ಆಕಾಶಕ್ಕೇ ನಲ್ಲಿ ಇಟ್ಟು ನೀರನ್ನು ಬಸಿಯುವುದು ಗೊತ್ತೆ? ಗ್ವಾಟೆಮಾಲಾ ದೇಶದ ತೊಯ್ಕಿಯಾ ಹೆಸರಿನ ಬರಪೀಡಿತ ಗುಡ್ಡಗಾಡು ಹಳ್ಳಿಗೆ ಬನ್ನಿ. ಅಲ್ಲಿ ಅಲ್ಲಲ್ಲಿ ವಾಲಿಬಾಲ್ ನೆಟ್ನಂಥ ಜಾಳು ಪರದೆಗಳನ್ನು ನಿಲ್ಲಿಸಿದ್ದಾರೆ. ಗಾಳಿಯಲ್ಲಿ ತೇವಾಂಶ ಜಾಸ್ತಿ ಇರುವುದರಿಂದ ರಾತ್ರಿಯಿಡೀ ನೆಟ್ನಿಂದ ನೀರು ತೊಟ್ಟಿಕ್ಕುತ್ತದೆ. ಪರದೆಯ ಗಾತ್ರಕ್ಕೆ ತಕ್ಕಂತೆ ದಿನವೂ 100, 200, 400 ಲೀಟರ್ ಶುದ್ಧ ನೀರು ಸಂಗ್ರಹವಾಗುತ್ತದೆ. ಮನೆಬಳಕೆಗೆ ಮಿಕ್ಕು ಅಲ್ಲಿ ಹಣ್ಣುತರಕಾರಿಯನ್ನೂ ಬೆಳೆಯುತ್ತಾರೆ. ಹೆಚ್ಚಿನ ವಿವರಗಳನ್ನು fogquest.org ಹೆಸರಿನ ವೆಬ್ಸೈಟ್ನಲ್ಲಿ ನೋಡಬಹುದು.

‘ಭೂಮಿಯಿಂದ ತೆಗೆದಿದ್ದು ಸಾಕು, ಆಕಾಶದಿಂದ ಪಡೆಯೋಣ’ ಎಂಬ ಚಳವಳಿ ಅಲ್ಲಲ್ಲಿ ಆರಂಭವಾಗಿದೆ ತಾನೆ? ಬಿಸಿಲು, ಗಾಳಿಯಿಂದ ವಿದ್ಯುತ್ ಪಡೆಯುವುದಂತೂ ಆಯಿತು. ಮಳೆ ಇಲ್ಲದ ದಿನಗಳಲ್ಲಿ ನೀರನ್ನೂ ಅಲ್ಲಿಂದಲೇ ಬಸಿಯಲು ಸಾಧ್ಯವಿದೆ ಎಂದು ವಿಜ್ಞಾನ ತೋರಿಸಿಕೊಟ್ಟಿದೆ. ಇನ್ನೇನೇನನ್ನು ಪಡೆಯಬಹುದು?

ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ‘ಕಾರ್ಬನ್ ಕೇಕ್’ ಹೆಸರಿನ ನಾಟಕವೊಂದು ಪ್ರದರ್ಶನಕ್ಕೆ ಬಂದಿತ್ತು. ವಾಯುಮಂಡಲದಲ್ಲಿ ದಟ್ಟಣಿಸುತ್ತಿರುವ ಕಾರ್ಬನ್ ಡೈಆಕ್ಸೈಡನ್ನು (ಸಿಓಟು) ಹೀರಿ ತೆಗೆಯಲು ಶ್ರಮಿಸಿದ ಕನ್ನಡದ ವಿಜ್ಞಾನಿಯೊಬ್ಬನ ಕಾಲ್ಪನಿಕ ಕತೆ ಅದಾಗಿತ್ತು. ತನಗೆ ಯಶಸ್ಸು ಸಿಕ್ಕರೆ ಇಡೀ ಪೃಥ್ವಿಯನ್ನು ಬಿಸಿಪ್ರಳಯದ ಸಂಕಟದಿಂದ ಪಾರುಮಾಡಬಹುದು ಎಂಬ ಕನಸು ಅವನದು. ಸತತ ಯತ್ನದಿಂದ ಅದೆಷ್ಟೊ ಘನ ಕಿಲೊಮೀಟರ್ ವ್ಯಾಪ್ತಿಯ ಸಿಓಟುವನ್ನು ಹೀರಿ ಆತ ಸಾಬೂನಿನ ಗಾತ್ರದ ಗಟ್ಟಿಯನ್ನಾಗಿ ಮಾಡಿಬಿಟ್ಟ. ಆದರೆ ಆ ತಂತ್ರಜ್ಞಾನವನ್ನು ಎಗರಿಸಲು ಎಷ್ಟೊಂದು ರಾಜಕೀಯ, ಏನೆಲ್ಲ ಪಿತೂರಿ, ಆಮಿಷ, ವಂಚನೆ ಎಲ್ಲ ನಡೆದು ಬಡಪಾಯಿ ವಿಜ್ಞಾನಿ ಆತ್ಮಹತ್ಯೆಗೆ ಎಳಸುವವರೆಗೆ ಕಥನ ಸಾಗಿತ್ತು. ಮೈಸೂರಿನ ರಂಗಾಯಣದ ರಾಮನಾಥ್ ಹೆಣೆದ ಕತೆ ಅದಾಗಿತ್ತು.

ಆಕಾಶದಲ್ಲಿ ದಟ್ಟಣಿಸಿರುವ ಸಿಓಟು ಇಡೀ ಭೂಗ್ರಹಕ್ಕೆ ಅದೆಂಥ ಗಂಡಾಂತರವನ್ನು ತರುತ್ತಿದೆ ಎಂಬುದು ಈಗೀಗ ಶಾಲಾ ಮಕ್ಕಳಿಗೂ ಗೊತ್ತಾಗಿದೆ. ‘ನಾನು ದೊಡ್ಡೋಳಾದ್ಮೇಲೆ ಗಾಳಿಯನ್ನು ಫಿಲ್ಟರ್ ಮಾಡುವ ವಿಜ್ಞಾನಿ ಆಗುತ್ತೇನೆ’ ಎಂದು ಕನಸು ಕಟ್ಟುವ ಮಕ್ಕಳೂ ಅಲ್ಲಲ್ಲಿ ಕಾಣಸಿಗುತ್ತಿದ್ದಾರೆ.

ಸಿಓಟು ಸಮಸ್ಯೆ ಮನುಷ್ಯರಿಗೆ ಗೊತ್ತಾಗುವ ಮೊದಲೇ ಭೂಮಿಗೆ ಗೊತ್ತಿತ್ತು. ವಾತಾವರಣದಲ್ಲಿ ಸಿಓಟು ತೀರಾ ಹೆಚ್ಚು ಅಥವಾ ಕಮ್ಮಿ ಆಗದಂತೆ ಮಾಡಲು ಅದು ಚಂದದ ಚಕ್ರವನ್ನು ನಿರ್ಮಿಸಿಕೊಂಡಿದೆ. ಭೂಮಿಯ ಮೇಲೆ ಅಷ್ಟೇ ಅಲ್ಲ, ಕಡಲಾಳದಲ್ಲೂ ಅದು ದಟ್ಟ ಅರಣ್ಯಗಳನ್ನು ಬೆಳೆಸಿದೆ. ಸಮುದ್ರದಲ್ಲಿ ಉದ್ದುದ್ದ ಎಲೆಗಳ, ಬೆತ್ತದಂತೆ ಕಾಣುವ ಪಾಚಿಬಣ್ಣದ ‘ಕೆಲ್ಪ್’ ಹೆಸರಿನ ಸಸ್ಯಗಳು ತೆಂಗಿನ ಮರಕ್ಕಿಂತ ಎತ್ತರ ಬೆಳೆಯುತ್ತವೆ. ಕಡಲ ತಡಿಗುಂಟ ನೂರಾರು ಚದರ ಕಿ.ಮೀ. ವಿಸ್ತೀರ್ಣದ ಆ ಉಪ್ಪುನೀರಿನ ದಟ್ಟಡವಿಗಳು ಸದಾ ನೀರಲ್ಲಿ ಮುಳುಗಿದ್ದು ಅಲ್ಲಿನ ಜೀವಕೋಟಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತಲೇ ವಾತಾವರಣದ ಸಿಓಟುವನ್ನು ಹೀರಿ ತೆಗೆಯುತ್ತವೆ. ಅದೇರೀತಿ ಮೃದ್ವಂಗಿಗಳು ನೀರಲ್ಲಿ ಕರಗಿದ ಕಾರ್ಬನ್ನನ್ನು ಹೀರಿಕೊಂಡು, ಕಪ್ಪೆಚಿಪ್ಪುಗಳ ಕವಚವನ್ನಾಗಿ ಮಾಡಿಕೊಂಡು ಅದರೊಳಗೆ ಬದುಕುತ್ತವೆ. ಅಂಥ ಚಿಪ್ಪುಗಳೆಲ್ಲ ಕ್ರಮೇಣ ಸಮುದ್ರದ ತಳಕ್ಕಿಳಿದು ಸುಣ್ಣದ ಹಾಸುಗಲ್ಲುಗಳಾಗುತ್ತವೆ. ಯುಗ ಕಳೆದಂತೆ ಈ ಶಿಲೆಗಳು ಬೇರೆಲ್ಲೋ ಮೇಲೆದ್ದು ಸುಣ್ಣದ ಕಲ್ಲಿನ ಬೆಟ್ಟವಾಗುತ್ತವೆ. ಅಥವಾ ಭೂಶಾಖ ಮತ್ತು ಒತ್ತಡಕ್ಕೆ ಸಿಕ್ಕು ಅಮೃತಶಿಲೆಗಳಾಗುತ್ತವೆ. ಹೀಗೆ ಮಾಡಲು ಹೋಗಿ ವಾತಾವರಣದಲ್ಲಿ ಕಾರ್ಬನ್ ತೀರ ಕಡಿಮೆ ಮಟ್ಟಕ್ಕೆ ಬಂತೆಂದರೆ ಅದೂ ಕಷ್ಟವೇ. ಆಗ ಪ್ರಕೃತಿಯೇ ನೆಲದ ಮೇಲಿನ ಗೊಂಡಾರಣ್ಯಗಳನ್ನು ಕೆಡವಿ ನೆಲದೊಳಕ್ಕೆ ದಬ್ಬಿ, ಅಲ್ಲಿ ಅವನ್ನು ಕಲ್ಲಿದ್ದಲಾಗಿ, ಕಚ್ಚಾತೈಲವಾಗಿ ಶೇಖರಿಸುತ್ತದೆ. ಜಲಚಕ್ರದ ಹಾಗೇ ಅಚ್ಚುಕಟ್ಟಾದ ಕಾರ್ಬನ್ ಚಕ್ರ ಅದು.

ನಾವು ಜಲಚಕ್ರವನ್ನು ಕೆಡಿಸಿದ ಹಾಗೆ ಕಾರ್ಬನ್ ಚಕ್ರವನ್ನೂ ಕಂಡಾಬಟ್ಟೆ ಕೆಡಿಸುತ್ತ ಸಾಗಿದ್ದೇವೆ. ಸಮುದ್ರದಲ್ಲಿ ಬೆಳೆಯುವ ಕೆಲ್ಪ್ ಕಾಡುಗಳನ್ನು ತರಿದು ಕಾರ್ಖಾನೆಗೆ, ರಸಗೊಬ್ಬರ ಫ್ಯಾಕ್ಟರಿಗೆ ತರುತ್ತಿದ್ದೇವೆ. ಗುಡ್ಡಬೆಟ್ಟಗಳನ್ನು ಸ್ಫೋಟಿಸಿ ಸುಣ್ಣದ ಕಲ್ಲುಗಳನ್ನು ಸಿಮೆಂಟನ್ನಾಗಿ ಬಳಸಿ ಅಮೃತಶಿಲೆಗಳ ಮಹಲು ಕಟ್ಟುತ್ತಿದ್ದೇವೆ. ಆ ಬಗೆಯ ಅಭಿವೃದ್ಧಿಗೆಂದು ನೆಲದಡಿಯ ಕಲ್ಲಿದ್ದಲನ್ನೂ ತೈಲವನ್ನೂ ಮೇಲೆತ್ತಿ ಉರಿಸಿ, ಸಿಓಟುವನ್ನು ವಾತಾವರಣಕ್ಕೆ ಅಟ್ಟುತ್ತಿದ್ದೇವೆ. ಈಗ ಆಕಾಶದಲ್ಲಿ ಸಿಓಟು ಇಡೀ ಪೃಥ್ವಿಗೆ ಕಂಬಳಿಯಂತೆ ಸುತ್ತಿಕೊಂಡು ಎಲ್ಲೆಂದರಲ್ಲಿ ಚಂಡಮಾರುತ, ಕಾಡಿನ ಬೆಂಕಿ, ಮೇಘಸ್ಫೋಟ, ಭೂಕುಸಿತ, ಹಿಮಕುಸಿತ, ಬರಗಾಲಕ್ಕೆ ಕಾರಣವಾದಾಗ ನಮಗೆ ಅದರ ಚುರುಕು ತಟ್ಟುತ್ತಿದೆ. ಫ್ಯಾಕ್ಟರಿಗಳಿಂದ ಹೊಮ್ಮುವ ಸಿಓಟುವನ್ನು ಹೇಗಾದರೂ ಮತ್ತೆ ಭೂಮಿಯೊಳಕ್ಕೆ ಇಳಿಸಿ ಶಿಲೆಯನ್ನಾಗಿಸಲು ಏನೆಲ್ಲ ಪ್ರಯತ್ನಗಳು ಪ್ರಯೋಗಗಳು ನಡೆಯುತ್ತಿವೆ. ಕಾರ್ಬನ್ನನ್ನು ಭೂಗತಗೊಳಿಸುವ ತಂತ್ರಜ್ಞಾನ ಕೈಗೆಟುಕುತ್ತಿದೆ; ವೆಚ್ಚ ಮಾತ್ರ ಗಗನಮುಖಿಯಾಗಿದೆ.

ವಾಯುಮಂಡಲದಿಂದ ಸಿಓಟುವನ್ನು ತೆಗೆದರೆ ಸಾಕೆ? ಅಲ್ಲಿ ಇನ್ನೇನೇನೆಲ್ಲ ಶಾಖವರ್ಧಕ ಅನಿಲಗಳಿವೆ. ಮೀಥೇನ್ ಇದೆ, ಸಾರಜನಕ ಮತ್ತು ಗಂಧಕದ ನಾನಾ ತೆರನಾದ ಭಸ್ಮಗಳು ಇವೆ. ಅವೆಲ್ಲಕ್ಕಿಂತ ಮುಖ್ಯವಾಗಿ ನೀರಾವಿ ಇದೆ. ಇದರ ರಗಳೆ ಅಷ್ಟಿಷ್ಟಲ್ಲ. ಭೂಮಿ ಬಿಸಿಯಾದಷ್ಟೂ ಇನ್ನಷ್ಟು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ನೀರಾವಿ ಮೇಲಕ್ಕೇರುತ್ತ ನೆಲವನ್ನು ಇನ್ನಷ್ಟು ತೀವ್ರವಾಗಿ ಬಿಸಿ ಮಾಡುತ್ತದೆ. ಆಕಾಶದಿಂದ ನೀರಾವಿಯನ್ನು ಹೀರಿ ತೆಗೆಯಲು ಸಾಧ್ಯವಾದರೆ ಎಷ್ಟೊಂದು ಅನುಕೂಲ ಇದೆ. ಮರಳುಗಾಡನ್ನೂ ಹಸಿರು ಮಾಡಬಹುದು.

ಈಗ ಇಲ್ಲೊಂದು ಸ್ವಾರಸ್ಯದ ಕತೆ ಇದೆ: ಜಗತ್ತಿನ ಅತ್ಯಂತ ಕರಾಳ ಮರುಭೂಮಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿದೆ. ಅದರ ಹೆಸರೇ ‘ಡೆತ್ ವ್ಯಾಲಿ’ -ಅಂದರೆ ಮೃತ್ಯುಕಣಿವೆ. ಅಲ್ಲಿ ಗಾಳಿಯ ಚಲನೆಯೇ ತೀರ ಕಮ್ಮಿ ಇರುವುದರಿಂದ ಹಗಲಲ್ಲಿ ಹವೆ 54 ಡಿಗ್ರಿ ಸೆಲ್ಸಿಯಸ್ನಷ್ಟು ಬಿಸಿಯಾಗುತ್ತದೆ. ನೆಲದ ತಾಪಮಾನ 90 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಿದ್ದೂ ಇದೆ. ಎಲ್ಲ ಮರುಭೂಮಿಗಳ ಹಾಗೆ ಅಲ್ಲಿಯೂ ರಾತ್ರಿಯಾಗುತ್ತಲೇ ಘೋರ ಚಳಿ ಬೀಳುತ್ತದೆ. ವಿಜ್ಞಾನಿಗಳ ತಂಡವೊಂದು ಮೃತ್ಯು ಕಣಿವೆಯ ಫರ್ನೇಸ್ ಕ್ರೀಕ್ (ಕುಲುಮೆ ಹಳ್ಳ) ಎಂಬಲ್ಲಿಗೆ ಹೋಗಿ ಅಲ್ಲಿನ ಗಾಳಿಯಿಂದ ನೀರನ್ನು ಬಸಿದಿದೆ. ಈ ತಂಡದ ಮುಖ್ಯಸ್ಥ ಅಮೆರಿಕದ ರಸಾಯನ ವಿಜ್ಞಾನಿ ಒಮರ್ ಯಾಘಿ ವಿಶೇಷ ಕೆಮಿಕಲ್ ಜಾಳಿಗೆಯನ್ನು ರೂಪಿಸಿದ್ದು, ಅದು ರಾತ್ರಿಯಲ್ಲಿ ಮರುಭೂಮಿಯ ತೇವಾಂಶವನ್ನು ಹೀರಿಕೊಂಡು ಹಗಲಿನಲ್ಲಿ ನೀರನ್ನು ಬಸಿಯುತ್ತಿರುತ್ತದೆ. ವಿದ್ಯುತ್ ಶಕ್ತಿಯೂ ಬೇಕಾಗಿಲ್ಲ. ಅಣುಗಳ ಮಧ್ಯೆಯೇ ರಂಧ್ರಗಳುಳ್ಳ ಈ ಜಾಳಿಗೆ ಅದೆಷ್ಟು ಸೂಕ್ಷ್ಮವೆಂದರೆ ಒಂದು ಗ್ರಾಮ್ ತೂಕದ್ದನ್ನು ಅರಳಿಸಿ ಅರ್ಧ ಫುಟ್ಬಾಲ್ ಮೈದಾನಕ್ಕೆ ಹಾಸಬಹುದು. ಹಾಗೆಂದು ನೀರನ್ನು ಬಸಿಯಲು ಅದನ್ನೇನೂ ಬರಡು ನೆಲದಲ್ಲಿ ಹಾಸಬೇಕಿಲ್ಲ. ಮುಷ್ಟಿಗಾತ್ರದ, ಮೊಳ ಉದ್ದದ ದಂಡಕ್ಕೆ ಸುತ್ತಿಟ್ಟರೂ ಸಾಕು. ನೀರು ತೊಟ್ಟಿಕ್ಕತೊಡಗುತ್ತದೆ. ಇದೇ ಜಾಳಿಗೆಯ ರಾಸಾಯನಿಕ ರಚನೆಯನ್ನು ಬದಲಿಸಿ ವಾಯುವಿನಲ್ಲಿರುವ ‘ಸಿಓಟುವನ್ನೂ ಹೀರಿ ತೆಗೆಯಬಹುದು’ ಎಂದು ನೊಬೆಲ್ ಪ್ರಶಸ್ತಿಗೆ ನಾಮಾಂಕಿತಗೊಂಡ ಒಮರ್ ಯಾಘಿ ಹೇಳುತ್ತಾರೆ.

ತೇವಾಂಶವಿರುವ ಗಾಳಿಯಿಂದ ನೀರನ್ನು ಬಸಿಯುವ ನಾನಾ ವಿಧಾನಗಳು ಬಳಕೆಗೆ ಬರುತ್ತಿವೆ. ಬಳ್ಳಾರಿಯ ಘೋರ ಬೇಸಿಗೆಯಲ್ಲೂ ತೇವಾಂಶ ಕನಿಷ್ಠ ಶೇ 40ರಷ್ಟಿರುವುದರಿಂದ ಅಲ್ಲಿನ ಗಾಳಿಯಲ್ಲೂ ನೀರನ್ನು ಹಿಂಡಬಹುದು. ಮಲೆನಾಡಿನಲ್ಲಿ ದೀಪಾವಳಿ ಮುಗಿಯುತ್ತಲೇ ಮಂಜಿನ ಪರದೆಯ ಹಿಂದೆಯೇ ಬರಗಾಲವೂ ಇಣುಕತೊಡಗುತ್ತದೆ. ಗ್ವಾಟೆಮಾಲಾದ ನೀರಿನ ಪರದೆಗಳು ನಮಗೆ ನೆನಪಾಗಬೇಕು. ಮಾತೆತ್ತಿದರೆ ‘ನದಿ ತಿರುವು’, ‘ಅಣೆಕಟ್ಟು ನಿರ್ಮಾಣ’ದಂಥ ಹಳೇ ಮಂತ್ರವನ್ನೇ ನಾವು ಈಗಲೂ ಜಪಿಸುತ್ತಿದ್ದೇವೆ. ಸರ್ ಎಮ್.ವಿಶ್ವೇಶ್ಯರಯ್ಯನವರು ಈಗ ಬದುಕಿದ್ದಿದ್ದರೆ ಮೇಕೆದಾಟು, ಎತ್ತಿನಹೊಳೆಗಳ ನೀಲನಕ್ಷೆಯನ್ನು ನೋಡಿ ‘ವಾಟ್ ಎ ವೇಸ್ಟ್ ಆಫ್ ಎನರ್ಜಿ ಆ್ಯಂಡ್ ಮನಿ!’ ಎನ್ನುತ್ತಿದ್ದರೇನೊ.

ನಾಳೆ 15ರಂದು ಅವರ ಜನ್ಮದಿನದ ನೆನಪಿನ ‘ಎಂಜಿನಿಯರ್ಗಳ ದಿನ’ವನ್ನು ಆಚರಿಸಲಿದ್ದೇವೆ. ಭೂಮಿಯನ್ನು ಮತ್ತೆ ಸುಸ್ಥಿತಿಗೆ ತರಬಲ್ಲ ಹೊಸಬಗೆಯ ಭಾಗ್ಯಾಕಾಶ ಎಂಜಿನಿಯರಿಂಗ್ ವಿದ್ಯೆಗೆ ಚಾಲನೆ ಸಿಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.