ವಾರ್ಷಿಕ ವಹಿವಾಟು ₹5 ಸಾವಿರ ಕೋಟಿ
ನೆರೆಯ ಗೋವಾ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೂ ರಾಜ್ಯದಲ್ಲಿ ಉತ್ಪಾದನೆಯಾಗುವ ಕೋಳಿ ಮೊಟ್ಟೆಗಳು ಪೂರೈಕೆಯಾಗುತ್ತವೆ. ಬಳ್ಳಾರಿ ಭಾಗದ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳು ತೆಲಂಗಾಣದ ರಾಯಲಸೀಮೆ ಭಾಗಕ್ಕೆ ಹೆಚ್ಚಾಗಿ ಪೂರೈಕೆಯಾಗುತ್ತವೆ. ‘ಕರ್ನಾಟಕದಲ್ಲಿ ಪ್ರತಿವರ್ಷ ಮೊಟ್ಟೆ ಉತ್ಪಾದನೆಯು ಶೇ 5ರಿಂದ 6ರಷ್ಟು ಹೆಚ್ಚಳವಾಗುತ್ತಿದೆ. ಜತೆಗೆ ಬಳಕೆ ಪ್ರಮಾಣವೂ ಹೆಚ್ಚುತ್ತಿದೆ’ ಎಂದು ಹೇಳುತ್ತಾರೆ ರವೀಂದ್ರ ರೆಡ್ಡಿ. ‘ಕರ್ನಾಟಕವು ಮೊಟ್ಟೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಹೊರರಾಜ್ಯಗಳ ಅವಲಂಬನೆಯ ಅಗತ್ಯವಿಲ್ಲ. ಆದರೆ ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ಸಾಗಾಣಿಕೆ ವೆಚ್ಚ ದುಬಾರಿಯಾಗಲಿದೆ. ಹಾಗಾಗಿ ತಮಿಳುನಾಡಿನಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳ ಖರೀದಿಗೆ ಇಲ್ಲಿನ ಡೀಲರ್‌ಗಳು ಹೆಚ್ಚು ಆಸ್ಥೆವಹಿಸುತ್ತಾರೆ’ ಎಂದು ಹೇಳುತ್ತಾರೆ. ‘ಅಲ್ಲದೇ ರಾಜ್ಯದಲ್ಲಿ ಪ್ರತಿದಿನ ಮೊಟ್ಟೆ ವಹಿವಾಟು ₹10 ಕೋಟಿ ದಾಟುತ್ತದೆ. ಕೋಳಿಗಳು ಮೊಟ್ಟೆ ಹಾಗೂ ಗೊಬ್ಬರ ಮಾರಾಟದ ವಹಿವಾಟು ಪರಿಗಣಿಸಿದರೆ ಈ ಉದ್ಯಮದಲ್ಲಿ ವಾರ್ಷಿಕವಾಗಿ ಸುಮಾರು ₹4500 ಕೋಟಿಯಿಂದ ₹5 ಸಾವಿರ ಕೋಟಿವರೆಗೆ ವಹಿವಾಟು ನಡೆಯುತ್ತದೆ’ ಎಂಬುದು ವಿವರಣೆ.