ನಿಮ್ಮ ಕರ್ನಾಟಕ ಸಂಗೀತ ಜೀವನದ ಹಾದಿಯನ್ನೊಮ್ಮೆ ಅವಲೋಕನ ಮಾಡುವಿರಾ?
ನನ್ನದು ಸಂಗೀತದಲ್ಲಿ ಬೇರೂರಿದ ಮನೆತನ. ಕೀರ್ತಿಶೇಷ ಕೊಳತ್ತೂರು ರಾಮಕೃಷ್ಣ ಶಾಸ್ತ್ರಿಗಳು ನನ್ನ ತಾತ. ಅವರು ವಾಗ್ಗೇಯಕಾರರಾಗಿದ್ದರು. ನನ್ನ ತಂದೆ ದಿ. ಸತ್ಯನಾಥ್ ಅವರಿಂದಲೇ ಸಮಸ್ತ ಸಂಗೀತವನ್ನು ಪಡೆದುಕೊಂಡೆ. ಹನ್ನೆರಡನೆ ವಯಸ್ಸಿನಿಂದಲೇ ಪೂರ್ಣ ಪ್ರಮಾಣದ ಕಛೇರಿಗಳನ್ನು ನೀಡುತ್ತಾ ಬಂದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಮಾಡುತ್ತಿದ್ದಾಗ ಗಾನಕಲಾಭೂಷಣ ಆನೂರು ರಾಮಕೃಷ್ಣರ ಸಂಪರ್ಕವಾಗಿ ಅವರಿಂದ ಸಂಗೀತದಲ್ಲೇ ನೆಲೆಯೂರುವಂತಾಯಿತು. ಬಾಲಮುರಳಿಕೃಷ್ಣ ಅವರ ಕೃತಿಗಳನ್ನು ಪ್ರಸ್ತುತಪಡಿಸಿದುದರ ಸಲುವಾಗಿ ಚೆನ್ನೈನ ಮುರಳೀ ರವಲಿ ಟ್ರಸ್ಟ್ ವತಿಯಿಂದ ಚಿನ್ನದ ಪದಕ ಬಂತು. ದೇಶ ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿದ್ದು, ಅನೇಕ ಧ್ವನಿಮುದ್ರಣಗಳನ್ನೂ ತಂದಿದ್ದೇನೆ.
ಕಾಲೇಜು ದಿನಗಳಲ್ಲೇ ನಿಮ್ಮ ಸಂಗೀತ ಬದುಕು ರೋಚಕ ತಿರುವು ಪಡೆದುಕೊಂಡಿತು ಎಂದಿರಿ. ಅದು ಹೇಗೆ?
ನಾನು ಮಹಾರಾಣಿ ಕಾಲೇಜಿನಲ್ಲಿ ಮೊದಲನೇ ಬಿ.ಎ. ಮಾಡುತ್ತಿದ್ದಾಗ ಅದಾಗಲೇ ಸೆಂಟ್ರಲ್ ಕಾಲೇಜಿನಲ್ಲಿ ಆರಂಭವಾಗಿದ್ದ ಸಂಗೀತ, ನೃತ್ಯ ಹಾಗೂ ನಾಟಕ ವಿಭಾಗದ ಮುಖ್ಯಸ್ಥರು ಬಲವಂತವಾಗಿ ಸೆಂಟ್ರಲ್ ಕಾಲೇಜಿಗೆ ಸೇರುವಂತೆ ಹೇಳಿ, ಅಡ್ಮಿಷನ್ ಕೊಡಿಸಿದರು. ಅದಾಗಿ ಕೆಲದಿನಗಳ ನಂತರ ‘ನೀನು ಸಭೆಗಳಲ್ಲಿ ಕಛೇರಿಗಳನ್ನು ನೀಡಬಾರದು’ ಎಂದು ಆದೇಶಿಸಿದರು. ಈ ಆಘಾತದ ವಿಷಯವನ್ನು ನನ್ನ ತಂದೆಯವರಲ್ಲಿ ತಿಳಿಸಿದಾಗ, ಅವರು ‘ನೀನು ಕಾಲೇಜನ್ನೇ ಬಿಟ್ಟುಬಿಡು, ಸಂಗೀತದ ಅನುಸಂಧಾನವನ್ನು ಬಿಡಬೇಡ’ ಎಂದು ದೃಢವಾಗಿ ಹೇಳಿದರು. ಇದು ಅವರು ನನ್ನ ಸಂಗೀತಕ್ಕೆ ಹಾಕಿದ ಭದ್ರಪಾಯ.
ನಿಮ್ಮ ದೃಷ್ಟಿಯಲ್ಲಿ ಸಂಗೀತ ಕಛೇರಿ ಸಾರ್ಥಕತೆ ಪಡೆಯುವುದು ಯಾವಾಗ?
ಸಂಗೀತ ಕಛೇರಿಗಳೆಂದರೆ ಭಾವನೆಗಳ ಸಾಕ್ಷಾತ್ಕಾರ. ಇದಷ್ಟೇ ಏಕಮಾತ್ರ ಉದ್ದೇಶವಾದಲ್ಲಿ ಕಛೇರಿಗಳು ಸಾರ್ಥಕತೆಯನ್ನು ಪಡೆಯುತ್ತವೆ. ಲಯದ ಅಬ್ಬರವನ್ನು ಮಿತಿಗೊಳಿಸಿ, ವಿನಿಕೆಯನ್ನು ಹೃದ್ಯಗೊಳಿಸುವುದು ಕಛೇರಿಯ ಪರಮ ಉದ್ದೇಶವೆಂಬುದು ನನ್ನ ಅನಿಸಿಕೆ. ಇದನ್ನು ನಾನು ಮನೋಧರ್ಮ ಸಂಗೀತದಲ್ಲಿ ಅಭಿವ್ಯಕ್ತಿಸುತ್ತೇನೆ. ಜೊತೆಗೆ ಲಕ್ಷ್ಯ-ಲಕ್ಷಣಗಳು ಸರಸ್ವತಿಯ ಎರಡು ಕಣ್ಣುಗಳು. ಲಕ್ಷಣ ಗೊತ್ತಿದ್ದು ಪ್ರದರ್ಶನದಲ್ಲಿ ಎಡವಿದರೂ ಕಛೇರಿ ಕೆಡುತ್ತದೆ. ಲಕ್ಷ್ಯ ಗೊತ್ತಿದ್ದು ಲಕ್ಷಣವನ್ನು ಅಳವಡಿಸಿಕೊಳ್ಳದಿದ್ದರೆ ಕಛೇರಿಯ ರಸಮಯ ಮನೋಧರ್ಮಕ್ಕೆ ಧಕ್ಕೆಯಾಗುತ್ತದೆ.
ಗಾನಕಲಾಭೂಷಣ ಪ್ರಶಸ್ತಿ ನಿಮಗೆ ಈ ಬಾರಿ ಒಲಿದಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಅಧ್ಯಕ್ಷತೆಯ ಪರಿಷತ್ ಪ್ರತಿವರ್ಷ ಕಲಾವಿದರಿಗೆ ಪುರಸ್ಕಾರ ನೀಡಿ ಸತ್ಕರಿಸುವುದು ಹೆಮ್ಮೆಯ ಸಂಗತಿ. ಈ ಬಾರಿ ನನಗೊಲಿದ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ. ನನ್ನ ಗುರುಗಳು ಹಾಗೂ ಇನ್ನಿತರ ಸ್ಥಳೀಯ ವಿದ್ವಾಂಸರಿಂದ ಪೋಷಿಸಲಾದ ಸಂಸ್ಥೆಯಿಂದಲೇ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಅದೃಷ್ಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.