ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ: ನಿವೇಶನ ಮಾರಾಟ, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Published : 10 ಸೆಪ್ಟೆಂಬರ್ 2024, 20:11 IST
Last Updated : 10 ಸೆಪ್ಟೆಂಬರ್ 2024, 20:11 IST
ಫಾಲೋ ಮಾಡಿ
Comments
ಪ್ರ

ನನ್ನ ವಯಸ್ಸು 61. ಅನುದಾನಿತ ಕಾಲೇಜೊಂದರಲ್ಲಿ ಅಧ್ಯಾಪಕನಾಗಿ ಹಾಗೂ ವಿಭಾಗದ ಮುಖ್ಯಸ್ಥನಾಗಿ ನಿವೃತ್ತಿಯಾಗಿದ್ದೇನೆ (2022-23ನೇ ಸಾಲಿನಲ್ಲಿ). ಪ್ರಸ್ತುತ ನನಗೆ ಪಿಂಚಣಿ ಬರುತ್ತಿಲ್ಲ. ನಿವೃತ್ತಿ ಬಳಿಕ ಭವಿಷ್ಯ ನಿಧಿಯಿಂದ ನನ್ನ ಪಾಲಿನ ಹಣ ₹8.72 ಲಕ್ಷ ಹಾಗೂ ಗಳಿಕೆ ರಜಾದ ಬಾಬ್ತು ₹5.26 ಲಕ್ಷ ಬಂದಿದೆ. 2023-24ರಲ್ಲಿ ಈ ಹಣ ನನ್ನ ಖಾತೆಗೆ ಜಮೆ ಆಗಿದೆ.

ನಾನು 2023-24 ಮತ್ತು 2022-23ನೇ ಸಾಲಿನ ಆದಾಯ ತೆರಿಗೆ ಪಾವತಿಸಿರುತ್ತೇನೆ. 2023-24ನೇ ಸಾಲಿನಲ್ಲಿ ಜಮೆ ಆದ ಭವಿಷ್ಯ ನಿಧಿ ಹಾಗೂ ಗಳಿಕೆ ರಜಾದ ಮೊತ್ತಕ್ಕೆ ಆದಾಯ ತೆರಿಗೆ ಪಾವತಿಸಿರುವುದಿಲ್ಲ. ಇದರಿಂದ ಏನಾದರೂ ತೊಂದರೆಯಾಗುತ್ತದೆಯೇ? ನಾನು ಹಿರಿಯ ನಾಗರಿಕನಾಗಿರುವುದರಿಂದ ನನಗೆ ತೆರಿಗೆ ವಿನಾಯಿತಿ ಇದೆಯೇ? ಮೇಲಾಗಿ ನನಗೆ 2023-24ರಿಂದ ಇಲ್ಲಿಯವರೆಗೂ ಯಾವುದೇ ರೀತಿಯ ನಿಶ್ಚಿತ ಆದಾಯವಿಲ್ಲ. ದಯವಿಟ್ಟು, ನನ್ನ ಸಂದೇಹಗಳಿಗೆ ಸೂಕ್ತ ಉತ್ತರ ನೀಡಿ.

ಆದಾಯ ತೆರಿಗೆಯ ಸೆಕ್ಷನ್ 15ರ ಅನ್ವಯ ವೇತನ ಆದಾಯಕ್ಕೆ ಸಂಬಂಧಿಸಿದ ತೆರಿಗೆಯನ್ನು ವೇತನ ‘ಗಳಿಕೆ’ಯಾದ ವರ್ಷದಲ್ಲಿ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ ತಿಂಗಳ ವೇತನ ಆಯಾ ತಿಂಗಳ ಕೊನೆಯ ದಿನ ಗಳಿಕೆ ಆಗುತ್ತದೆ. ಆದರೆ, ಪಾವತಿ ಕೆಲವು ದಿನಗಳ ಅಥವಾ ಮುಂದಿನ ತಿಂಗಳು ಪಾವತಿಯಾದರೂ ತೆರಿಗೆ, ಗಳಿಕೆಗೆ ಸಂಬಂಧಿಸಿದ ಆರ್ಥಿಕ ವರ್ಷಕ್ಕೆ ಅನ್ವಯಿಸಿ ನಿರ್ಣಯವಾಗುತ್ತದೆ. ಆದರೆ, ಕೆಲವೊಮ್ಮೆ ವಾರ್ಷಿಕ ಪಾವತಿಗಳು ಅಥವಾ ನಿವೃತ್ತಿಗೆ ಸಂಬಂಧಿಸಿದ ಪಾವತಿಗಳು ಇದ್ದಾಗ ಗಳಿಕೆ ಆಧಾರದಲ್ಲಿ ತೆರಿಗೆಗೆ ಒಳಪಡದಿದ್ದರೆ ಹಾಗೂ ಅವು ವಿನಾಯಿತಿಗೊಳಪಡದಿದ್ದರೆ, ಅವನ್ನು ಪಾವತಿಯಾದ ವರ್ಷದಲ್ಲಿ ತೆರಿಗೆಗೆ ಪರಿಗಣಿಸಬೇಕಾಗುತ್ತದೆ.

ನಿಮ್ಮ ವಿಚಾರದಲ್ಲಿ ನೀವು ಈಗಾಗಲೇ 2022-23ನೇ ಸಾಲಿನ ವೇತನಕ್ಕೆ ಸಂಬಂಧಿಸಿದ ಆದಾಯಕ್ಕೆ ತೆರಿಗೆ ಪಾವತಿ ಮಾಡಿರುವುದಾಗಿ ತಿಳಿಸಿರುತ್ತೀರಿ. ಆದರೆ, ನಿಮ್ಮ ಭವಿಷ್ಯ ನಿಧಿ ಹಾಗೂ ಗಳಿಕೆ ರಜಾದ ಮೊತ್ತ ನಿಮ್ಮ ಖಾತೆಗೆ ಜಮೆ ಆಗಿರುವುದು 2023-24ನೇ ಆರ್ಥಿಕ ವರ್ಷದಲ್ಲಿ ಎಂಬುದಾಗಿ ತಿಳಿಸಿದ್ದೀರಿ. ಮೊದಲನೆಯದಾಗಿ ಇವೆರಡೂ ನಿಮ್ಮ ನಿವೃತ್ತಿಯ ಕಾರಣದಿಂದ ಬಂದ ಮೊತ್ತ.

ಭವಿಷ್ಯ ನಿಧಿ ಮೊತ್ತ ಸೆಕ್ಷನ್ 10(12)ರ ಪ್ರಕಾರ ಸಂಪೂರ್ಣ ವಿನಾಯಿತಿಗೆ ಅರ್ಹವಾಗಿದೆ. ರಜಾ ಗಳಿಕೆ ಮೊತ್ತ ಸೆಕ್ಷನ್ 10(10ಎ ಎ) ಇದರಡಿ 2023ರ ಮಾರ್ಚ್‌ 31ರ ತನಕ ₹3 ಲಕ್ಷ ವಿನಾಯಿತಿಗೆ ಅರ್ಹ. ತದನಂತರ ನಿವೃತ್ತಿ ಹೊಂದಿದವರಿಗೆ ಸಂಬಂಧಿಸಿ ₹25 ಲಕ್ಷದ ತನಕ ವಿನಾಯಿತಿ ಸಿಗುತ್ತದೆ.

ನೀವು ಈ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಫಾರಂ 16 ಅನ್ನು ಗಮನಿಸಿ. ಅದರಂತೆ ತೆರಿಗೆ ಕಟ್ಟಿರುವ ವಿಚಾರವನ್ನು ಖಚಿತಪಡಿಸಿಕೊಳ್ಳಿ. ರಜಾ ನಗದೀಕರಣಕ್ಕೆ ಸಂಬಂಧಿಸಿ ₹3 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ತೆರಿಗೆ ಅನ್ವಯಿಸುವುದಿದ್ದರೂ ನಿಮ್ಮ ಒಟ್ಟಾರೆ ಆದಾಯ ಗರಿಷ್ಠ ವಿನಾಯಿತಿ ಮಿತಿಗಿಂತ ಕಡಿಮೆ ಇರುವುದರಿಂದ ತೆರಿಗೆಗೊಳಪಡುವ ಸಾಧ್ಯತೆ ಇಲ್ಲ. ಹಳೆಯ ತೆರಿಗೆ ವಿಧಾನದಡಿ ಹಿರಿಯ ನಾಗರಿಕರಿಗೆ ₹3 ಲಕ್ಷದ ತನಕ ವಾರ್ಷಿಕ ಆದಾಯಕ್ಕೆ ತೆರಿಗೆ ಇರುವುದಿಲ್ಲ.

ಪ್ರ

ನಾನು ಮಂಗಳೂರಿನ ನಿವಾಸಿಯಾಗಿದ್ದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿ ವೃತ್ತಿ ನಿರ್ವಹಿಸಿ ಇತ್ತೀಚೆಗೆ ನಿವೃತ್ತಿಯಾಗಿದ್ದೇನೆ. ಪ್ರಸ್ತುತ ನಾವು ಸ್ವಂತ ಮನೆಯಲ್ಲಿ ವಾಸವಿದ್ದು, ಕೆಲವು ವರ್ಷ ಹಿಂದೆ ಮಂಗಳೂರಿನಲ್ಲಿ ಖರೀದಿಸಿದ 30x60 ಅಳತೆಯ ನಿವೇಶನ ಹೊಂದಿದ್ದೇವೆ. ಇದನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದೇವೆ.

2005 ಮಾರ್ಚ್‌ನಲ್ಲಿ ಇದನ್ನು ನಾವು ಖರೀದಿಸಿದ್ದೇವೆ. ಪ್ರಸಕ್ತ ಆರ್ಥಿಕ ವರ್ಷದ ಯಾವುದೇ ಸಂದರ್ಭದಲ್ಲಿ ಇದು ಮಾರಾಟ ಆಗಬಹುದು. ಇದರ ಖರೀದಿ ಮೊತ್ತ ಅಂದಾಜು ₹11.50 ಲಕ್ಷ. ಇತ್ತೀಚಿನ ಅಂದಾಜಿನಂತೆ ನಮ್ಮ ನಿವೇಶನಕ್ಕೆ ಸುಮಾರು ₹85 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದೇವೆ. ಆದರೆ, ₹75 ಲಕ್ಷಕ್ಕೆ ಖರೀದಿದಾರರಿದ್ದಾರೆ. ಒಂದು ವೇಳೆ ಈ ಮೌಲ್ಯಕ್ಕೆ ಮಾರಾಟವಾದರೆ ನಮಗೆ ಬರಬಹುದಾದ ತೆರಿಗೆ ಎಷ್ಟು. ನಾವು ಮುಂದೆ ಮಗನ ಮನೆಯಲ್ಲಿ ವಾಸ್ತವ್ಯ ಹೂಡುವ ಕಾರಣ ಹಾಗೂ ಈಗಾಗಲೇ ನಮಗೆ ಒಂದು ಮನೆ ಇರುವ ಕಾರಣ ಹೊಸ ಮನೆ ಕಟ್ಟುವ ಅಥವಾ ಖರೀದಿಸುವ ಉದ್ದೇಶ ಇಲ್ಲ. ನಮಗೆ ₹50 ಲಕ್ಷದ ಬಾಂಡ್ ಖರೀದಿಸಿ ತೆರಿಗೆ ವಿನಾಯಿತಿ ಪಡೆಯುವ ಅವಕಾಶ ಇರುವುದಾದರೆ ಅದನ್ನು ಬಳಸಿಕೊಳ್ಳುವುದು ಉತ್ತಮವೇ ಅಥವಾ ಅಂಚೆ ಇಲಾಖೆಯ ಅಥವಾ ಬ್ಯಾಂಕ್ ಠೇವಣಿ ಇರಿಸಿ ಹಿರಿಯ ನಾಗರಿಕರಿಗೆ ಇರುವ ಹೆಚ್ಚುವರಿ ಬಡ್ಡಿಯ ಲಾಭ ಪಡೆಯುವ ಆಯ್ಕೆ ಇರುವಾಗ ಯಾವುದು ಉತ್ತಮ ತೀರ್ಮಾನ ಎಂಬ ಬಗ್ಗೆ ತಿಳಿಸಿ.

ಪ್ರಸ್ತುತ ಬದಲಾದ ತೆರಿಗೆ ನಿಯಮದ ಸನ್ನಿವೇಶದಲ್ಲಿ ಇಂತಹ ಯಾವುದೇ ನಿರ್ಣಯ ಕೈಗೊಳ್ಳುವ ಮೊದಲು ಯಾವ ಪದ್ಧತಿಯಡಿ ತೆರಿಗೆ ಉಳಿತಾಯ ಅಧಿಕ ಎಂಬುದನ್ನು ನೋಡಬೇಕಾಗುತ್ತದೆ.

ನೀವು ಕೊಟ್ಟ ಮಾಹಿತಿಯಂತೆ ಇನ್‍ಡೆಕ್ಸೇಷನ್ ಸಹಿತ ತೆರಿಗೆ ಲೆಕ್ಕ ಹಾಕಿದಾಗ ಶೇ 20ರ ದರದಂತೆ ₹7.61 ಲಕ್ಷ ಬರುವುದಾದರೆ ಹೊಸ ನಿಯಮದ ಅನುಸಾರ ಇನ್‍ಡೆಕ್ಸೇಷನ್ ರಹಿತ ಶೇ 12.5ರ ದರದಲ್ಲಿ ತೆರಿಗೆ ಮೊತ್ತ ₹7.94 ಲಕ್ಷ ಆಗಿರುತ್ತದೆ. ಇಲ್ಲಿ ಬರುವ ಲಾಭದ ಮೊತ್ತ ಕ್ರಮವಾಗಿ ₹38.05 ಲಕ್ಷ ಹಾಗೂ ₹63.50 ಲಕ್ಷ ಆಗಿರುತ್ತದೆ. ಬಾಂಡ್‌ಗಳಲ್ಲಿ 5 ವರ್ಷ ಕಾಲ ನಿಮ್ಮ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಇದಕ್ಕೆ ಶೇ 5.25ರ ವಾರ್ಷಿಕ ಬಡ್ಡಿ ಸಿಗುತ್ತದೆ. ಹೀಗಾಗಿ, ನೀವು ಇನ್‍ಡೆಕ್ಸೇಷನ್ ಸಹಿತ ಇರುವ ತೆರಿಗೆ ವಿಧಾನ ಆಯ್ಕೆ ಮಾಡಿ ₹38.05 ಲಕ್ಷದಷ್ಟು ಮೊತ್ತ ಬಾಂಡ್‌ಗಳಲ್ಲಿ ಹೂಡಿ ತೆರಿಗೆ ಶೂನ್ಯ ಮಾಡಬಹುದು. ಹೆಚ್ಚುವರಿ ಉಳಿತಾಯ ಮೊತ್ತವನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಅಥವಾ ಅದಕ್ಕಿಂತ ಅಧಿಕ ಲಾಭ ನೀಡುವ ಕಡೆ ಹೂಡಿಕೆ ಮಾಡಬಹುದು.

ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಬಹು ಬಹುಮುಖ್ಯ ಅಂಶವೆಂದರೆ, ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ ತೆರಿಗೆ ಏನೋ ಶೂನ್ಯ ಮಾಡಬಹುದು. ಆದರೆ, ಇವೆಲ್ಲಾ ಶೇ 5.25ರ ಬಡ್ಡಿದರ ನೀಡುವ ದೀರ್ಘಾವಧಿ ಹೂಡಿಕೆಗಳು. ಒಂದು ವೇಳೆ ನೀವು ಯಾವುದೇ ಬಾಂಡ್ ಖರೀದಿಸದೆ ಸಂಪೂರ್ಣ ಮೊತ್ತದ ತೆರಿಗೆ ಪಾವತಿಸಿ, ಉಳಿದ ಮೊತ್ತವನ್ನು ಅದಕ್ಕಿಂತ ಅಧಿಕ ಲಾಭ ನೀಡುವ ಯಾವುದೇ ಹೂಡಿಕೆಗಳಲ್ಲಿ ಹಣ ತೊಡಗಿಸಿದಾಗ ಒಟ್ಟಾರೆ ನಿಮ್ಮ ಹಣ 5 ವರ್ಷದಲ್ಲಿ ಇನ್ನಷ್ಟು ವೃದ್ಧಿಸುವಂತೆ ಮಾಡಬಹುದು. ಈಕ್ವಿಟಿ ಉಳಿತಾಯ ಮ್ಯೂಚುವಲ್ ಫಂಡ್‌ಗಳು ವಾರ್ಷಿಕವಾಗಿ ಶೇ 9 ರಿಂದ ಶೇ 16ರಷ್ಟು ಲಾಭ ನೀಡಿದ ಉದಾಹರಣೆಗಳಿವೆ. ಹೀಗಾಗಿ, ಈ ಸಂದರ್ಭದಲ್ಲಿ ನಿಮ್ಮ ವೃತ್ತಿ ಅನುಭವ ಬಳಸಿ ಸರಿಯಾದ ನಿರ್ಧಾರ ಕೈಗೂಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT