‘ಅಭಿಜಾತ ಮ್ಯೂಸಿಕ್ ಫೋರಮ್’ ವಾರಾಣಸಿಯಲ್ಲಿ ಆಯೋಜಿಸಿದ ಮೂರು ದಿನಗಳ ನಿವಾಸಿ ಸಂಗೀತ ಕಾರ್ಯಕ್ರಮದ ವಿವರ ನೋಡಿದಾಗ ನನಗೂ ಹೋಗುವ ಆಸೆಯಾಗಿದ್ದು ಸುಳ್ಳಲ್ಲ. ಪ್ರತಿವರ್ಷ ಲೋನಾವಲಾದಲ್ಲಿ ‘ಖಂಡಾಲಾ ಲೋನಾವಲಾ ನಿವಾಸಿ ಸಂಗೀತ ಸಮ್ಮೇಳನ’ ನಡೆಸುತ್ತಿದ್ದ ಆಯೋಜಕರು ಈ ಬಾರಿ ದೂರದ ವಾರಾಣಸಿಯಲ್ಲಿ ‘ಕಾಶಿ ವಿಶ್ವನಾಥ ನಿವಾಸಿ ಸಂಗೀತ ಸಮ್ಮೇಳನ’ವನ್ನು ಆಯೋಜಿಸಿದ್ದರು.

ನನ್ನ ಸಂಗೀತ ಗುರುಗಳಾದ ಅಪೂರ್ವ ಗೋಖಲೆಯವರು ಅಲ್ಲಿ ಹಾಡುತ್ತಿದ್ದದ್ದು ನನಗೆ ಆಕರ್ಷಣೆಯ ಕೇಂದ್ರವಾಗಿತ್ತು. ಕಲಾವಿದರಾದ ಉಲ್ಲಾಸ್ ಕಶಾಲ್ಕರ್, ಸುರೇಶ್ ತಲವಾಲ್ಕರ್, ಅಶ್ವಿನಿ ಭಿಡೆ ದೇಶಪಾಂಡೆ, ಮಂಜಿರಿ ಅಸನಾರೆ, ನಂದಿನಿ ಭಿಡ್ಕರ್, ಭಾರತಿ ಪ್ರತಾಪ್, ಜಯತೀರ್ಥ ಮೇವುಂಡಿ ಅವರ ಗಾಯನ, ಕಥಕ್ ನೃತ್ಯ, ಸಂಗೀತದ ಕುರಿತ ಚರ್ಚೆ ಇವೆಲ್ಲವುಗಳು ಅಲ್ಲಿ ನಡೆಯಲಿದ್ದವು.

ಠಾಣೆಯಲ್ಲಿರುವ ಗುರುಗಳ ಮನೆ ತಲುಪಿ, ಮರುದಿನ ಅಲ್ಲಿಂದ ಗುರುಬಂಧು ಪ್ರಿಯಾಂಕ ಭಿಸೆ ಮತ್ತೆ ಇಬ್ಬರು ತಬಲಾ ಕಲಾವಿದರೊಂದಿಗೆ ರೈಲು ಪ್ರಯಾಣ ಮಾಡಿ ನಾವು ವಾರಾಣಸಿ ಸೇರಿದೆವು. ಕಾರ್ಯಕ್ರಮ ನಡೆಯುವ ಸ್ಥಳವಾದ ‘ಮಾರವಾರಿ ಸೇವಾ ಸಂಘ’ವನ್ನು ನಾವು ತಲುಪಿದಾಗ ಉದ್ಘಾಟನೆ ನಡೆದು, ವಾರಾಣಸಿಯ ಪ್ರಸಿದ್ಧ ತಬಲಾ ವಾದಕ ಪುಂಡಲೀಕ ಭಾಗವತ್ ಅವರಿಂದ ತಬಲಾ ವಾದನ ನಡೆಯುತಿತ್ತು.

ವಾರಾಣಸಿಯ ಸುಂದರವಾದ ಅಸ್ಸಿ ಘಾಟ್ನ ಸಮೀಪದಲ್ಲೇ ಇದ್ದ ಕಾರ್ಯಕ್ರಮದ ಸ್ಥಳದಿಂದ ನದಿ ತೀರಕ್ಕೆ ಹೋಗುವುದು ತುಂಬಾ ಸುಲಭವಾಗಿತ್ತು. ಇಲ್ಲಿ ಪ್ರತಿದಿನ ಮುಂಜಾನೆ ಹಾಗೂ ಸಂಧ್ಯಾಕಾಲದಲ್ಲಿ ನಡೆಯುವ ಗಂಗಾರತಿಯ ಬಗ್ಗೆ ತುಂಬಾ ಕೇಳಿದ್ದೆ. ಆದರೆ ಅದನ್ನು ಇಷ್ಟು ಬೇಗ ನೋಡುತ್ತೇನೆ ಎಂದುಕೊಂಡಿರಲಿಲ್ಲ. ಎಷ್ಟು ಬೇಗ ಬೆಳಗಾಗುತ್ತದೋ ಎಂದುಕೊಂಡೇ ಮಲಗಿದ್ದ ಕಾರಣ, ಮುಂಜಾವಿನಲ್ಲಿ ಕೊರೆಯುವ ಚಳಿಯಿದ್ದರೂ ಎದ್ದು ಹೊರಡುವುದು ಕಷ್ಟವಾಗಲಿಲ್ಲ. ಸೂರ್ಯ ಮೂಡುವುದಕ್ಕಿಂತ ಮುಂಚೆ ನಡೆಯುವ ಗಂಗೆಗೆ ಆರತಿ ಮಾಡುವ ಆ ಭವ್ಯತೆಯನ್ನು ಅನುಭವಿಸಲು ಕಾತರಿಸಿದ್ದೆ. ಒಂದೇ ಬಗೆಯ ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ದೊಡ್ಡ ಗಾತ್ರದ ಆರತಿ ಹಿಡಿದು ಆರತಿ ಮಾಡುತ್ತಿದ್ದರೆ, ಒಂದುಕ್ಷಣ ಪ್ರಕೃತಿಯೊಂದಿಗೆ ನೇರ ಸಂವಹನ ನಡೆಸಿದಂತೆ ಅನಿಸಿತು.

ಗಂಗಾಪೂಜೆ ಮುಗಿಯುತ್ತಿದ್ದಂತೆ ಪ್ರತಿನಿತ್ಯ ನಡೆಯುವ ‘ಸುಬಹ್-ಎ-ಬನಾರಸಿ’ ಎಂಬ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಅಲ್ಲೇ ಸಜ್ಜುಗೊಂಡಿದ್ದ ವೇದಿಕೆಯಲ್ಲಿ ಆರಂಭವಾಯಿತು. ನಮ್ಮ ಅದೃಷ್ಟವೋ ಎಂಬಂತೆ ಆ ದಿನ ಕಾರ್ಯಕ್ರಮ ನಡೆಸಿಕೊಟ್ಟವರು ಉಲ್ಲಾಸ್ ಕಶಾಲ್ಕರ್ ಅವರ ಹಿರಿಯ ಶಿಷ್ಯ ಪ್ರೊ.ಓಜಸ್ ಪ್ರತಾಪ್ ಸಿಂಗ್. ದೆಹಲಿ ಯುನಿವರ್ಸಿಟಿಯಲ್ಲಿ ಸಂಗೀತದ ಪ್ರಾಧ್ಯಾಪಕರಾದ ಅವರು ಉತ್ತಮ ಚಿಂತನಶೀಲ ಗಾಯಕರು. ಅವರು ಹಾಡಿದ ರಾಗ ರಾಮಕಲಿಯ ಸ್ವರಗಳು ಸೂರ್ಯೋದಯದ ಬಣ್ಣಗಳೊಂದಿಗೆ ಸೇರಿ ವಾತಾವರಣದಲ್ಲಿ ಹೊಸ ರಂಗನ್ನು ತಂದವು. ಘಾಟ್ನಿಂದ ಹೊರಬಂದಂತೆ ಎದುರಾದ ಅಂಗಡಿಯಲ್ಲಿ ಮಣ್ಣಿನ ಕುಡಿಕೆಯ ಚಹಾ ಕುಡಿದು ಹೊರಟೆವು.

ಕಾರ್ಯಕ್ರಮದ ಮೊದಲ ಗಾಯನ ನಡೆಸಿಕೊಟ್ಟವರು ನಿಶಾದ್ ಬಾಕ್ರೆ. ರಾಗ ಭೈರವ್ ಮತ್ತು ಶುಕ್ಲ ಬಿಲಾವಲ್ ಅನ್ನು ಹಾಡಿದರು. ಆ ನಂತರ ವೇದಿಕೆಯೇರಿದ ಜಯತೀರ್ಥ ಮೇವುಂಡಿಯವರು ರಾಗ ಲಲತ್ ಮತ್ತು ಬೈರಾಗಿ ಭೈರವ್ ಹಾಡಿದರು. ಮೇವುಂಡಿಯವರ ಗಾಯನದಲ್ಲಿನ ತೀವ್ರತೆ, ತಾನ್ ಗಾಯನದಲ್ಲಿನ ವೇಗ ಕೇಳುಗರನ್ನು ಬಹು ಬೇಗ ತನ್ನ ತೆಕ್ಕೆಗೆ ಕರೆದುಕೊಂಡಿತು. ನಂತರದಲ್ಲಿ ಕೃಷ್ಣ ಸಾಳುಂಕೆ ಮತ್ತು ರೋಹಿತ್ ಕವಳೆ ಅವರು ಪಖಾವಾಜ್ ವಾದನವನ್ನು ಪ್ರಸ್ತುತ ಪಡಿಸಿದರು. ಪಖವಾಜ್ ವಾದ್ಯದ ಸ್ವತಂತ್ರ ವಾದನ ಕೇಳಲು ಸಿಗುವುದು ತುಂಬಾ ಅಪರೂಪ. ಕೃಷ್ಣ ಅವರು ಬಾಯಿಯಲ್ಲಿ ಬೋಲ್ ಹೇಳುತ್ತಾ ಪಡಂತ್ ಮಾಡುವ ಕೌಶಲ ಕಂಡು ನಾನು ಬೆರಗಾಗಿರುವೆ.

ಹಿರಿಯ ಕಲಾವಿದ ವಿಶ್ವನಾಥ ಕಾನ್ಹಾರೆ ಅವರ ಹಾರ್ಮೋನಿಯಂ ಸೋಲೋ ಮನಸೂರೆಗೊಂಡಿತು. ತಮ್ಮ ವಾದ್ಯದಲ್ಲಿ ಅವರು ಹೊರತಂದ ಮಧುವಂತಿ ರಾಗದ ಸೂಕ್ಷ್ಮಾತಿಸೂಕ್ಷ್ಮ ಚಲನೆಗಳಿಗೆ ಕೇಳುಗರಲ್ಲಿ ‘ವಾಹ್, ಕ್ಯಾ ಬಾತ್’ ಎಂಬ ಉದ್ಗಾರಗಳೊಂದಿಗೆ ಹೊರಬರುತ್ತಿದ್ದವು.

ಮೊದಲ ದಿನದ ಕೊನೆಯ ಕಾರ್ಯಕ್ರಮ ಉಲ್ಲಾಸ್ ಕಶಾಲ್ಕರ್ ಅವರ ಗಾಯನ. ಬಹು ನಿರೀಕ್ಷೆಯಿಂದ ಕಾದು ಕುಳಿತಿದ್ದ ಈ ಗಾಯನ ಎಂದೂ ನಿರಾಸೆಗೊಳಿಸುವಂಥದ್ದೇ ಅಲ್ಲ. ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯೆಯ ಧಾರೆಯೇ ಇವರ ಗಾಯನದಲ್ಲಿರುತ್ತದೆ. ಇವರು ಹಾಡಿದ ರಾಗ ಜೈಜೈವಂತಿ ಮತ್ತು ಪರಜ್ಗಳು ಯಾವತ್ತೂ ನೆನಪಲ್ಲುಳಿಯುವಂಥವು.

ಎರಡನೆಯ ದಿನ ನಂದಿನಿ ಭಿಡ್ಕರ್ ಅವರ ಗಾಯನದಲ್ಲಿ ಬಹಾದ್ದೂರಿ ತೋಡಿ ಮತ್ತು ದೇವಗಿರಿ ಬಿಲಾವಲ್ ಸಾದರಗೊಂಡಿತ್ತು. ಆ ನಂತರ ನಡೆದದ್ದು ಅಭಿಷೇಕ್ ಲಾಹಿರಿ ಅವರ ಸರೋದ್. ಬೆಂಗಳೂರಿನವರಾದ ಆಗ್ರಾ ಘರಾಣೆಯ ಹಾಡುಗಾರ್ತಿ ಭಾರತಿ ಪ್ರತಾಪ್ ಅವರನ್ನು ಅಲ್ಲಿ ನೋಡಿದಾಗ ತುಂಬಾ ಸಂತೋಷವಾಗಿತ್ತು. ರಾಗ ಜೋನ್ಪುರಿ ಮತ್ತು ವೃಂದಾವನಿ ಸಾರಂಗ ರಾಗಗಳನ್ನು ತಮ್ಮ ಶೈಲಿಯ ವೈಶಿಷ್ಟ್ಯವಾದ ನೋಂತೋಂ ಆಲಾಪದೊಂದಿಗೆ ಹಾಡಿದ್ದರು.

ಮಧ್ಯಾಹ್ನ ಊಟದ ವಿರಾಮದ ಬಳಿಕ ಶ್ರುತಿ ವಿಶ್ವಕರ್ಮಾ ಅವರ ಗಾಯನದಲ್ಲಿ ಭೀಂಪಲಾಸ್ ಅನ್ನು ಕೇಳುವ ಅವಕಾಶವಾಯಿತು. ಆ ನಂತರ ರುತುಜಾ ಲಾಡ್ ಮತ್ತು ಧನಶ್ರೀ ಗೈಸಿಸ್ ಅವರ ಗಾಯನದಲ್ಲಿ ರಾಗ ಮುಲ್ತಾನಿ ಮತ್ತು ದಾದ್ರಾಗಳ ಪ್ರಸ್ತುತಿಯಾಗಿತ್ತು. ತಮ್ಮ ಗುರುಗಳು ರಚಿಸಿದ ಬಂದಿಶ್ಗಳನ್ನು ತಾವು ಪಡೆದ ಗಟ್ಟಿ ತರಬೇತಿಯಲ್ಲಿ ಪಳಗಿ ಸುಶ್ರಾವ್ಯವಾಗಿ ಮೂಡಿ ಬಂದ ಗಾಯನವದು.

ಸಂಗೀತ ಕಾರ್ಯಕ್ರಮಗಳು ಮುಗಿದು, ಮತ್ತೆ ಅದರ ಬಗ್ಗೆ ಚರ್ಚಿಸುತ್ತಾ, ಕಣ್ಣು ಮುಚ್ಚಿದರೂ ಮತ್ತೆ ಅಲ್ಲೇ ಸುಳಿವ ನಾದದ ಗುಂಗಿನಿಂದಾಗಿ ಪ್ರತಿದಿನ ರಾತ್ರಿ ಮಲಗುವುದು 1 ಗಂಟೆ ದಾಟಿದರೂ ಬೆಳಿಗ್ಗೆ ಮತ್ತೆ ಐದಕ್ಕೆದ್ದು ಚಳಿಯಲ್ಲಿ ಬೆಚ್ಚಗೆ ಹೊದ್ದುಕೊಂಡು ನದಿ ತಟದಲ್ಲಿ ‘ಸುಬಹ್-ಎ-ಬನಾರಸಿ’ ಕಾರ್ಯಕ್ರಮ ಕೇಳುವ ತವಕ ಮೂರು ದಿನಗಳಲ್ಲೂ ಕಡಿಮೆಯಾಗಿರಲಿಲ್ಲ. ಮರುದಿನದ ಬೆಳಗ್ಗಿನ ಗಂಗಾತೀರದ ಕಾರ್ಯಕ್ರಮದಲ್ಲಿ ಮಂಜರಿ ಅಲೆಗಾಂವಕರ್ ಹಾಡಿದ್ದರು. ರಾಗ ಅಹೀರ್ಭೈರವದಲ್ಲಿ ಸ್ವರಗುಂಪುಗಳನ್ನು ಹಿಂಜುತ್ತಾ ರಾಗವನ್ನು ಅವರು ಬಿಡಿಸಿಡುತ್ತಿದ್ದರೆ, ದೂರದಲ್ಲಿ ಉದಯಿಸುತ್ತಿದ್ದ ಸೂರ್ಯ ಮೇಲೇರುತ್ತಿದ್ದ.

ಸಂಗೀತದ ಕುರಿತು ತುಂಬಾ ಆಸಕ್ತಿದಾಯಕವಾದ ಮಾತುಕತೆಯೂ ಸಮ್ಮೇಳನದಲ್ಲಿ ನಡೆಯಿತು. ‘ಇಂದಿನ ಕಾಲಮಾನದಲ್ಲಿ ಸಾಂಪ್ರದಾಯಿಕ ರಾಗ ಸಂಗೀತ’ ಎಂಬ ವಿಷಯದ ಕುರಿತು ಸುರೇಶ್ ತಲವಾಲ್ಕರ್, ಓಜಸ್ ಪ್ರತಾಪ್ ಸಿಂಗ್, ಪುಂಡಲೀಕ ಭಾಗವತ್ ಮುಂತಾದ ಹಿರಿಯ ಕಲಾವಿದರು ಸಂವಾದ ನಡೆಸಿಕೊಟ್ಟರು.

ವಿರಾಮದ ನಂತರ ಬಹಳ ಅಪರೂಪದ ‘ಶಂಕರ್ ಗಿಟಾರ್’ ವಾದನ ಕಾರ್ಯಕ್ರಮವಿತ್ತು. ಇದನ್ನು ಅಭಿವೃದ್ಧಿ ಪಡಿಸಿದವರು ಅಪರೂಪದ ಕಲಾವಿದೆ ಕಮಲಾ ಶಂಕರ್ ಅವರು. ಇವರ ವಾದನದಲ್ಲಿ ರಾಗ ಮಧುವಂತಿ ತುಂಬಾ ಸುಶ್ರಾವ್ಯವಾಗಿ ಮೂಡಿಬಂತು. ರಾಮದಾಸ್ ಪಳ್ಸುಳೆ ಅವರ ತಬಲಾ ಸೋಲೋ ಬಳಿಕ ಅಪೂರ್ವ ಗೋಖಲೆ ಅವರ ಗಾಯನ ನಡೆಯಿತು. ರಾಗ ಮಾರವಾ ಮತ್ತು ಶಾಮ್ ಕಲ್ಯಾಣ್ಗಳನ್ನು ತಮ್ಮ ಎಂದಿನ ಶಿಸ್ತುಬದ್ಧವಾದ ಶೈಲಿಯಲ್ಲಿ ಹಾಡಿದ ಅಪೂರ್ವ ಅವರ ಹಿಂದೆ ಕುಳಿತು ತಂಬೂರ ನುಡಿಸುವ ಅವಕಾಶ ನನಗಾಯಿತು.

ಮೂರು ದಿನಗಳ ಈ ಕಾರ್ಯಕ್ರಮದ ಕೊನೆಯ ಕಾರ್ಯಕ್ರಮಗಳಾಗಿ ನಡೆದದ್ದು ಪುಶ್ಕರ್ ಭಾಗವತ್ ಅವರ ವಯೋಲಿನ್ ವಾದನ ಮತ್ತು ಡಾ.ಅಶ್ವಿನಿ ಭಿಡೆ ಅವರ ಗಾಯನ. ರಾತ್ರಿ 11 ಗಂಟೆಗೆ ಹಿಂದಿರುಗುವ ಟ್ರೈನ್ ಹತ್ತಬೇಕಿದ್ದ ನಾನು ವಯೋಲಿನ್ ಕೇಳಿಕೊಂಡು ಆಟೊ ಹಿಡಿಯಲು ಪರದಾಡಿಕೊಂಡು ಹೇಗೋ ಸ್ಟೇಷನ್ ತಲುಪಿದರೆ, ಫೋನ್ನಲ್ಲಿ ಅಶ್ವಿನಿ ಭಿಡೆಯವರ ಗಾಯನದಲ್ಲಿ ರಾಗ ಸಾವನಿಯ 10-10 ನಿಮಿಷಗಳ ರೆಕಾರ್ಡಿಂಗ್ ಅಪೂರ್ವ ಮೇಡಂ ಪೋನ್ನಿಂದ ಬಂದು ತಲುಪುತ್ತಿತ್ತು. ಇಯರ್ ಫೋನ್ ಕಿವಿಗೇರಿಸಿದ್ದೆ.

ಗಾಯನ-ವಾದನದಲ್ಲಿ ಒಳ್ಳೊಳ್ಳೆಯ ಜಾಗ ಬಂದ ಕೂಡಲೇ ಅದನ್ನು ಗುರುತಿಸಿ-ಅನುಭವಿಸಿ-ಪ್ರಶಂಸಿಸುವ ಶ್ರೋತೃಗಳ ದಂಡು ಅಲ್ಲಿತ್ತು. ವೇದಿಕೆಯ ಮುಂಭಾಗದಲ್ಲಿ ಹಾಸಿದ ಜಮಖಾನೆಗಳು ತುಂಬುವಷ್ಟು ಸಂಖ್ಯೆಯ ಯುವ ಕಲಾವಿದರು ಸಂಗೀತ ಕೇಳಲು ನೆರೆದಿದ್ದರು. ಹಾಡಲು ಬಂದಿದ್ದ ಯುವ ಗಾಯಕ/ಗಾಯಕಿಯರು ತಮ್ಮ ಹಿಂದಿನ ಪೀಳಿಗೆಯ ಗುರುಜನರಷ್ಟೇ ತಾವೂ ಬದ್ಧತೆಯುಳ್ಳವರಾಗಿದ್ದರು. ಪರಂಪರೆಯ ಉತ್ತಮಾಂಶಗಳನ್ನು ಕೈಬಿಡದೆ, ಆಧುನಿಕ ಕಾಲದಲ್ಲಿ ಜೈಸಬಲ್ಲವರಾಗಿದ್ದರು. ಕಲಾವಿದರು, ವಿದ್ಯಾರ್ಥಿಗಳು, ಶ್ರೋತೃಗಳ ಮಧ್ಯೆ ಏರ್ಪಟ್ಟ ಆತ್ಮೀಯತೆಯನ್ನು ಅನುಭವಿಸುವ ಸಂತೋಷವಿತ್ತು.

ಸಂಗೀತದ ನಡುವಿನಲ್ಲಿ ಸಿಕ್ಕಿದ ಸಣ್ಣಪುಟ್ಟ ಬ್ರೇಕ್ಗಳಲ್ಲೇ ನಗರ ಸುತ್ತಾಡುವ ಅವಕಾಶವನ್ನು ನಾವು ಎಲ್ಲಿಯೂ ಬಿಟ್ಟುಕೊಡಲಿಲ್ಲ. ವಿಶೇಷವೆಂದರೆ ಬನಾರಸ್ ಸಿಟಿಯಲ್ಲಿ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯೇ ಇಲ್ಲದಿರುವುದು. ಅಲ್ಲಿ ಇಲ್ಲಿ ಎಲ್ಲ ಕಡೆಯಲ್ಲೂ ಸಿಗುವ ಎಲೆಕ್ಟ್ರಿಕ್ ಆಟೊ ಹತ್ತಿ ಗುರುಗಳ ಜೊತೆಯಲ್ಲಿ ಕಾಶಿ ವಿಶ್ವೇಶ್ವರನ ದರ್ಶನ ಮಾಡಿದೆವು, ಬನಾರಸ್ ಸೀರೆ ಅಂಗಡಿಗಳನ್ನು ತಿರುಗಿದೆವು, ಕೈ ಬೀಸಿ ಕರೆಯುತ್ತಿದ್ದ ದಾರಿ ಬದಿಯ ಲಸ್ಸಿ ಅಂಗಡಿಗಳಿಗೆ ಭೇಟಿ ಕೊಟ್ಟೆವು. ಕುಡಿಕೆಗಟ್ಟಲೆ ಟೀ ಕುಡಿಯುತ್ತಾ ಕಛೇರಿಗಳ ವಿಮರ್ಶೆ ಮಾಡಿದೆವು. ಸದಾಕಾಲ ನೆನಪಿನಲ್ಲುಳಿಯುವ ಈ ಕಾರ್ಯಕ್ರಮದಿಂದ ಪಡೆದ ಅನುಭವ ತುಂಬಾ ದೊಡ್ಡದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.