‘ಉಟ್ರ ಇಳಕಲ್ ಸೀರಿ ಉಡ್ಬೇಕು, ತೊಟ್ರ ಗುಳೇದಗುಡ್ಡ ಖಣ ತೊಡ್ಬೇಕು’ ಅನ್ನುವುದು ಇಳಕಲ್ ಸೀರೆ ಮತ್ತು ಗುಳೇದಗುಡ್ಡದ ಖಣದ ಮಹತ್ವ ಸಾರುವ ಉತ್ತರ ಕರ್ನಾಟಕದ ಜನಪ್ರಿಯ ಮಾತು.

ಬಣ್ಣ, ವಿನ್ಯಾಸದ ಕಾರಣಕ್ಕಾಗಿ ಥಟ್ಟನೆ ಗಮನ ಸೆಳೆಯುವ ಇಳಕಲ್ ಸೀರೆ ಮತ್ತು ಗುಳೇದಗುಡ್ಡದ ಖಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಮಹಿಳೆಯರ ನೆಚ್ಚಿನ ವಸ್ತ್ರ. ಹಿಂದಿನಷ್ಟಲ್ಲದಿದ್ದರೂ ಇವುಗಳಿಗೆ ಈಗಲೂ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಮಾರುಕಟ್ಟೆ ಇದೆ. ಅದರಲ್ಲೂ ಅಪ್ಪಟ ರೇಷ್ಮೆಯಲ್ಲಿ ನೇಕಾರರು ನೇಯುತ್ತಿದ್ದ ಖಣ ತನ್ನ ವೈವಿಧ್ಯಮಯ ಬಣ್ಣ ಮತ್ತು ವಿನ್ಯಾಸದಿಂದಲೇ ಹೆಣ್ಣುಮಕ್ಕಳ ಮನಸು ಸೆಳೆಯುತ್ತಿತ್ತು. ಆಧುನೀಕರಣದ ಭರಾಟೆಯಲ್ಲಿ ಈ ಖಣ ನೇಪಥ್ಯದ ಹಾದಿಯಲ್ಲಿದೆ. ಈಗೇನಿದ್ದರೂ ಪಾಲಿಯಸ್ಟರ್ ಜಂಪರ್‌ಗಳ (ರವಿಕೆ) ಜಮಾನ. ಅತ್ತೆ ಖಣದ ಕುಪ್ಪಸ ತೊಟ್ಟರೆ, ಸೊಸೆಗೆ ಮಾತ್ರ ಸಾದಾ ಜಾಕೀಟು ಬಟ್ಟೆಯ ಜಂಪರ್ ಬೇಕು. ಖಣ ಏನಿದ್ದರೂ ವಯಸ್ಸಾದವರಿಗೆ ಮಾತ್ರ ಅನ್ನುವ ಮಿಥ್ಯೆಯಿಂದಾಗಿ ಖಣದ ಕುಬ್ಸ ತೊಡುವವರ ಸಂಖ್ಯೆಯೂ ಕಡಿಮೆಯೇ.

ಈ ಸೀರೆ ಮತ್ತು ಖಣದ ಸೊಬಗಿಗೆ ಮಾರು ಹೋಗಿ ನಗರ ಕೇಂದ್ರಿತ ಮಹಿಳೆಯರೂ ತಮ್ಮ ಸಂಗ್ರಹದಲ್ಲೂ ಒಂದು ಇರಲಿ ಎಂದು ಖರೀದಿಸುವಷ್ಟು ಮೋಹ ಉಳಿಸಿಕೊಂಡಿದೆ. ಹಾಗಾಗಿ, ಆನ್‌ಲೈನ್ ಮಾರುಕಟ್ಟೆಯಲ್ಲಿ ಇಳಕಲ್ ಸೀರೆ ಮತ್ತು ಖಣದ ಥರೇವಾರಿ ಚಿತ್ರಗಳು ನೆಟ್ಟಿಗರ ಕಣ್ಸೆಳೆಯುತ್ತದೆಯಾದರೂ, ಆಧುನಿಕ ಯುವತಿಯರು ಇದನ್ನು ಸಾಂಪ್ರದಾಯಿಕ ದಿರಿಸು ಅನ್ನುವ ಕಾರಣಕ್ಕಾಗಿ ವರ್ಷವೊಪ್ಪತ್ತು ಇಲ್ಲವೇ ಸಭೆ –ಸಮಾರಂಭಗಳಲ್ಲಿ ಮಾತ್ರ ತೊಟ್ಟು ಸಂಭ್ರಮಿಸುವುದುಂಟು.

ಇಂದಿಗೂ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಗುಳೇದಗುಡ್ಡ ಖಣ ತೊಡುವ ಹೆಣ್ಣುಮಕ್ಕಳ ಸಂಖ್ಯೆ ಕಮ್ಮಿಯೇ. ಜಾಗತೀಕರಣದ ಹವೆಯಲ್ಲಿ ಆಧುನಿಕ ಉಡುಪು ತೊಟ್ಟರಷ್ಟೇ ತಾವೂ ಆಧುನಿಕರಾಗಬಲ್ಲೆವೆಂಬ ಭ್ರಮೆಯಿಂದಾಗಿ ಈ ಸೀರೆ, ಖಣ ನಿಧಾನವಾಗಿ ತನ್ನ ಖದರು ಕಳೆದುಕೊಳ್ಳುತ್ತಿದೆ.

ಖಣದ ಬಣ್ಣ ಮತ್ತು ವಿನ್ಯಾಸ ನೋಡಿ ಕೇಂದ್ರ ಸರ್ಕಾರ ಇದಕ್ಕೆ ಜಾಗತಿಕ ಮನ್ನಣೆಯ ಟ್ರೇಡ್ ಮಾರ್ಕ್ (ಜಿಐ ಟ್ಯಾಗ್) ನೀಡಿದೆ. ಆದರೂ ನಿತ್ಯ ತೊಡುವ ಕುಬ್ಸದ ಸ್ಥಾನದಲ್ಲಿ ಖಣದ ಸ್ಥಾನ ಕಮ್ಮಿಯಾಗುವುದು ತಪ್ಪಲಿಲ್ಲ. ಗುಳೇದಗುಡ್ಡದ ಖಣ ಮತ್ತೆ ಮುಂಚೂಣಿಗೆ ಬಂದು ತನ್ನ ಗತವೈಭವ ಮೆರೆಯಬೇಕೆನ್ನುವ ಆಶಯದಿಂದ ಟೆಕ್ಸ್‌ಟೈಲ್ ಡಿಸೈನರ್ ಗೀತಾ ಪಾಟೀಲ್ ಮುಂದಾಗಿದ್ದಾರೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಭೈರನಮಡಗಿಯವರಾದ ಗೀತಾ, ‘ದೇಸಿ’ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಟೆಕ್ಸ್‌ಟೈಲ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ‘ಉತ್ತರ ಕರ್ನಾಟಕದವಳಾದ ನನಗೆ ಸಹಜವಾಗಿಯೇ ಬಾಲ್ಯದಿಂದಲೂ ಇಳಕಲ್ ಸೀರೆ ಮತ್ತು ಗುಳೇದಗುಡ್ಡದ ಖಣ ಬಹುವಾಗಿ ಆಕರ್ಷಿಸುತ್ತಿತ್ತು. ಅದರೆಡೆಗಿನ ಮೋಹವೇ ಖಣದಲ್ಲಿನ ಭಿನ್ನ ಪ್ರಯೋಗ ಕೈಗೊಳ್ಳಲು ನನ್ನನ್ನು ಗುಳೇದಗುಡ್ಡಕ್ಕೆ ಕರೆತಂದಿದೆ’ ಎನ್ನುತ್ತಾರೆ ಅವರು.

‘ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಗುಳೇದಗುಡ್ಡದಲ್ಲಿ ಒಂದು ಕಾಲದಲ್ಲಿ ಸಾವಿರಾರು ನೇಕಾರರಿದ್ದರು. ಆದರೆ, ಆ ಸಂಖ್ಯೆ ಈಗ ನೂರಾರು ಮಂದಿಗೆ ತಲುಪಿದೆ. ಇಲ್ಲಿನ ಕೈಮಗ್ಗ ನೇಕಾರರು ಅಪ್ರತಿಮ ಕುಶಲಕರ್ಮಿಗಳು. ಅವರು ಅಂದು ಖಣದಲ್ಲಿ ನೇಯುತ್ತಿದ್ದ ಒಂದೊಂದು ವಿನ್ಯಾಸ, ಬಣ್ಣದ ಹಿಂದೆಯೂ ಒಂದೊಂದು ಕಥೆಯಿದೆ. ನೇಕಾರನೊಬ್ಬ ತೇರಿನ ವಿನ್ಯಾಸವನ್ನು ಖಣದಲ್ಲಿ ತರುತ್ತಿದ್ದರೆ, ಮತ್ತೊಬ್ಬ ಸಾಕ್ಷಾತ್ ಸಿದ್ದೇಶ್ವರನ ಮುಕುಟವನ್ನೇ ಖಣದಲ್ಲಿ ವಿನ್ಯಾಸ ಮಾಡುತ್ತಿದ್ದ... ಖಣದಲ್ಲಿನ ಒಂದೊಂದು ಚೌಕಳಿಯ ಚಿತ್ರವೂ ಕುಶಲಕಲೆಯನ್ನು ಬಿಂಬಿಸುವಂಥವು. ಇಂಥದ್ದೊಂದು ಅದ್ಭುತ ಕೌಶಲ ಹೊಂದಿದ್ದ ನೇಕಾರರನ್ನು ಈಗ ಬೂದುಗನ್ನಡಿ ಹಾಕಿ ಹುಡುಕಿದರೂ ಸಿಗುವುದಿಲ್ಲ’ ಎಂದು ಬೇಸರಿಸುತ್ತಾರೆ ಗೀತಾ.

ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಆದಾಯವೂ, ಕೈಮಗ್ಗ ನೆಚ್ಚಿದ ನೇಕಾರರ ಆದಾಯವೂ ಅಷ್ಟಕಷ್ಟೇ. ದಿನವಿಡೀ ನೇಕಾರಿಕೆ ಮಾಡಿದರೂ ಅವರಿಗೆ ₹ 150ರ ತನಕ ಕೂಲಿ ಸಿಗುವುದು ದುಸ್ತರವೇ. ಸರ್ಕಾರದ ಸಹಾಯವೂ ಅಷ್ಟಿಷ್ಟು ಮಾತ್ರ. ಮೊದಲಿನಿಂದಲೂ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಖಣದಲ್ಲಿ ಹೊಸ ಪ್ರಯೋಗ ಮಾಡುವ ಯೋಚನೆಯೂ ಇತ್ತು. ‘ಕುಬ್ಸ’ (ಕುಪ್ಪಸ) ಹೆಸರಿನಲ್ಲಿ ಒಂದು ವರ್ಷದಿಂದ ಇಲ್ಲಿನ ನೇಕಾರರೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ತಮ್ಮ ಆರಂಭದ ಹಾದಿ ಬಿಚ್ಟಿಟ್ಟರು.

‘ಇಲ್ಲಿನ ಕ್ರಾಫ್ಟ್ ಉಳಿಯಬೇಕು. ನೇಕಾರರಿಗೆ ಸಹಾಯ ಆಗಬೇಕು ಮತ್ತು ಖಣ ಯುವಜನರನ್ನೂ ತಲುಪುವಂತಾಗಬೇಕು ಅನ್ನುವ ಕಾರಣಕ್ಕೆ ‘ಕುಬ್ಸ’ ಶುರು ಮಾಡಿದೆ. ಈಗಿನವರು ಕನಿಷ್ಠ ಹಬ್ಬ–ಹರಿದಿನಗಳಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ಇಳಕಲ್ ಸೀರೆ ಮತ್ತು ಖಣ ಧರಿಸಿ ಸಂಭ್ರಮಿಸುತ್ತಾರೆ. ಆದರೆ, ಮುಂದಿನ ಪೀಳಿಗೆಗೆ ಇದನ್ನು ಧರಿಸುತ್ತೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ, ಇದನ್ನು ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ತರಬೇಕು. ಯುವಜನರ ಅಭಿರುಚಿಗೆ ತಕ್ಕಂತೆ ಸ್ವಲ್ಪ ಮಾರ್ಪಾಡು ಮಾಡಿಕೊಂಡು ‘ಕುಬ್ಸ’ವನ್ನೇ ಸೀರೆಯನ್ನಾಗಿ ಪರಿಚಯಿಸುವ ಪ್ರಯೋಗಕ್ಕೆ ಸಜ್ಜಾದೆ ಎಂದರು ಗೀತಾ.

‘ಖಣದ ವಿನ್ಯಾಸ, ಟೆಕ್ಸ್‌ಟೈಲ್ ಮತ್ತು ಬಣ್ಣಗಳ ಆಯ್ಕೆಯನ್ನು ಇದುವರೆಗೆ ಯಾರೂ ಸಾಂಪ್ರದಾಯಿಕ ಚೌಕಟ್ಟಿನಾಚೆಗೆ ಹೊರತಂದಿಲ್ಲ. ಹಾಗೆ ತರಲಾಗದಷ್ಟು ಮೋಹಕತೆ ಉಳಿಸಿಕೊಂಡಿರುವುದೇ ಅದರ ವಿಶೇಷ ಗುಣ. ಮೂಲಗುಣದಲ್ಲಿ ತುಸು ಮಾರ್ಪಾಡು ಮಾಡಿ, ಬಣ್ಣಗಳ ಬದಲಿಗೆ ಆರಂಭದ ಸಂಗ್ರಹದಲ್ಲಿ ಕಪ್ಪು–ಬಿಳುಪಿನ ಪ್ರಯೋಗ ಮಾಡಿದ್ದೇನೆ. ಗುಣಮಟ್ಟದ ರೇಷ್ಮೆ, ನೈಸರ್ಗಿಕ ಬಣ್ಣಗಳನ್ನು ಬಳಸಿ ಮಾಡಿರುವ ಕಪ್ಪುಬಿಳುಪು ಖಣದ ಸೀರೆ ಯುವಜನರ ಮನಸು ಸೆಳೆಯಲಿದೆ. ಇದರ ಜೊತೆಗೆ ಖಣದ ಟೆಕ್ಸ್‌ಟೈಲ್ ಬಳಸಿಯೇ ಸ್ಟೋಲ್ಸ್‌ಗಳನ್ನು ತಯಾರಿಸಿದ್ದೇನೆ’ ಎಂದು ತಮ್ಮ ಪ್ರಯೋಗಗಳನ್ನು ಒಂದೊಂದಾಗಿ ವಿವರಿಸುತ್ತಾರೆ.

‘ಗುಳೇದಗುಡ್ಡದಲ್ಲಿ ರೇಷ್ಮೆ ಬಳಸಿ ಖಣ ಮಾಡುವವರ ಸಂಖ್ಯೆಯೂ ಕ್ಷೀಣಿಸಿದೆ. ಅವರ ಕಲೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿರುವುದು ಕೈಮಗ್ಗ ನೇಕಾರರ ಆತ್ಮವಿಶ್ವಾಸವನ್ನೇ ಕಸಿಯುವಂತಾಗಿದೆ. ಅವರಲ್ಲೀಗ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕಿದೆ. ತಮ್ಮ ಕರಕುಶಲ ಕಲೆಯ ಮೇಲಿನ ನಂಬಿಕೆ ಮರುಕಳಿಸುವಂತೆ ಮಾಡಬೇಕಿದೆ. ಇದಕ್ಕೆ ಮೊದಲಿಗೆ ಬೆರಳೆಣಿಕೆಯಷ್ಟು ಸಂಖ್ಯೆಯ ಕುಟುಂಬಗಳ ಜೊತೆಗೆ ಕೆಲಸ ಮಾಡಿ, ನಂತರ ಈ ಸಂಖ್ಯೆಯನ್ನು 50ಕ್ಕೆ ತಲುಪುವ ನಿರೀಕ್ಷೆ ಹೊಂದಿದ್ದೇನೆ. ಲಾಕ್‌ಡೌನ್ ಸಮಯದಲ್ಲಿ ಒಂದು ದಿನವೂ ಇವರನ್ನು ಖಾಲಿ ಕೂರಿಸಿಲ್ಲ. ಏಕೆಂದರೆ ಒಂದು ದಿನ ಕೈಮಗ್ಗದ ಸದ್ದು ಕೇಳದಿದ್ದರೆ ಆ ದಿನದ ಕೂಲಿ ಇಲ್ಲವಂತಲೇ ಅರ್ಥ’ ಎಂದು ಗುಳೇದಗುಡ್ಡದ ನೇಕಾರರ ಬದುಕು ಬಿಚ್ಚಿಡುತ್ತಾರೆ.

‘30 ವರ್ಷ ಕಾಲ ನೇಕಾರಿಕೆ ಮಾಡಿ ಇತ್ತೀಚೆಗೆ ಬಿಟ್ಟಿದ್ದೆ. ಕಮ್ಮಿ ಕೂಲಿಗೆ ಕೆಲಸ ಮಾಡುವ ಬದಲು ಸುಮ್ಮನಿರುವುದೇ ವಾಸಿ ಅಂದುಕೊಂಡಿದ್ದೆ. ಆದರೆ, ‘ಕುಬ್ಸ’ ನೇಕಾರರಿಗೆ ಉತ್ತಮ ಕೂಲಿಗೆ ಕೊಡುತ್ತಿದೆ. ಮತ್ತೆ ಮೊದಲಿನಂತೆ ಕೆಲಸ ಆರಂಭಿಸಿದ್ದೇನೆ. ಬರೀ ಪಗಾರ ಅಷ್ಟೇ ಅಲ್ಲ, ನನ್ನ ಮಗಳ ವಿದ್ಯಾಭ್ಯಾಸಕ್ಕೂ ನೆರವಾಗಿದ್ದಾರೆ’ ಎನ್ನುತ್ತಾರೆ ನೇಕಾರರಾದ ಜ್ಞಾನೇಶ್ವರಿ.

‘ನೇಕಾರರಿಗೆ ಇಂತಿಷ್ಟು ಆರ್ಡರ್ ಕೊಟ್ಟು, ಅದಕ್ಕೆ ತಕ್ಕ ಹಣ ನೀಡಿದರೆ ನಮ್ಮ ಕೆಲಸ ಮುಗಿಯುತೆಂದು ಹಲವರು ಭಾವಿಸುತ್ತಾರೆ. ಆದರೆ, ‘ಕುಬ್ಸ’ ಪ್ರತಿಹಂತದಲ್ಲೂ ಕೈಮಗ್ಗದ ನೇಕಾರರೊಂದಿಗೆ ಇರಲು ಬಯಸುತ್ತದೆ. ಅವರ ಕಷ್ಟಸುಖಗಳ ಜತೆಗೆ ಇರಲು ಇಚ್ಛಿಸುತ್ತದೆ. ಖಣದ ಮೂಲಗುಣವನ್ನು ಸಂರಕ್ಷಿಸುತ್ತಲೇ, ಭಿನ್ನ ಪ್ರಯೋಗಗಳನ್ನೂ ಮಾಡುವ ಆಸೆ ನನ್ನದು. ಇದರ ಜತೆಗೆ ಖಣದ ಪ್ರತಿ ಮಾಹಿತಿಯನ್ನೂ ಡಾಕ್ಯುಮೆಂಟರಿ ರೂಪದಲ್ಲಿ ಸಂಗ್ರಹಿಸುತ್ತಿರುವೆ’ ಎಂದು ಮಾತು ಮುಗಿಸಿದರು ಗೀತಾ.

ಸಂಪರ್ಕಕ್ಕೆ:7738623975 ಅಥವಾ email: geeta.patil@kubsa.org

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.