ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನರಾಜಕಾರಣ: ರಾಜ್ಯ ರಾಜಕಾರಣದ ಸೆಳೆತ ಎತ್ತ?

ಲೋಕಸಭಾ ಚುನಾವಣೆಯ ಫಲಿತಾಂಶದ ಕಾರಣದಿಂದ ಆಗಿರುವ ಪರಿಣಾಮಗಳು ಹಲವು
Published 17 ಜುಲೈ 2024, 20:43 IST
Last Updated 17 ಜುಲೈ 2024, 20:43 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆ ಆಗಿ ಸರಿಸುಮಾರು ಆರು ವಾರಗಳು ಕಳೆದಿವೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವೊಂದು ಹೆಚ್ಚಿನ ಸಾಧನೆ ತೋರಿತೇ ಅಥವಾ ಅದು ತನ್ನ ಮೈತ್ರಿ ಪಾಲುದಾರ ಪಕ್ಷದ ಆಸರೆ ಪಡೆದು ತಾನು ಗೆದ್ದೆ ಎಂಬ ಘೋಷಣೆ ಮಾಡಿತೇ ಎಂಬ ವಿಚಾರವಾಗಿ ಹಲವು ಬಗೆಯ ಚರ್ಚೆಗಳು ನಡೆದಿವೆ. ಲೋಕಸಭೆಯಲ್ಲಿ ವಿರೋಧ ಪಕ್ಷವು ಬಲಿಷ್ಠವಾಗಿದೆ ಅಂದಮಾತ್ರಕ್ಕೆ ಅಲ್ಲಿ ವಿರೋಧ ಪಕ್ಷದ ಕಾರ್ಯಗಳು ಹೆಚ್ಚು ಉತ್ತಮವಾಗಿರುತ್ತವೆ ಎಂದು ಭಾವಿಸಬಹುದೇ ಎಂಬ ಪ್ರಶ್ನೆಯೂ ಇದೆ. ಆದರೆ ಈ ಬರಹವು ಕರ್ನಾಟಕದಲ್ಲಿನ ಫಲಿತಾಂಶವು ಇಲ್ಲಿನ ರಾಜಕಾರಣದ ಮೇಲೆ ಯಾವ ಬಗೆಯ ಪರಿಣಾಮ ಬೀರುತ್ತದೆ ಎಂಬುದನ್ನು ಅವಲೋಕಿಸುತ್ತದೆ.

ಕರ್ನಾಟಕದ ಫಲಿತಾಂಶವನ್ನು ಯಾವ ಮಸೂರ ಹಿಡಿದು ವಿಶ್ಲೇಷಿಸಬಹುದು? ರಾಜ್ಯದ ಪ್ರಮುಖ ಪಕ್ಷಗಳ ಪೈಕಿ ಯಾವ ಪಕ್ಷವೂ ತಾನು ಭಾರಿ ಜಯ ಸಾಧಿಸಿದ್ದೇನೆ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ರಾಜ್ಯದ ಪ್ರಮುಖ ಪಕ್ಷಗಳು ಸಂಯಮದಿಂದ ಪ್ರತಿಕ್ರಿಯೆ ನೀಡಬೇಕಾದ ಸ್ಥಿತಿಯನ್ನು ಮತದಾರರು ಸೃಷ್ಟಿಸಿದ್ದಾರೆ. ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯನ್ನು ಭಿನ್ನವಾಗಿ ಕಾಣುವ ತಮ್ಮ ಹಿಂದಿನ ನಿಲುವಿಗೆ ಅನುಗುಣವಾಗಿಯೇ ರಾಜ್ಯದ ಮತದಾರರು ಈ ಬಾರಿಯೂ ಮತ ಚಲಾಯಿಸಿದ್ದಾರೆ.

2013ರಿಂದ ರಾಜ್ಯದಲ್ಲಿ ಮೂರು ವಿಧಾನಸಭಾ ಚುನಾವಣೆಗಳು ನಡೆದಿವೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದ ಒಂದು ವರ್ಷದ ನಂತರ ಲೋಕಸಭಾ ಚುನಾವಣೆ ನಡೆದಿದೆ. ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಒಂದು ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಅದರ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಎದುರಾಳಿ ಪಕ್ಷವು ಇಲ್ಲಿ ಹೆಚ್ಚಿನ ಸ್ಥಾನ ಗೆದ್ದುಕೊಂಡಿದೆ. ಈ ಮಾತು 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ವಿಚಾರದಲ್ಲಿಯೂ ಸತ್ಯ. ಆದರೆ ಸಾಮ್ಯತೆಯು ಇಷ್ಟಕ್ಕೇ ಕೊನೆಗೊಳ್ಳುತ್ತದೆ ಎಂಬುದು ಇಲ್ಲಿ ಮುಖ್ಯ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ ಕುಸಿಯಿತು. ರಾಜ್ಯದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದು ಬಿಜೆಪಿಯೇ ಆದರೂ ಅದು ಹಿಂದಿನ ಬಾರಿ ಗೆದ್ದಿದ್ದ 25 ಸ್ಥಾನಗಳಿಗೆ ಹೋಲಿಸಿದರೆ ಈ ಬಾರಿ ಎಂಟು ಸ್ಥಾನಗಳು ಕಡಿಮೆ ಆಗಿವೆ. ಜೆಡಿಎಸ್‌, ಹಿಂದಿನ ಬಾರಿ ಒಂದು ಸ್ಥಾನ ಗೆದ್ದಿತ್ತು.  ಈ ಬಾರಿ ಬಿಜೆಪಿಯ ರಾಜಕೀಯ ಪಾಲುದಾರ ಪಕ್ಷವಾಗಿ ಎರಡು ಸ್ಥಾನ ಗೆದ್ದುಕೊಂಡರೂ ತನ್ನ ಭದ್ರಕೋಟೆಯಾದ ಹಾಸನವನ್ನು ಉಳಿಸಿಕೊಳ್ಳಲಾಗದೆ ಭಾರಿ ಹಿನ್ನಡೆ ಕಂಡಿತು. ಕಾಂಗ್ರೆಸ್ ಪಕ್ಷವು ತನ್ನ ಸ್ಥಾನ ಗಳಿಕೆಯು ಒಂಬತ್ತು ಪಟ್ಟು ಹೆಚ್ಚಾಗಿದೆ ಎಂದು ಹೇಳಿಕೊಳ್ಳಬಹುದಾದರೂ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷವಾಗಿ ಉದ್ದೇಶಿಸಿದಷ್ಟು ಸ್ಥಾನಗಳನ್ನು (ರಾಜ್ಯದಲ್ಲಿ ಇತರರಿಗಿಂತ ಹೆಚ್ಚಿನ ಸ್ಥಾನಗಳನ್ನು) ಗೆಲ್ಲಲು ಅದಕ್ಕೆ ಆಗಲಿಲ್ಲ. ಕಾಂಗ್ರೆಸ್ಸಿನ ಸ್ಥಾನಗಳು ಹೆಚ್ಚಿದವಾದರೂ ರಾಜ್ಯದಲ್ಲಿನ ಒಟ್ಟು ಸ್ಥಾನಗಳ ಪೈಕಿ ಮೂರನೆಯ ಒಂದರಷ್ಟಕ್ಕಿಂತ ಕಡಿಮೆ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಈ ಕಾರಣಗಳಿಂದಾಗಿ, ರಾಜ್ಯದ ಮತದಾರರ ತೀರ್ಮಾನವು ಎಲ್ಲ ಪಕ್ಷಗಳಿಗೂ ಗರ್ವಭಂಗ ಉಂಟುಮಾಡಿದೆ.

ಮೊದಲು ಕಾಂಗ್ರೆಸ್ಸಿನ ಬಗ್ಗೆ ನೋಟ ಹರಿಸೋಣ. ಆಡಳಿತಾರೂಢ ಪಕ್ಷವಾದ ಕಾಂಗ್ರೆಸ್, ರಾಜ್ಯದಲ್ಲಿ ತಾನು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಮತ ಯಾಚಿಸಿತು. ಗ್ಯಾರಂಟಿಗಳ ಕಾರಣದಿಂದಾಗಿ ಪಕ್ಷವು ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿತು ಎಂದು ವಾದಿಸಬಹುದು. ಹೀಗಿದ್ದರೂ ಫಲಿತಾಂಶವು ಪಕ್ಷದಲ್ಲಿನ ಭಿನ್ನಮತವು ಬಹಿರಂಗವಾಗಿ ವ್ಯಕ್ತವಾಗುವಂತೆ ಮಾಡಿತು. ತಮಗೆ ವಹಿಸಿದ್ದ
ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವಂತೆ ನೋಡಿಕೊಳ್ಳಲು ಹಲವು ಸಚಿವರಿಗೆ ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಹಲವು ಸಚಿವರಿಗೆ, ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲೇ ಪಕ್ಷದ ಅಭ್ಯರ್ಥಿಗೆ ಮುನ್ನಡೆ ಕೊಡಿಸಲು ಸಾಧ್ಯವಾಗಲಿಲ್ಲ. ಹಿನ್ನಡೆಗೆ ಅವರನ್ನು ಉತ್ತರದಾಯಿ ಆಗಿಸಬೇಕು ಎಂಬ ಬೇಡಿಕೆಯು ಹೆಚ್ಚೆಚ್ಚು ಬಲವಾಯಿತು. ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದಾಗ ಪಕ್ಷದ ಹೈಕಮಾಂಡ್, ಒಂದು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿ ಅಧಿಕಾರ ಹಂಚಿಕೆಯ ಸೂತ್ರವನ್ನು ಸಿದ್ಧಪಡಿಸಿತ್ತು. ಉಪಮುಖ್ಯಮಂತ್ರಿ ಹುದ್ದೆ ಒಂದೇ ಇರಬೇಕು ಎಂದು ಆಗ ಹೇಳಲಾಗಿತ್ತು. ಲೋಕಸಭಾ ಚುನಾವಣೆಯ ನಂತರ ಸರ್ಕಾರದ ನಾಯಕತ್ವ ಬದಲಾಗಬೇಕು ಎಂಬ ಮಾತುಗಳು ಇದ್ದವಾದರೂ ಫಲಿತಾಂಶವು ಹೇಗಿದೆಯೆಂದರೆ, ಯಾವ ನಾಯಕನಿಗೂ ತಾನು ಗೆದ್ದೆ ಎಂದು ಹೇಳಲಾಗದ ಸ್ಥಿತಿ ಇದೆ. 

ರಾಜ್ಯದ ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೆ ಅಸಮಾಧಾನಗೊಂಡಿದ್ದವರು ಈಗ ಸಂಪುಟ ಪುನರ್‌ರಚನೆ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ಇಲ್ಲಿ ಯಥಾಸ್ಥಿತಿ ಮುಂದುವರಿಯಲಿ, ಆಡಳಿತದ ಬಗ್ಗೆ ಹೆಚ್ಚು ಗಮನ ಕೊಡಿ ಎಂಬ ಸೂಚನೆ ರವಾನಿಸುವ ಮೂಲಕ ಪಕ್ಷದ ಹೈಕಮಾಂಡ್‌ ಕದನ ವಿರಾಮವೊಂದನ್ನು ಸಾಧ್ಯವಾಗಿಸಿದಂತಿದೆ. ಆದರೂ ತೆರೆಯ ಹಿಂದೆ ಗುದ್ದಾಟ ಮುಂದುವರಿದಿದೆ. ಒಬಿಸಿ ಸಮುದಾಯಗಳಲ್ಲಿ ಪ್ರಬಲವಲ್ಲದ ಜಾತಿಗಳ ಮತವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಲು ಕಾಂಗ್ರೆಸ್ಸಿಗೆ ಆಗಿಲ್ಲ ಎಂಬುದನ್ನು ಲೋಕನೀತಿ ಸಂಸ್ಥೆ ನಡೆಸಿದ ಮತದಾನೋತ್ತರ ಸಮೀಕ್ಷೆಯು ಕಂಡುಕೊಂಡಿದೆ.

ಬಿಜೆಪಿಯು ತಾನು ಈಗ ಪಡೆದಿರುವುದಕ್ಕಿಂತ ಹೆಚ್ಚಿನ ಸ್ಥಾನಗಳ ನಿರೀಕ್ಷೆಯಲ್ಲಿತ್ತು. ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದು ಪಕ್ಷದ ರಾಜ್ಯ ನಾಯಕತ್ವಕ್ಕೆ ಒಂದಿಷ್ಟು ಸಮಾಧಾನ ತಂದಿದೆ. ಆದರೆ, ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತೆ ಕಾಣಿಸಿಕೊಂಡಿವೆ. ರಾಜ್ಯದಲ್ಲಿ ಎರಡನೆಯ ಹಂತದಲ್ಲಿ ಮತದಾನ ನಡೆದ ಕ್ಷೇತ್ರಗಳಲ್ಲಿ (ಇಲ್ಲಿ ಬಿಜೆಪಿ ಪ್ರಬಲವಾಗಿದೆ) ಆಗಿರುವ ಹಿನ್ನಡೆಗೆ ಹೊಣೆ ನಿಗದಿ ಮಾಡಬೇಕು ಎಂಬ ಬೇಡಿಕೆಗಳು ಪಕ್ಷದಲ್ಲಿ ಬಂದಿವೆ. ಲಿಂಗಾಯತ ಸಮುದಾಯದ ಮತಗಳ ಪೈಕಿ ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿದ್ದರೂ ಪರಿಶಿಷ್ಟ ಸಮುದಾಯದ ಮತಗಳನ್ನು ಪಡೆಯುವಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗಿಂತ ಹಿಂದುಳಿದಿದೆ ಎಂಬುದನ್ನು ಲೋಕನೀತಿ ಸಮೀಕ್ಷೆಯು ತಿಳಿಸಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವು ಈಗಲೇ ತಯಾರಿ ಶುರು ಮಾಡಬೇಕಿದೆ. ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಪಕ್ಷವು ರಚನಾತ್ಮಕ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಿದೆ. ಪಕ್ಷದ ನಾಯಕರು ಸಿದ್ಧತೆಯೊಂದಿಗೆ ಕೆಲಸ ಮಾಡಬೇಕಿದೆ. 

ಜೆಡಿಎಸ್ ಪಕ್ಷದ ನಾಯಕರಿಗೆ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಪ್ರಮುಖ ಖಾತೆ ದೊರೆತಿದೆ. ಇದನ್ನು ಪಕ್ಷವು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತದೆ, ರಾಜ್ಯದಲ್ಲಿ ಪಕ್ಷದ ನೆಲೆಯನ್ನು ಹೇಗೆ ಗಟ್ಟಿ ಮಾಡಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. 

ಆದರೆ, ಪಕ್ಷದಲ್ಲಿನ ಆಂತರಿಕ ಕಚ್ಚಾಟ ಹಾಗೂ ಜೆಡಿಎಸ್‌ನ ಪ್ರಮುಖ ಕುಟುಂಬವು ಚುನಾವಣೆಯ ಸಂದರ್ಭದಲ್ಲಿ ಎದುರಿಸಿದ ಮುಜುಗರದ ಪರಿಸ್ಥಿತಿಯು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಉಂಟುಮಾಡಿರುವಂತಿದೆ. ಕೇಂದ್ರದಲ್ಲಿನ ಅಧಿಕಾರ ಹಂಚಿಕೆಯ ಭಾಗವಾಗಿ ತನಗೆ ಸಿಕ್ಕಿರುವ ಖುಷಿಯನ್ನು ಜೆಡಿಎಸ್ ನಾಯಕತ್ವವು ಅನುಭವಿಸುತ್ತ ಕಾಲ ಕಳೆಯುತ್ತದೆಯೋ ಅಥವಾ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಕಟ್ಟಲು ಆದ್ಯತೆ ನೀಡುತ್ತದೆಯೋ? ಪಕ್ಷದ ಪ್ರಮುಖ ಕುಟುಂಬದ ಯುವಕರನ್ನು ಸುತ್ತಿಕೊಂಡಿರುವ ವಿವಾದಗಳಿಂದ ಪಕ್ಷವು ಹೊರಬರಲಿದೆಯೋ?

ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರದಲ್ಲಿಯೇ ನಡೆಯಲಿರುವ ಉಪಚುನಾವಣೆಯು ರಾಜಕೀಯ ಗಮನವನ್ನು ಸೆಳೆಯಲಿದೆ. ಮುಂದಿನ ಚುನಾವಣಾ ಕದನದವರೆಗೆ ರಾಜಕೀಯ ಪಕ್ಷಗಳು, ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಉಂಟಾಗಿರುವ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಿ
ಕೊಳ್ಳಲು ಗಮನ ನೀಡಲಿವೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT