ನಾನು ಬ್ಯಾಂಕ್ ಒಂದರಲ್ಲಿ ನಿಖರ ಠೇವಣಿ ಇಟ್ಟಿದ್ದೇನೆ. ಇದಕ್ಕೆ ₹6 ಸಾವಿರ ಮಾಸಿಕ ಬಡ್ಡಿ ಬರುತ್ತಿದೆ. ಇದಕ್ಕಾಗಿ ನಿಕ್ಷೇಪಿಸಿರುವ ಮೊತ್ತ ₹13 ಲಕ್ಷ. ಇದಕ್ಕೆ ಬಂದ ಬಡ್ಡಿಯಲ್ಲಿ ₹5 ಸಾವಿರ ಮೊತ್ತವನ್ನು ಐದು ವರ್ಷಕ್ಕೆ ಆರ್.ಡಿ ಇಟ್ಟಿದ್ದೇನೆ. ನನ್ನಲ್ಲಿರುವ ಒಟ್ಟು ₹20 ಲಕ್ಷದಲ್ಲಿ ಈ ಮೊತ್ತ ಹೂಡಿಕೆ ಮಾಡಿ ಉಳಿದ ₹7 ಲಕ್ಷ ನನ್ನ ಉಳಿತಾಯ ಖಾತೆಯಲ್ಲಿದೆ. ಇದರಿಂದ ಹೆಚ್ಚು ಲಾಭ ಪಡೆಯಲು ಇದಕ್ಕಿಂತ ಉತ್ತಮವಾದ ಹೂಡಿಕೆಯ ಮಾರ್ಗವನ್ನು ದಯವಿಟ್ಟು ನನಗೆ ಸೂಚಿಸಿ.
ನಾನು ಕಳೆದ 6 ತಿಂಗಳಿಂದ ಯಾವುದೇ ಕೆಲಸ ಮಾಡುತ್ತಿಲ್ಲ. ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನಾನು 7 ವರ್ಷಗಳ ಅವಧಿಗೆ ₹ 5,00,000 ಕಾರು ಸಾಲವನ್ನು ಹೊಂದಿದ್ದೇನೆ. ₹ 2,50,000 ಬಡ್ಡಿಯೊಂದಿಗೆ (ಇಎಂಐ ₹6,000) ಮರು ಪಾವತಿಸಿದ್ದೇನೆ.
–ಪ್ರವೀಣ್ ಕುಮಾರ್ ಎನ್., ರಾಯಚೂರು
ನೀವು ನೀಡಿದ ಮಾಹಿತಿಯಂತೆ, ಪ್ರಸ್ತುತ ಆರು ತಿಂಗಳಿನಿಂದ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿರುತ್ತೀರಿ. ಈ ಸಂದರ್ಭದಲ್ಲಿ ಸಾಂಸಾರಿಕ ಜವಾಬ್ದಾರಿಯ ನಿರ್ವಹಣೆಗಾಗಿ ಅಗತ್ಯ ಹಣಕಾಸು ಭದ್ರತೆ ನಿಮಗೆ ಅನಿವಾರ್ಯ. ಈ ಬಗ್ಗೆ ನೀವು ಈಗಾಗಲೇ ಯೋಚಿಸಿ ಸೂಕ್ತ ವೆಚ್ಚ ನಿಭಾಯಿಸುವುದಕ್ಕಾಗಿ ಯೋಜನೆ ಮಾಡಿರಬಹುದೆಂದು ಭಾವಿಸಲಾಗಿದೆ. ನೀವು ಹೇಳಿರುವ ₹20 ಲಕ್ಷ ಸಂಪೂರ್ಣ ಹೂಡಿಕೆಗೆ ಲಭ್ಯ ಎಂದು ಊಹಿಸಲಾಗಿದೆ. ಈ ಮೊತ್ತವನ್ನು 2 ರಿಂದ 5 ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ಬಡ್ಡಿ ಆದಾಯಕ್ಕಿಂತ ಅಧಿಕ ಆದಾಯ ಬರಬಹುದು. ಆದರೆ, ನಿಮ್ಮ ವಾಹನ ಸಾಲ ಇನ್ನೂ ಪಾವತಿಗೆ ಬಾಕಿ ಇದೆ ಎಂದು ತಿಳಿಸಿರುತ್ತೀರಿ. ಇದು ಸಾಮಾನ್ಯವಾಗಿ ನಿಮಗೆ ಬರುವ ಬಡ್ಡಿ ದರಕ್ಕಿಂತ ನಾಲ್ಕೈದು ಪ್ರತಿಶತ ಹೆಚ್ಚಿನ ಬಡ್ಡಿ ನೀಡಬೇಕಾಗಿ ಬರಬಹುದು. ಹೀಗಾಗಿ ಆ ಹೊರೆಯನ್ನು ಸಾಲದ ನಿಯಮಾವಳಿಯಂತೆ ಅವಕಾಶವಿದ್ದರೆ ಪಾವತಿಗೆ ಯೋಚಿಸಿ. ಈ ಬಗ್ಗೆ ಅಗತ್ಯವಾಗಿ ಬಾಕಿ ಇರುವ ಅಸಲು, ಪೂರ್ವ ಪಾವತಿಯ ಶುಲ್ಕ ಇತ್ಯಾದಿ ಮಾಹಿತಿ ತಿಳಿಯಿರಿ.
ಇನ್ನು ಹೆಚ್ಚುವರಿ ಆದಾಯಗಳಿಸಲು ತುಸು ದೀರ್ಘಾವಧಿ ಹೂಡಿಕೆ ಮಾಡುವ ಅಗತ್ಯವಿದೆ. ಇದಕ್ಕಾಗಿ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳಿ. ಈಗ ಇರುವ ಹಣದಿಂದ ಪ್ರತಿ ತಿಂಗಳೂ ಒಟ್ಟಾರೆ ₹50 ಸಾವಿರದಂತೆ ಸುಮಾರು ಹತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಿ. ಗೋಲ್ಡ್ ಫಂಡ್, ಹೈಬ್ರಿಡ್ ಡೆಬ್ಡ್ ಫಂಡ್ ಹಾಗೂ ಸೇವಿಂಗ್ಸ್ ಫಂಡ್ ಮಧ್ಯಮ ಪ್ರಮಾಣದ ಆರ್ಥಿಕ ಅಪಾಯ ಹೊಂದಿವೆ. ಸಂಪೂರ್ಣ ಈಕ್ವಿಟಿ ಆಧಾರಿತ ಫಂಡ್‌ಗಳು ಇನ್ನೂ ಹೆಚ್ಚಿನ ಆದಾಯವನ್ನು ನೀಡುತ್ತವೆ. ಆದರೆ, ಷೇರು ಮಾರುಕಟ್ಟೆಯ ಏರಿಳಿತ ಇದಕ್ಕೆ ಹೆಚ್ಚು ಬಾಧ್ಯ ಎನ್ನುವುದು ತಿಳಿದಿರಲಿ. ಈ ರೀತಿ ಮೂರು ವರ್ಷದ ಅವಧಿಯಲ್ಲಿ ಸಂಪೂರ್ಣವಾಗಿ ಹಣ ತೊಡಗಿಸಿಕೊಳ್ಳಿ. ಹೂಡಿಕೆಗೆ ಅಗತ್ಯವಿರುವ ಹಣವನ್ನಷ್ಟೇ ಎಫ್.ಡಿಯಿಂದ ನಿಮ್ಮ ಉಳಿತಾಯ ಖಾತೆಯಲ್ಲಿ ವರ್ಗಾಯಿಸಿಟ್ಟಿರಿ. ಇದಕ್ಕೆ ಪೂರ್ವಯೋಜಿತ ನಿರ್ಧಾರ ಅಗತ್ಯ.
ನಾನು ಒಂದು ದ್ವಿಚಕ್ರವಾಹನವನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಖಾಸಗಿ ಕಂಪನಿಯಿಂದ ಸಾಲ ಪಡೆದು ಖರೀದಿಸಿದ್ದೆ. ಪ್ರತಿ ತಿಂಗಳಿಗೆ ₹2,988ರಂತೆ ಎರಡು ವರ್ಷದ ಕಾಲಾವಧಿಗೆ ನನ್ನ ಇಎಂಐ ಇರುತ್ತದೆ. ಇಲ್ಲಿಯವರೆಗೆ ನಾನು 15 ಇಎಂಐಗಳನ್ನು ಸಂಪೂರ್ಣವಾಗಿ ಪಾವತಿಸಿರುತ್ತೇನೆ. ಸಾಲ ವಿತರಿಸುವ ಸಂದರ್ಭದಲ್ಲಿ ನನಗೆ ಫೈನಾನ್ಸ್ ಕಂಪನಿಯವರು ಪ್ರತಿ ತಿಂಗಳ 2ನೇ ದಿನಾಂಕದಂದು ಬ್ಯಾಂಕ್ ಖಾತೆಯಲ್ಲಿ ಇಎಂಐ ಹಣ ಇಡಬೇಕು ಹಾಗೂ ಅದು 3ನೇ ದಿನಾಂಕ ಖಾತೆಯಿಂದ ಕಡಿತಗೊಳ್ಳುತ್ತದೆ ಎಂದು ಹೇಳಿದ್ದರು. ನಾನು ಅದೇ ರೀತಿ ಕೆಲವು ತಿಂಗಳು ಪಾಲಿಸಿದ್ದೆ. ಹಣವು ಮುಂಚಿತವಾಗಿ ಹೊಂದಾಣಿಕೆಯಾದಾಗ, ತಿಂಗಳ 2 ಅಥವಾ 3ನೇ ದಿನಾಂಕಕ್ಕೆ ಕಟ್ಟಬೇಕಾಗಿರುವುದನ್ನು ಮುಂಚಿತವಾಗಿ ಹಿಂದಿನ ತಿಂಗಳ 28-29-30 ಈ ದಿನಾಂಕಗಳಲ್ಲಿ ಅವರ ಮೊಬೈಲ್ ಆ್ಯಪ್ ಮೂಲಕ ಹಲವು ಬಾರಿ ಪಾವತಿಸಿರುತ್ತೇನೆ.
ನನ್ನ ಪ್ರಶ್ನೆ ಏನೆಂದರೆ, ನಿಗದಿತ ದಿನಾಂಕದ ಮುಂಚಿತವಾಗಿ ಇಎಂಐ ಪಾವತಿಸಿದರೂ ದಂಡ ಹಾಕಲು ಕಾರಣವೇನು? ಯಾವುದೇ ಫೈನಾನ್ಸ್ ಕಂಪನಿಗಳು ವಾಹನವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಮೊದಲು ಪಾಲಿಸಬೇಕಾದ ನಿಯಮಗಳೇನು? ಫೈನಾನ್ಸ್ ಕಂಪನಿಗಳು ನಿಯಮಗಳನ್ನು ಪಾಲಿಸದಿದ್ದರೆ ಗ್ರಾಹಕರು ಕಾನೂನು ಮೊರೆ ಹೋಗಲು ಅವಕಾಶವಿದೆಯೇ? ಇಸಿಎಸ್ ನಿಯಮಗಳೇನು? ಬಾಕಿ ಮೊತ್ತ ಪಾವತಿ ಮಾಡಿದಾಗ ವಾಹನವನ್ನು ಮರಳಿ ಪಡೆಯಲು ಬೇಕಾಗುವ ದಿನಗಳೆಷ್ಟು?
–ಗಿರೀಶಕುಮಾರ್, ಲಿಂಗಸುಗೂರು.
ಇಂದು ಬಹುತೇಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ವಾಹನ ಸಾಲ ನೀಡುತ್ತವೆ. ಆದರೆ, ಅದರ ಮರುಪಾವತಿ ಸರಿಯಾಗಿ ಆಗದ ಸಂದರ್ಭಗಳಲ್ಲಿ ಅಂತಹ ಸಾಲಗಳನ್ನು ಇತರ ವಸೂಲಾತಿ ಸಂಸ್ಥೆಗಳಿಗೆ ವಹಿಸಿಕೊಟ್ಟು ಅವರ ಮೂಲಕ ಸಾಲವನ್ನು ವಸೂಲಿ ಮಾಡುತ್ತವೆ. ಆದರೆ, ಅಂತಹ ಸಂದರ್ಭದಲ್ಲಿ ಎನ್‌ಬಿಎಫ್‌ಸಿ ಹಾಗೂ ವಸೂಲಾತಿ ಸಂಸ್ಥೆಗಳಿಗೆ ಆರ್‌ಬಿಐ ಹೊರಡಿಸಿರುವ ನಿಯಮಾವಳಿಯೊಳಗೆ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ. ಅಂತಹ ನಿಯಮಾವಳಿಗಳ ಹೊರತಾಗಿರುವ ವ್ಯವಹಾರ ಕಾನೂನುಬಾಹಿರ.
ಯಾವುದೇ ವಾಹನವನ್ನು ಕೈವಶಕ್ಕೆ ಪಡೆಯುವ ಮೊದಲು ಸಾಲಗಾರನಿಗೆ ಲಿಖಿತ ನೋಟಿಸ್ ನೀಡಿ ಸತತ ಇಎಂಐ ಪಾವತಿಯಾಗದ ಬಗ್ಗೆ ಪೂರ್ವ ಮಾಹಿತಿ ಕೊಡಬೇಕು ಹಾಗೂ ಸಾಲ ಅನುತ್ಪಾದಕ ಆಸ್ತಿಯಾಗಿರಬೇಕು. ವಾಹನ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಮೊದಲು ಬಂದಿರುವ ಸಿಬ್ಬಂದಿ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಕೊಟ್ಟಿರುವ ನೋಟಿಸ್‌ನಲ್ಲಿ ವಾಹನ ಪಡೆಯುವ ದಿನಾಂಕ, ಸಮಯ ಹಾಗೂ ಸ್ಥಳ, ವಾಹನದ ಬಗೆಗಿನ ಸಂಪೂರ್ಣ ಮಾಹಿತಿ ಇತ್ಯಾದಿಗಳನ್ನು ದಾಖಲಿಸಿರಬೇಕು. ಸಾಲಗಾರ ಮಧ್ಯಮಾರ್ಗದಲ್ಲಿ ಪ್ರಯಾಣಿಸುತ್ತಿರುವಾಗ ವಾಹನವನ್ನು ತಮ್ಮ ವಶಕ್ಕೆ ಪಡೆಯುವುದು ಸರಿಯಲ್ಲ. ಈ ಬಗ್ಗೆ ಸಂಬಂಧಿತ ಪೊಲೀಸ್ ಠಾಣೆಗೂ ಪೂರ್ವ ಮಾಹಿತಿ ತಿಳಿಸಿರಬೇಕು. ಸಾಲಗಾರರೊಡನೆ ಅಸಭ್ಯ ವರ್ತನೆಯೂ ಸರಿಯಲ್ಲ.
ಇನ್ನು ನಿಮ್ಮ ಕೆಲವು ಕಂತುಗಳು ಪೂರ್ವ ಪಾವತಿಯಾಗಿದ್ದರೂ, ಸಾಲದ ಒಟ್ಟಾರೆ ಪ್ರಮಾಣ ಇಳಿಕೆ ಆಗಿರಬಹುದೇ ವಿನಾ ನಿಗದಿತ ದಿನಾಂಕಕ್ಕೆ ಖಾತೆಗೆ ಬರುವ ಇಸಿಎಸ್ ಪೂರ್ವ ನಿರ್ಧರಿತ ಆಗಿರುವುದರಿಂದ ಆ ದಿನದಂದು ಖಾತೆಯಲ್ಲಿ ಹಣ ಇಲ್ಲದಿದ್ದರೆ ಶುಲ್ಕ ಇತ್ಯಾದಿ ಬರಬಹುದು. ಹೀಗಾಗಿ, ಅಗತ್ಯವಾಗಿ ನಿಮ್ಮ ಖಾತೆಯ ಪೂರ್ಣ ಮಾಹಿತಿ ಪರಿಶೀಲಿಸಿ. ಸಾಲದ ನಿಯಮಾವಳಿ ಪತ್ರ, ವಾಹನ ಮರಳಿ ಪಡೆಯುವ ನಿಯಮಗಳ ಉಲ್ಲೇಖವನ್ನು ಮತ್ತೊಮ್ಮೆ ಪರಿಶೀಲಿಸಿ ಹಾಗೂ ಸಂಸ್ಥೆಯ ಉನ್ನತ ಅಧಿಕಾರಿಗಳೊಡನೆ ಸಂಪರ್ಕಿಸಿ. ಗ್ರಾಹಕರಿಗೆ ಯಾವುದೇ ತೊಂದರೆಯಾದ ಪಕ್ಷದಲ್ಲಿ ಸಂಬಂಧಿತ ಸಂಸ್ಥೆಗೆ ಲಿಖಿತ ದೂರು ನೀಡಿ ಪರಿಹರಿಸಿಕೊಳ್ಳಬೇಕು. ಇನ್ನೂ ಸಮಸ್ಯೆ ಬಗೆಹರಿಯದಿದ್ದರೆ, ಕಾನೂನು ಕ್ರಮಕ್ಕೂ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.