ಕೃಷ್ಣಮೂರ್ತಿ ಹನೂರು ಅವರು ಕಳೆದ 40 ವರ್ಷಗಳಲ್ಲಿ ಬರೆದ 25 ಕಥೆಗಳು ‘ದೇವ ಮೂಲೆಯ ಮಳೆ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿವೆ. ಸಣ್ಣ ಕಥೆಯು ‘ಅಲ್ಪಜೀವಿಗಳ ಮಹಾಕಾವ್ಯ’ ಎಂಬ ಮಾತಿದೆ. ಮನುಷ್ಯನ ಬದುಕಿನ ಪರಿಸರದ ಯಾವುದೋ ಒಂದು ಘಟನೆಯನ್ನೋ ತುಣುಕನ್ನೋ ಕೇಂದ್ರವಾಗಿಸಿಕೊಂಡು, ಅದಕ್ಕೊಂದು ಆಕಾರ ಕೊಡುವುದರ ಮೂಲಕ ಬದುಕಿನ ರಹಸ್ಯವನ್ನು ಶೋಧಿಸುವಂತಹ ಕೆಲಸವನ್ನು ಕಥೆಗಳು ಮಾಡುತ್ತವೆ. ಹನೂರರ ಕಥೆಗಳನ್ನು ಓದಿದಾಗ ಇದು ಸಾಧ್ಯವಾಗಿರುವುದನ್ನು ಗಮನಿಸಬಹುದು.

ಈ ಸಂಕಲನದ ಎಲ್ಲಾ ಕಥೆಗಳ ವಸ್ತು ಬಡತನವೇ ಆಗಿದೆ. ಗ್ರಾಮೀಣ ಪರಿಸರದ ಆವರಣವುಳ್ಳ ಕಥೆಗಳು ಇವು. ಉದಾಹರಣೆಗೆ ‘ಗಂಟು’ ಎಂಬ ಕಥೆಯನ್ನು ನೋಡಬಹುದು. ಒಂಬತ್ತು ದಿನ ನಡೆಯುವ ಜಾತ್ರೆ. ಇಲ್ಲಿ ಬರುವ ಕಾಟಜ್ಜ, ಸೂರಮ್ಮ ಬಡವರು. ಕಾಟಜ್ಜನು ಬಸವಣ್ಣನೆಂಬ ಎತ್ತಿನೊಂದಿಗೆ ಬಂದಿದ್ದರೆ, ಸೂರಮ್ಮ ಬಳೆ ಮಾರಾಟಕ್ಕೆ ಬಂದಿದ್ದಾಳೆ. ಕಾಟಜ್ಜನು ಮೊಮ್ಮಗ ಸಿದ್ದೋಜಿಯೊಂದಿಗೆ ರಾತ್ರಿ ಆಶ್ರಯ ಪಡೆಯುವುದು ಸೂರಮ್ಮನ ಶೆಡ್ಡಿನ ಮುಂಭಾಗದಲ್ಲಿ. ಸೂರಮ್ಮ ತನ್ನ ಮಗಳು ಶಿವಿಯೊಂದಿಗೆ ಶೆಡ್ಡಿನ ಒಳಗಡೆ ಇರುತ್ತಾಳೆ. ಕೊನೆಯ ದಿನಗಳಲ್ಲಿ ಕಾಟಜ್ಜನ ಹಣದ ಗಂಟು ಕಳವಾಗುತ್ತದೆ. ಜೊತೆಗೆ ಅವನಿಗೆ ಜ್ವರ ಬರುತ್ತದೆ. ಜಾತ್ರೆ ಮುಗಿದರೂ ಸೂರಮ್ಮ ಅಲ್ಲಿಯೇ ಉಳಿದು ಕಾಟಜ್ಜನ ಆರೈಕೆ ಮಾಡುತ್ತಾಳೆ. ಕಳೆದ ಹಣ ಸಿಗುತ್ತದೆ. ಅದರಲ್ಲಿ ಸ್ವಲ್ಪ ಹಣವನ್ನು ಅವನು ಸೂರಮ್ಮನಿಗೆ ಕೊಡುತ್ತಾನೆ. ಆದರೆ ಅವಳು ಅದನ್ನು ನೀರಿಗೆ ಎಸೆಯುತ್ತಾಳೆ. ಉಪಾಧ್ಯಾಯರೊಬ್ಬರ ಸಲಹೆಯ ಮೇರೆಗೆ ಸಿದ್ದೋಜಿ ಮತ್ತು ಶಿವಿ ಶಾಲೆಗೆ ಸೇರಿಕೊಳ್ಳುತ್ತಾರೆ.

ಇದರಲ್ಲಿ ಮಾನವೀಯ ಸಂಬಂಧಗಳ ಸ್ವರೂಪ, ಹಣವೇ ಮುಖ್ಯವಲ್ಲ ಎಂಬ ನಿಲುವು, ಶಿಕ್ಷಣದ ಮಹತ್ವ, ಆ ಮೂಲಕ ಜ್ಞಾನ, ಪ್ರಗತಿ, ಅಭಿವೃದ್ಧಿ ಎಂಬೆಲ್ಲಾ ಹತ್ತು ಹಲವು ವಿಚಾರಗಳು ಓದುಗನಲ್ಲಿ ಮೂಡುತ್ತವೆ. ಕಥೆಯಲ್ಲಿ ಹಲವಾರು ವಿಚಾರಗಳನ್ನು ಒಳಗೊಳ್ಳುವುದು ಅದರ ಆಕೃತಿಯಿಂದ ಮಾತ್ರ ಸಾಧ್ಯ. ಆಕೃತಿಯಲ್ಲಿಯೇ ಎಲ್ಲಾ ವಿಚಾರಗಳು ಸಂಯೋಜನೆಗೊಳ್ಳಲು ಸಾಧ್ಯ.

ಇಲ್ಲಿನ ಕಥೆಗಳೆಲ್ಲವೂ ವಾಸ್ತವಿಕವಾದದ ಹಿನ್ನೆಲೆಯಲ್ಲಿ ರಚನೆಯಾಗಿರುವಂತಹವು. ಲೇಖಕ ಈ ಕಥೆಗಳಲ್ಲಿ ತಾನೊಂದು ಕಣ್ಣಾಗಿ ಬದುಕನ್ನು ವೈಜ್ಞಾನಿಕವಾಗಿ ನೋಡುವ ಕ್ರಮವಿದೆ. ಜೊತೆಗೆ ನೈತಿಕತೆಯೂ ಇರುತ್ತದೆ. ಇಂತಹ ಕಥೆಗಳಲ್ಲಿ ಸಾಮಾನ್ಯವಾಗಿ ಸಾಮಾನ್ಯ ಜನರ ಬದುಕಿಗೆ ಹೆಚ್ಚಿನ ಒತ್ತು ಇರುತ್ತದೆ. ಜೊತೆಗೆ ಮರೆಯಲ್ಲಿ ಇರುವ ಬದುಕಿನ ಸೂಕ್ಷ್ಮಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತದೆ. ಇಂತಹ ಕಥೆಗಳಲ್ಲಿ ರಸಾನಂದವನ್ನಾಗಲಿ, ಆರ್ದ್ರಗೊಳಿಸುವಿಕೆಯಾಗಲಿ ಇರುವುದಿಲ್ಲ. ಅವು, ಬದುಕಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಮಗ್ಗುಲುಗಳ ಸತ್ಯವಾದ ದರ್ಶನವನ್ನು ಮಾಡಿಸುತ್ತವೆ. ಆದ್ದರಿಂದಲೇ ಹನೂರರು ‘ಇಲ್ಲಿಯ ಕಥನಗಳ ಮೂಲ ಸುಳಿವುಗಳೆಲ್ಲಾ ನಾನು ನನ್ನ ದೀರ್ಘಕಾಲದ ಜನಪದ ಜಗತ್ತಿನ ಸುತ್ತಾಟದಲ್ಲಿ ಕಂಡವು, ಕೇಳಿದವು, ಎದುರಾದವು!’ ಎಂದು ಹೇಳುತ್ತಾರೆ. ಹೀಗಾಗಿ ಅನುಭವವನ್ನು ಆದಷ್ಟು ವಸ್ತುನಿಷ್ಠವಾಗಿ ನಿರೂಪಿಸಲು ಸಾಧ್ಯವಾಗಿದೆ.

ವಾಸ್ತವತಾವಾದದ ಹಿನ್ನೆಲೆಯಲ್ಲಿ ಬರೆದ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಕಲಾತ್ಮಕತೆಯ ಕೊರತೆಯಿರುತ್ತದೆ ಎಂದು ಕೆಲವರು ಹೇಳುವುದುಂಟು. ಆದರೆ ಕನ್ನಡದ ಮಹತ್ವದ ಕಥೆ, ಕಾದಂಬರಿಗಳು ಸೃಷ್ಟಿಯಾಗಿರುವುದು ವಾಸ್ತವತಾವಾದದಲ್ಲಿ ಎಂಬುದನ್ನು ಗಮನಿಸಬೇಕು. ಹನೂರರ ಕಥೆಗಳಲ್ಲಿ ನೈತಿಕತೆ, ಬದುಕಿನ ಬಗೆಗಿನ ನಿಷ್ಠೆ, ಒಂದು ತತ್ವ, ಒಂದು ಕೇಂದ್ರಪ್ರಜ್ಞೆ ಇದ್ದು ಅದು ಒಂದು ಆವರಣದೊಂದಿಗೆ ಸಾವಯವಗೊಂಡು ಕಲಾಕೃತಿಯಾಗಿರುವುದನ್ನು ಗಮನಿಸಬಹುದು. ಬದುಕಿನ ವಿವರಗಳು ಕೇಂದ್ರಪ್ರಜ್ಞೆಯೊಂದಿಗೆ ಐಕ್ಯಗೊಂಡು ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಟ್ಟಿರುವುದನ್ನು ಕಾಣಬಹುದು.

ಆಧುನಿಕತೆಯ ತತ್ವಗಳಲ್ಲಿ ಅಭಿವೃದ್ಧಿಯೂ ಒಂದು. ಆಧುನಿಕತೆ ಎಂದಾಕ್ಷಣ ಅದರ ಜೊತೆಯಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ಈ ಅಭಿವೃದ್ಧಿ ಮತ್ತು ಪ್ರಗತಿ ಎಂದಾಕ್ಷಣ ಕಾಡುಗಳ ನಾಶ, ಪ್ರಕೃತಿಯಲ್ಲಿರುವ ಕಲ್ಲು ಮಣ್ಣು, ಗುಡ್ಡಗಳ ನಾಶ, ಇದರ ಜೊತೆಗೆ ಮಾನವ ಸಮುದಾಯಗಳ ಒಕ್ಕಲೆಬ್ಬಿಸುವಿಕೆ, ಅವರ ಅತಂತ್ರ ಸ್ಥಿತಿಯನ್ನು ಕಾಣಬಹುದು. ಇಂತಹ ಬದುಕಿನ ಸ್ವರೂಪವು ‘ಮುಂಜಾನೆಯೇ ಸಿಕ್ಕಿದ ಸಿರಿ’, ‘ಕೈ ತಪ್ಪಿದ ಕುರಿ’, ‘ಮಾದೇವಿ ಊರು ಬಿಟ್ಟಳು’, ‘ಬಿದ್ದ ಶಿಕಾರಿ’ ಮುಂತಾದ ಕಥೆಗಳಲ್ಲಿದೆ. ಈ ಕಥೆಗಳಲ್ಲಿನ ಮೂಲ ನಿವಾಸಿಗಳ ಅತಂತ್ರ ಬದುಕಿನ ಸ್ಥಿತಿಗತಿಗಳು ಸಾರ್ವತ್ರಿಕ ಸಾಂಕೇತಿಕತೆಯನ್ನು ಪಡೆದುಕೊಂಡಿವೆ. ಕಾಡಿನ ಜನರು ತಮ್ಮ ಮುಗ್ದತೆಯಿಂದ ಆನೆಗಳ ಜಾಗವನ್ನು ದಂತಚೋರರಿಗೆ ತೋರಿಸಿ ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದರ ವಿವರಗಳು ಕಲಾತ್ಮಕವಾಗಿ ಅಭಿವ್ಯಕ್ತಿ ಪಡೆದಿರುವುದನ್ನು ಕಥೆಯನ್ನು ಓದಿಯೇ ತಿಳಿಯಬೇಕು.

ಹನೂರರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ತಿರುಗಾಡಿ ಅಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಪರಿಸ್ಥಿತಿಗಳನ್ನು ಕಂಡವರು. ಸಾಮಾಜಿಕ ಏಣಿಶ್ರೇಣಿಗಳಿಂದ ಉಂಟಾಗಿರುವ ಅಸಮಾನತೆ, ಆರ್ಥಿಕ ಸ್ಥಿತಿಗತಿ ಎಲ್ಲವನ್ನೂ ಕಣ್ಣಾರೆ ಕಂಡಿದ್ದಾರೆ. ಶಿಕ್ಷಣವು ಗ್ರಾಮೀಣ ಮತ್ತು ಆದಿವಾಸಿ ಜನರಿಗೆ ಅತ್ಯಗತ್ಯವೆಂಬುದು ಮನವರಿಕೆಯಾಗಿ ಅವರನ್ನು ತೀವ್ರವಾಗಿ ಕಾಡಿದೆ. ಹೀಗಾಗಿ ಅವರ ಕಥೆಗಳಲ್ಲಿ ಶಿಕ್ಷಣದ ಅಗತ್ಯದ ಬಗ್ಗೆ ಒತ್ತು ಇದೆ.

ಇಲ್ಲಿನ ಬಹಳಷ್ಟು ಕಥೆಗಳಲ್ಲಿ ಅಭಿವೃದ್ಧಿಯ ಸೂತ್ರಗಳು ಇವೆ. ‘ದಿನಾಚರಣೆ’, ‘ಸುವರ್ಣ ಇತಿಹಾಸ’, ‘ಕಣ್ಣು ತೆರೆಸುವುದೆಂದರೆ’, ‘ಗಂಟು’ ಮುಂತಾದ ಕಥೆಗಳು ಶಿಕ್ಷಣದ ಮಹತ್ವ, ಅದರಿಂದುಂಟಾಗುವ ಪ್ರಗತಿ, ಬಡತನ ಮತ್ತು ಅಜ್ಞಾನದಿಂದ ಬದುಕುತ್ತಿರುವವರು ಆಧುನಿಕ ಜಗತ್ತಿಗೆ ಪ್ರವೇಶಿಸಬಹುದಾದ ಸಾಧ್ಯತೆಗಳನ್ನು ಶೋಧಿಸುತ್ತವೆ.

ಜನಪದ ಕಥನಗಳು ಅದರಲ್ಲೂ ಕನ್ನಡ ಮತ್ತು ಭಾರತೀಯ ಇತರ ಭಾಷೆಗಳ ಜನಪದ ಕಥನಗಳ ಉದ್ದೇಶ ಮತ್ತು ಸ್ವರೂಪಗಳ ನಿಕಟ ಪರಿಚಯ ಹನೂರರಿಗೆ ಇರುವುದರಿಂದ, ಇಲ್ಲಿನ ಕಥೆಗಳಲ್ಲಿ ನಿರೂಪಣೆಯ ಕ್ರಮ, ಆಶಯ, ಆಕೃತಿಗಳ ಸಂಬಂಧ ಮುಂತಾದವುಗಳ ಮೇಲೆ ಅದು ಪ್ರಭಾವವನ್ನು ಬೀರಿದೆ.

ಬದುಕಿನ ದರ್ಶನ, ಮನುಷ್ಯನ ಸಮಸ್ಯೆಗಳಿಗೆ ಸಮುದಾಯದ ಪ್ರಯತ್ನದ ಮೂಲಕ ಪರಿಹಾರ ಕಂಡುಕೊಳ್ಳುವುದು, ಬದುಕಿನಲ್ಲಿ ಬರುವ ಸುಖ ದುಃಖಗಳಲ್ಲಿ, ಆಸೆ ನಿರಾಸೆಗಳಲ್ಲಿ ನೈತಿಕತೆಯನ್ನು ಬಿಡದೆ ಮಾನವೀಯ ಸಂಬಂಧಗಳ ಮೂಲಕ ಅವುಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ಇಲ್ಲಿನ ಕಥೆಗಳ ಬಹುಮುಖ್ಯ ಕಾರ್ಯವಾಗಿದೆ. ನೈತಿಕ ಮೌಲ್ಯ, ಉತ್ತಮವಾದ ಸಮಾನತೆ, ಸಹಬಾಳ್ವೆ, ಸಹೋದರತ್ವವಿರುವ ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ನಂಬಿಕೆಗಳಿಗೆ ಈ ಕಥೆಗಳು ಒತ್ತಾಸೆ ನೀಡುತ್ತವೆ.

ಕೃತಿ: ದೇವ ಮೂಲೆಯ ಮಳೆ

ಲೇ: ಕೃಷ್ಣಮೂರ್ತಿ ಹನೂರು

ಪ್ರ: ಪಲ್ಲವ ಪ್ರಕಾಶನ, ಬಳ್ಳಾರಿ

ಸಂ: 8880087235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.