ನಾನು ಮ್ಯೂಚುವಲ್ ಫಂಡ್‌ಗಳ ಡೆಬ್ಟ್ ಸ್ಕೀಂಗಳಲ್ಲಿ ಅತ್ಯಂತ ಕಡಿಮೆ ಲಾಭ ಬರುವುದರಿಂದ ಯಾವುದೇ ರಿಸ್ಕ್ ಇಲ್ಲ ಎಂದು ತಿಳಿದುಕೊಂಡಿದ್ದೇನೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಅದು ಕೆಲವೊಮ್ಮೆ ನಂಬುವುದು ಕಷ್ಟ ಎನ್ನುವ ಮಾಹಿತಿಯನ್ನೂ ಕೇಳಿದ್ದೇನೆ. ಈ ಬಗ್ಗೆ ಅರಿತು ಹೇಗೆ ನಿರ್ಧಾರ ತೆಗೆದುಕೊಳ್ಳಬೇಕು? ಜಯನಂದನ್, ಆರ್.ಆರ್. ನಗರ, ಬೆಂಗಳೂರು.
ನಿಮ್ಮ ಊಹೆ ಹಾಗೂ ಮಾಹಿತಿ ಬಗೆಗಿನ ಅರಿವು ಸರಿಯಾಗಿದೆ. ಎಲ್ಲ ಹೂಡಿಕೆದಾರರು ಈ ಬಗ್ಗೆ ತಿಳಿದುಕೊಂಡಿರುವುದು ಅಗತ್ಯ. ಡೆಬ್ಟ್ ಫಂಡ್‌ಗಳ ಮೂಲ ಆದಾಯ ಹೂಡಿಕೆಯ ಮೇಲಿನ ಬಡ್ಡಿಯಾಗಿದೆ. ಇದು ಟ್ರೆಷರಿ ಬಿಲ್, ಡಿಬೆಂಚರ್, ಬ್ಯಾಂಕ್ ಬಡ್ಡಿ, ಸರ್ಕಾರಿ ಭದ್ರತೆಯ ಬಾಂಡ್ ಇತ್ಯಾದಿ ಯಾವುದೇ ಉತ್ಪನ್ನಗಳ ಮೇಲಿನ ಹೂಡಿಕೆಯಿಂದ ಬಂದಿರಬಹುದು. ಈ ಹೂಡಿಕೆಗಳಿಗೂ ಬಡ್ಡಿ ಮೇಲಿನ ಏರಿಳಿತದ ಅಪಾಯ ಇದೆ. ಕೆಲವೊಮ್ಮೆ ಯಾವ ಸಂಸ್ಥೆಯಲ್ಲಿ ಹೂಡಿಕೆ ಮಾಡಲಾಗಿದೆಯೋ ಆ ಸಂಸ್ಥೆಯ ಅಸ್ತಿತ್ವವು ಅಪಾಯಕ್ಕೆ ಸಿಲುಕಿದಾಗ ಅಸಲು ಮೊತ್ತಕ್ಕೆ ಖಾತರಿ ಇಲ್ಲದಾಗುವ ಕೆಲವು ಅನಿರೀಕ್ಷಿತ ಸನ್ನಿವೇಶ ಸೃಷ್ಟಿಯಾಗುತ್ತವೆ (ಉದಾಹರಣೆಗೆ ಸಾಲಪತ್ರ ನೀಡಿದ ಬ್ಯಾಂಕ್, ಸಾಲಪತ್ರ ನೀಡಿದ ಕಂಪನಿ). ಇವು ಹೂಡಿದ ಫಂಡ್‌ಗಳ ದಿನವಹಿ ಮೌಲ್ಯದಲ್ಲೂ ಅಲ್ಪಾವಧಿ ಅಥವಾ ದೀರ್ಘಾವಧಿ ಪರಿಣಾಮ ಬೀರಬಹುದು. ಹೀಗಾಗಿ, ಯಾವತ್ತೂ ಫಂಡ್ ಹೌಸ್‌ಗಳು ಎಲ್ಲಿ ಹೂಡಿಕೆ ಮಾಡುತ್ತವೆ ಹಾಗೂ ಅವುಗಳ ಮಾನದಂಡದ ಗುಣಮಟ್ಟ ಏನು ಎನ್ನುವುದು ಗಮನದಲ್ಲಿ ಇರಬೇಕು.
ನಾನು ಇನ್ಫೊಸಿಸ್, ಟಿಸಿಎಸ್, ರಿಲಯನ್ಸ್, ಐಟಿಸಿ, ಕೋಲ್ ಇಂಡಿಯಾ, ಎಚ್‌ಎಎಲ್, ಏಷ್ಯನ್ ಪೇಂಟ್ಸ್, ಡಿಮಾರ್ಟ್, ಟಾಟಾ ಸಮೂಹದ ಕಂಪನಿಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡುತ್ತಿದ್ದೇನೆ. ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆ ತೀವ್ರವಾಗಿ ಕುಸಿಯುತ್ತಿದೆ. ಈ ನಡುವೆ ಮಾರುಕಟ್ಟೆ ಕೆಲವು ಬಾರಿ ಏರುವುದನ್ನೂ ಕಂಡಿದ್ದೇವೆ. ನನ್ನ ಪ್ರಶ್ನೆ ಏನೆಂದರೆ ಈ ಎಲ್ಲಾ ಕಂಪನಿಗಳು ಉತ್ತಮ ಹೆಸರು ಗಳಿಸಿವೆ. ಇದರ ಆಧಾರದಲ್ಲಿ ನಾವು ಹೂಡಿಕೆ ಮಾಡುತ್ತಿದ್ದೇವೆ ಎನ್ನುವುದು ನಿಜವಿದ್ದರೂ ಈ ಕಂಪನಿಗಳ ಆಯ್ಕೆಯಲ್ಲಿ ಇನ್ನೂ ಕಾಳಜಿ ಅಗತ್ಯವೇ ಅಥವಾ ಈಗ ಕುಸಿಯುತ್ತಿರುವ ಮಾರುಕಟ್ಟೆಯಲ್ಲಿ ಈ ಷೇರುಗಳು ಖರೀದಿಗೆ ಯೋಗ್ಯವೇ. ಈ ಬಗ್ಗೆ ತಿಳಿಸಿ. ನಾಗೇಶ್ ಎಚ್., ಹೊನ್ನಾವರ.
ನಿಮ್ಮ ಪ್ರಶ್ನೆ ಸಹಜವಾದುದಾಗಿದೆ. ಆದರೆ, ಈ ಅಂಕಣದಲ್ಲಿ ನಾವು ಯಾವುದೇ ನಿರ್ದಿಷ್ಟ ಹೂಡಿಕೆಯ ಖರೀದಿ- ಮಾರಾಟದ ಬಗ್ಗೆ ಸಲಹೆ ನೀಡುತ್ತಿಲ್ಲ. ಆದರೆ, ಓದುಗ ಹೂಡಿಕೆದಾರರಿಗೆ ನೆರವಾಗುವ ಸಾಮಾನ್ಯ ಮಾರ್ಗಸೂಚಿಗಳನ್ನಷ್ಟೇ ನಾವು ಸೂಚಿಸಬಹುದು. ಯಾವುದೇ ಹೂಡಿಕೆಯ ಮಾರ್ಗೋಪಾಯಗಳಿದ್ದರೂ ಅದು ಕೆಲವು ಮೂಲ ಅಂಶಗಳ ಸುತ್ತ ನಮ್ಮ ನಿರ್ಧಾರ ಅವಲಂಬಿತವಾಗಿದೆ ಎಂಬ ಪ್ರಮುಖ ಅಂಶಗಳನ್ನು ಗಮನಿಸಬೇಕಾಗಿದೆ.
* ಕಂಪನಿಗಳ ಆಯ್ಕೆ ಬಗ್ಗೆ ಸಮೀಕ್ಷೆ: ನೀವು ಹೇಳಿರುವ ಕಂಪನಿಗಳು ದೇಶದ ಪ್ರಸಿದ್ಧ ಹಾಗೂ ಭರವಸೆ ಇಡಬಹುದಾದ ಕಂಪನಿಗಳೇ ಆಗಿವೆ. ಇದರಿಂದ ಅವು ಹಲವು ವರ್ಷಗಳಿಂದ ಸೂಚ್ಯಂಕಗಳ ಭಾಗವಾಗಿ ಉಳಿದಿವೆ. ಹಾಗಿದ್ದರೂ ಹೂಡಿಕೆ ಮಾಡುವಾಗ ವಿಶೇಷ ಕಾಳಜಿ ಅಗತ್ಯ. ಕಂಪನಿಗಳ ಇತಿಹಾಸ ಹಾಗೂ ಮುನ್ನೋಟ, ನಿರಂತರ ಲಾಭದಾಯಕತೆ, ಪ್ರಸ್ತುತ ಮೌಲ್ಯಮಾಪನ ಮತ್ತು ಮಾರುಕಟ್ಟೆಯಲ್ಲಿನ ಪ್ರಸ್ತುತ ಸಾಮರ್ಥ್ಯ ಆಧರಿಸಿ ಈ ಆಯ್ಕೆ ಮಾಡಬೇಕಾಗಿದೆ.
ಹೀಗಾಗಿ ಪ್ರತಿ ತ್ರೈಮಾಸಿಕ ಅವಧಿಗೊಮ್ಮೆ ಕಂಪನಿಗಳು ಬಿಡುಗಡೆ ಮಾಡುವ ಆರ್ಥಿಕ ಲೆಕ್ಕಪತ್ರಗಳನ್ನು ಪರಾಮರ್ಶಿಸಿ. ಇಲ್ಲಿ ಯಾವುದೋ ಒಂದೆರಡು ಅಂಕಿ-ಅಂಶಗಳು ನಿರೀಕ್ಷೆಯನ್ನು ಹುಸಿಗೊಳಿಸಿರಬಹುದು. ಆದರೆ, ಅಂತಹ ವಿಚಾರ ದೀರ್ಘಾವಧಿಯಲ್ಲಿ ಕಂಪನಿಯ ಆರ್ಥಿಕ ಕ್ಷಮತೆ ಮೇಲೆ ಪರಿಣಾಮ ಬೀರುವುದಾದರೆ ಅಂತಹ ಸಂದರ್ಭದಲ್ಲಿ ಹೂಡಿಕೆ ಸೂಕ್ತವಲ್ಲ. ಹೀಗಾಗಿ, ದೂರಗಾಮಿ ಯೋಜನೆಗಳು ಪ್ರಸಕ್ತ ಸನ್ನಿವೇಶಕ್ಕಿಂತ ಉನ್ನತ ಸ್ಥಿತಿಗೆ ಕೊಂಡೊಯ್ಯುವ ಕಂಪನಿಗಳು ನಿಮ್ಮ ಮೊದಲ ಆಯ್ಕೆಯಾಗಿರಲಿ.
* ಮಾರುಕಟ್ಟೆ ಸ್ಥಿತಿಗತಿ: ಕಳೆದ ಒಂದೆರಡು ತಿಂಗಳಲ್ಲಿ ದೇಶದ ಷೇರು ಮಾರುಕಟ್ಟೆಯು ಜಾಗತಿಕ ಬಿಕ್ಕಟ್ಟಿನಿಂದಾಗಿ ಶೇ 10ಕ್ಕಿಂತ ಕೆಳಗೆ ಕುಸಿದಿರುವುದು ಸತ್ಯ. ಈ ಮಟ್ಟ ಹೊಸ ಹೂಡಿಕೆಗೆ ತಳಮಟ್ಟ ಹೌದೇ, ಅಲ್ಲವೇ ಎನ್ನುವುದು ಇನ್ನು ಮುಂದಿನ ದಿನಗಳ ಆರ್ಥಿಕ ವಿದ್ಯಮಾನಗಳ ಮೇಲೂ ಅವಲಂಬಿತವಾಗಿದೆ. ಉದಾಹರಣೆಗೆ ಅಮೆರಿಕದಲ್ಲಿ ಮುಂದೆ ಅಧಿಕಾರ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಯಾವ ರೀತಿಯ ಆರ್ಥಿಕ ನಿರ್ಧಾರ ಕೈಗೊಳ್ಳುತ್ತಾರೆ. ಮುಂದಿನ ಫೆಬ್ರುವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ಮಂಡಿಸುವ ಆರ್ಥಿಕ ಸಮೀಕ್ಷೆಯ ಮುನ್ನೋಟ, ಬಜೆಟ್ ಇತ್ಯಾದಿ.
ಈ ನಡುವೆ ಸಂಭವಿಸುವ ಸಣ್ಣ ಸಣ್ಣ ಏರಿಕೆಯನ್ನು ಮಾರುಕಟ್ಟೆಯ ಪುನಃಶ್ಚೇತನ ಎಂದು ಖಚಿತವಾಗಿ ಹೇಳಲಾಗದು. ಯಾವುದೇ ಆರ್ಥಿಕತೆ ನಿಜವಾದ ಪ್ರಗತಿಯತ್ತ ಹೋಗುತ್ತಿದೆಯೇ ಅಥವಾ ತಾತ್ಕಾಲಿಕ ಪುನಃಶ್ಚೇತನವೇ ಎಂದು ತಿಳಿಯಲು ಆರ್ಥಿಕ ಅಂಕಿ–ಅಂಶಗಳು, ನಿಜವಾಗಿ ದೃಢತೆಯ ಸಂಕೇತ ಸಾರುತ್ತವೆಯೇ ಎಂಬುದನ್ನು ಗಮನಿಸಬೇಕು. ಉದಾಹರಣೆಗೆ ಜಾಗತಿಕ ಹಾಗೂ ದೇಶೀಯ ಜಿಡಿಪಿ, ಹಣದುಬ್ಬರದ ಪ್ರಮಾಣ, ಮುಂದಿನ ತ್ರೈಮಾಸಿಕ ಫಲಿತಾಂಶದ ಪೂರ್ವಭಾವಿ ಸಮೀಕ್ಷೆ, ತೆರಿಗೆ ನೀತಿಗಳ ಬದಲಾವಣೆ, ಖರೀದಿ ಸಾಮರ್ಥ್ಯ, ತೈಲ ಹಾಗೂ ಕಚ್ಚಾ ವಸ್ತುಗಳ ಸೂಚ್ಯಂಕ, ವಿದೇಶಿ ಹೂಡಿಕೆದಾರ ನಿರೀಕ್ಷೆ ಇತ್ಯಾದಿ.
ಇವುಗಳ ಧನಾತ್ಮಕ ದಿಸೆಯೇ ಒಟ್ಟಾರೆ ಮಾರುಕಟ್ಟೆಯ ಬಹುದೊಡ್ಡ ಹೂಡಿಕೆದಾರಾದ ದೇಶೀಯ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಆಕರ್ಷಿಸುವಂತೆ ಮಾಡುವ ಪ್ರಮುಖ ಅಂಶವಾಗಿದೆ.
* ನೀವು ಪರಿಶೀಲಿಸಬೇಕಾದ ಅಂಶಗಳು: ನೀವು ದೀರ್ಘಾವಧಿ ಹೂಡಿಕೆದಾರರಾಗಿದ್ದರೆ ಈ ಮೇಲಿನ ಅಂಶಗಳನ್ನು ಗಮನಿಸಿಕೊಂಡು ಪ್ರಸಕ್ತ ಸನ್ನಿವೇಶದಲ್ಲೂ ವಿವಿಧ ಹಂತಗಳಲ್ಲಿ ಮುಂದಿನ ದಿನಗಳಲ್ಲಿ ಹೂಡಿಕೆ ಮಾಡಬಹುದು. ಅಂತಹ ಸಂದರ್ಭದಲ್ಲಿ ಸಾಮಾನ್ಯ ಮಾನದಂಡಗಳಿಂದಲಾದರೂ ಆಯಾ ಕಂಪನಿಗಳ ೀಗಿನ ಆರ್ಥಿಕ ಸ್ಥಿತಿಗತಿ ಯಾವ ರೀತಿ ಇದೆ ಎಂಬುದನ್ನು ಈ ಕೆಳಗಿನ ಮಾಹಿತಿಯೊಡನೆ ಅವಲೋಕಿಸಬಹುದು.
* ಮೌಲ್ಯಮಾಪನ: ಒಂದೇ ವ್ಯವಹಾರದಲ್ಲಿ ತೊಡಗಿರುವ ಅನೇಕ ಕಂಪನಿಗಳಿದ್ದಾಗ ಯಾವ ಕಂಪನಿಯ ಷೇರುಗಳು ಖರೀದಿಗೆ ಪ್ರಸ್ತುತ, ಯಾವುದು ‘ಅಂಡರ್‌ವ್ಯಾಲ್ಯೂಡ್’ ಅಥವಾ ‘ಓವರ್‌ವ್ಯಾಲ್ಯೂಡ್’ ಆಗಿವೆ ಎಂದು ತಿಳಿಯಲು, ಆಯಾ ವರ್ಗದ ಸರಾಸರಿ ಪ್ರೈಸ್ ಅರ್ನಿಂಗ್‌ಗೆ (ಪಿಇ) ತುಸು ಹತ್ತಿರದ ಪಿಇ ಮೌಲ್ಯ ಇರುವ ಕಂಪನಿಗಳನ್ನು ಪರಿಗಣಿಸಬೇಕಿದೆ. -
* ತಾಂತ್ರಿಕ ಮತ್ತು ಮೂಲಭೂತ ವಿಶ್ಲೇಷಣೆ: ಅನೇಕ ಸಂಶೋಧನಾ ನಿರತ ಕಂಪನಿಗಳು ಪ್ರತಿಷ್ಠಿತ ಕಂಪನಿಗಳ ಮಾರುಕಟ್ಟೆ ಸಮೀಕ್ಷೆ ನಡೆಸಿ ತಮ್ಮ ಮೌಲ್ಯಾಂಕವನ್ನು ಆಗಾಗ ನೀಡುತ್ತಿರುತ್ತವೆ. ಇವುಗಳನ್ನು ನಿಮ್ಮ ಹೂಡಿಕೆಗೂ ಮುನ್ನ ಪರಾಮರ್ಶಿಸಿ ನಿಮ್ಮ ಹೂಡಿಕೆಯ ನಿರ್ಧಾರದ ದೃಢತೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಇಲ್ಲಿ ಆಯಾ ವರ್ಗದ ಇತರೆ ಕಂಪನಿಗಳ ಕ್ರಿಯಾಶೀಲತೆ ಬಗ್ಗೆ ಹಾಗೂ ಅವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಗಳು ನಡೆಯುತ್ತಿವೆ ಎಂಬ ಬಗ್ಗೆ ಒಟ್ಟಾರೆ ಮಾಹಿತಿ ಸಿಗುತ್ತದೆ. ಇಂತಹ ಸಮೀಕ್ಷೆಗಳ ಅಧ್ಯಯನ, ನಿಮ್ಮ ಒಟ್ಟಾರೆ ಹೂಡಿಕೆಯ ದೃಷ್ಟಿಕೋನವನ್ನು ವಿಸ್ತರಿಸಬಹುದು.
ಒಂದು ವೇಳೆ ನಿಮಗೆ ತಿಳಿಯದ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮುನ್ನ, ಹೂಡಿಕೆ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮವಾಗಿದೆ. ಪ್ರಸ್ತುತ ಮಾರುಕಟ್ಟೆಯ ಇಳಿತ, ಸಾಧಾರಣವಾಗಿ ದೀರ್ಘಾವಧಿ ಹೂಡಿಕೆದಾರರಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ನಿರೀಕ್ಷೆ ಹುಟ್ಟಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.