ಸ್ತ್ರೀವಾದವು ಕನ್ನಡ ವಿಮರ್ಶೆಯ ಸ್ವರೂಪವನ್ನು ದಟ್ಟವಾಗಿ ಪ್ರಭಾವಿಸಿದೆ. ನಮ್ಮ ಸಾಮಾಜಿಕ ಆಗುಹೋಗು ಹಾಗೂ ಸಾಹಿತ್ಯಿಕ ಪಠ್ಯಗಳನ್ನು ನೋಡಲು ಬೇಕಾದ ಹೊಸ ವ್ಯಾಕರಣವನ್ನೂ ಕಲ್ಪಿಸಿದೆ. ಇದಕ್ಕೊಂದು ಸೂಕ್ಷ್ಮ ನಿದರ್ಶನವೆಂಬಂತೆ ಗೀತಾ ವಸಂತ ಅವರ ‘ಅವಳ ಅರಿವು’ ಕೃತಿಯಿದೆ. ಇದನ್ನವರು ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳೆಂದು ಕರೆದಿದ್ದಾರೆ. ಇಲ್ಲಿ ಲೋಕಾಂತ ಮತ್ತು ಏಕಾಂತಗಳು ಪರಸ್ಪರ ಬೆಸೆದು ಹೊಸ ನಾದ ಹೊರಡಿಸಿವೆ. ಲೋಕಾಂತವನ್ನು ತೀವ್ರವಾದ ತನ್ಮಯತೆಯಿಂದಲೂ, ತನ್ನ ಖಾಸಗಿ ಅರಿವಿನ ಅಗತ್ಯವಾಗಿಯೂ, ಏಕಾಂತವನ್ನು ಸಾಮಾಜಿಕ ಅರಿವಿನ ಕಣ್ಣುಗಳಿಂದಲೂ, ಹೊಸ ಪಾವಿತ್ರ್ಯದ ಹುಡುಕಾಟವಾಗಿಯೂ ನೋಡಲಾಗಿದೆ. ಹೀಗಾಗಿಯೇ ಇಲ್ಲಿನ ಬರಹಗಳಲ್ಲಿ ಕಾವ್ಯ ಭಾಷೆ ಮತ್ತು ಸೈದ್ಧಾಂತಿಕ ಭಾಷೆಗಳೆರಡಕ್ಕೂ ನೆಲೆ ಒದಗಿದೆ. ಅವಳ ಅರಿವಿನ ವಿಸ್ತಾರವಾದ ನಿಗೂಢವಾದ ಲೋಕಗಳಿಗೆ ಕೈಚಾಚಲು ಸಾಧ್ಯವಾಗಿದೆ.

ಗೀತಾ ಅವರು ಇಲ್ಲಿ ಹಲವು ಪ್ರಶ್ನೆಗಳನ್ನು ತಮ್ಮೆದುರು ಇಟ್ಟುಕೊಂಡಿದ್ದಾರೆ; ಹೆಣ್ಣಿನ ಹಾದಿಗಳು ಇಕ್ಕಟ್ಟಿಗೆ ಸಿಲುಕಿದ್ದು ಹೇಗೆ? ಈ ಇಕ್ಕಟ್ಟು ಯಾವ ಬಗೆಯದು? ಇದಕ್ಕೆ ಕಾರಣವಾದ ಸಂಗತಿಗಳು ಯಾವುವು? ಇದರಿಂದ ಅವಳ ಕನಸುಗಳಿಗೆ ಉಂಟಾದ ಗಾಯಗಳೇನು? ಇದರಲ್ಲಿ ಧರ್ಮ, ರಾಜಕಾರಣ, ಕುಟುಂಬ ಮತ್ತು ಮಾಧ್ಯಮಗಳ ಪಾಲೆಷ್ಟು? ಹಾಗಾದರೆ ಸ್ತ್ರೀಚೈತನ್ಯದ ಸಹಜ ದಾರಿಗಳನ್ನು ಉಳಿಸಿಕೊಳ್ಳುವುದು ಹೇಗೆ? ತಮಗೆ ತಾವೇ ಹೊಸ ಹಾದಿಗಳನ್ನು ಕಟ್ಟಿಕೊಳ್ಳಲು ಮಾಡಬೇಕಾದದ್ದೇನು? ಇವುಗಳ ಸುತ್ತ ಅವರ ವಿಚಾರ ಲಹರಿ ಹರಡಿದೆ. ಈ ತಾತ್ವಿಕ ಪ್ರಶ್ನೆಗಳಿಗೆ ತಮ್ಮ ಸುತ್ತಲಿನ ಘಟನೆಗಳಿಂದ ದಕ್ಕಬಹುದಾದ ತಿಳಿವಳಿಕೆಯ ಬಗ್ಗೆ ಅವರಿಗೆ ಆಸಕ್ತಿಯಿದೆ. ಒಂದೊಂದೇ ತೊಡಕನ್ನು ಅರಿಯುತ್ತ, ಪ್ರತಿವಾದ ಹೂಡುತ್ತ, ಮುಚ್ಚಿದ ಕದಗಳನ್ನು ತಟ್ಟುತ್ತ, ಇದ್ದ ದಾರಿಗಳನ್ನು ಬಿಟ್ಟು ಹೊಸ ದಾರಿಗಳನ್ನು ಕಂಡುಕೊಳ್ಳುತ್ತ ಸಾಗಿದ್ದಾರೆ.

ಹೆಣ್ಣಿನ ದೇಹ ಮತ್ತು ಪ್ರಜ್ಞೆ ಇಲ್ಲಿನ ಬರಹದ ಕೇಂದ್ರದಲ್ಲಿರುವ ಸಂಗತಿಗಳು. ದೇಹವನ್ನು ಸಿದ್ಧ ಮಾದರಿಯ ಚರ್ಚೆಗಳ ಆಚೆಗೊಯ್ದು ಚರ್ಚಿಸಿರುವಂತೆಯೇ ಅವಳ ಪ್ರಜ್ಞೆಯ ನಿಗೂಢ ಲೋಕಗಳನ್ನು ಕಾಣಿಸಲು ಯತ್ನಿಸಲಾಗಿದೆ. ಗಂಡುತನದ ಮುಸುಕು ಸರಿಸಿದರಷ್ಟೇ ಹೆಣ್ಣಿನಪ್ರಜ್ಞೆಯ ನಿಜವಾದ ವಿಕಾಸಕ್ಕೆ ಅವಕಾಶವಾಗುವ ಹಲವು ಉದಾಹರಣೆಗಳನ್ನು ಗೀತಾ ಒದಗಿಸಿದ್ದಾರೆ. ಸಮಾಜದ ಎಲ್ಲಾ ನೆಲೆಗಳಲ್ಲಿ ಗಂಡು ರೂಪಿಸಿದ ಪಾವಿತ್ರ್ಯದ ಹಂಗು ಹರಿದುಕೊಳ್ಳುವ ದಾರಿಯನ್ನು ಇವು ಅರಸುತ್ತಿವೆ. ಹೆಣ್ಣುತನವೇ ತನ್ನತನವಾದಾಗ ಹುಟ್ಟಿಕೊಳ್ಳುವ ಹೊಸ ಪಾವಿತ್ರ್ಯಕ್ಕಾಗಿ ಹಂಬಲಿಸಿವೆ.

ಹೆಣ್ಣಿಗೆ ಬೇಕಾದ ಅರಿವನ್ನು ಸಮಾಜ ತನ್ನ ಬೌದ್ಧಿಕ ಮಾದರಿಗಳಲ್ಲಿ ಮುಚ್ಚಿಟ್ಟಿದ್ದನ್ನು ಈ ಲೇಖನಗಳು ಪ್ರಶ್ನಿಸಿವೆ. ಅತ್ಯಾಚಾರ, ಕೌಟುಂಬಿಕ ಹಿಂಸೆ, ಧಾರ್ಮಿಕ ಸಂದಿಗ್ಧತೆ ಮತ್ತು ರಾಜಕಾರಣದ ದಾಳವಾಗಿ ಹೆಣ್ಣಿನ ದೇಹ ಮತ್ತು ಪ್ರಜ್ಞೆಯನ್ನು ಬಳಸಿಕೊಂಡಿದ್ದೆ ಹೆಚ್ಚು. ಚರಿತ್ರೆ ಮತ್ತು ವರ್ತಮಾನದ ಈ ಬಿರುಕುಗಳನ್ನು ಹೊಸ ಘಟನೆಗಳೊಂದಿಗೆ ನಿರೂಪಿಸಿದ್ದು ಇಲ್ಲಿನ ಹೆಚ್ಚುಗಾರಿಕೆ. ಇದಕ್ಕಾಗಿ ಕೃತಿ ಸಿನಿಮಾ, ಸಾಹಿತ್ಯ, ಪುರಾಣ, ಅವಧೂತ ಪರಂಪರೆ, ನ್ಯಾಯವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ರಾಜಕಾರಣ, ಧರ್ಮ ಮತ್ತು ಪಂಥನಿಷ್ಠ ಬೌದ್ಧಿಕ ವಾತಾವರಣ ಹೀಗೆ ಹಲವು ಆಕರಗಳನ್ನು ಬಳಸಿಕೊಂಡಿದೆ. ಲಿಂಗಸಂವೇದನಾಶೀಲತೆ ಇಲ್ಲದೆ ನರಳುತ್ತಿರುವ ಸಮಾಜದ ವಿವಿಧ ಅಂಗಗಳ ವಿಮರ್ಶೆ ಇಲ್ಲಿದೆ.

ಹೆಣ್ಣುತನವನ್ನೇ ಒಂದು ಧರ್ಮವಾಗಿ ಸ್ವೀಕರಿಸಿರುವ ಇಲ್ಲಿನ ಲೇಖನಗಳು ಅದನ್ನು ಪ್ರಕೃತಿ ಧರ್ಮವೆಂದು ಕರೆದಿವೆ. ಈ ಪ್ರಕೃತಿ ಧರ್ಮ ನಿರಂತರವಾಗಿ ಸಾಂಸ್ಥಿಕ ಧರ್ಮಗಳ ವಿರುದ್ಧ ಬಂಡೇಳುತ್ತಲೇ ಇರಬೇಕಾದ ಅನಿವಾರ್ಯತೆಯನ್ನು ಪ್ರತಿಪಾದಿಸಿವೆ. ಇಂಥ ಅನಿವಾರ್ಯ ಕ್ರಿಯಾಶೀಲತೆಯಲ್ಲಿಯೇ ಅವಳ ಅರಿವಿನ ನೆಲೆಗಳನ್ನು ಗುರುತಿಸಿದೆ. ಒಟ್ಟಿನಲ್ಲಿ ಅವಳ ಚೈತನ್ಯ ಬತ್ತಿಹೋಗುವಂತೆ ಮಾಡುವ ಎಲ್ಲಾ ಸಾಂಸ್ಥಿಕ ನೆಲೆಗಳನ್ನು ಭಂಜಿಸಲು ಬೇಕಾದ ಅರಿವನ್ನು ಈ ಲೇಖನಗಳು ಕಾಣಿಸ ಹೊರಟಿವೆ.

ಇಲ್ಲಿಯೇ ಗಮನಿಸಬೇಕಾದ ಸಂಗತಿಯೊಂದಿದೆ. ಅವಳ ಅರಿವು ಒಂದು ಸಂಕೀರ್ಣ ಮತ್ತು ಬಹುಮುಖಿಯಾದ ಅರ್ಥವಿಸ್ತಾರ ಪಡೆದಕೊಂಡಿದೆ. ‘ಅರಿವು’ ಅವಳ ಒಳಪ್ರಜ್ಞೆ ಹೇಗೊ, ಹಾಗೆಯೇ ಅವಳ ಸಾಮಾಜಿಕ ಚಲನಶೀಲತೆ ಕೂಡ ಹೌದು. ತನ್ನ ಒಳಪ್ರಜ್ಞೆಯ ಮೂಲಕ ಸಾಮಾಜಿಕ ತೊಡಗುವಿಕೆ ಸಾಧ್ಯವಾದಾಗ ಮಾತ್ರ ಅದು ಅವಳ ನಿಜವಾದ ಅರಿವು. ಒಳಪ್ರಜ್ಞೆ ಒಂದು ಸಾಮಾಜಿಕ ಪ್ರಜ್ಞೆಯಾಗಿ, ನೈತಿಕ ಪ್ರಜ್ಞೆಯಾಗಿ ವಿಕಾಸಗೊಳ್ಳದಿದ್ದರೆ ಅಷ್ಟರ ಮಟ್ಟಿಗೆ ಅದು ನಿಶ್ಚಲ. ಅರಿವು ಎಂಬುದು ಅಂತಿಮವಾಗಿ ತೊಡಗುವಿಕೆ ಎಂಬ ಅರ್ಥವನ್ನು ಇಲ್ಲಿನ ಬರಹಗಳು ತೀವ್ರವಾಗಿ ಮನಗಂಡಿವೆ. ಹೀಗಾಗಿಯೇ ಈ ಏಕಾಂತ ಲೋಕಾಂತದ ಟಿಪ್ಪಣಿಗಳಿಗೆ ಒಂದು ‘ಆ್ಯಕ್ಟಿವಿಸಂ’ನ ಗುಣ ಕೂಡ ಇದೆ. ಸೈದ್ಧಾಂತಿಕ ಸ್ಪಷ್ಟತೆ ಮತ್ತು ಸೈದ್ಧಾಂತಿಕ ಒಣ ಹಟಮಾರಿತನದ ನಡುವಿನ ವ್ಯತ್ಯಾಸ ಗೀತಾ ಅವರಿಗೆ ಗೊತ್ತಿದೆ. ಯಾವುದೂ ತನ್ನನ್ನು ಆಂತರಿಕವಾಗಿ ಕಟ್ಟಿಹಾಕದಂತೆ ನೋಡಿಕೊಳ್ಳಲು ಬೇಕಾದ ಸ್ವಾತಂತ್ರ್ಯವೂ ಅವರಿಗೆ ಮುಖ್ಯ. ವಿಚಾರ ಸ್ವಾತಂತ್ರ್ಯ ಮತ್ತು ಆಂತರಿಕ ಸ್ವಾತಂತ್ರ್ಯದ ಕೂಡುಸ್ಥಿತಿಯಲ್ಲೇ ಅವಳ ಅರಿವಿನ ನೆಲೆಗಳಿವೆ.

ಈ ಕೃತಿಯ ಇನ್ನೊಂದು ಭಾಗದಲ್ಲಿ ಕೃತಿ ವಿಮರ್ಶೆಯ ಬರಹಗಳಿವೆ. ಚೆನ್ನವೀರ ಕಣವಿ, ಬರಗೂರು ರಾಮಚಂದ್ರಪ್ಪ, ಎಚ್.ಎಸ್.ಶಿವಪ್ರಕಾಶ್, ವೈದೇಹಿ, ಸಿದ್ಧಲಿಂಗಯ್ಯ ಅವರ ಬರಹಗಳಿಗೆ ಸ್ಪಂದನೆಯಿದೆ. ವಿಠಲ ಭಂಡಾರಿಯವರ ವೈಚಾರಿಕ ಸಾಹಸಗಳನ್ನು ಆಪ್ತವಾಗಿ ಮಂಡಿಸಿದ ಬರಹ ಕೂಡ ಮುಖ್ಯವಾದದ್ದು. ಚ.ಸರ್ವಮಂಗಳಾ, ಸವಿತಾ ನಾಗಭೂಷಣ, ಎಂ.ಆರ್.ಕಮಲ,
ಎಚ್.ಎಲ್.ಪುಷ್ಪಾ, ಎಚ್.ಆರ್.ಸುಜಾತಾ, ತಾರಿಣಿ ಶುಭದಾಯಿನಿ ಮತ್ತು ಶೋಭಾ ನಾಯಕರ ಕಾವ್ಯ ಮತ್ತು ವಿಮರ್ಶೆ ಕುರಿತು ಬರೆದ ಬರಹಗಳು ಅವಳ ಅರಿವಿನ ಮುಂದುವರಿಕೆ ಆಗಿವೆ. ಕನ್ನಡದ ಈ ಬರಹಗಾರ್ತಿಯರು ಮಾಡಿದ ಅವಳ ಅರಿವಿನ ಹುಡುಕಾಟವನ್ನು ಗೀತಾ ಇಲ್ಲಿ ಕಾಣಿಸಿದ್ದಾರೆ.

ಎಂಬತ್ತರ ದಶಕದಲ್ಲಿ ಭಾವಸಾಂದ್ರತೆಯ ಸ್ತ್ರೀಮಾದರಿಗಳನ್ನು ರೂಪಿಸಿದ್ದು, ಲೌಕಿಕತೆಯಲ್ಲಿಯೇ ಅಲೌಕಿಕ ಸ್ವರಗಳನ್ನು ಹೊರಡಿಸಿದ್ದು, ಕಳೆದುಕೊಳ್ಳುವುದು ಕೂಡ ಬೆಳೆಯುವುದರ ಒಂದು ಸಂಕೇತವೆಂದು ಬೀಗಿದ್ದು, ಆತ್ಮಕಥನವೇ ಕಾವ್ಯಕಥನವಾಗಿ ಮುಂದೆ ಸಮಾಜಕಥನವಾಗಿ ಬೆಳೆಯುವ ಪರಿ, ಶಾಕ್ತಸ್ತ್ರೀಪರಂಪರೆ ಕನ್ನಡ ಕಾವ್ಯದೊಳಗೆ ನುಸುಳುತ್ತಿರುವ ರೀತಿ, ಖಾಸಗೀ ಸ್ವರ್ಗವೇ ಆತ್ಯಂತಿಕ ಸ್ಥಿತಿಯೆಂದು ಭಾವಿಸಿದ ಕಾವ್ಯ ಉಂಟುಮಾಡಬಹುದಾದ ಸಂಚಲನ ಹೀಗೆ ತನ್ನ ಕಾಲದ ಮಹಿಳಾ ಕಾವ್ಯ ಮತ್ತು ಕಥನಗಳನ್ನು ತೀವ್ರವಾಗಿ ಒಳಗೊಳ್ಳುವ ಗುಣವೊಂದು ಇಲ್ಲಿಯ ಬರಹಗಳಿಗಿದೆ. ಪ್ರತಿಯೊಂದನ್ನು ನಿಧಾನವಾಗಿ ಅರಿಯುತ್ತ, ತೀರ್ಮಾನ ಕೊಡುವ ಅವಸರಕ್ಕೆ ಬೀಳದೆ, ಅಲ್ಲಿಯ ಸ್ತ್ರೀ ಚೈತನ್ಯದ ಸ್ವತಂತ್ರ ಮಾದರಿಗಳನ್ನು ಕಾಣಿಸಲಾಗಿದೆ.

ಕನ್ನಡದಲ್ಲಿ ಸ್ತ್ರೀವಾದದ ಈ ಬೌದ್ಧಿಕ ದಾರಿಯೊಳಗೆ ಹಲವರು ನಡೆದು ಬಂದಿದ್ದಾರೆ. ಗೀತಾ ವಸಂತರ ಈ ಕೃತಿ ಒಂದು ಹೊಸ ಸೇರ್ಪಡೆ.

ಕೃತಿ: ಅವಳ ಅರಿವು

ಲೇ: ಡಾ. ಗೀತಾ ವಸಂತ

ಪ್ರ: ಜನ ಪ್ರಕಾಶನ

ಸಂ: 9632329955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.