ಮೊನ್ನೆ ಪ್ರಯಾಗರಾಜ್ನ ತ್ರಿವೇಣಿ ಸಂಗಮದ ತಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಸ-ಹೇಸಿಗೆ ಬಳಿದ ಕರ್ಮಚಾರಿಗಳ ಪಾದಗಳನ್ನು ಕೈ ಮುಟ್ಟಿ ತೊಳೆದರು. ಶುಭ್ರವಸ್ತ್ರದಿಂದ ಒರೆಸಿ ಕೃತಜ್ಞತೆ ಸಲ್ಲಿಸಿದರು. ವಿನಮ್ರತೆ- ಕೃತಜ್ಞತೆಯೇ ಮೋದಿ ರೂಪದಲ್ಲಿ ಮೈದಳೆದ ದೃಶ್ಯಾವಳಿ. ದೇಶ ನಿಬ್ಬೆರಗಾಗಿ ನೋಡಿದೆ. ಅಭಿಮಾನಿಗಳು-ಭಕ್ತರು ತಮ್ಮ ಕಣ್ಮಣಿಯನ್ನು ಕೊಂಡಾಡಿದ್ದಾರೆ. ‘ಮಹಾಮಾನವ’ ಎಂದು ಉದ್ಗರಿಸಿದ್ದಾರೆ. ಹೀಗೆ ಸಫಾಯಿ ಕರ್ಮಚಾರಿಗಳ ಪಾದಗಳನ್ನು ಕಂಚಿನ ಹರಿವಾಣಗಳಲ್ಲಿಟ್ಟು ತೊಳೆದು ಹಂಸಬಿಳುಪಿನ ವಸ್ತ್ರದಿಂದ ಒರೆಸಿದ ಪ್ರಧಾನಿ ಇತಿಹಾಸದಲ್ಲಿ ಮತ್ತೊಬ್ಬರಿಲ್ಲ.

ಮೇಲು-ಕೀಳನ್ನು ಕಲ್ಲಿನಲ್ಲಿ ಕೊರೆದಿಟ್ಟಿರುವ ಭಾರತದ ಕ್ರೂರ ಜಾತಿ ವ್ಯವಸ್ಥೆ ಅಜರಾಮರ. ಈ ಹಿನ್ನೆಲೆಯಲ್ಲಿ ಮೋದಿಯವರ ಈ ‘ಉದಾತ್ತ’ ಕ್ರಿಯೆಯಲ್ಲಿ ಸಾಂಕೇತಿಕ ಮಹತ್ವವನ್ನು ಕಂಡವರಿದ್ದಾರೆ. ಮೇಲ್ನೋಟಕ್ಕೆ ಅದು ಸಹಜ ಪ್ರತಿಕ್ರಿಯೆಯೇ ಹೌದು. ಆದರೆ, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ 18 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮೋದಿಯವರು ಕಸ ಗುಡಿಸುವವರು ಮತ್ತು ಮಲ ಬಳಿಯುವ ಮನುಷ್ಯರ ಕಷ್ಟ-ಕಣ್ಣೀರು ಒರೆಸಬೇಕಿತ್ತು. ಮಲದ ಪಾಲಾಗಿರುವ ಅವರ ಮಾನವ ಘನತೆಯನ್ನು ಎತ್ತಿ ನಿಲ್ಲಿಸಲು ಕಿಂಚಿತ್ ಕೆಲಸವನ್ನಾದರೂ ಮಾಡಬೇಕಿತ್ತು. ಅಂತಹ ಕೆಲಸದ ನಂತರ ಕಡೆಯಲ್ಲಿ ಚುನಾವಣೆ ಕದ ಬಡಿದಿದ್ದರೂ ಪರವಾಗಿಲ್ಲ, ಈ ಹೊತ್ತಿನಲ್ಲಿ ಕಾಲು ತೊಳೆದು ಕೃತಜ್ಞತೆ ಸಲ್ಲಿಸಿದ್ದರೆ ಅದು ಅರ್ಥಪೂರ್ಣ ಎನಿಸುತ್ತಿತ್ತು. ಏನೂ ಮಾಡದೆ ಕೇವಲ ಕಾಲು ತೊಳೆವುದು, ಆ ದೃಶ್ಯಾವಳಿಯ ಚಿತ್ರೀಕರಣ ಮಾಡಿಸಿ ಪ್ರಚಾರ ಪಡೆವ ಕ್ರಿಯೆ ಪೊಳ್ಳು ಎನಿಸಿಕೊಳ್ಳುತ್ತದೆ.

ಇಷ್ಟಾಗಿಯೂ ಈ ಕ್ರಿಯೆಯಲ್ಲಿ ದೇಶಕ್ಕೆ ದೇಶವೇ ಮಹಾನ್ ಎಂದು ಹಾಡಿ ಹೊಗಳುತ್ತಿರುವುದು ಕಾಲು ತೊಳೆದವರನ್ನೋ ಅಥವಾ ತೊಳೆಸಿಕೊಂಡವರನ್ನೋ? ಜುಟ್ಟಿಗೆ ಮಲ್ಲಿಗೆ ಮುಡಿಸಿಕೊಂಡವರ ಹೊಟ್ಟೆ ತುಂಬಿತೇ, ನೆತ್ತಿ ತಂಪಾಯಿತೇ, ಸಮಾಜದಲ್ಲಿ ಅಪಮಾನ-ಅವಹೇಳನ ತಗ್ಗಿತೇ? ಮೊದಲೇ ಉಜ್ಜಿ ತೊಳೆದಿದ್ದ ಸ್ವಚ್ಛ ಪಾದಗಳನ್ನು ತೊಳೆವ ಬದಲು ಮಲದ ಗುಂಡಿಗಳಲ್ಲಿ ಮೂಗಿನ ಮಟ್ಟ ಮುಳುಗಿದವರನ್ನು ಹಿಡಿದೆತ್ತಿ ಅವರ ಮೈ ತೊಳೆಯಬೇಕಿತ್ತು. ಇನ್ನು ಇಳಿಯಲು ಬಿಡೆನು ಎಂದು ಸಾರಬೇಕಿತ್ತು. ಮಲದ ಗುಂಡಿಗಳಲ್ಲಿ ವಿಷಾನಿಲ ಕುಡಿದು ಸಂಭವಿಸುವ ಸಾವಿರ ಸಾವಿರ ಸಾವುಗಳಿಗೆ ಪೂರ್ಣವಿರಾಮ ಹಾಕುವುದಾಗಿ ಪಣ ತೊಡಬೇಕಿತ್ತು. ಒಣ ಪಾಯಿಖಾನೆಗಳನ್ನು ಒಡೆದು ಹಾಕಲು ಅಂತಹ ಪಾಯಿಖಾನೆಯೊಂದನ್ನು ಸಾಂಕೇತಿಕವಾಗಿ ಒಡೆಯಲು ಹಾರೆ-ಗುದ್ದಲಿ-ಪಿಕಾಸಿಯ ಕೈಗೆ ಎತ್ತಿಕೊಳ್ಳಬೇಕಿತ್ತು.

ಈ ಬಡಪಾಯಿಗಳಿಗೆ ಮೋದಿಯವರು ಹುಸಿ ದೈವತ್ವ ಕರುಣಿಸಿದ್ದು ಇದೇ ಮೊದಲೇನೂ ಅಲ್ಲ. ‘ಸಮಾಜದ ಸಂತೋಷಕ್ಕಾಗಿ ದೇವರೇ ವಹಿಸಿದ ಕೆಲಸವಿದು ಎಂದು ಸಫಾಯಿ ಕರ್ಮಚಾರಿಗಳಿಗೆ ಯಾವುದೋ ಒಂದು ಹಂತದಲ್ಲಿ ಜ್ಞಾನೋದಯ ಆಗಿರಬೇಕು. ಶತಮಾನಗಳ ಆಂತರಿಕ ಆಧ್ಯಾತ್ಮಿಕ ಚಟುವಟಿಕೆಯಿದು. ಬೇರೆ ಕೆಲಸ ಮಾಡುವ ಆಯ್ಕೆ- ಅವಕಾಶ ಅವರ (ಸಫಾಯಿ ಕರ್ಮಚಾರಿಗಳ) ಪೂರ್ವಜರಿಗೆ ಇರಲಿಲ್ಲವೆಂದು ನಂಬುವುದು ಕಷ್ಟ’ ಎಂದು ಮೋದಿಯವರು 2007ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಹೇಳಿದ ಮಾತುಗಳು ‘ಕರ್ಮಯೋಗಿ’ ಹೆಸರಿನ ಪುಸ್ತಕದಲ್ಲಿ ಅಚ್ಚಾಗಿವೆ.

ಕಸವನ್ನೂ ಮಲವನ್ನೂ ಬಳಿಯುತ್ತಾ ಬಂದಿರುವ ಜನಸಮುದಾಯಗಳಿಗೆ ಈ ಹಿಂದಿನ ಸರ್ಕಾರಗಳು ಸುರಿಸಿದ್ದೂ ಮೊಸಳೆ ಕಣ್ಣೀರನ್ನೇ. ಆದರೆ ಪಾದ ತೊಳೆದ ಕಾರಣ ಮೋದಿಯವರು ಮಾಡಿದ್ದೇನು ಎಂಬ ವಿಚಾರದ ಚರ್ಚೆ ಅನಿವಾರ್ಯ. ಇನ್ನೇನು ಐದು ವರ್ಷಗಳು ತುಂಬಲಿರುವ ಕಾರ್ಯಾವಧಿಯಲ್ಲಿ, ಮಲ ಬಳಿಯುವವರ ಮರುವಸತಿಗೆ ಹಾಲಿ ಸರ್ಕಾರ ಒಂದೇ ಒಂದು ದಮ್ಮಡಿಯನ್ನೂ ಬಿಡುಗಡೆ ಮಾಡಿಲ್ಲ. ಅಷ್ಟೇ ಅಲ್ಲ, ಈ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು ಕೂಡ ಪೂರ್ಣವಾಗಿ ವಿನಿಯೋಗಿಸಿಲ್ಲ.

ಮಾನವ ಮಲವನ್ನು ಕೈಯಿಂದ ಬಳಿದು ಹೊತ್ತು ಸಾಗಿಸುವ ಅನಿಷ್ಟವನ್ನು ರದ್ದು ಮಾಡುವ ಮೊದಲ ಕಾಯ್ದೆ ಜಾರಿಗೆ ಬಂದದ್ದು 1933ರಲ್ಲಿ. ಅದನ್ನು ಸುಧಾರಿಸಿದ ಹೊಸ ಕಾಯ್ದೆ ಹೊರಬಿದ್ದದ್ದು 2013ರಲ್ಲಿ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, 12 ರಾಜ್ಯಗಳ 53,326 ಮಂದಿ ಈಗಲೂ ಮಾನವ ಮಲ ಬಳಿಯುತ್ತಿದ್ದಾರೆ. ದೇಶದ 600 ಜಿಲ್ಲೆಗಳ ಪೈಕಿ 121 ಜಿಲ್ಲೆಗಳಿಗೆ ಸಂಬಂಧಿಸಿದ ಅಂಕಿ-ಅಂಶವಿದು. ಉಳಿದ ಜಿಲ್ಲೆಗಳ ಲೆಕ್ಕ ಇನ್ನೂ ಹೊರಬೀಳಬೇಕಿದೆ. 2011ರ ಜನಗಣತಿಯ ಪ್ರಕಾರ, ದೇಶದಲ್ಲಿನ ಹಲವು ವಿಧದ ಒಣ ಪಾಯಿಖಾನೆಗಳ ಸಂಖ್ಯೆ 26 ಲಕ್ಷ. ಈ ಪೈಕಿ 7.94 ಲಕ್ಷ ಪಾಯಿಖಾನೆಗಳಲ್ಲಿ ಬೀಳುವ ಮಲವನ್ನು ಕೈಯಿಂದಲೇ ಬಳಿದು ಸಾಗಿಸಬೇಕು. ಇಂತಹ 5.58 ಲಕ್ಷ ಪಾಯಿಖಾನೆಗಳು ಉತ್ತರಪ್ರದೇಶದಲ್ಲಿವೆ. ದೇಶದ ಈ ಬಹುದೊಡ್ಡ ರಾಜ್ಯವನ್ನು ಆಳಿದ ಕಾಂಗ್ರೆಸ್, ಎಸ್ಪಿ, ಬಿಜೆಪಿ ಹಾಗೂ ಬಿಎಸ್ಪಿ ಸರ್ಕಾರಗಳಿಗೆ ಈ ಕಳಂಕದಿಂದ ಕೈ ಕೊಡವಿಕೊಳ್ಳಲು ಬರುವುದಿಲ್ಲ. ಹಾಗೆಯೇ ಈಗಿನ ಯೋಗಿ ಆದಿತ್ಯನಾಥರು ಈ ಕುರಿತು ಎಂದೂ ಉಸಿರೆತ್ತಿಲ್ಲ.

ಇತ್ತೀಚೆಗೆ ‘ಹೈದರಾಬಾದ್ ಮಾದರಿ’ ಎಂಬ ನೇಮಕ ಮಾದರಿ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಈ ಮಾದರಿಯಡಿ ಸಫಾಯಿ ಕರ್ಮಚಾರಿಗಳನ್ನು ಆ ಹೆಸರಿನ ಬದಲು ‘ಸ್ವಯಂಸೇವಕರು’ ಎಂದು ಕರೆಯಲಾಗುತ್ತದೆ. ಸಂಬಳದ ಬದಲು ‘ಗೌರವಧನ’ ನೀಡಲಾಗುತ್ತದೆ. ಪ್ರತಿ ಗುತ್ತಿಗೆದಾರನ ಬಳಿ 80 ಮಂದಿ ‘ಸ್ವಯಂಸೇವಕರು’. 280 ದಿನಗಳನ್ನು ಮೀರದಂತೆ ಏಳು ತಿಂಗಳ ಗುತ್ತಿಗೆ. 280 ದಿನಗಳ ಸೇವೆ ಪೂರೈಸಿದರೆ ಕೆಲಸ ಕಾಯಂ ಮಾಡುವ ಬೇಡಿಕೆ ಎದುರಿಸಬೇಕಾಗುತ್ತದೆ.

ತಿಂಗಳಿಗೆ ಕೇವಲ ಐದು ಸಾವಿರ ರೂಪಾಯಿ ನೀಡಿ ತಮ್ಮನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರಿನ 6,000 ಸಫಾಯಿ ಕರ್ಮಚಾರಿಗಳು ಎರಡು ವರ್ಷಗಳ ಹಿಂದೆ ಪ್ರತಿಭಟಿಸಿದ್ದರು. ಅತ್ಯುಚ್ಚ ಜಾತಿಗೆ ಸೇರಿದ ಸಫಾಯಿ ಕರ್ಮಚಾರಿಗಳಿದ್ದಾರೆ. ಅವರ ಸಂಬಳ 21 ಸಾವಿರ ರೂಪಾಯಿ. ಇವರು ತಿಂಗಳಿಗೆ ಐದು ಸಾವಿರ ರೂಪಾಯಿ ನೀಡಿ ದಲಿತರನ್ನು ನೇಮಕ ಮಾಡಿಕೊಂಡು ಕೆಲಸ ಮಾಡಿಸುತ್ತಾರೆ ಎಂಬ ಕಹಿ ಸತ್ಯವನ್ನು ಹೊರ ಹಾಕಿರುವವರು ಮುಂಬಯಿ ಸಫಾಯಿ ಕರ್ಮಚಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಿಲಿಂದ ರಾನಡೆ.

ಭರತ ಖಂಡದ ಯಾವ ಭಾಗವನ್ನೇ ತೆಗೆದುಕೊಳ್ಳಿ. ಕಸವನ್ನೂ ಮಲವನ್ನೂ ಬಳಿಯುವವರ ಉದ್ಯೋಗಗಳಿಗೆ ನೂರಕ್ಕೆ ನೂರರಷ್ಟು ಮೀಸಲಾತಿ ಇದೆ. ಈ ಮೀಸಲಾತಿಯ ಫಲಾನುಭವಿಗಳು ದಲಿತರು. ಮೀಸಲಾತಿ ವಿರೋಧಿಗಳ್ಯಾರೂ ಈ ಮೀಸಲಾತಿಯನ್ನು ಪ್ರಶ್ನಿಸುವುದಿಲ್ಲ. ಎರಡು ವರ್ಷಗಳ ಹಿಂದೆ ಅಹಮದಾಬಾದಿನ ಸ್ವಯಂಸೇವಾ ಸಂಸ್ಥೆಯೊಂದು ಸಫಾಯಿ ಕರ್ಮಚಾರಿಗಳ ನೇಮಕಕ್ಕೆ ಹೊರಡಿಸಿದ ಜಾಹೀರಾತು ಐತಿಹಾಸಿಕ ಕಟುಸತ್ಯಕ್ಕೆ ಕನ್ನಡಿ ಹಿಡಿದಿತ್ತು. ಬ್ರಾಹ್ಮಣ, ಕ್ಷತ್ರಿಯ, ಪಟೇಲ್, ಜೈನ, ವಣಿಯ, ಪಾರ್ಸಿ, ಸೈಯದ್, ಪಠಾಣ ಹಾಗೂ ಸಿರಿಯನ್ ಕ್ರೈಸ್ತ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ ಜಾಹೀರಾತಿಗೆ ಮೇಲ್ಜಾತಿಗಳಿಂದ ಭಾರಿ ಪ್ರತಿಭಟನೆ ವ್ಯಕ್ತವಾಯಿತು. ಜಾಹೀರಾತನ್ನು ವಾಪಸು ಪಡೆಯಬೇಕಾಯಿತು.

‘ತೊಳೆದುಕೊಳ್ಳಬೇಕಾದದ್ದು ನಿಮ್ಮ ಮಿದುಳನ್ನೇ ವಿನಾ ನಮ್ಮ ಪಾದಗಳನ್ನಲ್ಲ ಪ್ರಧಾನಿಯವರೇ. ನೀವು ಮಾಡಿರುವುದು ಅತಿದೊಡ್ಡ ಅಪಮಾನ. 1.6 ಲಕ್ಷ ಮಹಿಳೆಯರಿಂದ ಹೇಲು ಬಾಚಿಸಲಾಗುತ್ತಿದೆ. ಐದು ವರ್ಷಗಳಲ್ಲಿ ಚಕಾರ ಎತ್ತಿಲ್ಲ ನೀವು. ಎಂತಹ ನಾಚಿಕೆಗೇಡು’ ಎಂದು ಬೆಜವಾಡ ವಿಲ್ಸನ್ ಸಿಡಿದಿದ್ದಾರೆ. ಅವರಿಗೆ ದೇಶದ್ರೋಹಿ ಪಟ್ಟ ಕಟ್ಟುವ ಮುನ್ನ ಅವರ ಆಕ್ರೋಶದ ಹಿಂದಿನ ಗಾಢ ನೋವನ್ನು ಗುರುತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.