ಬಹುರಹಸ್ಯವೊ ಸೃಷ್ಟಿ, ಬಹುರಹಸ್ಯವೊ ಜೀವ |
ಅಹುದದಲ್ಲವಿದೆಂಬ ವಾದ ಬರಿ ಹರಟೆ ||
ಗುಹೆಯೊಳಿಹುದೆಲ್ಲ ತತ್ವ್ತಗಳ ತತ್ತ್ವದ ಮೂಲ |
ಬಹಿರಂತರ ರಹಸ್ಯ – ಮಂಕುತಿಮ್ಮ || 836 ||

ಪದ-ಅರ್ಥ: ಅಹುದದಲ್ಲವಿದೆಂಬ=ಅಹುದು+ಅದಲ್ಲ+ಇದು+ಎಂಬ, ಗುಹೆಯೊಳಿಹುದೆಲ್ಲ=ಗುಹೆಯೊಳು+ಇಹುದು+ಎಲ್ಲ,
ಬಹಿರಂತರ=ಬಹಿರ್(ಹೊರಗಿನ)+ಅಂತರ(ಒಳಗಿನ).

ವಾಚ್ಯಾರ್ಥ: ಸೃಷ್ಟಿ ಬಹಳ ರಹಸ್ಯಮಯವಾದದ್ದು ಅಂತೆಯೇ ಜೀವವೂ ರಹಸ್ಯವಾದದ್ದು. ಅದು ಅಹುದು, ಇದು ಅಲ್ಲ ಎನ್ನುವ
ವಾದಗಳೆಲ್ಲ ಕೇವಲ ಹರಟೆ. ಎಲ್ಲ ತತ್ವಗಳ ಮೂಲ ತತ್ವವೆಲ್ಲ ನಮ್ಮ ಹೃದಯದ ಆಂತರ್ಯದಲ್ಲೇ ಇದೆ. ಅದು ಒಳಗೆ- ಹೊರಗೆ ರಹಸ್ಯವೇ.

ವಿವರಣೆ: ಈ ಸೃಷ್ಟಿಯೇ ಒಂದು ಬಹು ದೊಡ್ಡ ರಹಸ್ಯ. ಇದು ಯಾಕೆ ಸೃಷ್ಟಿಯಾಯಿತು? ಇದು ಒಂದು ದಿನ ಸೃಷ್ಟಿಯಾಗಿದ್ದರೆ ಅದನ್ನು ಮಾಡಿದವರು ಯಾರು? ಕೋಟ್ಯಂತರ ವರ್ಷಗಳಿಂದ ಈ ಸೃಷ್ಟಿ ಪ್ರತಿಕ್ಷಣ ಬದಲಾಗುತ್ತಿದೆ. ಬದಲಾವಣೆಗೆ ಕಾರಣ ಏನು? ಯಾವುದಕ್ಕೂ ಸ್ಪಷ್ಟ ಉತ್ತರಗಳಿಲ್ಲ. ವಿಜ್ಞಾನ ಏನೇನೋ ಪ್ರಯೋಗಗಳನ್ನು ಮಾಡುತ್ತ, ತನಗೆ ತೋಚಿದ ಪರಿಹಾರಗಳನ್ನು ಸೂಚಿಸುತ್ತದೆ. ಇದು ಒಂದು ಭಾಗವಾದರೆ, ಜೀವ ಎಂದರೇನು? ಅದರ ಸೃಷ್ಟ್ಟಿ ಆದದ್ದು ಏಕೆ? ಆಗ ತಾನೇ ಜೀವ ತಳೆದ ನವಜಾತ ಶಿಶು, ಜೀವನ ಚಕ್ರ ಪರಿಕ್ರಮಣದ ಗಾಲಿಯಲ್ಲಿ ಸುತ್ತಿ ಸುತ್ತಿ, ಬಾಲ್ಯ, ಯೌವನ, ಪ್ರಾಯ, ವೃದ್ಧಾಪ್ಯಗಳನ್ನು ಅಪ್ಪಿಕೊಳ್ಳುತ್ತ ಇರುವಂತೆ ನೋಡಿಕೊಳ್ಳುವ ಕ್ರಮಬಂಧವೂ ಒಂದು ರಹಸ್ಯವೇ. ಹಾಗಾದರೆ ಜೀವ ಸೃಷ್ಟಿಯಲ್ಲಿ ಬ್ರಹ್ಮಾಂಡ ಸೃಷ್ಟಿಯ ರಹಸ್ಯ ಬೀಜ ಅಡಗಿದೆಯೆ? ಜೀವ ರಹಸ್ಯವನ್ನು ಒಡೆದರೆ ವಿಶ್ವರಹಸ್ಯದ ಕೀಲೀಕೈ ದೊರೆಯಬಹುದೆ? ಕಗ್ಗ ಹೇಳುತ್ತದೆ, ಈ ಚರ್ಚೆಗಳೆಲ್ಲ ಒಣ ಹರಟೆ. ಯಾಕೆಂದರೆ ಯಾವುದು ಸತ್ಯ ಎಂಬುದು ಯಾರಿಗೂ ಸ್ಪಷ್ಟವಿಲ್ಲ. ಋಗ್ವೇದದ ಹತ್ತನೇ ಮಂಡಲದ ನೂರಾ ಇಪ್ಪತ್ತೊಂಭತ್ತನೆಯ ಸೂಕ್ತವನ್ನು ನಾಸದೇಯ ಸೂಕ್ತ ಎಂದು ಕರೆಯುತ್ತಾರೆ. ‘ನ ಅಸತ್’ ಎಂಬ ನಿಷೇಧ ರೂಪದಿಂದ ಪ್ರಾರಂಭವಾಗುವ ಈ ಸೂಕ್ತವನ್ನು ‘ಸೃಷ್ಟಿಯ ಸೂಕ್ತ’ ಎಂದೂ ಕರೆಯುತ್ತಾರೆ. ಅತ್ಯಂತ ಕಾವ್ಯಾತ್ಮಕವಾದ ಈ ಸೂಕ್ತ, ಸೃಷ್ಟಿ ಆದಿಯಲ್ಲಿ ಹೇಗಿತ್ತು, ಎಂಬುದನ್ನು ಹೇಳುತ್ತದೆ. “ಸತ್ತೆಂಬುದು ಇರಲಿಲ್ಲ, ಅಸತ್ತು ಇರಲಿಲ್ಲ; ಲೋಕ, ನೀಲಿ ಆಕಾಶ, ಅವುಗಳಾಚೆ ಎಂಬುದೂ ಇರಲಿಲ್ಲ. ಮೃತ್ಯು ಇರಲಿಲ್ಲ, ಅಮರತ್ವವೂ ಇರಲಿಲ್ಲ, ರಾತ್ರಿ ಹಗಲುಗಳ ಭೇದವೂ ಇರಲಿಲ್ಲ. ನಿಶಿತ – ಕಾಣದ ಲೋಕದ ಬೀಜ, ಅದು ಕಾಲ ಚಕ್ರದ ಬೀಜ, ಋಷಿಯ ಹೃದಯದಲ್ಲಿ ಹೊಳೆದ ಮೊದಲ ಬೀಜ. ಅದನ್ನು ತಿಳಿದವರು ಯಾರು? ಏಕೆಂದು, ಹೇಗೆಂದು? ಅದು ಹುಟ್ಟಿದ ನಂತರದಲ್ಲಿ ಬಂದವರು ದೇವರುಗಳು ಎನ್ನುವಾಗ, ಅದರ ಮೂಲದ ಅರಿವು ಯಾರಿಗೆ ಇರಬಲ್ಲದು?” ಇದೇ ರಹಸ್ಯ. ಭಗವಾನ್ ರಮಣರು ಹೇಳಿದಂತೆ, “ಹೃದಯ ಕುಹರ ಮಧ್ಯೇ ಕೇವಲಂ ಬ್ರಹ್ಮಮಾತ್ರಮ್” ನಮ್ಮ ಹೃದಯದ ಗುಹೆಯಲ್ಲಿ ಇರುವುದು ಬ್ರಹ್ಮತತ್ವ ಮಾತ್ರ. ಕಗ್ಗ ಅದನ್ನು ತುಂಬ ಸುಂದರವಾಗಿ ಗುಹೆಯೊಳಗಿನ ತತ್ವ ಎನ್ನುತ್ತದೆ. ಅದೇ ಎಲ್ಲ ತತ್ವಗಳ ಮೂಲ. ನಮ್ಮ ಬಾಹ್ಯ ಮತ್ತು ಆಂತರಿಕ ಬದುಕನ್ನು ಸೇರಿಸುವ ರಹಸ್ಯವೇ ಈ ಬ್ರಹ್ಮತತ್ವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.