ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೇ 61ರಷ್ಟು ಷೇರು ವಿಕ್ರಯಕ್ಕೆ ಕೇಂದ್ರ ನಿರ್ಧಾರ: ಐಡಿಬಿಐ ಖಾಸಗೀಕರಣ ಸನ್ನಿಹಿತ

Published 25 ಜುಲೈ 2024, 14:25 IST
Last Updated 25 ಜುಲೈ 2024, 14:25 IST
ಅಕ್ಷರ ಗಾತ್ರ

‌ನವದೆಹಲಿ: ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್‌ನ ಷೇರುಗಳ ಮಾರಾಟ ಪ್ರಕ್ರಿಯೆಗೆ ಗೃಹ ಸಚಿವಾಲಯದ ಒಪ್ಪಿಗೆ ದೊರೆಕಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಸಂಭಾವ್ಯ ಹೂಡಿಕೆದಾರರ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶೀಘ್ರವೇ ಹಸಿರು ನಿಶಾನೆ ನೀಡುವ ನಿರೀಕ್ಷೆಯಿದೆ.

‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಷೇರು ವಿಕ್ರಯದ ಮೂಲಕ ₹50 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದೆ. ಸಂಪನ್ಮೂಲ ಕ್ರೋಡೀಕರಣದ ಕೊರತೆ ನೀಗಿಸಲು ಐಡಿಬಿಐ ಬ್ಯಾಂಕ್‌ನ ಆಸ್ತಿ ನಗದೀಕರಣಕ್ಕೆ ಮುಂದಾಗಿದೆ’ ಎಂದು ಗುರುವಾರ ಮೂಲಗಳು ತಿಳಿಸಿವೆ.

ಈ ಬ್ಯಾಂಕ್‌ನಲ್ಲಿ ಹೊಂದಿರುವ ಷೇರುಗಳ ಪೈಕಿ ಕೇಂದ್ರ ಸರ್ಕಾರವು ಶೇ 30.48ರಷ್ಟು ಹಾಗೂ ಭಾರತೀಯ ಜೀವ ವಿಮಾ ನಿಗಮವು ಶೇ 30.24ರಷ್ಟು ಷೇರುಗಳ ಮಾರಾಟಕ್ಕೆ ನಿರ್ಧರಿಸಿವೆ. ಹಾಗಾಗಿ, ಈ ಬ್ಯಾಂಕ್‌ನ ಖಾಸಗೀಕರಣ ಸನ್ನಿಹಿತವಾಗಿದೆ ಎಂದು ತಿಳಿಸಿವೆ. 

ಷೇರುಗಳನ್ನು ಖರೀದಿಸಲು ಹಲವು ಬಿಡ್‌ದಾರರು ಆಸಕ್ತಿ ತೋರಿದ್ದಾರೆ ಎಂದು ಕಳೆದ ವರ್ಷದ ಜನವರಿಯಲ್ಲಿಯೇ ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಹೇಳಿತ್ತು. 

ಗೃಹ ಸಚಿವಾಲಯ ಮತ್ತು ಆರ್‌ಬಿಐನಿಂದ ಒಪ್ಪಿಗೆ ದೊರೆತ ಬಳಿಕ ಷೇರುಗಳನ್ನು ಖರೀದಿಸುವುದಾಗಿ ಬಿಡ್‌ದಾರರು ಪ್ರಕಟಿಸಿದ್ದರು. ಹಾಗಾಗಿ, ಕಳೆದ ಒಂದೂವರೆ ವರ್ಷದಿಂದಲೂ ಆರ್‌ಬಿಐ ಸಂಭಾವ್ಯ ಬಿಡ್‌ದಾರರ ಪರಿಶೀಲನಾ ಪ್ರಕ್ರಿಯೆಯನ್ನು ನಡೆಸುತ್ತಿದೆ. 

ಬಿಎಸ್‌ಇಯಲ್ಲಿ ಬುಧವಾರದ ವಹಿವಾಟಿನ ಅಂತ್ಯಕ್ಕೆ ಬ್ಯಾಂಕ್‌ನ ಪ್ರತಿ ಷೇರಿನ ಬೆಲೆ ₹102.12 ಆಗಿದೆ. 

ಈ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಶೇ 94.72ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿವೆ. ಈ ಪೈಕಿ ಶೇ 61ರಷ್ಟು ಷೇರುಗಳ ಮಾರಾಟಕ್ಕೆ ತೀರ್ಮಾನಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT