ಫಲವತ್ತಾದ ಇಪ್ಪತ್ತೈದು ಎಕರೆ ತೋಟದ ಭೂಮಿಯ ಒಡೆಯನಾಗಿದ್ದ ನಿಂಗಪ್ಪ ಅನಕ್ಷರಸ್ಥನಾಗಿದ್ದ. ಓದಲು ಬರೆಯಲು ಬಾರದೆ ತಾನು ಅನುಭವಿಸಿದ ಕಷ್ಟಗಳನ್ನು ತನ್ನ ಮಗ ಅನುಭವಿಸಬಾರದೆಂದು ನಿರ್ಧರಿಸಿದ್ದ. ಕಷ್ಟಪಟ್ಟು ಮಗನನ್ನು ವಿದ್ಯಾವಂತನನ್ನಾಗಿ ಮಾಡಿದ್ದ. ಆತನ ಹೆಸರು ವಿನಯ. ನಿಜಕ್ಕೂ ವಿನಯವಂತನಾಗಿದ್ದ. ಪಟ್ಟಣದ ಹಾಸ್ಟೆಲ್‍ನಲ್ಲಿ ಇದ್ದುಕೊಂಡು, ಹಗಲಿರುಳೂ ಓದಿ, ಉನ್ನತ ಶ್ರೇಣಿಯಲ್ಲಿ ಕೃಷಿ ಪದವಿಯನ್ನು ಪಡೆದುಕೊಂಡಿದ್ದ. ಸರ್ಕಾರಿ ನೌಕರಿಯ ಕನಸು ಕಾಣದ ಆತ ದಿನವೂ ಪಂಚೆ ಉಟ್ಟುಕೊಂಡು, ತಲೆಗೆ ಟವಲ್ಲು ಸುತ್ತಿಕೊಂಡು ಅಪ್ಪನೊಡನೆ ಹೊಲದಲ್ಲಿ ಮಣ್ಣಿನ ಮಗನಾಗಿ ಬೆವರು ಸುರಿಸಿ ದುಡಿಯುತ್ತಿದ್ದ. ತಾನು ಕಲಿತ ಕೃಷಿ ಪದವಿಯ ಜ್ಞಾನವನ್ನು ಬಳಸಿಕೊಂಡು ಹೊಸ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದ. ತಾತನ ಕಾಲದಿಂದಲೂ ತನ್ನಪ್ಪ ಬೆಳೆಯುತ್ತಿದ್ದ ನಾಟಿ ದ್ರಾಕ್ಷಿ ತೋಟದಲ್ಲಿ ಹೊಸ ತಳಿಯ ಬೀಜರಹಿತ ಕಪ್ಪು ದ್ರಾಕ್ಷಿ ಸಸಿಗಳನ್ನು ವಿನಯ ನಾಟಿ ಮಾಡಿದ. ಅವುಗಳ ಬುಡಕ್ಕೆ ಹನಿ ಹನಿಯಾಗಿ ನೀರು ತೊಟ್ಟಿಕ್ಕುವಂತೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ. ಹಾಗಾಗಿ ಬಹಳ ಬೇಗನೆ ದ್ರಾಕ್ಷಿ ಸಸಿಗಳು ಆಳೆತ್ತರಕ್ಕೆ ಬೆಳೆದುನಿಂತವು. ಮಾರುದ್ದ ಅಂತರದಲ್ಲಿ ಕಲ್ಲಿನ ಕಂಬಗಳನ್ನು ನೆಟ್ಟು ನಿರ್ಮಿಸಿದ್ದ ಚಪ್ಪರದ ತುಂಬ ಬಳ್ಳಿಯಾಗಿ ಹರಡಿಕೊಂಡವು. ಕೆಲ ತಿಂಗಳುಗಳು ಕಳೆಯುತ್ತಲೇ ದ್ರಾಕ್ಷಿ ಬಳ್ಳಿಗಳಲ್ಲಿ ಹೂವುಗಳು ಕಾಣಿಸಿಕೊಂಡವು. ಆ ಹೂವುಗಳನ್ನು ಕೀಟಗಳು ತಿನ್ನಬಾರದು, ತಿಂದರೆ ಇಳುವರಿ ಕಡಿಮೆಯಾದೀತೆಂದು ಮುಂಜಾಗ್ರತೆಯಿಂದ ವಿನಯ ಹದಿನೈದು ದಿನಕ್ಕೊಮ್ಮೆ ರಾಸಾಯನಿಕ ಕೀಟನಾಶಕವನ್ನು ಸಿಂಪಡಿಸತೊಡಗಿದ.

ದಿನಗಳೆದಂತೆ ಹೂವುಗಳು ಸಣ್ಣ ಸಣ್ಣ ಕಾಯಿಗಳಾದವು. ಎಲೆಗಳ ಕೆಳಗೆ ಬೊಗಸೆಯಷ್ಟು ದ್ರಾಕ್ಷಿ ಕಾಯಿಗಳ ಗೊಂಚಲು ಜೋತುಬಿದ್ದವು. ಆಗ ಊರಿನಲ್ಲಿದ್ದ ಎಲ್ಲ ರೈತರ ಕಣ್ಣುಗಳು ಅರಳಿದವು. ಪಟ್ಟಣದ ಹಾಸ್ಟೆಲ್‍ನಲ್ಲಿದ್ದು ಓದಿ, ಹಳ್ಳಿಗೆ ಮರಳಿದ ನಿಂಗಪ್ಪನ ಮಗ ಒಳ್ಳೆಯ ಫಸಲು ಬೆಳೆಯುತ್ತಿದ್ದಾನೆ. ಇದ್ದರೆ ಇಂತಹ ಮಗ ಇರಬೇಕು ಅಂತ ಅನೇಕರು ಹೊಗಳಿದರು.

ಆದರೆ ನಿಂಗಪ್ಪನ ಹೊಲದ ಅಕ್ಕಪಕ್ಕದ ದ್ಯಾವಪ್ಪ ಮತ್ತು ಸಂಗಪ್ಪ ಮಾತ್ರ ಹೊಗಳಿಕೆಯ ಮಾತುಗಳನ್ನು ಕೇಳಿ ಹೊಟ್ಟೆಕಿಚ್ಚುಪಟ್ಟರು. ಹೇಗಾದರೂ ಮಾಡಿ ದ್ರಾಕ್ಷಿ ತೋಟವನ್ನು ನಾಶಪಡಿಸಬೇಕೆನ್ನುವ ಕೆಟ್ಟ ಯೋಚನೆ ಅವರಿಬ್ಬರಲ್ಲಿ ಮೂಡಿತು. ಒಂದು ದಿನ ರಾತ್ರಿ ಇಬ್ಬರೂ ತಮ್ಮ ನೂರಾರು ಕುರಿಗಳನ್ನು ನಿಂಗಪ್ಪನ ತೋಟದೊಳಕ್ಕೆ ನುಗ್ಗಿಸಿಬಿಟ್ಟು ತೆಪ್ಪಗೆ ನಿದ್ದೆ ಹೋದರು.

ಬೆಳಗಾಯಿತು. ದ್ಯಾವಪ್ಪ ಮತ್ತು ಸಂಗಪ್ಪನ ಕೆಟ್ಟ ಯೋಚನೆ ಅವರಿಗೇ ತಿರುಮಂತ್ರವಾಗಿತ್ತು. ಹಿಂದಿನ ದಿನ ಸಂಜೆ ವಿನಯ ದ್ರಾಕ್ಷಿ ತೋಟಕ್ಕೆ ಕೀಟನಾಶಕವನ್ನು ಸಿಂಪಡಿಸಿದ್ದ. ಕುರಿಗಳು ಕೀಟನಾಶಕ ಅಂಟಿದ ಒಂದಿಷ್ಟು ದ್ರಾಕ್ಷಿ ಬಳ್ಳಿಯನ್ನು ತಿನ್ನುತ್ತಲೇ ಎಚ್ಚರ ತಪ್ಪಿ, ಹೊಟ್ಟೆ ಉಬ್ಬಿಕೊಂಡು ಅರೆಜೀವವಾಗಿ ಬಿದ್ದಿದ್ದವು. ಅವುಗಳನ್ನು ನೋಡಿದ ದ್ಯಾವಪ್ಪ ಮತ್ತು ಸಂಗಪ್ಪ ಇಬ್ಬರೂ ಎದೆಬಡಿದುಕೊಂಡು ಅಳತೊಡಗಿದರು. ‘ಜೀವನಕ್ಕೆ ಆಧಾರವಾಗಿರುವ ಕುರಿಗಳು ಸಾಯುತ್ತಿವೆ. ಯಾರಾದರೂ ಕಾಪಾಡಿ’ ಎಂದು ಗೋಳಾಡತೊಡಗಿದರು.

ಆಗ ತೋಟದ ಸುತ್ತಮುತ್ತಲಿನ ರೈತರೆಲ್ಲರೂ ಓಡೋಡಿ ಬಂದರು. ಕಷ್ಟಪಟ್ಟು ಬೆಳೆದ ನಿಂಗಪ್ಪನ ದ್ರಾಕ್ಷಿ ತೋಟವನ್ನು ನಾಶಪಡಿಸಲು ರಾತ್ರೋರಾತ್ರಿ ಕುರಿಗಳನ್ನು ತೋಟದೊಳಗೆ ಬಿಟ್ಟಿದ್ದೂ ಅಲ್ಲದೆ, ತಮ್ಮ ಕುರಿಗಳನ್ನು ಕಾಪಾಡಿ ಎನ್ನುತ್ತಿದ್ದಾರೆ ಇವರನ್ನು ಸುಮ್ಮನೆ ಬಿಡಬಾರದು, ಪೊಲೀಸರಿಗೆ ದೂರು ಕೊಟ್ಟು, ಇವರಿಬ್ಬರನ್ನು ಜೈಲಿಗೆ ಕಳುಹಿಸಬೇಕು. ಸುಮ್ಮನಿದ್ದರೆ ಇವರಿಬ್ಬರೂ ಪಾಠ ಕಲಿಯುವುದಿಲ್ಲವೆಂದು ನಿರ್ಧರಿಸಿದರು.

ಆ ಕೂಡಲೇ ಅಪ್ಪನೊಂದಿಗೆ ಹೊಲದತ್ತ ಧಾವಿಸಿಬಂದ ವಿನಯ, ‘ಆಗಿದ್ದು ಆಗಿ ಹೋಯಿತು. ಈಗ ಅರೆಜೀವವಾಗಿ ಬಿದ್ದಿರುವ ಮೂಕಪ್ರಾಣಿಗಳಾದ ಕುರಿಗಳನ್ನು ಬದುಕಿಸೋಣ ಬನ್ನಿ, ಎಲ್ಲರೂ ಕುರಿಗಳನ್ನು ಒಂದೊಂದಾಗಿ ಎತ್ತಿಕೊಂಡು ಬನ್ನಿ...’ ಎಂದು ಹೇಳಿದವನೇ ಕುರಿಯೊಂದನ್ನು ಎತ್ತಿಕೊಂಡು ತೋಟದ ಬದುವಿನ ಮೇಲೆ ಹೋಗಿ ಕುಳಿತ. ಅದೇ ಬದುವಿನ ಮೇಲೆ ಬೆಳೆದಿದ್ದ ಒಂದೆರಡು ಜಾತಿಯ ಗಿಡದ ಸೊಪ್ಪನ್ನು ಕಿತ್ತುಕೊಂಡ. ಅಗಲವಾದ ಕಲ್ಲಿನ ಮೇಲೆ ಹಾಕಿ ಕುಟ್ಟಿ ಅರೆದು, ಅಗತ್ಯವಾದ ಔಷಧಿಯನ್ನು ತಯಾರಿಸಿದ. ಆ ಔಷಧಿಯನ್ನು ಕುರಿಗಳಿಗೆ ಕುಡಿಸಿದ. ಸ್ವಲ್ಪ ಸಮಯದ ಬಳಿಕ ಎಲ್ಲ ಕುರಿಗಳು ತಲೆಕೊಡವಿಕೊಂಡು ಎದ್ದು ನಿಂತವು. ‘ಬ್ಯಾ.. ಬ್ಯಾ...’ ಅಂತ ಅರಚತೊಡಗಿದವು.

ನಿಂಗಪ್ಪ ಮತ್ತು ಆತನ ಮಗ ವಿನಯನ ಶ್ರಮದ ಫಲವನ್ನು ನೋಡಲಾಗದೆ ಹೊಟ್ಟೆಕಿಚ್ಚುಪಟ್ಟು ನಾಶಪಡಿಸಲು ಹೋಗಿ ತಾವೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಕ್ಕೆ ದ್ಯಾವಪ್ಪ ಮತ್ತು ಸಂಗಪ್ಪ ಪಶ್ಚಾತ್ತಾಪಪಟ್ಟರು. ಸಕಾಲಕ್ಕೆ ತಮ್ಮ ಕುರಿಗಳಿಗೆಲ್ಲ ಔಷಧಿಯುಣಿಸಿ ಕಾಪಾಡಿದ್ದಕ್ಕೆ ಇಬ್ಬರೂ ವಿನಯನ ಕಾಲಿಗೆ ಎರಗಿದರು. ಕೂಡಲೇ ವಿನಯ ಅವರ ಭುಜಗಳನ್ನು ಹಿಡಿದು ಮೇಲಕ್ಕೆ ಎತ್ತಿದ. ಪಶ್ಚಾತ್ತಾಪ ತುಂಬಿದ ಅವರಿಬ್ಬರ ಕಣ್ಣಂಚಿನಲ್ಲಿ ಹನಿಗಳು ಉದುರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.