ಹೊಸ್ತೋಟ ಮುಂಜುನಾಥ ಭಾಗವತರ ಚಿತ್ರಪಟ ರಾಮಾಯಣ
ಸಂ: ಪೃಥ್ವಿರಾಜ ಕವತ್ತಾರು
ಪ್ರ: ಅಭಿನವ ಪ್ರಕಾಶನ, 17/19-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು–40

ದೇವನೂರ ಮಹಾದೇವರ ಸಾಕುಮಗಳು ‘ಒಡಲಾಳ’ದ ಪುಟ್ಟಗೌರಿ ನವಿಲಿನ ಚಿತ್ರ ಬಿಡಿಸಲು ಅದರ ಕಾಲಿನಿಂದ ಆರಂಭಿಸಿದ್ದಕ್ಕೂ ಜನಪದರ ಚಿತ್ರಪಟ ರಾಮಾಯಣದ ಸೀತೆ ರಾವಣನ ಚಿತ್ರ ಬಿಡಿಸಲು ಅವನ ಕಾಲಿನಿಂದ ಆರಂಭಿಸಿದ್ದಕ್ಕೂ ಸಂಬಂಧವಿದೆ. ಎತ್ತಣಿಂದೆತ್ತ ಸಂಬಂಧವಯ್ಯಾ ಅನ್ನುವವರಿದ್ದರೆ ಅನ್ನಿ. ಹೇಳಿಕೇಳಿ ಇದು ಸಂಬಂಜದ ಮಾತು, ಸುಮ್ನೇ ಅಲ್ಲ.

ಹೊಸ್ತೋಟ ಮಂಜುನಾಥ ಭಾಗವತರ ಪಡುವಲಪಾಯ ಯಕ್ಷಗಾನ ಕೃತಿ ‘ಚಿತ್ರಪಟ ರಾಮಾಯಣ’ದ ಪಠ್ಯ, ಮತ್ತು ಅದರ ಪ್ರದರ್ಶನವನ್ನು ಕುರಿತಾದ ಹನ್ನೊಂದು ಲೇಖನಗಳನ್ನು ಸಂಗ್ರಹಿಸಿ ‘ಅಭಿನವ’ ಪ್ರಕಾಶನ ಹೊರತಂದ ಕೃತಿ ಇದು. ಹೊಸ್ತೋಟ ಮಂಜುನಾಥ ಭಾಗವತ, ಎಂ.ಎಲ್. ಸಾಮಗ, ಬನ್ನಂಜೆ ಸಂಜೀವ ಸುವರ್ಣ, ಜಿ. ರಾಜಶೇಖರ, ಶ್ರೀಧರ ಹೆಗಡೆ ಭದ್ರನ್, ಷ. ಶೆಟ್ಟರ್, ವೈದೇಹಿ, ವಿನಯಾ ಒಕ್ಕುಂದ ಮುಂತಾದವರ ಪ್ರತಿಕ್ರಿಯಾರೂಪಿ ಲೇಖನಗಳಿವೆ.

ಈ ಪಟ್ಟಿಯನ್ನು ನೋಡಿದಾಕ್ಷಣ ಈ ಪುಸ್ತಕವನ್ನು ಕೊನೆಯ ಪುಟಗಳಿಂದ ಓದಲು ಆರಂಭಿಸಬೇಕೆಂಬ ತೀರ್ಮಾನ ತಂತಾನೇ ಆಯಿತು. ಕಾರಣ ಸ್ಪಷ್ಟವಾಗಿಯೇ ಇದೆ. ವಾಲ್ಮೀಕಿಯಿಂದ ಹಿಡಿದು ಈವರೆಗೆ ಹತ್ತಾರು ಗಂಡಸರ ಬಾಯಲ್ಲಿ ರಾಮನ ಕತೆಯನ್ನು ಕೇಳುತ್ತಲೇ ಇದ್ದೇವೆ. ಆ ಕತೆಯ ಉಳಿದವರ ಪಾಡನ್ನು ಕೇಳಿಸಿಕೊಳ್ಳಬೇಕು, ಅದರಲ್ಲೂ ಹೆಣ್ಣುಮಕ್ಕಳು ಈ ಕತೆಯನ್ನು ಹೇಳಿದರೆ ಯಾರ ಕತೆ ಹೇಳುತ್ತಾರೆ ಎಂದು ಯೋಚಿಸಿದ್ದು ಕಡಿಮೆ. ಹಾಗಾಗಿ ವೈದೇಹಿ, ವಿನಯಾ ಏನು ಹೇಳಿದ್ದಾರೆ ಎನ್ನುವುದೇ ಮುಖ್ಯ ಎನ್ನಿಸಿ ಮೊದಲು ಅವರ ಲೇಖನಗಳನ್ನು ಓದಿದೆ.

ಎಲ್ಲರ ಲೇಖನಗಳನ್ನು ಮತ್ತು ಭಾಗವತರ ಪಠ್ಯವನ್ನು ಓದಿದ ಮೇಲೆ ನನ್ನ ತೀರ್ಮಾನ ನ್ಯಾಯವಾಗಿಯೇ ಇದೆ ಅನ್ನಿಸಿತು. ಹೆಣ್ಣಿಗೆ–ಮಣ್ಣಿಗೆ ಕಚ್ಚಾಡಿದ ಗಂಡಸರ ಮಹಾಭಾರತಗಳನ್ನು ಮಹಿಳೆಯರು ಬರೆದಿಲ್ಲ ಎನ್ನುವ ಮಾತಿಗೆ ‘ಯಾವ ಘನಂದಾರಿ ಕತೆ ಅಂಥಾ ಬರೀಲಿ’ ಎಂದು ಅವರು ಅಂದರೆ ಸುಮ್ಮನೆ ಒಪ್ಪಿಕೊಳ್ಳುವುದೇ ಸಾಧುವಾದುದು. ನೆಲದಗಲಕ್ಕೂ ನಾಲಿಗೆ ಚಾಚಿ ರಕ್ತಬೀಜಾಸುರರನ್ನು ಕೊಂದು ತಿಂದ ದೇವಿಯನ್ನು ಕವಯಿತ್ರಿ ವಿನಯಾ–

ಸಾಕು ತಕಾ, ಕಂಡೀನಿ ನಿನ ಬಿನ್ನಾಣ
ಗರ್ಭದಲಿ ನೆತ್ತರ ಕಟ್ಟಿ ಪಿಂಡವಾಗಿಸಲಿಲ್ಲ
ಮೊಲೆಗೆ ಹಾಲುಕ್ಕಿ ಜೀವ ಜುಮುರಲಿಲ್ಲ
ಸಸಾರವೆ ನಿನಗೆ, ನಾಲಿಗೆ ಹಿರಿದು
ನೆತ್ತರ ನೆಕ್ಕುವುದು
ಒಳಗಾಕಿಕೋ ನಾಲಿಗೆಯ ನಕ್ಕಿದ್ದಲ್ಲ ಅತ್ತಿದ್ದಲ್ಲ
ಚಳ್ಳೆಪಿಳ್ಳೆಗಳು ಕಂಡು ಭಯಬೀಳುತ್ತವೆ

ಎಂದು ಸ್ವಾಟೆ ತಿವಿಯುತ್ತಾರೆ. ಕತೆ ಹೇಳುತ್ತಿರುವವರು ಯಾರು ಎನ್ನುವಷ್ಟೆ, ಕತೆ ಕೇಳುತ್ತಿರುವವರು ಯಾರು ಎನ್ನುವುದೂ ಮುಖ್ಯ. ಹಾಗಾಗಿ ಹಲವಾರು ರಾಮಾಯಣಗಳು, ಮಹಾಭಾರತಗಳಿರುವ ಕಾರಣಕ್ಕೆ ಯಾರು ಓದುತ್ತಿದ್ದಾರೆ, ಯಾರಿಗೆ ಓದಿಸುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಗಂಡಸರು ಓದಿದ ಹಾಗೇ ಹೆಂಗಸರು ಓದಬೇಕಿಲ್ಲ; ಓದುವುದೂ ಇಲ್ಲ ಅಥವಾ ಇಂಥದ್ದನ್ನು ನಾವು ಓದುವುದಿಲ್ಲ, ಬರೆಯುವುದಿಲ್ಲ ಅಂದರೆ ಅದೂ ಒಪ್ಪಿತವೇ.

ಮೊದಲು ಜನಪದರ ‘ಚಿತ್ರಪಟ ರಾಮಾಯಣ’ವನ್ನು ಮಾತನಾಡಿಸಿ ಆಮೇಲೆ ಈ ಭಾಗವತರನ್ನು ಮಾತನಾಡಿಸುವುದು ಸರಿ. ಏಕೆಂದರೆ ಮೊದಲು ರಂಗಕ್ಕೆ ಬಂದವರು ಜನಪದರು. ಆಮೇಲೆ ಈ ಮಹಾಕವಿಗಳು, ಭಾಗವತರು, ಸನಕಾದಿ ಸಜ್ಜನರು ಬಂದದ್ದು. ಬಳ್ಳಾರಿ ಜಿಲ್ಲೆಯ ಮೂಡಲಪಾಯ ಯಕ್ಷಗಾನದಲ್ಲಿ ‘ಚಿತ್ರಪಟ ರಾಮಾಯಣ’ವನ್ನು ಪ್ರಯೋಗಿಸುತ್ತಾರೆ. ಪಡುವಲಪಾಯಕ್ಕೂ ಮೂಲ ಮೂಡಲಪಾಯವೇ ಆಗಿರುವುದರಿಂದ ಪಠ್ಯ ಮತ್ತು ಪ್ರಯೋಗದ ಪ್ರಾಚೀನತೆಯ ದೃಷ್ಟಿಯಿಂದ ಮೂಡಲಪಾಯವನ್ನು ಸುಮ್ಮನೇ ದಾಟಿ ಹೋಗಲಾಗದು.

ಜನಪದರ ‘ಚಿತ್ರಪಟ ರಾಮಾಯಣ’ದಲ್ಲಿ ಸಖಿಯರ ಒತ್ತಾಯಕ್ಕೆ ಸೀತೆ ಆದರ್ಶ ಪುರುಷನ ಚಿತ್ರ ಬಿಡಿಸಲು ತೊಡಗುತ್ತಾಳೆ. ಕಾಲ ಹೆಬ್ಬೆರಳಿನಿಂದಾರಂಭಿಸಿದ ಚಿತ್ರ ಮುಗಿದಾಗ ರಾವಣನ ಚಿತ್ರ ಸಿದ್ಧವಾಗಿರುತ್ತದೆ. ಈ ಕತೆಯನ್ನು ಮಾತ್ರ ಯಾರೋ ಹೆಣ್ಣೇ ನಿರೂಪಿಸಿರಬೇಕು. ಚಿತ್ರವನ್ನು ಕಾಲಿನಿಂದ ಏಕೆ ಆರಂಭಿಸಿದಳು? ರಾವಣನ ಚಿತ್ರವನ್ನೇ ಏಕೆ ಬಿಡಿಸಿದಳು? ಮುಂತಾಗಿ ಪ್ರಶ್ನೆಗಳು ಬಂದರೆ, ಕೇಳಿದವನು ಗಂಡಸಿರಬೇಕು ಎನ್ನುವುದು ಮಾತ್ರ ಖಾತ್ರಿಯಾಗುತ್ತದೆ.

ಪ್ರಸ್ತುತ ‘ಚಿತ್ರಪಟ ರಾಮಾಯಣ’ದ ಕತೆಯನ್ನೀಗ ಗಮನಿಸಿಬಹುದು. ಇದೂ ಕೂಡ ಜನಪದ ರಾಮಾಯಣವೊಂದರ ಪಠದ ಸಂಧಿಯೆಂದೂ ಇದು ಆನಂದ ರಾಮಾಯಣದಲ್ಲಿದೆಯೆಂದೂ ಭಾಗವತರು ಆರಂಭದಲ್ಲಿ ನಿರೂಪಿಸಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಇದು ಇಲ್ಲ. ಈ ಪಠ ಸಂಧಿಯನ್ನಾಧರಿಸಿ ಮಂಜುನಾಥ ಭಾಗವತರು ತಮ್ಮ ಕಲಾಪ್ರೌಢಿಮೆಗೆ ತಕ್ಕುದೆಂಬಂತೆ ಈ ಯಕ್ಷಗಾನ ಕೃತಿಯನ್ನು ರಚಿಸಿ ಪ್ರಯೋಗಿಸಿದ್ದಾರೆ. ಅಣ್ಣನನ್ನು ಕಳೆದುಕೊಂಡ ಶೂರ್ಪನಖಿ ರಾಮ ಲಕ್ಷ್ಮಣರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾಳೆ.

ರಾಮ–ಸೀತೆಯರ ನಡುವೆ ಹೇಗಾದರೂ ಒಡಕು ತರಲು ಕಾಡಿನಲ್ಲಿದ್ದು ಹೊಂಚುಹಾಕುತ್ತಿರುತ್ತಾಳೆ. ಶ್ರೀರಾಮ ಕಾಡಿಗೆ ಬೇಟೆಗೆಂದು ಬಂದ ಸಮಯ ಸಾಧಿಸಿ ಯೋಗಿನಿಯ ವೇಷದಲ್ಲಿ ಸೀತೆಯನ್ನು ಕಾಣಲು ಅರಮನೆಗೆ ಬರುತ್ತಾಳೆ. ಸೀತೆಯ ಬಳಿ ತನಗೆ ತಿರಿದುಣ್ಣಲು ಅನುವಾಗುವಂತೆ ರಾವಣನ ಚಿತ್ರಪಟವೊಂದನ್ನು ಬರೆದುಕೊಡಲು ಕೋರುತ್ತಾಳೆ. ‘ಅನ್ನ ವಸ್ತ್ರವನೊಲ್ಲೆ ಹೊನ್ನು ಹಣವನೊಲ್ಲೆ / ನಿನ್ನ ಭಾಗ್ಯವನು ನಾನೊಲ್ಲೆ / ಮುನ್ನಿನ ಸುರನ ರೂಪ ಇನ್ನು ನೀ ಬರೆದರೆ / ಚೆನ್ನಾಗಿ ಹರನ ಗೆಲ್ಲುವೆನು’ ಎಂದು ಬೇಡುತ್ತಾಳೆ.

ಸೀತೆ ತಾನು ರಾವಣನ ಉಂಗುಷ್ಠವನ್ನು ಮಾತ್ರ ಕಂಡಿರುವುದಾಗಿ ಹೇಳಿದಾಗ, ‘ಅಂಗುಷ್ಟ ಎಂಬುದಕ ಮುಂದ ಪಾದವ ಬರಿ / ಹಿಮ್ಮಡಿ ಕಾಲು ಚೆಂದಾದ ನಡತೊಡಿ / ಹತ್ತು ಸಿರಗಳ ಬರೆದಳು ಮುಂದೆರಡು ಪಾದ / ಬೆಟ್ಟವ ಕೆದರಿದಂಥ ಕಾಯಕೆ’ – ಹೀಗೆ ರಾವಣನ ಚಿತ್ರ ಪೂರ್ತಿಯಾಗುತ್ತದೆ. ಈ ಹತ್ತಾರು ತಲೆಗಳು ಗಂಡಸಿಗೆ ಮಾತ್ರ ಎಂದುಕೊಂಡದ್ದೇ ಇಲ್ಲಿ ಸಮಸ್ಯೆಯಾಗುತ್ತದೆ! ಯೋಗಿನಿ, ದೊಡ್ಡ ಆಕಾರದ ಚಿತ್ರಪಟವನ್ನು ಹೊತ್ತೊಯ್ಯಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಜೀವಕೊಟ್ಟರೆ ನಡೆಸಿಕೊಂಡು ಹೋಗುತ್ತೇನೆ ಎಂದು ಚಿತ್ರಪಟಕ್ಕೆ ಜೀವಕೊಡಲು ಸೀತೆಯನ್ನು ಬೇಡುತ್ತಾಳೆ. ಸೀತೆ ಅದಕ್ಕೆ ಜೀವ ಕೊಡುತ್ತಾಳೆ.

ಸೀತೆಯಿಂದ ಜೀವ ಪಡೆದ ಅದು ಸೀತೆಯನ್ನೇ ಅನುಕರಿಸುತ್ತದೆ, ಅನುಸರಿಸುತ್ತದೆ. ಈ ಚಿತ್ರದ ರಾವಣನನ್ನು ಯಾರಾದರೂ ಅಪಹರಿಸಿ ತೊಂದರೆ ಕೊಡದಂತೆ, ಲಕ್ಷ್ಮಣನಿಂದ ಮಾತ್ರ ಇದು ವಿಸರ್ಜನೆಯಾಗುವಂತೆ, ಹರಸಿ ಕಾಪಾಡು ಎಂದು ಸೀತೆಯನ್ನು ಯೋಗಿನಿ ಕೋರಿಕೊಳ್ಳುತ್ತಾಳೆ. ಸೀತೆ ಲಕ್ಷ್ಮಣನ ಹೊರತಾಗಿ ಇದನ್ನು ಬೇರೆ ಯಾರೂ ನಾಶ ಮಾಡದಂತೆ ಆಶೀರ್ವದಿಸುತ್ತಾಳೆ. ಇಷ್ಟಾದ ಮೇಲೆ ಶೂರ್ಪನಖಿ ತನ್ನ ನಿಜರೂಪ ತೋರಿಸಿ ಇದರಿಂದ ನಿನ್ನ ಕುಟುಂಬ ಸಂಕಟಕ್ಕೆ ಸಿಲುಕಲಿ ಎಂದು ಬಯಸಿ ಅದನ್ನು ಅಲ್ಲಿಯೇ ಬಿಟ್ಟು ಹೋಗುತ್ತಾಳೆ.

ಸೀತೆಗೆ ಮುಂದೆ ಏನು ಮಾಡಬೇಕೆಂದು ಗೊತ್ತಾಗದೆ, ಅದನ್ನು ಮಂಚದ ಕೆಳಗೆ ಅಡಗಿಸಿಡುತ್ತಾಳೆ. ರಾಮ ಕಾಡಿನಿಂದ ವಾಪಸ್ಸು ಬಂದು ಮಂಚದ ಮೇಲೆ ಕುಳಿತಾಗ ಅದು ಮುರಿದುಬೀಳುತ್ತದೆ. ಅದರಡಿಯಲ್ಲಿದ್ದ ರಾವಣನ ‘ಜೀವಂತ ಚಿತ್ರ’ವನ್ನು ಕಂಡು ಸೀತೆಯನ್ನು ಶಂಕಿಸಿ, ಅರಮನೆಯ ಹಿರಿಯರನ್ನು ಕರೆಸಿ ವಿಚಾರಣೆ ನಡೆಸುತ್ತಾನೆ. ಸೀತೆ ನಡೆದುದನ್ನು ನಿವೇದಿಸಿದರೂ, ಕೌಸಲ್ಯಾದಿಗಳು ನಂಬಿದರೂ, ರಾಮ ಅದನ್ನು ಸಾರ್ವಜನಿಕವಾಗಿ ನಂಬುವಂತಿರಲಿಲ್ಲ. ಲಕ್ಷ್ಮಣ ಆ ಚಿತ್ರವನ್ನು ಹರಿದುಹಾಕುತ್ತಾನೆ.

ವಿಚಾರಣೆ ನಡೆದು ಸೀತೆಯನ್ನು ಅಡವಿಯಲ್ಲಿ ಬಿಟ್ಟುಬರುವಂತೆ ರಾಮನು ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ. ಅಡವಿಯಲ್ಲಿ ವಾಲ್ಮೀಕಿಯ ಆಶ್ರಯ ದೊರೆತು ಲವ–ಕುಶರನ್ನು ಪಡೆಯುವ ಕತೆಯನ್ನು ವಾಲ್ಮೀಕಿ ನಿರೂಪಿಸುತ್ತಾನೆ. ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸುವ ಸಂದರ್ಭವನ್ನು ರಾಮಾಯಣಗಳು ಅನೇಕ ರೀತಿಯಲ್ಲಿ ನಿರ್ವಹಿಸಿವೆ. ಲಕ್ಷ್ಮೀಶನಂತೂ ಸೀತೆ, ತಾನು ಹೆಣ್ಣಾಗಿ ಹುಟ್ಟಿದ ತಪ್ಪೇ ಎಲ್ಲಕ್ಕೂ ಕಾರಣವೆಂದು ಹಲುಬುವಂತೆ, ಕತೆಯಾಚೆಗೆ ನಿಂತು ನುಡಿಸುತ್ತಾನೆ.

ಇನ್ನು ಮೂಡಲಪಾಯದ ಶ್ರೇಷ್ಠ ಭಾಗವತ ತುಮಕೂರು ಜಿಲ್ಲೆಯ ಕಲ್ಲುಮನೆ ನಂಜಪ್ಪನವರ ‘ಲವ–ಕುಶ’ ಪಠ್ಯದಲ್ಲಿ ದೀರ್ಘಕಾಲ ಮಕ್ಕಳಾಗದ ರಾಮ–ಸೀತಾ ದಂಪತಿಗಳು ವಂಶದ ಮುಂದುವರಿಕೆಗಾಗಿ ಹಂಬಲಿಸುತ್ತಿರುವಾಗ, ವಸಿಷ್ಟರು ಬಂದು ಮಂತ್ರೋಪದೇಶವನ್ನು ಮಾಡಿ ತುಮಕಿಪುರದ (ತುಮಕೂರಿನ) ಚಿಕ್ಕಪೇಟೆಯ ಗಂಗಾಧರೇಶ್ವರನ ಕೃಪೆಯಾಗದ ಹೊರತು ಮಕ್ಕಳಾಗಲು ಸಾಧ್ಯವಿಲ್ಲವೆನ್ನುತ್ತಾರೆ. ತುಮಕಿಪುರದ ಚಿಕ್ಕಪೇಟೆಯ ಗಂಗಾಧರನಿಗೆ ಸೀತೆ ನಡೆದುಕೊಳ್ಳುತ್ತಾಳಾಗಿ ಗರ್ಭಿಣಿಯಾಗುತ್ತಾಳೆ.

ಸೀತೆ ಗರ್ಭಿಣಿಯಾಗಿರುವಾಗ ರಜಕನೊಬ್ಬನ ಬಿರುನುಡಿಯನ್ನು ದೂತನ ಮುಖಾಂತರ ಕೇಳಿಸಿಕೊಂಡ ರಾಮ, ಸೀತೆಯನ್ನು ಕಾಡಿಗೆ ಕಳಿಸುವ ನಿರ್ಧಾರ ಮಾಡುತ್ತಾನೆ. ಈ ರಜಕನ ಪ್ರಸಂಗವಿರುವ ಪಠ್ಯ ಹೆಚ್ಚು ಪ್ರಚಲಿತದಲ್ಲಿದೆ. ಹೀಗೆ ರಾಮ ಸೀತೆಯರು ಜನಪದರ ಮಾನಸದಲ್ಲಿ ಓಡಾಡುತ್ತಲೇ ಇರುತ್ತಾರೆ. ನೀರು ಹರಿವೆಡೆಗಳಲ್ಲಿ ಸೀತೆ ಬಟ್ಟೆ ತೊಳೆದು ಬಂಡೆಯ ಮೇಲೆ ಹರವಿದ್ದಾಳೆ; ನಾಮ ಇಟ್ಟುಕೊಳ್ಳಲು ನೀರು ಸಿಗದಿದ್ದುದರಿಂದ ರಾಮ, ಬಾಣವನ್ನು ಬಿಟ್ಟು ಬೋರ್‌ವೆಲ್ ಕೊರೆದು ಬಂದ ನೀರಿನಲ್ಲಿ ನಾಮ ಇಟ್ಟುಕೊಂಡದ್ದರಿಂದಾಗಿ ನಮ್ಮೂರಿನ ಬಳಿ ‘ನಾಮದ ಚಿಲುಮೆ’ ಇದೆ, ಇತ್ಯಾದಿ.

ರಾಮ ಸೀತೆಯರ ಮನೋಭೂಮಿಕೆಯಲ್ಲಿ ಕೇಡಿಗೆ ತಾವಿಲ್ಲವೆನ್ನುವುದೇ ಇಲ್ಲಿ ವ್ಯಕ್ತವಾಗಿರುವ ಎಲ್ಲರ ಮನೋ ಇಂಗಿತ. ಯಾಕೆಂದರೆ ರಾತ್ರಿಯೆಲ್ಲ ರಾಮಾಯಣ ನೋಡಿದ ಮೇಲೆ ಕೇವಲ ಅನ್ನ ತಿಂದು ಬದುಕುವ ಸಾಮಾನ್ಯ ಮನುಷ್ಯನಲ್ಲಿ ಉಳಿವ, ಬೆಳೆವ ಪ್ರಶ್ನೆ ಅದೊಂದೇ: ಹಾಗಾದರೆ ರಾಮನಿಗೂ ಸೀತೆಗೂ ಏನು ಸಂಬಂಧ?. ಇನ್ನು ದೀರ್ಘಕಾಲೀನ ಭ್ರಮಾ ಸಂರಚನೆಗಳನ್ನೇ ಮೆದುಳಿಗೆ, ಹೊಟ್ಟೆಗೆ ಅನ್ನವೆಂದುಕೊಂಡ ಭಾರತೀಯರ ಪ್ರಶ್ನೆಗಳು ಬೇರೆಯೇ ಇವೆ. ರಾಮನನ್ನು ಇಂತಹ ಅನೇಕ ಬಿಕ್ಕಟ್ಟುಗಳಿಂದ ಪಾರು ಮಾಡಲು ಅನೇಕ ಉಪಾಖ್ಯಾನಗಳು ಹುಟ್ಟಿವೆ, ಹುಟ್ಟುತ್ತಲೇ ಇವೆ.

ಅದರಲ್ಲೂ ಇತ್ತೀಚಿನ ಐದಾರು ದಶಕಗಳಲ್ಲಿ ಪಡುವಲಪಾಯದ ಯಕ್ಷಗಾನಗಳಲ್ಲಿ ಈ ಉಪಾಖ್ಯಾನಗಳದ್ದೇ ಕಾರುಬಾರು. ಆ ಪ್ರಕಾರವನ್ನು ಸೋಸಿ ಸೋಸಿ ನುಣ್ಣಗೆ ಮಾಡಿಕೊಂಡಿರುವ ಭಾಗವತರುಗಳು ಬೆಳಗಾಗುವುದರಲ್ಲಿ ಭೂತಕೋಲಗಳನ್ನು, ನಾಗಮಂಡಲಗಳನ್ನು, ಅಧೋಲೋಕದ ಯಾವುದನ್ನು ಬೇಕಾದರೂ ಸಲೀಸಾಗಿ ತಮಗೆ ಬೇಕಾದ ಮೇಲಿನ ಯಾವುದಾದರೂ ಲೋಕಕ್ಕೋ ಸೌಧಕ್ಕೋ ಎತ್ತಿಕೊಳ್ಳುತ್ತಾರೆ. ಈ ಉಪಾಖ್ಯಾನಗಳ ಹಿಂದಿನ ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಗಮನಿಸಿದರೆ ಕರಾವಳಿಗೂ ಬಲಪಂಥೀಯ ರಾಜಕಾರಣಕ್ಕೂ ಇರುವ ಸಂಬಂಧದ ಘಾಟು ಬಡಿಯುತ್ತದೆ.

ಈ ಆಟದ ಕೇಂದ್ರ ಬಿಂದುವೆಂದರೆ ಪಟ. ಅದು ಸೀತೆ ಜೀವಕೊಟ್ಟ ಚಿತ್ರ. ಲೋಕದ ಏಕೈಕ ನೈಸರ್ಗಿಕ ಸಂಬಂಧವಾಗಿರುವ ತಾಯಿ–ಮಕ್ಕಳ ಸಂಬಂಧ ಅಲ್ಲಿದೆ. ಅದು ಪ್ರಶ್ನಾತೀತವಾದ ಹೆಣ್ಣಿನ ಹಕ್ಕು. ಅದನ್ನು ಅರಿಯಲು ಸಾಧ್ಯವಾಗುವುದು ಹೆತ್ತವಳಿಗೆ ಮಾತ್ರ. ಅವಳು ಸೃಷ್ಟಿಸಿ ಪೋಷಿಸಬಲ್ಲಳೇ ಹೊರತು, ನಾಶಮಾಡಲಾರಳು. ಅದಕ್ಕಾಗಿ ಎಂತಹ ವನವಾಸಕ್ಕೂ ಅವಳು ಸಿದ್ಧ. ಗಂಡಸೇನಿದ್ದರೂ ಕೊಟ್ಟ ಮಾತಿಗೋ, ಕೊಲ್ಲುವ ಬೇಟೆಗೋ, ಹೆಣ್ಣಿನ ಬೇಟಕ್ಕೋ, ರಾಜ್ಯವಿಸ್ತರಣೆಗೆಂದು ಮಾತ್ರವೋ ಕಾಡಿಗೆ ಹೋಗುವವನು. ಎಲ್ಲ ಕಡೆಯೂ ನಿಷ್ಕರುಣೆ ಮಾತ್ರ ಸ್ಥಾಯಿ. ಇಲ್ಲಿ ರಾಮನು ತೋರುವ ನಿಷ್ಕರುಣೆಗೆ ಅವನು ಹೊಣೆಯೇ? ಇರಲಾರದು ಎನ್ನುವುದರ ಪರವಾಗಿ ಅನೇಕ ಲೇಖಕರು, ಭಾಗವತರು ವಕಾಲತ್ತು ಹಾಕಿದ್ದಾರೆ.

ಚಿತ್ರಪಟ ರಾಮಾಯಣದ ಈ ಆವೃತ್ತಿಯೂ ಇದಕ್ಕೆ ಹೊರತೇನಲ್ಲ. ಯಕ್ಷಗಾನವಾಗಿ ಎಲ್ಲ ರಚನಾ ಸಮೃದ್ಧಿ ಈ ಕೃತಿಯ ಹೆಚ್ಚುಗಾರಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಪ್ರಯೋಗಪಠ್ಯದ ಯಶಸ್ಸನ್ನು ಕುರಿತು ಎಲ್ಲ ಲೇಖಕರೂ ವಿದ್ವತ್ಪೂರ್ಣ ಚರ್ಚೆಯನ್ನು ನಡೆಸಿದ್ದಾರೆ. ಕೆಲವೆಡೆ ಬಾಲಿಶ ತೀರ್ಮಾನಗಳಿವೆ. ‘ರಾಮನ ಗುಡಿಗಳು ಎಲ್ಲೂ ಕಾಣದಿರುವಾಗ ಎಲ್ಲ ಊರುಗಳ ಮುಂದಿರುವ ಹನುಮಂತನ ಗುಡಿಗಳೆಲ್ಲ ವ್ಯಾಸರಾಯರು ಅಥವಾ ಮಧ್ವಭಕ್ತಿಪಂಥದವರು ನಿರ್ಮಿಸಿದ್ದಾರೆ’ ಎನ್ನುವಂತಹ ಷ. ಶೆಟ್ಟರ್ ಅವರ ಕಪೋಲಕಲ್ಪಿತ ಅಭಿಪ್ರಾಯಗಳಿವೆ.

ಬಲಿ ಮತ್ತು ತಂತ್ರದ ರೀತಿಯ ಯಥೇಚ್ಛ ಆಚರಣೆಗಳೊಂದಿಗೆ ಇಂದಿಗೂ ಜೀವಂತ ಜಾಗಗಳಾಗಿರುವ ಹನುಮಂತನ ಗುಡಿಗಳಿಗೂ ರಾಮಾಯಣಕ್ಕೂ ವ್ಯಾಸರಾಯರಿಗೂ ಎತ್ತಣಿಂದೆತ್ತ ಸಂಬಂಧ? ‘ಈ ಪ್ರಯೋಗವನ್ನು ಬರೀ ಹೆಣ್ಣುಮಕ್ಕಳ ಕೈಲೇ ಮಾಡಿಸಿದ್ದಾರಲ್ಲಾ, ಅವರೆಲ್ಲಾ ಮನಸ್ಸು ಮಾಡಿ, ಈ ಭಾಗವತರನ್ನು ನೀವು ಕುಮ್ಚಟ್ ಕುಣಿದದ್ದು ಸಾಕು, ಸ್ವಲ್ಪ ಹೊತ್ತು ಅಲ್ಲಿ ವಿಶ್ರಮಿಸಿಕೊಳ್ಳಿ ಎಂದು ಮರೆಗೆ ಕಳಿಸಿ, ಅವರು ಮತ್ತೆ ಬರುವುದರೊಳಗೆ ಅಸಲಿ ಕತೆಯನ್ನು ಈ ಹೆಣ್ಣುಮಕ್ಕಳು ಆಡಬಹುದಿತ್ತಲ್ಲಾ’ ಎಂದು ವೈದೇಹಿ ಬಯಸಿದ್ದಾರೆ.

ಅವರೆಲ್ಲ ತಾವೇ ತಾವಾಗಿ ನಿಜವಾದ ಸೀತಾದೇವಿಯರಾಗಿ, ಬಹಿರಂಗವಾಗಿ ಅಗ್ನಿಪರೀಕ್ಷೆ ಮಾಡಿಸಿ ಕರೆತಂದ ಮೇಲೂ ಈ ರಾಮಚಂದ್ರನ ಸಂಕಟ ತೀರಿಲ್ಲದುದನ್ನು ಕಂಡು ಒಮ್ಮೆ ಗಹಗಹಿಸಿ ನಗಬಹುದಿತ್ತಲ್ಲಾ; ಆತನ ಪುರುಷ ಆದರ್ಶದ ಅತಿಯನ್ನು ಕಂಡು ವಿಷಾದಿಸಬಹುದಿತ್ತಲ್ಲಾ; ಗಂಡನ ಬಗೆಗಿನ ಪ್ರೀತಿಯನ್ನು ಕಿಂಚಿತ್ತೂ ಮುಕ್ಕಾಗಿಸದೆ ನೊಂದುಕೊಳ್ಳಬಹುದಿತ್ತಲ್ಲಾ; ಅವನ ಎಲ್ಲ ಒಳ್ಳೆಯತನಗಳ ನಡುವಿನ ಇಂತಹ ದೌರ್ಬಲ್ಯಗಳೊಡನೆ ಯಾವ ಹೆಣ್ಣಾದರೂ ಎಷ್ಟು ದಿನ ಬಾಳಲು ಸಾಧ್ಯ ಎಂದು ಇದಿರಿನವರಿಗೆ ನ್ಯಾಯ ಒಪ್ಪಿಸಬಹುದಿತ್ತಲ್ಲಾ;

ಇನ್ನೊಂದು ದಿನವೂ ಇವನೊಡನೆ ಬಾಳಲಾರೆ ಎಂದು ಘಂಟಾಘೋಷವಾಗಿ ಹೇಳಿ ಸಾಕಿನ್ನು ಗಂಡಸರ ಸಹವಾಸ ಎಂದು ತಾನೇ ವನವಾಸವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲಾ – ಇಂತಹ ಒಂದು ಪ್ರಸಂಗ ನಡೆಯಬಾರದೆ ಎಂದು ವೈದೇಹಿ ನ್ಯಾಯಯುತವಾಗಿ ಹಂಬಲಿಸಿದ್ದಾರೆ. ಈ ಕೃತಿಯಲ್ಲಿನ ಘನವಾದ ಲೇಖನವೆಂದರೆ ವಿನಯಾ ಒಕ್ಕುಂದ ಅವರದ್ದು. ಈ ಕೃತಿಯ ಕೇಂದ್ರವಸ್ತುವಾದ ಹೆಣ್ಣಿನ ಸೃಜನಶೀಲತೆಯ ಪ್ರಶ್ನೆಯನ್ನು ಅವರು ಎತ್ತಿಕೊಂಡಿದ್ದಾರೆ.

‘‘ಕಾರಣಗಳೇನೇ ಇರಲಿ, ಈ ಹೊತ್ತಿನ ಚಿತ್ರ ಬರೆಯುತ್ತಿರುವ ಸೀತೆ ಕೇವಲ ಮಣ್ಣನ್ನು ಬಲ್ಲ ಮುಗ್ಧಳಲ್ಲ. ಅವಳಿಗೆ ಸೀತಾರಾಮನ, ಇಕ್ಷ್ವಾಕುವಂಶದ, ರಾಮರಾಜ್ಯದ ಪರಿಚಯ ಚೆನ್ನಾಗಿ ಆಗಿದೆ. ಶೀಲ ಸಾಬೀತು ಮಾಡುವ ಅಗ್ನಿಪರೀಕ್ಷೆಯ ಬೆಂಕಿ ಅವಳೆದೆಯಲ್ಲಿ ಆರಿರಲಿಕ್ಕೂ ಇಲ್ಲ. ಆದರೇನು ಸೃಜನಶೀಲ ಒತ್ತಡದಿಂದ ಅವಳು ಮುಕ್ತಳಾಗಲಾರಳು ಮತ್ತು ತನ್ನ ಸುತ್ತಲೂ ಇರುವ ಪ್ರಾಪಂಚಿಕ ಯಾಜಮಾನ್ಯದ ಹಿಡಿತದಿಂದ ಮುಕ್ತವಾದ ಸ್ವತಂತ್ರ ನಿರ್ಭೀತ ಸೃಷ್ಟಿಶೀಲ ಸೌಖ್ಯವನ್ನೂ ಪಡೆಯಲಾರಳು. ಅವಳು ರಾವಣನ ಪಟ ಬರೆಯಲಾರಳು, ಯಾಕೆಂದರೆ ಅವಳು ಬರೆಯಬಾರದವಳು.

ಪ್ರಭುತ್ವದ ಶಾಸನ ‘ಹೆಬ್ಬೆರಳು’ ಬರೆಯುವುದನ್ನು ಸಹಿಸದು. ಸಣ್ಣ ಚಲನೆಯೊಂದು ಸಂಭವಿಸಿದರೆ ಅದು ಬಹುದೂರ ಕ್ರಮಿಸಿಬಿಡಬಹುದಾದ ಭಯ ಪ್ರಭುತ್ವಕ್ಕಿದೆ. ಪಾರ್ವತಿಯ ಪಾಡೂ ಅದೇ ಆಗಿದೆ. ಅವಳ ಸೃಷ್ಟಿಯ ಮೇಲೂ ಇದೇ ಪ್ರಹಾರ ನಡೆಯುತ್ತದೆ. ಪರಮೇಶನ ಕರುಣೆಯಿಂದ, ಶಕ್ತಿಯಿಂದ ಮಾತ್ರ ಗಣೇಶನ ಮರುಜೀವ ಸಾಧ್ಯವಾಗುತ್ತದೆ. ಸೀತೆ ಮಾತೃತ್ವದ ಶಕ್ತಿಸಂಚಯನದ ರೂಪಕವಾಗಿದ್ದಾಳೆ. ‘ನನ್ನ ನಿರ್ಮಿತಿ ನಾಶವಾದ ಸ್ಥಳದಲ್ಲಿರಲು ನನಗೂ ಇಷ್ಟವಿಲ’ ಎಂಬ ನಿರ್ಧಾರವನ್ನು ಪ್ರಕಟಿಸುತ್ತಾಳೆ. ಹೆಣ್ಣಿಗೆ ಸಷ್ಟಿಶೀಲ ಅಧಿಕಾರವನ್ನು ನೀಡಬಾರದೆಂಬುದು ಪಿತೃತ್ವದ ದೃಢ ನಿಲುವು.

ಇದನ್ನು ಒಪ್ಪಿಸಲಿಕ್ಕಾಗಿಯೇ ಮತ್ತೆ ಮತ್ತೆ ದಬಾವಣೆ ನಡೆಯುತ್ತದೆ’’. ವಿನಯಾ ಅವರ ಈ ಮಾತುಗಳನ್ನು ಇಲ್ಲಿ ಹೇಳಿ ನಾನು ಸುಮ್ಮನಿರುವುದೇ ಸರಿ. ಪುಸ್ತಕದಲ್ಲಿರುವ ಮತ್ತು ಪ್ರಯೋಗಗೊಂಡ ‘ಸಾಪೇಕ್ಷ ಪಠ್ಯಗಳ’ ಪರಿಣಾಮವಾದ ನೋಡುಗರ ಮನೋಭಿತ್ತಿಯಲ್ಲಿ ರೂಪಿತಗೊಂಡ, ‘ಪರಿಣಾಮ ಪಠ್ಯ’ದ ಸ್ವರೂಪ ಎಂತಿರಬಹುದು? ರಾತ್ರಿಯೆಲ್ಲ ಪ್ರಸಂಗ ನೋಡಿದವರ ಮನದಲ್ಲಿ ಕಡೆಗೂ ಉಳಿವ ಪ್ರಶ್ನೆಗಳು ಯಾವುವು? ಎಲ್ಲ ಕೇಡಿಗೂ ದಕ್ಷಿಣವೇ ಹೊಣೆಯಾಗಬೇಕೆ? ಶೂರ್ಪನಖಿಯಂತಹ ನಿಸರ್ಗಸಹಜ ಹೆಣ್ಣೇ ದೂಷಿತಳಾಗಬೇಕೆ? ಈ ಉತ್ತರದ ಯಜಮಾನಿಕೆಗೆ ಕೊನೆಯಿಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.