ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಕ ವಿದೇಶಗಳಿಗೆ ಹೂವುಗಳ ರಫ್ತಿನ ಪ್ರಮಾಣ 2017–18ರಿಂದ 2023–24ರ ಅವಧಿಯಲ್ಲಿ ಶೇಕಡ 20ರಷ್ಟು ಕುಸಿತ ಕಂಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಹೂವು ಬೆಳೆಗಾರರಿಗೆ ಇದರಿಂದ ನಷ್ಟವಾಗುತ್ತಿದೆ.

ದೇಶದಲ್ಲಿ ಹೂವು ರಫ್ತಿನಲ್ಲಿ ತೊಡಗಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಿಂದ ರಫ್ತಾಗುವ ಹೂವುಗಳ ಪೈಕಿ ಶೇ 95ರಷ್ಟು ಕೆಐಎ ಮೂಲಕವೇ ವಿದೇಶಗಳಿಗೆ ರವಾನೆಯಾಗುತ್ತವೆ. ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳವೂ ಸೇರಿದಂತೆ ವಿವಿಧ ಕಾರಣಗಳಿಂದ ಈಗ ಹೂವುಗಳ ರಫ್ತು ಕುಸಿಯತೊಡಗಿದೆ.

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಹೂವುಗಳ ರಫ್ತಿನ ಪ್ರಮಾಣ ಕುಸಿಯಿತು. ಆದರೆ, ಕೋವಿಡ್ ನಂತರದ ದಿನಗಳಲ್ಲಿ ಚೇತರಿಕೆ ಕಾಣಲಿಲ್ಲ. ಈಗಲೂ ಹೂವುಗಳ ರಫ್ತಿನ ವಹಿವಾಟು ಕೋವಿಡ್ ಪೂರ್ವ ಅವಧಿಗೆ ಸರಿಸಮನಾಗಿ ಏರಿಕೆಯಾಗಿಲ್ಲ. ಹೂವುಗಳ ಸಾಗಾಣಿಕೆ ವೆಚ್ಚದಲ್ಲಿನ ಏರಿಕೆ ಮತ್ತು ರಫ್ತು ವಹಿವಾಟಿಗೆ ಕೃಷಿ ಮತ್ತು ಸಂಸ್ಕರಿತ ಆಹಾರ ಪದಾರ್ಥಗಳ ರಫ್ತು ಪ್ರಾಧಿಕಾರದಿಂದ (ಅಪೇಡಾ) ಪ್ರೋತ್ಸಾಹ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎಂದು ದೂರುತ್ತಾರೆ ಹೂವು ಬೆಳೆಗಾರರು.

‘ಎರಡು– ಮೂರು ವರ್ಷಗಳ ಅವಧಿಯಲ್ಲಿ ವಿಮಾನ ಸಾಗಣೆ ವೆಚ್ಚ ದುಪ್ಪಟ್ಟಾಗಿದೆ. ಈ ದರ ನಿಯಂತ್ರಣಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಈ ಕಾರಣದಿಂದ ಹಲವು ಬೆಳೆಗಾರರು ಹೂವುಗಳನ್ನು ರಫ್ತು ಮಾಡುವುದನ್ನೇ ಸ್ಥಗಿತಗೊಳಿಸಿದ್ದೇವೆ’ ಎನ್ನುತ್ತಾರೆ ದಕ್ಷಿಣ ಭಾರತ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಅರವಿಂದ್ ಟಿ.ಎಂ.

ವಿಮಾನದಲ್ಲಿ ಸರಕು ಸಾಗಾಣಿಕೆ ವೆಚ್ಚದ ಮೇಲೆ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುತ್ತಿದೆ. ಇದು ಹೂವುಗಳ ರಫ್ತಿನ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಹೇಳುತ್ತಾರೆ ಅವರು.

ಹೂವುಗಳ ರಫ್ತು ಕೈಬಿಟ್ಟ ಹೆಚ್ಚಿನ ಬೆಳೆಗಾರರು, ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಇಲ್ಲಿಯೇ ಹೂವುಗಳನ್ನು ಮಾರುವುದರಿಂದ ಅವರಿಗೆ ಲಾಭ ದೊರಕುತ್ತಿಲ್ಲ.

‘ಜಮೀನಿನಲ್ಲಿನ ಮಣ್ಣಿನ ಫಲವತ್ತತೆಯೂ ಕಡಿಮೆಯಾಗುತ್ತಿರುವುದರಿಂದ ವರ್ಷಗಳು ಕಳೆದಂತೆ ಇಳುವರಿಯೂ ಕುಸಿಯುತ್ತಿದೆ. ಹೂವುಗಳನ್ನು ರಫ್ತು ಮಾಡುತ್ತಿದ್ದುದರಿಂದ ಹೆಚ್ಚು ಆದಾಯ ಸಿಗುತ್ತಿತ್ತು. ಇದು ಜೀವನಕ್ಕೆ ಆಧಾರವಾಗಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಹೂವು ಮಾರಾಟದಿಂದ ಹೆಚ್ಚಿನ ಆದಾಯ ಸಿಗುತ್ತಿಲ್ಲ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ’ ಎನ್ನುತ್ತಾರೆ 30 ವರ್ಷಗಳಿಂದ ಹೂವು ಬೆಳೆದು ಮಾರುತ್ತಿರುವ ದೊಡ್ಡಬಳ್ಳಾಪುರದ ದೇವಯ್ಯ.

ಸಾಗಾಣಿಕೆ ವೆಚ್ಚದ ಸಹಾಯಧನ ಸ್ಥಗಿತ

ಹೂವುಗಳನ್ನು ರಫ್ತು ಮಾಡುವ ಕೃಷಿಕರಿಗೆ ಹಿಂದೆ ಅಪೇಡಾದಿಂದ ಸಾಗಾಣಿಕೆ ವೆಚ್ಚದಲ್ಲಿ ಸಹಾಯಧನ ನೀಡಲಾಗುತ್ತಿತ್ತು. ಅದನ್ನು ಅಪೇಡಾ ಹಿಂತೆಗೆದುಕೊಂಡಿದೆ. ಈ ಕಾರಣದಿಂದಾಗಿಯೇ ಹೂವುಗಳ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ದಕ್ಷಿಣ ಭಾರತ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಅರವಿಂದ್ ಟಿ.ಎಂ. ದೂರುತ್ತಾರೆ. ಸಾಗಾಣಿಕೆ ವೆಚ್ಚದಲ್ಲಿನ ಏರಿಕೆ ಕಾರಣದಿಂದಾಗಿಯೇ ಹೂವುಗಳ ರಫ್ತಿನ ಪ್ರಮಾಣ ಕುಸಿದಿದೆ ಎಂದು ಒಪ್ಪಿಕೊಳ್ಳುವ ಅಪೇಡಾದ ಅಧಿಕಾರಿಗಳು ‘ಸಾಗಾಣಿಕೆ ವೆಚ್ಚದ ಸಹಾಯಧನ ಯೋಜನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯದ ಜತೆ ಚರ್ಚೆಗೆ ಪ್ರಯತ್ನಿಸಲಾಗುತ್ತಿದೆ. ಬೇರೆ ಯೋಜನೆಗಳ ಅಡಿಯಲ್ಲಿ ಅನುಕೂಲ ಪಡೆಯಲು ರೈತರು ಪ್ರಯತ್ನಿಸಬೇಕು’ ಎಂಬ ಸಲಹೆ ನೀಡುತ್ತಾರೆ. ‘ವಿಮಾನ ಸಾಗಾಣಿಕೆ ವೆಚ್ಚದ ಸಹಾಯಧನ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿರುವುದು ಕೇಂದ್ರ ಸರ್ಕಾರ. ಆದರೆ ಅದೇ ಮಾದರಿಯಲ್ಲಿ ರೈತರಿಗೆ ತಮ್ಮ ಉತ್ಪನ್ನಗಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಸಹಾಯಧನ ನೀಡುವ ಬೇರೊಂದು ಯೋಜನೆ ಇದೆ. ರೈತರು ಆ ಯೋಜನೆಯ ಅನುಕೂಲ ಪಡೆಯಬೇಕು’ ಎಂದು ಅಪೇಡಾದ ಹಿರಿಯ ಅಧಿಕಾರಿಯೊಬ್ಬರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.