ಇಲ್ಲಿ ಹೊಸ ಹುಡುಗರು ನ್ಯಾಯ ಕೇಳುತ್ತಿದ್ದಾರೆ. ವಿದ್ಯಾವಂತ ಹುಡುಗಿಯರು ಬಂಡೆದ್ದಿದ್ದಾರೆ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಅಪರಾಧ ಮಾಡಿದವರು, ಯಾವ ಅಪರಾಧವನ್ನೂ ಮಾಡದಿರುವವರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡುತ್ತಿರುವವರು ಕೈದಿಗಳಿಗಿಂತ ಭೀಕರ ತಪ್ಪುಗಳನ್ನು ಮಾಡಿದ್ದಾರೆ. ಆಡಳಿತದ ಆಯಕಟ್ಟಿನಲ್ಲಿರುವವರು ಅಧಿಕಾರ, ಸಂಬಳ, ಲಂಚ, ರುಷುವತ್ತುಗಳನ್ನು ಕಾಯ್ದುಕೊಳ್ಳುವುದರಲ್ಲೇ ತಲ್ಲೀನರಾಗಿದ್ದಾರೆ. ಪೊಲೀಸರು ಹಿಂಸೆಯ ಹೊಸಹೊಸ ರೂಪಗಳನ್ನು ಕಂಡುಹಿಡಿದು ಪ್ರಯೋಗಿಸುತ್ತಿದ್ದಾರೆ. ‘ಜೈಲಿನಲ್ಲಿರುವವರಿಗೆ ಶಿಕ್ಷೆ ಕೊಡಲು ಜೈಲಿನ ಹೊರಗಿರುವ ನಮಗೆ ಹಕ್ಕೇನಿದೆ?’ ಎಂಬ ಪ್ರಶ್ನೆ ‘ರೆಸರೆಕ್ಷನ್’ (ಮರುಹುಟ್ಟು) ಕಾದಂಬರಿಯಲ್ಲಿ ಮತ್ತೆಮತ್ತೆ ಎದುರಾಗುತ್ತದೆ. 1899ರಲ್ಲಿ ಟಾಲ್‌ಸ್ಟಾಯ್ ಬರೆದ ಕೊನೆಯ ಕಾದಂಬರಿಯಲ್ಲಿ ಹಬ್ಬಿರುವ ವ್ಯಗ್ರತೆಯು ಇಂಡಿಯಾ ಸೇರಿದಂತೆ ಎಲ್ಲ ದೇಶಗಳ ಇವತ್ತಿನ ಸ್ಥಿತಿಯನ್ನೂ ಹೇಳುತ್ತಿದೆ ಅನ್ನಿಸತೊಡಗುತ್ತದೆ.

‘ರೆಸರೆಕ್ಷನ್’ ಕಾದಂಬರಿಯ ಕೇಂದ್ರ ಪಾತ್ರ 35ರ ಹರೆಯದ ಸೂಕ್ಷ್ಮ ಮನಸ್ಸಿನ ಸಿರಿವಂತ ನೆಕ್ಲುಡೋಫ್; ಆದರೆ ಗಿರಾಕಿಯೊಬ್ಬನಿಗೆ ವಿಷವಿಕ್ಕಿದ ಆಪಾದನೆಯ ಮೇಲೆ ವಿಚಾರಣೆ ಎದುರಿಸುತ್ತಿರುವ ಮಾಸ್ಲೋವಾ, ಕಾದಂಬರಿಯ ನಿಜವಾದ ಕೇಂದ್ರ ಪಾತ್ರ. ಇದು 19ನೇ ಶತಮಾನದ ಝಾರ್ ದೊರೆಯ ರಷ್ಯಾ. ಇಲ್ಲಿನ ನ್ಯಾಯಾಲಯಗಳ ನ್ಯಾಯಮಂಡಳಿಗಳಲ್ಲಿ ಸಮಾಜದ ಗಣ್ಯರೆನಿಸಿಕೊಂಡವರು ಸದಸ್ಯರು. ಮಾಸ್ಲೋವಾ ಕೇಸಿನ ದಿನ ನ್ಯಾಯ ನೀಡಲಿರುವ ಗಣ್ಯರಿಗೆ ‘ತುರ್ತು’ ಕೆಲಸಗಳಿವೆ. ಮಂಡಳಿಯ ಅಧ್ಯಕ್ಷನಿಗೆ ತನ್ನ ಪ್ರೇಯಸಿಯನ್ನು ಕಾಣಲು ಹೊರಡುವ ಕಾತರ. ಬೆಳಗಿನ ಜಾವದ ತನಕ ಪಾರ್ಟಿಯೊಂದರಲ್ಲಿ ಕುಡಿದು ಇಸ್ಪೀಟಾಡುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಮಾಸ್ಲೋವಾ ಕೇಸಿನ ಎಳೆಗಳೇ ಸ್ಪಷ್ಟವಿಲ್ಲ. ಬ್ರ್ಯಾಂಡಿಯ ಸುವಾಸನೆ ಬೀರುವ ಮತ್ತೊಬ್ಬ ಸದಸ್ಯನಿಗೆ ಬಾಯಿಗೆ ಬಂದದ್ದನ್ನು ಹೇಳುವ ಚಪಲ...

ನ್ಯಾಯಮಂಡಳಿಯಲ್ಲಿ ಇಂಥ ಬೂಟಾಟಿಕೆ ಗಣ್ಯರ ಜೊತೆ ಕೂತು ಚಡಪಡಿಸುತ್ತಿರುವ ನೆಕ್ಲುಡೋಫ್ ತನ್ನ ಕಾಲದ ಕ್ರಾಂತಿಕಾರಿ ಚಿಂತನೆಗೆ ತಕ್ಕಂತೆ ‘ಭೂಮಿ ಎಲ್ಲರಿಗೂ ಸೇರಿದ್ದು; ಅದು ಖಾಸಗಿ ಸ್ವತ್ತಲ್ಲ’ ಎಂದು ತೀರ್ಮಾನಿಸಿರುವ ಹೊಸ ಕಾಲದ ವ್ಯಕ್ತಿ. ತಂದೆಯಿಂದ ಬಂದ ಸಾವಿರಾರು ಎಕರೆ ಭೂಮಿಯನ್ನು ರೈತರಿಗೆ ಹಂಚಿರುವ ನೆಕ್ಲುಡೋಫ್, ತಾಯಿಯಿಂದ ಬಂದಿರುವ ಸಾವಿರಾರು ಎಕರೆಯನ್ನೂ ರೈತರಿಗೆ ಹಂಚಲಿರುವವನು. ಮಾಸ್ಲೋವಾ ಕೋರ್ಟಿಗೆ ಬಂದಾಗ ಗಂಡಸರೆಲ್ಲ ಅವಳ ಸೌಂದರ್ಯ ಕಂಡು ಬಾಯಿಬಾಯಿ ಬಿಡುತ್ತಿದ್ದರೆ, ನೆಕ್ಲುಡೋಫ್ ಅವಳನ್ನು ನೋಡಿ ಬೆಚ್ಚಿ ಬೀಳುತ್ತಾನೆ. ತಾನು ಹರೆಯದಲ್ಲಿ ಪ್ರೇಮಿಸಿ ಕೈಬಿಟ್ಟು ಹೋದ ಕಟುಶಾಳೇ ಮಾಸ್ಲೋವಾ ಎಂಬ ಸತ್ಯ ಅವನ ಮುಖಕ್ಕೆ ರಾಚುತ್ತದೆ. ಅದು ಅವನ ಜ್ಞಾನೋದಯದ ಮೊದಲ ಘಟ್ಟ. ಆ ಕೇಸಿನಲ್ಲಿ ಮಾಸ್ಲೋವಾ ನಿರಪರಾಧಿ ಎಂಬುದು ಗೊತ್ತಾಗಿ, ಆಕೆಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಾನೆ; ಹೃದಯಹೀನ ನ್ಯಾಯಮಂಡಳಿ ಅವಳಿಗೆ ನಾಲ್ಕು ವರ್ಷ ಸೈಬೀರಿಯಾ ಜೈಲುವಾಸದ ಶಿಕ್ಷೆ ಕೊಡುತ್ತದೆ. ನೆಕ್ಲುಡೋಫ್ ಅವಳ ಪರವಾಗಿ ಅಪೀಲು ಸಲ್ಲಿಸುತ್ತಾನೆ. ಜೈಲಿನಲ್ಲಿ ಮಾಸ್ಲೋವಾಳನ್ನು ಕಂಡು, ಕಾನೂನು ಹೋರಾಟ ಮಾಡಿ ಅವಳನ್ನು ಬಿಡಿಸಲು ಹೊರಡುತ್ತಾನೆ; ಅವಳನ್ನೇ ಮದುವೆಯಾಗಲು ಸಿದ್ಧನಿದ್ದಾನೆ. ಇಲ್ಲಿಂದಾಚೆಗೆ ಅವನಿಗೆ ನಿಜವಾದ ರಷ್ಯಾದ ದರ್ಶನವಾಗುತ್ತದೆ:

ಆ ಜೈಲಿನಲ್ಲಿರುವ ಯಾರ ಕತೆ ಕೇಳಿದರೂ ಅವೆಲ್ಲ ಜೈಲಿನ ಹೊರಗೆ ಇರುವವರು ಮಾಡಿರುವ ‘ಅಪರಾಧ’ಗಳಂತೆಯೇ ಕಾಣುತ್ತವೆ. ನೆಕ್ಲುಡೋಫ್‌ನ ಬೇಜವಾಬ್ದಾರಿತನದಿಂದ ಮಾಸ್ಲೋವಾ ಹೆತ್ತ ಮಗು ಆರೈಕೆಯಿಲ್ಲದೆ ತೀರಿಕೊಂಡಿದೆ. ಮಾಸ್ಲೋವಾ ವೇಶ್ಯೆಯಾಗಿ ಬದುಕು ನೂಕಿ, ಕೇಸೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದಾಳೆ. ಇವನ್ನೆಲ್ಲ ನೋಡುತ್ತಾ ತನ್ನನ್ನೂ ಸಮಾಜವನ್ನೂ ಪರೀಕ್ಷೆಗೆ ಒಳಪಡಿಸುವ ನೆಕ್ಲುಡೋಫ್‌ಗೆ ನಾಡಿನ ಪ್ರಭುತ್ವ, ಧರ್ಮ, ಅಧಿಕಾರಿ ವರ್ಗ, ಪೊಲೀಸ್ ವ್ಯವಸ್ಥೆ ಎಲ್ಲವೂ ಒಂದಾಗಿ ತಂತಮ್ಮ ವರ್ಗಗಳ
ಹಿತರಕ್ಷಣೆಗಾಗಿ ಇಡೀ ನಾಡನ್ನೇ ಜೈಲಾಗಿಸಿರುವ ರೀತಿ ಹತ್ತಿರದಿಂದ ಕಾಣತೊಡಗುತ್ತದೆ.

ಇತ್ತ ಜೈಲಿನ ಹೊರಗಿರುವ ರೈತರ, ಮಹಿಳೆಯರ ಬಡತನ, ಅಸಹಾಯಕತೆಗಳಿಗೂ ಜೈಲಿನಲ್ಲಿರುವ ನಿರ್ಗತಿಕರ ಸ್ಥಿತಿಗೂ ಅಂಥ ವ್ಯತ್ಯಾಸವಿಲ್ಲ. ಈ ಅನ್ಯಾಯಗಳ ವಿರುದ್ಧ ದನಿಯೆತ್ತುತ್ತಿರುವ ಲಿಬರಲ್ ಹುಡುಗ ಹುಡುಗಿಯರು ರಾಜಕೀಯ ಕೈದಿಗಳಾಗಿ ಜೈಲಿನಲ್ಲಿದ್ದರೂ ಅವರ ಚೈತನ್ಯ ಮಾತ್ರ ಬತ್ತಿಲ್ಲ. ನೆಕ್ಲುಡೋಫ್‌ಗೆ ತಾನು ಇವರೆಲ್ಲರ ಜೊತೆ ನಿಲ್ಲಬೇಕೆಂಬುದು ಸ್ಪಷ್ಟವಾಗತೊಡಗುತ್ತದೆ. ಆದರೂ ಅವನಿಗೆ ಈ ಹುಡುಗ, ಹುಡುಗಿಯರ ಬಗೆಗೆ ಅನುಮಾನಗಳಿವೆ. ಯಾಕೆಂದರೆ, ಮನುಷ್ಯ ತಾನು ಯಾವ ವರ್ಗದ ಭಾಗಿಯಾಗಿದ್ದಾನೋ ಆ ವರ್ಗದ ಧೋರಣೆಗಳು ಅವನನ್ನು ನಿಯಂತ್ರಿಸುತ್ತಲೇ ಇರುತ್ತವೆ. ತನ್ನ ಪ್ರಜ್ಞೆಯಲ್ಲಿ ದೊಡ್ಡ ಪಲ್ಲಟವಾಗದೆ ನೆಕ್ಲುಡೋಫ್ ವರ್ಗಧೋರಣೆಗಳನ್ನು ಮೀರಲಾರ.

ಈ ಸ್ಥಿತಿಗಳನ್ನೆಲ್ಲ ಟಾಲ್‌ಸ್ಟಾಯ್ ಸ್ವತಃ ಹಾದು ಬಂದವನು. ತನ್ನ ಕೊನೆಯ ಕಾದಂಬರಿ ಬರೆಯುವ ಹೊತ್ತಿಗೆ ಎಪ್ಪತ್ತು ತಲುಪಿದ್ದ ಟಾಲ್‌ಸ್ಟಾಯ್ ಹಿರೀಕರಿಂದ ಬಂದ ಸಾವಿರಾರು ಎಕರೆ ಜಮೀನನ್ನು ತ್ಯಜಿಸಹೊರಟು ತನ್ನ ಕುಟುಂಬದ ವಿರೋಧ ಎದುರಿಸಿದವನು. ಅದೇ ಆಗ ಬೀಸುತ್ತಿರುವ ಕಮ್ಯುನಿಸಮ್ಮಿನ ಗಾಳಿಯ ಬಗ್ಗೆ ಅವನಲ್ಲಿ ಅನುಮಾನ, ಆತಂಕಗಳಿವೆ; ಆದರೆ ಭೂಮಿಯ ಬಗ್ಗೆ, ಖಾಸಗಿ ಸ್ವತ್ತಿನ ಬಗ್ಗೆ ಕಮ್ಯುನಿಸ್ಟರು ಎತ್ತುತ್ತಿರುವ ಪ್ರಶ್ನೆಗಳು ಅವನೊಳಗಿನಿಂದಲೂ ಮೂಡಿವೆ. ಬರಬರುತ್ತಾ ಅವನಿಗೆ ಭೂಮಾಲೀಕರು, ಶ್ರೀಮಂತರು ಹಾಗೂ ರಾಜಪ್ರಭುತ್ವಗಳ ಹಿಡಿತಗಳ ವಿರುದ್ಧ ಪ್ರಶ್ನೆಯೆತ್ತಿರುವ ಕಮ್ಯುನಿಸಮ್ಮಿನ ಕಾಲದಲ್ಲಿ ರಷ್ಯಾದ ಅಸಮಾನತೆಗಳು, ರಾಜಕೀಯ ಪ್ರಶ್ನೆಗಳು, ನ್ಯಾಯದ ಪ್ರಶ್ನೆಗಳು ಗೋಚರವಾಗತೊಡಗುತ್ತವೆ; ಈ ಪ್ರಶ್ನೆಗಳು ಮಾಸ್ಲೋವಾಳ ಪರ ಕಾನೂನು ಹೋರಾಟದಲ್ಲಿ ಮತ್ತೆ ಮತ್ತೆ ಜೈಲಿಗೆ ಭೇಟಿ ಕೊಡುವ ನೆಕ್ಲುಡೋಫ್‌ಗೂ ಅರ್ಥವಾಗತೊಡಗುತ್ತವೆ. ಮಾಸ್ಲೋವಾಳನ್ನು ಬಿಡಿಸುವ ಪ್ರಯತ್ನ ಕೈಗೂಡದೆ, ಅವಳ ಜೈಲುಶಿಕ್ಷೆ ಮುಗಿಯುವವರೆಗೂ ತಾನೂ ಸೈಬೀರಿಯಾದಲ್ಲಿದ್ದು, ನಂತರ ಅವಳನ್ನು ಮದುವೆಯಾಗಲು ಕೈದಿಗಳ ಜೊತೆಗೇ ಸೈಬೀರಿಯಾಕ್ಕೆ ಹೊರಡುತ್ತಾನೆ. ಆ ದೀರ್ಘ ಪ್ರಯಾಣದಲ್ಲಿ ಒಂದು ಕರ್ತವ್ಯಭ್ರಷ್ಟ ವ್ಯವಸ್ಥೆ ತಾನೇ ಜನರನ್ನು ಅಪರಾಧಿಗಳನ್ನಾಗಿಸಿ, ಶಿಕ್ಷೆ ಕೊಡುವ ಧೂರ್ತ ಮುಖಗಳು ಕಾಣತೊಡಗು ತ್ತವೆ. ಕೊನೆಗೆ ಅಪೀಲೊಂದರಲ್ಲಿ ಮಾಸ್ಲೋವಾಗೆ ಬಿಡುಗಡೆ ದೊರೆತರೂ, ಬಿಡುಗಡೆಯಾಗಲೊಲ್ಲದೆ ಜೈಲಿನಲ್ಲೇ ಉಳಿಯುತ್ತಾಳೆ. ರಾಜಕೀಯ ಹೋರಾಟದಲ್ಲಿ ಭಾಗಿಯಾಗಿ ಸೈಬೀರಿಯಾ ಜೈಲಿಗೆ ಹೊರಟಿರುವ ಹೋರಾಟಗಾರನನ್ನೇ ಮದುವೆಯಾಗಲು ನಿರ್ಧರಿಸುವ ಮಾಸ್ಲೋವಾ, ನೆಕ್ಲುಡೋಫ್‌ಗೆ ವಿದಾಯ ಹೇಳುತ್ತಾಳೆ. ತಾರುಣ್ಯದಲ್ಲಿ ಸುಖ, ಸವಲತ್ತುಗಳನ್ನು ಅನುಭವಿಸಿ, ನಂತರ ವಿಷಾದ, ನಿರಾಶೆಗಳನ್ನು ಹಾದು ಹೋಗುತ್ತಿರುವ ನೆಕ್ಲುಡೋಫ್, ಟಾಲ್‌ಸ್ಟಾಯ್ ಸೃಷ್ಟಿಸಿದ ರಷ್ಯನ್ ಬುದ್ಧನಂತೆ ಕಾಣತೊಡಗುತ್ತಾನೆ.

ನೂರಿಪ್ಪತ್ತು ವರ್ಷಗಳ ಹಿಂದಿನ ಕಾದಂಬರಿಯೊಂದನ್ನು ಈಗ ಚರ್ಚಿಸಲು ಕಾರಣಗಳಿವೆ: ಕ್ರಾಂತಿಗಿಂತ ಹಿಂದಿನ ದಶಕಗಳ ರಷ್ಯನ್ ಸಮಾಜವನ್ನು ಪ್ರಾಮಾಣಿಕವಾಗಿ, ನಿಷ್ಠುರವಾಗಿ ನೋಡುತ್ತಿದ್ದ ಟಾಲ್‌ಸ್ಟಾಯ್ ಸ್ವಂತದ ಸುಳ್ಳುಗಳನ್ನು ಸೀಳಿ ನೋಡಿಕೊಂಡು, ತನ್ನ ವ್ಯಕ್ತಿತ್ವವನ್ನೇ ತೀವ್ರ ಪರೀಕ್ಷೆಗೆ ಒಳಪಡಿಸಿ, ಲೋಕವನ್ನೂ ಪರೀಕ್ಷಿಸಿದ; ತನ್ನ ಕಾಲದ ವಿರೋಧಾಭಾಸಗಳು, ನಿಯಂತ್ರಣ, ದಮನಗಳನ್ನು ಕಂಡು ಅವನು ಬರೆದ ‘ರೆಸರೆಕ್ಷನ್’ ಇವತ್ತಿನ ನೂರಾರು ದೇಶಗಳ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.

ನೂರು ವರ್ಷಗಳ ಕೆಳಗೆ ಲೆನಿನ್, ‘ಭೂಮಾಲೀಕ ವರ್ಗದ ವಿರೋಧಾಭಾಸಗಳನ್ನು ಅರಿಯಲು ಭೂಮಾಲೀಕ ಟಾಲ್‌ಸ್ಟಾಯ್ ಕಾದಂಬರಿಗಳನ್ನು ಓದಿ’ ಎಂದು ಕಮ್ಯುನಿಸ್ಟ್ ಕಾರ್ಯಕರ್ತರಿಗೆ ಹೇಳಿದ್ದ. ‘ಟಾಲ್‌ಸ್ಟಾಯ್ ರಷ್ಯನ್ ಕ್ರಾಂತಿಯ ಕನ್ನಡಿ’ ಎಂದಿದ್ದ. ಇವತ್ತು ಈ ಕನ್ನಡಿ ಎಲ್ಲ ರೀತಿಯ ಆಳ್ವಿಕೆಗಳ ಕ್ರೌರ್ಯವನ್ನೂ ಬಿಂಬಿಸುವಂತಿದೆ. ಕಮ್ಯುನಿಸ್ಟ್ ದೇಶಗಳಾದ ಚೀನಾ, ರಷ್ಯಾ, ಕ್ಯೂಬಾಗಳಿರಲಿ,
‘ಪ್ರಜಾಪ್ರಭುತ್ವ’ ರಾಷ್ಟ್ರಗಳೆಂದುಕೊಂಡಿರುವ ಇಂಡಿಯಾ, ಅಮೆರಿಕ, ಇಸ್ರೇಲ್, ನೈಜೀರಿಯಾಗಳಿರಲಿ, ನಾಡನ್ನೇ ಜೈಲಾಗಿಸುವ ಕ್ರೂರ ಮನಸ್ಸುಗಳು ಎಲ್ಲೆಡೆ ಇರುತ್ತವೆ; ಜೊತೆಗೆ, ನಾಡನ್ನು ಪೊರೆಯುವ ತಲೆಮಾರುಗಳೂ ಸೃಷ್ಟಿಯಾಗುತ್ತಿರುತ್ತವೆ ಎಂಬುದನ್ನು ಕಾದಂಬರಿ ತೋರಿಸು ತ್ತದೆ. ಶೇಕ್‌ಸ್ಪಿಯರ್ ನಂತರ ಜಗತ್ತಿನ ಬಹುದೊಡ್ಡ ಲೇಖಕನಾದ ಟಾಲ್‌ಸ್ಟಾಯ್ ಕೊಟ್ಟಿರುವ ಕನ್ನಡಿಯಲ್ಲಿ ತೆರೆದ ಮನಸ್ಸಿನಿಂದ ಇಣುಕಬಲ್ಲವರಿಗೆಲ್ಲ ತಂತಮ್ಮ ದೇಶಗಳ ನಗ್ನ ಸತ್ಯಗಳು, ಕ್ರೂರ ಮುಖಗಳು ಕಾಣಬಲ್ಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.