ಕನ್ನಡ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳು ಸಾಮಾನ್ಯವಾಗಿ ಎರಡು ಬಗೆಯವು. ಅಂಕಿಅಂಶಗಳು ಪ್ರಧಾನವಾದ ಹಾಗೂ ಒಳನೋಟಗಳುಳ್ಳ ವಿಶ್ಲೇಷಣೆ ವಿರಳವಾದ ಕೃತಿಗಳು ಮೊದಲನೆಯ ಗುಂಪಿನವು. ತಕ್ಕಮಟ್ಟಿಗೆ ವಿಶ್ಲೇಷಣಾ ಪ್ರಧಾನವಾಗಿದ್ದರೂ ಅದಕ್ಕೆ ಪೂರಕವಾದ ಅಂಕಿಅಂಶಗಳ ಬೆಂಬಲವಿಲ್ಲದ ಬರವಣಿಗೆಯದು ಇನ್ನೊಂದು ಬಗೆ. ಈ ಎರಡರ ಸಮತೋಲನದ ಕೃತಿಗಳು ಕನ್ನಡದಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಡಿ.ವಿ. ಗುಂಡಪ್ಪನವರ ‘ವೃತ್ತಪತ್ರಿಕೆ’ಯಂಥ ಆಚಾರ್ಯ ಕೃತಿಯಿದ್ದರೂ, ಅದು ಪತ್ರಿಕೋದ್ಯಮದ ಮೂಲ ತತ್ತ್ವಗಳ ಚರ್ಚೆಯ ಪ್ರಯತ್ನವೇ ಹೊರತು, ಪತ್ರಿಕೋದ್ಯಮದ ಸ್ಥಿತಿಗತಿಗಳನ್ನು ಒರೆಗೆ ಹಚ್ಚುವ ಕೃತಿಯಲ್ಲ.

ಒಳನೋಟಗಳುಳ್ಳ ವಿಶ್ಲೇಷಣೆ, ಪೂರಕ ಮಾಹಿತಿ – ಎರಡನ್ನೂ ಒಳಗೊಳ್ಳುವುದರ ಜೊತೆಗೆ ಲವಲವಿಕೆಯ ಭಾಷೆಯಿಂದಲೂ ಗಮನಸೆಳೆಯುವ ಕೃತಿ ಪದ್ಮರಾಜ ದಂಡಾವತಿ ಅವರ ‘ಕನ್ನಡ ಪತ್ರಿಕೋದ್ಯಮ: ಮೂವತ್ತು ವರ್ಷ’. 1991ರಿಂದ 2021ರವರೆಗಿನ ಅವಧಿ ಲೇಖಕರ ಅಧ್ಯಯನದ ಪರಿಧಿಯಾಗಿದ್ದರೂ, ಈ ಅಧ್ಯಯನ ಕನ್ನಡಕ್ಕೆ ಸೀಮಿತಗೊಂಡಿದ್ದರೂ, ಇಲ್ಲಿನ ಬರವಣಿಗೆ ಸೂಚ್ಯರೂಪದಲ್ಲಿ ಭಾರತೀಯ ಸಮಕಾಲೀನ ಪತ್ರಿಕೋದ್ಯಮದ ಸ್ಥಿತಿ–ಗತಿಯ ಚಿತ್ರಣವೂ ಆಗಿದೆ. ಮೂರು ವರ್ಷಗಳ ಕೊರೊನಾ ಕಾಲಘಟ್ಟವನ್ನೂ ಒಳಗೊಂಡ ಕಳೆದ ಮೂರು ದಶಕಗಳು ಪತ್ರಿಕೋದ್ಯಮದ ಪಾಲಿಗೆ ನಿರ್ಣಾಯಕವೂ ಹಾಗೂ ಪತ್ರಿಕಾತತ್ತ್ವಗಳ ಅಗ್ನಿಪರೀಕ್ಷೆಯ ಸಮಯವೂ ಆಗಿರುವುದು, ಪದ್ಮರಾಜರ ವಿಶ್ಲೇಷಣೆಯನ್ನು ಕುತೂಹಲದಿಂದ ನೋಡಲು ಕಾರಣವಾಗಿದೆ. ಈ ನಿರೀಕ್ಷೆಯನ್ನು ಪುಸ್ತಕ ಹುಸಿ ಮಾಡುವುದಿಲ್ಲ. ಆಧುನಿಕ ಪತ್ರಿಕೋದ್ಯಮದ ಕಥನ ಮಾಹಿತಿಯ ಕಂತೆಯಾಗಿಯಷ್ಟೇ ಉಳಿಯದೆ, ಜಡ ವಿಶ್ಲೇಷಣೆಯಿಂದ ನೀರಸ ಓದಾಗದೆ, ಸೃಜನಶೀಲ ಸಾಮಾಜಿಕ ಸಂಕಥನವಾಗುವುದರಲ್ಲಿ ‘ಕನ್ನಡ ಪತ್ರಿಕೋದ್ಯಮ: ಮೂವತ್ತು ವರ್ಷ’ ಕೃತಿ ಯಶಸ್ಸು ಕಂಡಿದೆ.

ಈ ಕೃತಿಯಲ್ಲಿ ಕಸುಬುದಾರ ಪತ್ರಕರ್ತನ ಇರುವು ಕಾಣಿಸುವಂತೆಯೇ ಸೂಕ್ಷ್ಮಸಂವೇದಿ ಸಮಾಜ ವಿಜ್ಞಾನಿಯ ಕಣ್ಣೋಟವೂ ಇದೆ. ಪತ್ರಿಕೋದ್ಯಮದ ಒಳನಿಂತು ನೋಡುವುದು ಸಾಧ್ಯವಾಗಿರುವಂತೆ, ಅಂತರದಲ್ಲಿ ನಿಂತು ನೋಡುವುದೂ ಲೇಖಕರಿಗೆ ಸಾಧ್ಯವಾಗಿರುವುದರಿಂದಲೇ ‘ಮಾಧ್ಯಮ ಕುಟುಂಬ’ಗಳಲ್ಲಿನ ಲಿಂಗ ಹಾಗೂ ಜಾತಿ ಪ್ರಾತಿನಿಧ್ಯದ ಕುರಿತು ಕಠಿಣ ಪ್ರಶ್ನೆಗಳನ್ನು ಚರ್ಚಿಸುವುದು ಸಾಧ್ಯವಾಗಿದೆ. ಕನ್ನಡ ಪತ್ರಿಕೆಗಳ ಸಂಪಾದಕರುಗಳ ಸಂದರ್ಶನವನ್ನು ಆಧರಿಸಿದ ಈ ವಿಶ್ಲೇಷಣೆ, ಸಮಾಜದ ಓರೆಕೋರೆಗಳನ್ನು ಪ್ರತಿಫಲಿಸುವ ಕನ್ನಡಿಯೂ ಸಪಾಟಾಗಿಲ್ಲದೆ, ಅರೆಕೊರೆ ಹೊಂದಿರುವುದನ್ನು ಸೂಚಿಸುತ್ತದೆ ಹಾಗೂ ಲಿಂಗ–ಜಾತಿ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಕನ್ನಡ ಪತ್ರಿಕೆಗಳು ಹೊಂದಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಓದುಗರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.

‘ಮಹಿಳೆ: ಅಲಂಕಾರಕ್ಕಾಗಿ ಮಾತ್ರ’, ‘ಅಂಚಿನಲ್ಲಿ ಉಳಿದ ಗ್ರಾಮ ಸಂವೇದನೆ’, ‘ಜಾತಿ ಅಂತರ ಕಾಯ್ದುಕೊಂಡ ಮಾಧ್ಯಮ’, ‘ಪರಭಕ್ಷಕ ದರಸಮರ’ ಅಧ್ಯಾಯಗಳ ಶೀರ್ಷಿಕೆಗಳೇ ಪತ್ರಕರ್ತರಾಗಿ ಪದ್ಮರಾಜ ದಂಡಾವತಿ ಅವರ ಮನೋಧರ್ಮ ಎಂತಹದ್ದು ಹಾಗೂ ಕಾಳಜಿಗಳು ಯಾವ ಬಗೆಯವು ಎನ್ನುವುದನ್ನು ಸೂಚಿಸುವಂತಿವೆ.

‘ಪ್ರಜಾವಾಣಿ’ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ದೀರ್ಘ ಕಾಲ ದುಡಿದ ಲೇಖಕರ ಅನುಭವವೂ ಪ್ರೌಢ ಪ್ರಬಂಧ ಪುಷ್ಟಗೊಳ್ಳಲು ಕಾರಣವಾಗಿದೆ. ಆದರೂ, ಈ ಕೃತಿಯನ್ನು ರೂಪಿಸುವಲ್ಲಿ ಪತ್ರಕರ್ತನ ಅನುಭವದ ಪ್ರಭಾವಳಿ ಹಿನ್ನೆಲೆಗೆ ಸರಿದು, ‘ಪತ್ರಿಕೋದ್ಯಮ ವಿದ್ಯಾರ್ಥಿ’ ಮುನ್ನೆಲೆಗೆ ಬಂದಿರುವುದು ಕುತೂಹಲಕರ. ಈ ಸೃಜನಶೀಲ ರೂಪಾಂತರ ಕೃತಿಯ ಕಾಂತಿ ಹೆಚ್ಚಲು ಕಾರಣವಾಗಿದೆ. ಮಾಹಿತಿ ಕೋಷ್ಟಕಗಳನ್ನು ಬಣ್ಣದ ಪುಟಗಳಲ್ಲಿ ರೂಪಿಸಿರುವುದರಿಂದ ಪುಸ್ತಕದ ಸೊಗಸು ಹೆಚ್ಚಾಗಿರುವುದರ ಜೊತೆಗೆ, ಅಂಕಿಅಂಶಗಳಿಗೂ ಒಂದು ಬಗೆಯ ಮೆರುಗು ಒದಗಿದೆ.

‘ಕನ್ನಡ ಪತ್ರಿಕೋದ್ಯಮ: ಮೂವತ್ತು ವರ್ಷ’ ಕೃತಿ ಲೇಖಕರು ಡಿ.ಲಿಟ್. ಪದವಿಗಾಗಿ ಸಿದ್ಧಪಡಿಸಿರುವ ಮಹಾಪ್ರಬಂಧ. ಸಂಶೋಧನೆ–ಅಧ್ಯಯನದಲ್ಲಿನ ಶಿಸ್ತು ಹಾಗೂ ಸ್ವಂತಿಕೆಯ ಹಂಬಲ ಎರಡನ್ನೂ ಬಿಟ್ಟುಕೊಟ್ಟಿರುವ ಉದಾಹರಣೆಗಳೇ ಹೆಚ್ಚಾಗಿರುವ ಸನ್ನಿವೇಶದಲ್ಲಿ, ಪ್ರೌಢ ಪ್ರಬಂಧಗಳು ಮಾಹಿತಿಯ ಕ್ರೋಡೀಕರಣವಾಗಿಯಷ್ಟೇ ಉಳಿದು, ಓದುಗರಿಂದ ಅಂತರ ಕಾಪಾಡಿಕೊಂಡಿವೆ. ಇದಕ್ಕೆ ಅಪವಾದದಂತೆ ಕಾಣಿಸುವ ಪದ್ಮರಾಜರ ಅಧ್ಯಯನ ಮತ್ತು ಬರವಣಿಗೆ ‘ಪ್ರೌಢ ಪ್ರಬಂಧ’ ಪ್ರಕಾರಕ್ಕೆ ಗೌರವ ತರುವಂತಹದ್ದು.

ಕೃತಿ: ಕನ್ನಡ ಪತ್ರಿಕೋದ್ಯಮ: ಮೂವತ್ತು ವರ್ಷ (1991-2021)
ಲೇ: ಡಾ. ಪದ್ಮರಾಜ ದಂಡಾವತಿ
ಪು: 326; ಬೆ: ರೂ. 300
ಪ್ರ: ಗೀತಾಂಜಲಿ ಪ್ರಕಾಶನ, ಶಿವಮೊಗ್ಗ. ಫೋ: 9916197291

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.