ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ | ತೆರಿಗೆ ಉಳಿತಾಯಕ್ಕಾಗಿ ಇರುವ ಸುಲಭೋಪಾಯಗಳು ಯಾವುವು?

Published : 9 ಜುಲೈ 2024, 22:27 IST
Last Updated : 9 ಜುಲೈ 2024, 22:27 IST
ಫಾಲೋ ಮಾಡಿ
Comments
ಪ್ರ

ನಾನು ಕೇಂದ್ರ ಸರ್ಕಾರದ ಪಿಂಚಣಿದಾರ ನಾಗಿದ್ದು, ನನಗೆ 68 ವರ್ಷ. 2023-24ನೇ ಸಾಲಿನಲ್ಲಿ ನನ್ನ ಪಿಂಚಣಿ ಆದಾಯ ₹5,06,864 ಹಾಗೂ ಬಡ್ಡಿ ಆದಾಯ ₹4,32,110 ಆಗಿದೆ. ಹೀಗೆ ಒಟ್ಟಾರೆ ಆದಾಯ ₹9,38,974. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ತೆರಿಗೆ ಹೊಣೆಗಾರಿಕೆ ಮತ್ತು ಯಾವುದೇ ರಿಯಾಯಿತಿ/ಕಡಿತದ ಬಗ್ಗೆ ದಯವಿಟ್ಟು ನನಗೆ ತಿಳಿಸಿ

ನೀವು ನೀಡಿರುವ ಮಾಹಿತಿಯಂತೆ ನಿಮ್ಮ ಆದಾಯಕ್ಕೆ ಹೊಸ ತೆರಿಗೆ ಪದ್ಧತಿ ಆಯ್ಕೆಯು ಉತ್ತಮವಾಗಿದೆ. ಇದರಂತೆ ಸುಮಾರು ₹45,653 ತೆರಿಗೆ ಪಾವತಿಸಬೇಕಾಗುತ್ತದೆ. ನಿಮಗೆ ಬರುವ ಬಡ್ಡಿ ಆದಾಯ ಒಂದೇ ಬ್ಯಾಂಕ್‌ನಿಂದ ₹50,000ಕ್ಕೂ ಮೀರಿ ಜಮೆ ಆಗಿದ್ದರೆ ಈಗಾಗಲೇ ಶೇ 10ರಷ್ಟು ತೆರಿಗೆ ಕಡಿತ ಆಗಿರಬಹುದು. ಹಾಗಾಗಿ, ಸಣ್ಣ ಪ್ರಮಾಣದ ಮೊತ್ತ ಮಾತ್ರ ಪಾವತಿಸಬೇಕಾಗಬಹುದು. ಇದುವರೆಗೆ ಈ ಆದಾಯದ ಮೇಲೆ ಯಾವುದೇ ತೆರಿಗೆ ಕಡಿತ ಆಗಿಲ್ಲ ಎಂದಾದರೆ ಸಂಪೂರ್ಣ ತೆರಿಗೆ ಮೊತ್ತವನ್ನು ಈ ತಿಂಗಳೊಳಗೆ ರಿಟರ್ನ್ಸ್ ಸಲ್ಲಿಸುವ ಮೊದಲು ಪಾವತಿಸಿ. ಹೊಸ ತೆರಿಗೆ ಪದ್ಧತಿಯಡಿ ನಿಮಗೆ ₹50,000  ಸ್ಟ್ಯಾಂಡರ್ಡ್ ಡಿಡಕ್ಷನ್ ಮಾತ್ರ ಸಿಗುವುದಿದ್ದರೂ ಅದು ಒಟ್ಟು ತೆರಿಗೆ ದೃಷ್ಟಿಯಲ್ಲಿ ಉತ್ತಮ.  

ಪ್ರ

ನಾನು ಮಂಗಳೂರಿನಲ್ಲಿ ಐ.ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ 25 ವರ್ಷ. ನನ್ನ ಪೋಷಕರಿಗೆ ಮನೆ ಖರೀದಿಸಲು ಯೋಚಿಸುತ್ತಿದ್ದು, ನನ್ನ ವಾರ್ಷಿಕ ಆದಾಯ ಕೇವಲ ₹2 ಲಕ್ಷ. ನನ್ನ ತಂದೆ ಕೆಲಸದಿಂದ ನಿವೃತ್ತರಾಗಿದ್ದಾರೆ. ಅವರು ತಮ್ಮ ಬ್ಯಾಂಕ್ ಮತ್ತು ಎಲ್ಐಸಿಯಲ್ಲಿ ಸುಮಾರು ₹5 ಲಕ್ಷ ಮೊತ್ತ ಹೊಂದಿರಬಹುದು. ನನ್ನ ಪೋಷಕರು ನಿವೇಶನ ಖರೀದಿಸುವ ಮೂಲಕ ಮನೆ ನಿರ್ಮಿಸಲು ಬಯಸುತ್ತಾರೆ. ಆದರೆ, ನನಗೆ ಈ ಹಂತದಲ್ಲಿ ಇಎಂಐ ಪಾವತಿಸಲು ಸಾಧ್ಯವಿಲ್ಲ. ಹಾಗಾಗಿ, ನಾನು ಮನೆ ಖರೀದಿಸಲು ಯೋಜಿಸುತ್ತಿದ್ದೇನೆ ಮತ್ತು ಮನೆಯಲ್ಲಿ ನಾವು ನಾಲ್ವರು ಸದಸ್ಯರಿದ್ದೇವೆ. ಹಾಗಾಗಿ, ಐಷಾರಾಮಿ ಮನೆಗಾಗಿ ಯೋಜಿಸುತ್ತಿಲ್ಲ. ಅಂದಾಜು ₹10 ಲಕ್ಷದ ಒಳಗೆ ಇರುವ ಮನೆ ಖರೀದಿಸುವ ಯೋಜನೆಯಿದೆ. ನನ್ನ ಪ್ರಶ್ನೆ ಏನೆಂದರೆ, ನನಗಿರುವ ಮಾಸಿಕ ₹17 ಸಾವಿರ ಸಂಬಳದೊಂದಿಗೆ ನಾನು ಈ ಗುರಿಯನ್ನು ಹೇಗೆ ಈಡೇರಿಸಬಹುದು? ನಾನು ಬ್ಯಾಂಕ್‌ನಿಂದ ಸಾಲ ಪಡೆಯಬಹುದೇ? ನಾನು ಮುಂದಿನ ಒಂದು ವರ್ಷದೊಳಗೆ ಖರೀದಿಸಲು ಯೋಜಿಸುತ್ತಿದ್ದೇನೆ. ಹಾಗಾಗಿ ಲೋನ್ ಡೌನ್ ಪೇಮೆಂಟ್ ಅಥವಾ ನನ್ನ ಹಣಕಾಸಿನ ಸುರಕ್ಷತೆಗಾಗಿ ನಾನು ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬೇಕು? ತೆರಿಗೆ ಉಳಿತಾಯಕ್ಕಾಗಿ ಇರುವ ಸುಲಭೋಪಾಯಗಳು ಯಾವುವು? 

ನಿಮ್ಮ ಮನೆ ಖರೀದಿಸುವ ಕನಸು ಸಹಜವಾದುದು. ಸಾಮಾನ್ಯವಾಗಿ ಯಾವುದೇ ಸಾಲ ನೀಡುವಾಗ ಹಣಕಾಸು ಸಂಸ್ಥೆಗಳು ಆಯಾ ಪ್ರದೇಶದ ವೆಚ್ಚಗಳಿಗೆ ಅನುಸಾರ ಪ್ರತಿ ತಿಂಗಳಿಗೆ ₹15 ಸಾವಿರದಿಂದ ₹25 ಸಾವಿರಕ್ಕೆ ಕಡಿಮೆ ಇರದ ವೇತನ ಶ್ರೇಣಿಯ ಮಂದಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ. ಅಲ್ಲದೆ, ಉದ್ಯೋಗದಲ್ಲಿರುವ ಸಂಸ್ಥೆಯ ಪೂರ್ವ ಮಾಹಿತಿಯು, ಸಾಲ ನೀಡುವ ಸಂಸ್ಥೆಗಳಿಗಿದ್ದರೆ ಅದೂ ಕೆಲವೊಮ್ಮೆ ನೆರವಾಗುತ್ತದೆ. ಮೊದಲ ಹಂತದಲ್ಲಿ ಸಹಕಾರ ಬ್ಯಾಂಕ್‌ಗಳನ್ನೂ ಸಂಪರ್ಕಿಸಿ. ನೀವು ಖರೀದಿಸುವ ಮನೆಯ ಮೇಲೆ ನೇರವಾಗಿ ಅಡಮಾನ ಸಾಲ ಪಡೆಯಲು ಹೆಚ್ಚುವರಿ ದಾಖಲೆಗಳು ಹಾಗೂ ನಿಮ್ಮ ತೆರಿಗೆ ರಿಟರ್ನ್ಸ್ ಇತ್ಯಾದಿ ಅನಿವಾರ್ಯವಾಗುತ್ತದೆ. ಮುಂದೆ ಈ ಬಗ್ಗೆ ಗಮನಹರಿಸಿ.

ನೀವು ಯೋಜಿಸಿರುವ ಮನೆಯು ₹10 ಲಕ್ಷದೊಳಗೆ ಸಿಗುವ ಸಾಧ್ಯತೆಗಳಿದ್ದರೆ ಪ್ಯಾನ್ ಸಹಿತ ಪೂರ್ಣ ಕೆವೈಸಿ ದಾಖಲೆ ಹೊಂದಿ, ವೇತನದ ಆಧಾರದ ಮೇಲೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇತ್ತೀಚೆಗೆ ವೈಯಕ್ತಿಕ ಸಾಲ ನೀಡುವ ಸಂಸ್ಥೆಗಳು ಸಾಕಷ್ಟಿದ್ದು, ಯಾವುದೇ ಹೆಚ್ಚಿನ
ದಾಖಲೆಗಳಿಲ್ಲದೆ ಸಾಲ ನೀಡುತ್ತವೆ. ಆದರೆ, ಇಂತಹ ಸಾಲಕ್ಕೆ ಶೇ 12ರಿಂದ 18ರಷ್ಟು ಬಡ್ಡಿ ಇರುತ್ತದೆ.

ಸಾಲಗಾರರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಇದು ವ್ಯತ್ಯಾಸವಾಗುತ್ತದೆ. ಏನಿದ್ದರೂ ನೀವು ಎರಡು– ಮೂರು ಮೂಲಗಳಿಂದ ಹಣ ಕ್ರೋಡೀಕರಿಸುವತ್ತ ಗಮನ ಹರಿಸಬೇಕು. ಉದಾಹರಣೆಗೆ ನಿಮ್ಮಲ್ಲಿ ಯಾವುದಾದರೂ ಚಿನ್ನಾಭರಣ ಇದ್ದರೆ ಅದರ ಮೇಲೆ ಸಾಲಕ್ಕೆ ಪ್ರಯತ್ನಿಸಬಹುದು. ಪ್ರಸ್ತುತ ಮೌಲ್ಯದ ಸುಮಾರು ಶೇ 60ರಿಂದ 70ರಷ್ಟು ಸಾಲ ಸಿಗುತ್ತದೆ. ನಿಮ್ಮ ಖರ್ಚಿಗಾಗಿ ಪ್ರಸ್ತುತ ವೇತನದ ಅರ್ಧ ಮೊತ್ತವನ್ನಾದರೂ ಕಾಯ್ದಿರಿಸಿ. ವೈಯಕ್ತಿಕ ಸಾಲವಾದರೆ ಯಾವುದೇ ಪೂರ್ವ ಪಾವತಿಯ (ಡೌನ್‌ ಪೇಮೆಂಟ್) ಪ್ರಶ್ನೆ ಬರುವುದಿಲ್ಲ.

ಇತರೆ ಸಂದರ್ಭದಲ್ಲಿ ಶೇ 20ರಿಂದ ಶೇ 25ರಷ್ಟು ಹಣವನ್ನು ಸಾಲಗಾರ ಮೊದಲೇ ಭರಿಸಬೇಕಾಗಿರುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನಿಮ್ಮ ತಂದೆಯವರ ಹಣ ಉಪಯೋಗಿಸಿ. ಇನ್ನೂ ಸಾಧ್ಯವಾಗದಿದ್ದರೆ ವಿಶ್ವಸನೀಯ ಸ್ನೇಹಿತರು, ಬಂಧುಗಳಿಂದ ಹಣವನ್ನು ಸಾಲವಾಗಿ ಪಡೆದು ಅವರಿಗೆ ಪರ್ಯಾಯವಾಗಿ ಬಡ್ಡಿ ಸಹಿತ ಮರಳಿಸಿ.

ಪ್ರಸ್ತುತ ನೀವು ನೀಡಿರುವ ಮಾಹಿತಿಯಂತೆ ನಿಮ್ಮ ಆದಾಯಕ್ಕೆ ತೆರಿಗೆ ಬರುವ ಸಾಧ್ಯತೆಗಳಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಗಳಿಕೆಗೆ ನಿಮಗಿರುವ ಹೆಚ್ಚುವರಿ ಸಮಯ ಹಾಗೂ ನಿಮ್ಮಲ್ಲಿರುವ ಕೌಶಲವನ್ನು ಬಳಸಿಕೊಳ್ಳಿ. ಅಂತಹ ಆದಾಯವನ್ನು ಅಗತ್ಯವಾಗಿ ನಿಮ್ಮ ರಿಟರ್ನ್ಸ್‌ನಲ್ಲಿ ಘೋಷಿಸಬೇಕು. ಹೊಸ ತೆರಿಗೆ ಪದ್ಧತಿಯಡಿ ₹7 ಲಕ್ಷದೊಳಗೆ ಆದಾಯ ಇರುವವರಿಗೆ ಯಾವುದೇ ತೆರಿಗೆ ಬರುವ ಸಾಧ್ಯತೆ ಇಲ್ಲ. ಇದೇ ಸಂದರ್ಭದಲ್ಲಿ ಗರಿಷ್ಠ ಉಳಿಕೆಗೆ ಪ್ರಯತ್ನಿಸಿ. ತೆರಿಗೆ ಉಳಿತಾಯಕ್ಕಾಗಿ ಮಾತ್ರ ಹೂಡಿಕೆಯ ಉದ್ದೇಶ ಆಗಿರದೆ ನಿಮ್ಮ ಆರ್ಥಿಕ ಸುರಕ್ಷತೆ ದೃಷ್ಟಿಯಲ್ಲಿಯೂ ಇದು ಅನಿವಾರ್ಯವಾಗಿದೆ.  

ನೀವು ಉತ್ತಮ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ದೀರ್ಘಕಾಲದಲ್ಲಿ ಆರ್ಥಿಕವಾಗಿ ಸಶಕ್ತರಾಗಲು ಅವಕಾಶವಿದೆ. ಇಂದು ತಿಂಗಳಿಗೆ ₹100ರಿಂದ ತೊಡಗಿ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದೇ ಮೊತ್ತದ ಹೂಡಿಕೆ ಮಾಡಬಹುದು. ಇದು ಮೊದಲ ಹೆಜ್ಜೆಯ ಆರಂಭವಷ್ಟೇ ಎಂದು ತಿಳಿದು ಮುಂದುವರಿಯಿರಿ.

ನಿಮ್ಮ ಆದ್ಯತೆಯ ಮನೆಯ ಬಗೆಗಿನ ಹಣಕಾಸು ವಿಚಾರವು ಸರಿದೂಗಿದ ನಂತರ ಈ ಮೊತ್ತ ಹೆಚ್ಚಿಸುವತ್ತ ಗಮನ ನೀಡಿ. ಮುಂದೆ ಇದು ನಿಮ್ಮ ಹಣಕಾಸಿನ ಭದ್ರತೆಗೆ ನೆರವಾಗುತ್ತದೆ. ಅಲ್ಲದೆ, ಇತ್ತೀಚೆಗೆ ಬಹಳಷ್ಟು ಹೊಸ ಫಂಡ್‌ಗಳು (ಎನ್‌ಎಫ್‌ಒ)  ಹೂಡಿಕೆಗೆ ಅವಕಾಶ ಕಲ್ಪಿಸಿ ಕೊಡುತ್ತಿವೆ. ಇವುಗಳ ಪ್ರತಿ ಯೂನಿಟ್‌ನ ಮೂಲ ಬೆಲೆ ₹10 ಆಗಿರುವುದರಿಂದ ಆರಂಭಿಕ ಹಂತದಲ್ಲಿಯೇ ಮಾಡುವ ಖರೀದಿಯು ಮುಂದೆ ಫಂಡ್ ಬೆಳೆದಂತೆ ಉತ್ತಮ ಲಾಭವನ್ನು ತಂದುಕೊಡಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT