ಇತ್ತೀಚೆಗೆ ನಾನು ಕ್ವಾಂಟ್ ಫಂಡ್‌ಗಳ ಬಗ್ಗೆ ಕೇಳಿದ್ದೇನೆ. ಇದು ಇತರೆ ಫಂಡ್‌ಗಳಿಗಿಂತ ತೀರಾ ಭಿನ್ನವಾಗಿರುತ್ತದೆ ಎಂಬುದನ್ನು ತಿಳಿದುಕೊಂಡೆ. ಇವುಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವೇ?
ಕ್ವಾಂಟ್ ಫಂಡ್ ಅಥವಾ ಕ್ವಾಂಟಿಟೇಟಿವ್ ಫಂಡ್ ಎನ್ನುವುದು ಮ್ಯೂಚುವಲ್ ಫಂಡ್‌ಗಳ ಒಂದು ವರ್ಗವಾಗಿದೆ. ಅದು ಗಣಿತ ಮತ್ತು ಸಂಖ್ಯಾಶಾಸ್ತ್ರದ (ಸ್ಟ್ಯಾಟಿಸ್ಟಿಕ್ಸ್) ಮಾದರಿ, ಕ್ರಮಾವಳಿ ಮತ್ತು ಇತರೆ ಪರಿಮಾಣಾತ್ಮಕ ತಂತ್ರಗಳನ್ನು ಹೂಡಿಕೆ ನಿರ್ಧಾರ ಕೈಗೊಳ್ಳುವಲ್ಲಿ ಮತ್ತು ವಹಿವಾಟುಗಳನ್ನು ಕಾರ್ಯಗತಗೊಳಿಸಲು ಬಳಸುತ್ತವೆ.
ಫಂಡ್ ಮ್ಯಾನೇಜರ್‌ಗಳು ಈ ವಿಧಾನದ ಮೂಲಕ ಸಂಗ್ರಹಿಸುವ ಮಾಹಿತಿ ಆಧಾರದ ಮೇಲೆ ತಮ್ಮ ಪೋರ್ಟ್‌ಫೋಲಿಯೊವನ್ನು ನಿರ್ಮಿಸುತ್ತಾರೆ. ಇದು ಕೆಲವು ಪೂರ್ವ ನಿಯೋಜಿತ ಮಾನದಂಡಗಳ ಸುತ್ತ ರಚಿತವಾಗುತ್ತದೆ. ಯಾವುದೇ ಫಂಡ್ ಮ್ಯಾನೇಜರ್ ತಮ್ಮ ಭಾವನಾತ್ಮಕ ತೀರ್ಮಾನ ಕೈಗೊಳ್ಳುವ ಅವಕಾಶ ಇದರಲ್ಲಿ ಇಲ್ಲ. ಕಂಪ್ಯೂಟರ್ ತಂತ್ರಾಂಶಕ್ಕೆ ಹಲವಾರು ಮಾಹಿತಿಗಳು ಹಾಗೂ ಆಯ್ಕೆ ಮಾನದಂಡಗಳನ್ನೂ ಇಲ್ಲಿ ದಾಖಲಿಸಲಾಗುತ್ತದೆ.
ಇದು ಇತರೆ ಫಂಡ್‌ಗಳಂತೆ ರಿಸ್ಕ್ ಇಲ್ಲವೆಂದಲ್ಲ. ಇಲ್ಲಿ ಸಮಯ, ಸಂದರ್ಭಕ್ಕೆ ಸಂಬಂಧಪಟ್ಟು ಸಮರ್ಪಕ ನಿರ್ಧಾರ ಕೈಗೊಳ್ಳುವಲ್ಲಿ ಈ ಹೂಡಿಕೆ ತಂತ್ರ ನೆರವಾಗುತ್ತದೆ. ಹೆಚ್ಚಾಗಿ ಈ ಫಂಡ್‌ಗಳು ಹಳೆಯ ಮಾಹಿತಿ ಆಧಾರದ ಮೇಲೆ ಅಲ್ಗೋರಿದಮ್ ನೆರವಿನಿಂದ ಮುಂದಿನ ನಿರ್ಧಾರ ಕೈಗೊಳ್ಳುತ್ತವೆ. ಆದರೆ, ಕೆಲವೆಲ್ಲ ಅಪರೂಪದ ವಿಚಾರಗಳು ಇಂತಹ ನಿರ್ಧಾರ ಕೈಗೊಳ್ಳುವಲ್ಲಿ ಪರಿಗಣನೆಗೆ ಬರುವುದಿಲ್ಲ. ಉದಾಹರಣೆಗೆ ಯುದ್ಧ ಭೀತಿ, ಪ್ರಮುಖ ಆರ್ಥಿಕ ನಿರ್ಧಾರಗಳು, ಜಾಗತಿಕವಾಗಿ ಹರಡುವ ಕೊರೊನಾದಂತಹ ರೋಗ ಇತ್ಯಾದಿ ಪರಿಣಾಮವನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಆದರೆ, ಮಾರುಕಟ್ಟೆ ಮೇಲೆ ಇದರ ಪರಿಣಾಮ ಇಲ್ಲದಿರುವುದಿಲ್ಲ.
ಹೂಡಿಕೆ ವಿಚಾರದಲ್ಲಿ ಇವು ಇತರೆ ಫಂಡ್‌ಗಳಿಗಿಂತ ಉತ್ತಮ ರಿಟರ್ನ್ ನೀಡಿವೆ. ಆದರೆ, ಇಂತಹ ಯಾವುದೇ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಪೂರ್ವ ವಿಮರ್ಶೆ ಹಾಗೂ ನಿಮ್ಮ ಆರ್ಥಿಕ ಅಪಾಯ ಸಹಿಸುವ ಸಾಮರ್ಥ್ಯವನ್ನು ಮೊದಲೇ ಯೋಚಿಸಿ ನಿರ್ಧಾರ ಕೈಗೊಳ್ಳಿ.
ನಾನು ಐ.ಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಸ್ವಂತ ವಾಸಕ್ಕೆಂದು ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್ ಖರೀದಿಸುವ ಯೋಜನೆ ಮಾಡಿದ್ದೇನೆ. ಇದರಂತೆ 2021ರ ಆಗಸ್ಟ್ 20ರಂದು ಮೂರು ಬೆಡ್ ರೂಂ ಮನೆಯೊಂದನ್ನು ಖರೀದಿಸಿದ್ದೇನೆ. ಈ ಬಗ್ಗೆ ರಿಯಲ್ ಎಸ್ಟೇಟ್ ಕಂಪನಿಗೆ ಮುಂಗಡ ಹಣ ನೀಡಿ ಮನೆ ಖರೀದಿ ವ್ಯವಹಾರ ಪತ್ರ, ನಂತರದ ಹಂತದಲ್ಲಿ ಖರೀದಿ ಅಗ್ರಿಮೆಂಟ್ ಇತ್ಯಾದಿ ಪ್ರಕ್ರಿಯೆಯನ್ನೂ ಮುಗಿಸಿದ್ದೆ. ಈ ಸಂದರ್ಭದಲ್ಲಿ ಬ್ಯಾಂಕ್ ಸಾಲ ಮಾಡಿ ಸುಮಾರು ಮೊತ್ತವನ್ನು ಬಡ್ಡಿ ಸಮೇತ ಪಾವತಿಸುತ್ತಿದ್ದೇನೆ.
ಪ್ರಸ್ತುತ ನನ್ನ ಉದ್ಯೋಗ ಮುಂಬೈ ನಗರಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಅಲ್ಲದೆ, ಈ ಮನೆ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗುತ್ತದೆ. ಇಂಟೀರಿಯರ್ ಕೆಲಸ ಬಾಕಿ ಇದೆ. ಹೀಗಾಗಿ, ಈ ಸಂದರ್ಭದಲ್ಲಿ ನಾನು ಮಾರಾಟ ಮಾಡುವ ಹಂತದಲ್ಲಿದ್ದೇನೆ. ಪ್ರಸ್ತುತ ನಾನು ಮನೆ ಖರೀದಿಸಿದ ಭಾಗದಲ್ಲಿ ಫ್ಲ್ಯಾಟ್ ಬೆಲೆ ಉತ್ತಮವಾಗಿದ್ದು, ನನಗೆ ಸುಮಾರು ಶೇ 40ರಷ್ಟು ಹೆಚ್ಚುವರಿ ಹಣ ಸಿಗುವ ಬಗ್ಗೆ ಬ್ರೋಕರ್‌ಗಳ ಮೂಲಕ ಮಾಹಿತಿ ಬಂದಿದೆ.
ನನ್ನ ಪ್ರಶ್ನೆ ಏನೆಂದರೆ, ಈ ಹಂತದಲ್ಲಿ ನಾನು ಮನೆ ಮಾರಾಟ ಮಾಡಿದರೆ ಬರುವ ಲಾಭಕ್ಕೆ ತೆರಿಗೆ ಇದೆಯೇ? ನಾನು ಕಟ್ಟಿದ ಮನೆಯ ಅಸಲು, ಬಡ್ಡಿ ಮೊತ್ತಕ್ಕೆ ಏನಾದರೂ ತೆರಿಗೆ ಲಾಭ ಇದೆಯೇ? ಮುಂದಿನ ನಿರ್ಧಾರ ಯಾವ ರೀತಿ ಕೈಗೊಳ್ಳಬೇಕು?
ನೀವು ಈಗಾಗಲೇ ಖರೀದಿಸಬೇಕೆಂದಿದ್ದ ಮನೆ ನಿರ್ಮಾಣದ ಹಂತದಲ್ಲೇ ಮಾರಾಟ ಮಾಡುವ ಬಗ್ಗೆ ತಿಳಿಸಿರುತ್ತೀರಿ. ಆರ್ಥಿಕ ದೃಷ್ಟಿ ಹಾಗೂ ನಿಮ್ಮ ಔದ್ಯೋಗಿಕ ಸ್ಥಳದ ಬದಲಾವಣೆಗೆ ಸಂಬಂಧಿಸಿ ಇದು ಸೂಕ್ತ ನಿರ್ಧಾರವೇ ಆಗಿದ್ದರೂ ಅದರ ಬಗೆಗಿನ ಬಂಡವಾಳ ಲಾಭದ ತೆರಿಗೆ ವಿಚಾರದಲ್ಲಿ ನೀವು ಸೂಕ್ತವಾಗಿ ಪೂರ್ವ ಯೋಜನೆ ಮಾಡಿ ಮಾರಾಟ ಮಾಡುವುದು ಅನಿವಾರ್ಯ.
ಪ್ರಸ್ತುತ ನೀವು ಕಂಪನಿಯು ಕೊಟ್ಟಿರುವ ಪತ್ರದ ಆಧಾರದ ಮೇಲೆ ಮುಂಗಡ ಹಣ ಪಾವತಿಸಿ ನಂತರದ ಹಂತದಲ್ಲಿ ಇತರೆ ಕರಾರು ಪತ್ರಗಳನ್ನು ಹೊಂದಿದ್ದೀರಿ. 2021ರ ಆಗಸ್ಟ್‌ನಿಂದ ಇಲ್ಲಿಯವರೆಗೆ 24 ತಿಂಗಳಿಗಿಂತಲೂ ಹೆಚ್ಚು ಅವಧಿವರೆಗೆ ನಿಮ್ಮ ಹಣ ಇದರಲ್ಲಿ ಹೂಡಿಕೆಯಾಗಿದೆ. ಹೀಗಾಗಿ ಬರುವ ಲಾಭದ ಮೇಲೆ ದೀರ್ಘಾವಧಿ ಬಂಡವಾಳ ತೆರಿಗೆ ಅನ್ವಯವಾಗುತ್ತದೆ. ಇದು ಶೇ 20ರ ದರದಂತೆ ಅನ್ವಯಿಸುತ್ತದೆ.
ನಿಮ್ಮ ಮನೆ ಮಾರಾಟದ ಸಂದರ್ಭದಲ್ಲಿ ಯಾವುದೇ ಬ್ರೋಕರ್‌ಗಳಿಗೆ ನೀವು ಕಮಿಷನ್ ಪಾವತಿ ಮಾಡುವುದಿದ್ದರೆ, ಅಂತಹ ಮೊತ್ತವನ್ನು ನಿಮ್ಮ ಮಾರಾಟ ಮೌಲ್ಯದಿಂದ ಕಳೆದು ಉಳಿದ ಮೊತ್ತವನ್ನಷ್ಟೇ ತೆರಿಗೆಗೊಳಪಡಿಸಲಾಗುತ್ತದೆ. ನಿಮ್ಮ ವಿಚಾರದಲ್ಲಿ ತೆರಿಗೆ ಲೆಕ್ಕ ಹಾಕಲು ಸಮೀಪದ ತೆರಿಗೆ ಪರಿಣತರಲ್ಲಿ, ಆಸ್ತಿಯ ಮೌಲ್ಯ, ಪಾವತಿ ವಿವರಗಳೊಂದಿಗೆ ಸಮಾಲೋಚನೆ ನಡೆಸಬೇಕು.
ಇನ್ನು ತೆರಿಗೆ ವಿಚಾರದ ಬಗ್ಗೆ ಹೇಳುವುದಾದರೆ ನೀವು ಮನೆ ಮಾರಾಟ ಮಾಡುವ ಕಾರಣ ಯಾವುದೇ ರಿಯಾಯಿತಿ ನಿಮಗೆ ಪಡೆಯಲು ಅಸಾಧ್ಯ. ಆದರೆ, ನಿಮ್ಮ ಪ್ರಸ್ತುತ ಯೋಜನೆಯನ್ನು ನೀವು ವರ್ಗಾವಣೆಯಾಗುವ ಸ್ಥಳದಲ್ಲಿ ಇನ್ನೊಂದು ಮನೆ ಅಥವಾ ಫ್ಲ್ಯಾಟ್ ಖರೀದಿಗೆ ಬಳಸಿಕೊಂಡಲ್ಲಿ ತೆರಿಗೆ ಉಳಿತಾಯ ಸಾಧ್ಯ. ಇದಕ್ಕಾಗಿ ನಿಮ್ಮ ಪ್ರಸ್ತುತ ಮಾಹಿತಿಯನ್ನು ತೆರಿಗೆ ಸಲಹೆಗಾರರಿಗೆ ನೀಡಿ ಮಾಹಿತಿ ಪಡೆದುಕೊಳ್ಳಿ.
ಅಲ್ಲದೆ, ನಿರ್ಮಾಣ ಹಂತದಲ್ಲಿರುವ ನಿಮ್ಮ ಫ್ಲ್ಯಾಟ್ ಈಗಾಗಲೇ ಬ್ಯಾಂಕಿಗೆ ಅಡಮಾನವಾಗಿ ದಾಖಲಾಗಿರುತ್ತದೆ. ಹೀಗಾಗಿ, ಈ ಸಾಲದ ಮೇಲೆ ಬಾಕಿ ಉಳಿದಿರುವ ಅಸಲು ಮೊತ್ತ ಇನ್ನೂ ಮನೆ ಸಂಪೂರ್ಣ ಆಗದ ಕಾರಣ ಬಹುತೇಕ ಉಳಿದಿರುತ್ತದೆ. ಮಾರಾಟದಿಂದ ಬರಬಹುದಾದ ನಿವ್ವಳ ಮೊತ್ತ ಹಾಗೂ ಸಾಲದ ವಿಲೇವಾರಿಯ ಬಗ್ಗೆಯೂ ಬ್ಯಾಂಕಿನಲ್ಲಿ ಸಮರ್ಪಕ ಮಾಹಿತಿ ಪಡೆದುಕೊಂಡು ವ್ಯವಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.