‘ಮೈಕ್ ಬಿಟ್ಟು ಪೆನ್ನು ಕೈಗೆತ್ತಿಕೊಳ್ಳಲಿ.’

ಪಠ್ಯಪುಸ್ತಕ ಪರಿಷ್ಕರಣೆಯ ರೀತಿನೀತಿ ಕುರಿತು ಆಕ್ಷೇಪ ಎತ್ತಿ, ತಮ್ಮ ಬರಹವನ್ನು ಪಠ್ಯದಿಂದ ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವ ದೇವನೂರ ಮಹಾದೇವ ಅವರಿಗೆ ಸಂಸದ ಪ್ರತಾಪ್ ಸಿಂಹ ನೀಡಿರುವ ಸಲಹೆಯಿದು. ಪಠ್ಯ ಪರಿಷ್ಕರಣೆಯ ಓರೆಕೋರೆಗಳ ಬಗ್ಗೆ ಮಾತನಾಡಿರುವ ಮಹಾದೇವ ಹಾಗೂ ಇತರರು ಮೈಕಾಸುರರಂತೆ ವರ್ತಿಸುತ್ತಿದ್ದಾರೆ ಎನ್ನುವ ಮಾತನ್ನೂ ಆಡಿರುವ ಅವರು, ಹೊಸ ಅಸುರಪೀಳಿಗೆಯನ್ನು ‘ವೈಚಾರಿಕ ನಪುಂಸಕರು’ ಎಂದು ಹೆಸರಿಸಿದ್ದಾರೆ.

ಸಂಸದರ ಮಾತುಗಳನ್ನು ಹೇಗೆ ಅರ್ಥ ಮಾಡಿ ಕೊಳ್ಳುವುದು? ಎರಡು ಸಾಧ್ಯತೆಗಳಿವೆ: ಒಂದು, ಸಾಹಿತ್ಯ ರಚನೆ ಮಾಡುತ್ತ ಓದುಗರನ್ನು ರಂಜಿಸುವುದಷ್ಟೇ ಬರಹ ಗಾರನ ಕೆಲಸ ಎಂದು ಭಾವಿಸಿರುವವರಿಗೆ ಸಾಮಾಜಿಕ ಸಂಗತಿಗಳ ಬಗ್ಗೆ ಲೇಖಕ ಮಾತನಾಡಿದಾಗ ಅಸಹನೆ ಉಂಟಾಗುವುದು. ಎರಡನೆಯದು ಹಾಗೂ ಬಹುಮುಖ್ಯವಾದುದು, ಸಾಹಿತ್ಯ ಅಥವಾ ಸೃಜನಶೀಲ ಸಂವೇದನೆಗಳಿಗೆ ಈ ನಾಡು ಪೂರ್ತಿ ಕುರುಡಾದಂತಿದೆ ಎನ್ನುವುದು.

ಕರ್ನಾಟಕದ ಜನಮಾನಸದ ಮೇಲೆ ಸಾಂಸ್ಕೃತಿಕ ಕ್ಷೇತ್ರದ ಪ್ರಭಾವ–ಪ್ರೇರಣೆಗಳ ಕುರಿತು ಮಾತನಾಡುವಾಗ, ‘ನೃಪತುಂಗನೆ ಚಕ್ರವರ್ತಿ/ ಪಂಪನಿಲ್ಲಿ ಮುಖ್ಯಮಂತ್ರಿ’ ಎಂದು ಕುವೆಂಪು ಅವರು ಪ್ರತಿಪಾದಿಸಿದ ‘ಸಾಂಸ್ಕೃತಿಕ ಕರ್ನಾಟಕ ಪ್ರಭುತ್ವ’ದ ಪರಿಕಲ್ಪನೆಯನ್ನು ಉಲ್ಲೇಖಿಸುತ್ತೇವೆ. ಈ ಸಾಂಸ್ಕೃತಿಕ ಪ್ರಭುತ್ವ ವಾಸ್ತವ ದಲ್ಲಿರಲಿ, ಕನ್ನಡಿಗರ ಭಾವಕೋಶದಲ್ಲೂ ಅಸ್ತಿತ್ವದಲ್ಲಿಲ್ಲ ಎನ್ನುವುದನ್ನು ಸಂಸದರು ಕನ್ನಡ ಸಾಹಿತ್ಯಲೋಕಕ್ಕೆ ನೆನಪಿಸಲು ಹೊರಟಿರುವಂತಿದೆ. ಆದರೆ, ಹೀಗೆ ನೆನಪಿಸುವ ಶ್ರಮವನ್ನು ಅವರು ತೆಗೆದುಕೊಳ್ಳುವ ಅಗತ್ಯವಿಲ್ಲ. ನಮ್ಮ ಬಹುತೇಕ ಸಾಹಿತಿಗಳ ಪಂಚೇಂದ್ರಿಯಗಳು ವರ್ತಮಾನದ ಸ್ಥಿತಿಗತಿಯನ್ನು ಗುರ್ತಿಸಲಾಗದಷ್ಟು ದುರ್ಬಲವಾಗಿರುವುದು ಮಾತ್ರವಲ್ಲ, ಅವರ ಆತ್ಮಸಾಕ್ಷಿಯೂ ಮುಸುಕು ಹೊದ್ದುಕೊಂಡಿದೆ. ಪ್ರಭುತ್ವ ತೂಕಡಿಸಿದಾಗಲೆಲ್ಲ ಎಚ್ಚರಿಸುವ ಕೆಲಸ ಮಾಡಿರುವ ಸಾಹಿತ್ಯ ಪರಂಪರೆಗೆ ಬೆನ್ನುಹಾಕಿ, ಈಗ ಸ್ವತಃ ತಾವೇ ತೂಕಡಿಸಲು ಪ್ರಾರಂಭಿಸಿದ್ದಾರೆ. ನಿದ್ದೆಯಿಂದ ವಂಚಿತರಾದ ಮಹಾದೇವ, ಬರಗೂರರಂಥ ಕೆಲವರಷ್ಟೇ ಮಾತನಾಡುವ ಶ್ರಮ ತೆಗೆದುಕೊಳ್ಳುತ್ತಿದ್ದಾರೆ
ಹಾಗೂ ‘ಇದು ನಿಮ್ಮ ಕೆಲಸವಲ್ಲ’ ಎಂದು ಮತ್ತೆ ಮತ್ತೆ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ.

ನಾಡಿನ ಸಾಕ್ಷಿಪ್ರಜ್ಞೆಯ ರೂಪದಲ್ಲಿ ಸಾಹಿತಿಗಳ ಅಭಿಪ್ರಾಯಗಳನ್ನು ಸಮಾಜ ಗೌರವಿಸುತ್ತಿದ್ದುದು
ಹಾಗೂ ವರ್ತಮಾನದ ಬಿಕ್ಕಟ್ಟುಗಳ ಕುರಿತು ಬರಹಗಾರರು ಮಾತನಾಡಬೇಕೆಂದು ಅಪೇಕ್ಷಿಸುತ್ತಿದ್ದುದು ‘ಒಂದಾನೊಂದು ಕಾಲ’ದ ಕಥೆಯಾಯಿತು. ಈಗೇನಿದ್ದರೂ ಬರಹಗಾರರು ಮಾತನಾಡದೆ, ಸುಮ್ಮನೆ ಕಥೆ–ಕವನ ಬರೆದುಕೊಂಡಿರಬೇಕೆಂದು ಸಮಾಜ ಆಗ್ರಹಿಸುವ ಸಮಯ. ‘ವೈಚಾರಿಕ ನಪುಂಸಕರು’ ಎನ್ನುವ ವಿಶೇಷಣ, ಪ್ರಜಾಪ್ರತಿನಿಧಿಗಳ ಕಣ್ಣಿಗೆ ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳು ಹೇಗೆ ಕಾಣಿಸುತ್ತಿದ್ದಾರೆ ಎನ್ನುವುದನ್ನಷ್ಟೇ ಹೇಳುತ್ತಿಲ್ಲ; ಆ ಸ್ಥಿತಿಯನ್ನು ಸಾಹಿತ್ಯಲೋಕ ಸ್ವತಃ ಸೃಷ್ಟಿಸಿ ಕೊಂಡಿರುವ ಸಾಧ್ಯತೆಯತ್ತಲೂ ಬೆರಳು ಮಾಡುತ್ತಿದೆ.

ಸರಿ, ಬರಹಗಾರರು ಮಾತನಾಡುವುದು ಬೇಡ. ಮುಂದಿನ ಪ್ರಶ್ನೆ ರಾಜಕಾರಣಿಗಳಿಗೆ. ಅವರು ಮೈಕಿಗೆ ಅಂಟಿಕೊಂಡರೆ ಪರವಾಗಿಲ್ಲವೆ? ಆಗೊಮ್ಮೆ ಈಗೊಮ್ಮೆ ಮಾತನಾಡುವ ಸಾಹಿತಿಗಳನ್ನು ಮೈಕಾಸುರರು ಎನ್ನುವುದಾದರೆ, ದಿನ ಬೆಳಗಾದರೆ ಮಾತಿನ ರೂಪದಲ್ಲಿ ನಂಜು ಕಾರುವ ರಾಜಕಾರಣಿಗಳನ್ನು ಏನನ್ನುವುದು? ಸಾಹಿತಿಗಳು ಮೈಕು ಪಕ್ಕಕ್ಕಿಟ್ಟು ಪೆನ್ನು ಹಿಡಿಯುವಂತೆ, ರಾಜಕಾರಣಿಗಳು– ಅಡಿಗೆರೆ ಎಳೆದು ಹೇಳುವುದಾದರೆ, ಪ್ರಜಾಪ್ರತಿನಿಧಿಗಳು ಕೂಡ ಮೈಕು ದೂರವಿರಿಸಿ, ತಂತಮ್ಮ ಕೆಲಸ ಮಾಡಬೇಕಲ್ಲವೆ? ಅಂದಹಾಗೆ, ರಾಜಕಾರಣಿಗಳು ಮಾಡಬೇಕಾದ ಕೆಲಸವೇನು? ಸಾಹಿತಿಯನ್ನು ಪೆನ್ನಿನೊಂದಿಗೆ ತಳುಕು ಹಾಕುವಂತೆ ರಾಜಕಾರಣಿಗಳನ್ನು ಯಾವುದರೊಂದಿಗೆ ಗುರ್ತಿಸುವುದು? ರಾಜಕಾರಣಿಗಳನ್ನೇ ಈ ಪ್ರಶ್ನೆ ಕೇಳಿದರೆ, ನಮ್ಮ ಬಹುತೇಕ ರಾಜಕಾರಣಿಗಳಿಗೆ ಉತ್ತರ ಹೊಳೆಯದಿರುವ ಸಾಧ್ಯತೆಯೇ ಹೆಚ್ಚು. ಚುನಾವಣೆಯಲ್ಲಿ ಗೆದ್ದ ನಂತರ ಏನು ಮಾಡಬೇಕೆನ್ನುವುದನ್ನು ಪ್ರಜಾಪ್ರತಿನಿಧಿಗಳು ಮರೆತು ದಶಕಗಳೇ ಆಗಿದೆ; ನೆನಪಿಸುವ ಕೆಲಸವನ್ನು ಪ್ರಜೆಗಳೂ ಮರೆತಿದ್ದಾರೆ.

ಪ್ರಜಾಪ್ರತಿನಿಧಿಯೊಬ್ಬ ಮಾಡಬೇಕಾದುದು ಪ್ರಜೆಗಳ ಹಿತಕ್ಕೆ ಪೂರಕವಾದ ಕೆಲಸಗಳನ್ನು. ಜನರ ಬದುಕು ಹಸನಾಗಲು ಅಗತ್ಯವಾದ ಕೆಲಸಗಳನ್ನು ಮಾಡಬೇಕಾದುದು ರಾಜಕಾರಣಿಗಳ ಕರ್ತವ್ಯ. ಆದರೆ, ಇಂದಿನ ರಾಜಕಾರಣಿಗಳು ಧರ್ಮದ ಮೂಲಕವಷ್ಟೇ ಜನರ ಬದುಕನ್ನು ಹಸನಾಗಿಸಲು ಹೊರಟಿದ್ದಾರೆ. ಕುಡಿಯಲು ನೀರು, ಹೊಟ್ಟೆ ತುಂಬಿಸಲು ಆಹಾರ, ದುಡಿಮೆಗೆ ಕೆಲಸ ಇಲ್ಲದಿದ್ದರೂ ಚಿಂತೆಯಿಲ್ಲ; ಧರ್ಮದ ಮೂಲಕ ಜನರನ್ನು ‘ಸಂತೋಷ’ವಾಗಿರಿಸಲು ಪ್ರಯತ್ನಿಸುತ್ತಿದ್ದಾರೆ. ಸಾಂವಿಧಾನಿಕವಾಗಿ ತಾವು ಮಾಡಬೇಕಾದ ಕೆಲಸವನ್ನು ಪಕ್ಕಕ್ಕಿಟ್ಟು, ಮಾತಿನ ತುರಿಕೆಯಲ್ಲಿ ತೊಡಗಿರುವ ಈ ರಾಜಕಾರಣಿಗಳಿಗೆ ತಮ್ಮ ಕೆಲಸವನ್ನು ನೆನಪಿಸಲು ಹೊರಟರೆ, ಅದು ದೇಶದ್ರೋಹವೋ ಧರ್ಮದ್ರೋಹವೋ ಆಗಿ ಅವರ ಕಣ್ಣಿಗೆ ಕಾಣಿಸಿದರೆ ಆಶ್ಚರ್ಯವೇನೂ ಇಲ್ಲ.

ಬರಹಗಾರರು ಬರವಣಿಗೆಗಷ್ಟೇ ಸೀಮಿತಗೊಳ್ಳಬೇಕು ಎಂದು ರಾಜಕಾರಣಿಗಳು ಅಪೇಕ್ಷಿಸುವಂತೆ, ರಾಜಕಾರಣಿಗಳು ತಮ್ಮ ಕೆಲಸವನ್ನಷ್ಟೇ ಮಾಡಬೇಕು ಎಂದು ಸಾಹಿತಿಗಳು ಬಯಸುವಂತಿಲ್ಲ. ಮೈಕು ಪಕ್ಕಕ್ಕಿಟ್ಟು ಪೆನ್ನು ಕೈಗೆತ್ತಿಕೊಂಡು ದಂತಗೋಪುರದಲ್ಲಿ ಅಡಗಿಕೊಳ್ಳುವುದು ಇಂದಿನ ಬರಹಗಾರನಿಗೆ ಸುಲಭ. ಆದರೆ, ವರ್ತಮಾನದ ರಾಜಕಾರಣಿಗೆ, ‘ಮಾತು ಬಿಟ್ಟು ಕೆಲಸ ಮಾಡು’ ಎಂದು ಹೇಳಿದರೆ ಅನಾಹುತವೇ ಉಂಟಾದೀತು. ಮಾತನ್ನು ನಿಷೇಧಿಸಿದರೆ, ಅನೇಕರ ಮಾನಸಿಕಸ್ಥಿಮಿತವೇ ತಪ್ಪಿ, ಶಾಸಕಾಂಗಸೌಧಗಳ ತುಂಬ ಖಿನ್ನತೆಗೊಳಗಾದವರೇ ತುಂಬಿಕೊಳ್ಳಬಹುದು. ವರ್ತಮಾನದ ಬಿಕ್ಕಟ್ಟುಗಳಿಗೆ ಮೂಕರಾಗಿ ಕುಳಿತಿರುವ ಲೇಖಕರನ್ನು ನೋಡಿದರೆ, ‘ಕೆಲಸ ಮಾಡದಿದ್ದರೂ ಪರವಾಗಿಲ್ಲ, ನಮ್ಮ ರಾಜಕಾರಣಿಗಳು ಮಾತನಾಡಿಕೊಂಡು ಆರೋಗ್ಯದಿಂದಿರಲಿ’ ಎನ್ನುವ ಜೀವಪರ ನಿಲುವಿನಿಂದ ಅವರು ರಾಜಕಾರಣಿಗಳ ಸುದ್ದಿಗೆ ಹೋಗದಿರುವ ಸಾಧ್ಯತೆಯೂ ಇದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳಿಂದ ಮೈಕು (ಮಾತು) ಕಿತ್ತುಕೊಳ್ಳುವ ಅಧಿಕಾರ ಬರಹಗಾರರಿಗಿಲ್ಲ. ಆದರೆ, ಬರಹಗಾರರನ್ನು ಮೌನವಾಗಿಸುವ ಸಾಧ್ಯತೆ ರಾಜಕಾರಣಿಗಳ ಕೈಯಲ್ಲೇ ಇದೆ. ಮತ್ತೇನಿಲ್ಲ, ಸಂವಿಧಾನದ ಅನುಸಾರವಾಗಿ ರಾಜಕಾರಣಿಗಳು ಏನೆಲ್ಲ ಕೆಲಸಗಳನ್ನು ಮಾಡಬೇಕೋ ಅಷ್ಟನ್ನು ಮಾಡಿಬಿಟ್ಟರಾಯಿತು. ಆಗ ಬಡ ಬರಹಗಾರನಿಗೆ ಮಾತನಾಡುವ ಅವಕಾಶವೇ ಇಲ್ಲ. ಕುವೆಂಪು ಪ್ರತಿಪಾದಿಸಿದ ‘ಸಾಂಸ್ಕೃತಿಕ ಸಂವಿಧಾನ’ವನ್ನು ಕಡೆಗಣಿಸಿದರೂ ಪರವಾಗಿಲ್ಲ, ಅಂಬೇಡ್ಕರ್ ಪ್ರಣೀತ ಸಂವಿಧಾನಕ್ಕಾದರೂ ಅವರು ನಿಷ್ಠರಾಗಿರಬೇಕಲ್ಲವೆ? ಈಗಲೂ ಅಲ್ಲೊಬ್ಬ ಇಲ್ಲೊಬ್ಬ ಬರಹಗಾರ ಮಾತನಾಡುತ್ತಿರುವುದಕ್ಕೆ ಕಾರಣ, ರಾಜಕಾರಣಿಗಳು ತಾವು ಮಾಡಬೇಕಾದ ಕೆಲಸವನ್ನು ಮರೆತಿರುವುದೇ ಆಗಿದೆ.

‘ಸಾಂಸ್ಕೃತಿಕ ಕರ್ನಾಟಕ ಪ್ರಭುತ್ವ’ ಗೌರವ ಕಳೆದುಕೊಂಡಿರುವ ಸಂದರ್ಭದಲ್ಲಿ, ಈಗ ಕಿಮ್ಮತ್ತು ಉಳಿಸಿಕೊಂಡಿರುವ ಪ್ರಭುತ್ವ ಯಾವುದು ಎನ್ನುವ ಪ್ರಶ್ನೆ ಎದುರಾಗುತ್ತದೆ? ಇದಕ್ಕೆ ಉತ್ತರ ಕಂಡುಕೊಳ್ಳಲು ಹೆಚ್ಚಿನ ಬುದ್ಧಿವಂತಿಕೆಯೇನೂ ಬೇಕಿಲ್ಲ. ನಾಡಗೀತೆಯನ್ನು ತಿರುಚುವ ಮೂಲಕ ಕುವೆಂಪು ಅವರಿಗೆ ಅವಮಾನ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆದಿಚುಂಚನಗಿರಿ ಸ್ವಾಮೀಜಿ ಅವರು ಹೇಳಿರುವುದು ಸರ್ಕಾರದ ಕಿವಿಗೆ ಬಿದ್ದಿದೆ. ಅದರ ಪರಿಣಾಮ ಏನಾಗುತ್ತದೆನ್ನುವುದು ಬೇರೆ ಮಾತು. ಆದರೆ, ಈಗ ಸರ್ಕಾರದ ಕಿವಿಗೆ ಯಾರ ಮಾತಾದರೂ ನಾಟುತ್ತದೆ ಎನ್ನುವುದಾದರೆ ಅದು ಸ್ವಾಮೀಜಿಗಳ ಮಾತು ಮಾತ್ರ ಎನ್ನುವುದಂತೂ ಸ್ಪಷ್ಟ.

ಇಷ್ಟೆಲ್ಲ ಜಿಜ್ಞಾಸೆಯ ನಂತರ ಉಳಿಯುವ ಪ್ರಶ್ನೆ: ದೇವನೂರ ಅವರಿಗೆ ಪೆನ್ನು ನೆನಪಿಸುವ ಜಾಣರು, ಅದೇ ಮಾತನ್ನು ಸ್ವಾಮೀಜಿಗೆ ಹೇಳಬಲ್ಲರೆ?

‘ಎದೆಗೆ ಬಿದ್ದ ಅಕ್ಷರ’ ದೇವನೂರರ ಕೃತಿಯ ಹೆಸರು, ಪಠ್ಯವಾಗಿರುವ ಬರಹದ ಶೀರ್ಷಿಕೆಯೂ ಹೌದು. ಮಕ್ಕಳ ಎದೆಗೆ ಅಕ್ಷರಗಳನ್ನು ಬೀಳಿಸುವುದು ಶಿಕ್ಷಣದ ಉದ್ದೇಶ. ಸಮಾಜದ ಎದೆಗೂ ಅಕ್ಷರರೂಪದಲ್ಲಿ ಮಾನವೀಯತೆಯ ಬೀಜಗಳು ಬೀಳಬೇಕು ಎನ್ನುವುದು ಸಾಹಿತ್ಯದ ಜೀವಶಕ್ತಿಯ ಬಗ್ಗೆ ನಂಬುಗೆಯುಳ್ಳ ಎಲ್ಲರ ಹಂಬಲ. ಇಂದಿನ ಸಾಮಾಜಿಕ ಚಲನೆಯನ್ನು ಗಮನಿಸಿದರೆ – ಕೆಲವರ ಎದೆಗಷ್ಟೇ ಅಕ್ಷರ ಬೀಳುತ್ತದೆ. ಮತ್ತೆ ಕೆಲವರ ಎದೆಗೆ, ಜಾತಿ ಮತ್ತು ಧರ್ಮ ನಾಟುತ್ತದೆ. ಮತ್ತೆ ಕೆಲವರಿಗೆ, ತಮ್ಮ ಎದೆಗೆ ಬಿದ್ದಿರುವುದೇನು ಎನ್ನುವುದಕ್ಕಿಂತ ಬೇರೆಯವರ ಎದೆಯಲ್ಲಿರುವುದೇನು ಎನ್ನುವುದರ ಬಗ್ಗೆ ಆಸಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.