ಕಾಶಿ, ವಾರಾಣಸಿ ಎಂದೊಡನೆ ಶ್ರದ್ಧಾವಂತರ ಮೈಮನಗಳಲ್ಲಿ ಪುಳಕದ ಸೆಲೆಯೊಂದು ಹಾದುಹೋಗುತ್ತದೆ. ಆಸ್ತಿಕರಿಗೆ ಮಾತ್ರವಲ್ಲದೆ, ಸಮಾಜ ವಿಜ್ಞಾನದ ವಿದ್ಯಾರ್ಥಿಗಳಿಗೂ ಕಲಾವಿದರಿಗೂ ಪ್ರವಾಸಿಗರಿಗೂ ಕಾಶಿ ‘ಅನುಭವಗಳ ಅಕ್ಷಯಪಾತ್ರೆ’ ಇದ್ದಂತೆ.

ಅಂದಹಾಗೆ, ಪಾಪನಾಶಿನಿ ಎನ್ನುವ ನಂಬಿಕೆಯ ರೂಪಕವಾದ ಕಾಶಿ ಮತ್ತು ಗಂಗಾನದಿಯ ಇಂದಿನ ಪರಿಸ್ಥಿತಿ ಹೇಗಿದೆ? ‘ಸ್ವಚ್ಛ ಭಾರತ’ದ ಪರಿಕಲ್ಪನೆ ಅಲ್ಲಿ ಹೇಗೆ ಸಾಕಾರಗೊಂಡಿದೆ? ಈ ಬರಹದೊಂದಿಗೆ ಕಾಶಿಯ ಓಣಿಗಳಲ್ಲಿ, ನದೀತಟದಲ್ಲಿ ವಿಹರಿಸಬಹುದು.

ಕಾಶಿಗೆ ಹೋಗಲೇಬೇಕೆಂದು ನಿರ್ಧಾರ ಮಾಡಿಯಾಗಿತ್ತು, ಅವಕಾಶ ಮಾತ್ರ ಬಂದಿರಲಿಲ್ಲ. ಗಂಗೆಯಲ್ಲಿ ಮೀಯಬೇಕು, ಕಾಶಿ ವಿಶ್ವೇಶ್ವರನ ದರ್ಶನ ಮಾಡಬೇಕು, ಇವೆಲ್ಲಾ ಆಸೆಗಳನ್ನು ನನ್ನ ತಲೆಯಲ್ಲಿ ನೆಟ್ಟಿದ್ದು ನನ್ನ ಅಜ್ಜಿ. ನನ್ನ ಅಜ್ಜಿಯವರ ತಂದೆ–ತಾಯಿ ಕೊಡಗಿನಿಂದ ಕಾಲ್ನಡಿಗೆಯಲ್ಲೇ ಕಾಶಿಗೆ ಹೋಗಿ ಬಂದಿದ್ದರಂತೆ. ಅವರ ಅಂಗಾಲಿನ ಬಿರುಕುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ರಾಗಿಕಾಳು, ಮಳೆಗಾಲದಲ್ಲಿ ಮೊಳಕೆಯೊಡೆದಿತ್ತಂತೆ! ಅವರ ಕಾಶಿಯ ಅನುಭವ ಅಂಥಾದ್ದು.

ಇತ್ತೀಚೆಗೆ ನನ್ನ ಅಜ್ಜಿ ನಿಧನರಾದರು. ಆಗ ನಿರ್ಧರಿಸಿಬಿಟ್ಟೆ– ಕಾಶಿಗೆ ಹೋಗಿ ಅಲ್ಲಿಯೇ ಅವರ ಅಸ್ಥಿ ವಿಸರ್ಜನೆ ಮಾಡಿ, ಪಿಂಡದಾನ ಮಾಡುವುದರೊಂದಿಗೆ ಕಾಶಿ ದರ್ಶನ, ಗಂಗಾಸ್ನಾನದ ಅನುಭವವನ್ನು ಪಡೆದುಕೊಂಡು ಬರಬೇಕು ಎಂದು.

ಅಂತೂ ಒಂದು ದಿನ ಕಾಶಿಗೆ ಹೊರಟೇ ಬಿಟ್ಟೆ. ಕಾಶಿ ತಲುಪುವಾಗಲೇ ರಾತ್ರಿಯಾಗಿತ್ತು. ಆದರೆ, ರಾತ್ರಿಯಲ್ಲೇ ಗಂಗಾನದಿ ನೋಡುವ ಆಸೆ ಉತ್ಕಟವಾಗಿತ್ತು. ‘ದಶಾಶ್ವಮೇಧಘಾಟ್ ಎಲ್ಲಿದೆ?’ ಎಂದು ಹುಡುಕಿಕೊಂಡು ಹೋಗುವಾಗ ವಾರಾಣಸಿಯ ನಿಜ ಪರಿಚಯವಾಗುತ್ತಾ ಬಂದಿತು.

ವಾರಾಣಸಿಯನ್ನು ವಿಶ್ವದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದು ಎನ್ನುತ್ತಾರೆ. ಇಲ್ಲಿಯ ಜನನಿಬಿಡತೆಯನ್ನು ನೋಡಿದರೆ ಆ ಬಗ್ಗೆ ಯಾವುದೇ ಸಂಶಯ ಉಳಿಯುವುದಿಲ್ಲ. ವಾರಾಣಸಿ ನಗರದ ಒಳಗೆ ಹೋದಂತೆ ನಿಮಗೆ ಎದುರಾಗುವುದು ಬರೀ ಜನಜಂಗುಳಿ ಮತ್ತು ವಾಹನಗಳ ದಟ್ಟಣೆ.

ಫುಟ್ಪಾತ್ ಇಲ್ಲದಂತಹ ರಸ್ತೆಗಳಲ್ಲಿ ಇಕ್ಕೆಲಗಳ ಶಿಥಿಲ ಕಟ್ಟಡಗಳಿಗೆ ಉಜ್ಜಿಕೊಂಡು ಹೋಗುವಂತೆ ಚಲಿಸುವ ವಾಹನಗಳು, ಮೋಟಾರ್ ವಾಹನಗಳೊಂದಿಗೆ ಸೈಕಲ್, ಸೈಕಲ್ ರಿಕ್ಷಾಗಳು, ಅವುಗಳ ನಡುವೆ ಜಾಗ ಮಾಡಿಕೊಂಡು ಬಿರಬಿರನೇ ನಡೆಯುವ ಜನರ ಮಧ್ಯದಲ್ಲಿ ನಮ್ಮ ಕಾರು ಆಮೆಗತಿಯಲ್ಲಿ ಚಲಿಸುತ್ತಾ ಹೋಗುವಾಗ ಕಣ್ಣಿಗೆ ರಾಚಿದ್ದು,

ತಲೆಮೇಲೆ ಆಲಂಕಾರಿಕ ವಿದ್ಯುತ್ ದೀಪಗಳನ್ನು ಹೊತ್ತುಕೊಂಡು ಹೋಗುವ ಜನರ ಸಾಲುಗಳ ಮಧ್ಯೆ, ಕರ್ಕಶ ಬ್ಯಾಂಡ್ ಸೆಟ್ನೊಂದಿಗೆ ಆಕಡೆ – ಈಕಡೆ ಹೋಗುತ್ತಿರುವ ಮದುವೆ ದಿಬ್ಬಣಗಳು. ಒಂದು ಕಡೆಯಂತೂ ಟ್ರಾಫಿಕ್ ಜಾಮ್ ಆಗಿ ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ ಎಂದಾದಾಗ ಇನ್ನುಳಿದ ಮೂರು ಕಿಲೋಮೀಟರ್ಗಳನ್ನು ನಡೆದುಕೊಂಡೇ ಹೋಗಲು ನಿರ್ಧರಿಸಿ ನಾನು ಕಾರಿನಿಂದಿಳಿದೆ.

ವಾರಾಣಸಿಯ ಅವ್ಯವಸ್ಥೆಯಲ್ಲಿಯೂ ಅದೇನೋ ಒಂದು ವ್ಯವಸ್ಥೆ. ಒಂದು ಕಡೆ ಚರಂಡಿ, ಮತ್ತೊಂದು ಕಡೆ ವಾಹನ, ಇನ್ನೊಂದು ಕಡೆ ಗೋಡೆ, ಮಗದೊಂದು ಕಡೆ ನೀರು, ಕಾಲಿಡುವಲ್ಲೆಲ್ಲ ಉಗುಳಿದ ತಾಂಬೂಲದ ಕಲೆ, ಅಲ್ಲೊಂದಿಷ್ಟು ಕಸ, ಇಲ್ಲೊಂದಿಷ್ಟು ಕೊಳೆ, ಅದರ ಮಧ್ಯೆ, ಮುಂಗಾಲನ್ನಷ್ಟೇ ಬಳಸಿಕೊಂಡು ಹಾರುತ್ತಾ ಜಿಗಿಯುತ್ತಾ ನನ್ನ ಹಳೆಯ ಸ್ನೇಹಿತ,

ನನಗೆ ಹರಿದ್ವಾರದಲ್ಲಿ ಪರಿಚಯವಾಗಿದ್ದ ನಾಗಬಾಬಾ ತೂಫಾನ್ ಗಿರಿಯನ್ನು ಭೇಟಿಮಾಡಲು, ಕಾಶಿಯ ಪುರಾತನ ಅಖಾಡಗಳಲ್ಲಿ ಒಂದಾದ ಜುನ ಅಖಾಡವನ್ನು ಹುಡುಕುತ್ತಾ ಹೋದಾಗ, ನನ್ನನ್ನು ಕಾದು ಕಾದು ಸುಸ್ತಾಗಿ, ಟೀ ಹೀರುತ್ತಾ, ಸಿಗರೇಟ್ ಸೇದುತ್ತಾ ನಿಂತಿದ್ದ ತೂಫಾನ್ ಗಿರಿ, ನನ್ನನ್ನು ಕಂಡ ಕೂಡಲೇ ಹಾರಿ ಬಂದು ಅಪ್ಪಿಕೊಂಡರು.

‘ಕಾಶಿಗೆ ಸುಸ್ವಾಗತ’ ಎಂದ ಅವರು, ನನ್ನನ್ನು ಕರೆದುಕೊಂಡು ಜುನ ಅಖಾಡಕ್ಕೆ ಹೋದರು. ಜುನ ಅಖಾಡ ಪುರಾತನವಾದ ಸುಂದರ ಕಟ್ಟಡ. ಗಂಗಾತಟದಲ್ಲಿ ಮೂರಂತಸ್ತು ಎತ್ತರಕ್ಕೆ ನಿಂತಿರುವ ಈ ಕಟ್ಟಡ ಅನೇಕ ನಾಗಾಸಾಧುಗಳಿಗೆ ವಿಶ್ರಾಂತಿ ಸ್ಥಳ. ಸರಳತೆಯೇ ಇದರ ಮುಖ್ಯಲಕ್ಷಣ.

ಅಖಾಡದ ಒಳಗೆ ಅನೇಕ ಕಾವಿಧಾರಿ ಯುವಕರು, ವೃದ್ಧರು, ಮೊಬೈಲ್ ಬಳಸುತ್ತಾ, ಟೀವಿ ನೋಡುತ್ತಾ, ಹಾಡು ಕೇಳುತ್ತಾ ಕುಳಿತಿದ್ದರು. ಇವರೆಲ್ಲ ನನ್ನನ್ನು ಕಂಡೊಡನೆಯೇ ಮುಗುಳ್ನಕ್ಕು ಸುಮ್ಮನಾಗಿಬಿಡುತ್ತಿದ್ದರು.

ತೂಫಾನ್ ಗಿರಿ, ಅವರನ್ನೆಲ್ಲ ಮಹಾರಾಜ್, ಸಾಧು, ಬಾಬಾ ಎಂದೆಲ್ಲಾ ಪರಿಚಯಿಸಿದರೂ ಅವರು ಯಾರೆಂಬುದು ನನಗಂತೂ ಅರ್ಥವಾಗಲಿಲ್ಲ. ಜುನ ಅಖಾಡದ ಒಳಗೆ ಸದ್ದು ಗದ್ದಲವಿರಲಿಲ್ಲ. ಆಡಂಬರ, ಆರ್ಭಟವಿರಲಿಲ್ಲ. ರಾತ್ರಿಯಾಗಿದ್ದರಿಂದ ಇಲ್ಲಿ ಚಟುವಟಿಕೆಗಳ ಕೊರತೆಯೇ ಎಂದು ಪ್ರಶ್ನಿಸಿದಾಗ– ‘ಇಲ್ಲ, ಸಾಧುಗಳು ಏಕಾಂತದಲ್ಲಿರಲು ಬಯಸುತ್ತಾರೆ’ ಎಂದು ಹೇಳಿದ ತೂಫಾನ್ ಗಿರಿ ನನ್ನನ್ನು ಊಟಕ್ಕೆ ಆಹ್ವಾನಿಸಿದರು.

ಅತ್ಯಂತ ಸರಳವಾದ ಊಟದ ಹಜಾರದಲ್ಲಿ, ಅದಕ್ಕಿಂತಲೂ ಸರಳ ಊಟವನ್ನು ಬಡಿಸಿದರು. ಅಷ್ಟರಲ್ಲಾಗಲೇ ರಾತ್ರಿ ಹತ್ತಾಗಿತ್ತು. ಅಖಾಡದ ಮೂರನೇ ಮಹಡಿಗೆ ಹೋಗಿ ತಲುಪುತ್ತಿದ್ದಂತೆ, ತಣ್ಣನೆಯ ಗಾಳಿ, ಮುಖದ ಮೇಲೆ ಹರಿದಾಡತೊಡಗಿತು. ಇನ್ನೇನು ಗಂಗೆಯನ್ನು ನೋಡಲಿದ್ದೇನೆ ಎಂಬ ಉತ್ಕಟ ಭಾವ ಮೂಡುತ್ತಿದ್ದಂತೆ... ಎದುರಿಗೆ ವಿಶಾಲವಾದ ಗಂಗಾನದಿ. ಕತ್ತಲಲ್ಲೂ ಹೊಳೆಯುತ್ತಿದ್ದಂತೆ ಭಾಸವಾಗುತ್ತಾ ಹರಿಯುತ್ತಿದ್ದುದು ಕಂಡಿತು.

ದೃಷ್ಟಿ ಹರಿದಷ್ಟೂ ದೂರ ಮಿನುಗುತ್ತಿದ್ದ ದೀಪಗಳು 80 ಘಾಟ್ಗಳ ಪುರಾವೆಯನ್ನು ಒದಗಿಸುತ್ತಿದ್ದಂತೆಯೇ, ಸಾಗರದಂತೆ ಕಂಡುಬಂದ ಗಂಗೆಯನ್ನು ಕೊನೆಗೂ ನೋಡಲಿಕ್ಕಾಯ್ತಲ್ಲ ಎಂಬ ಭಾವನೆಯೊಂದಿಗೆ ನನಗರಿವಿಲ್ಲದೇ ನನ್ನ ಮೈಯಲ್ಲಿ ಏನೋ ಪುಳಕ.

ಇವಳೇನಾ ಗಂಗೆ..? ಅನಾದಿಕಾಲದಿಂದಲೂ ಭಾರತೀಯರೊಂದಿಗೆ ಅನನ್ಯ ಸಂಬಂಧ ಹೊಂದಿ, ಹಿಂದೂಗಳ ಮನಸ್ಸಿನಲ್ಲಿ ವಿಶೇಷ ಭಾವನೆ ಮೂಡಿಸಿರುವ ಆ ನದಿ ಇದೇನಾ? ಈ ನದಿಯನ್ನು ನೋಡಲಿಕ್ಕೇನಾ ನಾನು ಇಷ್ಟು ವರ್ಷ ಕಾದಿರುವುದು? ಎಂದುಕೊಳ್ಳುತ್ತಾ,

‘ಬನ್ನಿ ಬನ್ನಿ ನದಿಗೆ ಹೋಗೋಣ’ ಎಂದು ತೂಫಾನ್ ಗಿರಿ ಅವರನ್ನು ಕರೆದುಕೊಂಡು, ಅವರನ್ನು ಹಿಂದಿಕ್ಕಿ, ನಾನು ಗಂಗೆಯ ಕಡೆಗೆ ದೌಡಾಯಿಸಿದೆ. ಕಟ್ಟಡದ ಬದಿಯ ಕಿರಿದಾದ ಕಾಲುದಾರಿಯ ಮೂಲಕ ನಡೆದು ಗಂಗಾತಟವನ್ನು ತಲುಪಿದಾಗ ತಟದ ಆ ಭಾಗದಲ್ಲಿ ನಾವಿಬ್ಬರು ಮತ್ತು ಗಂಗೆ ಮಾತ್ರವೇ ಇದ್ದಂತೆ ಭಾಸವಾಯಿತು.

‘ನಿಮಗೆ ನಮ್ಮ ಅಖಾಡ ಅಷ್ಟೊಂದು ಇಷ್ಟವಾಗಲಿಲ್ಲವೇನೋ’ ಎನ್ನುತ್ತಲೇ ನನ್ನನ್ನು ಅವರು ದಿಟ್ಟಿಸಿ ನೋಡಿದಾಗ, ನಾನು ಅವರಿಗೆ ಅಘೋರಿ ಸಾಧುಗಳನ್ನು ನೋಡುವ ನನ್ನ ಬಹುದಿನದ ಆಸೆಯನ್ನು ವ್ಯಕ್ತಪಡಿಸಿದೆ. ಈ ಭೇಟಿಗಿಂತ ಮೊದಲು ಅನೇಕ ಬಾರಿ ಅವರು ಮೊಬೈಲ್ ಕರೆ ಮಾಡಿದಾಗಲೆಲ್ಲ ನನಗೆ ಕಾಶಿಯಲ್ಲಿ ಅಘೋರಿ ಸಾಧುಗಳನ್ನು ತೋರಿಸುವುದಾಗಿ ಹೇಳಿದ್ದರು. ಅಘೋರಿ ಸಾಧುಗಳ ಬಗ್ಗೆ ಸಾಕಷ್ಟು ಓದಿದ್ದ ಮತ್ತು ವಿಡಿಯೋಗಳಲ್ಲಿ ನೋಡಿದ್ದ ನನಗೆ ಒಬ್ಬನಾದರೂ ಅಘೋರಿ ಸಾಧುವನ್ನು ಭೇಟಿ ಮಾಡಬೇಕೆಂಬ ತವಕ ಹೆಚ್ಚಾಗಿತ್ತು.

ಘಾಟ್ಗಳ ಮೆಟ್ಟಿಲುಗಳ ಮೇಲೆ ಸಾಗುತ್ತಿದ್ದಂತೆ ಮಣಿ ಕರ್ಣಿಕಾ ಘಾಟ್ನಲ್ಲಿ ಜನ ಶವ ಸುಡುತ್ತಿದ್ದುದು ಕಂಡುಬಂತು. ಹಾಗೇ ಮುಂದೆ ಸಾಗುತ್ತಿದ್ದಂತೆ, ಅಲ್ಲಲ್ಲಿ ಸಿಗರೇಟ್ ಸೇದುತ್ತಾ, ಘಾಟ್ ಮೇಲೆಯೇ ಮೂತ್ರ ವಿಸರ್ಜನೆ ಮಾಡುತ್ತಾ, ಕುಡಿಯುತ್ತಾ ಕೂತಿದ್ದ ಜನ ಕಾಣಸಿಕ್ಕರು. ಹಾಗೇ ಕೆಲವರು, ಹೋಮಕುಂಡಗಳ ಸುತ್ತ ಕುಳಿತು ಏನೋ ವಿಧಿಗಳನ್ನು ನಡೆಸುತ್ತಿರುವುದು ಕಾಣಿಸಿತು.

ಕೆಲ ಹುಡುಗರು, ನನ್ನೊಂದಿಗಿದ್ದ ನಾಗಾಬಾಬಾರನ್ನು ಪೀಡಿಸುತ್ತಿದ್ದುದನ್ನು ಕಂಡು ಬೇಸರವಾಯಿತಾದರೂ, ಬಾಬಾ ಮಾತ್ರ ಇದೆಲ್ಲ ಸ್ವಾಭಾವಿಕ ಎಂಬಂತೆ ವರ್ತಿಸುತ್ತಿದ್ದರು. ಅವರನ್ನು ಅಖಾಡದಲ್ಲಿ ಬಿಟ್ಟು, ಹೊಟೆಲ್ ತಲುಪುವ ಹೊತ್ತಿಗೆ ನಾನು ಜೀವಮಾನದಲ್ಲಿ ಭೇಟಿಕೊಟ್ಟ ಅತ್ಯಂತ ಹೆಚ್ಚು ಸದ್ದುಗದ್ದಲದ ನಗರವೇನಾದರೂ ಇದ್ದರೆ ಅದು ವಾರಾಣಸಿ ಎಂದು ನಿರ್ಧರಿಸಿಬಿಟ್ಟೆ.

ಮಾರನೇ ದಿನ ಬೆಳಗ್ಗೆ ಬೇಗ ಎದ್ದು ಅಸ್ಥಿವಿಸರ್ಜನೆ, ಪಿಂಡದಾನಕ್ಕಾಗಿ ನದಿಯ ಕಡೆಗೆ ಹೊರಟೆ. ನನ್ನ ತಲೆ ಬೋಳಿಸಿದ ನಂತರ ನದಿಯ ಇನ್ನೊಂದು ತಟಕ್ಕೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ ವಾಪಸ್ ಘಾಟ್ಗೆ ಕರೆತಂದು, ಘಾಟ್ನ ಮುಂಭಾಗದ ನದಿ ನೀರಿನ ಮೇಲೆ ಇದ್ದ ದೋಣಿಯ ಮೇಲೆ ಕೂರಿಸಿ, ವಿಧಿ–ವಿಧಾನಗಳನ್ನು ಮಾಡಿಸಲಾಯಿತು.

ಪೂಜೆ ಮತ್ತು ಕರ್ಮ ವಿಧಿಗಳನ್ನು ಮಾಡಿಸಿದ ಪೂಜಾರಿ ‘ನಾನು ವಾರಾಣಸಿಯ ಬ್ರಾಹ್ಮಣ’ ಎಂದು ಪರಿಚಯಿಸಿಕೊಂಡರು. ಮಾತ್ರವಲ್ಲದೇ ‘ಬೆಂಗಳೂರು ಚೆನ್ನಾಗಿ ಗೊತ್ತು, ಬೆಂಗಳೂರಿಗೆ ಕರೆದು ಪೂಜೆ ಮಾಡಿಸುತ್ತಾರೆ’ ಎಂದು ಹೇಳಿಕೊಂಡರು. ಒಂದು ಶ್ಲೋಕವನ್ನೂ ಸಹ ಸರಿಯಾಗಿ ಉಚ್ಚಾರಣೆ ಮಾಡದಿದ್ದುದು ಮತ್ತು ಅವರ ಪ್ರತಿ ಸಂಸ್ಕೃತ ಉಚ್ಚಾರಣೆಯೂ ತಪ್ಪಿದ್ದುದು ಮಾತ್ರ ವಿಶೇಷವಾಗಿತ್ತು. ಪಿಂಡ ನೀಡಲು ಜೋಡಿಸಿಕೊಂಡಿದ್ದ ಸಾಮಗ್ರಿಗಳಲ್ಲಿಯೂ ಕಸ ಇದ್ದಿದ್ದು ಮಾತ್ರ ವಾರಾಣಸಿಯ ವೈಚಿತ್ರ್ಯಕ್ಕೆ ಸಾಕ್ಷಿಯಾಗಿತ್ತು

ಗಂಗೆಯ ಒಂದು ತಟದಲ್ಲಿ 80 ಘಾಟ್ಗಳ ವೈಭವವಿದ್ದರೆ, ಇನ್ನೊಂದು ತಟ ಬರೀ ಖಾಲಿ ಮತ್ತು ಸ್ವಚ್ಛ ಕೂಡ. ಸ್ನಾನ ಮಾಡುವವರೆಲ್ಲ ಆ ತಟಕ್ಕೆ ಹೋಗುತ್ತಾರೆ. ಅಲ್ಲೂ ಒಂದಿಷ್ಟು ಹೂವು ಇತರ ವಸ್ತುಗಳನ್ನು ನೀರಿಗೆ ಹಾಕಿದರೂ ಅತ್ಯಂತ ಹೆಚ್ಚು ಕಸ, ಕೊಳೆಯನ್ನು ಗಂಗೆಗೆ ಹಾಕುವುದು ಈ ಘಾಟ್ಗಳ ಕಡೆಯೇ.

ಹಿಂದೆ ಅರೆಬೆಂದ ಶವವನ್ನು ನದಿಗೆ ಹಾಕುತ್ತಿದ್ದರಾದರೂ ಈಗ ನಿರ್ಬಂಧವಿರುವ ಕಾರಣ, ಬರೀ ಮೂಳೆ ಮತ್ತು ಬೂದಿಯನ್ನು ಮಾತ್ರ ನದಿಗೆ ಹಾಕುತ್ತಾರೆ. ನದಿ ದಡದಲ್ಲಿ ಬೃಹತ್ ವಿದ್ಯುತ್ ಚಿತಾಗಾರವಿದ್ದರೂ ಕೆಲವರು ಶವವನ್ನು ಕಟ್ಟಿಗೆಯಿಂದ ಸುಡುವುದಕ್ಕೇ ಪ್ರಾಶಸ್ತ್ಯ ನೀಡುತ್ತಾರೆ.

ವಿದ್ಯುತ್ ಚಿತಾಗಾರವಂತೂ ವಿಪರೀತ ಕೊಳಕಾಗಿದ್ದು, ಅದರ ಸುತ್ತಮುತ್ತಲಿನ ಕೊಳಚೆ ಮತ್ತು ದುರ್ನಾತ ಮುಖಕ್ಕೆ ರಾಚುವಂತಿದೆ. ನಗರದ ಕೊಳಚೆ ನೀರನ್ನೆಲ್ಲ ನದಿಗೆ ತರುವ ಕಾಲುವೆಗಳ ಪಕ್ಕದಲ್ಲೇ ನಿಂತು, ಜನ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಂತೆಯೇ ಅದೆಲ್ಲ ಮಿಶ್ರಿತವಾಗಿ ದಶಾಶ್ವಮೇಧ ಘಾಟಿನ ಗಂಗೆಯ ನೀರಿಗೆ ಬಂದು ಸೇರಿಕೊಳ್ಳುತ್ತದೆ.

ಜನ ಹೂವು, ಎಣ್ಣೆ, ಕೂದಲು, ಮೂಳೆ, ಬೂದಿ, ಬಟ್ಟೆ, ಹಣ್ಣು, ಮಡಿಕೆ, ಕುಡಿಕೆ ಎಲ್ಲವನ್ನೂ ನದಿಗೆ ಹಾಕುವುದು ಮತ್ತು ಅದೆಲ್ಲಾ ನದಿಯ ಅಂಚಿಗೆ ಬಂದು ಕೊಳೆತು ನಾರುತ್ತಿರುವುದು ವಾಕರಿಕೆ ಬರಿಸುತ್ತದೆ. ಅದೇ ನೀರನ್ನು ಅದೇ ಜನ, ಕರ್ಮ ಕಾರ್ಯದ ಬಳಿಕ ತಲೆಗೆ ಪ್ರೋಕ್ಷಿಸಿಕೊಳ್ಳುವುದು ಅಚ್ಚರಿಯೇ ಸರಿ.

ನಾನು ನೋಡಿದಂತೆ, ಅಲ್ಲಿ ಯಾವ ಸ್ವಚ್ಛ ಶೌಚಾಲಯಗಳೂ ಇಲ್ಲ. ಹೊಸ ಸಣ್ಣಪುಟ್ಟ ಶೌಚಾಲಯಗಳನ್ನು ಕಟ್ಟಿಸಿದ್ದಾರೆ. ಅವು ಅತಿಗಣ್ಯರಿಂದ ಉದ್ಘಾಟನೆಯಾಗದೇ ಬೀಗ ಜಡಿಸಿಕೊಂಡು ಬಿದ್ದಿವೆ. ಮೆಟ್ಟಿಲು ಇಳಿದು ಬಂದ ಯಾತ್ರಾರ್ಥಿಗಳು ಪುನಃ ಅಷ್ಟೊಂದು ಮೆಟ್ಟಿಲುಗಳನ್ನು ಹತ್ತಿ ಹೋಗಿ ಶೌಚಾಲಯ ಹುಡುಕುವುದು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ನದಿದಡದಲ್ಲಿಯೇ ಶೌಚಕಾರ್ಯ ಮುಗಿಸುತ್ತಾರೆ.

ಇಷ್ಟೆಲ್ಲಾ ಅವ್ಯವಸ್ಥೆ, ಕೊಳೆ, ಕೊಚ್ಚೆ ನೋಡಿದರೂ ಗಂಗಾನದಿ ಬಗ್ಗೆ ಅಸಹ್ಯ ಬರುವುದಿಲ್ಲ. ಇದೆಲ್ಲ ನೋಡಿದ ನಂತರವೂ ಆ ನದಿಯ ಇನ್ನೊಂದು ದಡದಲ್ಲಿ ನಾನು ಸ್ನಾನ ಮಾಡಲೆಂದು ಹೋದಾಗ, ಆ ನೀರಿನಲ್ಲಿ ನಾನು ಹತ್ತಾರು ಬಾರಿ ಮುಳುಗಿ ಎದ್ದಿರಬಹುದು.

ನದಿಯಲ್ಲಿ ಕರ್ಮಕಾರ್ಯಗಳನ್ನು ಮುಗಿಸಿ, ವಾಪಸ್ ಹೊಟೇಲ್ ತಲುಪಿದಾಗ ಮಧ್ಯಾಹ್ನವಾಗಿತ್ತು. ಸಂಜೆ 5 ಗಂಟೆಗೆ ತೂಫಾನ್ ಗಿರಿ ಹೇಳಿದ್ದ ಆಶ್ರಮ ಹುಡುಕುತ್ತಾ ಹೊರಟು ಅರ್ಧಗಂಟೆ ನಂತರ ಅಲ್ಲಿಗೆ ತಲುಪಿದೆ. ನನ್ನನ್ನು ಕಾಣುತ್ತಲೇ ಸ್ವಾಗತಿಸಲು ಬಂದ ತೂಫಾನ್ ಗಿರಿ, ‘ಬನ್ನಿ ಬನ್ನಿ, ಮಹಾರಾಜ್ಗಳನ್ನು ಭೇಟಿಯಾಗಿ. ಇಲ್ಲಿ ಮೂರು ಮೂರು ಮಹರಾಜ್ಗಳಿದ್ದಾರೆ’ ಎನ್ನುತ್ತಾ, ಮರದ ಕೆಳಗಿನ ಕಟ್ಟೆಯ ಮೇಲೆ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಕಡೆ ಕರೆದುಕೊಂಡು ಹೋದರು.

ಅವರ ಮುಂದೆ ನನಗೊಂದು ಕುರ್ಚಿ ಇಡಲಾಯ್ತು. ನನ್ನ ಪ್ರಕಾರ, ನನ್ನ ಬಗ್ಗೆ ನಾನು ಆಗಮಿಸುವುದಕ್ಕೆ ಮೊದಲೇ ಬಹಳಷ್ಟು ಹೇಳಿಯಾಗಿತ್ತು. ‘ಓಹ್.. ಬೆಂಗಳೂರಿನಿಂದ ಬಂದಿದ್ದೀರಾ? ಹೇಗನ್ನಿಸುತ್ತಿದೆ’? ಎಂದು ಇನ್ನಿಬ್ಬರು ನನ್ನೊಂದಿಗೆ ಕುಶಲೋಪರಿ ಆರಂಭಿಸಿದಾಗ, ತೂಫಾನ್ ಗಿರಿ ಹೋಗಿ ಅವರ ಮಧ್ಯೆ ಕುಳಿತುಕೊಂಡು– ‘ಇವರಿಬ್ಬರು ಅಘೋರಿಬಾಬಾಗಳು. ಬಹಳಷ್ಟು ಸಾಧನೆ ಮಾಡಿದ್ದಾರೆ. ದೊಡ್ಡ ಭಕ್ತವೃಂದವೂ ಇದೆ. ಆದರೆ ಈ ರೀತಿ ವಸ್ತ್ರ ಹಾಕಿಕೊಂಡಿದ್ದಾರೆ’ ಎಂದೆಲ್ಲ ಬಡಬಡಾಯಿಸಿದರು.

ಸುಮಾರು ಐವತ್ತರ ಆಸುಪಾಸಿನಲ್ಲಿದ್ದಂತೆ ಕಂಡುಬಂದ ಆ ಇಬ್ಬರು ವ್ಯಕ್ತಿಗಳು ಬಹಳ ಸೌಮ್ಯಭಾವದಿಂದ ನನ್ನೊಂದಿಗೆ ಮಾತನಾಡಿದರು. ‘ನೋಡಿ, ವಾರಾಣಸಿ ಏನೇನೂ ಅಭಿವೃದ್ಧಿ ಆಗುತ್ತಿಲ್ಲ. ಚುನಾವಣೆಗಿಂತ ಮೊದಲು ನಮ್ಮ ಸಹಾಯವನ್ನು ಪಡೆದುಕೊಂಡರು. ಈಗ ನದಿ ದಡದಲ್ಲಿ ಪೂಜೆ ಮಾಡುತ್ತೇವೆಂದರೆ ನಮ್ಮ ಮೇಲೆಯೇ ಲಾಠಿ ಚಾರ್ಜ್ ನಡೆಸುತ್ತಾರೆ.

ಗಂಗಾಮಾತೆಯನ್ನು ಸ್ವಚ್ಛ ಮಾಡ್ತೀವಿ ಅಂದವರು ಅದನ್ನೂ ಸರಿಯಾಗಿ ಮಾಡುತ್ತಾ ಇಲ್ಲ. ನದಿಗೆ ಹೂ ಹಾಕಿದರೂ ನಮ್ಮನ್ನು ಹೊಡೆಯಲು ಬರುತ್ತಾರೆ. ಆದರೆ ಫ್ಯಾಕ್ಟರಿಗಳು ಅಷ್ಟೊಂದು ತ್ಯಾಜ್ಯ ನದಿಗೆ ಬಿಟ್ಟರೂ ಏನೂ ಮಾಡುತ್ತಿಲ್ಲ. ಬರೀ ತೋರಿಕೆಗಷ್ಟೇ ಒಂದಿಷ್ಟು ಕೆಲಸ ನಡೆಯುತ್ತಿದೆ. ಮೋದಿಯವರು ಏನೇನೋ ಮಾಡಿಬಿಡುತ್ತಾರೆ ಅಂದುಕೊಂಡಿದ್ದೆವು. ಮುಂದಿನ ಚುನಾವಣೆಯಲ್ಲಿ ನಾವು ಅವರಿಗೆ ಬೆಂಬಲ ನೀಡೋದಿಲ್ಲ.

ಕಳೆದ ಚುನಾವಣೆ ಸಂದರ್ಭದಲ್ಲಿ ಬಂದು ನಮ್ಮೆಲ್ಲರ ಬೆಂಬಲ ಕೇಳಿದರು. ಆಗ ನಮ್ಮನ್ನು ಚೆನ್ನಾಗಿಯೇ ಮಾತನಾಡಿಸುತ್ತಿದ್ದರು. ಇತ್ತೀಚೆಗೆ ನಾವು ಉಮಾಭಾರತಿಯವರಿಗೆ ಫೋನ್ ಕಾಲ್ ಮಾಡಿದ್ದೆವು’ ಎಂದು ಜೇಬಿನಿಂದ ಒಂದು ಚೀಟಿ ತೆಗೆದು ಅದರಲ್ಲಿದ್ದ ಮೊಬೈಲ್ ನಂಬರ್ ತೋರಿಸಿದರು.

‘ಯಾಕಮ್ಮಾ, ನೀವು ಗಂಗೆಯನ್ನು ಸರಿಯಾಗಿ ಸ್ವಚ್ಛ ಮಾಡ್ತಾ ಇಲ್ಲವಾ ಎಂದು ಕೇಳಿದೆವು. ಅವರು ನಮಗೆ ಬೈದು ಕಾಲ್ ಕಟ್ ಮಾಡಿಬಿಟ್ಟರು. ಬಿಜೆಪಿ – ಕಾಂಗ್ರೆಸ್ ಎರಡೂ ಪಕ್ಷಗಳಿಂದ ದೇಶಕ್ಕೇನೂ ಆಗೋದಿಲ್ಲ. ಹಿಂದೂಗಳಿಗಂತೂ ಏನೂ ಆಗೋದಿಲ್ಲ. ಬಿಜೆಪಿ, ಹಿಂದೂಗಳ ಪರವಾಗಿರೋ ಪಕ್ಷವೇ ಅಲ್ಲ. ಅದು ಅರ್ಧ ನಾಸ್ತಿಕ ಪಕ್ಷ. ಕಾಂಗ್ರೆಸ್, ಅರ್ಧ ಆಸ್ತಿಕ ಪಕ್ಷ. ಇವರ್್ಯಾರಲ್ಲೂ ಪ್ರಾಮಾಣಿಕತೆ ಇಲ್ಲ.

ದೇಶ ಉದ್ಧಾರ ಆಗಬೇಕು ಅಂದರೆ ನಾವು ಸಾಧುಗಳು ಕಟ್ಟಿರೋ ರಾಮರಾಜ್ಯ ಪಕ್ಷ ಅಧಿಕಾರಕ್ಕೆ ಬರಬೇಕು. ನಾವು ಸಾಧುಗಳೆಲ್ಲ ಸೇರಿ ದೇಶವನ್ನು ಹಿಂದೂ ದೇಶವನ್ನಾಗಿ ಮಾಡಲಿಕ್ಕೆ ಪಣ ತೊಟ್ಟಿದ್ದೇವೆ. ನಮಗೆ ಬೇರೇನೂ ಬೇಡ. ಬೇರೆ ಯಾವುದರ ಬಗ್ಗೆ ಆಸೆಯೂ ಇಲ್ಲ. ಬಿಜೆಪಿಗೆ ಬದ್ಧತೆ ಇದ್ದರೆ ಮೊದಲು ಗೋಮಾತೆಯ ರಕ್ಷಣೆ ಮಾಡಲಿ.

ಗಂಗಾಮಾತೆಯ ಬಗ್ಗೆ ಆಮೇಲೆ ತಲೆಕೆಡಿಸಿಕೊಳ್ಳಲಿ. ಏಕೆಂದರೆ, ಗಂಗೆ ಹುಟ್ಟೋದು ಗೋಮುಖದಿಂದ. ಗಂಗಾಮಾತೆಗೂ ಗೋವು ತಾಯಿ ಇದ್ದಹಾಗೆ. ನೋಡಿ, ವಾರಾಣಸಿ ಎಂದು ಹೆಸರು ಬಂದಿರುವುದು ವರುಣಾ ಎಂಬ ನದಿಯಿಂದ.

ನಮ್ಮ ಹಿಂದೆ ಇದೆಯಲ್ಲ... ಅದೇ ವರುಣಾ ನದಿ. ಆ ನದಿಯ ನೀರು ಹೇಗೆ ಕಪ್ಪಾಗಿಬಿಟ್ಟಿದೆ ನೋಡಿ (ನನ್ನ ಕಾಲಿಗೆ, ಕೈಗೆ ಸೊಳ್ಳೆ ಕಚ್ಚುತ್ತಿದ್ದರಿಂದ ಪರಚಿಕೊಳ್ಳುತ್ತಿದ್ದೆ). ಈ ನದಿಯಂತೂ ಸೊಳ್ಳೆಗಳ ಕೊಂಪೆಯಾಗಿಬಿಟ್ಟಿದೆ. ಗಂಗಾನದಿಯನ್ನು ಮಾತ್ರ ಸ್ವಚ್ಛ ಮಾಡಿದ್ರೆ ಸಾಕಾಗೋದಿಲ್ಲ. ಈ ನದಿಯನ್ನೂ ಸ್ವಚ್ಛ ಮಾಡ್ಬೇಕು. ಈಗಿನ ಅಖಿಲೇಶ್ ಯಾದವ್ ಸರ್ಕಾರವಂತೂ ಹಿಂದೂಗಳಿಗೆ ತುಂಬಾ ತೊಂದರೆ ಕೊಡ್ತಿದೆ.

ಸಮಾಜವಾದಿ ಪಕ್ಷದವರು, ದೇವಾಲಯದ ಆಸ್ತಿ, ಭೂಮಿಯನ್ನು ಕಬಳಿಸುವುದರಲ್ಲೇ ನಿರತರಾಗಿದ್ದಾರೆ. ಹಾಗೆ ನೋಡಿದರೆ, ಮಾಯಾವತಿ ಅವರೇ ಹಿಂದೂಗಳಿಗೆ ತೊಂದರೆ ಕೊಡಲಿಲ್ಲ. ಅವರ ಕಾಲದಲ್ಲಿ ಹಿಂದೂಗಳು ಚೆನ್ನಾಗಿಯೇ ಇದ್ದೆವು.‘ ನಿರ್ಲಿಪ್ತ ಮುಖಭಾವದೊಂದಿಗೆ, ಸಮಾಧಾನದಿಂದ ಕಾವಿಸಾಧು ಹೇಳುತ್ತಾ ಹೋದರು. ‘ನಿಮ್ಮ ರಾಜ್ಯದವರೇ ಆದ ಪ್ರಮೋದ್ ಮುತಾಲಿಕ್ ನಮಗೆ ಚೆನ್ನಾಗಿ ಪರಿಚಯ. ಅವರ ಜೊತೆ ಸಂಪರ್ಕದಲ್ಲಿದ್ದೇವೆ’ ಎಂದು ಕೂಡ ಹೇಳಿದರು.

ಕಪ್ಪು ವಸ್ತ್ರ ಧರಿಸಿದ್ದ ಇನ್ನೊಬ್ಬರು ಆಗಾಗ ಮುಗುಳ್ನಗುತ್ತಾ ಹೂಂಗುಡುತ್ತಿದ್ದರು. ಮಧ್ಯದಲ್ಲಿ ಚಕ್ಕಂಬಕ್ಕಳ ಹಾಕಿ, ಗಲ್ಲಕ್ಕೆ ಕೈ ಕೊಟ್ಟುಕೊಂಡು ಏಕಾಗ್ರತೆಯಿಂದ ಆಲಿಸುತ್ತಿದ್ದ ತೂಫಾನ್ ಗಿರಿ, ‘ನಿಮಗೆಲ್ಲ ಅರ್ಥವಾಯ್ತಲ್ಲ’ ಎನ್ನುವಂತೆ ನನ್ನೆಡೆಯೊಮ್ಮೆ ನೋಡಿ, ಮುಗುಳ್ನಕ್ಕು, ‘ನೋಡಿ ಇವರಿಬ್ಬರೂ ಅಘೋರಿಗಳು. ಆದರೂ ಅವರು ಈ ರೀತಿ ಬಟ್ಟೆ ಹಾಕಿಕೊಂಡಿದ್ದಾರೆ.

ಆದರೆ ನೀವು ಬೆತ್ತಲೆ ಅಘೋರಿಗಳನ್ನು ನೋಡಬೇಕೆಂದ್ರೆ ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. ಇಲ್ಲೂ ಆ ನಂಗಾ(ನಗ್ನ)ಬಾಬಾಗಳು ಬರ್ತಾರೆ. ಅವರು ಬಂದಾಗ ತುಂಬಾ ಜನ ಸೇರುತ್ತಾರೆ. ಅವರಿಗೆ ಶಿಷ್ಯಂದಿರು ಹೆಚ್ಚು.

ಅವರು ಏನೇನೋ ಚಮತ್ಕಾರ ಮಾಡುತ್ತಾರೆ. ಅವರಲ್ಲಿ ಕೆಲವರಿಗೆ ವಾಕ್ ಸಿದ್ಧಿ ಇರುವುದರಿಂದಾಗಿ, ಅವರು ಹೇಳೋ ಮಾತು ನಿಜವಾಗುತ್ತೆ ಅನ್ನೋ ನಂಬಿಕೆಯೂ ಇದೆ’ ಎಂದಾಗ, ಕಾವಿಧಾರಿ ಸಾಧು ‘ಹೌದು...

ನಂಗಾ(ನಗ್ನ)ಬಾಬಾಗಳಾಗಿ ಇರುವುದರಿಂದ ಅಘೋರಿಗಳಿಗೆ ಜನರು ಆಕರ್ಷಿತರಾಗುತ್ತಾರೆ. ಹೆಚ್ಚು ಶಿಷ್ಯಂದಿರು ಇರುವುದರಿಂದ ಹೆಚ್ಚು ಹಣವೂ ಇರುತ್ತದೆ. ಆದ್ದರಿಂದ ಹೆಚ್ಚು ಶಿಷ್ಯಂದಿರನ್ನು ಪಡೆಯೋಕೆ ಕೆಲವರು ಏನೇನೋ ಮಾಡುತ್ತಾರೆ. ದೇಹದಂಡನೆಯನ್ನೂ ಮಾಡುತ್ತಾರೆ. ನೀವೇ ನೋಡಿರಬಹುದು, ಕೆಲವರು ಯೋಗಶಕ್ತಿ ಎಂದು ಹೇಳಿಕೊಂಡು ತಮ್ಮ ಮರ್ಮಾಂಗ ಬಳಸಿ ಏನೇನೋ ಕಸರತ್ತು ಮಾಡುತ್ತಿರುತ್ತಾರೆ.

ಕೆಲವರು ತಮ್ಮ ಮರ್ಮಾಂಗವನ್ನು ಕಬ್ಬಿಣದ ಸರಳಿನ ಸುತ್ತ ಸುತ್ತಿ ಜಗ್ಗುವುದು, ಎರಡು ಅಥವಾ ಮೂರು ವಾಹನಗಳನ್ನು ಮರ್ಮಾಂಗಕ್ಕೆ ಕಟ್ಟಿ ಎಳೆಯುವುದು... ಇಂಥದ್ದನ್ನೆಲ್ಲ ಮಾಡಿ ಜನರಿಗೆ ಮೋಡಿ ಮಾಡುತ್ತಿರುತ್ತಾರೆ. ಆದರೆ ಹೀಗೆಲ್ಲ ಮಾಡುವುದರ ಪರಿಣಾಮವನ್ನು ಅವರು ಆಮೇಲೆ ಅನುಭವಿಸುತ್ತಾರೆ.

ಹೀಗೆ ಮರ್ಮಾಂಗದಲ್ಲಿ ಏನೇನೋ ಕಸರತ್ತು ಮಾಡುತ್ತಿದ್ದ ಒಬ್ಬ ಹಿರಿಯ ಸಾಧು ನಂತರದ ದಿನಗಳಲ್ಲಿ ಎಷ್ಟೊಂದು ಕಷ್ಟಪಟ್ಟರು ಎಂದರೆ, ಅವರು ಒಂದು ಸಲ ಮೂತ್ರ ವಿಸರ್ಜನೆ ಮಾಡಬೇಕೆಂದರೆ ಅರ್ಧ–ಮುಕ್ಕಾಲು ಗಂಟೆ ಬೇಕಾಗುತ್ತಿತ್ತು. ಇನ್ನು ಕೆಲವರು ಏನೇನೋ ಕಾಯಿಲೆ ಬಂದು ಸತ್ತುಹೋಗಿದ್ದೂ ಇದೆ. ನಮ್ಮ ಪ್ರಕಾರ ಅಘೋರಿಗಳ ಉದ್ದೇಶ, ಧರ್ಮಜಾಗೃತಿ, ಧರ್ಮ ರಕ್ಷಣೆ ಮತ್ತು ಭಗವತ್ ಸ್ಮರಣೆ.

ಜನರ ಮನರಂಜನೆಗಾಗಿ ನಾವು ಕಪಟಿಗಳಾಗಬಾರದು’ ಎನ್ನುತ್ತಾ ಕಪ್ಪುವಸ್ತ್ರ ಧರಿಸಿದ್ದ ಸಾಧುವನ್ನು ತೋರಿಸಿ, ‘ನೋಡಿ, ಇವರು ಕೆಮಿಸ್ಟ್ರಿಯಲ್ಲಿ ಪಿಎಚ್.ಡಿ ಮಾಡಿದ್ದಾರೆ. ಒಂದು ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ರು. ಈಗ ನೋಡಿ, ಅಘೋರಿಗಳಾಗಿದ್ದಾರೆ, ಸರಳ ಜೀವನ ನಡೆಸುತ್ತಿದ್ದಾರೆ’. ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ತೂಫಾನ್ ಗಿರಿ, ‘ನೋಡಿದ್ರಾ’ ಅನ್ನೋ ರೀತಿಯಲ್ಲಿ ತಲೆದೂಗುತ್ತಿದ್ದರು.

ಅವರಿಂದ ಬೀಳ್ಕೊಂಡು ನಾನು ಮತ್ತು ತೂಫಾನ್ ಗಿರಿ ಸೈಕಲ್ ರಿಕ್ಷಾದಲ್ಲಿ ಕಾಶಿ ವಿಶ್ವನಾಥನ ದೇವಾಲಯದ ಕಡೆ ಹೊರಟೆವು. ನಾನು ಪಾದ ಕೊಳೆಯಾಗದಂತೆ ಹವಾಯ್ ಚಪ್ಪಲಿ ಧರಿಸಿದ್ದೆ. ಬರಿಗಾಲಲ್ಲಿ ನಡೆಯುತ್ತಿದ್ದ ತೂಫಾನ್ ಗಿರಿ ದೇವಸ್ಥಾನ ಸಮೀಪಿಸುತ್ತಿದ್ದಂತೆ,

‘ಒಂದೇ ನಿಮಿಷ ಕಾಯುತ್ತಿರಿ’ ಎಂದು ಅಖಾಡದ ಕಡೆ ಓಡಿ ಹೋಗಿ, ತ್ರಿಶೂಲ ಹಿಡಿದುಕೊಂಡು ಬಂದರು. ನಾನು ನೋಡಿ ನಕ್ಕಾಗ, ‘ಇರ್ಲಿ ಬಿಡಿ, ತ್ರಿಶೂಲ ಹಿಡಿದುಕೊಂಡರೆ ಅದರ ಖದರೇ ಬೇರೆ ಇರುತ್ತೆ. ಹಾಗೆಯೇ ಬೀದಿ ನಾಯಿಗಳನ್ನೂ ಓಡಿಸಬಹುದು’ ಎಂದು ನನ್ನನ್ನು ಕರೆದುಕೊಂಡು ದೇವಸ್ಥಾನದ ದ್ವಾರ ಪ್ರವೇಶಿಸಿದರು.

ಮಹಾದ್ವಾರದಿಂದ ದೇವಸ್ಥಾನಕ್ಕೆ ಹೋಗಬೇಕೆಂದರೆ ಕೊಂಚ ದೂರವೇ ಇದೆ. ಇಕ್ಕೆಲಗಳಲ್ಲೂ ಸಣ್ಣಪುಟ್ಟ ಅಂಗಡಿಗಳು, ಜೋರಾಗಿ ಮಾತನಾಡುವ ಜನ ಮತ್ತು ಜನಜಂಗುಳಿ. ಇದು ಹಿಂದೂಗಳ ಅತ್ಯಂತ ವಿಶೇಷ ದೇವಸ್ಥಾನಕ್ಕೆ ದಾರಿಯಾಗಿದ್ದರೂ ಕೂಡ ಕೊಳಕು ಮತ್ತು ಕಸದಿಂದ ಮುಕ್ತವಾಗಿಲ್ಲ. ಪ್ರಸಿದ್ಧ ಬನಾರಸ್ ಪಾನ್–ಬೀಡಾ ಇಲ್ಲಿ ಅತ್ಯಂತ ದೊಡ್ಡ ಆರೋಪಿ.

ಬೀಡಾ ಜಗಿಯುವವರು ಬಾಯಿಯ ಒಳಗೆ ಬೇರೆ ಬೇರೆ ರೀತಿಯ ತಾಂಬೂಲ ತುಂಬಿಸಿಕೊಂಡು ಅಗಿಯುತ್ತಾ, ಲೀಟರ್ಗಟ್ಟಲೆ ಎಂಜಲನ್ನು ರಸ್ತೆಯ ಎರಡೂ ಬದಿಗಳಲ್ಲೂ ಉಗುಳುತ್ತಿರುತ್ತಾರೆ. ಎಲ್ಲ ಕಡೆ ಉಗುಳು, ಕಫದ ಕಲೆಗಳು.

ಅದರೊಂದಿಗೆ ಕಿರುದಾರಿಯ ಮಧ್ಯದಲ್ಲೇ ನಿಲ್ಲಿಸಿದಂತಹ ಬೈಕು, ಸ್ಕೂಟರ್ಗಳು. ಆ ದಾರಿಯ ಅನೇಕ ಅಂಗಡಿಗಳು ಮುಸಲ್ಮಾನರ ಮಾಲೀಕತ್ವಕ್ಕೆ ಸೇರಿವೆ. ಜನ ಭೇದಭಾವವಿಲ್ಲದೇ ಎಲ್ಲ ಅಂಗಡಿಗಳಲ್ಲೂ ವ್ಯಾಪಾರ ಮಾಡುತ್ತಿರುವುದು ಕಂಡುಬರುತ್ತದೆ. ಬಹಳ ಒತ್ತೊತ್ತಾಗಿ ಕಟ್ಟಿರುವಂತಹ ಕಟ್ಟಡಗಳ ಮಧ್ಯೆ ಸಾಗುವ ದಾರಿ ದೇವಸ್ಥಾನವನ್ನು ಸೇರುತ್ತದೆ.

ದೇವಸ್ಥಾನವನ್ನು ಪೂರ್ಣವಾಗಿ ನೋಡಲು ಸಾಧ್ಯವಾಗುವುದಿಲ್ಲ. ಅಂಗಡಿಗಳ ನಡುವೆ ಇಕ್ಕಟ್ಟಾದ ಕಿರುದಾರಿಯಲ್ಲಿ ದೇವಸ್ಥಾನಕ್ಕೆ ಪ್ರವೇಶ. ಆರತಿ ಸಮಯದಲ್ಲಿ ಜನರ ನೂಕುನುಗ್ಗಲು ಇರುತ್ತದೆ. ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಗುಂಪುಗುಂಪಾಗಿ ಒಳಗೆ ಕಳುಹಿಸಲಾಗುತ್ತದೆ.

ಇದೊಂದು ಸರಳ ದೇವಸ್ಥಾನ. ಘಂಟಾನಾದ, ಆರತಿ, ಜೈಕಾರ, ಮಂತ್ರಘೋಷಗಳ ಮಧ್ಯೆ ಜನ ನೂಕುತ್ತಾ ನಮ್ಮನ್ನು ದೇವಾಲಯದ ಒಳಗೆ ತಂದುಬಿಡುತ್ತಾರೆ. ಉತ್ತರ ಭಾರತದಲ್ಲಿ ಶಿವಲಿಂಗವನ್ನು ಸ್ಪರ್ಶಿಸಿ ಪೂಜಿಸಬಹುದು.

ಇಲ್ಲಿನ ಶಿವಲಿಂಗಗಳೆಲ್ಲ ಭೂಮಿ ಮಟ್ಟಕ್ಕಿಂತ ಕೆಳಗಿರುವವು. ಆ ನೂಕುನುಗ್ಗಲಲ್ಲಿ ನಾನು ಎರಡು ಮೂರು ಶಿವಲಿಂಗಗಳನ್ನು ಮುಟ್ಟಿದರೂ ಹೂ ಹಾಕಿದರೂ ಯಾವುದು ಕಾಶಿ ವಿಶ್ವೇಶ್ವರ ಎಂದು ಗೊತ್ತಾಗಲಿಲ್ಲ. ಬಹಳ ಗದ್ದಲವಿತ್ತು. ಪ್ರಸಾದ ಕೊಡುವ ಕಡೆ ಹೋಗುತ್ತಿದ್ದಾಗ, ಒಬ್ಬ ಪೂಜಾರಿ ನನ್ನನ್ನು ಎಳೆದುಕೊಂಡು ಹೋಗಿ ಒಂದು ಶಿವಲಿಂಗದ ಮುಂದೆ ನಿಲ್ಲಿಸಿ, ‘ಪೂಜೆ ಮಾಡು’ ಎಂದು ಕೈಗೊಂದಿಷ್ಟು ಹೂ ಕೊಟ್ಟ.

ನಾನು ಹೂ ಹಾಕಿ, ಬಗ್ಗಿ ನಮಸ್ಕರಿಸುತ್ತಿದ್ದಾಗ, ‘ಚೆನ್ನಾಗಿ ಮುಟ್ಟು, ಚೆನ್ನಾಗಿ ಪೂಜೆ ಮಾಡು’ ಎಂದು ಹೇಳತೊಡಗಿದ. ನಾನು ಏಳುತ್ತಿದ್ದಂತೆ ನನ್ನ ಕುತ್ತಿಗೆಗೆ ಒಂದು ಹಾರ ಹಾಕಿ, ‘ದುಡ್ಡು ಕೊಡು’ ಎಂದು ಬೇಡಿಕೆ ಇಟ್ಟುಬಿಟ್ಟ. ನಾನು ಜೇಬಿಗೆ ಕೈ ಹಾಕಿದಾಗ ಸಿಕ್ಕ ಸಾವಿರ ರೂಪಾಯಿ ನೋಟು ಕೊಟ್ಟೆ.

ತಕ್ಷಣ ತುಟಿಯರಳಿಸಿ ನಗೆ ಬೀರಿದ ಪೂಜಾರಿ, ‘ಪುನಃ ಪೂಜೆ ಮಾಡ್ತೀಯಾ’ ಎಂದು ಕೇಳಿದ. ನಾನು ಬೇಡ ಎಂದಾಗ, ಒಂದಷ್ಟು ವಿಭೂತಿ ತೆಗೆದು ನನ್ನ ಹಣೆಗೆ ಸವರಿ, ಒಂದಷ್ಟು ಗಂಧವನ್ನು ತೆಗೆದು ಹಣೆಗೆ ಬಳಿದ.

ಅಲ್ಲಿನ್ನೇನು ಮಾಡೋದು ಅಂತ ನಾನು, ಇನ್ನೊಂದು ಕಡೆ ಆರತಿ ಮಾಡುತ್ತಿದ್ದವರ ಬಳಿ ಹೋದಾಗ, ಪೂಜಾರಿಗಳು ಆರತಿ ಮಾಡಿ, ಕುಂಕುಮ ಕೊಡುತ್ತಿದ್ದುದು ಕಂಡುಬಂತು. ಇದರ ಮಧ್ಯೆ ತೂಫಾನ್ ಗಿರಿ ಕೂಡ ಒಂದಷ್ಟು ವಿಭೂತಿ, ಗಂಧವನ್ನು ಹಚ್ಚಿದರು. ಪೂಜಾರಿಗಳಿಂದ ಆರತಿ ಪಡೆದುಕೊಂಡ ಬಳಿಕ, ಅವರು ದಕ್ಷಿಣೆಗಾಗಿ ಕೈಚಾಚಿದಾಗ 500 ರೂಪಾಯಿ ದಕ್ಷಿಣೆ ಕೊಟ್ಟೆ. ಕಾರಣ ಇಷ್ಟೇ, ನನ್ನ ಬಳಿ ಚೇಂಜ್ ಇರಲಿಲ್ಲ. ದಕ್ಷಿಣೆ ಪಡೆದುಕೊಂಡ ತಕ್ಷಣ ಪೂಜಾರಿ, ನನ್ನನ್ನು ಹತ್ತಿರ ಎಳೆದುಕೊಂಡು ಹಣೆಗೊಂದಿಷ್ಟು ಕುಂಕುಮ ಉಜ್ಜಿಬಿಟ್ಟರು.

ಏನಾಗುತ್ತಿದೆ ಎಂದು ನೋಡುತ್ತಿರುವಾಗಲೇ ಇನ್ನಿಬ್ಬರು ಪೂಜಾರಿಗಳು ಕುಂಕುಮ ಹಿಡಿದುಕೊಂಡು ನನ್ನ ಪಕ್ಕ ನಿಂತಿದ್ದರು. ‘ನಾನು ಈಗಾಗಲೇ 500 ರೂ ದಕ್ಷಿಣೆ ಕೊಟ್ಟಿದ್ದೇನೆ’ ಎಂದಾಗ ಆ ಇಬ್ಬರೂ ನಾನು ದಕ್ಷಿಣೆ ಕೊಟ್ಟ ಪೂಜಾರಿಯ ಜೊತೆ ಜಗಳಕ್ಕೆ ನಿಂತರು. ಇನ್ನೇನು ಹೊಡೆದಾಡಿಕೊಳ್ಳುತ್ತಾರೆ ಅಂದುಕೊಳ್ಳುತ್ತಿದ್ದ ಹಾಗೆ, ‘ನಮಗೂ ಕೊಡಿ’ ಎಂದು ಪೀಡಿಸಲಿಕ್ಕೆ ಶುರು ಮಾಡಿದರು.

ನಾನು ‘ಚೇಂಜ್ ಇಲ್ಲ’ ಎಂದೆ. ದಕ್ಷಿಣೆ ಪಡೆದುಕೊಂಡ ಪೂಜಾರಿ, ‘ನೀವು ಹೋಗಿ, ನಾನಿವರಿಗೂ ಸ್ವಲ್ಪ ಕೊಡ್ತೀನಿ’ ಎಂದ. ‘ಬಚಾವಾದೆ’ ಅಂತ ನಾನು ತೂಫಾನ್ ಗಿರಿ ಹುಡುಕಿಕೊಂಡು ಹೋದೆ. ನೋಡಿದರೆ, ತೂಫಾನ್ ಗಿರಿ ಕೈಯಲ್ಲಿ ಒಂದಿಷ್ಟು ಕುಂಕುಮ ಹಿಡಿದು ಒಂದು ಗುಡಿಯ ಎದುರು ನಿಂತಿದ್ದರು. ವಿಶ್ವೇಶ್ವರ ದೇವಾಲಯದ ಆವರಣದಲ್ಲಿ ಮತ್ತೊಂದಿಷ್ಟು ಗುಡಿಗಳಿವೆ. ಎಲ್ಲಾ ಪುರಾತನ ಗುಡಿಗಳೇ.

‘ಅಯ್ಯೋ... ನಿಮಗೆ ಏನು ಮಾಡಿಬಿಟ್ಟಿದ್ದಾರೆ’ ಎಂದು ತೂಫಾನ್ ಗಿರಿ, ತಮ್ಮ ಕಾವಿ ಬಟ್ಟೆಯಂಚಿನಿಂದಲೇ ನನ್ನ ಹಣೆಯಲ್ಲಿನ ಕುಂಕುಮವನ್ನು ಒರೆಸಲು ಶುರುಮಾಡಿದರು. ‘ಬೇಡ ಬಿಡಿ, ಹೋಗೋಣ’ ಎಂದಾಗ, ‘ನಾವು ಗಂಗಾಮಾತೆಯ ಮಕ್ಕಳು. ಬೋಲೇನಾಥ್ ಸನ್ನಿಧಾನದಲ್ಲಿ ನಾನು ಪ್ರಾರ್ಥನೆ ಮಾಡಿ ನಿಮಗೊಂದಿಷ್ಟು ಕುಂಕುಮ ಇಡಲೇಬೇಕು’ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿ ಇನ್ನೊಂದಿಷ್ಟು ಕುಂಕುಮ ಬಳಿದರು.

ದೇವಸ್ಥಾನದಿಂದ ಹೊರಗೆ ಬರುತ್ತಾ ‘ನಿಮಗೆ ಏನನ್ನಿಸಿತು?’ ಎಂದು ತೂಫಾನ್ ಗಿರಿ ಕೇಳಿದರು. ‘ನಿಜವಾಗಿಯೂ ನನಗೇನೂ ಅನ್ನಿಸಲಿಲ್ಲ’ ಎಂದಾಗ ಅವರಿಗೆ ನಿರಾಸೆಯಾಗಿದ್ದಂತೂ ನಿಜ.

‘ಗಂಗಾರತಿ ನೋಡೋಣ’ ಎಂದಾಗ, ಗಂಗಾರತಿ ಬಗ್ಗೆ ಸಾಕಷ್ಟು ಕೇಳಿದ್ದ ನನಗೆ, ಆ ಅವಕಾಶ ತಪ್ಪಿಸಿಕೊಳ್ಳಬಾರದು ಎನಿಸಿತು. ‘ಮೋಟರ್ ಬೋಟ್ ಅನ್ನು ಬಾಡಿಗೆಗೆ ಪಡೆಯೋಣ. ಅದರಲ್ಲೇ ಕುಳಿತು ಗಂಗಾರತಿ ನೋಡಿ, ನಂತರ ನದಿಯಲ್ಲೇ ಎಲ್ಲಾ 80 ಘಾಟ್ಗಳನ್ನು ನೋಡಿಕೊಂಡು ಬರೋಣ’ ಎಂದು ಅವರು ಹೇಳಿದಾಗ ನನಗೂ ಅದೊಂದು ಒಳ್ಳೇ ಡೀಲ್ ಎನಿಸಿತ್ತು.

ನಡೆದು ನಡೆದು ಬಾಯಾರಿದ್ದ ನಾನು, ರಸ್ತೆ ಬದಿಯ ಮೆಡಿಕಲ್ ಶಾಪ್ಗೆ ಹೋಗಿ, ಒಂದು ಸಣ್ಣ ಬಾಟಲ್ ನೀರನ್ನು ಖರೀದಿಸಿ, ಕುಡಿದ ನಂತರ ಖಾಲಿಯಾದ ಬಾಟಲಿಯನ್ನು ಎಲ್ಲಿ ಹಾಕುವುದು ಎಂದು ಹುಡುಕುತ್ತಿದ್ದಾಗ, ಅಂಗಡಿಯಾತ ‘ಏನಾಯ್ತು?’ ಎಂದು ಕೇಳಿದ.

‘ಈ ಖಾಲಿ ಬಾಟಲ್ ಎಲ್ಲಿ ಹಾಕಲಿ’ ಎಂದೆ. ‘ಅಲ್ಲೇ ರಸ್ತೆಯಲ್ಲೇ ಎಸೀರಿ’ ಎಂದ. ‘ಅಯ್ಯೋ... ರಸ್ತೆಯಲ್ಲಿ ಎಸೆಯೋದಾ? ವಾರಾಣಸಿಯಲ್ಲಿ ಹೀಗೆ ಮಾಡಿದ್ರೆ ಮೋದಿಯವರಿಗೆ ಬೇಜಾರಾಗಲ್ವಾ’ ಎಂದು ಕೇಳಿದೆ. ಆತ ಗೊಳ್ಳನೆ ನಕ್ಕ. ‘ನೋಡಿ, ಎಲ್ಲರೂ ರಸ್ತೆಗೇ ಎಸೆಯೋದು’ ಅಂತ ಹೇಳಿದಾಗ ನಾನು ಆತನ ರಸ್ತೆಗೂ ಅಂಗಡಿಗೂ ಮಧ್ಯೆ ಇದ್ದ ಕೊಳಚೆ ನೀರು ಮತ್ತು ಕಸ ತುಂಬಿದ ಚರಂಡಿಯನ್ನೊಮ್ಮೆ ನೋಡಿ, ಬಾಟಲಿಯನ್ನು ಒಂದು ಮೂಲೆಯಲ್ಲಿಟ್ಟು ಹೊರಟೆ.

ಚಿಂತಾಕ್ರಾಂತನಂತೆ ಕಂಡುಬಂದ ನನ್ನನ್ನು ನೋಡಿ ತೂಫಾನ್ ಗಿರಿ, ‘ಈ ಕಾಶಿಯೇ ಹೀಗೆ. ಎಲ್ಲಾ ಕೊಳಕು, ಅವ್ಯವಸ್ಥೆ. ತುಂಬಾ ರಾಜಕಾರಣ. ನೋಡಿ, ನಾನೇ ಒಂದು ಆಶ್ರಮ ಮಾಡಿಕೊಂಡಿದ್ದೆ. ಎಲ್ಲ ಚೆನ್ನಾಗಿತ್ತು. ನನ್ನ ವಿರೋಧಿಗಳು ಗೂಂಡಾಗಳನ್ನು ಕರೆದುಕೊಂಡು ಬಂದು ನನ್ನನ್ನು ಓಡಿಸಿಬಿಟ್ಟರು.

ಈಗ ಅನಾಥನಂತೆ ಅಖಾಡದಲ್ಲಿದ್ದೇನೆ’ ಎಂದು ಹೇಳಿ, ‘ನನ್ನ ಬಳಿ ಈಗ ಶಿಷ್ಯರೂ ಇಲ್ಲ, ಹಣವೂ ಇಲ್ಲ. ನನ್ನ ಕುಟುಂಬದವರನ್ನೂ ತ್ಯಜಿಸಿಬಿಟ್ಟಿದ್ದೇನೆ. ನನಗಿರುವುದು ಬೋಲೇನಾಥ್ ಮಾತ್ರ. ಎಲ್ಲ ಅವನಿಚ್ಛೆ’ ಎನ್ನುತ್ತಾ ಘಾಟ್ ಕಡೆಗೆ ನನ್ನನ್ನು ಕರೆದುಕೊಂಡು ನಡೆದರು.

ಘಾಟ್ ತಲುಪುತ್ತಿದ್ದಂತೆ, ಒಂದು ನಿಮಿಷ ನಿಲ್ಲಿ ಎಂದು ಎಲ್ಲೋ ಓಡಿಹೋದ ತೂಫಾನ್ ಗಿರಿ, ಐದು ನಿಮಿಷದ ನಂತರ ಬಂದು, ‘ನೋಡಿ ಇಲ್ಲೊಬ್ರು ನಂಗಾಬಾಬಾ ಇದ್ದಾರೆ. ನೋಡ್ತೀರಾ?’ ಎಂದರು. ನನಗೂ ಕುತೂಹಲ. ಆಯ್ತು ಎಂದು ನಡೆದಾಗ, ಒಂದು ಪುರಾತನ ಕಟ್ಟಡದ ಬದಿಯ ಮೆಟ್ಟಿಲಿನ ಮೇಲೆ ಜಟಾಧಾರಿಯಾಗಿ, ಮೈಗೆಲ್ಲ ಬೂದಿ ಬಳಿದುಕೊಂಡು, ಹೊಗೆ ಸೇದುತ್ತಾ ಕುಳಿತಿದ್ದ ಒಬ್ಬ ವೃದ್ಧ ಸಾಧು ಕಂಡುಬಂದರು.

ಅವರ ಸುತ್ತಮುತ್ತ ಐದಾರು ಮಂದಿ ಇದ್ದರು. ಅವರ ಪೈಕಿ ಮೂವರು ತರುಣಿಯರಿದ್ದು, ಅವರು ನೋಡಲಿಕ್ಕೆ ಜಪಾನೀಯರಿದ್ದಂತಿತ್ತು. ಅವರಲ್ಲಿ ಒಬ್ಬಾಕೆ ಪಿಟೀಲಿನ ರೀತಿಯ ಸಣ್ಣ ವಾದ್ಯ ನುಡಿಸುತ್ತಿದ್ದರೆ, ಇನ್ನೊಬ್ಬಾಕೆ ‘ಜೈರಾಂ ಜೈರಾಂ’ ಎಂದು ಕೈ ಎತ್ತಿ ಹಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಜನರ ಗುಂಪೊಂದು ನಿಂತುಕೊಂಡು ಇಲ್ಲೇನೋ ಸರ್ಕಸ್ ನಡೆಯುತ್ತಿದೆ ಎಂಬಂತೆ ನೋಡುತ್ತಿದ್ದರು.

ಮೆಟ್ಟಿಲಿನ ಬದಿಯಲ್ಲಿ ನನ್ನ ಚಪ್ಪಲಿ ಬಿಟ್ಟು ಸಾಧುವಿನ ಪಕ್ಕ ನಿಂತಿದ್ದ ತೂಫಾನ್ ಗಿರಿ ಪಕ್ಕದಲ್ಲಿ ಹೋಗಿ ನಿಂತುಕೊಂಡೆ. ‘ನೋಡಿ ಮಹಾರಾಜ್, ಇವರು ಬೆಂಗಳೂರಿನಿಂದ ಬಂದಿದ್ದಾರೆ. ನಂಗಾ ಬಾಬಾ ದರ್ಶನ ಮಾಡಬೇಕೂಂತಿದ್ರು. ನಿಮ್ಮನ್ನು ನೋಡಿ ಇವರಿಗೆ ಸಂತೋಷವಾಗಿದೆ. ನೀವು ದರ್ಶನ ಕೊಡಬೇಕು’ ಎಂದು ಹೇಳಿದಾಗ, ಆ ಸಾಧು ‘ಹೌದಾ’ ಎಂದು ಮುಗುಳ್ನಕ್ಕರು.

ನಾವು ಸ್ವಲ್ಪ ಹೊತ್ತು ಅಲ್ಲಿಯೇ ನಿಂತಿದ್ದೆವು. ಲಂಗೋಟಿ ಮಾತ್ರ ಕಟ್ಟಿಕೊಂಡು ಉಳಿದಂತೆ ವಿವಸ್ತ್ರವಾಗಿದ್ದ ಅವರು ಎದ್ದು ನಿಂತರು. ತೂಫಾನ್ ಗಿರಿ ‘ದರ್ಶನ ಕೊಡಿ’ ಎಂದು ಮತ್ತೆ ಹೇಳಿದರು. ಅಘೋರಿಬಾಬಾ ಸ್ವಲ್ಪ ಗಲಿಬಿಲಿಯಾದಂತೆ ಕಂಡುಬಂದರು.

ತೂಫಾನ್ ಗಿರಿ, ‘ಇವರಿಗೆ ನಿಮ್ಮ ಸಂಪೂರ್ಣ ದರ್ಶನವಾಗಬೇಕು’ ಎಂದು ಹೇಳಿದಾಗ ನನಗಂತೂ ಅರ್ಥವಾಗಿಬಿಟ್ಟಿತು. ತೂಫಾನ್ ಗಿರಿ ಪ್ರಕಾರ, ಆ ಸಾಧು ಸಂಪೂರ್ಣ ಬೆತ್ತಲಾಗಿ ಪೂರ್ಣ ದರ್ಶನ ಕೊಟ್ಟು ಅಘೋರಿ ನೋಡುವ ನನ್ನ ಆಸೆಯನ್ನು ಪೂರ್ಣಗೊಳಿಸಬೇಕಿತ್ತು.

ಅಘೋರಿ ಬಾಬಾ ‘ಹೋ ಜಾಯೇಗ… ಹೋ ಜಾಯೇಗ’ (ಆಗುತ್ತದೆ ಆಗುತ್ತದೆ) ಎಂದರು. ನಾನು ತೂಫಾನ್ ಗಿರಿ ಕಡೆ ದುರುಗುಟ್ಟುತ್ತಾ, ‘ಬೇಡ ನನಗೇನೂ ನೋಡಬೇಕಾಗಿಲ್ಲ, ಬನ್ನಿ ಹೋಗೋಣ’ ಎಂದೆ. ಅವರು ಕೈ ಹಿಡಿದುಕೊಂಡು ನಿಲ್ಲಿಸಿ, ‘ಸ್ವಲ್ಪ ಹೊತ್ತಲ್ಲೇ ದರ್ಶನ ಕೊಡ್ತಾರೆ’ ಎಂದರು.

ಆಗ ಅಘೋರಿ ಬಾಬಾ ‘ಶೌಚಾಲಯದ ಕಡೆ ಹೋಗಿ ಬರ್ತೀನಿ’ ಎಂದು ಹೊರಟರು. ಹೋಗುವಾಗ ಸಿಕ್ಕ ನನ್ನ ಚಪ್ಪಲಿಯನ್ನೂ ಹಾಕಿಕೊಂಡು ಯಾವುದೋ ಸಂಧಿಯಲ್ಲಿ ಹೋಗಿಬಿಟ್ಟರು.

‘ನಿಂತ್ಕೊಳ್ಳಿ’ ಎಂದು ತೂಫಾನ್ ಗಿರಿ ಹೇಳುತ್ತಿದ್ದರೂ ನಾನು ಅವರ ಕೈ ಹಿಡಿದು ಎಳೆದುಕೊಂಡು ಹೊರಟುಬಿಟ್ಟೆ. ‘ಏನೂ ನೋಡಬೇಕಾಗಿಲ್ಲ. ಇನ್ನು ಹೊರಡೋಣ. ನನಗೆ ಮುಜುಗರ ಮಾಡಬೇಡಿ’ ಎನ್ನುತ್ತಾ, ಸ್ವಲ್ಪ ದೂರ ಹೋಗಿ ಗಂಗಾರತಿಗಾಗಿ ಸಿದ್ಧವಾಗುತ್ತಿದ್ದ ಸ್ಥಳ ನೋಡತೊಡಗಿದೆ.

‘ಆಯ್ತು, ಮೋಟಾರ್ ಬೋಟ್ ಕಡೆಗೆ ಹೋಗೋಣ’ ಎಂದು ತೂಫಾನ್ ಗಿರಿ ನನ್ನನ್ನು ಕರೆದುಕೊಂಡು ಹೊರಟರು. ಆ ಮಬ್ಬು ಬೆಳಕಿನಲ್ಲಿ ಹೋಗುತ್ತಿದ್ದಾಗ ನಮ್ಮ ಹಿಂದೆ ಯಾರೋ ಕೂಗುತ್ತಿದ್ದ ಹಾಗಾಯ್ತು. ತಿರುಗಿ ನೋಡಿದಾಗ, ವ್ಯಕ್ತಿಯೊಬ್ಬ ನಮ್ಮತ್ತ ಓಡುತ್ತಾ ಬರುತ್ತಿದ್ದುದು ಕಾಣಿಸಿತು. ಸ್ವಲ್ಪ ಭಯವೂ ಆಯಿತು. ನಾವಿಬ್ಬರೂ ಅಲ್ಲಿಯೇ ನಿಂತುಕೊಂಡೆವು.

ಆ ವ್ಯಕ್ತಿ ಹತ್ತಿರ ಬರುತ್ತಿದ್ದಾಗ, ಅದು ಅಘೋರಿ ಬಾಬಾ ಎಂದು ಗೊತ್ತಾಯ್ತು. ‘ನಿಮ್ಮ ಚಪ್ಪಲಿ ಹಾಕಿಕೊಂಡು ಹೋಗಿದ್ದೆ. ವಾಪಸ್ ಕೊಡಲಿಕ್ಕೆ ಎಲ್ಲೆಡೆ ಹುಡುಕಾಡಿದೆ. ಇಲ್ಲಿ ಸಿಕ್ಕಿರಿ, ತೆಗೆದುಕೊಳ್ಳಿ’ ಎಂದು ಚಪ್ಪಲಿ ಬಿಚ್ಚಿ ನನ್ನ ಮುಂದಿಟ್ಟರು.

‘ಪರವಾಗಿಲ್ಲ. ನನಗೆ ಬೇಡವಾಗಿತ್ತು. ಬೇಕಿದ್ದರೆ ನೀವೇ ಇಟ್ಟುಕೊಳ್ಳಿ’ ಎಂದೆ. ಅದಕ್ಕೆ ಅವರು ‘ನನಗೇನೂ ಬೇಡ. ಶೌಚಾಲಯಕ್ಕೆ ಹಾಕಿಕೊಂಡು ಹೋಗಿದ್ದೆ ಅಷ್ಟೇ, ತೆಗೆದುಕೊಳ್ಳಿ’ ಎಂದರು. ‘ನೀವು ಅಘೋರಿಬಾಬಾ. ನನ್ನ ಚಪ್ಪಲಿ ಹಾಕಿಕೊಂಡಿದ್ದಿರಿ. ಅದರಲ್ಲಿಯೇ ನಿಮ್ಮ ಆಶೀರ್ವಾದ ಇದೆ’ ಎನ್ನುತ್ತಾ ಚಪ್ಪಲಿ ಹಾಕಿಕೊಂಡೆ.

ತೂಫಾನ್ ಗಿರಿ ‘ಹೋಗೋಣ, ಪುನಃ ದರ್ಶನ ಕೊಡಬಹುದು’ ಎಂದಾಗ ನಾನು ಸಿಟ್ಟಿನಿಂದ, ‘ಬರ್ತೀರಾ? ಇಲ್ಲವಾ?’ ಎಂದು ನದಿಯ ಕಡೆ ನಡೆಯಲು ಶುರುಮಾಡಿದೆ.

ಮೋಟರ್ ಬೋಟನ್ನು ಬಾಡಿಗೆಗೆ ಪಡೆಯುವುದು ದುಬಾರಿ. ನದಿಯಲ್ಲಿ ಬೋಟ್ ಮೇಲೆ ಕುಳಿತು ಗಂಗಾರತಿ ನೋಡಿ, ಒಮ್ಮೆ ಘಾಟ್ ಸುತ್ತುಹಾಕಿಕೊಂಡು ಬರಲು ಒಂದು ಸಾವಿರದ ಇನ್ನೂರು ರೂಪಾಯಿ ಎಂದು ಬೋಟಿನವ ಹೇಳಿದಾಗ, ‘ಈಗ ಚೌಕಾಸಿ ಮಾಡಲು ಟೈಮಿಲ್ಲ, ಬನ್ನಿ ಹೋಗೋಣ’ ಎಂದು ತೂಫಾನ್ ಗಿರಿ ಅವರನ್ನು ಕರೆದುಕೊಂಡು ಬೋಟ್ ಹತ್ತಿದೆ.

ಆ ಹೊತ್ತಿಗಾಗಲೇ ನೂರಾರು ಬೋಟ್ಗಳು ಜನರನ್ನು ಹೊತ್ತುಕೊಂಡು ಗಂಗಾರತಿ ನಡೆಯುವ ಎರಡು ವೇದಿಕೆಗಳ ಮುಂದೆ ಜಮಾಯಿಸಿದ್ದವು. ಎರಡು ಪ್ರಮುಖ ಘಾಟ್ಗಳ ಮೆಟ್ಟಿಲುಗಳ ಮೇಲಿರುವ ಸಮತಟ್ಟಾದ ಜಾಗದಲ್ಲಿ ವಿಶೇಷವಾಗಿ ಅಲಂಕರಿಸಲಾದ, ಝಗಮಗಿಸುವ ಪ್ರಭಾವಳಿಯಲ್ಲಿ, ನೃತ್ಯ ಸಂಯೋಜನೆ ರೀತಿಯಲ್ಲಿ ಮಾಡಲಾಗುವ ಆರತಿ ಮತ್ತು ಪೂಜಾ ಪ್ರದರ್ಶನವೇ ಈ ಗಂಗಾರತಿ.

ಸುಮಧುರ, ತಾಳಬದ್ಧವಾದ ಸಂಗೀತಕ್ಕೆ ಅನುಗುಣವಾಗಿ, ಗಂಟೆ–ಜಾಗಟೆಗಳ ಜೊತೆಗೆ ಸುಂದರವಾಗಿ ಜ್ವಲಿಸುವ ಆರತಿ, ಘಾಟ್ಗಳ ಹಿನ್ನೆಲೆಯಲ್ಲಿ ಗಂಗಾಭಿಮುಖವಾಗಿ ಬೆಳಗುವುದನ್ನು ದರ್ಶನ ಮಾಡುವುದೇ ಒಂದು ಸುಂದರ ಅನುಭವ.

ಗಂಗಾನದಿಯಲ್ಲಿ ಕುಳಿತು ಅನೇಕಾನೇಕ ಜನರೊಂದಿಗೆ ಆರತಿ ನೋಡುವುದು ಬಹಳ ಜನರಿಗೆ ರೋಮಾಂಚನಕಾರಿ ಅನುಭವ ನೀಡಬಹುದು. ಹಗಲೆಲ್ಲ, ಮಲಮೂತ್ರದೊಂದಿಗೆ ಎಲ್ಲ ತ್ಯಾಜ್ಯಗಳನ್ನು ನೀರಿಗೆ ವಿಸರ್ಜನೆ ಮಾಡುವ ಜನ, ರಾತ್ರಿ ಕತ್ತಲಿನಲ್ಲಿ ಅದೇ ನೀರಿಗೆ ಪೂಜೆ ಮಾಡುವುದು ವಿಪರ್ಯಾಸ.

ಆರತಿ ಮುಗಿಯುತ್ತಿದ್ದಂತೆಯೇ ಮತ್ತೊಮ್ಮೆ ಜನ ಸಣ್ಣ ಸಣ್ಣ ಮೇಣದ ಬತ್ತಿಗಳನ್ನು ಹೂವಿನೊಂದಿಗೆ ದೊನ್ನೆಯ ಮೇಲಿಟ್ಟು ನದಿ ನೀರಿನಲ್ಲಿ ಹರಿಬಿಡುತ್ತಾರೆ. ಇದರಿಂದ ಮತ್ತಷ್ಟು ಕಸ ನದಿ ಸೇರುತ್ತದೆ. ಕೆಲವರಿಗೆ ಈ ಗಂಗಾರತಿ ಮನರಂಜನೆಯ ದೃಶ್ಯಾವಳಿಯಂತೆ, ಮತ್ತೆ ಕೆಲವರಿಗೆ ಭಕ್ತಿಯ ಪರಾಕಾಷ್ಠೆ ಆಗಿರಬಹುದು. ಆದರೆ ಕೆಲವೇ ಕೆಲವು ಮಂದಿಗೆ ಮಾತ್ರ ಇದು ಬೂಟಾಟಿಕೆ ರೀತಿ ಕಂಡುಬಂದರೆ ಆಶ್ಚರ್ಯವಿಲ್ಲ.

ಗಂಗಾರತಿ ನಂತರ ನದಿಯಲ್ಲಿ ಅನೇಕ ದೋಣಿಗಳು ಪ್ರಯಾಣಿಕರೊಂದಿಗೆ ನದಿವಿಹಾರಕ್ಕೆ ಹೊರಡುತ್ತವೆ. ಈ ಗಂಗಾರತಿಯನ್ನು ನೂರಾರು ಬಾರಿ ನೋಡಿರುವ ತೂಫಾನ್ ಗಿರಿಯಂತೂ ಮತ್ತೊಮ್ಮೆ ರೋಮಾಂಚನಗೊಂಡಂತೆ ಕಂಡುಬಂದರು.

ಘಾಟ್ಗಳನ್ನು ನೋಡಲು ನಮ್ಮನ್ನು ಹೊತ್ತ ಬೋಟ್ ನೀರಿನ ಮೇಲೆ ಸಾಗುತ್ತಿದ್ದಂತೆ ತಣ್ಣಗಿನ ಗಾಳಿ ಬೀಸುತ್ತಿತ್ತು. ಬೋಟ್ ನಡೆಸುವವ ಪ್ರತಿ ಘಾಟಿನ ವಿವರ ನೀಡುತ್ತಿದ್ದ. ಅದರ ಹೆಸರು, ಇತಿಹಾಸ, ಮಹತ್ವ, ಪೌರಾಣಿಕ ಹಿನ್ನೆಲೆ– ಎಲ್ಲವನ್ನೂ ಹೇಳುತ್ತಿದ್ದ.

ನಾನು ಬೋಟಿನವನನ್ನು ‘ನಿನ್ನ ಹೆಸರೇನು?’ ಎಂದು ಕೇಳಿದೆ. ‘ನಾನು ಅಬ್ದುಲ್. ಅನೇಕ ತಲೆಮಾರುಗಳಿಂದ ನಾವು ಕಾಶಿಯಲ್ಲೇ ಇದ್ದೇವೆ’ ಎಂದಾತ ಹೇಳಿದ. ಘಾಟ್ಗಳನ್ನೆಲ್ಲ ನೋಡಿದ ಮೇಲೆ ನದಿಯ ಮಧ್ಯದಲ್ಲಿ ಬೋಟ್ ನಿಲ್ಲಿಸಲು ಹೇಳಿದೆ. ಮೇಲೆ ಆಕಾಶ, ಕೆಳಗೆ ಗಂಗೆ, ಸುತ್ತಲೂ ನಮ್ಮ ಪ್ರಪಂಚ. ಏನೋ ವಿಶೇಷ ಅನುಭವ. ಆ ಕತ್ತಲಲ್ಲಿ ಗಂಗೆ ಪ್ರಶಾಂತಳಾಗಿ, ಪರಿಶುದ್ಧಳಾಗಿ ಕಂಡುಬಂದಿದ್ದಂತೂ ನಿಜ.

ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ತೂಫಾನ್ ಗಿರಿ, ‘ದೀಪಕ್ ಭಾಯಿ, ನನ್ನಾಸೆ ಏನ್ ಗೊತ್ತಾ. ನನಗೆ ವಯಸ್ಸಾದಾಗ ಒಂದು ಮೋಟರ್ ಬೋಟನ್ನು ನನಗೆ ಅಂತಲೇ ಕೊಂಡುಕೊಳ್ಳಬೇಕು. ಮಲಗಲು, ಅಡುಗೆ ಮಾಡಿಕೊಳ್ಳಲು ಅದರಲ್ಲೇ ಒಂದಿಷ್ಟು ಜಾಗ ಇರಬೇಕು.

ಹಗಲೂರಾತ್ರಿ ಗಂಗಾಮಾತೆಯ ಮೇಲೆಯೇ ಇರಬೇಕು. ರಾತ್ರಿ ಗಂಗಾಮಾತೆಯ ಮಡಿಲಲ್ಲೇ ಮಲಗಬೇಕು. ಜೀವನದಲ್ಲಿ ಅಷ್ಟು ಸಿಕ್ಕರೆ ಸಾಕು. ಬೇರೇನೂ ಬೇಡ’ ಎಂದು ಹೇಳಿ, ಬೋಟಿನಿಂದ ಬಾಗಿ, ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು ಕುಡಿದುಬಿಟ್ಟರು. ನದಿನೀರು ಸ್ವಚ್ಛವಾಗಿಲ್ಲ ಎಂದು ಹೇಳಲಿಕ್ಕೆ ನನಗೆ ಧೈರ್ಯಬರಲಿಲ್ಲ. ಅವರ ಬೊಗಸೆಗೆ ಬಂದ ಗಂಗೆ ಸ್ವಚ್ಛವಾಗಿಯೇ ಇದ್ದಳೋ ಏನೋ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.