗಿ ಗೋಚರಿಸುತ್ತದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿದ್ದರೂ ಚಿಂತೆಯಿಲ್ಲ. ಯಾಕಪ್ಪಾ ಹೀಗೆ ಮಾಡಿದೆ ಎಂದು ಕೇಳೋಣವೆಂದರೆ ಎಷ್ಟೋ ಕಡೆ ಪರಿಶಿಷ್ಟರಿಗೆ ದೇವಸ್ಥಾನ ಪ್ರವೇಶವೂ ನಿಷಿದ್ಧ.

ರಾಜ್ಯದ ಅಂಥದೊಂದ್ದು ಹಳ್ಳಿಯ ಯುವಕ ಡಿ.ಡಿ. ಸಂತೋಷ್ ತಮ್ಮ ಗ್ರಾಮದಲ್ಲಿ ಜಾತೀಯತೆಯ ವಿಷವರ್ತುಲವನ್ನು ಸದ್ದಿಲ್ಲದೇ ಮೀರಿದ ಬಗ್ಗೆ, ಅದು ಬೀರಿದ ಪರಿಣಾಮಗಳ ಬಗೆಗಿನ ಕಥನವಿದು. ಬದಲಾವಣೆಯ ಹರಿಕಾರ ಎಂದು ಈ ಬಾರಿ ‘ಡೆಕ್ಕನ್ ಹೆರಾಲ್ಡ್’ನ ಗೌರವಕ್ಕೆ ಪಾತ್ರವಾಗಿರುವ ಸಂತೋಷ್ ಅವರ ಬದುಕಿನ ಪುಟವೊಂದು ಇಲ್ಲಿದೆ.

ಬಾಲ್ಯದಿಂದಲೂ ಜಾತಿ ತಾರತಮ್ಯ ಮತ್ತು ಅದರ ನಿಗೂಢತೆಗಳ ಬಗ್ಗೆ ಆತಂಕವಿಟ್ಟುಕೊಂಡೇ ಬೆಳೆದವರು ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಗೂರಿನ ಸಂತೋಷ್. ಶಾಲೆಯಲ್ಲಿ ಪರಿಶಿಷ್ಟರ ಮಕ್ಕಳನ್ನು ನೋಡುವ ರೀತಿ, ಇತರ ಜಾತಿಗಳವರ ಮನೆಯ ಜಗಲಿ ಮೇಲೆ ಆಡುವಾಗ ಅಲ್ಲಿನ ಹಿರಿಯರು ವರ್ತಿಸುತ್ತಿದ್ದ ರೀತಿ, ಟಿ.ವಿ. ಇದ್ದವರ ಮನೆಯಲ್ಲಿ ‘ಚಿತ್ರಮಂಜರಿ’ ನೋಡಲು ಇತರ ಜಾತಿಯ ಮಕ್ಕಳು ಮನೆಯೊಳಗೆ ಹೋದರೆ, ಪರಿಶಿಷ್ಟರ ಹೈಕಳಿಗೆ ಬಾಗಿಲು, ಕಿಟಕಿಗಳೇ ಟಿ.ವಿ. ವಿಂಡೋಗಳಾದದ್ದು... ಇಂಥ ನೂರಾರು ಅನುಭವಗಳಾದರೂ ಅದನ್ನು ವಿಶ್ಲೇಷಿಸದ, ಹೊಟ್ಟೆ ತುಂಬಾ ಅನ್ನ ಸಿಕ್ಕರೆ ಸಾಕಪ್ಪ ಅನ್ನುವ ಮುಗ್ಧತೆ ಬಾಲ್ಯದಲ್ಲಿ ಅವರದಾಗಿತ್ತು.

ಆದರೆ, ಅದೇ ಮುಗ್ಧತೆ ಹಬ್ಬ–ಹರಿದಿನಗಳ ಹೊತ್ತಿಗೆ ಅವಮಾನವಾಗಿ ಬದಲಾಗುತ್ತಿತ್ತು. ಹಬ್ಬಗಳಲ್ಲಿ ಹೆತ್ತವರು ಇಲ್ಲವೆ ತಾನೇ ದೊಡ್ಡವರ ಮನೆಗಳಿಂದ ಊಟ ಇಸ್ಕೊಂಡು ಬರ್ತಾ ಇದ್ದದ್ದು ಖುಷಿಯ ಬದಲಿಗೆ ನೋವು ತರುತ್ತಿತ್ತು. ರಾತ್ರಿ ಯಾರ ಮನೆಯಲ್ಲಿ ಊಟ ಇಸ್ಕೊಂಡು ಬರ್ತಾ ಇದ್ರೋ ಅದೇ ಮನೆಯ ಹುಡುಗ ಮರುದಿನ ಬೆಳಿಗ್ಗೆ ಶಾಲೆಯಲ್ಲಿ ಸಹಪಾಠಿಯಾಗಿರುತ್ತಿದ್ದ. ಸ್ನೇಹಿತನ ಪಕ್ಕದಲ್ಲಿ ಕೂರಲು ಅವಮಾನದ ಭಾವ ಹಿಂದೇಟು ಹಾಕುತ್ತಿತ್ತು. ಆದರೆ, ಅದೇ ಹೊತ್ತಿಗೆ ನಾವೂ ಆರ್ಥಿಕವಾಗಿ ಸಬಲರಾದರೆ, ಇವರ ರೀತಿಯೇ ಬದುಕಬಹುದೆಂಬ ಕನಸನ್ನು ಮನಸು ಬಿತ್ತುತ್ತಿತ್ತು. ಇದಕ್ಕೆ ಏಕೈಕ ಮದ್ದು ಶಿಕ್ಷಣ ಎಂದು ತಿಳಿದ ಸಂತೋಷ, ಆಗಿನಿಂದಲೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ಓದಿಗೆ ತೆರೆದುಕೊಂಡರು. 7ನೇ ತರಗತಿಯಲ್ಲಿ ಇಡೀ ದಿಂಡಗೂರಿಗೇ ಮೊದಲಿಗನಾಗಿ ತೇರ್ಗಡೆಯಾದರೂ ಮುಂದಿನ ವರ್ಷಗಳಲ್ಲಿ ಊರಿನ ಜಾತೀಯತೆಯ ಚಹರೆ ಮತ್ತಷ್ಟು ದಟ್ಟವಾಗಿ ಪ್ರತಿಭೆಗೆ ಕಂಟಕವಾಯಿತು.

ಅದೇ ಹೊತ್ತಿಗೆ ಗ್ರಾಮದಲ್ಲಿ ದಲಿತ ಚಳವಳಿಯ ಗಾಳಿ ಪಸರಿಸತೊಡಗಿತ್ತು. ಹೋರಾಟದ ಹಾಡುಗಳಿಗೆ ದನಿಯಾಗುತ್ತಿದ್ದ ಸಂತೋಷ್, ಗ್ರಾಮದ ಇತರರಂತೆ ಉನ್ನತ ಹುದ್ದೆಯ ಕನಸು ಕಾಣದೇ ಸಾಹಿತ್ಯದ ಓದಿಗೆ ತೆರೆದುಕೊಂಡು ಪದವಿಯಲ್ಲಿ ಇಂಗ್ಲಿಷ್ ಮೇಜರ್ ಆರಿಸಿಕೊಂಡರು. ಪಿಯುಸಿ ಓದುವಾಗಲೇ ತಾಯಿ ತೀರಿಹೋಗಿದ್ದರಿಂದ ಮನೆಯ ಆರ್ಥಿಕ ಪರಿಸ್ಥಿತಿಯೂ ಅಷ್ಟಕಷ್ಟೆ ಇತ್ತು. ಆದರೆ ಏನಾದರೂ ಮಾಡಬೇಕೆಂಬ ತುಡಿತ ಅವರನ್ನು ನೀನಾಸಂನತ್ತ ಕರೆದೊಯ್ಯಿತು. ಮುಂದೆ ನೀನಾಸಂ ಗಣೇಶ್ ಅವರ ‘ಜನಮನದಾಟ’ದಲ್ಲಿ ಅಂಬೇಡ್ಕರ್ ಪಾತ್ರವನ್ನೇ ಮಾಡುವ ಅವಕಾಶ ಸಿಕ್ಕಾಗ ಆಕಾಶವೇ ಕೈಗೆ ಸಿಕ್ಕಷ್ಟು ಸಂತಸ. ಈ ನಡುವೆ ಮೈಸೂರಿನ ರಂಗಾಯಣದಲ್ಲಿ ಒಂದು ವರ್ಷ ಉಪನ್ಯಾಸಕ ವೃತ್ತಿ. ನಾಟಕ ಕಲೆಯಲ್ಲಿ ಸ್ನಾತಕೋತ್ತರ ಪದವಿ. ರಂಗಕರ್ಮಿ ಯತೀಶ್ ಕೊಳ್ಳೇಗಾಲ ಅವರ ಸಲಹೆಯಂತೆ ಸ್ವಗ್ರಾಮದಲ್ಲೇ ಸಾಧನೆ ಮಾಡುವ ತವಕ. ‘ನೆಲದನಿ’ ಸಂಘಟನೆ ಕಟ್ಟಿ, ಮನೆಮನೆಗೆ ಅಂಬೇಡ್ಕರ್ ಅನ್ನುವ ವಿನೂತನ ಪ್ರಯೋಗದ ಮೂಲಕ ಜನಜಾಗೃತಿ. ದೇವನೂರ ಮಹಾದೇವ, ಪಿ. ಲಂಕೇಶ್ ಅವರ ಕಥೆಗಳನ್ನು ‘ಕಥಾದನಿ’ಯ ಮೂಲಕವೂ ತಲುಪಿಸಿದ್ದಾಯಿತು.

ಹೋಟೆಲ್, ದೇಗುಲಕ್ಕಿಲ್ಲ ಪ್ರವೇಶ: 2020ರ ದಿನಗಳವು. ಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರತೊಡಗಿತ್ತು. 15 ವರ್ಷಗಳಿಂದಲೂ ಪರಿಶಿಷ್ಟ ಜಾತಿಗೆ ಸಿಗದ ಪ್ರಾತಿನಿಧ್ಯ ಈ ಬಾರಿಯಾದರೂ ದಕ್ಕೀತೇ ಎಂಬ ಕನಸು ಮತ್ತೆ ನುಚ್ಚುನೂರು ಆಯಿತು. ಪರಿಶಿಷ್ಟ ಪಂಗಡಕ್ಕೆ ಮೀಸಲು ದೊರೆತ ಹಿಂದಿನ ಮರ್ಮ ಅವರು ಸ್ಪೃಶ್ಯರು ಎಂಬುದಾಗಿತ್ತು. ಅವರಿಗಿರುವ ದೇವಸ್ಥಾನಗಳ ಪ್ರವೇಶದ ಹಕ್ಕು ನಮಗೇಕಿಲ್ಲ ಎಂಬ ಪ್ರಶ್ನೆ ಮೂಡಿದ್ದೇ ತಡ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಜತೆಗೆ ಚರ್ಚೆಯೂ ನಡೆಯಿತು. ಎಲೆಕ್ಷನ್ ಮುಗಿದ ಬಳಿಕ ಗ್ರಾಮಸ್ಥರೊಂದಿಗೆ ಚರ್ಚಿಸುವ ಭರವಸೆ ಸಿಕ್ಕಿತು. ಅಷ್ಟರೊಳಗೇ ನಡೆಯಬಾರದ್ದು ನಡೆದು ಹೋಯಿತು.

ಚುನಾವಣೆಯ ದಿನ ಗ್ರಾಮದ ಲಿಂಗಾಯತರ ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುತ್ತಿದ್ದ ತಮ್ಮ ಸ್ನೇಹಿತರನ್ನು ಮಾತನಾಡಿಸಲೆಂದು ಸಂತೋಷ್ ಒಳಹೋಗಬೇಕೆನ್ನುವಷ್ಟರಲ್ಲಿ ಕೈಯೊಂದು ತಡೆದು, ದೊಡ್ಡ ದನಿಯೊಂದು ಕೇಳಿದ ನೆನಪಷ್ಟೆ. ‘ನಿಮ್ಮ ಜಾತಿಯವರಿಗೇನಿದ್ರೂ ಹೊರಗೆ ಮಾತ್ರ ಚಹಾ. ಒಳಗಲ್ಲ’ ಎಂದ ಕ್ಯಾಂಟೀನ್ ಮಾಲೀಕನ ಜಾತಿ ತಾರತಮ್ಯದ ನುಡಿಗಳು ನಡುರಾತ್ರಿಯಲ್ಲೂ ಸಂತೋಷ್ ಅವರನ್ನು ಬೆಚ್ಚಿಬೀಳಿಸುವಂತಾಯಿತು. ಅವಮಾನ, ನೋವಿನಿಂದ ಕುಗ್ಗಿಹೋದ ಸಂತೋಷ್ ಅವರ ಮನದಲ್ಲಿ ಉಳ್ಳವರ ಹೊಲದಲ್ಲಿ ಅಪ್ಪ–ಅಮ್ಮ ಜೀತದಾಳುಗಳಾಗಿ ದುಡಿದದ್ದು, ಜಗುಲಿಯಲ್ಲಿ ಅವರಿಗೆ ಪ್ರತ್ಯೇಕವಾಗಿ ಊಟ ನೀಡಿದ್ದು... ಹೀಗೆ ಒಂದೊಂದೇ ಘಟನೆಗಳ ಮೆರವಣಿಗೆ. ದೇವಸ್ಥಾನದ ಜತೆಗೆ ಹೋಟೆಲ್ ಪ್ರವೇಶವೂ ಆಗಲಿ ಎಂದು ಸಮುದಾಯದವರ ಜತೆಗೆ ತೀರ್ಮಾನಿಸಿ, ಸಂತೋಷ್ ಮತ್ತು ಇತರ ಯುವಕರ ಗುಂಪು ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳ ಮೊರೆ ಹೋಯಿತು. ಗ್ರಾಮಕ್ಕೆ ಬಂದ ಅಧಿಕಾರಿಗಳ ಮುಂದೆ ಗ್ರಾಮಸ್ಥರಿಂದ ಮೌನವೇ ಉತ್ತರ. ಅಂದು 2021ರ ಸೆಪ್ಟೆಂಬರ್ 28. ಅಂತೂ– ಇಂತೂ ದೇವಸ್ಥಾನಗಳ ಪ್ರವೇಶ ನಡೆದೇ ಬಿಟ್ಟಿತು. ಆ ದಿನ ದಿಂಡಗೂರಿನ ಪರಿಶಿಷ್ಟ ಜಾತಿಯ ಹಿರಿಯ ಜೀವಗಳು ತಮ್ಮ ತಾತ, ಮುತ್ತಾತನ ಕಾಲದಿಂದಲೂ ತಮ್ಮ ಸಮುದಾಯದನ್ನು ದೇಗುಲ ಪ‍್ರವೇಶದಿಂದ ಜಾತೀಯ ವಿಷಕಾರುವ ಮನಸುಗಳು ತಡೆದಿದ್ದನ್ನು ನೆನಪಿಸಿಕೊಂಡು ಬಿಕ್ಕಿದವು. ಇತ್ತ ಜಾತಿ ತಾರತಮ್ಯಕ್ಕೆ ಕಾರಣವಾಗಿದ್ದ ಹೋಟೆಲ್ ಅನ್ನು ತಹಶೀಲ್ದಾರ್ ಮುಚ್ಚಿಸಿದರು.

‘ಪ್ರವೇಶ’ದ ಅಡ್ಡಪರಿಣಾಮಗಳು: ದೇಗುಲಕ್ಕೆ ಪ್ರವೇಶ ದೊರೆತ ಸಂತಸ ಸಂತೋಷ್ ಮತ್ತವರ ಗೆಳೆಯರ ಪಾಲಿಗೆ ಹೆಚ್ಚು ದಿನ ಉಳಿಯಲಿಲ್ಲ. ದೇಗುಲ ಪ್ರವೇಶದ ಅಡ್ಡಪರಿಣಾಮಗಳು ನಿಧಾನಕ್ಕೆ ಬೆಳಕಿಗೆ ಬರತೊಡಗಿದವು. ಆಗ ಮೂಗಷ್ಟೇ ಹಿಡಿದಿದ್ದ ಜಾತೀಯತೆ ಈಗ ಮೂಗಿನ ಜತೆಗೆ ಬಾಯನ್ನೂ ಒತ್ತಿ ಹಿಡಿದಿತ್ತು. ಹೊರಗಿನವರ ಕಣ್ಣಿಗೆ ಆದರ್ಶ ಗ್ರಾಮವಾಗಿದ್ದ ಊರು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಪರಿಶಿಷ್ಟ ಹೆಣ್ಣುಮಕ್ಕಳ ಕೂಲಿಗೆ ಕತ್ತರಿ ಬಿತ್ತು. ಸರ್ಕಾರದ ಮರ್ಜಿ ಬಿಟ್ಟು, ಕೆಲ ಹಿತೈಷಿಗಳ ನೆರವಿನಿಂದ ತನ್ನೂರಿನ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಲು ಯತ್ನಿಸುತ್ತಿರುವ ಸಂತೋಷ್ ಅವರ ಮನದಲ್ಲಿ ಜಾತಿಯೆಂಬ ಗಾಯ ಇನ್ನೂ ಮಾದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.