ಭೌತವಿಜ್ಞಾನ ವಿವರಗಳಿನೇನಾತ್ಮಂಗೆ ? |
ಪ್ರೇತ ಪ್ರಯಾಣ ಕಥೆಯೆಂತರ್ದೊಡೇನು ? ||
ಜಾತಿ ನೀತಿ ಸಮಾಜ ವರ್ಗ ಭೇದದಿನೇನು ? |
ಘಾತಿಯಿಲ್ಲಾತ್ಮಂಗೆ – ಮಂಕುತಿಮ್ಮ || 896 ||

ಪದ-ಅರ್ಥ: ವಿವರಗಳಿನೇನಾತ್ಮಂಗೆ=ವಿವರಗಳಿಂ+ಏನು+ಆತ್ಮಂಗೆ, ಪ್ರೇತಪ್ರಯಾಣಕಥೆಯೆಂತರ್ದೊಡೇನು=ಪ್ರೇತ+ಪ್ರಯಾಣ+
ಕಥೆ+ಎಂತರ್ದೊಡೆ (ಎಂತಿದ್ದರೆ)+ಏನು, ವರ್ಗಭೇದದಿನೇನು=ವರ್ಗಭೇದದಿನ್+ಏನು, ಘಾತಿಯಿಲ್ಲಾತ್ಮಂಗೆ=ಘಾತಿಯಿಲ್ಲ (ನಾಶವಿಲ್ಲ)+ಆತ್ಮಂಗೆ.

ವಾಚ್ಯಾರ್ಥ: ಭೌತವಿಜ್ಞಾನದ ವಿವರಗಳಿಂದ ಆತ್ಮನಿಗೆ ಏನು ಪ್ರಯೋಜನ? ಪ್ರೇತದ ಪ್ರಯಾಣ ಕಥೆ ಹೇಗಿದ್ದರೇನು? ಜಾತಿ, ನೀತಿ, ಸಮಾಜ, ವರ್ಗಭೇದದಿಂದ ಏನು? ಆತ್ಮನಿಗೆ ನಾಶವಿಲ್ಲ.

ವಿವರಣೆ: ಈ ಕಗ್ಗ ಮೂರು ಅವಸ್ಥೆಗಳನ್ನು ಗುರುತಿಸುತ್ತದೆ. ಒಂದು ಬದುಕಿನ ಕಥೆ, ಎರಡನೆಯದು ಮರಣಾನಂತರದ ಕಥೆ, ಮೂರನೆಯದು ಬದುಕಿನಲ್ಲಿ ವ್ಯವಸ್ಥೆಯ ಕಥೆ. ನಮ್ಮ ಬದುಕು ಇರುವುದೇ ಪ್ರಪಂಚದಲ್ಲಿ. ನಮ್ಮ ವ್ಯವಹಾರಗಳೆಲ್ಲ ಭೌತವಸ್ತುಗಳೊಡನೆ. ಪ್ರತಿಯೊಂದು ವಸ್ತುವಿಗೆ ಅದರದೇ ಆದ ಆಕಾರ, ರೂಪ, ಬಣ್ಣ, ವಾಸನೆ ಎಲ್ಲ ಇವೆ. ಅವುಗಳಿಂದಲೇ ನಮಗೆ ವಸ್ತುವಿನ ಪರಿಚಯ ಮತ್ತು ನೆನಪು. ಅವುಗಳನ್ನು ಅಳೆಯುವುದಕ್ಕೆ ನಮ್ಮಲ್ಲಿ ಮಾಪನಗಳಿವೆ.

ನಮ್ಮ ಭೌತವಿಜ್ಞಾನ ಇವುಗಳನ್ನು ಕರಾರುವಕ್ಕಾಗಿ ಹೇಳಲು ಸನ್ನದ್ಧವಾಗಿ ನಿಂತಿದೆ. ಸಣ್ಣ ಧೂಳಿಕಣದಿಂದ ಹಿಡಿದು ಸೂರ್ಯನ ಗಾತ್ರದ ವರೆಗೆ ಸ್ಪಷ್ಟ ಮಾಹಿತಿಯನ್ನು ಈ ವಿಜ್ಞಾನ ಕೊಟ್ಟಿದೆ. ಇವೆಲ್ಲ ಬೇಕಾದದ್ದು ಮನುಷ್ಯ ದೇಹಕ್ಕೆ. ಆದರೆ ಆತ್ಮನಿಗೆ ಈ ಅಳತೆ, ಸಂಬAಧಗಳಿಂದ ಏನಾಗಬೇಕು? ಅದರ ಸಂಬಂಧ ಏನಿದ್ದರೂ ಅವಿನಾಶಿಯಾದದ್ದರ ಜೊತೆಗೆ, ನಾಶವಾಗುವ ಭೌತವಸ್ತುಗಳೊಡನೆ ಅಲ್ಲ. ವ್ಯಕ್ತಿ ಸತ್ತ ಮೇಲೆ ಏನಾಗುತ್ತದೆ? ಇದರ ಬಗ್ಗೆ ಅನೇಕ ಜಿಜ್ಞಾಸೆಗಳು ಹುಟ್ಟಿಕೊಂಡಿವೆ. ಏನಾಗುತ್ತದೋ ಯಾರಿಗೆ ಗೊತ್ತು? ಹೋಗಿ ಮರಳಿ ಬಂದವರಿಲ್ಲ, ವರದಿ ಕೊಟ್ಟವರಿಲ್ಲ. ಆದರೂ ಮನುಷ್ಯನ ಮನಸ್ಸು ಕುತೂಹಲದಿಂದ ಏನೇನೋ ಊಹೆ ಮಾಡಿ ಕಥೆ ಕಟ್ಟಿ, ಆತ್ಮದ ಪ್ರಯಾಣ ಹೇಗಿರುತ್ತದೆಂದು ವರ್ಣಿಸಲು ಪ್ರಯತ್ನಿಸಿದ್ದಾರೆ. ಅದು ಹೇಗೆ ನೋವು ಪಡುತ್ತದೆ, ಕಷ್ಟವನ್ನು ಅನುಭವಿಸುತ್ತದೆ ಎಂದು ಕರಳು ಕಿವುಚುವಂಥ ವಿವರ ನೀಡಿದ್ದಾರೆ. ಆದರೆ ಕಗ್ಗ ಹೇಳುತ್ತದೆ, ಆತ್ಮನಿಗೆ ಯಾವ ನೋವೂ ಇಲ್ಲ, ಅದು ಪರಸತ್ವದ ಒಂದು ಕಿಡಿ. ಮತ್ತೆ ಪರಮಸತ್ವದಲ್ಲಿ ಕರಗಿ ಮರೆಯಾಗುವುದೇ ಅದರ ಗತಿ. ಹಾಗಿದ್ದಾಗೆ ಪ್ರೇತ ಪ್ರಯಾಣ ಕಥೆಯಿಂದ ಆತ್ಮನಿಗೆ ಆಗುವುದೇನು? ಸಮಾಜದಲ್ಲಿ ಬದುಕುವಾಗ ಜಾತಿ, ನೀತಿ, ವರ್ಗಭೇದ ಎಂಬ ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅವೆಲ್ಲ ಭೌತಕ ಪ್ರಪಂಚಕ್ಕೆ, ಈ ದೇಹಕ್ಕೆ ಸಂಬಂಧಿಸಿದವುಗಳು. ಆದರೆ ನಿರ್ಲಿಪ್ತವಾದ ಆತ್ಮಕ್ಕೆ ಇವು ಯಾವುದರ ಸಂಬಂಧವೂ ಇಲ್ಲ. ಅದಕ್ಕೆ ಕೊನೆಗೆ ಕಗ್ಗ ಘೋಷಿಸುತ್ತದೆ, “ಆತ್ಮಂಗೆ ಯಾವ ಘಾತಿಯೂ ಇಲ್ಲ. ಭೌತವಿವರಗಳಿಂದ, ಪ್ರೇತಪ್ರಯಾಣದ ಕಥೆಗಳಿಂದ, ಸಮಾಜ ವ್ಯವಸ್ಥೆಗಳಿಂದ ಆತ್ಮಕ್ಕೆ ಯಾವ ಹಾನಿಯೂ ಇಲ್ಲ. ಯಾಕೆಂದರೆ ಅದು ಇವು ಯಾವುಗಳಿಗೂ ಸಂಬಂಧಿಸಿದ್ದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.