ದೇಶದ ಮೂವರು ಪ್ರಧಾನಿಗಳಿಗೆ ಸಾಂಸ್ಕೃತಿಕ ಸಲಹೆಗಾರರಾಗಿದ್ದ ಕಪಿಲಾ ವಾತ್ಸ್ಯಾಯನ ಅವರು ಬಿಟ್ಟುಹೋಗಿರುವ ಸಾಂಸ್ಕೃತಿಕ–ಸಾಹಿತ್ಯಿಕ ಸಂಪತ್ತು ಬಲುದೊಡ್ಡದು. ಪಂಜಾಬಿ, ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷನ್ನು ಚೆನ್ನಾಗಿ ಬಲ್ಲವರಾಗಿದ್ದ ಅವರು, ತಮಿಳು, ಮಲೆಯಾಳಂ ಮತ್ತು ಕನ್ನಡ ಭಾಷೆಗಳ ಶ್ರೀಮಂತಿಕೆಗೆ ಮಾರು ಹೋಗಿದ್ದರು. ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಶಾಲೆಯ ಸ್ಥಾಪಕ ನಿರ್ದೇಶಕಿಯಾಗಿ ಅವರ ಮಾಡಿದ ಕೆಲಸ ಚಿರಸ್ಥಾಯಿಯಾಗಿ ನಿಲ್ಲುವಂತಹದ್ದು...

ದೆಹಲಿಯ ಸಾಂಸ್ಕೃತಿಕ ಲೋಕದಲ್ಲಿ ಕಪಿಲಾಜಿ ಎಂದೇ ಪ್ರಸಿದ್ಧರಾಗಿದ್ದ ಡಾ. ಕಪಿಲಾ ವಾತ್ಸ್ಯಾಯನರು (ಜನನ: ಡಿಸೆಂಬರ್ 25, 1928) ಕಳೆದ ಬುಧವಾರ ತಮ್ಮ 92ನೇ ವರ್ಷದಲ್ಲಿ ತೀರಿಕೊಂಡಾಗ ಬಹಳ ದೊಡ್ಡ ಸುದ್ದಿಯೇನೂ ಆಗಲಿಲ್ಲ. ಡ್ರಗ್ಸ್ ಮಾಫಿಯಾ, ಬಾಲಿವುಡ್ ಗಟರ್, ಸಾವಿರಾರು ಪುಟಗಳ ಪೊಲೀಸ್ ಕೇಸುಗಳು ಮತ್ತಿತರ ವಿಷಯಗಳಲ್ಲಿ ಮಗ್ನರಾಗಿರುವ ಜನರಿಗೆ ಭಾರತೀಯ ಕಲಾ ಪರಂಪರೆಯ ಧೀಮಂತ ವಿದ್ವಾಂಸೆಯೊಬ್ಬಳು ಕಾಲನ ಗರ್ಭದಲ್ಲಿ ಲೀನವಾದದ್ದು ಮಹತ್ವದ ಸಂಗತಿಯೆಂದೇನೂ ಅನ್ನಿಸಿರಲಿಕ್ಕಿಲ್ಲ.

ಪೂರ್ವ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರಿಗೆ ಸಾಂಸ್ಕೃತಿಕ ಸಲಹೆಗಾರರಾಗಿದ್ದ ಅವರ ನಿಧನವು ಸಮಕಾಲೀನ ರಾಜಕಾರಣಕ್ಕೂ ಮುಖ್ಯವಾದಂತಿಲ್ಲ. ಬದಲಾಗಿರುವ ಇಂದಿನ ಸಂದರ್ಭದಲ್ಲಿ ಇವೆಲ್ಲ ಬಹಳ ಸಹಜವಾದ ಬೆಳವಣಿಗೆಗಳಾಗಿವೆ. ಈ ಕಾರಣಕ್ಕೇನೇ ಕಪಿಲಾಜಿಯನ್ನು ನಾವಿಂದು ಅವಶ್ಯವಾಗಿ ನೆನಪಿಸಿಕೊಳ್ಳಬೇಕು. ಅವರು ನಮ್ಮ ಮುಂದಿನ ತಲೆಮಾರಿಗೆ ಬಹಳಷ್ಟನ್ನು ಬಿಟ್ಟು ಹೋಗಿದ್ದಾರೆ. ಕಪಿಲಾರವರು ಸಾಂಸ್ಕೃತಿಕ ಭಾರತದ ಭವಿಷ್ಯದ ಆಸ್ತಿ.

ಕಪಿಲಾ ವಾತ್ಸ್ಯಾಯನರ ತಂದೆ ಪಂಜಾಬಿ ಮೂಲದ ಶ್ರೀರಾಮ ಲಾಲ್. ತಾಯಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಸತ್ಯವತಿ ಮಲಿಕ್. ಕಪಿಲಾ ಹುಟ್ಟಿ ಬೆಳೆದದ್ದು ದೆಹಲಿಯಲ್ಲಿಯೇ. ದೆಹಲಿಯ ಹಿಂದೂ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಅವರು, ಮುಂದೆ ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಈ ನಡುವೆ ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದಿಂದ ಶಿಕ್ಷಣದಲ್ಲಿ ಇನ್ನೊಂದು ಸ್ನಾತಕೋತ್ತರ ಪದವಿ ಪಡೆದ ಅವರು, ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ 19 ವರುಷದ ತರುಣಿಯಾಗಿದ್ದ ಕಪಿಲಾ ಮಲಿಕ್ ಸ್ವಾತಂತ್ರ್ಯೋತ್ತರ ಭಾರತದ ಕನಸುಗಳೊಂದಿಗೇ ಬೆಳೆದವರು. ತನ್ನ ಗಂಭೀರ ಓದಿನ ಜೊತೆಗೆ ಅವರು ಸುಪ್ರಸಿದ್ಧ ಕಥಕ್ ಗುರು ಪಂಡಿತ ಬಿರ್ಜು ಮಹಾರಾಜರ ತಂದೆ ಅಚ್ಚನ್ ಮಹಾರಾಜರಲ್ಲಿ ಕಥಕ್ ಕಲಿತರು. ಗುರು ಅಮೋಬಿ ಸಿಂಗರಲ್ಲಿ ಮಣಿಪುರಿ ಕಲಿತರು. ಹಾಗೆ ಕಲಿಯುವಾಗ ಗುರು ಹೇಳಿದ ‘ನೃತ್ಯ ಮಾಡುವಾಗ ಭೂಮಿಗೆ ಆಘಾತ ನೀಡಬಾರದು’ ಎಂಬ ಮಾತನ್ನು ಕಪಿಲಾ ಕೊನೆವರೆಗೂ ನೆನಪಿನಲ್ಲಿ ಇಟ್ಟುಕೊಂಡಿದ್ದರು ಮತ್ತು ಆಚೀಚೆ ನಡೆಯುವಾಗ ಹಂಸದಂತೆ ಮೆಲ್ಲನೆ ಹೆಜ್ಜೆ ಹಾಕುತ್ತಾ ಸಪ್ಪಳವಾಗದಂತೆ ನೋಡಿಕೊಳ್ಳುತ್ತಿದ್ದರು.

ಗುರು ಸುರೇಂದ್ರನಾಥ ಜೇನಾ ಅವರಿಂದ ಒಡಿಸ್ಸಿ, ಗುರು ಮೀನಾಕ್ಷಿ ಸುಂದರಂ ಪಿಳ್ಳೈ ಅವರಿಂದ ಭರತನಾಟ್ಯವನ್ನೂ ಕಲಿತ ಅವರು, ವಿವಿಧ ನೃತ್ಯಗಳ ಮೂಲಕ ಭಾರತವನ್ನು ಗ್ರಹಿಸಲು ಪ್ರಯತ್ನಿಸಿದ್ದರು. ಈ ಎಲ್ಲಾ ನೃತ್ಯ ಪ್ರಕಾರಗಳನ್ನು ಅವರು ಕಲಿತದ್ದು ಅವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲೆಂದೇ ವಿನಾ ಪ್ರದರ್ಶನ ನೀಡುವುದಕ್ಕಲ್ಲ. ಇದಕ್ಕಾಗಿ ಅವರು ಪಶ್ಚಿಮದ ಕೆಲವು ನೃತ್ಯ ಪ್ರಕಾರಗಳಿಗೂ ತಮ್ಮನ್ನು ತೆರೆದುಕೊಂಡಿದ್ದರು. 1954ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ ರಾಷ್ಟ್ರೀಯ ನೃತ್ಯ ಉತ್ಸವದಲ್ಲಿ ಕಪಿಲಾ ಅವರು ಕಾಳಿದಾಸನ ಕುಮಾರ ಸಂಭವ ಮತ್ತು ಬೃಜ್ ಲೀಲಾದಲ್ಲಿ ನೃತ್ಯವನ್ನೂ ಮಾಡಿದ್ದರು. ‘ಆ ಉತ್ಸವದಲ್ಲಿಯೇ ನಾನು ಮೊದಲ ಬಾರಿಗೆ ಯಕ್ಷಗಾನದ ಬಗ್ಗೆ ಕೇಳಿಸಿಕೊಂಡದ್ದಲ್ಲದೆ ಡಾ. ಶಿವರಾಮ ಕಾರಂತರನ್ನೂ ಮಾತಾಡಿಸಿದ್ದೆ’ ಎಂದು ಅವರು ಒಮ್ಮೆ ನನ್ನೊಡನೆ ಹೇಳಿದ್ದರು.

ಡಾ. ಕಪಿಲಾ ಅವರದು ನಿರ್ವಿವಾದವಾಗಿ ಬಹುಮುಖ ಪ್ರತಿಭೆ. ಪಂಜಾಬಿ, ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷನ್ನು ಬಹಳ ಚೆನ್ನಾಗಿ ಮಾತಾಡುತ್ತಿದ್ದ ಅವರು, ಆ ಭಾಷೆಗಳಲ್ಲಿ ಬರೆಯಲಾದ ಸಾಹಿತ್ಯ ಸಂಸ್ಕೃತಿ ವಿಚಾರಗಳನ್ನು ಆಳವಾಗಿ ಬಲ್ಲವರಾಗಿದ್ದರು. ಇದರ ಜೊತೆಗೆ, ತಮಿಳು, ಮಲೆಯಾಳಂ ಮತ್ತು ಕನ್ನಡ ಭಾಷೆಗಳ ಅಭಿಜಾತ ಪರಂಪರೆಯ ಶ್ರೀಮಂತಿಕೆಗೆ ಅವರು ಮಾರು ಹೋಗಿದ್ದರು. ನಾನು ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‍ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಆಗಾಗ ಬರುತ್ತಿದ್ದ ಕಪಿಲಾಜಿ, ಕರ್ನಾಟಕದ ಶಿಲ್ಪ, ಚಿತ್ರ, ನಾಟ್ಯ, ಸಂಗೀತ, ವಾಸ್ತು, ಯಕ್ಷಗಾನ ಮತ್ತಿತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತಾಡುತ್ತಿದ್ದರು. ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಸಿದ್ಧ ವಿದ್ವಾಂಸ ಪ್ರೊ. ಮಧುಸೂಧನ ಢಾಕಿ ಮತ್ತು ಕಪಿಲಾರವರು ಕರ್ನಾಟಕದ ಬಗ್ಗೆ ಮಾತಾಡುವುದನ್ನು ಕೇಳುವುದೇ ನನಗೊಂದು ರೋಚಕ ಅನುಭವವಾಗಿತ್ತು. ಚರ್ಚೆಯ ಕೊನೆಯಲ್ಲಿ ಒಂದು ಚಹಾ ಮತ್ತು ಢಾಕಿಯವರ ‘ಕೃಷ್ಣಾ ನೀ ಬೇಗನೇ ಬಾರೋ’ ಹಾಡು ಇರಲೇಬೇಕಿತ್ತು.

ವಿಶೇಷ ಎಂದರೆ ಕಪಿಲಾರವರು ಬೇರೆಯವರ ಹೆಚ್ಚಿನ ವಾದಗಳನ್ನು ಸುತರಾಂ ಒಪ್ಪಿಕೊಳ್ಳುತ್ತಿರಲಿಲ್ಲ. ಎಲ್ಲ ವಿಷಯಗಳ ಬಗೆಗೂ ಅವರಲ್ಲಿ ಅವರದ್ದೇ ಆದ ಗಟ್ಟಿ ತೀರ್ಮಾನಗಳಿರುತ್ತಿದ್ದುವು. ಅವರು ಹೇಳಬೇಕು, ನಾವು ಕೇಳಬೇಕು ಇಷ್ಟೇ ಕೆಲಸ. ಹೀಗಿದ್ದರೂ ಸಂಸ್ಕೃತಿ ಅಧ್ಯಯನದ ಸಿದ್ಧಾಂತಗಳೆಲ್ಲಾ ಅವರಿಗೆ ಗೊತ್ತಿದ್ದವು. ಜೊತೆಗೆ ವಿವಿಧ ಕಲಾವಿದರೊಂದಿಗೆ ಕೆಲಸ ಮಾಡಿದ ಅನುಭವವೂ ಇತ್ತು. ಇದರಿಂದಾಗಿ ಕಪಿಲಾ ಅವರನ್ನು ವಾದದಲ್ಲಿ ಸೋಲಿಸುವುದು ಯಾರಿಗಾದರೂ ಕಷ್ಟವೇ ಆಗಿತ್ತು.

ಹಟಮಾರಿ ಮತ್ತು ಮುಂಗೋಪಿಯಾಗಿದ್ದ ಅವರ ಜೊತೆ ಕೆಲಸ ಮಾಡುವುದೂ ಸುಲಭವಾಗಿರಲಿಲ್ಲ. ಯಾರಾದರೂ ಸಮಯ ವ್ಯರ್ಥ ಮಾಡುತ್ತಿದ್ದರೆ ಬಹಳ ರೇಗುತ್ತಿದ್ದರು. ಈ ಕಾರಣದಿಂದಾಗಿ ಆಡಳಿತ ವಲಯದಲ್ಲಿ ಅವರಿಗೆ ಸಾಕಷ್ಟು ವೈರಿಗಳೂ ಇದ್ದರು. ಇಂಥ ಸಣ್ಣ ಪುಟ್ಟ ದೌರ್ಬಲ್ಯಗಳ ನಡುವೆಯೂ ಅವರು ರಾಜ್ಯಸಭಾ ಸದಸ್ಯೆಯಾಗಿ, ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಉಪಯುಕ್ತವಾದ ಹಲವು ಕೆಲಸಗಳನ್ನು ಮಾಡಿದ್ದಾರೆ. ಭಾರತದಾದ್ಯಂತ ಅನೇಕ ಉನ್ನತ ಮಟ್ಟದ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗಿದೆ. ಆದರೂ ಜನರು ಇವತ್ತು ಅವರನ್ನು ನೆನಪಿಸಿಕೊಳ್ಳುವುದು 1987ರಿಂದ 2000ನೇ ಇಸವಿಯವರೆಗೆ ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಶಾಲೆಯ ಸ್ಥಾಪಕ ನಿರ್ದೇಶಕಿ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ಅವರು ಮಾಡಿದ ಕೆಲಸಗಳ ಮೂಲಕ.

ಭಾರತದ ಮೂಲೆ ಮೂಲೆಗಳಿಂದ ಅವರು ಕಲಾವಿದರನ್ನು ಕರೆಸಿ ದೆಹಲಿಯಲ್ಲಿ ಏರ್ಪಡಿಸಿದ ಕಲಾ ಪ್ರದರ್ಶನಗಳು, ನಡೆಸಿದ ರಾಷ್ಟ್ರೀಯ-ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳು ಮತ್ತು ಮಾಡಿದ ಮಹತ್ವದ ಪ್ರಕಟಣೆಗಳು ಇವತ್ತಿಗೆ ಕಪಿಲಾರನ್ನು ನಾವೆಲ್ಲ ನೆನಪಿಸಿಕೊಳ್ಳುವಂತೆ ಮಾಡಿವೆ. ಅವರು ಬಹಳ ವರ್ಷಗಳ ಕಾಲ ಭಾರತವನ್ನು ಯುನೆಸ್ಕೊದಲ್ಲಿ ಪ್ರತಿನಿಧಿಸಿದ್ದರು. ಅವರಿಂದಾಗಿಯೇ ಕೇರಳದ ಕುಡಿಯಾಟ್ಟಂಗೆ ಮರುಜನ್ಮ ದೊರೆಯಿತು.

ಅನೇಕ ಶಿಷ್ಯ ವೇತನಗಳನ್ನೂ ಪ್ರಶಸ್ತಿಗಳನ್ನೂ ಪಡೆದ ಕಪಿಲಾರಿಗೆ 2011ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆಜ್ಞೇಯ ಹೆಸರಿನಿಂದ ಬರೆಯುತ್ತಿದ್ದ ಸುಪ್ರಸಿದ್ಧ ಹಿಂದಿ ಕವಿ ಎಸ್.ಎಚ್.ವಾತ್ಸ್ಯಾಯನ ಅವರ ಪತಿ. 1956ರಲ್ಲಿ ಮದುವೆಯಾದ ಅವರು 1969ರಲ್ಲಿ ಬೇರ್ಪಟ್ಟರು. ಆನಂತರ ಕೊನೆಯವರೆಗೆ ಅವರು ಒಂಟಿಯಾಗಿಯೇ ಇದ್ದರು. 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳನ್ನು ಬರೆದ ಅವರು ತಮ್ಮ ಭಾರತೀಯ ಕಲೆಗಳಲ್ಲಿ ಚೌಕ ಮತ್ತು ವೃತ್ತಗಳು ( 1997), ಭರತನ ನಾಟ್ಯ ಶಾಸ್ತ್ರ ( 1996), ಭಾರತದ ಜನಪದ ಕುಣಿತಗಳ ಪರಂಪರೆ ( 2010), ಮತಂಗ ಮುನಿಯ ಬೃಹದ್ದೇಶಿ ( 1992), ಕಲಾತತ್ವ ಕೋಶ ( 2008) ಮೊದಲಾದ ಕೃತಿಗಳಿಂದ ಸಾರಸ್ವತ ಲೋಕದಲ್ಲಿ ಶಾಶ್ವತವಾದ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದ ಸಾಂಸ್ಕೃತಿಕ ಲೋಕದ ಅನಭಿಷಿಕ್ತ ರಾಣಿಯಂತೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಮೆರೆದ ಕಪಿಲಾ ವಾತ್ಸ್ಯಾಯನರ ನಿಧನವು ಉಂಟು ಮಾಡಿದ ನಿರ್ವಾತವನ್ನು ತುಂಬುವ ಇನ್ನೊಬ್ಬ ವ್ಯಕ್ತಿ ಸದ್ಯಕ್ಕಂತೂ ಇಲ್ಲ. ದೆಹಲಿಯ ಲೋಧಿ ಎಸ್ಟೇಟಿನಲ್ಲಿರುವ ಇಂಡಿಯಾ ಇಂಟರ್ ನ್ಯಾಶನಲ್ ಸೆಂಟರ್‌ನಲ್ಲಿರುವ ಏಷ್ಯಾ ಯೋಜನೆಯ ಕೊಠಡಿಯನ್ನು ಯಾರು, ಯಾವಾಗ ತುಂಬುವರೋ ಕಾಣೆ.

ಪಂಡಿತ ಬಿರ್ಜು ಮಹಾರಾಜ ಅವರ ಜತೆಯಲ್ಲಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.