ಯಶವಂತ ಚಿತ್ತಾಲರ ಪರಿಚಯವಾದಾಗಿನಿಂದ ಅವರ ಕೊನೆಗಾಲದವರೆಗೂ ನಮ್ಮ ನಡುವೆ ಪತ್ರ ವ್ಯವಹಾರಕ್ಕಿಂತ ಫೋನ್ ಸಂಪರ್ಕವೇ ಹೆಚ್ಚಾಗಿತ್ತು. ಬರಹ, ಓದು ಇದರ ಸುತ್ತಲೇ ಅವರ ಮಾತುಕತೆ. ಅವರು ಹೊಸ ಕತೆ ಬರೆಯುತ್ತಿರುವ ಹೊತ್ತಿಗೆ ಕತೆ ಶುರುಮಾಡಿದ್ದನ್ನು, ಎಷ್ಟು ಪುಟ ಬರೆದರೆಂಬುದನ್ನು ಉತ್ಸಾಹದಿಂದ ಹೇಳುತ್ತಿದ್ದರು. ಆದರೆ ಕತೆಯ ಬಗ್ಗೆ ಏನೂ ಹೇಳುತ್ತಿರಲಿಲ್ಲ. ಅಂದರೆ ಕತೆ ‘ಬರೆಯುವ’ ಭೌತಿಕ ಚಟುವಟಿಕೆಯ ಬಗ್ಗೆ ಮಾತ್ರ ಮಾತು ಹೊರತು ಕತೆಯ ವಸ್ತು ವಿವರಗಳ ಕುರಿತಲ್ಲ.

ಯಾವುದೋ ಒಂದು ಹಂತದಲ್ಲಿ, ಬಹಳ ಗೆಲುವಿನಿಂದ ಕೊಂಕಣಿಯಲ್ಲಿ ‘ಕಾಣಿ ಸುಟ್ಲಿ’ ಅನ್ನುತ್ತಿದ್ದರು. ‘ಕತೆ ಬಿಡಿಸಿಕೊಂಡಿತು ಅಥವಾ ಕತೆ ಬಿಚ್ಚಿಕೊಂಡಿತು’ ಎಂಬುದು ಅದರ ಭಾವಾರ್ಥ. ಒಮ್ಮೆ ಇದಾಯಿತೋ, ಕತೆಗೊಂದು ಓಘ ಬಂದು ತನ್ನಿಂದ ತಾನೇ ಅದು ಕೊನೆ ಮುಟ್ಟಿಸಿಕೊಳ್ಳುತ್ತದೆಂಬುದು ಅವರ ವಿಶ್ವಾಸ. ಕತೆ ಯಾವುದರಿಂದ ಬಿಡಿಸಿಕೊಂಡಿತು, ಕತೆಗಾರನ ಸಂಕಲ್ಪದಿಂದಲೋ? ಸಿದ್ಧಾಂತದಿಂದಲೋ? ಕಲೆಯ ಬಲೆಯಿಂದಲೋ? ಆದರೆ ಕತೆಯೊಂದು ಯಾವುದರಿಂದಲೋ ಬಿಡಿಸಿಕೊಂಡು ಸ್ವತಂತ್ರವಾಗುವ ಅವಶ್ಯಕತೆ ಇದೆಯೆಂಬುದು ನಮ್ಮಿಬ್ಬರಿಗೂ ಗೊತ್ತಿದೆ ಎಂಬ ಗ್ರಹೀತ ಹಿಡಿದ ಹಾಗೆ ಅವರ ಮಾತು ಇರುತ್ತಿತ್ತು.

ಬಹುವಚನ ಪ್ರಕಾಶನದಿಂದ ಇದೀಗ ಪ್ರಕಟವಾಗಿರುವ ‘ದಿಗಂಬರ’ ಅವರ ಕೊನೆಯ ಕಾದಂಬರಿ. ಇದನ್ನು ಅವರು ಬಯಸಿದ ಹಂತದವರೆಗೂ ಒಯ್ದು ಪೂರ್ತಿಗೊಳಿಸಲಾಗಲಿಲ್ಲ ಅನ್ನುವದನ್ನು ಬಿಟ್ಟರೆ ಈ ಕಾದಂಬರಿಯ ಓದಿನ ಅನುಭವ ಶ್ರೀಮಂತವಾಗಲು ಸಾಕಾಗುವಷ್ಟು, ಕೊನೆಯನ್ನು ನಮ್ಮ ಕಲ್ಪನೆಯಲ್ಲಿ ಪೂರ್ತಿಗೊಳಿಸಲು, ಅದರ ವಿವಿಧ ಸಾಧ್ಯತೆಗಳನ್ನು ಯೋಚಿಸಲು ಅವಶ್ಯವಾಗುವಷ್ಟು ಗಾತ್ರ ಮತ್ತು ಹೂರಣ ಇದಕ್ಕಿದೆ. ಈ ಕಾದಂಬರಿಯ ಪ್ರಕಟಣೆಗೆ ಇದೇ ಪ್ರೇರಣೆ. ರಾಜೇಂದ್ರ ಚೆನ್ನಿಯವರು ‘ದಿಗಂಬರ’ಕ್ಕೆ ಬರೆದ ಮುನ್ನುಡಿಯು ಅಪೂರ್ಣ ಕೃತಿಗಳ ಕುರಿತ ಅಪರೂಪದ ಒಳನೋಟಗಳನ್ನು ಒಳಗೊಂಡಿದೆ.

ಕಾದಂಬರಿಯ ಹಸ್ತಪ್ರತಿಯನ್ನು ಪರಿಶೀಲಿಸಿ, ಮುದ್ರಣಕ್ಕೆ ಸಿದ್ಧಗೊಳಿಸುವ ಜವಾಬ್ದಾರಿ ವಹಿಸಿಕೊಂಡಾಗ ‘ಕಾಣಿ ಸುಟ್ಲಿ’ ಎಂಬ ನುಡಿಗಟ್ಟನ್ನು ಮತ್ತೆಮತ್ತೆ ನೆನೆಸಿಕೊಂಡಿದ್ದೇನೆ. ಚಿತ್ತಾಲರು ಇದನ್ನು ಆರಂಭಿಸಿ, ಅನಾರೋಗ್ಯ ನಿಮಿತ್ತ ನಿಲ್ಲಿಸಿ ಮತ್ತೆ ಹನ್ನೆರಡು ವರ್ಷಗಳ ನಂತರ ಆರಂಭಿಸಿದ್ದರು. ಈ ಬರವಣಿಗೆಯ ಯಾವ ಹಂತದಲ್ಲಿ ಅವರ ಮನಸ್ಸಲ್ಲಿ ‘ಕಾಣಿ ಸುಟ್ಲಿ’ ಹುಟ್ಟಿರಬಹುದು ಎಂದು ಯೋಚಿಸಿದ್ದೇನೆ. ಅಷ್ಟು ವರ್ಷಗಳ ಅಂತರದ ನಂತರ ಅವರಿಗದು ಹೊಳೆದು ಪುನರಾರಂಭಿಸಿದರೇ, ಎರಡನೇ ಭಾಗವನ್ನು ಬರೆಯುವಾಗ ಅವರಿಗದು ಹೊಳೆಯಿತೇ ಇತ್ಯಾದಿ ಉತ್ತರ ದೊರೆಯದ ಪ್ರಶ್ನೆಗಳು ನನ್ನನ್ನು ಕಾಡಿವೆ.

ಕಾದಂಬರಿಯನ್ನು ಮುಗಿಸಿ, ಪ್ರಕಟಣೆಗೆ ಸಿದ್ಧಪಡಿಸುವ ತನಕ ತಾನು ಬದುಕಿರುತ್ತೇನೆಂಬ ಭಾವನೆ ಅವರಲ್ಲಿ ಇದ್ದಂತಿತ್ತು. ಈ ಹೊತ್ತಿನಲ್ಲಿ ನೆನಪಾಗುವುದು ಕಾಫ್ಕಾನ ಕಾದಂಬರಿಗಳು. ಅವನ ಸಾವಿನ ನಂತರ ಪ್ರಕಟವಾದ, ಇಪ್ಪತ್ತನೆಯ ಶತಮಾನದ ಮಹತ್ವದ ಕಾದಂಬರಿಗಳಲ್ಲಿ ಕೆಲವೆಂದು ಪರಿಗಣಿಸಲಾಗುವ ‘ದಿ ಟ್ರಯಲ್’, ‘ದಿ ಕಾಸಲ್’ ಮುಂತಾದವು ಕಾಫ್ಕಾನ ಅಪೂರ್ಣ ಕಾದಂಬರಿಗಳು. ತನ್ನ ಜೀವಿತಾವಧಿಯಲ್ಲಿ ಮೆಟಮಾರ್ಫಸಿಸ್‌ನಂತಹ ಕೆಲವೇ ಕೃತಿಗಳನ್ನು ಪ್ರಕಟಿಸಿದ ಕಾಫ್ಕಾ ಇನ್ನುಳಿದವುಗಳನ್ನು ಪ್ರಕಟಿಸದೇ ಇದ್ದುದಕ್ಕೆ ಪೂರ್ತಿಗೊಳಿಸಿಲ್ಲ ಎಂಬುದೇ ಕಾರಣವಾಗಿತ್ತು. ಆದರೆ ಈ ಕಾದಂಬರಿಗಳ ಅಪೂರ್ಣತೆಯು ಓದುಗರನ್ನು ಬಾಧಿಸಿಲ್ಲ. ಅವು ಕೊಡುವ ಓದಿನ ಅನುಭವದ ಎದುರು ಕತೆಯು ಕೊನೆ ಮುಟ್ಟಿದಾಗ ತಣಿಯುವ ಕುತೂಹಲವು ನಗಣ್ಯವೆನಿಸಿದೆ.

ಚಿತ್ತಾಲರ ಹಸ್ತಾಕ್ಷರಗಳು ಅನನ್ಯ. ಅವರ ಜೊತೆ ಒಡನಾಡಿದ ಎಲ್ಲರಿಗೂ ಅವು ಪರಿಚಿತ. ಅವುಗಳಲ್ಲಿ ಒಂದು ಬಗೆಯ tentativeness ಇದೆ. ಅದುವೇ ಆ ಅಕ್ಷರಗಳ ಮೋಹಕತೆಗೆ ಕಾರಣವೆಂದು ನನ್ನ ಅಭಿಪ್ರಾಯ. ಅವರ ವಯಸ್ಸಿನ ಕಾರಣದಿಂದ ದಿಗಂಬರದ ಹಸ್ತಪ್ರತಿಯ ಕೊನೆಯ ಭಾಗದ ಬರವಣಿಗೆಯನ್ನು ಓದುವುದು ತುಸು ಕಠಿಣವಾದರೂ ಅಕ್ಷರಗಳ ಆಂತರಿಕ ಸೌಂದರ್ಯ ಮಾಸಿಲ್ಲ. ಉತ್ತರ ಕನ್ನಡದ ನೆಲದ ಮತ್ತು ಕೊಂಕಣಿಯ ಗಾಢ ಸ್ಪರ್ಷವಿರುವ, ಅವರಿಗೇ ವಿಶಿಷ್ಟವಾಗಿರುವ ಭಾಷೆಯ ಪರಿಚಯವಿರದೇ ಅವರು ಬಳಸಿದ ಶಬ್ದಗಳನ್ನು ಗ್ರಹಿಸುವುದು, ಊಹಿಸುವುದು ಸುಲಭವಲ್ಲ. ಇಂಥ ಊಹೆಯ ರೋಮಾಂಚನವನ್ನು ಅನುಭವಿಸುತ್ತ, ಅವರ ಕೈಬರಹದ ವಾಕ್ಯಗಳನ್ನು ನಿಧಾನವಾಗಿ ಹಿಂಬಾಲಿಸುತ್ತ, ಜೊತೆಜೊತೆಗೇ ಪಠ್ಯದ ಪಕ್ಕದ ಖಾಲಿ ಜಾಗದಲ್ಲಿರುವ ಟಿಪ್ಪಣಿಗಳನ್ನು ಗಮನಿಸುತ್ತ, ಒಬ್ಬ ಬರಹಗಾರರಾಗಿ ಚಿತ್ತಾಲರು ಕೃತಿಗೆ ರೂಪಕೊಡುವ ಪ್ರಕ್ರಿಯೆಯನ್ನು ಗಮನಿಸುತ್ತ ನಾನು ದಿಗಂಬರ ಕಾದಂಬರಿಯನ್ನು ಮೊದಲ ಬಾರಿಗೆ ಓದಿದೆ. ಹೀಗೆ ಸೂಕ್ಷ್ಮವಾಗಿ ನಿಧಾನವಾಗಿ ಆಸ್ವಾದಿಸಿ ಓದುವುದೊಂದು ಅಪೂರ್ವ ಅನುಭವವಾಗಿತ್ತು.

ಆರಂಭದ ಕೆಲವು ಅನಿಶ್ಚಯಗಳು ಬರಬರುತ್ತ ಸ್ಪಷ್ಟವಾಗುತ್ತ ಹೋಗುವ ಹಾದಿಯಲ್ಲಿ, ಚಿತ್ತಾಲರ ಬರವಣಿಗೆಯ ಸೂಕ್ಷ್ಮತೆ, ಕೌಶಲ, ಅದು ಆಕಾರ ಪಡೆಯುವ ಕ್ರಮವನ್ನು ಕಾಣಬಹುದು. ಇದು ಮೊದಲ ಕರಡಾದರೂ ಚಿತ್ತುಕಾಟಿಲ್ಲದಂತೆ ಅವರ ಗದ್ಯ ಹರಿದಿದೆ. ಪುಟಗಳ ಬದಿಯ ಮಾರ್ಜಿನ್ನಿನಲ್ಲಿರುವ ಟಿಪ್ಪಣಿಗಳು ಅವರ ಬರವಣಿಗೆಯ ಪ್ರಕ್ರಿಯೆಯನ್ನು ಅಭ್ಯಾಸ ಮಾಡುವವರಿಗೆ ಅಮೂಲ್ಯವಾದ ಒಳನೋಟಗಳನ್ನು ಕೊಡುತ್ತವೆ. ಅವರ ಹಸ್ತಾಕ್ಷರದಲ್ಲಿರುವ ಇಂಥ ಕೆಲವು ಪುಟಗಳನ್ನು ಕಾದಂಬರಿಯುದ್ದಕ್ಕೂ ಅಲ್ಲಲ್ಲಿ ಕಾಣಬಹುದು. ಒಂದು ಪಾತ್ರವು ಬರೆಬರೆಯುತ್ತ ರೂಪತಳೆಯುವಾಗ ಲೇಖಕ ಯೋಚಿಸುವ ಹಲವು ಮಗ್ಗಲುಗಳಿಗೆ ಸಾಕ್ಷಿಯಾಗುವಂತೆ ಈ ಟಿಪ್ಪಣಿಗಳಿವೆ. ಉದಾಹರಣೆಗೆ, ಪಾತ್ರವೊಂದು ಲಿಫ್ಟ್‌ನಲ್ಲಿ ಕಚೇರಿಗೆ ಹೋಗುವಾಗಿನ ಸನ್ನಿವೇಶವನ್ನು ವಿವರಿಸುವ ಪುಟದ ಪಕ್ಕ ‘ಈಸ್ ಶೀ ಅಟ್ರ್ಯಾಕ್ಟಿವ್’ ಎಂಬ ಪ್ರಶ್ನೆಯನ್ನು ಕೇಳಿಕೊಂಡಿದ್ದಾರೆ. ಅವಳು ಆಕರ್ಷಕವಾಗಿದ್ದರೆ ಕಾಣುವ ದಾರಿಯೇ ಬೇರೆ, ಅಲ್ಲವಾದರೆ ಉಂಟಾಗುವ ಪರಿಣಾಮವೇ ಬೇರೆ ಎಂಬುದನ್ನು, ಈ ಸಣ್ಣ ವಿವರದ ಮೂಲಕ ಅದೂ ಅತ್ಯಂತ ಸಮರ್ಪಕ ಬಿಂದುವಿನಲ್ಲಿ ಗುರುತಿಸುವ ಕಥನಕೌಶಲದ ಬಗ್ಗೆ ಅಚ್ಚರಿಯಾಗದೇ ಇರದು. ಹಸ್ತಪ್ರತಿಯ ಮೊದಲ ಪುಟದಲ್ಲಿ ಪಾತ್ರಗಳ ವಯಸ್ಸನ್ನು ಸಂದರ್ಭ ಸಹಿತ ನಮೂದಿಸಿರುವ ರೀತಿಯು, ಒಂದು ಕಥನದ ಬಂಧವನ್ನು ಬಿರುಕಿಲ್ಲದೇ, ವಿರೋಧಾಭಾಸಗಳಿಲ್ಲದೇ ಕಟ್ಟಲು ಎಂಥ ಸ್ಪಷ್ಟತೆಯ ಅಗತ್ಯವಿದೆಯೆಂಬುದನ್ನು ತಿಳಿಸುವಂತಿದೆ.

ಈ ಕಾದಂಬರಿಯನ್ನು ಮುದ್ರಣಕ್ಕೆ ಸಿದ್ಧಗೊಳಿಸುವ ಜವಾಬ್ದಾರಿಯು ನನಗೆ ಭಾವನಾತ್ಮವಾಗಿ ಕಷ್ಟದ ಸಂಗತಿಯಾಗಿತ್ತು. ಕೃತಿಯ ಮೊತ್ತಮೊದಲ ಓದುಗನೆಂಬ ರೋಮಾಂಚನದ ಜೊತೆಗೇ ಇದನ್ನು ತಿದ್ದಲು ಚಿತ್ತಾಲರು ನಮ್ಮ ನಡುವೆ ಇಲ್ಲ ಅನ್ನುವ ಕೊರಗು ಕಾಡುತ್ತಿತ್ತು. ಓದಿನುದ್ದಕ್ಕೂ ಮಾತಿನಲ್ಲಿ ಇಡಲಾಗದ ವಿಚಿತ್ರ ಉದ್ವೇಗವೊಂದು ನನ್ನನ್ನು ಆವರಿಸಿತ್ತು. ಅವರು ಕಥೆಯ ಅಚ್ಚುಕಟ್ಟುತನದ ಬಗ್ಗೆ ಬಹಳ ಯೋಚಿಸುತ್ತಿದ್ದರು. ಕಥೆಯ ಬಂಧ, ವಾಕ್ಯರಚನೆ, ಶಬ್ದಗಳ ಆಯ್ಕೆಯಲ್ಲಿ ಎಂದೂ ಸುಲಭ ದಾರಿಯನ್ನು ಹಿಡಿದವರಲ್ಲ. ಅವರು ಬದುಕಿದ್ದರೆ ಈ ಕಾದಂಬರಿಯನ್ನು ಯಾವ ಬಗೆಯಲ್ಲಿ ತಿದ್ದುತ್ತಿದ್ದರೆಂಬುದಕ್ಕೆ ಕೆಲವು ಸೂಚನೆಗಳು ವಹಿಯ ಪುಟಗಳ ಬದಿಯ ಜಾಗದಲ್ಲಿರುವ ಟಿಪ್ಪಣಿಗಳಲ್ಲಿ ದೊರೆಯುತ್ತವೆ. ಆದರೆ ಈ ಕೃತಿಯನ್ನು ಇದ್ದ ಹಾಗೆಯೇ ಪ್ರಸ್ತುತಪಡಿಸಿವುದು ಮುಖ್ಯವೆನಿಸಿದ್ದರಿಂದ ಅಪರೂಪಕ್ಕೆ ಕಾಗುಣಿತವನ್ನು ತಿದ್ದಿದ್ದು ಬಿಟ್ಟರೆ ಮತ್ಯಾವುದಕ್ಕೂ ನಾನು ಕೈಹಚ್ಚಲು ಹೋಗಲಿಲ್ಲ. ಅದು ನನ್ನಿಂದ ಸಾಧ್ಯವೂ ಇರಲಿಲ್ಲ. ಚಿತ್ತಾಲರ ಮೊದಲ ಕರಡು ಹೇಗಿರುತ್ತದೆ ಎಂಬುದು ಅವರ ಸಾಹಿತ್ಯದ ಅಭ್ಯಾಸಿಗಳಿಗೂ, ಅಭಿಮಾನಿಗಳಿಗೂ, ಅವರ ಓದುಗರಿಗೂ ತಿಳಿಯಲಿ ಎಂಬುದು ಈ ಕಾದಂಬರಿಯ ಪ್ರಕಟನೆಯ ಉದ್ದೇಶಗಳಲ್ಲೊಂದು.

ಕೃತಿ: ದಿಗಂಬರ (ಕಾದಂಬರಿ)
ಲೇ: ಯಶವಂತ ಚಿತ್ತಾಲ
ಪ್ರ: ಬಹುವಚನ ಪ್ರಕಾಶನ
ಸಂ: 63625 88659

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.