‘ಅಕ್ಟೋಬರ್ 10ರಿಂದ ನಾನು ನೀರನ್ನೂ ತ್ಯಜಿಸುತ್ತೇನೆ; ಪ್ರಾಯಶಃ ನವರಾತ್ರಿ ಆರಂಭವಾಗುವ ಮುಂಚೆ ನನ್ನ ಪ್ರಾಣ ಹೋಗಬಹುದು. ನನ್ನ ಅಂತ್ಯ ಹೀಗಾದರೆ ಬೇಸರವಿಲ್ಲ. ಆದರೆ ಗಂಗೆಯನ್ನು ಉಳಿಸುವ ಯತ್ನವೇ ಅಂತ್ಯವಾಗದಿದ್ದರೆ ಸಾಕು’

-ಹೀಗೆಂದು ಸಾನಂದ ಸ್ವಾಮೀಜಿ ಕಳೆದ ತಿಂಗಳು ದಿಲ್ಲಿಯ ‘ಡೌನ್ ಟು ಅರ್ಥ್’ ಪತ್ರಿಕೆ ನಡೆಸಿದ ವಿಡಿಯೊ ಸಂದರ್ಶನದಲ್ಲಿ ಹೇಳಿದ್ದರು. ನೀರಿನ ಶುದ್ಧೀಕರಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಈ ಎಂಜಿನಿಯರ್, 108 ದಿನಗಳ ಉಪವಾಸದ ನಂತರ ನೀರನ್ನು ತ್ಯಜಿಸಿದ ಎರಡನೇ ದಿನವೇ ಆಸ್ಪತ್ರೆಗೆ ಸಾಗಿಸುವಾಗ ಸಾವಪ್ಪಿದರು.

ಇವರಿಗೇನೊ 86 ತುಂಬಿತ್ತು. ಇವರ ಬೇಡಿಕೆಗಳಿಗೆ ಸರ್ಕಾರ ತುಸುವೂ ಮಣಿಯಲಿಲ್ಲ. ಈ ಬಲಿದಾನಕ್ಕೆ ದಿಲ್ಲಿಯ ಮಾಧ್ಯಮಗಳು ಮಹತ್ವವನ್ನೂ ಕೊಡಲಿಲ್ಲ. ಏಳು ವರ್ಷಗಳ ಹಿಂದೆ 36 ವರ್ಷದ ಯುವ ಸ್ವಾಮೀಜಿ ನಿಗಮಾನಂದ ಎಂಬವರು ಗಂಗೆಯ ಪಾವಿತ್ರ್ಯ ರಕ್ಷಣೆಗಾಗಿ ಹೀಗೆಯೇ 76 ದಿನಗಳ ಉಪವಾಸ ಮಾಡಿ ಪ್ರಾಣತೆತ್ತಾಗಲೂ ಅಂಥ ಆಕ್ರೋಶವೇನೂ ವ್ಯಕ್ತವಾಗಲಿಲ್ಲ. ಆದರೂ ಇವೆರಡು ಸಾವುಗಳಲ್ಲಿ ಒಂದು ಕೌತುಕದ ಸಾಮ್ಯ ಇದೆ. ಗಂಗೆಯ ಸ್ಥಿತಿಯೂ ಹೀಗೆಯೇ ಅಲ್ಲವೆ? ವೃದ್ಧ ಗಂಗೆಯ ಆಕ್ರಂದಕ್ಕೂ ಸ್ಪಂದನೆ ಇಲ್ಲ, ಯುವಗಂಗೆಯ ಒತ್ತಡಕ್ಕೂ ಕ್ಯಾರೇ ಎನ್ನುವವರಿಲ್ಲ.

ಜೀವಿಗಳ ಹಾಗೆ ನದಿಗಳಿಗೂ ಬಾಲ್ಯ, ಯೌವನ, ಮುಪ್ಪು ಎಂಬ ಮೂರು ಅವಸ್ಥೆಗಳಿರುತ್ತವೆ. ಉಗಮ ಸ್ಥಾನದಿಂದ ತುಸು ದೂರದವರೆಗೆ ಮೆಲ್ಲಗೆ ಮಗುವಿನಂತೆ ಕುಣಿದು ಕುಪ್ಪಳಿಸುತ್ತ ತೊರೆ ಹರಿಯುತ್ತದೆ. ನಂತರ ಬೆಳೆಯುತ್ತ, ಅಪಾರ ಶಕ್ತಿಯೊಂದಿಗೆ ಧುಮ್ಮಿಕ್ಕುತ್ತ, ಆಳ ಕೊರಕಲು ನಿರ್ಮಿಸುತ್ತ, ಕಲ್ಲುಬಂಡೆಗಳನ್ನೂ ಉರುಳಿಸುತ್ತ, ಮರಳಿನ ರಾಶಿಯನ್ನು ತಳ್ಳುತ್ತ ಭೋರ್ಗರೆಯುತ್ತದೆ. ಸಪಾಟು ನೆಲವನ್ನು ತಲುಪಿದಾಗ ನದಿ ಮೂರನೆಯ ಅವಸ್ಥೆಗೆ ಬರುತ್ತದೆ. ಗಂಭೀರವಾಗಿ, ಅಸಂಖ್ಯ ಜೀವಜಂತುಗಳನ್ನು ಪೋಷಿಸುತ್ತ ನಿಧಾನವಾಗಿ ಹರಿಯುತ್ತ, ಮುಪ್ಪಡರಿ ಸಮುದ್ರ ಸೇರುತ್ತದೆ. ಗಂಗೆ ಮತ್ತು ಅದರ ಉಪನದಿಗಳ ಬಾಲ್ಯವೇನೊ ಅಬಾಧಿತವಾಗಿದೆ.

ಆದರೆ ಯೌವನದಲ್ಲಿ ಉಕ್ಕುವ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಗೆ ಯೋಜನೆಗಳು ಭರದಿಂದ ಸಾಗಿವೆ. ಇಳಿವಯಸ್ಸಿನ ಗಂಗೆಯ ದಡದಲ್ಲಿ ಮುನಿಸಿಪಾಲಿಟಿಯ ಚರಂಡಿ, ಉದ್ಯಮಗಳ ಕೊಳಚೆ, ಕೃಷಿಯ ರಸಗೊಬ್ಬರ ಸೇರಿಸಿಕೊಂಡು ಅದರ ಸ್ವಯಂಶುದ್ಧಿಯ ಸಾಮರ್ಥ್ಯವೂ ಕುಂಠಿತವಾಗಿದೆ. ಗಂಗೆಯ ಶುದ್ಧಿಗೆಂದು ಸುರಿದ ಸಾವಿರಾರು ಕೋಟಿ ರೂಪಾಯಿ ಹಣವೆಲ್ಲ ಹೊಳೆಯಲ್ಲಿ ತೊಳೆದ ಹುಣಿಸೆ ಹಣ್ಣಾಗಿದೆ. ಇಡೀ ಗಂಗೆಯೇ ಇನ್ನಷ್ಟು ಮತ್ತಷ್ಟು ಔಷಧ ಬೇಡುವ ಹುಣ್ಣಾಗಿದೆ.

ಹಿಮಾಲಯವೆಂದರೆ ಸದಾ ಬೆಳೆಯುತ್ತಿರುವ, ಪದೇಪದೇ ಭೂಕಂಪನಗಳಾಗುವ ಅಸ್ಥಿರ ಭೂಭಾಗ. ಅಲ್ಲಿ ಅಣೆಕಟ್ಟು ಕಟ್ಟಿ ನಿಲ್ಲಿಸಿದ ನೀರು ಮೆಲ್ಲಗೆ ಶಿಲಾಸ್ತರಗಳಲ್ಲಿ ಜಿನುಗುತ್ತ ಭೂಕಂಪನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕೇದಾರನಾಥದಲ್ಲಿ ಆದಂತೆ ಮೇಘಸ್ಫೋಟ ಏನಾದರೂ ಸಂಭವಿಸಿದರೆ ಸಾವಿರ ತೊರೆಗಳು ಧುಮ್ಮಿಕ್ಕಿ ಬಂದು ಅಣೆಕಟ್ಟೆಯನ್ನೇ ಅಸ್ಥಿರಗೊಳಿಸಬಹುದು. ಅಥವಾ ಕೇರಳದ ಇಡುಕ್ಕಿಯಲ್ಲಿ ಇತ್ತೀಚೆಗೆ ಆದಂತೆ ಅಣೆಕಟ್ಟೆಯ ಹೆಚ್ಚುವರಿ ನೀರನ್ನು ಗಡಿಬಿಡಿಯಲ್ಲಿ ಕೆಳಕ್ಕೆ ಹರಿಸಬೇಕಾಗಿ ಬಂದು ಅಲ್ಲೂ ಅವಾಂತರಗಳನ್ನು ಸೃಷ್ಟಿಸಬಹುದು.

ಹಿಮಾಲಯದ ಪಾದಭೂಮಿಯಲ್ಲಿ ಒಂದೆರಡಲ್ಲ, 24 ಅಣೆಕಟ್ಟೆಗಳು ನಿರ್ಮಾಣ ವಿವಿಧ ಹಂತದಲ್ಲಿವೆ. ಮೂವತ್ತಕ್ಕೂ ಹೆಚ್ಚು ಯೋಜನೆಗಳು ನೀಲನಕ್ಷೆಯಲ್ಲಿವೆ. ಸುರಂಗಗಳು, ತಿರುವುಗಳು, ಟರ್ಬೈನ್‍ಗಳು, ತಂತಿಕಂಬಗಳು, ಕಾಲುವೆಗಳು, ಅವುಗಳ ಉಸ್ತುವಾರಿಗೆಂದು ರಸ್ತೆಗಳು, ಪಾವಟಿಗೆಗಳು ಎಲ್ಲವೂ ಭಾರಿ ಪ್ರಮಾಣದ ಮರಳು, ಉಕ್ಕು, ಸಿಮೆಂಟ್ ಕಾಂಕ್ರೀಟನ್ನು ನುಂಗುವ ಕ್ಲಿಷ್ಟ ಎಂಜಿನಿಯರಿಂಗ್ ಸಾಹಸಗಳೇನೊ ಹೌದು. ಆದರೆ ಮುಂದೆ ಹವಾಮಾನ ವೈಪರೀತ್ಯ ಹೀಗೇ ಹೆಚ್ಚುತ್ತ ಹೋದರೆ ಗಂಗಾತೀರದ ಜನರಿಗೆ ತೀರದ ಸಂಕಷ್ಟ, ಶಾಪ ಎದುರಾಗುತ್ತದೆ.

ಗಂಗೆಯ ಗುತ್ತಿಗೆದಾರರಿಗೆ ಮಾತ್ರ ವರದಾನ, ನಿರಂತರ ವರಮಾನ.

ಗಂಗೆಯ ಪಾತ್ರದಲ್ಲಿ ಮರಳು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಸ್ವಾಮಿ ನಿಗಮಾನಂದ ಒತ್ತಾಯಿಸುತ್ತಿದ್ದರು. 76 ದಿನಗಳ ಉಪವಾಸದಿಂದ ಆರೋಗ್ಯ ಕ್ಷೀಣಿಸಿದಾಗ ಹರದ್ವಾರದ ಆಸ್ಪತ್ರೆಗೆ ಅವರನ್ನು ಸಾಗಿಸಲಾಗಿತ್ತು. ಅದೇನೂ ದೊಡ್ಡ ಸುದ್ದಿಯಾಗಿರಲಿಲ್ಲ. ಆದರೆ ಅದೇ ಆಸ್ಪತ್ರೆಗೆ ಸ್ವಾಮಿ ರಾಮದೇವ್ ಕೂಡ ಅದೇ ವೇಳೆಗೆ ದಾಖಲಾಗಿದ್ದರು. ಅವರು ಭ್ರಷ್ಟಾಚಾರ ನಿರ್ಮೂಲನಕ್ಕೆ ಒತ್ತಾಯಿಸಿ ಎಂಟು ದಿನಗಳೇ ಆಗಿದ್ದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿತ್ತು. ಉಪವಾಸವನ್ನು ನಿಲ್ಲಿಸಬೇಕೆಂದು ಭಾರಿ ಒತ್ತಡ ಬಂದಿತ್ತು. ಅವರು ಮತ್ತೆ ಆಹಾರ ಸೇವಿಸುವಂತೆ ಮಾಡಲೆಂದು ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ರವಿಶಂಕರ ಗುರೂಜಿಯವರು ಹರದ್ವಾರಕ್ಕೆ ಹೋಗಿ ಅಲ್ಲೇ ವಾಸ್ತವ್ಯ ಹೂಡಿದ್ದರು.

ಆ ಸ್ವಾಮೀಜಿಗೆ ಈ ಸ್ವಾಮೀಜಿ ಗ್ಲೂಕೊಸ್ ಕುಡಿಸಿ ಉಪವಾಸ ಕೊನೆಗೊಳಿಸಿದ್ದಕ್ಕೆ ಸಾಕಷ್ಟು ಪ್ರಶಂಸೆಯೂ ವ್ಯಕ್ತವಾಯಿತು. ಕಾರ್ಪೊರೇಟ್ ಶಕ್ತಿಗಳ ಮಾದರಿಯಲ್ಲೇ ಕೀರ್ತಿವಂತರಾಗಿರುವ ಇವರಿಬ್ಬರನ್ನು ಮಾಧ್ಯಮಗಳು ಹಾಡಿ ಹೊಗಳುತ್ತಿದ್ದಾಗ ಅದೇ ಆಸ್ಪತ್ರೆಯಲ್ಲಿ ಮರಳು ಧಣಿಗಳ ವಿರುದ್ಧ ಹೋರಾಡಿ ಸಾಯುವ ಸ್ಥಿತಿಗೆ ಬಂದಿದ್ದ ಯುವ ಸ್ವಾಮೀಜಿಯನ್ನು ಗಮನಿಸಲು ಯಾರಿಗೂ ಪುರುಸೊತ್ತು ಇರಲಿಲ್ಲ.

ಉತ್ತರಾಖಂಡದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಕೂಡ ನಿಗಮಾನಂದರ ಬೇಡಿಕೆಗೆ ಸ್ಪಂದಿಸಲು ವ್ಯವಧಾನವಿರಲಿಲ್ಲವೇನೊ. ಉಪವಾಸ ಮಲಗಿದ್ದ ಸ್ವಾಮೀಜಿಯನ್ನು ಬಲವಂತವಾಗಿ ಎತ್ತಿ ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಅವರಿಗೆ ನಳಿಕೆಯ ಮೂಲಕ ಕಾರ್ಪೊರೇಟ್ ಹಿತಾಸಕ್ತಿಗಳು ವಿಷ ಬೆರೆಸಿದುವೆಂದು ಆರೋಪಿಸಿ ಅದರ ತನಿಖೆಗೆ ಒತ್ತಾಯಿಸಿ ಉಪವಾಸ ಮುಷ್ಕರ ಹೂಡಿದ ಇತರ ಹತ್ತು ಸಂತರ ಕಡೆಗೂ ರಾಷ್ಟ್ರೀಯ ಮಾಧ್ಯಮಗಳ ಗಮನ ಅಷ್ಟಾಗಿ ಹರಿದಿರಲಿಲ್ಲ.

ನದಿಗಳಿಗೆ ಅಡ್ಡಗಟ್ಟೆ ಕಟ್ಟಿ ನೀರನ್ನು ನಿಲ್ಲಿಸಿದರೆ ಇನ್ನೊಂದು ಅಡ್ಡ ಪರಿಣಾಮ ಇದೆ. ನದಿಯ ಹರಿವು ಕೆಲಕಾಲ ಸ್ಥಗಿತವಾಗುತ್ತದೆ. ವಿದ್ಯುತ್ ಉತ್ಪಾದನೆ ಆರಂಭವಾದ ನಂತರವಂತೂ ಪದೇ ಪದೇ ಹೀಗಾಗುತ್ತಿರುತ್ತದೆ. ಅದು ನದಿಯ ಕೆಳಹಂತದ ‘ಜೀವ’ಕ್ಕೆ ಅಪಾಯ. ಜಲಚರಗಳ ಬದುಕಿಗೆ ಅಪಾಯ ಅಷ್ಟೇ ಅಲ್ಲ, ಕೊಳಕನ್ನು ತಳ್ಳಲು ಬೇಕಾದ ಶಕ್ತಿಯೇ ನದಿಗೆ ಇರುವುದಿಲ್ಲ. ಆ ಶಕ್ತಿಯನ್ನೆಲ್ಲ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡರೆ ಮತ್ತಿನ್ನೇನಾಗುತ್ತದೆ? ಹಾಗಾಗಿ ಎಲ್ಲೇ ಅಣೆಕಟ್ಟು ಕಟ್ಟುವುದಾದರೂ ಶೇ 30ರಷ್ಟು ನೀರು ಜೀವಧಾರೆಯಾಗಿ, ಸದಾಕಾಲ ಹರಿಯುವಂತೆ ನೋಡಿಕೊಳ್ಳಬೇಕು ಎಂಬ ಇ-ಫ್ಲೋ ಕಾನೂನು ಜಾರಿಯಲ್ಲಿದೆ. (ಇ-ಫ್ಲೋ ಎಂದರೆ ಇಕಾಲಜಿಕಲ್ ಹರಿವು. ನಮ್ಮ ಗುಂಡ್ಯದಲ್ಲೂ ಅಣೆಕಟ್ಟು ಕಟ್ಟುವುದಾದರೆ ಆ ನಿಯಮವನ್ನು ಬಿಗಿಯಾಗಿ ಪಾಲಿಸುವಂತೆ ಕಸ್ತೂರಿ ರಂಗನ್ ವರದಿಯಲ್ಲಿ ಹೇಳಲಾಗಿದೆ.

ಅಣೆಕಟ್ಟು ಬೇಡವೇ ಬೇಡವೆಂದು ಗಾಡ್ಗೀಳ್ ವರದಿಯಲ್ಲಿ ಹೇಳಲಾಗಿದೆ). ಗಂಗೆಯ ವಿಷಯದಲ್ಲಿ ಅಂತಹ ಇ-ಫ್ಲೋ ನಿಯಮದ ಪಾಲನೆಯೇ ಆಗಿರಲಿಲ್ಲ. ಹರಿವು ನಿಂತಿದ್ದರಿಂದಾಗಿಯೇ ಮರಳು ಮಾಫಿಯಾ ಹಾವಳಿ ಹೆಚ್ಚಾಗಿದ್ದರಿಂದ ನಿಗಮಾನಂದ ಸ್ವಾಮಿ ಕನಲಿ ಉಪವಾಸ ಕೂತಿದ್ದರು. ಇ-ಫ್ಲೋ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು, ಗಂಗೆಯ ಹರಿವು ನಿರಂತರ ಮತ್ತು ನಿರ್ಮಲ ಇರಬೇಕು ಎಂದು ಒತ್ತಾಯಿಸಿ ಸಾನಂದ ಸ್ವಾಮೀಜಿ ಅದೇ ಮಾತೃಸದನ ಆಶ್ರಮದಲ್ಲಿ ಕೊನೆಯ 110 ದಿನಗಳ ಸತ್ಯಾಗ್ರಹ ಮಾಡಿ ಕೊನೆಯುಸಿರೆಳೆದರು.

ಪೂರ್ವಾಶ್ರಮದಲ್ಲಿ ಜಿ.ಡಿ. ಅಗರ್ವಾಲ್ ಆಗಿದ್ದ ಸಾನಂದ ಸ್ವಾಮೀಜಿ ರೂರ್ಕಿ ವಿ.ವಿ.ಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದು ಕ್ಯಾಲಿಫೋರ್ನಿಯಾ ವಿ.ವಿ.ಯಲ್ಲಿ ಡಾಕ್ಟರೇಟ್ ಗಳಿಸಿ, ಕಾನಪುರ ಐಐಟಿಯಲ್ಲಿ ಪ್ರೊಫೆಸರ್ ಆಗಿ, ವಿಭಾಗೀಯ ಮುಖ್ಯಸ್ಥರೂ ಆಗಿದ್ದರು. 1980ರಲ್ಲಿ ದೇಶದಲ್ಲಿ ಅದೇ ತಾನೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಲಿ ಆರಂಭವಾದಾಗ ಅದರ ಮೊದಲ ಕಾರ್ಯದರ್ಶಿ ಆಗಿದ್ದರು. ಮಾಲಿನ್ಯ ಹಬ್ಬಿಸುವ ಎಲ್ಲ ಕಾರ್ಖಾನೆಗಳ ಮೇಲೆ ನಿಯಂತ್ರಣ ಹೇರುವ ನಿಯಮಾವಳಿಗಳನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಗಂಗಾಶುದ್ಧಿಗೆಂದು ಸರ್ಕಾರಗಳು ಕಾಲಕಾಲಕ್ಕೆ ನೇಮಕ ಮಾಡುತ್ತಿದ್ದ ಅನೇಕ ಸಮಿತಿಗಳಲ್ಲಿದ್ದರು.

ತಮ್ಮ 79ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದು ‘ಗ್ಯಾನಸ್ವರೂಪ್ ಸಾನಂದ ಸ್ವಾಮಿ’ಯಾಗಿ ಅಧ್ಯಾತ್ಮ ಚಿಂತನೆ, ತಪಸ್ಸು ನಡೆಸುತ್ತಲೇ ಗಂಗೆಯ ವೈಶಿಷ್ಟ್ಯದ ಬಗ್ಗೆ ಎಳೆಯರಿಗೂ ಪಾಠ ಹೇಳುತ್ತಿದ್ದರು. ಬೆಂಗಳೂರಿನ ಪೂರ್ಣಪ್ರಮತಿ ಶಾಲೆಗೆ ಅವರು ಪದೇಪದೇ ಭೇಟಿ ನೀಡುತ್ತಿದ್ದರು. ಮಾಗಡಿ ಸಮೀಪ ಹೊಸದಾಗಿ ನಿರ್ಮಿತವಾಗುತ್ತಿದ್ದ ಶಾಲಾ ಆವರಣದಲ್ಲಿ ಕಳೆದ ವರ್ಷವೂ ಅವರು ಹೈಸ್ಕೂಲ್ ಮಕ್ಕಳಿಗೆ ಎನ್‍ಸಿಇಆರ್‍ಟಿ ಪಠ್ಯಕ್ರಮಕ್ಕೆ ತಕ್ಕಂತೆ ತಿಂಗಳುಗಟ್ಟಲೆ ಇಕಾಲಜಿ ಪಾಠ ಮಾಡುತ್ತಿದ್ದರು. ನಗರದ ಪರಿಸರಾಸಕ್ತರ ಜೊತೆಗೆ ಸಂವಾದ ನಡೆಸುತ್ತಿದ್ದರು. ಬೇರೆ ನದಿಗಳಲ್ಲಿಲ್ಲದ ವಿಶೇಷ ಗುಣ ಗಂಗಾನದಿಯಲ್ಲಿ ಅದೇನಿದೆ ಎಂದು ಈ ಅಂಕಣಕಾರ ಅವರನ್ನು ಪ್ರಶ್ನಿಸಿದಾಗ, ಹತ್ತಾರು ಸಂಶೋಧನಾ ವರದಿಗಳನ್ನು ಹೆಸರಿಸಿದ್ದರು. ರಾಷ್ಟ್ರೀಯ ಪರಿಸರ ತಾಂತ್ರಿಕ ಸಂಶೋಧನಾ ಸಂಸ್ಥೆ (ನೀರಿ)ಯ ತಜ್ಞರೇ ಗಂಗಾಜಲದ ಅನನ್ಯತೆಯನ್ನು ಕೆಮಿಕಲ್ ಪರೀಕ್ಷೆಗಳ ಮೂಲಕ ಖಾತ್ರಿಪಡಿಸಿದ ದಾಖಲೆಗಳನ್ನೂ ಅವರು ಹೆಸರಿಸಿದ್ದರು.

ಧಾರ್ಮಿಕ ಶ್ರದ್ಧೆ ಮತ್ತು ಸನಾತನ ಪರಂಪರೆಯಲ್ಲಿ ನಂಬಿಕೆಯಿಟ್ಟಿದ್ದ ಸ್ವಾಮೀಜಿ ಈಗಿನ ಬಿಜೆಪಿ ಸರ್ಕಾರದ ಧೋರಣೆಯಿಂದ ತೀರ ನೊಂದಂತಿತ್ತು. ಮೋದಿಯವರು ವಾರಾಣಸಿಯಲ್ಲಿ ಚುನಾವಣೆಗೆ ನಿಂತಾಗ ‘ಗಂಗಾಮಾತೆ ಚೀರುತ್ತಿದ್ದಾಳೆ. ಈ ಕೊಚ್ಚೆಯಿಂದ ಪಾರುಮಾಡಬಲ್ಲ ಪುತ್ರನಿಗಾಗಿ ಕಾಯುತ್ತಿದ್ದಾಳೆ. ಈಗ ಅವಳೇ ನನ್ನನ್ನು ಕರೆಸಿಕೊಂಡಿದ್ದಾಳೆ’ ಎಂದಿದ್ದರು. ಅಂಥ ಮೋದಿಯವರ ಬಗ್ಗೆ ನಾಲ್ಕು ವರ್ಷಗಳ ನಂತರ ಸ್ವಾಮೀಜಿಗೆ ತೀರ ನಿರಾಸೆಯಾಗಿತ್ತು. ಗಂಗೆಯ ಹೆಸರಿನಲ್ಲಿ ಜನರಿಗೆ ‘ಸರ್ಕಾರ ಮೋಸ ಮಾಡುತ್ತಿದೆ; ಅದರಲ್ಲೂ ವಿಶೇಷವಾಗಿ ಮೋದೀಜೀ ಮೋಸ ಮಾಡುತ್ತಿದ್ದಾರೆ’ ಎಂದು ಅವರು ಸಾವಿನ ಮುಂಚಿನ ವಿಡಿಯೊದಲ್ಲಿ ಹೇಳಿದ್ದಾರೆ.

ಅವರ ವಿಷಾದಕ್ಕೆ ಕಾರಣವೂ ಇತ್ತು: ಹಿಂದೆ ಯುಪಿಎ ಸರ್ಕಾರ ಇದ್ದಾಗ ಇವರು ಐದು ಬಾರಿ ಸುದೀರ್ಘ ಉಪವಾಸ ಮಾಡಿದ್ದರು. ಸರ್ಕಾರ ಮಣಿದು ಭಾಗೀರಥಿ ನದಿಯ ಅಣೆಕಟ್ಟು ಯೋಜನೆಯನ್ನು ಕೈಬಿಟ್ಟಿತ್ತು. ಗೋಮುಖದಿಂದ ಉತ್ತರಕಾಶಿಯವರೆಗಿನ 135 ಕಿಲೊಮೀಟರ್ ಕೊಳ್ಳವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿತ್ತು. ಈ ಹಿರಿಯ ಸಂತನ ಹೋರಾಟಕ್ಕೆ ಆಗ ಅಷ್ಟಿಷ್ಟು ಸ್ಪಂದನೆ ದೊರೆತಿತ್ತು. ಈಗ ಯಾಕಿಲ್ಲವೊ? ಪರಿಸರ ಸಂರಕ್ಷಣೆಗಾಗಿ ಮೀಸಲಾಗಿರುವ ವಿಶ್ವಸಂಸ್ಥೆಯ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಪಡೆದ ಮೋದಿಯವರೇ ಈ ಪ್ರಶ್ನೆಗೆ ಉತ್ತರಿಸಬೇಕು.

ಆರ್ಥಿಕ ಅಭಿವೃದ್ಧಿಗಾಗಿ ಗಂಗೆಯನ್ನು ಇನ್ನಷ್ಟು ಮತ್ತಷ್ಟು ಬಳಸುತ್ತ ಹೋಗಬೇಕೊ ಅಥವಾ ನದಿಯ ಪಾವಿತ್ರ್ಯದ ರಕ್ಷಣೆಗಾಗಿ ಸುಸ್ಥಿರ ಮಾದರಿಗಳನ್ನು ಅನುಸರಿಸಬೇಕೊ ಎಂಬ ಜಟಾಪಟಿಯಲ್ಲಿ ಕೆಮಿಸ್ಟ್ರಿ, ಬಯಾಲಜಿ, ತಂತ್ರಜ್ಞಾನ, ಅಧ್ಯಾತ್ಮ, ರಾಜಕೀಯ, ಧಾರ್ಮಿಕತೆ, ಪರಿಸರ, ಕಾರ್ಪೊರೇಟ್ ಹಿತಾಸಕ್ತಿ ಎಲ್ಲವೂ ಬೇರ್ಪಡಿಸಲಾಗದಷ್ಟು ಜಡೆಗಟ್ಟಿವೆ. ಎನ್‍ಡಿಎ ಸರ್ಕಾರದ ಆದೇಶದಂತೆ ನ್ಯಾಯಮೂರ್ತಿ ಗಿರಿಧರ ಮಾಲವೀಯರು ರೂಪಿಸಿದ್ದ ‘ಗಂಗಾ ಸಂರಕ್ಷಣಾ ಮಸೂದೆ’ಯೂ ಮೂಲೆಗುಂಪಾಗಿದೆ. ‘ನಮಾಮಿ ಗಂಗೆ’ಗೆ ಅಷ್ಟೊಂದು ಹಣ ಸುರಿದ ನಂತರವೂ ‘ಗಂಗೆಯ ಕೊಳಕು ಸ್ಥಿತಿಯಲ್ಲಿ ತುಸುವೂ ಬದಲಾವಣೆಯಿಲ್ಲ’ ಎಂದು ಹಸುರು ನ್ಯಾಯಪೀಠ ಈಚೆಗಷ್ಟೇ ಹೇಳಿದೆ. ಅಷ್ಟಾಗಿಯೂ ಗಂಗೆಗೆ ಮಂಗಳಾರತಿ ತಪ್ಪಿದ್ದೇ ಇಲ್ಲ.

ನಮ್ಮಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿದ ಅದೆಷ್ಟೊ ಧೀರರು ಆಗಿಹೋಗಿದ್ದಾರೆ. ನಾಡು-ನುಡಿಗಾಗಿ, ಜಾತಿ-ಧರ್ಮಕ್ಕಾಗಿ, ಅಗಲಿದ ಗಂಡನಿಗಾಗಿ, ಒಲಿಯದ ಪ್ರಿಯತಮೆಗಾಗಿ, ಕೊನೆಗೆ ನೆಚ್ಚಿನ ಸಿನಿಮಾ ನಟನ ಮೇಲಿನ ಅಭಿಮಾನಕ್ಕಾಗಿ ಸ್ವಯಂ ಬಲಿದಾನ ಕೊಟ್ಟವರ ಅದೆಷ್ಟೊ ಉದಾಹರಣೆಗಳಿವೆ. ಆದರೆ ಹರಿಯುವ ನೀರಿನ ಸ್ವಚ್ಛಂದ ಸ್ವಾತಂತ್ರ್ಯಕ್ಕಾಗಿ ಹಟತೊಟ್ಟು ತಮ್ಮನ್ನೇ ಬಲಿಕೊಟ್ಟವರ ಸಂಖ್ಯೆ ತೀರಾ ತೀರಾ ಅಪರೂಪ. ಸತ್ಯಾಗ್ರಹದ ಮಹತ್ವವನ್ನು ಜಗತ್ತಿಗೆಲ್ಲ ತೋರಿಸಿಕೊಟ್ಟ ಗಾಂಧೀಜಿಯ 150ನೇ ವರ್ಷಾಚರಣೆಯ ಅವಧಿಯಲ್ಲೇ ನಿಸ್ವಾರ್ಥ ಸತ್ಯಾಗ್ರಹವೊಂದು ಹೀಗೆ ಸೋಲು ಕಾಣಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.