ಸುರಪುರ ಒಂದು ಪ್ರಾಚೀನ ಬೇಡರ ರಾಜ್ಯ
ಮೂಲ: ಫ್ರಾ ಮುರ್ಜ ಜಂಗ್ ಬಹದ್ದೂರ
ಕನ್ನಡಕ್ಕೆ: ರಂಗನಗೌಡ ಎಚ್. ಪಾಟೀಲ
ಪ್ರ: ಸಪ್ತಗಿರಿ ಪ್ರಕಾಶನ, ಗೋಪಾಳಪುರ (ದೇವದುರ್ಗ)
ಪುಟಗಳು: 172 ಬೆಲೆ: 250

ಕಲ್ಯಾಣ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಬಹುತೇಕ ಸಂಸ್ಥಾನಗಳ ಚರಿತ್ರೆಯನ್ನು ದಾಖಲಿಸುವಂತಹ ಕೆಲಸವೇ ಆಗಿಲ್ಲ. ಹೀಗಾಗಿ ಚಾರಿತ್ರಿಕವಾದ ಎಷ್ಟೋ ಅಮೂಲ್ಯ ವಿವರಗಳು ಗತಿಸಿದ ರಾಜರುಗಳೊಟ್ಟಿಗೇ ಮಣ್ಣಾಗಿಬಿಟ್ಟಿವೆ. ಸುರಪುರ ಸಂಸ್ಥಾನದ ಅಂತಹ ಐತಿಹಾಸಿಕ ವಿವರಗಳು ಕಾಲದೊಂದಿಗೆ ಹೀಗೆ ಕಳೆದುಹೋಗಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಫ್ರಾ ಮುರ್ಜ ಜಂಗ್ ಬಹದ್ದೂರ ಅವರು ಸಂಗ್ರಹಿಸಿ ಕೊಟ್ಟ ಚರಿತ್ರೆಯೇ ‘ಸುರಪುರ ಒಂದು ಪ್ರಾಚೀನ ಬೇಡರ ರಾಜ್ಯ’. 115 ವರ್ಷಗಳಷ್ಟು ಹಿಂದೆ ಇಂಗ್ಲಿಷ್‌ನಲ್ಲಿ ಪ್ರಕಟವಾದ ಕೃತಿ ಇದೀಗ ರಂಗನಗೌಡ ಎಚ್. ಪಾಟೀಲ ಅವರ ಪ್ರಯತ್ನದಿಂದ ಕನ್ನಡಕ್ಕೆ ಬಂದಿದೆ.

ಫ್ರಾ ಮುರ್ಜ ಜಂಗ್ ಬಹದ್ದೂರ – ಹೆಸರೇ ಸೂಚಿಸುವಂತೆ ಅವರೊಬ್ಬ ಹೈದರಾಬಾದ್ ನಿಜಾಮರ ಪರಿವಾರಕ್ಕೆ ಸೇರಿದ ವ್ಯಕ್ತಿ. ನಿಜಾಮ್ ಪ್ರಾಂತ್ಯಕ್ಕೆ ಸೇರಿದ್ದರಾಯಚೂರು ಜಿಲ್ಲೆಯ ಕಲೆಕ್ಟರ್ ಆಗಿ ನೇಮಕಗೊಂಡಿದ್ದ ಅವರು, ಕಾರ್ಯನಿಮಿತ್ತ ಸುರಪುರಕ್ಕೆ ಮೇಲಿಂದ ಮೇಲೆ ಭೇಟಿ ನೀಡುವ ಅವಕಾಶವನ್ನು ಪಡೆದಿದ್ದರು. ಅದೇ ಸುರಪುರದಲ್ಲಿ 12 ವರ್ಷಗಳ ಕಾಲ ರಾಜಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಕರ್ನಲ್ ಫಿಲಿಪ್ ಮೆಡೋಸ್ ಟೇಲರ್ ಅವರು ಬರೆದ ‘ದಿ ಸ್ಟೋರಿ ಆಫ್ ಮೈ ಲೈಫ್’ ಕೃತಿ ಜಂಗ್ ಅವರ ಮೇಲೆ ಗಾಢ ಪ್ರಭಾವವನ್ನು ಬೀರಿತ್ತು. ಸುರಪುರದ ಭೂಪರಿಸರ, ಇತಿಹಾಸ, ಸಂಸ್ಕೃತಿ, ಜೀವನಶೈಲಿ, ಸಾಮಾಜಿಕ–ಆರ್ಥಿಕ ಸ್ಥಿತಿಗತಿ ಮೊದಲಾದ ವಿವರಗಳನ್ನು ಮೆಡೋಸ್ ಕೃತಿಯಲ್ಲಿ ಓದಿದ್ದ ಅವರು, ಬೇಡ ದೊರೆಗಳ ಇತಿಹಾಸವನ್ನು ದಾಖಲಿಸುವ ಸಾಹಸಕ್ಕೆ ಕೈಹಾಕಿದರು.

ಹಕೀಮ್ ಪಾಪಯ್ಯ ಶಾಸ್ತ್ರಿ ಎಂಬುವವರ ಬಳಿಯಿದ್ದ ತಾಳೆಗರಿಗಳ ದಾಖಲೆಗಳನ್ನು ಅಧ್ಯಯನ ಮಾಡಿ, ಟೇಲರ್ ಅವರ ಮಾಹಿತಿಯನ್ನೂ ಜತೆಗೆ ಸೇರಿಸಿಕೊಂಡು ಅಧಿಕೃತ ವಿವರಗಳನ್ನೇ ಕೊಡಲು ಜಂಗ್ ಯತ್ನಿಸಿರುವುದು ಎದ್ದು ಕಾಣುತ್ತದೆ. ತಮಗೆ ದೊರೆತ ತಾಳೆಗರಿಗಳನ್ನು ‘ಬಹು ಮೌಲ್ಯಯುತವಾದ ದಾಖಲೆಗಳು’ ಎಂದು ಅವರು ಕೊಂಡಾಡಿದ್ದಾರೆ. ಸುರಪುರ ಪಟ್ಟಣವನ್ನು ಅವರು ‘ಸಿಟಿ ಆಫ್ ಗಾಡ್ಸ್’ (ದೇವರುಗಳ ನಗರ) ಎಂದು ಕರೆದಿದ್ದಾರೆ. ಸುರಪುರ ರಾಜರ ವಂಶಾವಳಿ, ಬೇಡರ ನಡತೆ ಮತ್ತು ಸಂಪ್ರದಾಯ, ಔರಂಗಜೇಬ್ ಮತ್ತು ಬೇಡರು, ಬ್ರಿಟಿಷ್ ಸರ್ಕಾರದ ವಶದಲ್ಲಿ ಸುರಪುರ, ನಿಜಾಮರ ಅಧೀನದಲ್ಲಿ ಸುರಪುರ... ಹೀಗೆ ವಿವಿಧ ಅಧ್ಯಾಯಗಳಲ್ಲಿ ಅವರು ಕಥೆ ಹೇಳುತ್ತಾ ಹೋದಂತೆ ಬೇಡದೊರೆಗಳ ಚರಿತ್ರೆ ಸುರುಳಿ, ಸುರುಳಿಯಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.

ಸುರಪುರ ಆ ದಿನಗಳಲ್ಲಿ ಎದುರಿಸಿದ ಬರದ ಚಿತ್ರಣವನ್ನೂ ಜಂಗ್ ಆರ್ದ್ರವಾಗಿ ಕಟ್ಟಿಕೊಟ್ಟಿದ್ದಾರೆ. 1791ರಿಂದ 1878ರ ಅವಧಿಯಲ್ಲಿ ಸುರಪುರ ಎದುರಿಸಿದ ಬರ ಎದೆ ನಡುಗಿಸುವಂಥದ್ದು. ಬರಗಳಲ್ಲೇ ಅತ್ಯಂತ ಭೀಕರ ಬರ ಎನಿಸಿದ ಡೊಯಿಬರ ಅಥವಾ ಡೋಗಿಬರ (Skull Famine) 1792ರಲ್ಲಿ ಈ ಪ್ರದೇಶವನ್ನು ಆವರಿಸಿತ್ತು. ಎಲ್ಲಲ್ಲಿ ಕಾಲಿಟ್ಟರೆ ಅಲ್ಲಲ್ಲಿ ತಲೆಬುರುಡೆಗಳೇ ಸಿಗುತ್ತಿದ್ದವು. ಸತ್ತವರ ನಿಖರ ಸಂಖ್ಯೆಯೂ ತಿಳಿದಿರಲಿಲ್ಲ. ಜೋಳದ ಬೆಲೆ ವಿಪರೀತ ಹೆಚ್ಚಾಗಿ ಒಂದು ರೂಪಾಯಿಗೆ ಕೇವಲ ಮೂರು ಸೇರು ಸಿಗುವಂತಾಗಿತ್ತು. ಗ್ರಾಮಗಳು ಜನರಿಲ್ಲದೆ ಹಾಳು ಬಿದ್ದಿದ್ದವು... ಇಂತಹ ವಿವರಗಳ ಮೂಲಕ ಬರದ ಜೀವಂತ ಚಿತ್ರಣವನ್ನು ಅವರು ಬಿಡಿಸಿಟ್ಟಿದ್ದಾರೆ.

ಒಂದೊಮ್ಮೆ ಬೇಡರ ಸ್ವತಂತ್ರ ಸಂಸ್ಥಾನವಾಗಿದ್ದ ಸುರಪುರ, 1858ರಲ್ಲಿ ಇಂಗ್ಲಿಷರ ವಶಕ್ಕೂ ಬಳಿಕ ನಿಜಾಮನ ಆಡಳಿತಕ್ಕೂ ಒಳಪಟ್ಟಿತ್ತು. ಆಗಿನ ರಾಜಕೀಯ ಚಿತ್ರಣವನ್ನೂ ಜಂಗ್ ಓದುಗರ ಮುಂದಿಟ್ಟಿದ್ದಾರೆ. ಸುರಪುರ ರಾಜರ ವಂಶಾವಳಿ ಸಂಗ್ರಹಿಸುವಲ್ಲಿ ಅವರು ಅಪಾರ ಶ್ರಮ ಹಾಕಿದ್ದಾರೆ.

ಈ ರಾಜಮನೆತನದ ಕೊನೆಯ ದೊರೆ ರಾಜಾ ನಾಲ್ವಡಿ ವೆಂಕಟಪ್ಪನಾಯಕ ಅವರ ಇತಿಹಾಸ ಎಷ್ಟು ರೋಚಕವಾಗಿದೆಯೋ ಅಷ್ಟೇ ದುಃಖಾಂತ್ಯವೂ ಆಗಿದೆ. ಸುರಪುರದ ಮಟ್ಟಿಗೆ ಈ ಅವಧಿಯನ್ನು ಮಹಾಸಂಘರ್ಷದ ಕಾಲ ಎಂದು ಕರೆಯಬಹುದೇನೋ. ಆಗಿನ ಎಲ್ಲ ವಿವರಗಳನ್ನೂ ಜಂಗ್ ಸಂಗ್ರಹಿಸಿ ಕೊಟ್ಟಿದ್ದಾರೆ. ಬೇಡರ ಜನಜೀವನ, ಗುಣ–ಸ್ವಭಾವ, ಉಡುಗೆ, ಹಬ್ಬಗಳ ಆಚರಣೆ, ಬೇಟೆಯ ಕೌಶಲ, ಕ್ರೀಡೆ, ಸಂಸ್ಕೃತಿಗಳ ಕುರಿತೂ ವಿವರ ಒದಗಿಸಿದ್ದಾರೆ. ಅಪರೂಪದ ಚಿತ್ರಗಳ ಸಂಪುಟವನ್ನೂ ಕೊಟ್ಟಿದ್ದಾರೆ.

ಕೃತಿಗೆ ಸುದೀರ್ಘ ಪೀಠಿಕೆ ಬರೆದಿರುವ ಲಕ್ಷ್ಮಣ ತೆಲಗಾವಿಯವರು ಸುರಪುರ ಚರಿತ್ರೆಯ ಲೋಕಕ್ಕೆ ಅಸಾಧಾರಣವಾದ ಪ್ರವೇಶಿಕೆಯನ್ನು ಒದಗಿಸಿದ್ದಾರೆ. ಜಂಗ್ ಅವರು ಬಳಸಿರುವುದು ಶತಮಾನದ ಹಿಂದಿನ ಗೆಜೆಟಿಯರ್ ಭಾಷೆ. ಈ ಚರಿತ್ರೆ ಕಥನ ಸ್ವರೂಪದಲ್ಲಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು. ರಂಗನಗೌಡರ ಅನುವಾದ ಸರಳ ಹಾಗೂ ಸುಲಭಗ್ರಾಹ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.