ಟರ್ಕಿ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪಕ್ಕದ ಕತಾರ್, ದೂರದ ಅಮೆರಿಕ, ಮಗ್ಗುಲಿಗಿರುವ ಐರೋಪ್ಯ ಒಕ್ಕೂಟ ಸಹಾಯಕ್ಕೆ ಬರಬಹುದೇ ಎಂದು ಎದುರು ನೋಡುತ್ತಿದೆ. 80 ಮತ್ತು 90ರ ದಶಕದ ಆರ್ಥಿಕ ಹಿಂಜರಿಕೆ ಪುನಃ ಮರುಕಳಿಸಿ ಟರ್ಕಿಯನ್ನು ದುರ್ಬಲಗೊಳಿಸಬಹುದೇ ಎಂಬ ಭೀತಿ ಆ ದೇಶವನ್ನು ಕಾಡುತ್ತಿದೆ.

ದಶಕದ ಹಿಂದೆ ಇದೇ ಟರ್ಕಿ ಮೈಚಳಿ ಬಿಟ್ಟು ಎದ್ದು ನಿಂತಿತ್ತು. ಎರ್ಡೋಗನ್ 2003ರಲ್ಲಿ ಆಗಷ್ಟೇ ಪ್ರಧಾನಿಯಾಗಿದ್ದರು. ಪ್ರಾಂತೀಯವಾಗಿ ಹರಡಿದ್ದ ಮತೀಯ ಬಿಕ್ಕಟ್ಟಿನ ನಡುವೆ ಎರ್ಡೋಗನ್ ಪ್ರಜಾಪ್ರಭುತ್ವವಾದಿಯಾಗಿ ಕಂಡಿದ್ದರು. ನ್ಯಾಯ ಮತ್ತು ಅಭಿವೃದ್ಧಿ ಎಂಬುದು ಅವರ ಘೋಷಣೆಯಷ್ಟೇ ಆಗಿರಲಿಲ್ಲ, ಪಕ್ಷದ ಹೆಸರೂ ಆಗಿತ್ತು. ಎರ್ಡೋಗನ್ ಜನರಲ್ಲಿ ಕನಸು ತುಂಬುತ್ತಲೇ ಅಧಿಕಾರದ ಸನಿಹ ಬಂದರು. ಯುರೋಪ್ ಮತ್ತು ಮಧ್ಯ ಪ್ರಾಚ್ಯವನ್ನು ಬೆಸೆಯುವ ಪ್ರಮುಖ ನ್ಯಾಟೊ ಸದಸ್ಯ ರಾಷ್ಟ್ರವಾಗಿ ಟರ್ಕಿ ಹೊರಹೊಮ್ಮಿತು. 2005ರಲ್ಲಿ ಐರೋಪ್ಯ ಒಕ್ಕೂಟದ ಪೂರ್ಣ ಸದಸ್ಯತ್ವ ಹೊಂದಲು ಟರ್ಕಿ ಪ್ರಯತ್ನಿಸಿತ್ತು. ಆ ಮೂಲಕ ಟರ್ಕಿ ಕೂಡ ಪಶ್ಚಿಮ ರಾಷ್ಟ್ರಗಳ ಒಕ್ಕೂಟದಲ್ಲಿ ಒಂದಾಗಲಿದೆ. ಅದರ ಶ್ರೀಮಂತಿಕೆ, ಜಾಗತಿಕ ಸ್ಥಾನಮಾನ ಹೆಚ್ಚಲಿದೆ ಎಂದು ಅಂದಾಜಿಸಲಾಗಿತ್ತು.

ಆ ಕನಸಿನ ದಿನಗಳು ಮುಗಿದು ಇದೀಗ ವರ್ಷಗಳು ಉರುಳಿವೆ. ಟರ್ಕಿ ಆರ್ಥಿಕವಾಗಿ ಕುಗ್ಗಿದೆ. ಬಹು ಸಂಸ್ಕೃತಿಯ, ಪ್ರಜಾಪ್ರಭುತ್ವ ರಾಷ್ಟ್ರವಾಗುವತ್ತ ಹೊರಟಿದ್ದ ದೇಶ, ಸರ್ವಾಧಿಕಾರದತ್ತ ಮಗ್ಗುಲು ಬದಲಿಸಿದೆ. ಸದ್ಯಕ್ಕೆ ಆ ದೇಶ ಸುದ್ದಿಯಲ್ಲಿರುವುದು ಅಲ್ಲಿನ ಕರೆನ್ಸಿ ಬಿಕ್ಕಟ್ಟು ಮತ್ತು ಅಮೆರಿಕದೊಂದಿಗಿನ ವೈಮನಸ್ಯದ ಕಾರಣದಿಂದ. ಟರ್ಕಿಯ ಆರ್ಥಿಕ ಹಿಂಜರಿಕೆ ಇತರ ಪ್ರಗತಿಶೀಲ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದೆ. ಟರ್ಕಿ, ಅಮೆರಿಕದೊಂದಿಗಿನ ಮಿತ್ರತ್ವ ತ್ಯಜಿಸಿದರೆ ಜಾಗತಿಕ ರಾಜಕೀಯ ಸಮೀಕರಣ ಬದಲಾಗುವ ಸಾಧ್ಯತೆ ಇದೆ. ಹಾಗಾಗಿ ಟರ್ಕಿಯ ಬಿಕ್ಕಟ್ಟು ಜಗತ್ತಿನ ಗಮನ ಸೆಳೆದಿದೆ.

ಹಾಗಾದರೆ, ಟರ್ಕಿಯ ಇಂದಿನ ಪರಿಸ್ಥಿತಿಗೆ ಕಾರಣವೇನು? ಇದು ಟರ್ಕಿಯ ಸ್ವಯಂಕೃತ ಅಪರಾಧವೇ? ಉತ್ತರ ಹುಡುಕಲು ಎರ್ಡೋಗನ್ ಟರ್ಕಿಯಲ್ಲಿ ಪ್ರಭಾವಿಯಾಗಿದ್ದು ಹೇಗೆ ಎಂಬುದರಿಂದಲೇ ಆರಂಭಿಸಬೇಕು. ರಾಜಕೀಯ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ಎರ್ಡೋಗನ್, 9/11 ಘಟನೆಯ ನಂತರ ತಮ್ಮನ್ನು ಆಧುನಿಕತೆಗೆ ತೆರೆದುಕೊಂಡ ಮುಸ್ಲಿಂ ನಾಯಕನನ್ನಾಗಿ ಬಿಂಬಿಸಿಕೊಂಡರು. ಟರ್ಕಿ ಉದಾರವಾದಿ ಸಮಾಜವಾಗಿ ಬದಲಾಗುತ್ತಿದೆ, ಸಹಿಷ್ಣುತೆ ಮತ್ತು ಸಾಂವಿಧಾನಿಕ ತತ್ವಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೊರಜಗತ್ತಿಗೆ ಪ್ರಚುರಪಡಿಸುತ್ತಾ ಟರ್ಕಿಯ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಬೆಳೆದರು. ಅದೇ ವೇಳೆಗೆ ಇಸ್ಲಾಂ ಮತ ಪ್ರಚಾರಕನಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಫೆತ ಉಲ್ಲಾ ಗುಲೆನ್, ಟರ್ಕಿಯ ಎರಡನೇ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿದ್ದರು. ಶಿಕ್ಷಣ, ಸಹಬಾಳ್ವೆ, ಸಾಮಾಜಿಕ ಪಾಲ್ಗೊಳ್ಳುವಿಕೆ ಎಂಬ ತಳಹದಿಯ ಮೇಲೆ ಬೆಳೆದ ‘ಗುಲೆನ್ ಆಂದೋಲನ’ ಹೆಚ್ಚೆಚ್ಚು ಜನರನ್ನು ಸೆಳೆಯಿತು. ಗುಲೆನ್ ಜಾಗತಿಕವಾಗಿ ಪ್ರಭಾವಿ ಮುಸ್ಲಿಂ ಮತ ಪ್ರಚಾರಕ ಎನಿಸಿಕೊಂಡರು. ಎರ್ಡೋಗನ್ ಮುಂದಿಟ್ಟ ನ್ಯಾಯ ಹಾಗೂ ಅಭಿವೃದ್ಧಿಯ ಆಡಳಿತದ ಮಾದರಿ ಮತ್ತು ಗುಲೆನ್ ಆಂದೋಲನದ ಆದರ್ಶಗಳು ಒಂದಾದಾಗ ಅಧಿಕಾರ ಎರ್ಡೋಗನ್ ತೆಕ್ಕೆಗೆ ಬಂತು.

ಎರ್ಡೋಗನ್ ಅಧಿಕಾರ ಹಿಡಿಯುತ್ತಲೇ ಮೂಲ ಸೌಲಭ್ಯಗಳನ್ನು ಉನ್ನತೀಕರಿಸಿದರು. ಎರ್ಡೋಗನ್ ಪ್ರಗತಿಯ ವೇಗ ಹೇಗಿತ್ತೆಂದರೆ, ಕೆಲವೇ ವರ್ಷಗಳಲ್ಲಿ ಅಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟಾಯಿತು! 14 ಸಾವಿರ ಕಿ.ಮೀ. ವೇಗಸ್ನೇಹಿ ರಾಜರಸ್ತೆಗಳು ಸಿದ್ಧವಾದವು. ಅತಿವೇಗದ ರೈಲ್ವೆ ಪ್ರಯಾಣಕ್ಕೆ ಹಳಿಗಳನ್ನು ಜೋಡಿಸಲಾಯಿತು. ಅಭಿವೃದ್ಧಿ ಯೋಜನೆಗಳಿಗೆ ಟರ್ಕಿ ಸರ್ಕಾರ ದೊಡ್ಡ ಮೊತ್ತದ ಸಾಲವನ್ನು ವಿದೇಶಿ ಹಣಕಾಸು ಸಂಸ್ಥೆಗಳಿಂದ ಪಡೆಯಿತು. ಜನಪ್ರಿಯತೆ ವೃದ್ಧಿಸಿಕೊಳ್ಳಲು ಅಗತ್ಯವಿದ್ದ ಎಲ್ಲವನ್ನೂ ಮಾಡಿದ ಎರ್ಡೋಗನ್, ಮುಂದೆ ಎದುರಿಸಬೇಕಿರುವ ಆರ್ಥಿಕ ಸವಾಲುಗಳ ಬಗ್ಗೆ ಗಮನ ಹರಿಸಲಿಲ್ಲ!

ಸಾಲ ತಂದು ಮಾಡಿದ ಅಭಿವೃದ್ಧಿ ಕೆಲಸಗಳು ಹಾಗೂ ಚುನಾವಣಾ ಅಕ್ರಮ ಎರ್ಡೋಗನ್ ಮತ್ತೆ ಮತ್ತೆ ಅಧಿಕಾರ ಹಿಡಿಯಲು ಸಹಾಯ ಮಾಡಿದವು. ಆದರೆ ಅಷ್ಟರಲ್ಲೇ ಅಮೆರಿಕದಲ್ಲಿ ಅಜ್ಞಾತ ವಾಸದಲ್ಲಿರುವ ಗುಲೆನ್ ಮತ್ತು ಎರ್ಡೋಗನ್ ಮಧ್ಯೆ ಭಿನ್ನಾಭಿಪ್ರಾಯ ಮೊಳೆಯಿತು. ಗುಲೆನ್ ಟರ್ಕಿಯ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದ್ದರು. ಮತ ಪ್ರಚಾರಕ್ಕೆ ಖಾಸಗಿ ಶಾಲೆಗಳನ್ನು ಬಳಸುತ್ತಿದ್ದರು, ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಗಳಿಸಿದ್ದರು. ಗುಲೆನ್ ಬೆಳವಣಿಗೆಗೆ ಬೆದರಿದ ಎರ್ಡೋಗನ್ ಸರ್ಕಾರ, ಖಾಸಗಿ ಶಾಲೆಗಳನ್ನು ಮುಚ್ಚುವ ನಿರ್ಣಯ ಕೈಗೊಂಡಿತು. ಅವುಗಳಲ್ಲಿ ಫೆತ ಉಲ್ಲಾ ಗುಲೆನ್ ಸಹಚರರಿಗೆ ಸೇರಿದ್ದ ಶಾಲೆಗಳೇ ಹೆಚ್ಚಿದ್ದವು! ಇದಕ್ಕೆ ಪ್ರತಿಯಾಗಿ ಗುಲೆನ್ ಸಹಚರರು, ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ರೂಪಿಸಿದರು. ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಗುಲೆನ್ ಪ್ರಭಾವ ಹೆಚ್ಚಿದ್ದ ಕಾರಣ 2013ರಲ್ಲಿ ಎರ್ಡೋಗನ್ ಆಪ್ತರ ಪೈಕಿ 52 ಜನರನ್ನು ಬಂಧಿಸಿ ವಿಚಾರಣೆಗೆ ಗುರಿ ಮಾಡಲಾಯಿತು.

2016ರ ಜುಲೈ 15ರಂದು ಎರ್ಡೋಗನ್ ಅವರಿಂದ ಅಧಿಕಾರ ಕಸಿದುಕೊಳ್ಳುವ ದೊಡ್ಡಮಟ್ಟದ ಪ್ರಯತ್ನ ಟರ್ಕಿಯಲ್ಲಿ ನಡೆಯಿತು. ‘ಈ ಪ್ರಯತ್ನದ ಹಿಂದೆ ಗುಲೆನ್ ಇದ್ದಾರೆ, ಅವರಿಗೆ ಅಮೆರಿಕದ ನೆರವು ಇದೆ’ ಎಂದು ಟರ್ಕಿ ಆರೋಪಿಸಿತ್ತು. ಅಧಿಕಾರ ಉಳಿಸಿಕೊಳ್ಳಲು 2016ರ ಜುಲೈ 20ರಂದು ಎರ್ಡೋಗನ್ ತುರ್ತುಪರಿಸ್ಥಿತಿ ಹೇರಿದರು. ಸುಮಾರು 50 ಸಾವಿರ ಜನರನ್ನು ವಶಕ್ಕೆ ಪಡೆಯಲಾಯಿತು. ಪತ್ರಕರ್ತರನ್ನು ಜೈಲಿಗಟ್ಟಲಾಯಿತು, ಎದುರಾಳಿಗಳ ಆಸ್ತಿ ಮುಟ್ಟುಗೋಲಾಯಿತು. 23 ವರ್ಷಗಳಿಂದ ಟರ್ಕಿಯಲ್ಲಿ ವಾಸವಾಗಿದ್ದ ಅಮೆರಿಕ ಮೂಲದ ಪ್ರೊಟೆಸ್ಟೆಂಟ್ ಇಗರ್ಜಿಗೆ ಸೇರಿದ್ದ ಪಾದ್ರಿ ಆಂಡ್ರೀವ್ ಬ್ರೂಸನ್ ಎಂಬಾತನನ್ನು ಟರ್ಕಿ ಪೊಲೀಸರು ಬೇಹುಗಾರಿಕೆಯ ಆರೋಪದ ಮೇಲೆ ಬಂಧಿಸಿದರು. ಇಲ್ಲಿಂದ ಅಮೆರಿಕ-ಟರ್ಕಿ ನಡುವಿನ ಬಿರುಕು ಹೆಚ್ಚಿತು.

ಇದೇ ಜುಲೈ 26ರಂದು ಅಮೆರಿಕದ ಉಪಾಧ್ಯಕ್ಷ ಪೆನ್ಸ್,ಟರ್ಕಿ ಅಧ್ಯಕ್ಷ ಎರ್ಡೋಗನ್ ಅವರಿಗೆ ಕರೆ ಮಾಡಿ ಆಂಡ್ರೀವ್ ಬಿಡುಗಡೆಗೆ ಒತ್ತಾಯಿಸಿದರು. ಎರ್ಡೋಗನ್ ‘ನಮಗೆ ಗುಲೆನ್ ಬೇಕು’ ಎಂದರು. ಸ್ಪಂದನ ವ್ಯಕ್ತವಾಗದಿದ್ದಾಗ, ಎರಡೂ ದೇಶಗಳು ವ್ಯಾವಹಾರಿಕವಾಗಿ ಪಾಠ ಕಲಿಸುವ ಕ್ರಮಕ್ಕೆ ಮುಂದಾದವು. ಟರ್ಕಿಯ ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಆಮದು ಸುಂಕವನ್ನು ಅಮೆರಿಕ ಹೆಚ್ಚು ಮಾಡಿತು. ಅಮೆರಿಕದ ಕಾರು ಮತ್ತು ಮದ್ಯದ ಮೇಲಿನ ಕರವನ್ನು ಟರ್ಕಿ ಏರಿಸಿತು. ಅಮೆರಿಕದ ಎಲೆಕ್ಟ್ರಾನಿಕ್ ಉಪಕರಣಗಳನ್ನು ತ್ಯಜಿಸುವಂತೆ ಎರ್ಡೋಗನ್ ಕರೆಕೊಟ್ಟರು. ಅಮೆರಿಕದೊಂದಿಗಿನ ವೈಮನಸ್ಯ ಟರ್ಕಿಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತು. ಹೂಡಿಕೆದಾರರು ಕಳವಳಗೊಂಡರು.

ಟರ್ಕಿ ಈ ಮೊದಲೇ ಕೆಲವು ತಪ್ಪು ಹೆಜ್ಜೆಗಳನ್ನು ಇಟ್ಟಿತ್ತು. ತನ್ನ ಆರ್ಥಿಕತೆ ಉತ್ತಮಪಡಿಸಲು ಅದು ಎರಡು ಮಾರ್ಗದಲ್ಲಿ ಪ್ರಯತ್ನಿಸಿತ್ತು. ಒಂದು, ಸ್ಥಳೀಯ ಹೂಡಿಕೆಗೆ ವಿದೇಶಿ ಬಂಡವಾಳ ಆಕರ್ಷಿಸುವುದು. ಎರಡು, ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿ ಸ್ಥಳೀಯ ಉದ್ಯಮಿಗಳನ್ನು ಉತ್ತೇಜಿಸುವುದು. ಇದರಿಂದಾಗಿ ಸಾಲದ ಪ್ರಮಾಣ ಟರ್ಕಿಯ ಒಟ್ಟು ಜಿ.ಡಿ.ಪಿಯ ಶೇಕಡ 70ಕ್ಕೆ ಏರಿತು! ಈ ಸಾಲದ ಬಹುಭಾಗವನ್ನು ವಿದೇಶಿ ಕರೆನ್ಸಿಗಳಲ್ಲಿ ಅದರಲ್ಲೂ ಡಾಲರ್ನಲ್ಲಿ ಕಂಪನಿಗಳು ತೆಗೆದುಕೊಂಡಿದ್ದವು. ಅಮೆರಿಕದ ಮುನಿಸು, ಡಾಲರ್ ಎದುರು ಲಿರಾ ಮೌಲ್ಯ ಕುಸಿತಕ್ಕೆ ಕಾರಣವಾದಾಗ, ಸಾಲ ಹಿಂತಿರುಗಿಸುವಿಕೆ ದುಬಾರಿಯಾಗಿ ಪರಿಣಮಿಸಿತು. ಲಾಭಾಂಶದ ಮೇಲೆ ಹೊಡೆತ ಬಿತ್ತು.ಡಾಲರ್ ಬಲಗೊಳ್ಳುವ ಸೂಚನೆ ದೊರೆತಾಗ, ಹೂಡಿಕೆದಾರರು ನಷ್ಟಸಾಧ್ಯತೆ ಇರುವ ಮಾರುಕಟ್ಟೆಯಿಂದ ಸರಿದು ಅಮೆರಿಕದಲ್ಲಿ ಆಸ್ತಿ ಹೊಂದುವತ್ತ ಗಮನ ಹರಿಸತೊಡಗಿದರು. ಡಾಲರ್ ಬೇಡಿಕೆ ಹೆಚ್ಚಿತು. ಈ ಪ್ರಕ್ರಿಯೆ ಟರ್ಕಿಯೊಂದನ್ನೇ ಬಾಧಿಸದೆ ಡಾಲರ್ ಎದುರು ಭಾರತವೂ ಸೇರಿದಂತೆ ಇತರ ರಾಷ್ಟ್ರಗಳ ಕರೆನ್ಸಿ ಅನಿಶ್ಚತತೆ ಎದುರಿಸಲು ಕಾರಣವಾಯಿತು.

ಉಳಿದಂತೆ, ಟರ್ಕಿ- ಅಮೆರಿಕ ವೈಮನಸ್ಯಕ್ಕೆ ಬ್ರೂಸನ್ ಬಂಧನವಷ್ಟೇ ಕಾರಣವಾಯಿತೇ? ಇಲ್ಲ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಇರಾಕ್ ಯುದ್ಧದ ಸಂದರ್ಭದಲ್ಲಿ. ಈ ಯುದ್ಧದಲ್ಲಿ ಟರ್ಕಿಯ ಪಾತ್ರ ಏನಿರಬೇಕು ಎಂಬ ಬಗ್ಗೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಸಿರಿಯಾ ಕುರಿತು ಅಮೆರಿಕ ತೆಗೆದುಕೊಂಡ ನಿರ್ಣಯ, ಟರ್ಕಿಯ ಅಸಮಾಧಾನಕ್ಕೆ ಕಾರಣವಾಯಿತು. ಇಸ್ಲಾಮಿಕ್ ಉಗ್ರರ ವಿರುದ್ಧ ಹೋರಾಡುತ್ತಿದ್ದ ಕುರ್ದ್ ಸಮುದಾಯದ ಸಶಸ್ತ್ರ ಪಡೆ ‘ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್’ಗೆ (ವೈಪಿಜಿ) ಅಮೆರಿಕ ಬೆಂಬಲ ಸೂಚಿಸಿತು. ತಾನು ಉಗ್ರ ಸಂಘಟನೆ ಎಂದು ಗುರುತಿಸಿರುವ ವೈಪಿಜಿಯ ಬೆನ್ನಿಗೆ ಅಮೆರಿಕ ನಿಲ್ಲುವ ಮೂಲಕ ಪರೋಕ್ಷವಾಗಿ ತನ್ನ ನೆಲದ ಪ್ರತ್ಯೇಕತಾವಾದವನ್ನು ಅಮೆರಿಕ ಬೆಂಬಲಿಸಿದೆ ಎಂದು ಟರ್ಕಿ ಸಿಟ್ಟಾಯಿತು. ‘ಒಂದೆಡೆ ನ್ಯಾಟೊ ಮೂಲಕ ವ್ಯೂಹಾತ್ಮಕ ಪಾಲುದಾರನಾಗಿ ಜೊತೆಯಲ್ಲಿದ್ದೀರಿ. ಆದರೆ ಇನ್ನೊಂದೆಡೆಯಿಂದ ಪಾಲುದಾರನ ಕಡೆಗೆ ಗುಂಡು ತೂರುತ್ತಿದ್ದೀರಿ’ ಎಂದು ಎರ್ಡೋಗನ್ ಅಕ್ರೋಶ ವ್ಯಕ್ತಪಡಿಸಿದ್ದರು.

ಹಾಗಾದರೆ, ಅಮೆರಿಕ ಸುಲಭಕ್ಕೆ ಟರ್ಕಿಯನ್ನು ಕಡೆಗಣಿಸಬಹುದೇ? ಸಾಧ್ಯವಿಲ್ಲ. ಅಮೆರಿಕ- ಟರ್ಕಿ ಮೈತ್ರಿ ತೀರಾಹಳೆಯದು. ಶೀತಲ ಯುದ್ಧದ ಅವಧಿಯಲ್ಲಿ ಅಮೆರಿಕಕ್ಕೆ ಟರ್ಕಿ ಹೆಗಲುಕೊಟ್ಟಿತ್ತು. ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ಉಂಟಾದಾಗ ರಷ್ಯಾದ ಮೇಲೆ ಒತ್ತಡ ಹೇರಲು ಅಮೆರಿಕ ತನ್ನ ಅಣ್ವಸ್ತ್ರ ಕ್ಷಿಪಣಿಗಳನ್ನು ರಷ್ಯಾವನ್ನೇ ಗುರಿಯಾಗಿಸಿಕೊಂಡು ಟರ್ಕಿಯಲ್ಲಿ ನೆಟ್ಟಿತ್ತು. ಇದೀಗ ನ್ಯಾಟೊ ಸದಸ್ಯ ರಾಷ್ಟ್ರಗಳ ಪೈಕಿ ಟರ್ಕಿ ಎರಡನೇ ಪ್ರಬಲ ಸೇನಾ ಶಕ್ತಿಯಾಗಿ ಬೆಳೆದಿದೆ. ಮಧ್ಯಪ್ರಾಚ್ಯದ ಗೊಂದಲಕಾರಿ, ಪ್ರಕ್ಷುಬ್ಧ ವಾತಾವರಣದಲ್ಲಿ ಅಮೆರಿಕಕ್ಕೆ ತನ್ನ ಹಿತಾಸಕ್ತಿ ಕಾಯ್ದುಕೊಳ್ಳಲು ಟರ್ಕಿಯ ನೆರವು ಬೇಕಾಗುತ್ತದೆ. ಸಿರಿಯಾ ಮತ್ತು ಇರಾಕ್ ಜೊತೆಗೆ ಟರ್ಕಿ ಗಡಿ ಹಂಚಿಕೊಂಡಿದೆ. ಇಸ್ಲಾಮಿಕ್ ಉಗ್ರರ ವಿರುದ್ಧ ಹೋರಾಡುತ್ತಿರುವ ಸಾಕಷ್ಟು ಅಮೆರಿಕದ ಸೈನಿಕರು ಟರ್ಕಿಯ ಗಡಿಯುದ್ದಕ್ಕೂ ಬೀಡುಬಿಟ್ಟಿದ್ದಾರೆ. ಆ ಸೈನಿಕರಿಗೆ ಅಗತ್ಯ ಸಾಮಗ್ರಿ ಒದಗಿಸಲು ಟರ್ಕಿಯ ಸೇನಾ ನೆಲೆಯನ್ನು ಅಮೆರಿಕ ಬಳಸಿಕೊಳ್ಳಬೇಕಾಗುತ್ತದೆ.

ಸಾಲದೆಂಬಂತೆ ಇರಾನ್ ಗಡಿಯೂ ಟರ್ಕಿಗೆ ತಾಕಿಕೊಂಡಿದೆ. ಇದೀಗ ಅಮೆರಿಕ, ಇರಾನ್ ಅಣು ಒಪ್ಪಂದದಿಂದ ಹೊರಬಂದಿರುವುದರಿಂದ, ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರುವ ಪ್ರಯತ್ನಕ್ಕೆ ಟರ್ಕಿಯ ನೆರವು ಅಗತ್ಯವಾಗಬಹುದು. ಇದೆಲ್ಲದಕ್ಕಿಂತ ಮುಖ್ಯವಾದ ಸಂಗತಿಯೊಂದಿದೆ. ಟರ್ಕಿ ಕಪ್ಪು ಸಮುದ್ರ ತೀರದಲ್ಲಿದೆ. ರಷ್ಯಾ ಕಪ್ಪು ಸಮುದ್ರದ ತಟದಲ್ಲಿ ಪ್ರಾಬಲ್ಯ ಸ್ಥಾಪಿಸಲು ಹವಣಿಸುತ್ತಿದೆ. ನಾಲ್ಕು ವರ್ಷಗಳ ಹಿಂದೆ ಕ್ರಿಮಿಯಾ ಪರ್ಯಾಯ ದ್ವೀಪವನ್ನು ಉಕ್ರೇನ್ನಿಂದ ಬೇರ್ಪಡಿಸಿ ರಷ್ಯಾ ವಶಪಡಿಸಿಕೊಳ್ಳುವಲ್ಲಿ ಕಪ್ಪು ಸಮುದ್ರ ತೀರದ ರಷ್ಯಾ ಸೇನಾ ನೆಲೆ ಪ್ರಮುಖ ಪಾತ್ರ ವಹಿಸಿತ್ತು. ಅಲ್ಲಿ ರಷ್ಯಾ ಪ್ರಭಾವವಲಯ ವಿಸ್ತರಿಸಿಕೊಂಡರೆ ಅಮೆರಿಕದ ಪ್ರತಿಷ್ಠೆ ಮುಕ್ಕಾಗುತ್ತದೆ. ಹಾಗಾಗಿ ರಷ್ಯಾ ಸಖ್ಯಕ್ಕೆ ಟರ್ಕಿ ಮುಂದಾಗಿದೆ.

ಅದೇನೇ ಇರಲಿ, ಪೂರ್ವ ಯುರೋಪ್ ಮತ್ತು ಪಶ್ಚಿಮ ಏಷ್ಯಾಗಳಲ್ಲಿ ಒಂದೊಂದು ಕಾಲು ಇಟ್ಟು ನಿಂತಂತೆ ಭಾಸವಾಗುವ ಟರ್ಕಿ, ಆರ್ಥಿಕ ಬಿಕ್ಕಟ್ಟಿನಿಂದ ಶೀಘ್ರ ಹೊರಬಂದರೆ ಅಷ್ಟರಮಟ್ಟಿಗೆ ಇತರ ರಾಷ್ಟ್ರಗಳಿಗೆ ಅನುಕೂಲ. ರಾಜತಾಂತ್ರಿಕವಾಗಿ ಭಾರತಕ್ಕೆ ಟರ್ಕಿ ಮಿತ್ರರಾಷ್ಟ್ರ ಅಲ್ಲದಿದ್ದರೂ ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯಿಕ ಸಂಬಂಧ ಸಾಕಷ್ಟು ಉತ್ತಮಗೊಂಡಿದೆ. ಟಾಟಾ, ರಿಲಯನ್ಸ್, ಬಿರ್ಲಾ ಸೇರಿದಂತೆ 150ಕ್ಕೂ ಹೆಚ್ಚು ಕಂಪನಿಗಳು ಅಲ್ಲಿ ಹಣ ಹೂಡಿವೆ. ಮೇಲಾಗಿಟರ್ಕಿಯ ಆರ್ಥಿಕ ಹಿಂಜರಿಕೆಗೆ ಬೆದರಿದ ಹೂಡಿಕೆದಾರರು ಭಾರತದಂತಹ ಪ್ರಗತಿಶೀಲ ಮಾರುಕಟ್ಟೆಯಿಂದ ಹೊರನಡೆದರೆ, ಅಷ್ಟರಮಟ್ಟಿಗೆ ನಮಗೆ ನಷ್ಟ. ಲಿರಾ ಪತನ ಡಾಲರ್ ವಿರುದ್ಧದ ರೂಪಾಯಿಯ ಮೌಲ್ಯಕ್ಕೂ ತಳಕು ಹಾಕಿಕೊಂಡಿರುವುದು ಈಗಾಗಲೇ ಜಾಹೀರಾಗಿದೆ.

ಒಟ್ಟಿನಲ್ಲಿ, ಟರ್ಕಿಯ ಮುಂದೆ ಸವಾಲುಗಳ ಸರಪಳಿ ಇದೆ. ಸಾಲದ ಮೇಲಿನ ಬಡ್ಡಿದರವನ್ನು ಅದು ಸೂಕ್ತ ರೀತಿ ನಿಷ್ಕರ್ಷೆ ಮಾಡಬೇಕು, ಏರುತ್ತಿರುವ ಹಣದುಬ್ಬರಕ್ಕೆ ಲಗಾಮು ಹಾಕಬೇಕು, ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಹೂಡಿಕೆದಾರರ ವಿಶ್ವಾಸ ಗಳಿಸಿಕೊಳ್ಳಬೇಕು. ಆರ್ಥಿಕ ಶಿಸ್ತು ರೂಪಿಸಿಕೊಳ್ಳಲು ಟರ್ಕಿ ಇದುವರೆಗೆ ತೆಗೆದುಕೊಂಡಿರುವ ಕ್ರಮ, ಕಾಡ್ಗಿಚ್ಚನ್ನು ಆರಿಸಲು ಹೂದೋಟದ ನೀರ್ಕೊಳವೆಯನ್ನು ಬಳಸಿದಂತಿದೆ. ಜನಪ್ರಿಯ ಯೋಜನೆಗಳು ಮತ್ತು ಆರ್ಥಿಕ ಸ್ಥಿರತೆಯನ್ನು ತಕ್ಕಡಿಯಲ್ಲಿಟ್ಟು ನೋಡಿ ನಾಯಕರು ನಿರ್ಧಾರ ತಳೆಯಬೇಕು ಎಂಬ ಪಾಠವನ್ನು ಟರ್ಕಿ ಹೇಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.