ಸಾಹಿತ್ಯ ಮತ್ತು ಸಂಗೀತ ಎರಡೂ ಭಿನ್ನ ಮತ್ತು ಸ್ವತಂತ್ರ ಪ್ರಕಾರಗಳೇ ಹೌದಾದರೂ ಅವೆರಡೂ ಒಟ್ಟು ಸೇರಿದಾಗ ಮೂರನೆಯದಾದ ಒಂದು ಹೊಸ ಪ್ರಕಾರ ಹುಟ್ಟಿಕೊಳ್ಳುತ್ತದೆ. ಗ್ರೀಕ್ ಮತ್ತು ಭಾರತೀಯ ತತ್ವಶಾಸ್ತ್ರದಲ್ಲಿ ಈ ಕುರಿತಾದ ಮಹತ್ವದ ಚರ್ಚೆಗಳು ನಡೆದಿವೆ. ಭಾಷೆಯಲ್ಲಿ ತಾನೇ ತಾನಾಗಿ ಹುದುಗಿಕೊಂಡಿರುವ ಸಂಗೀತ ಮತ್ತು ಸಂಗೀತದಲ್ಲಿ ಕಾಣಿಸಿಕೊಳ್ಳುವ ಪದಗಳ ಬಗ್ಗೆ ಭರತ, ಭಾಮಹ, ಅಭಿನವಗುಪ್ತ, ಸಾರಂಗದೇವನೂ ಸೇರಿದಂತೆ ಅನೇಕರು ಬಹಳ ಮಹತ್ವದ ಚರ್ಚೆಗಳನ್ನು ನಡೆಸಿದ್ದಾರೆ.

19 ಮತ್ತು 20ನೆಯ ಶತಮಾನದ ಮುಖ್ಯ ಲೇಖಕರಾದ ಬ್ಲೇಕ್, ಕೀಟ್ಸ್, ಟೆನ್ನಿಸನ್, ಯೇಟ್ಸ್, ರವೀಂದ್ರನಾಥ್ ಟ್ಯಾಗೋರ್, ಕುವೆಂಪು, ಬೇಂದ್ರೆ ಮೊದಲಾದವರೆಲ್ಲ ನಾದ, ವರ್ಣ, ಪದ, ಸಂಕೇತ, ಅಲಂಕಾರ, ಧ್ವನಿ, ವಾಕ್ಯ ಮತ್ತು ದೈನಂದಿನ ವ್ಯವಹಾರ
ಗಳ ನಡುವಣ ಸಂಬಂಧಗಳ ಬಗ್ಗೆ ಸಾಕಷ್ಟು ಬೆಳಕುಚೆಲ್ಲಿದ್ದಾರೆ. ಪಿ. ಕಾಳಿಂಗ ರಾಯರು ತಮ್ಮ ಸಂಗೀತಾನುಭವದಿಂದ ಆಧುನಿಕ ಕನ್ನಡ ಕಾವ್ಯಕ್ಕೆ ಹೊಸ ಆಯಾಮವನ್ನೇ ಕೊಟ್ಟದ್ದು ಈಗ ಇತಿಹಾಸ. ಮುಂದೆ ವಿದ್ಯಾಭೂಷಣರೂ ಸೇರಿದಂತೆ ಅನೇಕರು ಅವರ ಪರಂಪರೆಯನ್ನು ಮುಂದುವರಿಸಿದ್ದುಂಟು. ಇತ್ತೀಚೆಗೆ ಈ ಕುರಿತ ಅಧ್ಯಯನಗಳು ಬಹಳ ಕಡಿಮೆಯಾಗುತ್ತಿರುವಾಗ ಆ ಕೊರತೆಯನ್ನು ನೀಗಲೆಂಬಂತೆ ಶ್ಯಾಮಲಾ ಪ್ರಕಾಶ್ ಅವರ ಪ್ರಸ್ತುತ ಪುಸ್ತಕ ಪ್ರಕಟವಾಗಿದೆ.

ತನ್ನ ಪುಸ್ತಕದ ಮುಖ್ಯ ಉದ್ದೇಶದ ಬಗ್ಗೆ ಲೇಖಕಿ ಶ್ಯಾಮಲಾ ಅವರು ಹೀಗೆ ಹೇಳಿದ್ದಾರೆ: ‘ಕವಿ-ಕಾವ್ಯಗಳ ಅಧ್ಯಯನದಲ್ಲಿ ಕಾವ್ಯದ ಕಲಾವಿಚಾರಗಳು ಹೊರಗುಳಿಯುತ್ತವೆ. ಇಂತಹ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ ಕಾವ್ಯಗಳಲ್ಲಿನ ಸಂಗೀತ ಭಾಗಗಳನ್ನು ಅಧ್ಯಯನಕ್ಕೊಳಪಡಿಸಿ ಪ್ರತೀ ಕನ್ನಡ ಕವಿಯ ಸಂಗೀತ ಪ್ರೇಮವನ್ನು ಬೆಳಕಿಗೆ ತರುವ ಪ್ರಯತ್ನ ಈ ಪುಸ್ತಕದ್ದಾಗಿದೆ. ಈ ಮಾತುಗಳು ನಮ್ಮ ಸಾಹಿತ್ಯ ಚರಿತ್ರೆಗಳ ಮಿತಿ ಹೇಗೋ ಹಾಗೇ ಸಂಗೀತ ಶಾಸ್ತ್ರಜ್ಞರ ಮಿತಿಗಳ ಬಗ್ಗೆಯೂ ಬೆಳಕು ಚೆಲ್ಲುತ್ತವೆ. ‘ನಮ್ಮಲ್ಲಿ ಸಂಗೀತ ಶಾಸ್ತ್ರಜ್ಞರ ಸಂಖ್ಯೆ ಕಡಿಮೆ, ಹಲವರಿಗೆ ಕನ್ನಡ ವಾಙ್ಮಯದಲ್ಲಿ ಸಂಗೀತವನ್ನು ಕುರಿತಂತೆ ಎಂತಹ ಅಪೂರ್ವ ಸಾಮಗ್ರಿಯಿದೆ ಎಂಬುದರ ಕಲ್ಪನೆಯೂ ಇರಲಾರದು’ ಎಂಬ ಅವರ ಮಾತು ಬಹಳ ಮಹತ್ವದ್ದು.

ಈ ತಿಳಿವಳಿಕೆಯಲ್ಲಿ ಪ್ರಸ್ತುತ ಪುಸ್ತಕವನ್ನು ಬರೆಯಲಾಗಿದೆ. ತಮ್ಮ ಅಧ್ಯಯನಕ್ಕೆ ಪೂರಕವಾಗಿ ಶ್ಯಾಮಲಾ ಅವರು ಕನ್ನಡ ಸಾಹಿತ್ಯದ ಸುದೀರ್ಘ ಪರಂಪರೆಯನ್ನು ಪರಿಚಯಿಸಿದ್ದಾರೆ. ಭಾರತೀಯ ಸಂಗೀತದ ಎರಡು ಪ್ರಧಾನ ಧಾರೆಗಳಾದ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತಕ್ಕೆ ಸಂಬಂಧಿಸಿದ ಪ್ರಮುಖ ಶಾಸ್ತ್ರಕೃತಿಗಳನ್ನು ಪರಾಮರ್ಶಿಸಿದ್ದಾರೆ. ಹಳಗನ್ನಡಕ್ಕೆ ಪ್ರಧಾನ ಕೊಡುಗೆಯನ್ನು ನೀಡಿದವರು ಜೈನರೇ ಹೌದಾದರೂ ಶ್ಯಾಮಲಾ ಅವರ ವಿಶ್ಲೇಷಣೆಗಳು ವೇದ ಕಾಲ ಮತ್ತು ವೇದ ಪೂರ್ವ ಕಾಲ ಎಂಬ ಚೌಕಟ್ಟಿನಲ್ಲಿ ವೈದಿಕ ಸಂಗೀತವನ್ನೇ ತನ್ನ ಕೇಂದ್ರದಲ್ಲಿರಿಸಿಕೊಂಡಿದೆ. ಹಳಗನ್ನಡದ ಪ್ರಧಾನ ಛಂದೋರೂಪವಾದ ಚಂಪೂ ಕರ್ನಾಟಕದಲ್ಲಿಯೇ ಹುಟ್ಟಿದೆ ಮತ್ತು ಅದರ ಕೆಲವು ಅಂಶಗಳು ಈಗಲೂ ಜನಪದ ಮಹಾಕಾವ್ಯಗಳಲ್ಲಿ ಕಂಡು ಬರುತ್ತವೆ ಎಂಬ ಅಂಶವನ್ನು ಇಲ್ಲಿ ಪರಿಗಣಿಸಲಾಗಿಲ್ಲ.

ಪ್ರಸ್ತುತ ಪುಸ್ತಕದ ಬಹಳ ಮುಖ್ಯವಾದ ಭಾಗಗಳೆಂದರೆ ಅಧ್ಯಾಯ ನಾಲ್ಕು ಮತ್ತು ಐದು. ಇಲ್ಲಿ ಲೇಖಕಿ ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳಲ್ಲಿ ದೊರಕುವ ಸಂಗೀತ ವಿವರಗಳನ್ನು ಬಹಳ ಜಾಗ್ರತೆಯಿಂದ ಶ್ರಮವಹಿಸಿ ಸಂಗ್ರಹಿಸಿದ್ದಾರೆ. ಸಹಜವಾಗಿಯೇ ನಡುಗನ್ನಡಕ್ಕೆ ಇಲ್ಲಿ ಹೆಚ್ಚು ಒತ್ತು ಕೊಡಲಾಗಿದೆ. ವಚನಗಳು ಮತ್ತು ದಾಸ ಸಾಹಿತ್ಯದ ಸಂಗೀತ ಸಾಹಚರ್ಯವನ್ನು ಪ್ರಬುದ್ಧವಾಗಿ ವಿಶ್ಲೇಷಿಸಲಾಗಿದೆ.

ದೇಸೀ ಛಂದೋಪ್ರಕಾರಗಳಾದ ತ್ರಿಪದಿ, ಸಾಂಗತ್ಯ, ಷಟ್ಪದಿಗಳು ಕನ್ನಡ ಕಾವ್ಯಗಳಿಗೆ ತಂದುಕೊಟ್ಟ ವಿಸ್ತಾರಗಳನ್ನು ಸೂಕ್ಷ್ಮವಾಗಿ ಪರಿಶೀಲನೆಗೆ ಒಳಪಡಿಸಲಾಗಿದೆ. ಇವು ಕನ್ನಡ ಕಾವ್ಯಗಳನ್ನು ಜನರ ಹತ್ತಿರ ಕೊಂಡೊಯ್ದವು. ಅಂಶಗಣಗಳ ಸಾಂಗತ್ಯವು ಮೂಲತಃ ಕರ್ನಾಟಕ ಜನಪದ ಪರಂಪರೆಗೆ ಸೇರಿದ್ದು, ಬಹುಮಟ್ಟಿಗೆ ತ್ರಿಪದಿಯ ವಿಸ್ತರಣೆಯಾಗಿದೆ. ಸಾಂಗತ್ಯವು ಹಾಡುಗಬ್ಬದ ಪ್ರಕಾರಕ್ಕೆ ಸೇರಿದ್ದರಿಂದ ಅರ್ಥ ಸ್ವಾರಸ್ಯಕ್ಕಾಗಿ ಮತ್ತು ಹಾಡಿನ ಸೌಲಭ್ಯಕ್ಕಾಗಿ ವಿಷ್ಣುಗಣದ ಸ್ಥಾನದಲ್ಲಿ ಬ್ರಹ್ಮವೋ ರುದ್ರವೋ ಬ್ರಹ್ಮಗಣದ ಸ್ಥಾನದಲ್ಲಿ ವಿಷ್ಣುವೋ ರುದ್ರವೋ ಪರ್ಯಾಯವಾಗಿ ಬರುವುದುಂಟು. ಈ ಜನಪದ ಛಂದಸ್ಸನ್ನು ಮಹಾಕಾವ್ಯದ ಹಂತಕ್ಕೆ ಏರಿಸಿದವನು ರತ್ನಾಕರವರ್ಣಿ.

ಯಕ್ಷಗಾನಗಳಲ್ಲಿ ಸಾಂಗತ್ಯವನ್ನು ಅಷ್ಟತಾಳ, ಆದಿ ತಾಳ, ಏಕ ತಾಳ, ಝಂಪೆ ತಾಳ, ತ್ರಿವುಡೆ ತಾಳ, ರೂಪಕ ತಾಳ-ಹೀಗೆ ಹಲವು ತಾಳಗಳಲ್ಲಿ ಹಾಡುತ್ತಾರೆ. ಕಥನಗಳ ನಿರೂಪಣೆಗೆ ಸಾಂಗತ್ಯದಷ್ಟು ಒಳ್ಳೆಯ ಮಟ್ಟು ಬೇರೆ ಇಲ್ಲ. ಏನೇ ಇರಲಿ, ಒಡೆಯರ ಕಾಲದ ಸಾಹಿತ್ಯದ ಪರಿಗಣನೆಯೊಂದಿಗೆ ಶ್ಯಾಮಲಾ ಅವರ ಅಧ್ಯಯನ ಕೊನೆಯಾಗುತ್ತದೆ. ಸ್ವತಃ ಒಳ್ಳೆಯ ಸಂಗೀತಗಾರ್ತಿಯಾಗಿರುವ ಶ್ಯಾಮಲಾರಿಗೆ ಸಾಹಿತ್ಯ ಮತ್ತು ಸಂಗೀತಗಳ ಆಂತರಿಕ ಸಂಬಂಧಗಳ ಬಗ್ಗೆ ಬಹಳ ಒಳನೋಟಗಳಿರುವ ಮಾತುಗಳನ್ನು ಹೇಳಲು ಇಲ್ಲಿ ಸಾಧ್ಯವಾಗಿದೆ. ಕರ್ನಾಟಕ ಸಂಗೀತಕ್ಕೊಂದು ಹೊಸ ಆಯಾಮ ತಂದುಕೊಟ್ಟ ಯಕ್ಷಗಾನ ಪ್ರಸಂಗಗಳನ್ನು ಇಲ್ಲಿ ಪರಿಗಣಿಸಿದ್ದರೆ ಈ ಅಧ್ಯಯನ ಇನ್ನಷ್ಟು ಸಮಗ್ರವಾಗುತ್ತಿತ್ತು.

ಕೃತಿ: ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಂಗೀತದ ಸಾಹಚರ್ಯ

ಲೇ: ಡಾ. ವಿದುಷಿ ಶ್ಯಾಮಲಾ ಪ್ರಕಾಶ್

ಪ್ರ: ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ

ಸಂ: 9930515123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.