ಜ್ವರದಿಂದ ಭಾರವಾದ ರೆಪ್ಪೆಗಳನ್ನು ತೆರೆದಾಗ ಬೆಳಗಾಗಿ ಅದೆಷ್ಟೋ ಹೊತ್ತು ಕಳೆದಿದೆಯೆಂದು ಅಲಕಾಳಿಗೆ ಅರಿವಾಯಿತು. ಮನೆಯಿಡೀ ಆವರಿಸಿದ ನಿಶ್ಶಬ್ದದಿಂದಾಗಿ ಹರಿ ಆಫೀಸಿಗೆ ಹೋಗಿರಬಹುದು ಅಂದುಕೊಂಡಳು. ನಿನ್ನೆ ರಾತ್ರಿ ಮಲಗುವಾಗ ಬೆಳಗಿನ ತಿಂಡಿಗೆ ಏನೂ ತಯಾರಿ ಮಾಡಿರದಿದ್ದುದು ನೆನಪಾಗಿ ಅಡುಗೆ ಮನೆಗೆ ಬಂದರೆ ಚಪಾತಿ, ಪಲ್ಯ ರೆಡಿಯಾಗಿ ಕಾಯುತ್ತಿತ್ತು. ಗಡಿಯಾರ ಅದಾಗಲೇ ಹನ್ನೆರಡು ಗಂಟೆಯನ್ನು ತೋರಿಸುತ್ತಿದ್ದುದರಿಂದ ಇನ್ನೇನು ಊಟವನ್ನೇ ಮಾಡಿದರಾಯಿತೆಂದು ದೊಡ್ಡ ಕಪ್ನಲ್ಲಿ ಕಾಫಿ ಬೆರೆಸಿಕೊಂಡು ಬಂದು ಸೋಫಾದಲ್ಲಿ ಒರಗಿದಳು. ಕಾಫಿ ಕುಡಿಯುತ್ತಲೇ ಮೊಬೈಲ್ ಕೈಗೆತ್ತಿಕೊಂಡರೆ ಮೆಸೇಜುಗಳ ರಾಶಿಯೇ ಮಿನುಗುತ್ತಿತ್ತು. ಅವಶ್ಯವಿರುವ ಕೆಲವನ್ನಷ್ಟೇ ನೋಡೋಣವೆಂದು ಓದತೊಡಗಿದಾಗ ಮತ್ತದೇ ಮೆಸೇಜ್ ಕಣ್ಣಿಗೆ ಬಿತ್ತು. ‘ನಮಸ್ತೆ ಮೇಡಂ, ನೆನಪು…. ಈಗಾಗಲೇ ಪುಸ್ತಕದ ಕವರ್ಪೇಜ್ ರೆಡಿಯಾಗಿದೆ. ಪುಸ್ತಕ ಬಿಡುಗಡೆಯ ಆಮಂತ್ರಣದಲ್ಲಿ ದಿನಾಂಕ ನಮೂದಿಸುವುದೊಂದು ಬಾಕಿಯಿದೆ. ನಿಮ್ಮ ಆಸೆಯಂತೆ ಹಿರಿಯ ಕಾದಂಬರಿಗಾರ್ತಿ ಜಾನಕಿಯವರೇ ಪುಸ್ತಕವನ್ನು ಬಿಡುಗಡೆಗೊಳಿಸುತ್ತಾರೆ. ಕೊನೆಯ ಅಧ್ಯಾಯವೊಂದನ್ನು ಮುಗಿಸಿದರೆ…..’ ಒಂದು ತಿಂಗಳಿನಲ್ಲಿ ಇದು ಹತ್ತನೆಯ ಮೆಸೇಜ್ ಇರಬಹುದೇನೊ? ಅಕ್ಷರಗಳು ಅವಸರಕ್ಕೆ ಒದಗುವಂತಿದ್ದರೆ ಇಷ್ಟೊತ್ತಿಗೆ ಅದೆಷ್ಟೋ ಪುಸ್ತಕಗಳ ಒಡತಿಯಾಗುತ್ತಿದ್ದೆ ಅಂದಕೊಂಡಳಾದರೂ ಮರುಕ್ಷಣ ಹೀಗೆ ಯಾರಾದರೂ ಒತ್ತಾಯಿಸದಿದ್ದರೆ ನಾನೆಲ್ಲಿ ಬರೆಯುತ್ತಿದ್ದೆ? ಅವರು ನೀಡಿದ ಆರು ತಿಂಗಳ ಗಡುವು ಮುಗಿದ ಮೇಲಲ್ಲವೆ ಮೇಸೇಜು ಬರುತ್ತಿರುವುದು ಎಂಬ ಜ್ಞಾನೋದಯವಾಗಿ ಕಂಪ್ಯೂಟರ್ ಎದುರು ಕುಳಿತುಕೊಂಡಳು.

ನಾಡಿನ ಪ್ರಸಿದ್ಧ ಪ್ರಕಾಶಕರೊಬ್ಬರಿಗಾಗಿ ಐತಿಹಾಸಿಕ ಕಾದಂಬರಿಯನ್ನು ಬರೆದುಕೊಡುವ ಭರವಸೆ ನೀಡಿದ್ದಳು. ಕಾಲಮಿತಿಯನ್ನು ನಿಗದಿಪಡಿಸಿಕೊಳ್ಳದೇ ಯಾವುದನ್ನೂ ಮುಗಿಸಲಾಗದೆಂಬ ಅನುಭವದ ಆಧಾರದಲ್ಲಿ ಆರು ತಿಂಗಳ ಗಡುವನ್ನು ಕೇಳಿ ಪಡೆದುಕೊಂಡಿದ್ದಳು. ಐತಿಹಾಸಿಕ ಕಾದಂಬರಿ ಬರೆಯಲು ಕ್ಷೇತ್ರಭೇಟಿ ಅನಿವಾರ್ಯವಾದ್ದರಿಂದ ತಿರುಗಾಟಕ್ಕೆಂದು ಒಂದು ತಿಂಗಳು ವ್ಯಯವಾಗಿಹೋಗಿತ್ತು. ಮುಂದಿನ ಎರಡು ತಿಂಗಳು ಊರಿನಲ್ಲಿ ತೀರ ಚಳಿಯೆಂದು ವಯಸ್ಸಾದ ಅತ್ತೆ, ಮಾವ ಇವರ ಮನೆಗೆ ಬಂದು ನಿಂತಿದ್ದರು. ಅವರ ನಿರ್ಗಮನದ ಒಂದು ವಾರ ಮೊದಲೇ ಅಮೆರಿಕಾದಲ್ಲಿ ಓದುತ್ತಿರುವ ಮಗ ರಜೆಗೆಂದು ಬಂದಿದ್ದ. ಹೀಗೆ ದಿನಗಳು ಹಕ್ಕಿಯಂತೆ ಹಾರಿಹೋಗುತ್ತಿರುವಾಗ ಕಾದಂಬರಿಯ ನಾಯಕಿಯನ್ನು ಚಿತ್ರಿಸುವುದಾದರೂ ಎಂತು? ಅಂತೂ ಕೊನೆಯ ಒಂದು ತಿಂಗಳು ಮನೆಯೊಳಗೆ ತುಸು ಏಕಾಂತ ದೊರೆತಿದ್ದರಿಂದ ಬರವಣಿಗೆಗೆ ವೇಗ ಸಿಕ್ಕು ಕಾದಂಬರಿ ಮುಗಿಯುವ ಹಂತಕ್ಕೆ ಬಂದಿತ್ತು. ಗಡುವು ಮುಗಿದೊಡನೇ ಬಂದ ಪ್ರಕಾಶಕರ ಸಂದೇಶಕ್ಕೆ ಇನ್ನೊಂದೇ ಅಧ್ಯಾಯ ಬಾಕಿಯಿದೆಯೆಂಬ ಮರುಸಂದೇಶವನ್ನೂ ಕಳಿಸಿಬಿಟ್ಟಿದ್ದಳು. ಆದರೆ ಕೊನೆಯ ಅಧ್ಯಾಯದವರೆಗೆ ಸಲೀಸಾಗಿ ಬರೆಸಿಕೊಂಡ ಕಾದಂಬರಿ ನಾಯಕಿಯ ಸಾವಿನಂಚಿನಲ್ಲಿ ಜಪ್ಪಯ್ಯ ಎಂದರೂ ಜರುಗದೇ ಕುಳಿತುಬಿಟ್ಟಿತ್ತು. ನಿನ್ನೆ ರಾತ್ರಿ ಜ್ವರದಿಂದ ಕಣ್ತೆರೆಯಲಾರದ ಸ್ಥಿತಿಯಲ್ಲಿಯೂ, “ಛೆ, ಅವಳ ಸಾವಿನ ಅಧ್ಯಾಯವೊಂದನ್ನು ಬರೆದುಬಿಟ್ಟರೆ ಕಳಿಸಿಬಿಡಬಹುದಿತ್ತು.” ಎಂದು ಹರಿಯ ಕಿವಿಯಲ್ಲಿ ಪಿಸುಗುಟ್ಟಿದ್ದಳು. “ಬೇಗ ಕೊಂದು ಹಾಕು ಮಾರಾಯ್ತಿ. ಅವಳು ಸಾಯದೇ ನಿನಗೆ ನೆಮ್ಮದಿಯಿಲ್ಲ.” ಎಂದು ಅರೆನಿದ್ರೆಯಲ್ಲಿ ಹರಿ ಅವಳನ್ನು ಲೇವಡಿ ಮಾಡಿದ್ದ. “ಸಾವು ಅಂದರೆ ನಿನಗೆ ಅಷ್ಟೊಂದು ಅಗ್ಗ ಅಲ್ಲವೆ?” ಎಂದು ಹುಸಿಮುನಿಸು ತೋರಿಸಿದಾಗ, “ಅಸಲಿಗೆ ಅವಳು ಸತ್ತು ಅದೆಷ್ಟೋ ಶತಮಾನಗಳಾಗಿವೆ ಮಾರಾಯ್ತಿ. ಈಗ ನೀನವಳನ್ನು ಕಾಗದದ ಮೇಲೆ ಕೊಂದು ಮುಗಿಸಿದರಾಯಿತು. ಕೊಲ್ಲಲು ಇಷ್ಟೊಂದು ಸಮಯ ತೆಗೆದುಕೊಳ್ಳುವುದು ಕೂಡ ಹಿಂಸೆಯೆ. ಕಪ್ಪೊಂದು, ತುಂಡೆರಡು ಎನ್ನುವ ಹಾಗೆ ಕೊಲ್ಲಬೇಕಪ್ಪ.” ಎಂದು ನಕ್ಕಿದ್ದ. ಔಷಧದ ಮಂಪರಿನಲ್ಲಿ ಮುಂದೆ ಮಾತನಾಡಲಾಗದೇ ಅಲಕಾ ಕಣ್ಮುಚ್ಚಿದ್ದಳು.

ನಾಯಕಿಯ ಕೊನೆಯ ಪ್ರಯಾಣದ ರೂಪುರೇಷೆಗಳೆಲ್ಲವೂ ಅದಾಗಲೇ ನಿರ್ಣಯವಾಗಿದ್ದವು. ಯಾವುದೋ ಒಂದು ಮನೋಕ್ಲೇಷಕ್ಕೆ ಒಳಗಾದ ನಾಯಕಿ ಅರಮನೆಯನ್ನು ತೊರೆದು ದೂರದ ತನ್ನ ತವರಿನ ಹಿಂಬದಿಯಲ್ಲಿರುವ ಬೆಟ್ಟದವರೆಗೂ ಬಂದು ನಿಂತಿದ್ದಾಳೆ. ದೊಡ್ಡ ಬಂಡೆಯನ್ನೇರಿ ತನ್ನ ಅವಸಾನವನ್ನು ಆಹ್ವಾನಿಸಿಕೊಳ್ಳುತ್ತಿದ್ದಾಳೆ. ಬಂಡೆಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಳೆಂದು ಅಲ್ಲಿರುವ ಗೈಡ್ ಹೇಳಿದ್ದ. ಹಾಗೆಯೇ ಬರೆದರಾಯಿತೆಂದು ಹೊರಟಾಗಲೆಲ್ಲ ಟೈಪಿಸುವ ಕೈಗಳು ಅಲ್ಲಿಯೇ ನಿಲ್ಲುತ್ತವೆ. ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿರುವ ನಾಯಕಿ ನಡುವಯಸ್ಸಿನಲ್ಲಿ ಹೀಗೆ ಅಂತ್ಯವಾಗಲಾರೆನೆಂದು ಹಠಹಿಡಿಯುತ್ತಿದ್ದಳು. ಹಾರಿಸಬೇಕೆಂದು ಅವಳನ್ನು ಬಂಡೆಯೇರಿಸಿದಾಗಲೆಲ್ಲ ಅವಳು ಆರ್ತಳಾಗಿ ಅಲಕಾಳ ಮೊಗವನ್ನು ನೋಡುತ್ತಿದ್ದಳು. ಅಲಕಾ ಅವಳನ್ನು ಬಂಡೆಯಿಂದ ಕೆಳಗಿಳಿಸುತ್ತಿದ್ದಳು. ತಿಂಗಳಿಂದಲೂ ಈ ಆಟ ನಡೆದೇ ಇದೆ. ಇಷ್ಟು ದಿನಗಳ ನಂತರ ಅಲಕಾಳಿಗೆ ತನ್ನನ್ನು ಕಾಡುತ್ತಿರುವುದು ನಾಯಕಿಯ ಸಾವಲ್ಲ, ಸಾವು ಎನ್ನುವ ಕಲ್ಪನೆ ಎಂಬ ಜ್ಞಾನೋದಯವಾಯಿತು. ಕಂಪ್ಯೂಟರನ್ನು ಮುಚ್ಚಿಟ್ಟು ಹಾಗೆಯೇ ದಿಂಬಿಗೊರಗಿದಳು.

ಸಾವಿನ ನಿಗೂಢತೆಯ ಭಯ ಬಾಲ್ಯದಿಂದಲೂ ಅವಳೊಂದಿಗೇ ಬೆಳೆದುಕೊಂಡು ಬಂದಿದೆ. ಎಷ್ಟೋ ಸಲ ಕತ್ತಲೆಯ ರಾತ್ರಿಯಲ್ಲಿ ಅಮ್ಮನನ್ನು ತಬ್ಬಿ ಮಲಗಿದಾಗ ಸಾವು ತನ್ನನ್ನು ನುಂಗಲು ಬಂದಂತೆನಿಸಿ ಬೆಚ್ಚಿ ಬೀಳುತ್ತಿದ್ದಳು. ಅನೂಹ್ಯ ಪ್ರವಾಹವೊಂದು ತನ್ನನ್ನು ಸೆಳೆಯುತ್ತಿರುವಂತೆ ಭಾಸವಾಗಿ ಉಸಿರು ಕಟ್ಟಿದಾಗ ಕಿಟಾರೆಂದು ಕಿರುಚಿ ಎದ್ದು ಕೂರುತ್ತಿದ್ದಳು. ಉಸಿರಾಟವು ತಾನೇ ತಾನಾಗಿ ನಡೆಯುವ ಕ್ರಿಯೆಯೆಂದು ಆ ಕ್ಷಣದಲ್ಲಿ ಮರೆತುಹೋಗಿ ತಾನೇ ಕಷ್ಟಪಟ್ಟು ಉಸಿರನ್ನು ಮೇಲೆ ಕೆಳಗೆ ಎಳೆದುಕೊಳ್ಳುತ್ತಾ, ನಿಲ್ಲಿಸಿದರೆಲ್ಲಿ ಸತ್ತೇ ಹೋಗುವುನೇನೋ ಎಂಬ ಭಯದಲ್ಲಿ ಏದುಸಿರು ಬಿಡುತ್ತಿದ್ದಳು. ಆಗೆಲ್ಲ ಅಮ್ಮ, “ಮಗಾ, ಯಾಕೆ ಹೆದರೂದು? ಇಲ್ಲಿ ಕಣ್ತೆರೆದು ನೋಡು. ನಾನಿಲ್ಲವಾ ನಿನ್ನ ಜತೆಯಲ್ಲಿ?” ಎಂದು ಸಮಾಧಾನ ಮಾಡುತ್ತಿದ್ದಳು. ಆಗ ಅಲಕಾ, “ಆದರೆ ಸಾಯುವಾಗ ನಾ ಒಬ್ಬಳೇ ಇರಬೇಕಲ್ಲವಾ?” ಎಂದು ಪ್ರಶ್ನಿಸುತ್ತಿದ್ದಳು. ಮೊದಮೊದಲು ಅಮ್ಮ, “ಬಿಡ್ತು ಅನ್ನು. ಈಗಷ್ಟೆ ಕಣ್ಣು ಬಿಟ್ಟಿದ್ದೀಯಾ, ಸಾಯುವ ಮಾತ್ಯಾಕೆ?” ಎಂದು ಗದರುತ್ತಿದ್ದಳಾದರೂ ಪದೇ ಪದೇ ಇದು ಪುನರಾವರ್ತನೆಯಾದಾಗ ಮಗಳ ಭಯದ ಕಾರಣವು ಗೊತ್ತಾಗಿ, “ನೀ ಹೆದರಬೇಡ ಮಾರಾಯ್ತಿ. ಸತ್ಯವಾನನ ಜೀವವನ್ನು ಸಾವಿತ್ರಿ ತಂದಂತೆ ನಿನ್ನ ಜತೆಗೇ ಯಮರಾಯನ ಪಟ್ಟಣದವರೆಗೂ ಬಂದು ನಿನ್ನನ್ನು ಮರಳಿ ಕರೆದುಕೊಂಡು ಬರುವೆ.” ಎಂದು ಸತ್ಯವಾನ-ಸಾವಿತ್ರಿಯ ಕತೆಯನ್ನು ಹೇಳಿದ್ದಳು.

ಮೊದಲ ಸಾವನ್ನು ತಾನು ನೋಡಿದ್ದು ಯಾವಾಗ? ಎಂದು ಯೋಚಿಸತೊಡಗಿದಳು ಅಲಕಾ. ಅವಳು ಹತ್ತು ವರ್ಷದವಳಿರುವಾಗ ಅಜ್ಜ ಸಾವಿನ ಹಾಸಿಗೆಯಲ್ಲಿ ಮಲಗಿದ್ದರು. ಊರು, ಪರವೂರುಗಳಲ್ಲಿರುವ ಅಜ್ಜನ ಹನ್ನೆರಡು ಮಕ್ಕಳು ಮನೆಯ ಜಗುಲಿಯಲ್ಲಿ ಸೇರಿದ್ದರು. ಎಷ್ಟು ಕರೆದರೂ, ಯಾರು ಕರೆದರೂ ಅಜ್ಜ ಓಗುಡುತ್ತಿರಲಿಲ್ಲ. ಜೋರಾಗಿ ಉಸಿರೆಳೆದು ಬಿಡುವ ಸದ್ದು ಮಾತ್ರವೇ ಕೇಳುತ್ತಿತ್ತು. ಬಂದವರೆಲ್ಲ ಅಜ್ಜನ ಮರಣವನ್ನು ಹಾರೈಸಿ ದೇವರ ಗಿಂಡಿಯಲ್ಲಿರುವ ಗಂಗಾಜಲವನ್ನು ಬಾಯಲ್ಲಿ ಬಿಡುತ್ತಿದ್ದರು. ಒಂದು ಹನಿಯೂ ಒಳಗಿಳಿಯದೇ ಕೆನ್ನೆಯ ಮೇಲೆ ಜಾರಿಹೋಗುತ್ತಿತ್ತು. ಅಜ್ಜನ ಉಸಿರು ನಿಲ್ಲುವವರೆಗೂ ಮಕ್ಕಳು ಹಜಾರದಲ್ಲಿ ಪಿಟ್ಟೆಂದು ಉಸಿರು ಎತ್ತುವಂತಿರಲಿಲ್ಲ. “ಸಾವಿನ ಮನೆಯಲ್ಲಿ ನಿಮ್ಮದೆಂಥದ್ದು ಆಟ ಮಕ್ಕಳೇ? ಸ್ವಲ್ಪ ಸುಮ್ಮನೆ ಕೂತುಕೊಳ್ಳಿ ನೋಡುವ” ಎಂದು ಹಿರಿಯರು ಗದರುತ್ತಿದ್ದರು. ಇನ್ನೇನು ಈಗ ಉಸಿರು ನಿಲ್ಲಿಸಿಬಿಡುತ್ತಾರೆಂದು ಸುತ್ತಲೂ ಕುಳಿತು ಎಲ್ಲರೂ ಕಾದದ್ದೇ ಬಂತು. ಮೂರು ದಿನ ಕಾದ ನಂತರ ಅಜ್ಜನ ಉಸಿರು ನಿಂತಿತ್ತು. ಅಜ್ಜ ಸಾಯುವ ಮೊದಲ ದಿನ ರಾತ್ರಿ ಮೂತ್ರಶಂಕೆಗೆಂದು ಅಮ್ಮನೊಂದಿಗೆ ಎದ್ದುಬಂದ ಅಲಕಾ ಜನರಿಂದ ತುಂಬಿದ ಆ ಮನೆಯ ಇಡಿಯ ಹಜಾರದಲ್ಲಿ ಅಜ್ಜನೊಬ್ಬನೇ ತನ್ನ ಉಸಿರಿನೊಂದಿಗೆ ಮಲಗಿರುವುದನ್ನು ಕಂಡಾಗಿನಿಂದ ಸಾವೆಂದರೆ ಬೆಚ್ಚಿಬೀಳುತ್ತಿದ್ದಳು.

ಅಜ್ಜ ಸತ್ತ ಮುಂಜಾನೆ ಎಲ್ಲರ ಮೊಗದಲ್ಲೊಂದು ನಿರಾಳ ಭಾವ ಮೂಡಿದ್ದನ್ನು ಅಲಕಾ ಗಮನಿಸಿದ್ದಳು. ಮಕ್ಕಳಿಗೆ, ಬೆಕ್ಕಿಗೆ ಸಾವಿನ ಮನೆಯಲ್ಲಿಯೂ ಶಾಸ್ತ್ರವಿಲ್ಲವೆಂದು ದೊಡ್ಡಮ್ಮ ದೋಸೆ ಕಾವಲಿ ಒಲೆಗೇರಿಸಿದ್ದಳು. ಮಕ್ಕಳ ಪಂಕ್ತಿಯ ನಡುವೆಯೇ ಬಿ.ಪಿ., ತಲೆನೋವು, ತಲೆಸುತ್ತು, ನಿತ್ರಾಣ ಹೀಗೆ ನಾನಾ ಕಾರಣಗಳನ್ನು ಮುಂದಿಟ್ಟು ಮನೆಯ ಎಲ್ಲರೂ ಮೂಲೆಯಲ್ಲಿ ನಿಂತು ತಿಂಡಿಯ ಸಮಾರಾಧನೆಯನ್ನು ಮುಗಿಸಿಬಿಟ್ಟಿದ್ದರು. ಶಾಲೆಗೆ ಸಮಯವಾದ್ದರಿಂದ ತನ್ನ ಪಾಟಿಚೀಲವನ್ನು ತರಲೆಂದು ಒಳಕೋಣೆಗೆ ಹೋದ ಅಲಕಾ ದೊಡ್ಡಪ್ಪ, ಅಪ್ಪ, ಚಿಕ್ಕಪ್ಪಂದಿರು ಅದೇನೋ ಗುಸುಗುಸು ದನಿಯಲ್ಲಿ ಜಗಳವಾಡುತ್ತಿರುವುದನ್ನು ಗಮನಿಸಿದ್ದಳು. ತಲೆತುಂಬ ತಣ್ಣೀರು ಹೊಯ್ದುಕೊಂಡು ಮಡಿಯಾಗಿ ಬಂದ ದೊಡ್ಡತ್ತೆ ಏರುದನಿಯಲ್ಲಿ, “ನಿಮ್ಮದೆಲ್ಲ ನಾಟಕಗಳನ್ನು ಮತ್ತೆ ಇಟ್ಟುಕೊಳ್ಳಿ. ಈಗ ಮೊದಲು ಅಪ್ಪನನ್ನು ಕಳಿಸಿಕೊಡುವುದು ಹೇಗೆ? ಎಂಬುದರ ಬಗೆಗಷ್ಟೇ ಯೋಚಿಸಿ. ಒಂದಲ್ಲ, ಎರಡಲ್ಲ, ಹನ್ನೆರಡು ಮಕ್ಕಳನ್ನು ಬೆಳೆಸಿದ ಜೀವವದು. ಸುಖದ ಸಾವಂತೂ ಬರಲಿಲ್ಲ, ಕೊನೆಗೆ ಸುಖದಲ್ಲಿ ವೈಕುಂಠವಾದರೂ ಸಿಕ್ಕಲಿ. ಹೊರಡಿ ಇಲ್ಲಿಂದ.” ಎಂದು ಗದರಿ ಎಲ್ಲರನ್ನೂ ಹೊರಗೆ ಕಳಿಸಿದ್ದಳು. ಅತ್ತೆಯಂದಿರಿಗಾದರೂ ಅಜ್ಜನ ಮೇಲೆ ಪ್ರೀತಿಯಿದೆಯಲ್ಲಾ ಎಂದುಕೊಳ್ಳುತ್ತಲೇ ಅಲಕಾ ಪಾಟಿಯ ಚೀಲವನ್ನು ಹಿಡಿದು ಹೊರಬಂದಿದ್ದಳು. ಅವಳ ಕೈಯ್ಯಲ್ಲಿನ ಪಾಟಿಚೀಲವನ್ನು ತೆಗೆದೆಸೆಯುತ್ತಾ ಅವಳ ದೊಡ್ಡ ಅಣ್ಣ, “ಇನ್ನು ಹನ್ನೆರಡು ದಿನ ನಮಗೆಲ್ಲ ಮೈಲಿಗೆ. ಶಾಲೆಯ ಒಳಗೆ ಹೋಗುವಂತಿಲ್ಲ. ಸುಮ್ಮನೆ ಇವತ್ತು ಹೋಗಿ ಮಾಸ್ತರ್ರಿಗೆ ಹೇಳಿ ಬರೋದು ಅಷ್ಟೆ. ನೀನು ಚೀಲಗೀಲ ಎಲ್ಲ ಹಿಡಕೊಂಡು ಫೋಸು ಕೊಡೂದು ಬ್ಯಾಡ.” ಎಂದಿದ್ದ. ಹನ್ನೆರಡು ದಿನಗಳ ರಜೆಯ ಕನಸು ಕಣ್ಣಿನಲ್ಲಿ ಚಿಗುರಿದ ಸಣ್ಣ ಮಕ್ಕಳೆಲ್ಲರೂ ‘ಯಾಹೂ..’ ಎಂದು ಕಿರುಚಿ ಎಲ್ಲರಿಂದಲೂ ಇನ್ನೊಮ್ಮೆ ಬೈಗುಳ ತಿಂದಿದ್ದರು.

ಶಾಲೆಯ ಹೊರಗಿನ ಆಲದ ಕಟ್ಟೆಯಲ್ಲಿ ಕುಳಿತು ಇವರು ಮಾಸ್ತರ್ರ ಹಾದಿ ಕಾಯುತ್ತಿರುವಾಗ ಒಳಗಿದ್ದ ಮಕ್ಕಳಿಗೆಲ್ಲ ‘ಛೇ, ನಮ್ಮನೆಯಲ್ಲೂ ಯಾರಾದರೂ ಸಾಯಬಾರದೆ?’ ಎಂದು ಆ ಕ್ಷಣದಲ್ಲಿ ಅನಿಸಿತ್ತು. ಉಪ್ಪಿಟ್ಟಿನ ಚೀಲಗಳನ್ನು ಎರಡೂ ಕೈಯ್ಯಲ್ಲಿ ಹೊತ್ತು ಬರುತ್ತಿದ್ದ ಮಾಸ್ತರರ ಮುಖ ಕಂಡಿದ್ದೇ ಅಲಕಾಳ ಅಣ್ಣ ವಿನಯದಿಂದ “ನಮಸ್ತೇ ಸರ್” ಎಂದು ರಾಗ ಎಳೆದಿದ್ದ. ಅವನ ದನಿಗೆ ಉಳಿದವರೆಲ್ಲರೂ ತಮ್ಮ ಸ್ವರವನ್ನು ಸೇರಿಸಿದ್ದರು. ಮಾಸ್ತರ್ರು ಮಾತ್ರ ಮುಖ ಗಂಟಿಕ್ಕಿಕೊಂಡು, “ಎರಡೂ ಕೈಯ್ಯಲ್ಲಿ ಚೀಲವಿರುವುದು ಕಾಣಿಸ್ತಿಲ್ವೇನ್ರೋ ಮುಠ್ಠಾಳ್ರಾ? ನಮಸ್ಕಾರ ಮಾಡೋಕೆ ಒಂದು ಕೈಯ್ಯಾದರೂ ಖಾಲಿ ಇರಬೇಕು.” ಎನ್ನುತ್ತಿರುವಂತೆ ದಿನಾಲೂ ಮಾಸ್ತರನ್ನು ಅಷ್ಟು ದೂರದಿಂದ ಕಂಡಿದ್ದೇ ಓಡಿಹೋಗಿ ಉಪ್ಪಿಟ್ಟಿನ ಚೀಲವನ್ನು ತಾನೇ ಹಿಡಿದುಕೊಳ್ಳುತ್ತಿದ್ದೆನೆಂಬುದು ನೆನಪಾಗಿ ಅಲಕಾಳ ಅಣ್ಣ, “ಅದು ಸರ್, ಇವತ್ತು ನಾವು ಉಪ್ಪಿಟ್ಟಿನ ಚೀಲ ಮುಟ್ಟೂಹಂಗಿಲ್ಲ. ನಮ್ಮಜ್ಜ ತೀರಿಕಂಡ್ರು ಬೆಳಿಗ್ಗೆ. ಇನ್ನು ಹನ್ನೆರಡು ದಿನ ನಮಗೆಲ್ಲ ಮೈಲಿಗೆ. ಶಾಲೇಗೂ ಬರೂಕಾಗುದಿಲ್ಲವೆಂದು ಹೇಳಿ ಹೋಗ್ವ ಅಂತ ಬಂದಿದ್ದು.” ಎಂದು ಪ್ರವರ ಒಪ್ಪಿಸಿದ್ದ. ಅವನ ಮಾತಿಗೆ ಮಾಸ್ತರ್ರು “ಶಾಲೇಲಿ ಮಡಿ, ಮೈಲಿಗೆ ಎಲ್ಲ ಇಲ್ಲ. ಅದೆಲ್ಲ ನಿಮ್ಮ ಮನೇಲಿಟ್ಕಳಿ. ಚೀಲ ತರದೇ ಇದ್ದಿದ್ದಕ್ಕೆ ಇವತ್ತೊಂದಿನ ಮನೆಗೆ ಹೋಗಿ. ನಾಳೆಯಿಂದ ಶಾಲೆ ಒಳಗಿಲ್ಲದಿದ್ರೆ ಬೆನ್ನು ಬಿಸಿಮಾಡ್ತೆ ನೋಡಿ.” ಎಂದು ಗದರುವ ದನಿಯಲ್ಲಿ ಹೇಳಿದವರೇ ಮರುಕ್ಷಣ, “ನಿಮ್ಮ ಅಜ್ಜ ನಮ್ಮ ಶಾಲೇಗೆ ಎಷ್ಟೊಂದು ಉಪಕಾರ ಮಾಡಿದವರು. ನಡೀರಿ, ನಿಮ್ಮ ಜತೆ ನಾನು ಒಂದು ಗಳಿಗೆ ನಿಮ್ಮನೆಯವರೆಗೆ ಬತ್ತೆ. ಒಂದು ಹೂವನ್ನಾದರೂ ಎದೆಯ ಮೇಲಿಟ್ಟು ಬರಬೇಕು” ಎಂದು ಅವರಸರದಲ್ಲಿ ಶಾಲೆಯೊಳಗಿರುವ ಮಕ್ಕಳಿಗೆ ಸೂಚನೆಗಳನ್ನು ಕೊಟ್ಟು ಹೊರಟರು.

ಮೊದಲ ದಿನ ಒಳಕೋಣೆಯಲ್ಲಿ ಪ್ರಾರಂಭವಾದ ಗಂಡಸರ ಜಗಳ ಮುಂದಿನ ದಿನಗಳಲ್ಲಿ ಹಜಾರದವರೆಗೂ ಬಂದಿತ್ತು. ವೈದಿಕರ ಖರ್ಚು ನಿಭಾಯಿಸುವವರು ಯಾರು? ಅಜ್ಜನ ದೊಡ್ಡ ಹಡಗಿನಂತಹ ಕುಟುಂಬಕ್ಕೆ ದುಃಖದ ಬಟ್ಟೆ ತಂದು ಪೂರೈಸುವವರಾರು? ಸುತ್ತ ನಾಲ್ಕಾರು ಊರುಗಳಿಂದ ವೈಕುಂಠ ಸಮಾರಾಧನೆಗೆಂದು ಬರುವ ನೆಂಟರಿಷ್ಟರ ಊಟದ ವೆಚ್ಚ ಹೇಗೆ ನಿಭಾಯಿಸುವುದು? ಎಂಬುದೆಲ್ಲ ಚರ್ಚೆಗಳಲ್ಲಿ ಗಂಡುಸಂಕುಲ ಕಳೆದುಹೋಗಿದ್ದರೆ ಹೆಣ್ಣುಮಕ್ಕಳೆಲ್ಲ ಮನೆಯ ಹೊರಗಿನ ಅಂಗಳವನ್ನೇ ತಮ್ಮ ಅಡುಗೆಮನೆಯಾಗಿ ಮಾಡಿಕೊಂಡಂತಿತ್ತು. ಮರದಲ್ಲಿ ಬೆಳೆದು ತೂಗಾಡುತ್ತಿದ್ದ ಹಲಸಿನ ಕಾಯಿಗಳನ್ನು ಕೊಯ್ದು ತಂದು ಪಲ್ಯ, ಹಪ್ಪಳ ಮಾಡಿ, ಹಲಸಿನ ಹಣ್ಣಿನ ಕಡುಬನ್ನು ಬುಟ್ಟಿತುಂಬ ಬೇಯಿಸಿ ಮೈಲಿಗೆಯಲ್ಲಿ ಮಾಡಿದ್ದನ್ನು ಉಳಿದವರು ತಿನ್ನಲಾಗದೆಂದು ತಾವೇ ಮನಸೋ ಇಚ್ಛೆ ತಿಂದು ತಣಿಯುತ್ತಿದ್ದರು. ಮೈಲಿಗೆಯಲ್ಲಿ ಕುಳಿತ ಇವರಿಗೆಲ್ಲರಿಗೂ ಸಾವಿನ ಮನೆಯ ನೆಪದಲ್ಲಿ ಮೂರು ಹೊತ್ತು ಉಪ್ಪು, ಹುಳಿ, ಖಾರವಿಲ್ಲದ ಸಪ್ಪೆ ಅಡುಗೆಯನ್ನು ಬಡಿಸಿ ಮದುವೆಗೆ ಮೊದಲು ತಮಗೆ ನೀಡಿದ ಸಂಕಟಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದುಕೊಂಡಿದ್ದ ಸೊಸೆಯಂದಿರು ಮಾತ್ರ ಇವರ ವೈಭೋಗವನ್ನು ನೋಡಿ ಒಳಗೊಳಗೇ ಹೊಟ್ಟೆ ಉರಿದುಕೊಳ್ಳುತ್ತಿದ್ದರು. ಇವೆಲ್ಲದರ ನಡುವೆ ಸತ್ತು ಬೂದಿಯಾದ ಅಜ್ಜ ಅದೆಷ್ಟು ಏಕಾಂಗಿ ಅನಿಸಿಬಿಟ್ಟಿತ್ತು ಅಲಕಾಳಿಗೆ. ಭೂಮಿಯಾಳದ ಲಾವಾದಂತೆ ಹೊರಲೋಕಕ್ಕೆ ಗೋಚರವಲ್ಲದ, ಆದರೆ ಒಳಗೊಳಗೆ ಕುದಿಯುವ ಸಾವಿನ ಬಗೆಗಿನ ತಲ್ಲಣಗಳು ಅವಳೊಳಗೆ ಅಳಿಸಲಾಗದ ಹಚ್ಚೆಯಾಗಿ ಉಳಿದುಬಿಟ್ಟಿದ್ದವು.

“ಪುಟ್ಟಾ, ಸರಿಯಾಗಿ ಕೇಳಿಸಿಕೊ. ಸಾವು ಎಂದರೆ ಅದು ಎಲ್ಲದರ ಕೊನೆ. ಭೂತ, ಪಿಶಾಚಿ, ದೆವ್ವ ಎಂಬುದೆಲ್ಲ ಕೇವಲ ಭ್ರಮೆ. ನಮ್ಮ ಆಪ್ತರಿಗೆ ಏನೆಲ್ಲ ಮಾಡಬೇಕೆಂದಿರುವೆವೋ ಅದನ್ನವರು ಇರುವಾಗಲೇ ಮಾಡಿ ಮುಗಿಸಬೇಕು. ಸತ್ತ ನಂತರ ನಡೆಯುವುದೆಲ್ಲ ಮನೋವ್ಯಾಪಾರಗಳು ನಿರ್ದೇಶಿಸುವ ನಾಟಕದ ದೃಶ್ಯಗಳಷ್ಟೆ. ನಾನು ಸತ್ತರೆ ಏನನ್ನೂ ಮಾಡಬೇಡ. ಯಾರ ಮಾತುಗಳಿಗೋ ಕಟ್ಟುಬಿದ್ದು ನಿನಗೆ ಅರ್ಥವಾಗದ ಆಚರಣೆಗಳಲ್ಲಿ ಕಳೆದುಹೋಗುವುದನ್ನು ನಾನಂತೂ ಇಷ್ಟಪಡಲಾರೆ. ನನ್ನ ದೇಹ ಸತ್ತ ನಂತರವೂ ಬಳಕೆಯಾಗಬೇಕೆಂಬುದು ನನ್ನ ಆಸೆ. ಹತ್ತಿರದ ಮೆಡಿಕಲ್ ಕಾಲೇಜಿಗೆ ಕರೆಮಾಡಿ ದೇಹವನ್ನು ಕಳಿಸಿದ ನಂತರ ಎಲ್ಲವೂ ಮುಗಿಯಿತೆಂದು ನಿರಾಳವಾಗಿರು. ನೆನಪುಗಳು ಯಾವಾಗಲೂ ಎದೆಯಲ್ಲಿ ದಾಖಲಾಗಿರುತ್ತವೆ. ಕಳಕೊಂಡವರನ್ನು ಬಲವಂತವಾಗಿ ನೆನಪಿಸಿಕೊಳ್ಳುವ ವಾರ್ಷಿಕ ಆಚರಣೆಗಳೆಲ್ಲವೂ ಢಂಬಾಚಾರಗಳಷ್ಟೆ” ಹೀಗೆ ಮಗನಲ್ಲಿ ಅಲಕಾ ಹೇಳುತ್ತಿದ್ದರೆ ಹರಿ, “ನೋಡು, ನಿನ್ನ ಐಡಿಯಾಲಜಿಯನ್ನು ಅವನ ತಲೆಯೊಳಗೆ ತುರುಕಿ, ಅವನ ಭಾವಲೋಕವನ್ನು ಹಾಳುಗೆಡವಬೇಡ. ಅವನನ್ನು ರೂಪಿಸಿದ ಪ್ರಜ್ಞೆ ಏನನ್ನು ಹೇಳುವುದೋ ಅದನ್ನವನು ಆಚರಿಸಲಿ. ನಾವು ಸಾಯುವವರೆಗಷ್ಟೇ ಬದುಕು ನಮ್ಮದು. ಮುಂದಿನದು ಬದುಕನ್ನು ಮುಂದುವರೆಸುವ ಮುಂದಿನವರದ್ದು.”ಎಂದು ತಕರಾರು ತೆಗೆದಿದ್ದ. “ಇದು ನನ್ನ ಜೀವನಕ್ಕೆ ಸಂಬಂಧಿಸಿದ್ದರಿಂದಲೇ ನಾನಿದನ್ನು ಹೇಳುತ್ತಿರುವುದು. ನಿನಗೇನಿಷ್ಟ ಎಂಬುದನ್ನು ಹೇಳಲು ನೀನು ಸ್ವತಂತ್ರ. ನನ್ನ ನಂತರವೂ ನನ್ನ ಹೆಸರಿನಲ್ಲಿ ಕ್ರಿಯಾಕರ್ಮದ ನಾಟಕಗಳು ನಡೆಯುವುದು ನನಗೆ ಬೇಕಿಲ್ಲ. ಅದನ್ನು ಸ್ಪಷ್ಟಪಡಿಸಿದೆ ಅಷ್ಟೆ.” ಎಂದು ಅಲಕಾ ಉತ್ತರಿಸಿದ್ದಳು. ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಮಗ ಮಾತ್ರ, “ಅಮ್ಮಾ, ಹೇಳಿದ್ದನ್ನೇ ಪದೇ ಪದೇ ಹೇಳುತ್ತಿರಬೇಡ. ನಿನ್ನ ಆಸೆಯೇನೆಂಬುದು ನನಗೆ ಗೊತ್ತಾಗಿದೆ. ಈಗ್ಯಾಕೆ ಅದರ ಬಗ್ಗೆ ವೃಥಾ ಚರ್ಚೆ?” ಎಂದಿದ್ದ. ನೆನಪುಗಳ ಯಾನದಲ್ಲಿ ಕಳೆದುಹೋಗಿದ್ದ ಅಲಕಾಳಿಗೆ ಬೆಳಗಿನ ಮಾತ್ರೆಗಳನ್ನು ಇನ್ನೂ ತೆಗೆದುಕೊಂಡಿಲ್ಲ ಎಂಬುದು ನೆನಪಾಯಿತು.

ಊಟಮಾಡಿ ಮಾತ್ರೆ ತಿಂದು ಬಂದ ಅವಳಿಗೆ ಹೀಗೆ ಜ್ವರವೆಂದು ಮಲಗಿ ನಾಲ್ಕು ದಿನಗಳಲ್ಲಿ ಅಚಾನಕ್ಕಾಗಿ ಕಣ್ಮುಚ್ಚಿದ ಅಮ್ಮನ ನೆನಪಾಯಿತು. ತನಗೂ ಹಾಗೆ ಧುತ್ತೆಂದು ಸಾವು ಬಂದರೆ ಹೇಗಿರಬಹುದು? ಎಂದು ಯೋಚಿಸತೊಡಗಿದಳು. ಕ್ರಿಕೆಟ್ಟು, ಆಫೀಸು, ಯೋಗ, ಧ್ಯಾನ ಎಂದೆಲ್ಲ ಸದಾ ವ್ಯಸ್ತನಾಗಿರುವ ಹರಿಗೆ ತಾನಿಲ್ಲದ ಕೊರತೆ ಬಾಧಿಸಲಾರದು ಎಂದುಕೊಂಡಳಾದರೂ ಮನೆಯೊಳಗಿನ ಏಕಾಂತ ಎಂತಹ ಗಟ್ಟಿಗರನ್ನಾದರೂ ಸುಡುತ್ತದೆಯೆಂಬುದು ನೆನಪಾಯಿತು. ಇಲ್ಲವಾದರೆ ಅರವತ್ತರ ಅಂಚಿನಲ್ಲಿ ಹೆಂಡತಿಯನ್ನು ಕಳಕೊಂಡ ಅಪ್ಪ ಮತ್ತೆ ಮದುವೆಯಾಗುತ್ತಿದ್ದರೆ? ಅಡುಗೆ, ಬಟ್ಟೆ-ಬರೆ, ಹಣಕಾಸು ಯಾವುದರಲ್ಲಿಯೂ ಒಬ್ಬರನ್ನೊಬ್ಬರು ಅವಲಂಬಿಸಿರದ ತಮ್ಮಿಬ್ಬರನ್ನು ಬೆಸೆದ ಬಂಧವಾದರೂ ಯಾವುದಿರಬಹುದೆಂದು ಯೋಚಿಸತೊಡಗಿದಳು. ಅಮೆರಿಕಾದಲ್ಲಿ ಓದುತ್ತಿರುವ ಮಗನಿಗೆ ಏನನ್ನಿಸಬಹುದು? ನಾನು ತಲೆಯೊಳಗೆ ತುಂಬಿದ ವಿಚಾರವಾದದಿಂದಾಗಿ ಅಮ್ಮನನ್ನು ನೋಡಲು ಹೋಗುವುದೋ, ಬೇಡವೋ ಎಂದು ಗೊಂದಲಗೊಳ್ಳಬಹುದೇನೊ? ಎಷ್ಟು ಸಂತೈಸಿಕೊಂಡರೂ ಕೊನೆಯ ಕ್ಷಣದಲ್ಲೊಮ್ಮೆ ನೋಡಬೇಕೆಂಬ ಆಸೆ ಅವನೊಳಗೂ ಮೊಳೆಯಬಹುದು. ಈ ರೀತಿಯ ಗೊಂದಲಗಳನ್ನೆಲ್ಲ ನಿಭಾಯಿಸುವ ತೊಂದರೆಯಿಂದ ತಪ್ಪಿಸಲೆಂದೇ ಇರಬೇಕು, ಸಾವಿನ ನಂತರ ಸತ್ತ ವ್ಯಕ್ತಿಗಳ ಎಲ್ಲ ಕ್ರಿಯೆಗಳನ್ನು ಹೊರಗಿನ ಕೈಗಳೇ ನಿರ್ವಹಿಸಿಬಿಡುವುದು. ಕ್ರಿಯಾಕರ್ಮಗಳು ಮುಗಿಯುವವರೆಗೂ ಮನೆಯವರ ನಡೆಗಳು ನಿರ್ದೇಶಿತ ಪಾತ್ರಗಳಂತೇ ಇರುವುದು. ಅಪೂರ್ಣವಾದ ಕಾದಂಬರಿಯನ್ನಂತೂ ಪ್ರಕಾಶಕರು ಪ್ರಕಟಿಸಿಯೇ ತೀರುತ್ತಾರೆ. ‘ಅಲಕಾ ಬರೆದ ಕೊನೆಯ ರೋಚಕ ಕಾದಂಬರಿ’ ಎಂಬ ಟ್ಯಾಗ್ಲೈನ್ನೊಂದಿಗೆ ಪ್ರಕಟಿಸಿ ವ್ಯಾಪಾರವನ್ನೂ ಕುದುರಿಸುತ್ತಾರೆ. ನಾಯಕಿಯ ಸಾವಿನವರೆಗೆ ಬಂದ ಕಾದಂಬರಿಯನ್ನು ಸಾವೇ ನಿಲ್ಲಿಸಿದ್ದನ್ನು ಓದುತ್ತಾ ತನ್ನ ಅಭಿಮಾನಿಗಳಂತೂ ಕಣ್ಣೀರು ಸುರಿಸುತ್ತಾರೆ.

ಜ್ವರದ ಮಾತ್ರೆಯ ಅಮಲಿಗೆ ಚೂರು ನಿದ್ದೆ ಆವರಿಸತೊಡಗಿತು. “ನಿನ್ನಜ್ಜಿಗೆ ಹದಿನೆಂಟು ಮಕ್ಕಳು.” ಎಂದು ಅಮ್ಮ ಹೇಳಿದ್ದು ನೆನಪಾಗತೊಡಗಿತು. “ಹದಿನೆಂಟು? ಮತ್ತೆ ಈಗಿರುವವರು ಹನ್ನೆಡಲ್ಲವೆ?” ತನ್ನ ಉದ್ಘಾರಕ್ಕೆ ಅಮ್ಮ, “ಹಾಂ, ಹದಿನೆಂಟು. ಒಂದೆರಡು ಅವಳಿ-ಜವಳಿಗಳು, ಕೊನೆಯಲ್ಲಿ ಒಮ್ಮೆ ಕಲ್ಲುಗುಂಡುಗಳನ್ನೂ ಹೆತ್ತಿದ್ದಳಂತಪ್ಪ.” ಎಂದಾಗ, “ಹೋಗಮ್ಮ, ಮನುಷ್ಯರ ಹೊಟ್ಟೆಯಲ್ಲಿ ಕಲ್ಲುಗುಂಡುಗಳು ಹುಟ್ಟುತ್ತವೆಯಾ? ನಿನಗೆಲ್ಲೋ ಭ್ರಾಂತು” ಎಂದು ನಕ್ಕಿದ್ದಳು. ಬೀಸುವ ಕಲ್ಲಿನಲ್ಲಿ ಅಕ್ಕಿಯನ್ನು ಗರಗರನೆ ರುಬ್ಬುತ್ತಿದ್ದ ಅಮ್ಮ, “ಮೊದಲೆಲ್ಲ ಹುಟ್ತಿದ್ದರಂತೆ. ತಲೆಮೇಲೆ ಬಾಯಿಯಿರುವ ರಕ್ಕಸರು ಹುಟ್ಟಿದ್ದೂ ಇದೆಯಂತೆ. ಇಲ್ಲೆ ಸರಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ನನ್ನ ಗೆಳತಿ ಹೇಳ್ತಿದ್ದಳು ಗೊತ್ತಾ? ಅಂತಹ ಮಕ್ಕಳು ಗಾಳಿಗೇ ಬೆಳೆದುಬಿಡ್ತಾರಂತೆ. ಅದಕ್ಕೇ ಅವರು ಮಗುವನ್ನು ತಾಯಿಗೂ ತೋರಿಸದೇ ಸುತ್ತಲೂ ಹೆಡಿಗೆ ಬೋರಲು ಹಾಕಿ ಉಸಿರುಗಟ್ಟಿಸಿ ಕೊಂದುಬಿಡುತ್ತಾರಂತೆ.” ಅಮ್ಮನ ಮಾತು ಕೇಳಿ ಅಲಕಾಳಿಗೆ ನಗು ಬಂದಿತ್ತು. ಸೀಳುತುಟಿಯ ಮಗುವೋ, ದೈಹಿಕ ನ್ಯೂನತೆಗಳಿರುವ ಮಕ್ಕಳೋ ಜನಿಸಿದಾಗ ಭ್ರೂಣಶಾಸ್ತ್ರವನ್ನು ಚೂರೇಚೂರು ಓದಿಲ್ಲದ ಈ ಅಮ್ಮನ ಗೆಳತಿಯಂತವರು ಹೀಗೆಲ್ಲ ಮಾಡುತ್ತಿದ್ದರೇನೋ ಎನಿಸಿತು. ಆದರೆ ಆಸ್ಪತ್ರೆಯ ಡಾಕ್ಟರುಗಳಿಗಾದರೂ ವಿಷಯ ಗೊತ್ತಿರಬೇಕಲ್ಲ. ಎಷ್ಟಾದರೂ ಮೂಢನಂಬಿಕೆಗಳು ಎಲ್ಲರನ್ನೂ ಆಳುವ ನಾಡಿದು ಎಂಬುದು ನೆನಪಾಗಿ ಸುಮ್ಮನಾದಳು. ಅಮ್ಮ ಇದ್ಯಾವುದರ ಪರಿವೆಯಿಲ್ಲದೇ ಹೇಳುತ್ತಲೇ ಇದ್ದಳು, “ಇದೇ ಬೀಸುವ ಕಲ್ಲು ನೋಡು. ನಿನ್ನಜ್ಜಿಯ ಕಾಲದಲ್ಲೂ ಇಲ್ಲಿಯೇ ಇತ್ತು. ಬಸುರಿ ಹೆಂಗಸು ಬೀಸುವ ಕಲ್ಲಿನ ಮೇಲೆ ಕುಳಿತುಕೊಳ್ಳಬಾರದು ಎಂದು ಎಷ್ಟು ಹೇಳಿದರೂ ನಿನ್ನಜ್ಜಿ ಇಲ್ಲಿಯೇ ಕುಳಿತು ಮಜ್ಜಿಗೆ ಕುಡಿಯುತ್ತಿದ್ದಳಂತೆ. ಮತ್ತೆ ಒಮ್ಮೆ ಬೀಸುವ ಕಲ್ಲೇ ಹುಟ್ಟಿತಂತೆ. ಇದನ್ನು ಅವಳಿಗೆ ಹೆರಿಗೆ ಮಾಡಿಸುತ್ತಿದ್ದ ಸೂಲಗಿತ್ತಿಯೇ ನನಗೆ ಹೇಳಿದ್ದು.” ಎಂದಳು. ಹೆತ್ತು, ಹೆತ್ತು ಹೈರಾಣಾದ ಗರ್ಭಚೀಲದಿಂದ ಮಾಂಸದ ಮುದ್ದೆಯೊಂದು ಹೊರಬಂದಾಗ ಅದನ್ನು ಕಲ್ಲೆಂದು ಭ್ರಮಿಸಿರಬಹುದು ಎನಿಸಿತು ಅಲಕಾಳಿಗೆ. “ಮತ್ತೆ? ಹದಿನೆಂಟಾದ ಮೇಲೆ ಮತ್ಯಾಕೆ ಹಡೆಯಲಿಲ್ಲ ಅಜ್ಜಿ? ಇನ್ನೊಂದೆಂಟು ಹುಟ್ಟಬಹುದಿತ್ತಲ್ಲ?” ಎಂದು ಅಮ್ಮನನ್ನು ಕೆಣಕಿದ್ದಳು. “ಹುಟ್ಟದೇ ಮತ್ತೆ? ಅಜ್ಜಿ ಬದುಕಿದ್ರೆ ಅಜ್ಜ ಬಿಡಬೇಕಲ್ಲ. ಮತ್ತೊಂದೆಂಟು ಮಾಡಿಯೇಬಿಡುತ್ತಿದ್ದ. ಫಲವಂತಿಕೆಯ ಹೆಂಗಸರಿಗೆ ಹೊರಗೆ ಮಲಗಿರುವ ಗಂಡ ಕೆಮ್ಮಿದರೂ ಮಕ್ಕಳಾಗಿಬಿಡುತ್ತವೆ.”ಎಂದವಳು ಮತ್ತೆ ಹೇಳಬಾರದಿತ್ತೇನೋ ಎಂದು ನಾಲಿಗೆ ಕಚ್ಚಿಕೊಂಡಿದ್ದಳು. “ಮತ್ಯಾಕೆ ಹುಟ್ಟಲಿಲ್ಲ? ಅಜ್ಜನ ಕೆಮ್ಮು ನಿಂತುಹೋಯಿತಾ?” ಅಷ್ಟೇ ತಮಾಷೆಯಾಗಿ ಕೇಳಿದ್ದಳು ಅಲಕಾ. “ಹ್ಞಂ…. ಅದೇನೋ ಕೊನೆಯ ಬಾಣಂತನದಲ್ಲಿ ಅಜ್ಜಿಗೆ ಸ್ರಾವವೇ ನಿಲ್ಲಲಿಲ್ಲವಂತೆ. ಹೆರಿಗೆಯ ಮುಟ್ಟು ನಿಲ್ಲುವವರೆಗೂ ಹೊಸಿಲು ದಾಟುವಂತಿಲ್ಲ ಎಂದು ನಿನ್ನಜ್ಜಿಯ ಅತ್ತೆ ತಡೆದು ನಿಂತಳಂತೆ. ಆಗೆಲ್ಲ ಮೈಲಿಗೆಯವರಿಗೆ ಬಚ್ಚಲು ಮನೆಯಲ್ಲಿಯೇ ವಾಸ. ಹಗಲೇನೋ ಬಚ್ಚಲೊಲೆಯ ಬೆಂಕಿ ಅವರನ್ನು ಬೆಚ್ಚಗಿಡುತ್ತದೆ. ಕಡುಚಳಿಯ ರಾತ್ರಿಯ ಪಾಡು ಯಾರಿಗೂ ಬೇಡ. ಹದಿನೆಂಟು ದಿನಗಳ ಕಾಲ ಕಾದ ಅಜ್ಜಿ ಮರುದಿನ ರಾತ್ರಿಯ ಚಳಿಗೆ ಕೊರಡಾಗಿದ್ದಳಂತೆ. ಸತ್ತವಳ ಮೊಲೆಯನ್ನೇ ಕಚ್ಚಿ ಮಲಗಿದ್ದ ನಿನ್ನ ಕೊನೆಯ ಅತ್ತೆ ಬದುಕಿಬಂದದ್ದೊಂದು ಪವಾಡ ಮಾರಾಯ್ತಿ.” ಎಂದು ಮುಗಿಸಿದಳು. ಅದಾಗಲೇ ಜೀವವಿಜ್ಞಾನದಲ್ಲಿ ಡಿಗ್ರಿ ಮುಗಿಸಿದ್ದ ಅಲಕಾಳಿಗೆ ಅಮ್ಮನ ಮಾತುಗಳೆಲ್ಲ ಇನ್ನೊಂದೇ ಬಗೆಯಲ್ಲಿ ಅರ್ಥವಾಗತೊಡಗಿದವು. “ಆದರೆ ನಿನ್ನಜ್ಜಿ ಆ ಕೊನೆಯ ಮಗಳನ್ನು ಕಾಡಿದ್ದೆಂದರೆ ಅಷ್ಟಿಷ್ಟಲ್ಲ ಮಾರಾಯ್ತಿ.” ಎಂದಳು. “ಮಕ್ಕಳನ್ನು ಅವರ ಅಮ್ಮಂದಿರು ಎಂದಿಗೂ ಕಾಡುವುದಿಲ್ಲ. ನಿಮಗೆಲ್ಲ ಸುಮ್ಮನೆ ಭ್ರಮೆ.” ಎಂದು ಅಲಕಾ ಅಮ್ಮನನ್ನು ದೂರಿದಳು. “ಕಾಡದೇ ಮತ್ತೆ. ನನಗಿನ್ನೂ ಸರಿಯಾಗಿ ನೆನಪಿದೆ, ತೀರ ಹದಿನೆಂಟಕ್ಕೇ ಅವಳ ಮದುವೆಯನ್ನು ಮನೆಯವರೆಲ್ಲರೂ ಸೇರಿ ಅವಸರದಲ್ಲಿ ನಿರ್ಣಯಿಸಿದ್ದರು. ಇನ್ನೇನು ಮದುವೆಗೆ ದಿಬ್ಬಣ ಹೊರಡಬೇಕೆನ್ನುವಾಗ ನಿನ್ನತ್ತೆ ಬಚ್ಚಲಲ್ಲಿ ಬಾಗಿಲು ಹಾಕಿ ಕೂತುಬಿಟ್ಟಿದ್ದಾಳೆ. ಕರೆದೂ, ಕರೆದೂ ಕೊನೆಯಲ್ಲಿ ಬಾಗಿಲು ತೆರೆದಾಗ ನೋಡಿದರೆ ಬಚ್ಚಲು ಪೂರ್ತಿ ರಕ್ತಮಯ. ಎಷ್ಟು ಬಟ್ಟೆ ತುರುಕಿದರೂ ಕಟ್ಟೆಯೊಡೆದು ಬರುವ ಕೆಂಪಿನ ಬುರುಗು. ನೋಡಿದವರೆಲ್ಲ ತಲೆತಿರುಗಿ ಬಿದ್ದವರೆ. ನಿನ್ನ ಅಜ್ಜಿಯ ತಂಗಿಯೊಂದು ಗಟ್ಟಿಯಿದ್ದದ್ದಕ್ಕೆ ನಿಗದಿಪಡಿಸಿದ ಮುಹೂರ್ತದಲ್ಲಿ ಮದುವೆ ನಡೆದುಹೋಯಿತು. ಸೊಂಟದ ಸುತ್ತಲೂ ನಾಲ್ಕು ಸೀರೆ ಹರಿದು ಕಟ್ಟಿದವಳೇ ಹೊರಗಿನಿಂದ ಪಟ್ಟೆಸೀರೆಯನ್ನು ಸುತ್ತಿ ಅವಳನ್ನು ತೆಕ್ಕೆಯಲ್ಲಿ ಇಟ್ಟುಕೊಂಡು ಹಸೆಮಣೆಯವರೆಗೂ ನಡೆಸಿಯೇಬಿಟ್ಟಳು. ಅಂತಿಂತೂ ಮದುವೆಯ ಶಾಸ್ತ್ರ ಮುಗಿದು ಸಪ್ತಪದಿಗೆಂದು ಏಳಿಸಿದರೆ ಹಸೆಮಣೆಯಿಡೀ ಕೆಂಪು. ಸುತ್ತಲಿನವರೆಲ್ಲ ಅಚ್ಛರಿಯಿಂದ ನೋಡುತ್ತಿರುವಂತೆಯೇ ಸಣ್ಣಜ್ಜಿ ಬೀಗತ್ತಿಯನ್ನು ಕರೆದು, ಯಾರೂ ಏನೂ ತಿಳಿದುಕೊಳ್ಳಬೇಡಿ. ಇವಳಮ್ಮ ಇವಳು ಎದೆ ಕಚ್ಚಿಕೊಂಡು ಇರುವಾಗಲೇ ಸ್ರಾವ ನಿಲ್ಲದೇ ಬದುಕು ಮುಗಿಸಿದ್ದಳು. ಕೊನೆಯ ಮಗಳು ನೋಡಿ, ಅವಳಿಗೆ ಇವಳೆಂದರೆ ಪ್ರಾಣ. ಮದುವೆ ಮಂಟಪದಲ್ಲಿ ಮಗಳನ್ನು ಹರಸಲು ಈ ರೀತಿ ಬಂದಿದ್ದಾಳೆ. ಮದುವೆ ಮುಗಿದ ಮೇಲೆ ಹೋಗುತ್ತಾಳೆ ಎಂದು ಸಮಜಾಯಿಸಿ ನೀಡಿ ಎಲ್ಲರನ್ನೂ ನಂಬಿಸಿದಳು. ಸೇರಿದವರೆಲ್ಲ ಈ ಪವಾಡವನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು ಗೊತ್ತಾ?” ಅಯ್ಯಪಾ, ಬಿಟ್ಟರೆ ಈ ಅಮ್ಮ ಇನ್ನೂ ಏನೇನೆಲ್ಲ ಹೇಳುತ್ತಾಳೆ ಅನಿಸಿ, “ಹೋಗಮ್ಮಾ, ನಿನ್ನ ರಕ್ತಪುರಾಣವನ್ನೆಲ್ಲ ನನಗೆ ಹೇಳಬೇಡ. ಪರೀಕ್ಷೆಗೆ ಓದಲಿಕ್ಕಿದೆ, ಬಿಟ್ಬಿಡು”ಎನ್ನುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿದ್ದಳು.

ಎಷ್ಟು ಮರೆಯಬೇಕೆನಿಸಿದರೂ ಮತ್ತದೇ ಹಸೆಮಣೆಯ ಚಿತ್ರ ಕಣ್ಮುಂದೆ ಬಂದು ಮೆಡಿಕಲ್ ಓದುತ್ತಿರುವ ಮನೆಯ ಹಿರಿಯಣ್ಣನೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದಳು. ಅದಕ್ಕವನು, “ಎಲ್ಲಾ ಕಟ್ಟುಕತೆ ಮಾರಾಯ್ತಿ. ನಮ್ಮ ದೊಡ್ಡ ಮಾವನನ್ನು ನೀನು ನೋಡಿದ್ದೀಯಲ್ಲ. ಎದೆತುಂಬಾ ದಟ್ಟಕೂದಲಿನ ಬಲಭೀಮನಂತಹ ಆಳು. ಚಳಿರಾತ್ರಿಗಳಲ್ಲಿ ಈ ಕೊನೆಯ ಅತ್ತೆ ಅವನ ಬೆಚ್ಚಗಿನ ಎದೆಯ ಮೇಲೆ ಬಾವನೆಂಬ ಸಲಿಗೆಯಿಂದ ತಲೆಯಿಟ್ಟು ಮಲಗಿದ್ದಾಳೆ. ಮೂರುಮಾಳಿಗೆಯ ಈ ಮನೆಯಲ್ಲಿ ಬಯಸಿದರೆ ಹಗಲೆಲ್ಲ ರಾತ್ರಿಯೆ. ಬಾವನ ಬೆಚ್ಚಗಿನ ಸ್ಪರ್ಶದ ನಶೆಯಲ್ಲಿ ಮುಳುಗಿದವಳಿಗೆ ಎದ್ದು ಬರಲಾಗಲಿಲ್ಲ. ಮುಟ್ಟುನಿಂತು ಮೂರು ತಿಂಗಳಾದಮೇಲೆ ಎಚ್ಚರವಾಗಿದೆ. ನಾಲ್ಕು ಮಕ್ಕಳ ತಂದೆಯಾದ ತನ್ನ ಗಂಡನ ಪರಾಕ್ರಮಕ್ಕೆ ದೊಡ್ಡತ್ತೆ ಬೆಚ್ಚಿಬಿದ್ದಿದ್ದಾಳೆ. ವಿಷಯವೆಲ್ಲಾದರೂ ಹೊರಗೆ ಬಂದರೆ ಅಪ್ಪ ಇವಳನ್ನೂ ತನ್ನ ಗಂಡನಿಗೆ ಕಟ್ಟುವುದು ಖಚಿತವೆಂದು ಅರಿವಾಗಿ ಸಣ್ಣಜ್ಜಿಯನ್ನು ಕರೆದುಕೊಂಡು ಬಂದು ಗುಟ್ಟಾಗಿ ಹಸಿರೌಷಧ ತಿನ್ನಿಸಿದ್ದಾಳೆ. ನಾದಿನಿಗೆ ಗಂಡು ಹುಡುಕುವುದು ಹಿರಿಯ ಅಳಿಯನ ಹೊಣೆಯೆಂದು ಅಜ್ಜನನ್ನು ನಂಬಿಸಿ ಪಾಪದ ಪ್ರಾಣಿಯೊಂದನ್ನು ತಂದು ಹಸೆಮಣೆಯೇರಿಸಿದ್ದಾಳೆ. ಅರ್ಧಹೋದ ಗರ್ಭ ಪೂರ್ತಿಯಾಗಿ ಜಾರಲು ನಿರಾಕರಿಸಿ ರಕ್ತದ ಓಕುಳಿಯೇ ಹರಿದಿದೆ. ಮದುವೆಯ ಮಾರನೆಯ ದಿನ ಆಸ್ಪತ್ರೆಗೆ ಹೋಗಿ ಎಲ್ಲವನ್ನೂ ತೊಳೆಸಿಕೊಂಡು ಬಂದಿರುತ್ತಾರಷ್ಟೆ. ಮನೆಯ ಹೆಣ್ಣುಮಕ್ಕಳ ಪ್ರಪಂಚದ ಈ ಗುಟ್ಟು ಸೊಸೆಯಂದಿರನ್ನು ತಲುಪದಿರುವುದು ಸಹಜವೇ ಬಿಡು. ಅಮ್ಮ ಅದನ್ನು ಪವಾಡವೆಂದು ನಂಬಿದ್ದಾಳೆ.” ಅಣ್ಣನ ಮಾತುಗಳನ್ನು ಕೇಳುತ್ತಿರುವಂತೆಯೇ ಅರೆ! ಸಾವು ಕೂಡ ಪವಾಡ ಮಾಡುತ್ತದೆಯಲ್ಲವೆ ಎಂದು ಅಲಕಾಳಿಗೆ ಅನಿಸಿದ್ದಂತೂ ಸುಳ್ಳಲ್ಲ.

ಮಾತ್ರೆಯ ಪ್ರಭಾವದಿಂದ ಜ್ವರದ ತಾಪವಿಳಿದು ಅಲಕಾ ಬೆವರಿನಿಂದ ಪೂರ್ತಿಯಾಗಿ ತೊಯ್ದುಹೋದಳು. ಲವಲವಿಕೆಯಿಂದ ಎದ್ದು ಸ್ನಾನ ಮಾಡಿ ಫ್ರೆಶ್ ಆಗಿ ಬಂದಳು. ದೇವರಿಗೊಂದು ದೀಪ ಬೆಳಗುವೆನೆಂದು ಬಂದವಳೆದುರು ಬುದ್ಧ, ಮಹಾವೀರರು ಪ್ರಸನ್ನಚಿತ್ತರಾಗಿ ಕುಳಿತು ನಗುತ್ತಿದ್ದರು. ಇದ್ದಕ್ಕಿದ್ದಂತೆಯೇ ಹೊಸವಿಚಾರವೊಂದು ಮನಸ್ಸಿನೊಳಗೆ ಸುಳಿದು ತನ್ನ ಕ್ಷೇತ್ರಕಾರ್ಯದ ಡೈರಿಯನ್ನು ಬಿಡಿಸಿ ವಿವರಗಳನ್ನು ಓದತೊಡಗಿದಳು. ಓಹ್! ತನ್ನ ಕಥಾನಾಯಕಿ ಜೈನವಂಶದವಳೆಂಬುದನ್ನು ತಾನೇಕೆ ಮರೆತುಬಿಟ್ಟೆ ಎಂದು ಅಲವತ್ತುಕೊಂಡಳು. ವೈಷ್ಣವ ಧರ್ಮದ ಪ್ರತಿಪಾದಕನಾದ ಚಕ್ರವರ್ತಿಯನ್ನು ಮದುವೆಯಾದ ಬಳಿಕ ಅವಳ ಧರ್ಮದ ಪ್ರಸ್ತಾಪವೇ ಎಲ್ಲೂ ಇಲ್ಲ. ಲಕ್ಷಿನಾರಾಯಣನ ಮಹಾನ್ ದೇಗುಲಗಳನ್ನು ಕಟ್ಟಿಸುವುದರಲ್ಲಿಯೇ ಅವಳು ವ್ಯಸ್ತವಾದ ವಿವರಗಳು ಮಾತ್ರವೇ ದಾಖಲಾಗಿವೆ. ಮರಣಕಾಲದಲ್ಲಿ ಅವಳು ಇವೆಲ್ಲವನ್ನೂ ತೊರೆದು ತನ್ನ ತವರಿನ ಬೆಟ್ಟವನ್ನು ನೆನಪಿಸಿಕೊಂಡಿದ್ದಾಳೆಂದರೆ ಖಂಡಿತವಾಗಿಯೂ ತನ್ನ ಪೂರ್ವಾಶ್ರಮದ ದೇವರನ್ನು ನೆನಪಿಸಿಕೊಂಡಿರುತ್ತಾಳೆ. ಬೆಟ್ಟ, ಜೈನಧರ್ಮ ಎಲ್ಲವೂ ಅಡಕಗೊಂಡಿರುವುದನ್ನು ನೋಡಿದರೆ ಖಂಡಿತವಾಗಿಯೂ ಅವಳು ತನ್ನ ಮರಣಕ್ಕಾಗಿ ಸಲ್ಲೇಖನವನ್ನೇ ಆಯ್ಕೆ ಮಾಡಿಕೊಂಡಿರಬೇಕು. ತನ್ನ ಸಾವನ್ನು ತಾನೇ ಆಯ್ದುಕೊಂಡು ನಿರಾಹಾರ ವ್ರತದ ಮೂಲಕ ಮರಣವನ್ನು ಆಹ್ವಾನಿಸಿಕೊಳ್ಳುವ ಐಚ್ಛಿಕ ಸಾವು ಅದು. ಸುತ್ತಲೂ ಎಷ್ಟೆಲ್ಲ ಜನರು ಸೇರಿದ್ದರೂ ಏಕಾಂಗಿಯಾಗಿ ಸಾವಿನ ಮನೆಯನ್ನು ಹೊಕ್ಕುವ ವಿಧಾನವದು. ದೇವರ ಬಳಿಗೆ ತಾನಾಗಿ ಸಾಗುತ್ತಿದ್ದೇನೆಂಬ ಸಾರ್ಥಕತೆಯು ವ್ಯಕ್ತಿಯ ಸಾವಿಗೊಂದು ಘನತೆಯನ್ನು ತಂದುಕೊಡುತ್ತದೆ. ಮತ್ತೆ ಸಾವು ಸಂಭವಿಸಬೇಕಾದದ್ದು ಹಾಗೆಯೇ ಅಲ್ಲವೆ? ಸಲ್ಲೇಖನದ ಎಲ್ಲ ವಿವರಗಳನ್ನು ದಾಖಲಿಸುತ್ತ ನಿಧಾನವಾಗಿ ನಾಯಕಿಯನ್ನು ಬಂಡೆಯ ಮೇಲೆ ಪ್ರತಿಷ್ಠಾಪಿಸಿದಳು. ಇದಕ್ಕೇ ಕಾದಿರುವಂತೆಯೇ ನಾಯಕಿ ತಕರಾರುಗಳಿಲ್ಲದೇ ಧ್ಯಾನದಲ್ಲಿ ಮಗ್ನಳಾಗಿಬಿಟ್ಟಳು. ಹೊರಜಗತ್ತಿನ ಎಲ್ಲ ತಲ್ಲಣಗಳನ್ನು ಬದಿಗಿಟ್ಟು ಬೆಳಕಿನ ಪುಂಜವಾಗಿ ಕರಗಿಹೋಗುವ ಅವಳನ್ನು ಅಲಕಾ ನಿಬ್ಬೆರಗಾಗಿ ನೋಡುತ್ತ ಕುಳಿತುಬಿಟ್ಟಳು!

ಕಥೆಗಾರರ ಪರಿಚಯ

ಸುಧಾ ಆಡುಕಳ: ಗಣಿತ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಗಣಿತ ಉಪನ್ಯಾಸಕಿ. ಸಾಹಿತ್ಯ ಆಸಕ್ತಿಯ ಕ್ಷೇತ್ರ. ನಾಟಕ ರಚನೆಯಲ್ಲಿ ವಿಶೇಷ ಆಸಕ್ತಿ. ಮಕ್ಕಳ ರವೀಂದ್ರ, ಮಕ್ಕಳ ರಾಮಾಯಣ, ಕನಕ-ಕೃಷ್ಣ, ಕಿಟಕಿ ಪಕ್ಕ ನಿಂತ ಹುಡುಗಿ, ಬ್ರಹ್ಮರಾಕ್ಷಸ ಮತ್ತು ಕಥೆ ಮೊದಲಾದ ಮಕ್ಕಳ ನಾಟಕಗಳು, ರಾಧಾ, ನೃತ್ಯಗಾಥಾ, ಮಾಧವಿ, ಆನಂದಭಾವಿನಿ ಏಕವ್ಯಕ್ತಿ ರಂಗರೂಪಕಗಳನ್ನು ರಚಿಸಿದ್ದಾರೆ.

ಇವರು ಬರೆದ ಬಕುಲದ ಬಾಗಿಲಿನಿಂದ ಅಂಕಣ ಬರಹಗಳ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುತ್ತದೆ. ಒಂದು ಇಡಿಯ ಬಳಪ ಕಥಾಸಂಕಲನ ಮೈತ್ರಿ ಪುಸ್ತಕ ಬಹುಮಾನಕ್ಕೆ ಆಯ್ಕೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.