ಈ ಕತೆ ಯಾರು ಬರೆದಿದ್ದು ಎಂದು ಗೊತ್ತಿಲ್ಲ. ಕೆಲವು ವರ್ಷಗಳ ಹಿಂದೆ ಕನ್ನಡದ ದಿನಪತ್ರಿಕೆಯೊಂದರ ಪುರವಣಿಯಲ್ಲಿ ಪ್ರಕಟವಾಗಿತ್ತು. ಕೊರೊನಾ ಸೃಷ್ಟಿಸಿದ ಆತಂಕದ ದಿನಗಳಲ್ಲಿ ಮತ್ತೆ ನೆನಪಾಗಿದೆ. ಮೊದಲು ಕತೆ ಕೇಳಿಬಿಡೋಣ. ಒಂದೂರಲ್ಲಿ ಒಬ್ಬ ರಾಜ. ಆತನಿಗೆ ತನ್ನ ರಾಜ್ಯದಲ್ಲಿ ಇರುವ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಸನ್ಮಾನಿಸಬೇಕು ಎಂಬ ಹುಕಿ ಬಂದುಬಿಟ್ಟಿತು. ಮುಂದಿನ ವರ್ಷದ ತನ್ನ ಹುಟ್ಟುಹಬ್ಬದ ಹೊತ್ತಿನಲ್ಲಿ ರಾಜ್ಯದ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಸನ್ಮಾನಿಸುವುದಾಗಿ ಪ್ರಚಾರ ಮಾಡಿದ. ಅದಕ್ಕಾಗಿ ಬಹಳಷ್ಟು ಮಂದಿ ಅರ್ಜಿ ಹಾಕಿದರು. ಖ್ಯಾತ ವೈದ್ಯರು, ಆಟಗಾರರು, ಎಂಜಿನಿಯರ್‌ಗಳು, ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು, ಮಠಾಧೀಶರು, ವಕೀಲರು, ಪತ್ರಕರ್ತರು, ಪರ್ವತಾರೋಹಿಗಳು...

ಹೀಗೆ ಸಮಾಜದ ವಿವಿಧ ವರ್ಗಗಳ ಸಾಧಕರು ಅರ್ಜಿ ಹಾಕಿದ್ದರು. ಎಲ್ಲರನ್ನೂ ರಾಜ ತನ್ನ ಆಸ್ಥಾನಕ್ಕೆ ಕರೆಸಿಕೊಂಡು ಅವರ ಸಾಧನೆಗಳನ್ನು ಕೇಳಿದ. ರಾಜನಿಗೆ ಖುಷಿಯೋ ಖುಷಿ. ತನ್ನ ರಾಜ್ಯದಲ್ಲಿ ಇಷ್ಟೊಂದು ಶ್ರೇಷ್ಠ ವ್ಯಕ್ತಿಗಳು ಇದ್ದಾರಲ್ಲ ಎಂದು. ಎಲ್ಲರಿಗೂ ಮುಂದಿನ ವರ್ಷದ ತನ್ನ ಹುಟ್ಟುಹಬ್ಬದ ಸಂದರ್ಭಕ್ಕೆ ಬರಲು ಹೇಳಿದ. ಅಷ್ಟರಲ್ಲಿ ಅರಮನೆಯ ಹೊರಗೆ ಒಂದು ಘಟನೆ ನಡೆದಿತ್ತು. ಅದು ರಾಜನ ಗಮನಕ್ಕೆ ಬರಲೇ ಇಲ್ಲ.

ಆಸ್ಥಾನದಲ್ಲಿ ಈ ಎಲ್ಲ ಶ್ರೇಷ್ಠ ವ್ಯಕ್ತಿಗಳ ಸಾಧನಾ ಪ್ರವರ ನಡೆಯುತ್ತಿದ್ದಾಗ ಅರಮನೆಯ ಪ್ರವೇಶ ದ್ವಾರಕ್ಕೆ ಒಬ್ಬ ವ್ಯಕ್ತಿ ಓಡುತ್ತಾ ಬಂದ. ಮಾಸಲು ಬಟ್ಟೆ ಧರಿಸಿದ್ದ, ಮೈ ಕೈ ಎಲ್ಲಾ ಮಣ್ಣಾಗಿತ್ತು. ಅವನು ಅರಮನೆ ಪ್ರವೇಶಿಸಲು ಯತ್ನಿಸಿದಾಗ ಆತನನ್ನು ದ್ವಾರಪಾಲಕರು ಒಳಕ್ಕೆ ಬಿಡಲೇ ಇಲ್ಲ. ಅವನು ತುಂಬಾ ಬೇಸರದಿಂದ ವಾಪಸು ಹೋದ. ಅದು ಸುದ್ದಿಯಾಗಲೇ ಇಲ್ಲ.

ಮುಂದಿನ ವರ್ಷ ರಾಜನ ಜನ್ಮದಿನ ಬಂತು. ಶ್ರೇಷ್ಠ ವ್ಯಕ್ತಿಯ ಆಯ್ಕೆಗಾಗಿ ರಾಜ ತಯಾರಾಗಿ ಕುಳಿತಿದ್ದ. ಆದರೆ ಆಸ್ಥಾನಕ್ಕೆ ಯಾರೂ ಬರಲೇ ಇಲ್ಲ. ರಾಜನಿಗೆ ಆಶ್ಚರ್ಯ. ‘ಯಾಕೆ ಯಾರೂ ಬರಲೇ ಇಲ್ಲ’ ಎಂದು ಮಂತ್ರಿಯನ್ನು ಕೇಳಿದ. ಮಂತ್ರಿ ಆ ಬಗ್ಗೆ ವಿಚಾರಿಸಿದಾಗ ಗೊತ್ತಾದ ಸಂಗತಿ ಏನೆಂದರೆ, ಆ ದಿನ ದ್ವಾರಪಾಲಕರು ಹೊರದೂಡಿದ ವ್ಯಕ್ತಿ ರೈತನಾಗಿದ್ದ. ಅರಮನೆಗೆ ಪ್ರವೇಶ ನೀಡದೇ ಇದ್ದುದರಿಂದ ಬೇಸರಗೊಂಡ ಆತ ಮನೆಗೆ ಹೋಗಿ ಮಲಗಿಬಿಟ್ಟಿದ್ದ. ರೈತ ಮಲಗಿದ್ದರಿಂದ ಆ ಬಾರಿ ಯಾವ ಬೆಳೆಯನ್ನೂ ಬೆಳೆದಿರಲಿಲ್ಲ. ಬೆಳೆ ಬೆಳೆಯದೇ ಇದ್ದುದರಿಂದ ಯಾರಿಗೂ ಆಹಾರವೇ ಸಿಕ್ಕಿರಲಿಲ್ಲ. ಅದರಿಂದ ರಾಜನ ಆಸ್ಥಾನಕ್ಕೆ ಬಂದು ಯಾರೆಲ್ಲ ತಾವು ಶ್ರೇಷ್ಠ ವ್ಯಕ್ತಿಗಳು ಎಂದು ಈ ಹಿಂದೆ ಕೊಚ್ಚಿಕೊಂಡಿದ್ದರೋ ಅವರಿಗೆಲ್ಲಾ ಈಗ ಆಸ್ಥಾನಕ್ಕೆ ಬರುವಷ್ಟು ಶಕ್ತಿಯೂ ಇರಲಿಲ್ಲ. ಎಲ್ಲರೂ ನಿತ್ರಾಣರಾಗಿದ್ದರು. ಅದು ರೈತನ ಬೇಸರದ ಪರಿಣಾಮ. ತಕ್ಷಣವೇ ರಾಜ ಆ ರೈತನ ಮನೆಗೆ ಹೋಗಿ ‘ನೀನೇ ಅತ್ಯಂತ ಶ್ರೇಷ್ಠ ವ್ಯಕ್ತಿ’ ಎಂದು ಗೌರವಿಸಿದ.

ಈಗಲೂ ನಮ್ಮ ರಾಜಕಾರಣಿಗಳು, ಮಂತ್ರಿಗಳು ಎಲ್ಲರೂ ರೈತರನ್ನು ಅನ್ನದಾತ ಎಂದೇ ಕರೆಯುತ್ತಾರೆ. ಅವರೇ ಶ್ರೇಷ್ಠ ಎಂದು ಕೊಂಡಾಡುತ್ತಾರೆ. ಆದರೆ ರೈತರಿಗೆ ನೆರವು ನೀಡುವ ವಿಷಯದಲ್ಲಿ ಎಡವುತ್ತಾರೆ. ಬರ ಬರಲಿ, ಪ್ರವಾಹ ಬರಲಿ, ಬಿರುಗಾಳಿ ಬರಲಿ, ಸುನಾಮಿ ಬರಲಿ ಏನೇ ಬಂದರೂ ರೈತರಿಗೇ ತೊಂದರೆ. ಈಗ ನಮ್ಮ ದೇಶವನ್ನು ಕೊರೊನಾ ವೈರಸ್ ಕಾಡುತ್ತಿದೆ. ಇದರಿಂದಲೂ ರೈತರೇ ಅತಿಹೆಚ್ಚು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೋವಿಡ್–19 ತಂದಿರುವ ಈ ತಲ್ಲಣದ ಕಾಲದಲ್ಲಿ ನಮ್ಮ ರಾಜಕಾರಣಿಗಳು ರೈತರ ಮನೆಗೆ ಹೋಗಿ, ಅವರಿಗೆ ಬೇಕಾದ ಸಹಾಯ ಮಾಡದೇ ಇದ್ದರೆ ನಾವು, ನೀವು ಎಲ್ಲರೂ ಒಂದು ದಿನ ಹಸಿವಿನಿಂದ ಬಳಲಬೇಕಾಗುತ್ತದೆ.

ಫಸಲು ಚೆನ್ನಾಗಿದ್ದರೂ ಅದನ್ನು ಮಾರಾಟ ಮಾಡಲು ಸಾಧ್ಯವಾಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದು ಯಾವುದೇ ರಾಜ್ಯಕ್ಕೂ ಶೋಭೆ ತರುವ ಸಂಗತಿಯಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಬಡವರು, ನಿರ್ಗತಿಕರು, ಕೂಲಿಕಾರ್ಮಿಕರು ಮುಂತಾದವರ ಬಗ್ಗೆ ಸಮಾಜ ಮಿಡಿಯುತ್ತಿದೆ. ಕೆಲವು ಶಾಸಕರು ರೈತರಿಂದ ನೇರವಾಗಿ ಹಣ್ಣು– ತರಕಾರಿ ಪಡೆದು ಸಾರ್ವಜನಿಕರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಆದರೆ ರೈತರ ಸಮಸ್ಯೆಗೆ ಶಾಶ್ವತವಾದ ಪರಿಹಾರ ಒದಗಿಸಲು ಯಾರೂ ಮನಸ್ಸು ಮಾಡುತ್ತಿಲ್ಲ.

ತ್ವರಿತವಾಗಿ ಹಾಳಾಗುವ ಹಾಲನ್ನು ಸಂಸ್ಕರಿಸಿ ರೈತರಿಗೆ ಆದಾಯ ತರುವ ಕೆಲಸವಾಗುತ್ತಿದೆ. ಕೆಎಂಎಫ್ ಅತ್ಯುತ್ತಮ ಕೆಲಸವನ್ನೇ ಮಾಡುತ್ತಿದೆ. ರಾಜ್ಯದಲ್ಲಿ ಕ್ಷೀರ ಕ್ರಾಂತಿಯಾಗಿದೆ. ಅದೇ ರೀತಿ ಸಹಕಾರ ಸಂಸ್ಥೆಯನ್ನು ಸ್ಥಾಪಿಸಿ, ರೈತರು ಬೆಳೆದ ಎಲ್ಲ ಬೆಳೆಗಳಿಗೂ ಮಾರುಕಟ್ಟೆ ಒದಗಿಸುವ ಕೆಲಸವನ್ನು ಮಾಡಲು ಇದು ಸಕಾಲ. ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ ಜಾಲ ಚೆನ್ನಾಗಿಯೇ ಇದೆ. ಅದನ್ನು ಬಳಸಿಕೊಂಡು ರೈತರ ಉತ್ಪನ್ನಗಳು ಎಲ್ಲರಿಗೂ ಸಿಗುವಂತೆ ಮಾಡುವುದು ಕಷ್ಟವೇನಲ್ಲ. ಅಕ್ಕಿ, ಜೋಳ, ರಾಗಿ, ಗೋಧಿ, ಬೇಳೆ, ಕಾಳುಗಳು, ಎಣ್ಣೆ ಇಲ್ಲದೆ ಯಾರೂ ಬದುಕುವುದಿಲ್ಲ. ಅದನ್ನು ಸೂಕ್ತ ಸಮಯದಲ್ಲಿ ಸೂಕ್ತ ಬೆಲೆಯಲ್ಲಿ ತಲುಪಿಸುವ ಸರ್ಕಾರಿ ವ್ಯವಸ್ಥೆಯನ್ನು ಜಾರಿಗೆ ತಂದರೆ ರೈತರೂ ಉದ್ಧಾರವಾಗುತ್ತಾರೆ, ಗ್ರಾಹಕರಿಗೂ ಅನುಕೂಲ.

ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ರೈತರ ಉತ್ಪನ್ನ ಖರೀದಿಸುವ ಮತ್ತು ಮಾರಾಟ ಮಾಡುವ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು. ಈಗ ಕೃಷಿ ಬೆಲೆ ಆಯೋಗ ಇದೆ. ಅದು ಹಲ್ಲಿಲ್ಲದ ಹಾವು. ಕೃಷಿ ಉತ್ಪನ್ನ ಮಾರುಕಟ್ಟೆಗಳು ಇವೆ. ಆದರೆ ಅವು ದಲ್ಲಾಳಿಗಳ ಗೂಡುಗಳು. ರೈತ ಸಂಪರ್ಕ ಕೇಂದ್ರಗಳಿವೆ. ಅವು ಕೂಡ ಅಪ್ಪ ಅಮ್ಮ ಇಲ್ಲದ ತಬ್ಬಲಿಗಳು. ಮಧ್ಯವರ್ತಿಗಳ ಹಾವಳಿಯನ್ನು ತಡೆಯದೇ ಇದ್ದರೆ ರೈತರಿಗೆ ನೆರವಾಗಲು ಸಾಧ್ಯವೇ ಇಲ್ಲ. ಕೊರೊನಾ ಸಂಕಷ್ಟ ಕಾಲದಲ್ಲಿ ರೈತರಿಗೆ ನೆರವಾಗಲು ಕರ್ನಾಟಕ ರಾಜ್ಯ ಅತ್ಯುತ್ತಮ ವ್ಯವಸ್ಥೆಯನ್ನು ಜಾರಿಗೆ ತಂದರೆ, ಅನ್ನದಾತರಿಗೆ ಮಾಡುವ ಅತ್ಯಂತ ದೊಡ್ಡ ಉಪಕಾರವಾಗುತ್ತದೆ. ಇಲ್ಲವಾದರೆ ಓಶೋ ರಜನೀಶರ ನಾಯಿಯ ಕತೆಯಂತಾಗುತ್ತದೆ.

ರಜನೀಶರು ಹೇಳಿದ ಕತೆ ಹೀಗಿದೆ: ಒಬ್ಬ ಮಹಾಸಂತ ಸತ್ತ ಮೇಲೆ ನಾಯಿಯಾಗಿ ಹುಟ್ಟಿದ. ಆ ನಾಯಿಗೂ ಉಪದೇಶ ಮಾಡುವ ಚಟ ಇತ್ತು. ಅದು ಎಲ್ಲ ಬೀದಿ ನಾಯಿಗಳನ್ನೂ ಒಂದೆಡೆ ಸೇರಿಸಿ ಒಂದು ದಿನ ಉಪದೇಶ ನೀಡಿತು. ಇನ್ನು ಮುಂದೆ ಯಾರೂ ಅನಗತ್ಯವಾಗಿ ಬೊಗಳಬಾರದು ಹಾಗೂ ದಾರಿಯಲ್ಲಿ ಯಾವುದಾದರೂ ವಾಹನ ಅಥವಾ ಹೊಸ ಮನುಷ್ಯರು ಬಂದರೆ ಬೆನ್ನಟ್ಟಿ ಹೋಗಬಾರದು ಎಂದು ಹೇಳಿತು. ಉಳಿದ ನಾಯಿಗಳು ಒಪ್ಪಿದವು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಆ ನಾಯಿಗಳು ಯತ್ನಿಸಿದವು. ಬೊಗಳದೇ ಇದ್ದುದರಿಂದ ಗಂಟಲು ಕೆರೆಯುತ್ತಿತ್ತು. ಬೇರೆ ನಾಯಿಗಳು ಸುಮ್ಮನಿರುವುದನ್ನು ನೋಡಿ ಸುಮ್ಮನಾಗುತ್ತಿದ್ದವು. ಆದರೆ ಸಂತನಾಯಿಗೆ ಗಂಟಲು ಕೆರೆತ ಹೆಚ್ಚಾಯಿತು. ಯಾರೂ ಇಲ್ಲದ ತಿಪ್ಪೆಯ ಬಳಿಗೆ ಹೋಗಿ ಸಣ್ಣ ಧ್ವನಿಯಲ್ಲಿ ಬೊಗಳಿತು. ಇದು ಉಳಿದ ನಾಯಿಗಳ ಕಿವಿಯನ್ನು ತಲುಪಿತು. ತಕ್ಷಣವೇ ಎಲ್ಲ ನಾಯಿಗಳೂ ಒಟ್ಟಾಗಿ ಬೊಗಳತೊಡಗಿದವು. ಮತ್ತೆ ಎಲ್ಲವೂ ಮಾಮೂಲು.

ಲಾಕ್‌ಡೌನ್ ಕಾಲದಲ್ಲಿ ನಾವು ತೆಗೆದುಕೊಂಡ ನಿರ್ಧಾರಗಳೂ ಹೀಗೆ ಆಗಬಾರದು. ಅನ್ನದಾತನ ಬಾಳಿಗೆ ಬೆಳಕಾಗಬೇಕು. ಇಲ್ಲವಾದರೆ ಮುಂದೆ ನಮಗೆ ಕೆಮ್ಮಲೂ ಶಕ್ತಿ ಇರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.