ಅಕ್ಟೋಬರ್ 31ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ. 79389 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.84ರಷ್ಟು ಕುಸಿತ ಕಂಡಿದೆ. 24205 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.8 ಅಂಶದಷ್ಟು ಇಳಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಸೆನ್ಸೆಕ್ಸ್ ಶೇ 6.19ರಷ್ಟು ಕುಸಿದಿದ್ದರೆ ನಿಫ್ಟಿ ಶೇ 6.63ರಷ್ಟು ತಗ್ಗಿದೆ. ₹1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ್ದಾರೆ. ಮಾರ್ಚ್ 2020ರ ಕೋವಿಡ್ ನಂತರದಲ್ಲಿ ತಿಂಗಳೊಂದರ ಅವಧಿಯಲ್ಲಿ ಆಗಿರುವ ಅತಿದೊಡ್ಡ ಮೊತ್ತದ ಮಾರಾಟ ಇದಾಗಿದೆ. 2024-25ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಗಳು ನಿರೀಕ್ಷಿತ ಬೆಳವಣಿಗೆ ಸಾಧಿಸದಿರುವುದು ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡಕ್ಕೆ ಕಾರಣವಾಗಿದೆ. ವಾರದ ಲೆಕ್ಕಾಚಾರದಲ್ಲಿ ವಲಯವಾರು ಪ್ರಗತಿ ನೋಡಿದಾಗ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 4.11 ಆಟೊ ಸೂಚ್ಯಂಕ ಶೇ 3.33 ಬ್ಯಾಂಕ್ ಸೂಚ್ಯಂಕ ಶೇ 0.11ರಷ್ಟು ಕುಸಿದಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 4.59 ಮಾಧ್ಯಮ ಶೇ 4.24 ರಿಯಲ್ ಎಸ್ಟೇಟ್ ಶೇ 1.39 ಫಾರ್ಮಾ ಶೇ 0.73 ಮತ್ತು ಲೋಹ ವಲಯ ಶೇ 0.58ರಷ್ಟು ಗಳಿಸಿಕೊಂಡಿವೆ. ಇಳಿಕೆ–ಏರಿಕೆ: ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ 17.45 ಟೆಕ್ ಮಹೀಂದ್ರ ಶೇ 7.28 ಮಾರುತಿ ಸುಜುಕಿ ಶೇ 5.86 ಇನ್ಫೊಸಿಸ್ ಶೇ 5.82 ಕೋಲ್ ಇಂಡಿಯಾ ಶೇ 5.22 ಟಾಟಾ ಮೋಟರ್ಸ್ ಶೇ 5.19 ಟ್ರೆಂಟ್ ಶೇ 4.71 ಬಜಾಜ್ ಆಟೊ ಶೇ 4.57 ಏರ್‌ಟೆಲ್ ಶೇ 4.4 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 4.16 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 3.56 ಮತ್ತು ಬಿಪಿಸಿಎಲ್ ಶೇ 3.33ರಷ್ಟು ಕುಸಿದಿವೆ. ಎಲ್ ಆ್ಯಂಡ್ ಟಿ ಶೇ 5.27 ಐಷರ್ ಮೋಟರ್ಸ್ ಶೇ 5.21 ಭಾರತ್ ಎಲೆಕ್ಟ್ರಾನಿಕ್ಸ್ ಶೇ 4.96 ಅದಾನಿ ಎಂಟರ್‌ಪ್ರೈಸಸ್ ಶೇ 4.29 ಸಿಪ್ಲಾ ಶೇ 4.12 ಐಟಿಸಿ ಶೇ 3.53 ಎಸ್‌ಬಿಐ ಶೇ 3.21 ಐಸಿಐಸಿಐ ಬ್ಯಾಂಕ್ ಶೇ 3.11 ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ 2.03 ಅದಾನಿ ಪೋರ್ಟ್ಸ್ ಶೇ 1.67 ಎಚ್‌ಯುಎಲ್ ಶೇ 0.98 ಮತ್ತು ವಿಪ್ರೊ ಶೇ 0.89ರಷ್ಟು ಜಿಗಿದಿವೆ. ಮುನ್ನೋಟ: ಈ ವಾರ ಟಾಟಾ ಸ್ಟೀಲ್ ಮಹೀಂದ್ರ ಆ್ಯಂಡ್ ಮಹೀಂದ್ರ ಎಸ್‌ಬಿಐ ಐಆರ್‌ಎಫ್‌ಸಿ ಬಾಟಾ ಇಂಡಿಯಾ ಐಆರ್‌ಸಿಟಿಸಿ ಸುಂದರಂ ಫೈನಾನ್ಸ್ ಎಕ್ಸೈಡ್ ರೇಮಂಡ್ ಜೆ.ಕೆ. ಪೇಪರ್ ಟೈಟನ್ ಎಂಡ್ಯೂರೆನ್ಸ್ ಟೆಕ್ನಾಲಜೀಸ್ ಎಲ್ಐಸಿ ಎನ್‌ಎಚ್‌ಪಿಸಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸುತ್ತಿವೆ. ಈ ಕಂಪನಿಗಳ ವರದಿ ಎಷ್ಟು ಆಶಾದಾಯಕವಾಗಿದೆ ಎನ್ನುವ ಅಂಶ ಷೇರುಪೇಟೆಯ ಮೇಲೆ ಪರಿಣಾಮ ಬೀರಲಿದೆ. ಉಳಿದಂತೆ ಚೀನಾ ಮಾರುಕಟ್ಟೆಯತ್ತ ವಿದೇಶಿ ಹೂಡಿಕೆದಾರರು ವಾಲಿರುವುದು ಷೇರುಪೇಟೆಗೆ ಪೆಟ್ಟು ಕೊಟ್ಟಿದೆ. ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.